ಬೆಟ್ಟದ ಗೊರವಂಕ

| ಸುನೀಲ್ ಬಾರ್ಕರು

ಕಬ್ಬಕ್ಕಿಗಳ ಕುಟುಂಬಕ್ಕೆ ಸೇರಿರುವ ಬೆಟ್ಟದ ಗೊರವಂಕಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಬೆಟ್ಟಗಳಲ್ಲಿ ಕಾಣಬರುತ್ತವೆ. ಕಾಮಳ್ಳಿಯೂ ಸೇರಿದಂತೆ ಈ ಮೊದಲು ಇದೇ ಹಕ್ಕಿಗಳ ಜಾತಿಯಲ್ಲಿ ಗುರುತಿಸಲಾಗುತ್ತಿದ್ದ ಕೆಲ ಮೈನಾಗಳನ್ನು ಇದೀಗ ಪ್ರತ್ಯೇಕ ಪಂಗಡಗಳಾಗಿ ಗುರುತಿಸಲಾಗುತ್ತದೆ.

ಕಡುನೀಲಿ ಮಿಶ್ರಿತ ಕಡುಗಪ್ಪು ಮೈ, ಕಣ್ಣು ಮುಖ ಮತ್ತು ಕತ್ತಿನ ಭಾಗದಲ್ಲಿ ಅಲ್ಲಲ್ಲಿ ಚಿತ್ರಕಾರನ ಕಲೆಯಂತೆ ಹಳದಿ ಬೊಟ್ಟುಗಳು, ಕಿತ್ತಳೆ ಮತ್ತು ಹಳದಿ ಬಣ್ಣಗಳ ಸಂಗಮದ ಕೊಕ್ಕು, ಹಳದಿ ಕಾಲುಗಳು, ರೆಕ್ಕೆಯ ತುದಿಯಲ್ಲಿ ಕಂಡುಬರುವ ಬಿಳಿಯ ಬಣ್ಣದ ಪಟ್ಟಿಗಳು ಈ ಪಕ್ಷಿಯ ಅಂದಕ್ಕೆ ಕಾಣಿಕೆ ನೀಡುತ್ತವೆ. ತನ್ನ ಕುಟುಂಬದ ಇತರ ಸದಸ್ಯರಂತೆ ವೈವಿಧ್ಯಮಯ ಧ್ವನಿಗಳನ್ನು ಹೊರಹೊಮ್ಮಿಸುವ ಬೆಟ್ಟದ ಗೊರವಂಕಗಳು ಧ್ವನಿಗಳನ್ನು ಅನುಕರಿಸುವುದರಲ್ಲೂ ಎತ್ತಿದ ಕೈ. ಇದರ ವೈಜ್ಞಾನಿಕ ಹೆಸರು  Gracula religiosa.

ಹೆಚ್ಚಾಗಿ ಗುಂಪಿನಲ್ಲೇ ಕಂಡುಬರುವ ಬೆಟ್ಟದ ಗೊರವಂಕಗಳಲ್ಲಿ ಹೆಣ್ಣು ಮತ್ತು ಗಂಡುಗಳು ಗಾತ್ರ, ಬಣ್ಣ ಮತ್ತು ಆಕಾರದಲ್ಲಿ ಸಮನಾಗಿಯೇ ಇರುತ್ತವೆ. ಹಣ್ಣುಗಳು, ಮಕರಂದ, ಪುಟ್ಟಹುಳುಗಳು, ಕೀಟಗಳು ಇವುಗಳ ಪ್ರಮುಖ ಆಹಾರ. ವಂಶಾಭಿವೃದ್ಧಿಗೆ ಗಿಡದ ಪೊಟರೆಗಳನ್ನೇ ಹೆಚ್ಚು ಆಶ್ರಯಿಸುವ ಈ ಪಕ್ಷಿಗಳಲ್ಲಿ ತಾಯಿ ಮೂರು ಮೊಟ್ಟೆಗಳನ್ನಿಟ್ಟು ಕಾವು ಕೊಟ್ಟು ಮರಿಮಾಡುತ್ತದೆ. ಇಂಪಾದ ಧ್ವನಿ ಮತ್ತು ಅನುಕರಣಾ ಸಾಮರ್ಥ್ಯದಿಂದ ಬೆಟ್ಟದ ಗೊರವಂಕಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರಿಯ ಪಂಜರದ ಪಕ್ಷಿಗಳು. ಇದರ ಪರಿಣಾಮವಾಗಿ ಕಳ್ಳಸಾಗಾಣಿಕೆ ಅವ್ಯಾಹತವಾಗಿ ನಡೆದಿದ್ದು, ಬಾಂಗ್ಲಾದೇಶ, ಥಾಯ್ಲೆಂಡ್​ಗಳಲ್ಲಿ ಇವುಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಭಾರತದ ಈಶಾನ್ಯ ರಾಜ್ಯಗಳೂ ಈ ಪಟ್ಟಿಯಲ್ಲಿ ಸೇರಿವೆ. ಅಲ್ಲಿನ ಸರ್ಕಾರಗಳು ತೆಗೆದುಕೊಂಡ ಕೆಲವು ಕ್ರಮಗಳ ಪರಿಣಾಮವಾಗಿ ಇದೀಗ ನಿಯಂತ್ರಣಕ್ಕೆ ಬಂದಿದೆ.