ಭೂಮಿ, ಬಾಡಿಗೆ ಬೆಲೆ ಏರಿಕೆ

| ದೇವರಾಜ್ ಎಲ್. ಬೆಂಗಳೂರು

ರಿಯಲ್ ಎಸ್ಟೇಟ್ ಪ್ರಾಜೆಕ್ಟ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಜೆಕ್ಟ್ ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಭಾಗದ ಥಣಿಸಂದ್ರದಲ್ಲಿ ಭೂಮಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಐಟಿ-ಬಿಟಿ ಕಂಪನಿಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರ್ವಣವಾಗುತ್ತಿರುವುದರಿಂದ ಬಾಡಿಗೆ ದರದಲ್ಲೂ ಹಿಂದೆಂದಿಗಿಂತ ಏರಿಕೆ ಕಂಡುಬಂದಿದೆ. ಏನಿಲ್ಲವೆಂದರೂ ಕನಿಷ್ಠ ಶೇ.10ರಷ್ಟು ಬಾಡಿಗೆ ಹಣ ಇಲ್ಲಿ ಹೆಚ್ಚಾಗಿದೆ.

ಈ ಪ್ರದೇಶದಲ್ಲಿ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಕಾಪೋರೆಟ್ ಕಂಪನಿಗಳು ಸ್ಥಾಪನೆಯಾಗುವುದು ಖಚಿವಾಗಿದೆ. ಇದರಿಂದ ಹಾಗೂ ಮೂಲಸೌಕರ್ಯ, ಗ್ರೇಡ್ – ಎ ಕಚೇರಿ ಸ್ಥಳಾವಕಾಶ ಸೃಷ್ಟಿಯಾಗುತ್ತಿರುವುದರಿಂದ ಸುತ್ತಮುತ್ತ ಪ್ರದೇಶಗಳಾದ ಜಕ್ಕೂರು, ಕೊತ್ತನೂರು, ಆರ್.ಕೆ.ಹೆಗಡೆ ನಗರ ಪ್ರದೇಶಗಳಲ್ಲಿ ಬಾಡಿಗೆ ದರದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಸಮೀಪವೇ ಇದೆ ಹಲವಾರು ಕಂಪನಿ: ಸಾಮಾನ್ಯವಾಗಿ ಬಾಡಿಗೆ ಮನೆ ಹುಡುಕುವಾಗ ಜನರು ತಾವು ಉದ್ಯೋಗ ಮಾಡುವ ಕಚೇರಿಗೆ ಸಮೀಪ ಆಗುವಂಥ ಪ್ರದೇಶವನ್ನೇ ಆಯ್ಕೆ ಮಾಡುತ್ತಾರೆ. ಇದಕ್ಕೆ ಕಾರಣ, ಬೆಂಗಳೂರಿನ ಟ್ರಾಫಿಕ್. ಉದ್ಯೋಗ ಸ್ಥಳದಿಂದ ದೂರದ ಪ್ರದೇಶ ಆಯ್ಕೆ ಮಾಡಿಕೊಂಡರೆ, ಕಚೇರಿ ತಲುಪುದರಲ್ಲೇ ಅರ್ಧ ದಿನ ಕಳೆಯುತ್ತದೆ ಎಂಬುದು ಉದ್ಯೋಗಿಗಳ ಆಲೋಚನೆ. ಈ ಆಲೋಚನೆಗೆ ಪೂರಕವಾಗಿ ಥಣಿಸಂದ್ರ ಪ್ರದೇಶವಿದೆ. ಈ ಪ್ರದೇಶದ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ಬೃಹತ್ ಐಟಿ ಕಂಪನಿಗಳಾದ ಮಾನ್ಯತಾ ಟೆಕ್ ಪಾರ್ಕ್, ಐಬಿಎಂ ಇಂಡಿಯಾ, ಐಎಸ್​ಎಚ್ ಇನ್​ಫೋಟೆಕ್, ಎಸ್​ಎಲ್​ಕೆ ಸಾಫ್ಟ್​ವೇರ್ ಸರ್ವೀಸಸ್ ಸೇರಿದಂತೆ ಹಲವಾರು ಕಂಪನಿಗಳಿವೆ. ಇದರ ಜತೆಗೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಜೆಕ್ಟ್​ಗಳೂ ಬರುತ್ತಿವೆ. ಇವು ಬಾಡಿಗೆದಾರರನ್ನು ಹೆಚ್ಚಿಗೆ ಆಕರ್ಷಿಸುತ್ತಿವೆ.

ರಸ್ತೆ ಸಂಪರ್ಕ

ಮುಂದಿನ ಹಂತದ ಕಾಪೋರೆಟ್ ಮತ್ತು ಕೈಗಾರಿಕಾ ಕ್ಷೇತ್ರವನ್ನು ಬೆಂಗಳೂರು ಉತ್ತರದ ಕಡೆಗೆ ವಿಸ್ತರಿಸುವ ಆಲೋಚನೆಯನ್ನು ಸರ್ಕಾರ ಹೊಂದಿದೆ. ಇದರಿಂದಾಗಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೊಡ್ಡಬಳ್ಳಾಪುರ ರಸ್ತೆ, ಯಲಹಂಕ, ಐವಿಸಿ ರಸ್ತೆ ಮತ್ತು ದೇವನಹಳ್ಳಿಯಿಂದ ಹೊರಕ್ಕೆ ಚಿಕ್ಕಬಳ್ಳಾಪುರದತ್ತ ಕಡೆಗೆ ರಸ್ತೆ ಸಂಪರ್ಕ ಹೆಚ್ಚಿದೆ. ಜತೆಗೆ, ಕೆ.ಆರ್.ಪುರ, ಕೋಲಾರ, ಪಶ್ಚಿಮ ವಲಯವಾದ ಯಶವಂತಪುರ, ರಾಜಾಜಿನಗರಕ್ಕೆ ಪ್ರಯಾಣ ಬೆಳೆಸಲು ಹೆಚ್ಚಿನ ಸಮಯದ ಅವಶ್ಯಕತೆ ಇರುವುದಿಲ್ಲ. ವಿಮಾನ ನಿಲ್ದಾಣದ ಸುತ್ತ ಐಟಿ ಮತ್ತು ಐಟಿ ಸೇವಾಧಾರಿತ ಕಂಪನಿಗಳು ಮತ್ತು ಬಯೋಟೆಕ್ನಾಲಜಿ, ವಿಶೇಷ ಆರ್ಥಿಕ ವಲಯ, ವಸತಿ ಸಂಕೀರ್ಣಗಳು, ಹಾಸ್ಪಿಟಾಲಿಟಿ ಮತ್ತು ಮನರಂಜನೆ, ಏರೋ ಇಂಡಸ್ಟ್ರಿ, ಮೆಡಿಕಲ್ ಹಬ್​ಗಳಿಗೆ ಸಂಪರ್ಕ ಇನ್ನಷ್ಟು ಸುಧಾರಿಸಲಿದೆ. ಈ ಭಾಗದಲ್ಲಿ ಮೇಲ್ಸೆತುವೆಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಜನರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ.