ಹೆಗಡೆನಗರ-ಕೋಗಿಲು ರಸ್ತೆ ರಿಯಾಲ್ಟಿ ಕ್ಷೇತ್ರದಲ್ಲಿ ಹೊಸ ಶಕೆ

ನಗರದ ಹೊರಭಾಗವಾದರೂ ಹೆಬ್ಬಾಳ, ಯಲಹಂಕ ಪ್ರದೇಶಗಳು ನಗರದ ರಿಯಾಲ್ಟಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿವೆ. ಇದರ ಸೆರಗಿನಂಚಿನಲ್ಲಿಯೇ ಇರುವ ನಾಗವಾರ, ಹೆಗಡೆನಗರ ಮುಖ್ಯ ರಸ್ತೆಗಳು ರಿಯಾಲ್ಟಿ ಕ್ಷೇತ್ರದ ಆಕಾಂಕ್ಷಿಗಳನ್ನು ಕೈಬೀಸಿ ಕರೆಯುತ್ತಿವೆ.

ವಸತಿ ಪ್ರದೇಶಗಳಿಗೆ ಹೇಳಿ ಮಾಡಿಸಿದಂತಿರುವ ಹೆಗಡೆನಗರ-ಕೋಗಿಲು ಮುಖ್ಯರಸ್ತೆಯ ಪ್ರದೇಶಗಳು ವಸತಿ ಪ್ರದೇಶಗಳಾಗುವತ್ತ ನಾಗಾಲೋಟದ ಹೆಜ್ಜೆ ಇಟ್ಟಿವೆ. ಇದಕ್ಕೆ ಕಾರಣ ನಗರದ ಪೂರ್ವಭಾಗದಲ್ಲಿರುವ ಐ.ಟಿ ಕೇಂದ್ರಗಳು ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣ.

ಕೆಲವೇ ವರ್ಷಗಳ ಹಿಂದೆ ನಗರದ ಹೊರವಲಯವಾಗಿದ್ದ ಹೆಗಡೆನಗರ-ಕೋಗಿಲು ಮುಖ್ಯರಸ್ತೆಯ ಇಕ್ಕೆಲಗಳು ಇದೀಗ ಹೊಸ ಹೊಸ ಬಡಾವಣೆಗಳ ನಿರ್ವಣದಲ್ಲಿ ಮುಂಜೂಣಿಯಲ್ಲಿವೆ. ಅಲ್ಲದೆ ಲೆಕ್ಕವಿಲ್ಲದಷ್ಟು ಅಪಾರ್ಟ್​ವೆುಂಟ್​ಗಳು ತಲೆ ಎತ್ತುತ್ತಿವೆ. ಹಲವು ಡೆವಲಪರ್ಸ್ ಕಂಪನಿಗಳು ಈ ಭಾಗದಲ್ಲೇ ಕಚೇರಿ ತೆರೆದು ಠಿಕಾಣಿ ಹೂಡಿವೆ. ಅದರಲ್ಲೂ ವಾಣಿಜ್ಯ ಸಂಕೀರ್ಣ, ಐಟಿ-ಬಿಟಿ ಕಂಪನಿಗಳಲ್ಲದೆ ವಸತಿ ಸಮುಚ್ಚಯಗಳ ನಿರ್ಮಾಣ ವೇಗ ಪಡೆದುಕೊಂಡಿದೆ. ಈ ಭಾಗದ ರಿಯಾಲ್ಟಿ ಕ್ಷೇತ್ರದಲ್ಲಿ ಹೊಸ ಶಕೆ ಆರಂಭವಾಗಿದೆ. ಈ ಪ್ರದೇಶ ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎನಿಸಿದರೆ, ಸೂರು ನಿರ್ವಣದ ಕನಸು ಹೊತ್ತವರಿಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿದೆ.

ಸಂಪರ್ಕ ರಸ್ತೆಗಳೇ ಕಾರಣ: ಥಣಿಸಂದ್ರ, ಹೆಗಡೆನಗರ, ಕೋಗಿಲು ರಸ್ತೆಗಳ ಮೂಲಕ ವಿಮಾನ ನಿಲ್ದಾಣ ಹಾಗೂ ಐಟಿ ಕೇಂದ್ರಗಳಿಗೆ ಸುಲಭ ಸಂಪರ್ಕ ರಸ್ತೆಗಳಿರುವುದು, ಈ ಪ್ರದೇಶದಲ್ಲಿನ ರಿಯಾಲ್ಟಿ ಕ್ಷೇತ್ರದ ಬಾಗಿಲು ತೆರೆಯಲು ಪ್ರಮುಖ ಕಾರಣವಾಗಿದೆ. ಇದಲ್ಲದೆ ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಹೊರವರ್ತಲ ರಸ್ತೆ ಹಾದುಹೋಗಿರುವುದು ಮಾರತಹಳ್ಳಿ, ವೈಟ್​ಫಿಲ್ಡ್​ನಂಥ ಐಟಿ ಹಬ್​ಗಳ ಉದ್ಯೋಗಿಗಳಿಗೆ ವರದಾನವಾಗಿದೆ. ಹೊರವರ್ತಲ ರಸ್ತೆಯುದ್ದಕ್ಕೂ ಹೊಸ ಹೊಸ ಕಂಪನಿಗಳು ತಲೆ ಎತ್ತುತ್ತಿರುವುದು, ಉದ್ಯೋಗಾಕಾಂಕ್ಷಿಗಳಿಗೆ ವರದಾನವಾಗಿದೆ.

ಭವಿಷ್ಯದಲ್ಲಿ ಕಾಲಿಡಲಿವೆ ದೈತ್ಯ ಕಂಪನಿಗಳು: ಈ ಭಾಗದಲ್ಲಿ, ನಿವೇಶನಗಳು ವಸತಿ ಪ್ರದೇಶಗಳಾಗಿ ಬದಲಾಗುತ್ತಿದ್ದು, ಭವಿಷ್ಯದಲ್ಲಿ ಐಟಿ-ಬಿಟಿಯಂಥ ದೈತ್ಯ ಕಂಪನಿಗಳು ಕಾಲಿಡುವ ಮುನ್ಸೂಚನೆ ನೀಡಿವೆ. ಅಲ್ಲದೆ ಬೃಹತ್ ಹೋಟೆಲ್​ಗಳು, ಮಾಲ್​ಗಳು ನಿರ್ವಣಗೊಳ್ಳಲು ತಯಾರಿ ನಡೆಸಿವೆ. ಜತೆಗೆ, ರಿಟೇಲ್ ಕ್ಷೇತ್ರವು ಇಲ್ಲಿಯೇ ಹರಡುವ ಸಾಧ್ಯತೆ ಇರುವುದಾಗಿ ಕೆಲವು ಖಾಸಗಿ ಸಮೀಕ್ಷೆಗಳು ಲೆಕ್ಕಾಚಾರ ಹಾಕಿವೆ. ಅನೇಕ ಪ್ರಾಜೆಕ್ಟ್​ಗಳು ರೂಪು ಪಡೆಯುತ್ತಿದ್ದು, ಕೆಲವೇ ವರ್ಷಗಳಲ್ಲಿ ಇವುಗಳೆಲ್ಲಾ ಸಕಾರಗೊಳ್ಳುವ ಸೂಚನೆ ನೀಡಿವೆ.