ಮಲಯಾಳಿ ನೀತುಗೆ ಕನ್ನಡವೇ ಇಷ್ಟ

‘ಮೇಘ ಅಲಿಯಾಸ್ ಮ್ಯಾಗಿ’ ಚಿತ್ರ ಶುಕ್ರವಾರ (ಜೂ. 15) ತೆರೆಕಾಣುತ್ತಿದೆ. ನಟಿ ಸುಕೃತಾ ವಾಗ್ಳೆ ಜತೆ ಮಲಯಾಳಿ ಬೆಡಗಿ ನೀತು ಬಾಲ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಸಿನಿಮಾ, ತಾವು ನಿಭಾಯಿಸಿದ ಪಾತ್ರ ಸೇರಿ ಹಲವು ವಿಷಯಗಳ ಬಗ್ಗೆ ನಮಸ್ತೆ ಬೆಂಗಳೂರು ಜತೆ ಮಾತನಾಡಿದ್ದಾರೆ ನೀತು.

| ಮಂಜು ಕೊಟಗುಣಸಿ ಬೆಂಗಳೂರು

ಒಂದು ಕಡೆ ಇಂಜಿನಿಯರ್ ಕೆಲಸ, ಮತ್ತೊಂದು ಕಡೆ ಸಿನಿಮಾ. ಹೇಗೆ ಬ್ಯಾಲೆನ್ಸ್ ಮಾಡಿದ್ದೀರಿ..?

– ಆರ್ಕಿಟೆಕ್ಟರ್ ಓದಿದ್ದರಿಂದ ವಿದ್ಯಾಭ್ಯಾಸ ಮುಗಿದ ತಕ್ಷಣ, ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿತು. ನನ್ನ ಹವ್ಯಾಸಗಳಾದ ನಟನೆ, ಮಾಡೆಲಿಂಗ್ ಬಗ್ಗೆ ಮೊದಲೇ ನಮ್ಮ ಮ್ಯಾನೇಜರ್ ಬಳಿ ಹೇಳಿಕೊಂಡಿದ್ದೆ. ಅದೇ ರೀತಿ ಸಿನಿಮಾ ಆಫರ್ ಬಂದಾಗ ಅವರೂ ಸಹ ಖುಷಿ ಪಟ್ಟು, ‘ಇಂತಹ ಅವಕಾಶ ಸಿಕ್ಕಾಗ ಮಿಸ್ ಮಾಡಿಕೊಳ್ಳಬಾರದು’ ಎಂದು ಸಲಹೆ ನೀಡಿ ಸಿನಿಮಾಕ್ಕಾಗಿ ರಜೆ ಕೊಟ್ಟಿದ್ದರು. ಒಟ್ಟು ಮೂರು ಶೆಡ್ಯೂಲ್​ನಲ್ಲಿ 45 ದಿನಗಳ ಕಾಲ ಶೂಟಿಂಗ್​ನಲ್ಲಿ ಭಾಗವಹಿಸಿದ್ದೆ. ಚಿತ್ರೀಕರಣದ ಬಿಡುವಿನಲ್ಲಿ ಆಫೀಸ್​ಗೂ ಹೋಗಿ ಕೆಲಸ ಮಾಡಿದ್ದುಂಟು. ಮೊದ ಮೊದಲು ಸಿನಿಮಾ ಮಾಡುತ್ತಿರುವ ಬಗ್ಗೆ ನಮ್ಮ ಸಹೋದ್ಯೋಗಿಗಳಿಗೂ ನಾನು ಹೇಳಿರಲಿಲ್ಲ. ಇದೀಗ ನಾನು ನಟಿಯಾಗಿದ್ದಕ್ಕೆ ಎಲ್ಲರೂ ಖುಷಿ ಪಡುತ್ತಾರೆ. ನನ್ನಷ್ಟೇ ಕುತೂಹಲ ನನ್ನ ಸ್ನೇಹಿತರಿಗೂ ಇದೆ.

‘ಮೇಘಾ ಅಲಿಯಾಸ್ ಮ್ಯಾಗಿ’ ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ.

– ತೀರಾ ಸೌಮ್ಯ ಸ್ವಭಾವದ ಹುಡುಗಿಯ ಪಾತ್ರ ನನ್ನದು. ಚಿತ್ರದ ನಾಯಕ, ‘ನನ್ನ ಹುಡುಗಿ ಸೀತೆ ಥರ ಇರಬೇಕು’ ಅಂದುಕೊಂಡಿರುತ್ತಾನೆ. ಆ ತರಹದಲ್ಲಿಯೇ ನಾನು ಚಿತ್ರದುದ್ದಕ್ಕೂ ಕಾಣಿಸಿದ್ದೇನೆ. ರೊಮ್ಯಾಂಟಿಕ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಮೊದಲ ಚಿತ್ರದಲ್ಲಿಯೇ ಒಳ್ಳೆಯ ಪಾತ್ರ ಸಿಕ್ಕ ಖುಷಿ ಇದೆ.

ಚೊಚ್ಚಲ ಸಿನಿಮಾ ಬಿಡುಗಡೆಯಾಗುತ್ತಿದೆ. ಹೇಗನಿಸುತ್ತಿದೆ?

ತುಂಬ ಎಗ್ಲೈಟ್ಸ್‌ ಆಗಿದ್ದೇನೆ. ಜತೆಗೆ ಟೆನ್ಷನ್ ಜೋರಾಗಿದೆ. ಚಿತ್ರ ಬಿಡುಗಡೆಗೆ ಇನ್ನು ಒಂದು ದಿನ ಬಾಕಿ ಇದೆ. ಏನಾಗುತ್ತದೋ ಎಂಬ ಭಯದಲ್ಲಿದ್ದೇನೆ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ ಖುಷಿ ಇದೆ. ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಎಂಬ ಕಾತರದಲ್ಲಿದ್ದೇನೆ.

ಕೇರಳದವರಾದರೂ, ಸ್ಯಾಂಡಲ್​ವುಡ್​ಗೆ ನಿಮ್ಮ ಆಗಮನ ಹೇಗಾಯಿತು?

ಸಿನಿಮಾಕ್ಕೂ ಬರುವ ಮುನ್ನ ಜಾಹೀರಾತು ನಟನೆ, ನಿರೂಪಣೆ, ಮಾಡೆಲಿಂಗ್​ನಲ್ಲಿ ತೊಡಗಿಸಿಕೊಂಡಿದ್ದೆ. ಬೆಂಗಳೂರಿನಲ್ಲೇ ನಾಲ್ಕು ವರ್ಷ ಇಂಜಿನಿಯರಿಂಗ್ ಕಲಿತೆ. ಒಂದರ್ಥದಲ್ಲಿ ಇಲ್ಲಿಗೆ ಬಂದ ಮೇಲೆಯೇ ಸಿನಿಮಾ ಆಫರ್ ಪಡೆದೆ. ಹಾಗಾಗಿ ಕನ್ನಡ ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿದ್ದಕ್ಕೆ ಖುಷಿ ಇದೆ.

ಇಂಜಿನಿಯರ್ ಆಗಿದ್ದ ನಿಮಗೆ ಸಿನಿಮಾ ವ್ಯಾಮೋಹ ಶುರುವಾಗಿದ್ದು ಯಾವಾಗಿನಿಂದ?

ಚಿಕ್ಕಂದಿನಲ್ಲೇ ಸಿನಿಮಾ ಕ್ಷೇತ್ರಕ್ಕೆ ಬರಬೇಕು. ನಟಿಯಾಗ ಬೇಕು ಎಂಬ ಆಸೆ ಇತ್ತು. ಆವಾಗಲೇ ಬಾಲನಟಿಯಾಗಿ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೆ. ನಾನು ನಟಿಯಾಗುತ್ತೇನೆಂದು ಅಪ್ಪನಿಗೆ ಹೇಳಿದ್ದೆ. ಓದಿಗೆ ಮೊದಲ ಪ್ರಾಶಸ್ಱ ನೀಡುವಂತೆ ಅಪ್ಪ ಹೇಳಿದ್ದರು. ಅದಾದ ಬಳಿಕ ನಿನಗಿಷ್ಟವಾಗಿದ್ದನ್ನು ಮಾಡು ಅಂದಿದ್ದರು. ಅದೇ ರೀತಿ ನಾನು ಸಹ ಓದಿನತ್ತ ಗಮನಹರಿಸಿದೆ. ಒಳ್ಳೆಯ ಕೆಲಸವನ್ನೂ ಗಿಟ್ಟಿಸಿಕೊಂಡೆ. ಇದೀಗ ಅಂದುಕೊಂಡಂತೆ ಸಿನಿಮಾ ನಟಿಯೂ ಆಗಿದ್ದೇನೆ.

‘ಮೇಘ ಅಲಿಯಾಸ್ ಮ್ಯಾಗಿ’ ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ?

ಕೇರಳದಲ್ಲಿ ಮಾಡೆಲಿಂಗ್ ಮಾಡುತ್ತಿದ್ದಾಗ ನನ್ನ ಪೂರ್ತಿ ಬಯೋಡಾಟ ಅಲ್ಲಿನ ಏಜೆನ್ಸಿಯೊಂದರಲ್ಲಿತ್ತು. ಅದೇ ಸಮಯದಲ್ಲಿ ನಿರ್ದೇಶಕ ವಿಶಾಲ್ ಹೀರೋಯಿನ್ ಹುಡುಕಾಟದಲ್ಲಿದ್ದರು. ಆಗ ಅಲ್ಲಿದ್ದ ನನ್ನ ಸ್ವ-ವಿವರ ನೋಡಿ, ಯಾವುದೇ ಆಡಿಷನ್ ಮಾಡದೆ, ಐದು ದಿನಗಳ ಕಾಲ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವಂತೆ ಹೇಳಿ, ಸಿನಿಮಾ ಅವಕಾಶ ಕೊಟ್ಟರು. ನಟನೆ ಬಗ್ಗೆ ಗೊತ್ತಿರದ ಕಾರಣ, ಅವರೇ ಕೆಲವೊಂದಿಷ್ಟು ಸಿನಿಮಾ ದೃಶ್ಯಗಳನ್ನು ಕಳಿಸುತ್ತಿದ್ದರು. ಅದೇ ರೀತಿ ನಾನೂ ನಟಿಸಿ ಕಳುಹಿಸುತ್ತಿದ್ದೆ.

‘ಮೇಘಾ..’ ಟೀಮ್ ಜತೆ ಕೆಲಸದ ಅನುಭವ ?

ಮೊದಲ ಚಿತ್ರವೇ ಒಳ್ಳೆ ಟೀಮ್ ಜತೆ ಕೆಲಸ ಮಾಡಿದ ಅನುಭವವಾಗಿದೆ. ನಿರ್ವಪಕ ವಿನಯ್ ಒಳ್ಳೆಯ ಸ್ನೇಹಿತನಂತೆ ಇದ್ದರು. ಇಡೀ ಟೀಮ್ ಒಂದು ಕುಟುಂಬದಂತೆ ಭಾಸವಾಗುತ್ತಿತ್ತು. ಸುಕೃತಾ, ತೇಜ್​ಗೆ ಹೋಲಿಕೆ ಮಾಡಿದರೆ, ನಟನೆಯಲ್ಲಿ ನಾನೇ ಚಿಕ್ಕವಳು. ಎಲ್ಲರೂ ನನ್ನನ್ನು ಮಗು ಥರ ನೋಡುತ್ತಿದ್ದರು. ನಟನೆಯ ವಿಚಾರದಲ್ಲಿ ಎಲ್ಲರೂ ಶಿಕ್ಷಕರಂತೆ ಪಾಠ ಮಾಡಿದ್ದಾರೆ. ನನ್ನ ನಟನೆಗೆ ನಿರ್ದೇಶಕರೇ ಗುರು. ಅವರಿಂದಲೇ ಸಿನಿಮಾ, ನಟನೆ ಬಗ್ಗೆ ತಿಳಿದುಕೊಂಡಿದ್ದೇನೆ.

ಸಿನಿಮಾದಲ್ಲಿಯೇ ಮುಂದುವರಿಯುತ್ತೀರಾ?

ಈ ಚಿತ್ರಕ್ಕೆ ದೊರೆಯುವ ಪ್ರತಿಕ್ರಿಯೆ ಗಮನಿಸಿ ಮುಂದಿನ ಸಿನಿಮಾಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾನು ಮೂಲ ಮಲಯಾಳಿ ಹುಡುಗಿಯಾದರೂ, ಕನ್ನಡ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳಬೇಕೆಂದುಕೊಂಡಿದ್ದೇನೆ. ಯಾಕೆಂದರೆ ಇಲ್ಲಿಂದಲೇ ನನ್ನ ಕರಿಯರ್ ಶುರುವಾಗಿದೆ. ಮೊದಲ ಪ್ರಾಶಸ್ಱ ಕನ್ನಡಕ್ಕೆ. ಈಗಾಗಲೇ ಇನ್ನೊಂದು ಕನ್ನಡ ಸಿನಿಮಾ ಒಪ್ಪಿಕೊಂಡಿದ್ದೇನೆ. ಅದರ ಕೆಲಸಗಳು ನಡೆಯುತ್ತಿವೆ. ಸಿನಿಮಾದ ಜತೆಗೆ ನನ್ನ ಇಂಜಿನಿಯರ್ ಕೆಲಸ ಮುಂದುವರಿಯುತ್ತಿರುತ್ತದೆ.

Leave a Reply

Your email address will not be published. Required fields are marked *