ಹೆಚ್ಚುತ್ತಿರುವ ವ್ಯಸನ ಯುವಶಕ್ತಿ ಅವಸಾನ

ನಾವಿಂದು ಮಾಹಿತಿಯುಗದಲ್ಲಿದ್ದೇವೆ. ಬೆರಳ ತುದಿಯಲ್ಲೇ ಇಡೀ ಜಗತ್ತನ್ನು ಕಾಣಬಹುದಾಗಿದೆ. ಅಭಿವೃದ್ಧಿಗೆ ತಂತ್ರಜ್ಞಾನ ಪೂರಕ. ಆದರೆ ಹದಿಹರೆಯದವರು ತಮ್ಮ ಸುತ್ತಮುತ್ತಲ ಪ್ರಪಂಚವನ್ನು ಸೋಷಿಯಲ್ ಮೀಡಿಯಾ ಮೂಲಕ ಅರ್ಥ ಮಾಡಿಕೊಳ್ಳುತ್ತಲೇ ಅದರ ಅತಿಯಾದ ಬಳಕೆಯಿಂದಾಗಿ ಖಿನ್ನತೆಗೆ ಜಾರುತ್ತಿದ್ದಾರೆ. ವರವಾಗಬೇಕಿದ್ದ ಇಂಟರ್​ನೆಟ್ ಈಗ ಒಂದು ವ್ಯಸನವಾಗಿ ಮಾರ್ಪಟ್ಟು ಯುವ ಸಮುದಾಯವನ್ನು ಅವಸಾನದತ್ತ ಕೊಂಡೊಯ್ಯುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಬಾರಿಯ ವಿಶ್ವ ಮಾನಸಿಕ ಆರೋಗ್ಯ ದಿನಕ್ಕೆ ‘ಯುವಜನಾಂಗ ಮತ್ತು ಮಾನಸಿಕ ಸ್ವಾಸ್ಥ್ಯ’ ಎಂಬ ವಾಕ್ಯವನ್ನು ಧ್ಯೇಯವಾಗಿ ಘೊಷಿಸಿದೆ.

| ಡಾ. ಆದಿತ್ಯ ಪಾಂಡುರಂಗಿ

ಯುವಕರನ್ನು ದೇಶದ ಭವಿಷ್ಯಕ್ಕೆ ಆಧಾರಸ್ತಂಭಗಳು, ಪ್ರಗತಿಯ ರೂವಾರಿಗಳು, ರಾಷ್ಟ್ರದ ನಿರ್ವತೃಗಳು ಎಂದೆಲ್ಲ ಸಂಬೋಧಿಸಲಾಗುತ್ತದೆ. ಇದು ನಿಜವೂ ಹೌದು. ಸ್ವಾಮಿ ವಿವೇಕಾನಂದರು ಸಹ ಯುವಶಕ್ತಿಯ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಆದರೆ ಬದಲಾದ ಸನ್ನಿವೇಶದಲ್ಲಿ ಇಂದು ಈ ಯುವಶಕ್ತಿ ಎಲ್ಲೋ ಒಂದು ಕಡೆ ಎಡವುತ್ತಿದೆ. ತನ್ನಲ್ಲಿರುವ ಅಗಾಧ ಶಕ್ತಿಯ ಅರಿವಿನ ಕೊರತೆ ಮತ್ತು ಬದಲಾದ ಜೀವನಶೈಲಿಯಿಂದಾಗಿ ದಾರಿ ತಪ್ಪುತ್ತಿದೆ ಎನ್ನಲು ನಮ್ಮ ಸುತ್ತಮುತ್ತ ಹಲವು ಉದಾಹರಣೆಗಳಿವೆ.

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಇದು ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಜೀವನದ ಪ್ರತಿ ಹಂತದಲ್ಲಿ ಏಳ್ಗೆಗೆ ಮೆಟ್ಟಿಲು ಎಂತಲೇ ಹೇಳಬಹುದು. ಇತ್ತೀಚಿನ ವರ್ಷಗಳಲ್ಲಿ ಯುವ ಸಮುದಾಯದಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಅದರಲ್ಲೂ ಹೆಚ್ಚಾಗಿ ಖಿನ್ನತೆಯ ಕಾಮೋಡ ಆವರಿಸಿರುವುದು ಆತಂಕಕಾರಿ ಬೆಳವಣಿಗೆ. ಮನುಷ್ಯನನ್ನು ಗೆದ್ದಲು ಹುಳುವಿನಂತೆ ಕಾಡುವ ಖಿನ್ನತೆ ಇತ್ತೀಚೆಗೆ ಹದಿಹರೆಯವರದಲ್ಲಿ ಹೆಚ್ಚಾಗುತ್ತಿದ್ದು ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಏರುಗತಿಯಲ್ಲಿದೆ. ಆರೋಗ್ಯ ಇಲಾಖೆಯ ವಿಶ್ಲೇಷಣೆ ಹಾಗೂ ಸಮೀಕ್ಷೆ ಪ್ರಕಾರ ಶೇ. 20-30ರಷ್ಟು ಜನರಲ್ಲಿ, ಅಲ್ಲದೇ 10ರಲ್ಲಿ ಒಬ್ಬ ಮಗುವಿಗೆ ಒಂದಲ್ಲ ಒಂದು ಮಾನಸಿಕ ಕಾಯಿಲೆ ಇದ್ದೇ ಇರುತ್ತದೆ. ಅಷ್ಟೇ ಏಕೆ ಜಾಗತಿಕ ಮಟ್ಟದಲ್ಲೂ ಈ ಖಿನ್ನತೆಯ ಪ್ರಮಾಣ ಏರುತ್ತಿದೆ.

ಮಾನಸಿಕ ಖಿನ್ನತೆಯ ಒತ್ತಡ ತಡೆಯಲಾಗದೆ ಎಷ್ಟೋ ಜನ ಆತ್ಮಹತ್ಯೆಯಂತಹ ಯತ್ನಗಳಿಗೆ ಮುಂದಾಗುತ್ತಾರೆ. 15-30 ವರ್ಷದೊಳಗಿನವರಲ್ಲಿ ಅಸಹಜ ಸಾವಿಗೆ ಎರಡನೇ ಅತಿ ದೊಡ್ಡ ಕಾರಣವೆಂದರೆ ಮಾನಸಿಕ ಅಸ್ವಸ್ಥತೆ. ಈ ಸಮಸ್ಯೆಯ ಜಾಡು ಹಿಡಿದು ಹೊರಟರೆ ಕಂಡು ಬರುವ ಪ್ರಮುಖ ಅಂಶಗಳು ಹಲವು. ಅವುಗಳಲ್ಲಿ ಕೌಟುಂಬಿಕ ಸಮಸ್ಯೆ, ಯಾಂತ್ರಿಕ ಜೀವನದ ಒತ್ತಡದ ಬದುಕು, ಬದಲಾದ ಆಹಾರ ಮತ್ತು ಜೀವನಶೈಲಿ, ನಿಸರ್ಗ ವಿರುದ್ಧದ ಜೀವನಕ್ರಮ, ಪ್ರೇಮ ವೈಫಲ್ಯ ಮತ್ತು ಮಿತಿಮೀರಿದ ಇಂಟರ್​ನೆಟ್ ಬಳಕೆ ಮತ್ತು ಗೇಮ್ಳ ದಾಸರಾಗಿರುವುದು ಪ್ರಮುಖವಾದವುಗಳು. ಶಿಕ್ಷಣ, ವೃತ್ತಿ ಬದುಕಿನ ಜತೆಗೆ ಪ್ರೇಮ ವೈಫಲ್ಯ, ಭಾವನಾತ್ಮಕ ವಿಷಯಗಳ ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಯುವಸಮುದಾಯ ಸೋಲುತ್ತಿದೆ. ಇದು ಯುವಕರ ಚಿಂತೆ ಮತ್ತು ವ್ಯಥೆಯೂ ಹೌದು. ಕಷ್ಟ ನಷ್ಟವನ್ನು ಎದುರಿಸುವ ತಾಳ್ಮೆ ಮರೆಯಾಗುತ್ತಿದೆ. ಜಡತ್ವ ಮತ್ತು ನಿಷ್ಕಿ›ಯತೆ ಯುವಕರನ್ನು ಆವರಿಸಿದೆ. ಪರಿಣಾಮ ಮಾನಸಿಕ ಸ್ವಾಸ್ಥ್ಯ ಸೊರಗುತ್ತಿದೆ.

ಆತ್ಮಾವಲೋಕನ ಅಗತ್ಯ: 21ನೇ ಶತಮಾನದ ಹುಮ್ಮಸ್ಸಿನಲ್ಲಿ ಆಧುನಿಕತೆಯ ನಾಗಾಲೋಟದಲ್ಲಿ ಸಾಗುತ್ತಿರುವ ಯುವ ಸಮುದಾಯ ಎತ್ತ ಸಾಗಿದೆ? ಅವರ ಗುರಿ ಏನು? ಅವರ ಜೀವನಶೈಲಿ, ಕಾರ್ಯವೈಖರಿ ಮತ್ತು ಬದುಕು ಸರಿಯಾದ ಮಾರ್ಗದಲ್ಲಿ ಸಾಗಿದೆಯೇ? ಎಂಬುದರ ಬಗ್ಗೆ ಲಕ್ಷ್ಯ ಕೊಡುವುದು ಇಂದಿನ ತುರ್ತು ಅತ್ಯಗತ್ಯವಾಗಿದೆ. ಯುವಕರಲ್ಲಿ ಆಧುನಿಕತೆ ಹೆಸರಲ್ಲಿ ಸ್ವೇಚ್ಛಾಚಾರ, ಹಿರಿಯರ ಉತ್ಪ್ರೇಕ್ಷೆ ಮಾಡುವ ಮನೋಭಾವ, ಹಣವೊಂದಿದ್ದರೆ ಸಾಕು ಎಲ್ಲವೂ ನನ್ನದೇ ಎನ್ನುವ ದುರಭಿಮಾನ ಹಾಗೂ ಜೀವನಶೈಲಿ ಬದಲಾಗುತ್ತಿರುವುದನ್ನು ನಾವು ಗಮನಿಸಬಹುದು. ನಾವೆಲ್ಲ 21ನೇ ಶತಮಾನದಲ್ಲಿದ್ದೇವೆ ಎಂಬ ವೇಗದಲ್ಲಿ ನಮ್ಮತನ ಕಣ್ಮರೆಯಾಗುತ್ತಿದೆ. ಹಿರಿಯರ ಮಾರ್ಗದರ್ಶನ ಮೂಲೆ ಸೇರುತ್ತಿವೆ. ಜೀವನಚಕ್ರ ಕೂಡ ಫಾಸ್ಟ್ ಫುಡ್ ಮಾದರಿಯಲ್ಲಿ ಫಾಸ್ಟ್ ಆಗಿ ಸಾಗುತ್ತಿದೆ. ಸೃಜನಶೀಲ ಚಟುವಟಿಕೆಗಳು ಕ್ಷೀಣಿಸುತ್ತಿವೆ. ವೀಡಿಯೋ ಗೇಮ್ ಇಂಟರನೆಟ್​ವೇ ಇವರಿಗೆ ಸರ್ವಸ್ವವಾಗಿವೆ. ಇತ್ತೀಚೆಗೆ ನಡೆದ ಸಮೀಕ್ಷೆ ಪ್ರಕಾರ ಶೇ.24ರಷ್ಟು ಹದಿಹರೆಯದವರಲ್ಲಿ ಮೊಬೈಲ್ ದುರ್ಬಳಕೆ ಕಂಡು ಬಂದಿದೆ. ಅಲ್ಲದೇ ಶೇ0.7ರಷ್ಟು ಮಕ್ಕಳು ಸೆಳೆತಕ್ಕೆ ಸಿಕ್ಕು ಗೀಳು ರೋಗ ಅಂಟಿಸಿಕೊಂಡಿದ್ದಾರೆ.

ಕಮರುತ್ತಿದೆ ಕ್ರಿಯಾಶೀಲತೆ: ಮಿದುಳಿಗೆ ವ್ಯಾಯಾಮ ಮರೀಚಿಕೆಯಾಗುತ್ತಿದೆ. ಕೃತಕ ಬುದ್ಧಿಮತ್ತೆ ಎಲ್ಲೆಡೆ ಆವರಿಸಿದ ಪರಿಣಾಮ ಮಿದುಳು ನಿಷ್ಕ್ರೀಯವಾಗುತ್ತಿದೆ. ಮನಸ್ಸು ಮತ್ತು ಇಂದ್ರಿಯ ನಿಗ್ರಹ ಸಾಧ್ಯವಾಗುತ್ತಿಲ್ಲ. ಕ್ರಿಯಾಶೀಲತೆ ಕಮರುತ್ತಿದೆ. ಕೆಲಸಕ್ಕೆ ಬಾರದ ಚಿಂತನೆಗಳನ್ನು ಹಚ್ಚಿ ಮನಸ್ಸ್ಸುಗಳು ಘಾಸಿಯಾಗುತ್ತಿವೆ. ಮನಸ್ಸಿನ ಮೇಲೆ ಹತೋಟಿಯೇ ಇಲ್ಲದಂತಾಗಿದೆ. ಯೋಚನಾ ಲಹರಿ ದಿನೇದಿನೆ ಬದಲಾಗುತ್ತಿದೆ. ಸಹವಾಸ ದೋಷವೋ ಅಥವಾ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯೋ ಗೊತ್ತಿಲ್ಲ.

ದುಶ್ಚಟಗಳು ಯುವಕರನ್ನು ಆವರಿಸುತ್ತಿವೆ. ಶೇ. 5ರಿಂದ 8ರಷ್ಟು ಪುರುಷರು ಹಾಗೂ ಶೇ. 2ರಿಂದ ಶೇ. 4ರಷ್ಟು ಮಹಿಳೆಯರು ಮದ್ಯವ್ಯಸನಕ್ಕೆ ಬಲಿಯಾಗುತ್ತಾರೆ. ಇದಲ್ಲದೇ ಗಾಂಜಾ, ಅಫೀಮುಗಳ ಸೇವನೆಯೂ ಹೆಚ್ಚಿದೆ. ಪರಿಣಾಮ ಯುವ ಸಮುದಾಯದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಕುಸಿಯುತ್ತಿದೆ. ಸಾಧನೆಯ ಹಂಬಲ ತುಡಿತ ಮೂಲೆಗುಂಪಾಗುತ್ತಿದೆ.

ಪರಿಹಾರವೂ ಇದೆ

ಈ ಸಮಸ್ಯೆಗೆ ಪರಿಹಾರವೂ ನಮ್ಮ ಬಳಿಯೇ ಇದೆ. ಇಂದಿನ ಮಕ್ಕಳು ನಾಳೆಯ ಪ್ರಜೆಗಳು ದೇಶದ ಭವಿಷ್ಯ ರೂಪಿಸುವವರು ಎಂದೆಲ್ಲ ಸಂಬೋಧಿಸಲಾಗುತ್ತದೆ. ಇವರಿಗೆ ಮನೆಯಲ್ಲಿ ಪಾಲಕರ, ಹಿರಿಯರ, ಶಾಲೆ, ಕಾಲೇಜಿನಲ್ಲಿ ಶಿಕ್ಷಕರ ಹಾಗೂ ನಚಿತರ ಸಮಾಜದ ಚಿಂತಕರಿಂದ ಬುದ್ಧಿಜೀವಿಗಳಿಂದ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ಅತ್ಯಗತ್ಯವಾಗಿದೆ. ನಮ್ಮ ಯುವಪೀಳಿಗೆ ಇಂದು ಹತ್ತು ಹಲವು ಮೋಡಿಗೆ ಒಳಗಾಗಿದೆ. ಆಧುನಿಕತೆಯ ಕರಾಳತೆಗೆ ಸಿಕ್ಕು ನಲಗುತ್ತಿದೆ. ತಂತ್ರಜ್ಞಾನ ಅಭಿವೃದ್ಧಿಗೆ ಅವಶ್ಯ ಎಂಬುದು ಎಲ್ಲರೂ ಒಪ್ಪಲೇಬೇಕಾದ ಮಾತು. ಈ ತಂತ್ರಜ್ಞಾನ ಸಮಾಜದ ಹಿತದೃಷ್ಟಿಯಿಂದ ಸದ್ಬಳಕೆಯಾಗಬೇಕು ಮತ್ತು ವ್ಯಕ್ತಿಯ ವಿಕಸನಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಿ ಅಲ್ಲ. ದಿನ ಬೆಳಗಾದರೆ ನಾವಿಂದು ಮಾಧ್ಯಮಗಳಲ್ಲಿ ನೋಡುತ್ತೇವೆ, ಓದುತ್ತೇವೆ. ಬ್ಲೂವೇಲ್, ಮೊಬೈಲ್ ಗೇಮ್ಂತಹ ಆಟಗಳ ಮೋಡಿಗೆ ಸಿಲುಕಿ ನರಳುತ್ತಿರುವ ಅಷ್ಟೇ ಏಕೆ ಜೀವವನ್ನೇ ಕಳೆದುಕೊಂಡ ಉದಾಹರಣೆಗಳು ನಮ್ಮ ಮಧ್ಯೆ ಅನೇಕ. ಹಾಗಿದ್ದರೆ ಇದೆಲ್ಲ ಹೇಗೆ ಸಾಧ್ಯ? ಏಕೆ ಹೀಗಾಗುತ್ತಿದೆ ಎಂದು ಅರಸಿ ಹೊರಟರೆ ಸಿಗುವ ಉತ್ತರ ಯುವ ಪೀಳಿಗೆಯ ಜೀವನಶೈಲಿ.

ಸ್ವಂತ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾದರೆ ಸ್ವಾಯತ್ತತೆ, ಸಮಗ್ರತೆ ಮತ್ತು ಸಾಮರಸ್ಯ ಈ ಮೂರು ಗುಣಗಳನ್ನು ಬೆಳೆಸಿಕೊಳ್ಳುವುದು ಅವಶ್ಯಕ.

ಸ್ವಾಯತ್ತತೆಯಿಂದ ಸ್ವತಂತ್ರವಾಗಿ ಯೋಚನಾ ಶಕ್ತಿ, ಸಮಗ್ರತೆಯಿಂದ ಸ್ಪಷ್ಟತೆ ಮತ್ತು ಸಾಮರಸ್ಯದಿಂದ ಯೋಚನೆ ಮತ್ತು ಭಾವನೆಗಳು ಪರಸ್ಪರ ಅನುಕೂಲವಾಗಿರುತ್ತದೆ. ಇದರಿಂದ ಯಾವುದೇ ಮಾನಸಿಕ ಘರ್ಷಣೆಗೆ ಅವಕಾಶ ಇರುವುದಿಲ್ಲ. ಆದರೆ ಇದನ್ನು ಅಳವಡಿಸಿಕೊಳ್ಳುವ ವ್ಯವದಾನ ನಮ್ಮಲ್ಲಿಲ್ಲವೇ?

ಮನೆಯವರಿಗಿಂತ ಫೇಸ್​ಬುಕ್ಕೇ ಮುಖ್ಯವಾದರೆ..?

ಇತ್ತೀಚೆಗಂತೂ ಈ ಸೋಷಿಯಲ್ ಮೀಡಿಯಾದ ಅಬ್ಬರ ಮಿತಿಮೀರಿದೆ. ಯಾರನ್ನೇ ನೋಡಿ ಎಲ್ಲರೂ ಕೈ ಯಲ್ಲಿ ಸ್ಮಾರ್ಟ್​ಫೋನ್​ನಲ್ಲೇ ಬ್ಯುಸಿಯಾಗಿರುತ್ತಾರೆ. ಊಟ, ಕೆಲಸದ ಪರಿವೇ ಇರುವುದಿಲ್ಲ. ಫೇಸ್ ಟು ಫೇಸ್ ಮಾತಾಡೋರಿಗಿಂತ ಫೇಸ್​ಬುಕ್​ನಲ್ಲಿ ಮಾತಾಡೋರೆ ಹೆಚ್ಚಾಗಿದ್ದಾರೆ. ಏನಾದ್ರೂ ಪೋಸ್ಟ್ ಹಾಕಿದಾಗ ನಾಲ್ಕು ಕಮೆಂಟ್ ಬಂದ್ರೆ ಸಾಕಪ್ಪಾ ಅನ್ನೋ ರೇಂಜಿಗೆ ಈ ವರ್ಗ ಶಿಫ್ಟ್ ಆಗ್ತಿದೆ. ಒಂದೇ ಮನೆಯಲ್ಲಿ ಇರೋರಿಗಿಂತ, ಫ್ರೆಂಡ್ಸ್ ಲಿಸ್ಟ್​ನಲ್ಲಿ ಇರೋರಿಗೇ ಹೆಚ್ಚಿನ ಮಹತ್ವ ನೀಡಲಾಗ್ತಿದೆ. ಎಲ್ಲಿದ್ದೀವಿ? ಏನು ಮಾಡ್ತಾ ಇದ್ದೀವಿ? ಇವತ್ತು ಯಾವರೀತಿ ಫೀಲಿಂಗ್ ಇದೆ? ಫೀಲಿಂಗ್ ಹ್ಯಾಪಿನಾ, ಸ್ಯಾಡಾ? ಗರ್ಲ್ ಫ್ರೆಂಡ್ ಕೈ ಕೊಟ್ಲಾ? ಬಾಯ್ಫ್ರೆಂಡ್ ಬಿಟ್ಟೋದ್ನಾ? ಫ್ರೆಂಡ್ಸ್ ದ್ರೋಹ ಮಾಡಿದ್ರಾ? ಹೀಗೆ ಪ್ರತಿಯೊಂದನ್ನೂ ಮನೆಯವರಿಗಿಂತ ಫೇಸ್​ಬುಕ್ಕಿನವರೇ ಹೆಚ್ಚಿಗೆ ತಿಳಿಯುವಂಥ ಪರಿಸ್ಥಿತಿಯನ್ನ ನಿರ್ವಿುಸಿಕೊಂಡಿದ್ದೀವಿ.

ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಇಂದಿಗೂ ತಪ್ಪು ತಿಳಿವಳಿಕೆ ಇದೆ. ರೋಗದ ಕುರಿತು ಇರುವ ತಪ್ಪು ಕಲ್ಪನೆಗಳು ಹಾಗೇ ಉಳಿದಿವೆ. ಮನಸ್ಸಿಗೆ ಕಾಯಿಲೆ ಎಂದರೆ ಅದು ಹುಚ್ಚು ಮಾತ್ರ ಎಂಬ ಕಲ್ಪನೆ ಇಂದಿಗೂ ಇದೆ. ದೈಹಿಕ ಕಾಯಿಲೆಯಲ್ಲಿ ಹೇಗೆ ಬೇರೆ ಬೇರೆ ವಿಧಗಳಿವೆಯೋ ಹಾಗೆಯೇ ಮಾನಸಿಕ ಕಾಯಿಲೆಗಳಲ್ಲಿಯೂ ಬೇರೆ ಬೇರೆ ವಿಧಗಳಿವೆ. ಕಾಯಿಲೆಯ ಆದಿಯಲ್ಲೇ ಮನೋವೈದ್ಯರಿಂದ ಸರಿಯಾದ ಚಿಕಿತ್ಸೆ ಪಡೆದು, ಅವರ ಸಲಹೆಗಳನ್ನು ಪಾಲಿಸಿದರೆ ಪ್ರತಿಶತ ಎಂಭತ್ತು ಮಾನಸಿಕ ರೋಗಗಳು ಗುಣವಾಗುತ್ತವೆ. ಈ ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದಾದ ಮಾರ್ಗವೆಂದರೆ ಪಾಲಕರು ಮಕ್ಕಳ ಚಲನವಲನ ಮೇಲಾ ನಿಗಾ ಇಡುವುದು ಮತ್ತು ಮಕ್ಕಳು ಕೂಡಾ ತಮ್ಮ ಜವಾಬ್ದಾರಿ ಅರಿತು ಸಾಗಬೇಕು.

ಭವಿಷ್ಯದ ನಿರ್ಲಕ್ಷ್ಯ

ದಿಢೀರ್ ಶ್ರೀಮಂತನಾಗಬೇಕೆಂಬ ಆಸೆ ಈಡೇರಿಸುವ ಭರದಲ್ಲಿ ಆರೋಗ್ಯ ನಿರ್ಲಕ್ಷಿಸುತ್ತಿದ್ದಾರೆ. ಯುವಕರ ಸ್ವಂತಿಕೆಯ ಭಾವ, ಅವರ ವಿಶ್ವಾಸ, ಭರವಸೆ ಮತ್ತು ಜೀವನವನ್ನು ಶೋಧಿಸುವ ಅವರ ಸಂತೋಷವನ್ನು ಕಸಿದುಕೊಂಡು ಅವರ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ತಮಗಿಷ್ಟವಿಲ್ಲದ ಕೋರ್ಸಿಗೆ ದೂಡಲ್ಪಟ್ಟ ವಿದ್ಯಾರ್ಥಿಗಳು ವರ್ಷಗಳು ಕಳೆದರೂ ವಿಷಯಗಳನ್ನು ಪಾಸ್ ಮಾಡಲಾಗದೆ ಪರದಾಡುತ್ತಿದ್ದಾರೆ. ಆಯ್ದುಕೊಂಡ ಕೋರ್ಸ್ ಮುಗಿಸುವ ಅನಿವಾರ್ಯತೆಯಿಂದ ಬಹುಶಃ ಓದಿದ ನಂತರ ವೃತ್ತಿ ಮತ್ತು ಆದಾಯದ ವಿಷಯದಲ್ಲಿ ನೆಮ್ಮದಿ ಸಿಗಬಹುದೆಂಬ ಆಸೆಯಿಂದ ಅತೃಪ್ತ ಮನಸ್ಸಿನಿಂದಲೇ ಮುಂದುವರಿಯುತ್ತಿದ್ದಾರೆ. ಬೌದ್ಧಿಕ ವಿಕಾಸದ ಜತೆಗೆ ಸ್ವಂತ ವ್ಯಕ್ತಿತ್ವವನ್ನು ಬೆಳೆಸುವುದು ಶಿಕ್ಷಣದ ಗುರಿಯಾಗಬೇಕಿದೆ.