Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕೆರೆಯ ನೀರನು ಕೆರೆಗೆ ಚೆಲ್ಲಿ…

Monday, 02.07.2018, 3:03 AM       No Comments

ವ್ಯಾಪಾರ-ವ್ಯವಹಾರದ ಮೂಲ ಉದ್ದೇಶವೇ ಲಾಭ ಗಳಿಸುವುದು. ಹಾಗೆಂದು ಬರಿಯ ಲಾಭ ಗಳಿಕೆಯನ್ನೇ ಗುರಿಯಾಗಿ ಇರಿಸಿಕೊಂಡುಬಿಟ್ಟರೆ ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಕಂಪನಿ ಹೆಚ್ಚು ಕಾಲ ನೆಲೆ ನಿಲ್ಲಲು ಸಾಧ್ಯವಿಲ್ಲ. ಪ್ರತಿಯೊಂದು ಕಂಪನಿಯೂ ಸಮಾಜದ ನಡುವೆಯೇ ಹುಟ್ಟಬೇಕು, ಬೆಳೆಯಬೇಕು. ತನ್ನ ಸಂಪೂರ್ಣ ಅಸ್ತಿತ್ವಕ್ಕೆ, ಬೆಳವಣಿಗೆಗೆ ಈ ಸಮಾಜವನ್ನೇ ಅವಲಂಬಿಸಬೇಕು. ಹಾಗಾಗಿ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವುದೂ ಬಹಳ ಮುಖ್ಯ.

| ನರೇಂದ್ರ ಎಸ್. ಗಂಗೊಳ್ಳಿ

ಕೆರೆಯ ನೀರನು ಕೆರೆಗೆ ಚೆಲ್ಲಿ / ವರವ ಪಡೆದವರಂತೆ ಕಾಣಿರೊ

ಹರಿಯ ಕರುಣದಲಾದ ಭಾಗ್ಯವ / ಹರಿಸಮರ್ಪಣೆ ಮಾಡಿ ಬದುಕಿರೊ

ಎಂದಿದ್ದಾರೆ ಪುರಂದರದಾಸರು.

ಜನಸಮುದಾಯವನ್ನು ಉದ್ದೇಶಿಸಿ ಅವರು ಹೇಳಿದ ಈ ಕಿವಿಮಾತು ಇಂದಿನ ಕಾಲಘಟ್ಟದಲ್ಲಿ ವಾಣಿಜ್ಯ ವಹಿವಾಟು ನಡೆಸುವ ಕಂಪನಿಗಳಿಗೂ ಸರಿಯಾಗಿ ಅನ್ವಯವಾಗುತ್ತದೆ.

ದೇಶದ ನೂರಾರು ಕಾಪೋರೇಟ್ ಕಂಪನಿಗಳು ತಾವು ಗಳಿಸುತ್ತಿರುವ ಹಣದ ಒಂದು ಪಾಲನ್ನು ಸಮಾಜದಲ್ಲಿರುವ ವಿವಿಧ ಕೊರತೆಗಳನ್ನು ನೀಗಿಸಲು ಈಗಾಗಲೇ ಬಳಸುತ್ತಿವೆ. ಹಳ್ಳಿಗಳನ್ನು ಹಾಗೂ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು, ಬಡ ಕುಟುಂಬದ ಮಕ್ಕಳಿಗೆ ಸ್ಕಾಲರ್​ಷಿಪ್ ನೀಡುವುದು, ಏಡ್ಸ್, ಕಾನ್ಸರ್ ಮತ್ತಿತರ ‘ದುಬಾರಿ’ ರೋಗಗಳ ಬಗೆಗೆ ಅರಿವು ಮೂಡಿಸುವುದು, ಪ್ರಾಣಿ ಪಕ್ಷಿಗಳ ರಕ್ಷಣೆ, ಬಡತನ ನಿಮೂಲನೆ, ಕೌಶಲಾಭಿವೃದ್ಧಿ ತರಬೇತಿ, ಶುದ್ಧ ಕುಡಿಯುವ ನೀರಿನ ಪೂರೈಕೆ, ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರಗಳನ್ನು ನಡೆಸುವುದು, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಶೌಚಾಲಯ ನಿರ್ವಣ, ಅರಣ್ಯ ಬೆಳೆಸುವುದು, ಪರಿಸರ ಸ್ನೇಹಿ ಕಚ್ಚಾವಸ್ತುಗಳ ಬಳಕೆ… ಹೀಗೆ ನೂರಾರು ಸಮಾಜಮುಖಿ ಕಾರ್ಯಗಳಲ್ಲಿ ಅವು ಸಕ್ರಿಯವಾಗಿವೆ.

ಭಾರತೀಯ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯ ವಿಷಯದಲ್ಲಿ ವಿಶ್ವದ ಇತರ ಕಂಪನಿಗಳಿಗೆ ಹೋಲಿಸಿದರೆ ಉತ್ತಮ ಟ್ರ್ಯಾಕ್​ರೆಕಾರ್ಡ್ ಹೊಂದಿರುವುದು ಖುಷಿಯ ಸಂಗತಿ. ಸ್ವಾತಂತ್ರ್ಯೂರ್ವದಲ್ಲಿಯೇ ಆರಂಭವಾದ ಈ ಸಾಮಾಜಿಕ ಹೊಣೆಗಾರಿಕೆ ನಿಭಾವಣೆಯ ಕಾರ್ಯ ಸ್ವಾತಂತ್ರ್ಯಾನಂತರವೂ ಮುಂದುವರಿಯಿತು. ಟಾಟಾ ಬಳಗವಂತೂ ಈ ನಿಟ್ಟಿನಲ್ಲಿ ಸದಾ ಮುಂದು. ಬಿರ್ಲಾ, ಗೋದ್ರೆಜ್, ಬಜಾಜ್, ಮೋದಿ ಮೊದಲಾದ ಕಂಪನಿಗಳು ಹಾಕಿಕೊಟ್ಟ ಸಮಾಜ ಸೇವೆಯ ಉದಾತ್ತ ಮಾರ್ಗವನ್ನು ಉಳಿದ ಕಂಪನಿಗಳು ಸಹ ಅನುಸರಿಸಿದವು.

ಈ ವಿಷಯದಲ್ಲಿ ಟಾಟಾ ಗ್ರೂಪ್, ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಇಂಡಿಯನ್ ಆಯಿಲ್ ಕಾಪೋರೇಷನ್ ಹೆಸರುಗಳು ಎತ್ತರದ ಸ್ಥಾನದಲ್ಲಿವೆ. ವಿಪ್ರೋ, ರಿಲಯನ್ಸ್, ಏರ್​ಟೆಲ್​ನಂತಹ ಬೃಹತ್ ಕಂಪನಿಗಳು ದೇಶದ ಬಡತನ ನಿವಾರಣೆಗಾಗಿ ತಮ್ಮದೇ ಫೌಂಡೇಷನ್​ಗಳನ್ನು ಸ್ಥಾಪಿಸಿವೆ. ಪೋಲಿಯೋ ಮುಕ್ತ ಭಾರತದ ಸಾಧನೆಯ ಹಿಂದೆ ಹಲವಾರು ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದಿವೆ. ಸ್ಯಾಪ್ ಇಂಡಿಯಾ ಹೋಪ್ ಫೌಂಡೇಷನ್ ಎನ್ನುವ ಎನ್​ಜಿಒದೊಂದಿಗೆ ಕೈಜೋಡಿಸಿ ಸುನಾಮಿ ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡಲು ಸಹಕರಿಸಿದೆ. ಭಾರತ್ ಪೆಟ್ರೋಲಿಯಂ, ಮಾರುತಿ ಸುಜುಕಿ, ಹಿಂದುಸ್ತಾನ್ ಲೀವರ್ ಸೇರಿದಂತೆ ಹಲವಾರು ಕಂಪನಿಗಳು ಶಿಕ್ಷಣ, ಪರಿಸರ, ಆರೋಗ್ಯ ಮತ್ತಿತರ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುತ್ತಲಿವೆ.

ಬ್ರಿಟನ್ ಮೂಲದ ಕೋಸ್ಟ ಕಾಫಿ ಕಂಪನಿ 2008ರಿಂದಲೂ ಮೂಗ ಮತ್ತು ಕಿವುಡರೂ ಸೇರಿದಂತೆ ದೈಹಿಕ ಅಂಗವೈಕಲ್ಯವುಳ್ಳ ಹಲವಾರು ಜನರಿಗೆ ಉದ್ಯೋಗದ ಅವಕಾಶಗಳನ್ನು ನೀಡುತ್ತ ಬಂದಿದೆ. ಇದೀಗ ಆ ಕಂಪನಿಯ ಉದ್ಯೋಗಿಗಳಲ್ಲಿ ಶೇ.15ರಷ್ಟು ಜನ ಈ ವರ್ಗಕ್ಕೆ ಸೇರಿದವರಾಗಿರುವುದು ನಿಜಕ್ಕೂ ಪ್ರಶಂಸನೀಯ. ಇನ್ಪೋಸಿಸ್ ಬೆಂಗಳೂರಿನಲ್ಲಿ ನಿರ್ಮಲ ಶೌಚಾಲಯಗಳನ್ನು ಕಟ್ಟಿಸಿದ್ದನ್ನು ಮರೆಯುವ ಹಾಗಿಲ್ಲ. ರಿಲಯನ್ಸ್ ಫೌಂಡೇಷನ್ ಸೇರಿದಂತೆ ಹಲವಾರು ಸಂಸ್ಥೆಗಳು ಕಾಶ್ಮೀರ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದವು. ಟಾಟಾ ಸಮೂಹ ನೂರು ಕೋಟಿ ರೂಪಾಯಿಗಳನ್ನು ದೇಶಾದ್ಯಂತ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಬಳಸಿತ್ತು. ಮಿರಾಕಲ್ ಕೊರಿಯರ್ಸ್ ಸಂಪೂರ್ಣ ಶ್ರವಣ ದೋಷವಿರುವ ಉದ್ಯೋಗಿಗಳನ್ನೇ ಹೊಂದಿ ಗಮನ ಸೆಳೆದಿತ್ತು. ಸೆಲ್ಕೋ ಇಂಡಿಯಾ ಸಂಸ್ಥೆ ಗ್ರಾಮೀಣ ಭಾಗದ ಜನರಿಗೆ ಕಡಿಮೆ ದರದಲ್ಲಿ ಸೌರ ವಿದ್ಯುತ್ ದೀಪಗಳನ್ನು ಒದಗಿಸುತ್ತಿದೆ. ಆವಿಷ್ಕಾರ್ ಸೋಷಿಯಲ್ ವೆಂಚರ್ ಫಂಡ್ ಗ್ರಾಮೀಣ ಭಾಗದಲ್ಲಿ ಸಮಾಜ ಹಿತದ ಚಟುವಟಿಕೆಗಳನ್ನು ನಡೆಸಲು ಅಗತ್ಯ ಬಂಡವಾಳ ಒದಗಿಸುವಲ್ಲಿ ಸಹಕರಿಸುತ್ತಿದೆ. ಇವೆಲ್ಲ ಕೆಲವು ಉದಾಹರಣೆಗಳಷ್ಟೆ.ಇಂಥ ಕಾರ್ಯಕ್ರಮಗಳ ಮೂಲಕ ಕಾರ್ಪೆರೇಟ್ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುತ್ತಿವೆ. ಬಹಳಷ್ಟು ಕಂಪನಿಗಳು ಈ ಹೊಣೆಗಾರಿಕೆ ನಿಭಾಯಿಸಲೋಸುಗವೇ ಪ್ರತ್ಯೇಕವಾದ ಸಮಿತಿಗಳನ್ನು ಹೊಂದಿವೆ. ಒಟ್ಟಿನಲ್ಲಿ ವಿಶ್ವಾದ್ಯಂತ ಕಾಪೋರೇಟ್ ಜಗತ್ತು ಒಂದಲ್ಲ ಒಂದು ರೀತಿಯಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಇಂದಿನ ಸತ್ಯ. ಸಾಮಾಜಿಕ ಹೊಣೆಗಾರಿಕೆ ಅನ್ನುವುದು ಖರ್ಚಲ್ಲ. ಒಂದು ಕಂಪನಿಯ ಹೆಸರನ್ನು ಉಳಿಸಲು, ಪ್ರತಿಷ್ಠೆ ಹೆಚ್ಚಿಸಲು, ಸ್ಪರ್ಧಾತ್ಮಕತೆ ಅಧಿಕಗೊಳಿಸಲು, ರಕ್ಷಣೆ, ಅಭಿವೃದ್ಧಿ… ಹೀಗೆ ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗಿವೆ. ಉದ್ಯಮ ದಿಗ್ಗಜ ಬಿಲ್​ಗೇಟ್ಸ್ ಹೇಳಿದ ಮಾತು ಇಲ್ಲಿ ನೆನಪಾಗುತ್ತಿದೆ. ‘ಪರಿಣಾಮಕಾರಿಯಾದ ಉತ್ತಮ ಬಂಡವಾಳ ಹೂಡಿಕೆ ಮತ್ತು ಬಳಕೆ ಸಾಧ್ಯವಾಗಬೇಕಾದರೆ ಒಳ್ಳೆಯದನ್ನು ಮಾಡಬೇಕಿದೆ. ಹಾಗೆ ಒಳ್ಳೆಯದನ್ನು ಮಾಡಬೇಕಿದ್ದರೆ ಸಾಮಾಜಿಕ ಹೊಣೆಗಾರಿಕೆ ಅರಿತುಕೊಂಡು ಯಶಸ್ವಿಯಾಗಿ ನಿರ್ವಹಿಸಬೇಕು. ಇದು ಎಲ್ಲ ಉದ್ದಿಮೆದಾರರಿಗೂ ಅರ್ಥವಾಗಲಿ. ಆ ಮೂಲಕ ಕಾಪೋರೇಟ್ ಜಗತ್ತು ಮತ್ತು ಸಮಾಜ ಎರಡೂ ಮತ್ತಷ್ಟು ಅಭಿವೃದ್ಧಿಯಾಗಲಿ’.

ಯಾಕೆ ಅಗತ್ಯ?: ಯಾವುದೇ ಕಂಪನಿ ಬಹಳ ಕಾಲದವರೆಗೆ ತನ್ನನ್ನು ತಾನು ಅಭಿವೃದ್ಧಿಗೊಳಿಸುತ್ತ ಸಾಗಬೇಕೆಂದರೆ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಲೇಬೇಕು. ಸಂಸ್ಥೆಯ ಮೂಲ ಆಶಯಕ್ಕೆ ಹೊರತಾದ, ಆದರೆ ಸಮಾಜಕ್ಕೆ ಪೂರಕವಾದ ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯವಹಾರದ ಕಾರ್ಯಾಚರಣೆಗೆ ಅನುಕೂಲಕರವಾದ ಪರಿಸರ, ಜನರ ಬೆಂಬಲ, ಬಂಡವಾಳ ಮತ್ತಿತರ ಸಂಪನ್ಮೂಲಗಳ ಯಶಸ್ವಿ ಸಂಚಯನ ಎಲ್ಲವೂ ಸಾಧ್ಯವಾಗುತ್ತದೆ. ಕೆಲವೊಮ್ಮೆ ಸಾರ್ವಜನಿಕ ವಲಯದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳನ್ನು ವ್ಯವಹಾರಕ್ಕೆ ಅನುಕೂಲಕರ ಅವಕಾಶಗಳನ್ನಾಗಿ ಬದಲಾಯಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಗ್ರಾಹಕರಲ್ಲಿ ಉಂಟಾಗಿರುವ ಜಾಗೃತಿ ಗ್ರಾಹಕ ಹಿತರಕ್ಷಣಾ ಆಂದೋಲನಗಳು ಕೂಡ ವ್ಯವಹಾರದ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುವ ಅನಿವಾರ್ಯತೆಯನ್ನು ಉಂಟು ಮಾಡಿರುವುದು ಸತ್ಯ. ಸರ್ಕಾರದ ಕಟ್ಟುಪಾಡುಗಳು, ನೀತಿ ನಿಯಮಗಳು ಕೂಡ ಸಾಮಾಜಿಕ ಹೊಣೆಗಾರಿಕೆಯನ್ನು ಇಂದು ಪ್ರೋತ್ಸಾಹಿಸುತ್ತಿವೆ. ಹೀಗಾಗಿ, ಗೂಗಲ್, ಮೈಕ್ರೋಸಾಫ್ಟ್, ಆಪಲ್ ಸೇರಿದಂತೆ ಜಗತ್ತಿನ ಪ್ರಸಿದ್ಧ ಕಂಪನಿಗಳು ಪೈಪೋಟಿಗೆ ಬಿದ್ದಂತೆ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿವೆ.

ಕಂಪನಿ ಕಾನೂನು ಏನು ಹೇಳುತ್ತೆ?: ಭಾರತದ 2013ರ ಕಂಪನಿ ಕಾಯ್ದೆ ಪ್ರಕಾರ ವಾರ್ಷಿಕ ಐದುನೂರು ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ನಿವ್ವಳ ಆದಾಯವಿರುವ ಅಥವಾ ವಾರ್ಷಿಕ ಒಂದು ಸಾವಿರ ಕೋಟಿ ಮತ್ತು ಅದಕ್ಕಿಂತ ಅಧಿಕ ವಹಿವಾಟು ನಡೆಸುವ ಅಥವಾ ವಾರ್ಷಿಕ ಐದು ಕೋಟಿ ಮತ್ತು ಅದಕ್ಕಿಂತ ಹೆಚ್ಚು ನಿವ್ವಳ ಲಾಭ ಗಳಿಸುವ ಪ್ರತಿಯೊಂದು ಕಂಪನಿ ತನ್ನ ಲಾಭಾಂಶದ ಕನಿಷ್ಠ ಶೇ. 2ರಷ್ಟನ್ನು ಸಾಮಾಜಿಕ ಕೆಲಸಗಳಿಗೆ (ನಿರ್ವಹಣಾ ಸಾಮಾಜಿಕ ಹೊಣೆಗಾರಿಕೆ-ಸಿಎಸ್​ಆರ್) ವಿನಿಯೋಗಿಸಬೇಕು. ಇದಕ್ಕೆ ತಪ್ಪಿದಲ್ಲಿ ಯಾವುದೇ ಕಂಪನಿ ಸರ್ಕಾರಕ್ಕೆ ಕಾರಣ ನೀಡಬೇಕಾಗುತ್ತದೆ. ಜತೆಗೆ 50 ಸಾವಿರದಿಂದ 50 ಲಕ್ಷದವರೆಗೆ ದಂಡ ಪಾವತಿಸಬೇಕಾದ ಸಂದರ್ಭವೂ ಎದುರಾಗುತ್ತದೆ. ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ಸ್ ಇದಕ್ಕೆ ನೇರ ಹೊಣೆ. ಸಾಮಾಜಿಕ ಹೊಣೆಗಾರಿಕೆಯ ಉದ್ದೇಶಪೂರ್ವಕ ನಿರ್ಲಕ್ಷ್ಯ್ಕೆ ಅವರು ಕೂಡ ದಂಡ ತೆರಬೇಕಾಗುತ್ತದೆ. ಈ ಕಾಯ್ದೆ 2014ರ ಏಪ್ರಿಲ್ 1ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಧಾರ್ವಿುಕ ದೇಣಿಗೆ ಸಿಎಸ್​ಆರ್ ವ್ಯಾಪ್ತಿಯೊಳಗೆ ಬರುವುದಿಲ್ಲ. ಅಂಕಿಅಂಶಗಳ ಪ್ರಕಾರ ಈ ಕಾಯ್ದೆ ಜಾರಿ ಬಳಿಕ ಭಾರತದಲ್ಲಿ 2015-16ರಲ್ಲಿ 5097 ಕಂಪನಿಗಳು ಸಿಎಸ್​ಆರ್​ಗಾಗಿ 9822 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದರೆ, 2014-15ರಲ್ಲಿ 7334 ಕಂಪನಿಗಳು 8803 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದ್ದವು. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಏರುತ್ತಿರುವುದು ಸಂತೋಷದ ಸಂಗತಿ.

ಗೊಂದಲಗಳೂ ಇವೆ!: ಹೌದು. ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ವಿಪುಲ ಅವಕಾಶಗಳಿದ್ದರೂ ಅದು ನಿರೀಕ್ಷಿತ ರೀತಿಯಲ್ಲಿ ಯಶಸ್ಸು ಕಾಣುತ್ತಿಲ್ಲ. ನಿಮಗೆ ಗೊತ್ತಿರಲಿ, ಯಾವುದೇ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ಹೀಗೆಯೇ ಇರಬೇಕು ಎಂದು ಯಾವ ಕಾನೂನಿನಲ್ಲೂ ಉಲ್ಲೇಖಿಸಿಲ್ಲ. ಪುಸ್ತಕಗಳಲ್ಲೂ ಬರೆದಿಲ್ಲ. ಹಾಗಾಗಿ ಸಾಮಾಜಿಕ ಹೊಣೆಗಾರಿಕೆಯ ವಿಷಯ ಬಂದಾಗ ನಿರ್ಧಾರ ತೆಗೆದುಕೊಳ್ಳುವುದು ಕಂಪನಿಗಳಿಗೆ ಸ್ವಲ್ಪ ಕಷ್ಟವಾಗುತ್ತದೆ. ವ್ಯವಹಾರ ಕ್ಷೇತ್ರವು ಸಮಾಜದ ಜತೆ ಸಂಬಂಧ ಹೊಂದಿದ್ದರೂ ಅಲ್ಲಿ ಮೂಲ ವ್ಯವಹಾರಕ್ಕೆ ಸಂಬಂಧಪಡದ ಕೆಲಸವೊಂದನ್ನು ನಿರ್ವಹಿಸಬೇಕಾಗಿ ಬಂದಾಗ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಒಂದು ನಿರ್ದಿಷ್ಟ ಸಾಮಾಜಿಕ ಹೊಣೆಗಾರಿಕೆಗೆ ಸಂಬಂಧಿಸಿದಂತೆ, ತಿಳಿವಳಿಕೆ, ತರಬೇತಿ, ಅವಶ್ಯಕ ಅಂಕಿ ಅಂಶಗಳು ಮತ್ತು ಮಾಹಿತಿಯ ಕೊರತೆ ಹೀಗೆ ಹಲವು ಬಗೆಯ ವಿಚಾರಗಳು ಇರುತ್ತವೆ. ಸಾಮಾಜಿಕ ಹೊಣೆಗಾರಿಕೆಯಿಂದಾಗಿ ಸ್ವಲ್ಪಮಟ್ಟಿಗೆ ಹೂಡಿಕೆದಾರರ ಲಾಭಾಂಶ ಕಡಿಮೆಯಾಗುವುದರಿಂದ ಅವರ ವಿರೋಧವನ್ನು ಕೂಡ ಎದುರಿಸಬೇಕಾಗಿ ಬರಬಹುದು. ‘ಕೆಲವರು ಸಮಾಜದ ಉದ್ಧಾರ ಸರ್ಕಾರಕ್ಕೆ ಸಂಬಂಧಿಸಿದ್ದು, ಅದು ಕಂಪನಿಗಳದ್ದಲ್ಲ. ಅದೇನಿದ್ದರೂ ಲಾಭ ಮಾಡಬೇಕು ಅಷ್ಟೆ’ ಎನ್ನುವಂತಹ ವಾದವನ್ನು ಮುಂದಿಡುತ್ತಾರೆ.

ಏನಿದು ಸಾಮಾಜಿಕ ಹೊಣೆ?

ವ್ಯವಹಾರದ ಸೀಮಿತ ನೆಲೆಯಲ್ಲಿ ಸಮಾಜದ ಅಗತ್ಯಗಳಿಗೆ ಸ್ಪಂದಿಸಲು ಪ್ರತಿಯೊಂದು ಸಂಸ್ಥೆಯೂ ಕೆಲವು ಕರ್ತವ್ಯಗಳನ್ನು ನಿರ್ವಹಿಸ ಬೇಕಾಗುತ್ತದೆ. ಹಾಗಾಗಿ ಅದು ಸಮಾಜದ ನೀತಿನಿಯಮ ಗಳನ್ನು ಗೌರವಿಸ ಬೇಕಾಗುತ್ತದೆ. ಲಾಭ ಗಳಿಸುವ ಉದ್ದೇಶದ ಜತೆಯಲ್ಲೇ ತನ್ನ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಂದು ಸಂಸ್ಥೆಯದ್ದು ಕೂಡ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಒಂದು ವ್ಯವಹಾರದ ಸಾಮಾಜಿಕ ಹೊಣೆಗಾರಿಕೆಯೆಂದರೆ, ಅದು ತನ್ನ ವೈಯಕ್ತಿಕ ಹಿತಾಸಕ್ತಿಯ ಜತೆಯಲ್ಲಿ ಸಮಾಜ ಮತ್ತು ಪರಿಸರದ ಹಿತವನ್ನೂ ಕಾಪಾಡುವುದಾಗಿದೆ. ಸಾಮಾನ್ಯವಾಗಿ ಯಾವುದೇ ಕಂಪನಿಗೆ ಸಾಮಾಜಿಕ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಮುಖ್ಯವಾಗಿ ಎರಡು ಅಜೆಂಡಾಗಳಿರುತ್ತವೆ. ಒಂದು ತನ್ನ ಸಂಸ್ಥೆಯ ಒಳಗಿನ ಪ್ರತಿ ಹಂತದ ನೌಕರರ ಅಗತ್ಯಗಳನ್ನು ಮನಗಂಡು ಅವುಗಳಿಗೆ ಸ್ಪಂದಿಸಿ, ಉತ್ತಮವಾದ ಕೆಲಸದ ವಾತಾವರಣ ರೂಪಿಸಿ ಆ ಮೂಲಕ ಒಟ್ಟಾರೆ ಸಂಸ್ಥೆಯ ದಕ್ಷತೆಯನ್ನು ಗುಣಾತ್ಮಕ ಮತ್ತು ಪರಿಮಾಣಾತ್ಮಕವಾಗಿ ಅಭಿವೃದ್ಧಿಪಡಿಸುವುದು. ಇನ್ನೊಂದು, ಸುತ್ತಲಿನ ಬಾಹ್ಯ ಸಮಾಜದ ನಿರೀಕ್ಷೆಗಳಿಗೆ ಮತ್ತು ಆಶಯಗಳಿಗೆ ರಚನಾತ್ಮಕವಾಗಿ, ಧನಾತ್ಮಕವಾಗಿ ಸ್ಪಂದಿಸುವುದು. ಇಲ್ಲಿ ಮೊದಲನೇ ಅಜೆಂಡಾದ ಪ್ರಮುಖ ಉದ್ದೇಶ ಲಾಭ ಗಳಿಸುವುದು. ಎರಡನೇ ಅಜೆಂಡಾ, ತನ್ನ ಸಂಸ್ಥೆಯ ಉತ್ಪನ್ನಗಳಿಗೆ, ಸೇವೆಗಳಿಗೆ ಬೇಡಿಕೆ ಹಾಗೂ ಮಾರುಕಟ್ಟೆ ಸೃಷ್ಟಿಸುವ ಜತೆಜತೆಗೆ, ಗ್ರಾಹಕರೂ ಸೇರಿದಂತೆ ಸಮಾಜದ ಇತರ ವರ್ಗಗಳ ಜನರಲ್ಲಿ ಸಂಸ್ಥೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಿ ಹೆಸರಿನ ಮೌಲ್ಯ ಬೆಳೆಸುವುದೂ ಆಗಿದೆ.

Leave a Reply

Your email address will not be published. Required fields are marked *

Back To Top