ಕೆಲಸಕ್ಕೆ ಸೇರಿದ ದಿನದಿಂದಲೇ ಹೂಡಿಕೆ ಆರಂಭಿಸಿ

| ಸಿ. ಎಸ್‌. ಸುಧೀರ್‌, ಸಿಇಒ, ಸಂಸ್ಥಾಪಕರು ಇಂಡಿಯನ್​ವುನಿ.ಕಾಂ

ವೆಬ್​ಸೈಟ್: www.indianmoney.com

# ನಾನು 32 ವರ್ಷದ ಕೇಂದ್ರ ಸರ್ಕಾರಿ ಉದ್ಯೋಗಿ. ಈಗಾಗಲೇ ಪೋಸ್ಟಲ್ ಲೈಫ್ ಇನ್ಶೂರೆನ್ಸ್, ಎಲ್​ಐಸಿ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣ ಉಳಿತಾಯ ಮಾಡಿದ್ದೇನೆ. ಸ್ವಂತ ಮನೆ ಕೊಳ್ಳುವ ಆಲೋಚನೆ ಇದೆ. ವೇತನವೇ ಆದಾಯದ ಮೂಲ. ಸೂಕ್ತ ಸಲಹೆ ನೀಡಿ.

| ಶೈಲಜಾ ಗಂಗಾವತಿ

ನೀವು ಹೂಡಿಕೆ ಬಗ್ಗೆ ಮಾಹಿತಿ ಕೇಳಬೇಕಾದರೆ ಮೊದಲಿಗೆ ಆದಾಯ ಎಷ್ಟು, ಉಳಿತಾಯ ಎಷ್ಟು ಮಾಡಬಲ್ಲಿರಿ ಎಂದು ತಿಳಿಸಬೇಕು. ಈಗಾಗಲೇ ಮಾಡಿರುವ ಹೂಡಿಕೆಗಳು ಉತ್ತಮವಾಗಿವೆ. ಕೆಲಸಕ್ಕೆ ಸೇರಿದ ಕೆಲವರ್ಷಗಳಲ್ಲೇ ಇಷ್ಟು ವೈವಿಧ್ಯಮಯ ಉಳಿತಾಯ ಮಾಡಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ಸಾಧ್ಯವಾದರೆ ಪಿಪಿಎಫ್​ನಲ್ಲಿ ಹೂಡಿಕೆ ಮಾಡಿ. ಇದರ ಹೂಡಿಕೆ ಅವಧಿ 15 ವರ್ಷಗಳಾಗಿರುವುದರಿಂದ ತೆರಿಗೆ ಉಳಿಸುವ ಜತೆಗೆ ಹೆಚ್ಚು ಹಣ ಕ್ರೋಡೀಕರಿಸಲು ಸಾಧ್ಯವಾಗುತ್ತದೆ. ಪಿಪಿಎಫ್​ನಿಂದ ಬರುವ ಬಡ್ಡಿ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆ. ವಾರ್ಷಿಕ ಕನಿಷ್ಠ 500 ರೂ.ನಿಂದ ಹಿಡಿದು ಗರಿಷ್ಠ 1.50 ಲಕ್ಷ ರೂ.ಗಳ ವರೆಗೆ ಪಿಪಿಎಫ್​ನಲ್ಲಿ ಹೂಡಿಕೆ ಮಾಡಬಹುದು. ಕಡಿಮೆ ಪ್ರೀಮಿಯಂಗೆ ಹೆಚ್ಚು ಭದ್ರತೆ ಒದಗಿಸುವ ಟಮ್ರ್ ಇನ್ಶೂರೆನ್ಸ್ ಪ್ಲಾನ್​ನಲ್ಲಿ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು. ವೇತನವೊಂದೇ ಆದಾಯದ ಮೂಲ ಎಂದು ತಿಳಿಸಿರುವ ಕಾರಣ ಟಮ್ರ್ ಲೈಫ್ ಇನ್ಶೂರೆನ್ಸ್ ಪಡೆದುಕೊಳ್ಳುವುದು ಉತ್ತಮ ಎನ್ನುವುದು ನನ್ನ ಸಲಹೆ. ವರ್ಷಕ್ಕೆ 12ರಿಂದ 14 ಸಾವಿರ ರೂ. ಪ್ರೀಮಿಯಂ ಕಟ್ಟಿದರೆ ನಿಮಗೆ ಸುಮಾರು 1 ಕೋಟಿ ಮೊತ್ತದಷ್ಟು ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ. ಕುಟುಂಬದವರಿಗೆ ಹೆಲ್ತ್ ಇನ್ಶೂರೆನ್ಸ್ ಇಲ್ಲದಿದ್ದಲ್ಲಿ ಹೆಲ್ತ್ ಪಾಲಿಸಿ ಮಾಡಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ಗೃಹ ಸಾಲ ಮಾಡುವ ಬಗ್ಗೆ ಯೋಚಿಸಿ.

# 50 ವರ್ಷ ವಯಸ್ಸಿನ ನನಗೆ ಇಬ್ಬರು ಮಕ್ಕಳಿದ್ದಾರೆ. ಆಸ್ತಿಯನ್ನು ಆಧಾರವನ್ನಾಗಿಸಿ ಪಡೆದ ಸಾಲದ ಹಣದಲ್ಲಿ ಮಗನ ಇಂಜಿನಿಯರಿಂಗ್ ಶುಲ್ಕ ಕಟ್ಟಿದ್ದೇನೆ. ಶಿಕ್ಷಣ ಸಾಲಕ್ಕೆ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಇದೆ ಎಂದು ಕೇಳಿದ್ದೇನೆ. ಶಿಕ್ಷಣ ಸಾಲ ಪಡೆಯದಿದ್ದರೂ ತೆರಿಗೆ ವಿನಾಯಿತಿ ಪಡೆಯಬಹುದೇ?

| ಪರಶಿವಪ್ಪ ಚಾಮರಾಜನಗರ

ಬಹಳ ಉತ್ತಮ ಪ್ರಶ್ನೆ ಕೇಳಿದ್ದೀರಿ. ಮಗನ ಉನ್ನತ ವಿದ್ಯಾಭ್ಯಾಸಕ್ಕಾಗಿ ನೀವು ಮಾಡುತ್ತಿರುವ ಪ್ರಯತ್ನ ಸಫಲವಾಗಲಿ. ಶಿಕ್ಷಣ ಸಾಲಕ್ಕೆ ಸಿಗುವ ತೆರಿಗೆ ವಿನಾಯಿತಿಯ ಬಗ್ಗೆ ತಿಳಿಸಿಕೊಡುತ್ತೇನೆ. ನೀವು ಅಥವಾ ನಿಮ್ಮ ಪತ್ನಿ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದಲ್ಲಿ, ಕಾಲಂ 80 ಇ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಸಾಲವನ್ನು ಮಗನ ಹೆಸರಿನಲ್ಲಿ ಪಡೆದಿದ್ದಲ್ಲಿ ಅವರೇ ವಿನಾಯಿತಿಗಾಗಿ ಕ್ಲೇಮ್ ಅರ್ಜಿ ಸಲ್ಲಿಸಬೇಕು. ಆಯಾ ಆರ್ಥಿಕ ವರ್ಷ ಪಾವತಿಸಿದ ಇಎಂಐನ ಒಟ್ಟಾರೆ ಬಡ್ಡಿಯ ಭಾಗಕ್ಕಾಗಿ ಈ ವಿನಾಯಿತಿ ಲಭ್ಯ. ನೀವು ಪಡೆದಿರುವ ಸಾಲ ಶಿಕ್ಷಣ ಸಾಲವಲ್ಲದೆ ಇದ್ದರೂ 80 ಇ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹರಾಗುವಿರಿ. ಆದರೆ, ಅದನ್ನು ಪಡೆಯಲು ನೀವು ಮಾಡಿರುವ ಮನೆ ಮೇಲಿನ ಸಾಲವನ್ನು ಮಗನ ವಿದ್ಯಾಭ್ಯಾಸಕ್ಕೇ ಬಳಸಿದ್ದೀರಿ ಎನ್ನುವುದನ್ನು ಸಾಬೀತುಪಡಿಸಬೇಕು. ಅದಕ್ಕಾಗಿ ಬಿಲ್ ಸೇರಿದಂತೆ ಎಲ್ಲ ಪೂರಕ ದಾಖಲೆಗಳನ್ನು ಒದಗಿಸಿ ತೆರಿಗೆ ಅನುಕೂಲ ಪಡೆದುಕೊಳ್ಳಬಹುದು.

# ನಾನು ಸರ್ಕಾರಿ ನೌಕರನಾಗಿದ್ದು, ಮಾಸಿಕ 41 ಸಾವಿರ ರೂ. ವೇತನ ಪಡೆಯುತ್ತಿದ್ದೇನೆ. ಮನೆ ಕಟ್ಟಲು ಬ್ಯಾಂಕ್​ನವರು ಎಷ್ಟು ಸಾಲ ನೀಡುತ್ತಾರೆ ತಿಳಿಸಿ.

| ಪ್ರಾಣೇಶ್ ಕುಲಕರ್ಣಿ ಬೀದರ್

ಬ್ಯಾಂಕ್​ಗಳು ಗೃಹ ಸಾಲ ನೀಡುವಾಗ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಸಾಲ ಪಡೆಯುವ ವ್ಯಕ್ತಿಯ ಒಟ್ಟು ಮಾಸಿಕ ವೇತನ, ಸಾಲ ಮರುಪಾವತಿ ಸಾಮರ್ಥ್ಯ, ಅರ್ಜಿದಾರರ ವಯಸ್ಸು, ಆರ್ಥಿಕ ಸ್ಥಿತಿಗತಿ, ಈ ಹಿಂದೆ ಸಾಲ ಪಡೆದಿರುವ ಇತಿಹಾಸ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸುತ್ತವೆ. ಇದಲ್ಲದೆ, ಈಗಾಗಲೇ ಮಾಡಿರುವ ಸಾಲಗಳ ಸ್ಥಿತಿಗತಿಯನ್ನು ಸಹ ಗಮನಿಸುತ್ತವೆ. ನಿಮ್ಮ ತಿಂಗಳ ಒಟ್ಟು ಆದಾಯ 41 ಸಾವಿರ ರೂ. ಎಂದು ತಿಳಿಸಿದ್ದೀರಿ. ಅದರಂತೆ ಹೋದರೆ ನಿಮಗೆ 20 ವರ್ಷಗಳವರೆಗೆ ಶೇ. 8.4ರ ಬಡ್ಡಿದರದಂತೆ 21,41,602 ರೂ. ಸಾಲ ಸಿಗಬಹುದು. ಇಷ್ಟು ಮೊತ್ತದ ಸಾಲ ಸಿಕ್ಕರೆ ಮಾಸಿಕವಾಗಿ ನೀವು 18,450 ರೂ.ಗಳನ್ನು ಸಾಲ ಮರುಪಾವತಿಗೆ ಮೀಸಲಿಡಬೇಕಾಗುತ್ತದೆ. 20 ವರ್ಷಗಳ ಅವಧಿಯ ಸಾಲಕ್ಕೆ ಅಸಲು ಹೊರತುಪಡಿಸಿ ಸುಮಾರು 22,86,398 ರೂ.ಗಳನ್ನು ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ.

# ಬೆಂಗಳೂರಿನಲ್ಲಿರುವ ಖಾಸಗಿ ಅಪಾರ್ಟ್​ವೆುಂಟ್​ವೊಂದರ 9ನೇ ಮಹಡಿಯಲ್ಲಿ ಫ್ಲಾಟ್ ಖರೀದಿಸಿದ್ದೇನೆ. ಮನೆ ವಿಮೆ (ಹೋಮ್ ಇನ್ಶೂರೆನ್ಸ್) ಮಾಡಿಸುವ ಬಗ್ಗೆ ಚಿಂತಿಸುತ್ತಿದ್ದೇನೆ. ನಮ್ಮದು 3 ಬಿಎಚ್​ಕೆ ಫ್ಲಾಟ್ ಆಗಿದ್ದು, ಇದಕ್ಕೆ ವಿಮೆ ಸಿಗುವುದೇ? ಯಾವುದೇ ರೀತಿಯ ಪ್ರಕೃತಿ ವಿಕೋಪ ಎದುರಾದಾಗ ಮನೆ ವಿಮೆ ಅನ್ವಯಿಸುವುದೇ?

| ಕಿರಣ್ ಬೆಂಗಳೂರು

ಮನೆ ವಿಮೆಗಳನ್ನು ಪ್ರಮುಖವಾಗಿ ಎರಡು ಮಾದರಿಯಲ್ಲಿ ವರ್ಗೀಕರಿಸಬಹುದು. ಅಗ್ನಿ ಆಕಸ್ಮಿಕ ಮತ್ತು ಇನ್ನಿತರ ಆಕಸ್ಮಿಕ ಅವಘಡಗಳಿಗೆ ಕಟ್ಟಡ ತುತ್ತಾದಾಗ ಅದರಿಂದ ರಕ್ಷಣೆ ಪಡೆಯಲು ಸ್ಟ್ಯಾಂಡರ್ಡ್ ಫೈರ್ ಆಂಡ್ ಪೆರಿಲ್ ಇನ್ಶೂರೆನ್ಸ್ ಮಾಡಿಸುತ್ತಾರೆ. ಈ ಇನ್ಶೂರೆನ್ಸ್​ನಲ್ಲಿ ಹಾನಿಗೊಳಗಾಗಿರುವ ಕಟ್ಟಡದ ಭಾಗವನ್ನು ಸರಿಪಡಿಸಲು ವಿಮೆ ಹಣ ನೀಡಲಾಗುತ್ತದೆ. ಒಂದೊಮ್ಮೆ ಕಟ್ಟಡ ಸಂಪೂರ್ಣ ಹಾನಿಯಾಗಿದ್ದರೆ ಅದಕ್ಕೂ ಕೂಡ ಕವರೇಜ್ ಸಿಗುತ್ತದೆ. ಈ ರೀತಿಯ ಮನೆ ವಿಮೆ ಮಾಡಿಸುವಾಗ ಭೂಕಂಪನದಿಂದ ಉಂಟಾಗುವ ಹಾನಿಗೂ ನೀವು ಪರಿಹಾರ ಪಡೆದುಕೊಳ್ಳುವಂತೆ ಇನ್ಶೂರೆನ್ಸ್ ಕಂಪನಿಯನ್ನು ಕೇಳಿಕೊಳ್ಳಬಹುದು. ಆಗ ಕಂಪನಿಯವರು ನಿಮ್ಮ ಫ್ಲಾಟ್ ಯಾವಾಗ ನಿರ್ವಣವಾಗಿದೆ? ಅದರ ಮಾರುಕಟ್ಟೆ ನಿರ್ಮಾಣ ವೆಚ್ಚ ಎಷ್ಟು ಹೀಗೆ ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ನಿಮ್ಮ ಮನೆ 1500 ಚದರಡಿ ವಿಸ್ತೀರ್ಣ ಹೊಂದಿದ್ದು, ಪ್ರತಿ ಚದರಡಿ ಮನೆಯ ಪುನರ್ ನಿರ್ವಣಕ್ಕೆ 3500 ರೂ. ವೆಚ್ಚವಾಗುತ್ತದೆ ಎಂದಿಟ್ಟುಕೊಳ್ಳಿ. ನಿಮ್ಮ ಮನೆ ವಿಮೆಯ ಮೌಲ್ಯ 60 ಲಕ್ಷ ಎಂದು ಅಂದಾಜು ಮಾಡಿಕೊಳ್ಳಿ. ಇಂತಹ ಮನೆ ವಿಮೆಯ ಬೆಲೆ 3000ದಿಂದ 3500 ರೂ.ವರೆಗಿರುತ್ತದೆ.

ಮತ್ತೊಂದು ಆಯ್ಕೆ ಎಂದರೆ ಆಲ್ ರಿಸ್ಕ್ ಪಾಲಿಸಿ. ಈ ಮನೆ ವಿಮೆಯಲ್ಲಿ ನಿಮ್ಮ ಫ್ಲಾಟ್​ಗೆ ಎಲ್ಲ ರೀತಿಯ ಕವರೇಜ್ ಇರುತ್ತದೆ. ಇಲ್ಲಿ ಇನ್ಶೂರೆನ್ಸ್ ಕಂಪನಿಯವರು ನಿಮ್ಮ ಫ್ಲಾಟ್​ನ ನೋಂದಾಯಿತ ಮೌಲ್ಯವನ್ನು ವಿಮಾ ಪರಿಹಾರ ಮೊತ್ತವನ್ನಾಗಿ ಅಂದಾಜು ಮಾಡಿರುತ್ತಾರೆ. ನಿಮಗೆ ಯಾವುದೇ ರೀತಿಯ ನಷ್ಟ ಉಂಟಾದಲ್ಲಿ, ಅದನ್ನು ಇನ್ಶೂರೆನ್ಸ್ ಕಂಪನಿಗೆ ಸರಂಡರ್ ಮಾಡಿ ನೀವು ಸಂಪೂರ್ಣ ಪರಿಹಾರ ಪಡೆಯಬಹುದು. ಈ ರೀತಿಯ ವಿಮೆಯಲ್ಲಿ ಫ್ಲಾಟ್ ಇರುವ ಜಾಗದ ಭೂಮಿಯ ಮೌಲ್ಯವೂ ಒಳಗೊಂಡಿರುತ್ತದೆ. ನಿಮ್ಮ ಮನೆ 1500 ಚದರಡಿ ವಿಸ್ತೀರ್ಣ ಹೊಂದಿದ್ದು, ಸದ್ಯದ ಮಾರುಕಟ್ಟೆ ಮೌಲ್ಯ ಪ್ರತಿ ಚದರಡಿಗೆ 10,000 ರೂಪಾಯಿ ಇದೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಮನೆಯ ಇನ್ಶೂರೆನ್ಸ್ ಕವರೇಜ್ ಮೊತ್ತ 1.5 ಕೋಟಿ ರೂಪಾಯಿ ಆಗಿರುತ್ತದೆ. ಇಂತಹ ಮನೆ ವಿಮೆಯ ಬೆಲೆ 7,500ರಿಂದ 8000 ರೂ. ವರೆಗಿರುತ್ತದೆ. ಆರ್ಥಿಕ ಪರಿಸ್ಥಿತಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ನಿಮಗೆ ಸರಿಹೊಂದುವ ವಿಮೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ನೀವೂ ಪ್ರಶ್ನೆ ಕೇಳಬಹುದು

ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ.

ಪ್ರಶ್ನೆ ಕಳಿಸಬೇಕಾದ ಇಮೇಲ್: [email protected]