Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಮೈಕಲ್ ಜಾಕ್ಸನ್ ಮ್ಯಾಜಿಕ್ ಸ್ಟೆಪ್ ರಹಸ್ಯ ಬಯಲು

Wednesday, 30.05.2018, 3:02 AM       No Comments

| ಅನುಷಾ ಶೆಟ್ಟಿ

ಮೈಕಲ್ ಜಾಕ್ಸನ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಮೈಯಲ್ಲಿ ಮೂಳೆಗಳೇ ಇಲ್ಲವೇನೋ ಎಂಬಂತೆ ಹೇಗೆ ಬೇಕೋ ಹಾಗೆ ದೇಹವನ್ನು ಬಾಗಿಸುವ ಆತನ ಡಾನ್ಸ್​ಗೆ ಇಡೀ ವಿಶ್ವವೇ ತಲೆದೂಗಿತ್ತು. ಈ ಸ್ಪ್ರಿಂಗ್ ಮ್ಯಾನ್ ಇಂದು ಭೂಮಿ ಮೇಲೆ ಇಲ್ಲದೇ ಇದ್ದರೂ ಈತನ ಡಾನ್ಸ್ ಈಗಲೂ ನೃತ್ಯಾಸಕ್ತರನ್ನು ಮೋಡಿ ಮಾಡುತ್ತಲೇ ಇದೆ. ಇನ್ನು ಮೈಕಲ್ ಜಾಕ್ಸನ್ ಥರಾ ಡಾನ್ಸ್ ಮಾಡಬೇಕು ಎಂದು ಮೈ ಬಳುಕಿಸಲು ಹೋಗಿ ಕಾಲು, ಸೊಂಟ ಉಳುಕಿಸಿಕೊಂಡ ನೃತ್ಯಗಾರರ ಸಂಖ್ಯೆ ಕೂಡ ಕಡಿಮೆಯೇನಿಲ್ಲ. ಅದೇನೇ ಇರಲಿ, ಮೈಕಲ್ ಜಾಕ್ಸನ್​ನ ಕೆಲವೊಂದು ಡಾನ್ಸ್ ಸ್ಟೆಪ್​ಗಳನ್ನು ಪುನರಾವರ್ತಿಸಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಈ ಕುರಿತು ಸಾಕಷ್ಟು ಚರ್ಚೆಗಳೂ ನಡೆದಿವೆ. ಅದರಲ್ಲೂ 1987ರಲ್ಲಿ ಬಿಡುಗಡೆಯಾದ ಮ್ಯೂಸಿಕ್ ವಿಡಿಯೋದಲ್ಲಿನ ಸಿಗ್ನೇಚರ್ ಡಾನ್ಸ್​ನಲ್ಲಿನ ಕೆಲವು ಸ್ಟೆಪ್​ಗಳು ಸಾಕಷ್ಟು ಕುತೂಹಲ ಮೂಡಿಸುತ್ತವೆ. ಇವುಗಳಲ್ಲಿ ಕೆಲವು ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಮಾಡಲಾಗಿದೆ. ಮಾನವನಿಂದ ಈ ರೀತಿಯ ಡಾನ್ಸ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಇವು ಹುಟ್ಟುಹಾಕಿದ್ದವು. ಜತೆಗೆ ವೈದ್ಯಕೀಯ ರಂಗಕ್ಕೂ ಇದು ಬಹುದೊಡ್ಡ ಸವಾಲಾಗಿತ್ತು. ಆದರೀಗ 31 ವರ್ಷಗಳ ಹಳೆಯ ಈ ಡಾನ್ಸ್​ನ ರಹಸ್ಯವನ್ನು ಭಾರತದ ಮೂವರು ನರರೋಗ ತಜ್ಞರು ಭೇದಿಸಿದ್ದಾರೆ. ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ನರರೋಗ ತಜ್ಞರಾದ ನಿಶಾಂತ್ ಎಸ್. ಯಾಗ್ನಿಕ್, ಮಂಜುಳ್ ತ್ರಿಪಾಠಿ ಹಾಗೂ ಸಂದೀಪ್ ಮೊಹಿಂದರ್ ಅವರೇ ಜಾಕ್ಸನ್ ಸ್ಟೆಪ್ಸ್​ನ ಹಿಂದಿನ ಮರ್ಮ ಬಯಲಿಗೆಳೆದವರು.

1980 ಹಾಗೂ 90ರ ದಶಕದ ಆರಂಭದಲ್ಲಿ ಎಂಟಿವಿಯಲ್ಲಿ ಒಂದೇ ಮಾದರಿಯ ಮ್ಯೂಸಿಕ್ ವಿಡಿಯೋಗಳು ಪ್ರಸಾರವಾಗುತ್ತಿದ್ದವು. ಆದರೆ, ಆ ಸಮಯದಲ್ಲಿ ಪಾಪ್ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಮೈಕಲ್ ಜಾಕ್ಸನ್ ಹೊಸ ಟ್ರೆಂಡ್ ಹುಟ್ಟು ಹಾಕಿದರು. ಸಂಗೀತ ಮತ್ತು ನೃತ್ಯದ ಮಿಳಿತದ ಜತೆಗೆ ಅದಕ್ಕೊಂದು ನಿರೂಪಣೆ, ಅತ್ಯದ್ಭುತ ನೃತ್ಯ ಸಂಯೋಜನೆ ಹಾಗೂ ಸ್ಪೆಷಲ್ ಇಫೆಕ್ಟ್ ನೀಡುವ ಮೂಲಕ ಹೊಸ ವಿಧಾನಕ್ಕೆ ಮುನ್ನುಡಿ ಬರೆದರು. ಅವರು ಪ್ರದರ್ಶಿಸಿದ ಸ್ಟೆಪ್​ಗಳನ್ನು ಅನುಕರಿಸುವುದು ಅಸಾಧ್ಯ ಎಂಬ ಭಾವನೆ ಎಲ್ಲರಲ್ಲಿ ಮೂಡಿತು.

ಅಂದು ಮಾತ್ರವಲ್ಲ ಇಂದು ಕೂಡ ಜನರಲ್ಲಿ ಅದೇ ಭಾವನೆ ಮುಂದುವರಿದಿದೆ. ಇಂದಿಗೂ ಜಗತ್ತಿನಲ್ಲಿ ಮೈಕಲ್ ಜಾಕ್ಸನ್ ತರಹದ ಇನ್ನೊಬ್ಬ ಡಾನ್ಸರ್ ಹುಟ್ಟಿಲ್ಲ್ಲೆಂದೇ ಜನ ಹೇಳುತ್ತಾರೆ. ಈ ಹೆಗ್ಗಳಿಕೆಗೆ ಕಾರಣ – ಜಾಕ್ಸನ್​ನ ವಿಶಿಷ್ಟ ನೃತ್ಯ ಭಂಗಿಗಳು. ವಿಡಿಯೋದಲ್ಲಿರುವ ಒಂದು ಸ್ಟೆಪ್​ನಲ್ಲಿ ಜಾಕ್ಸನ್​ನ ಶೂಗಳು ನೆಲದ ಮೇಲೆ ಭದ್ರವಾಗಿದ್ದು, ದೇಹ ಮಾತ್ರ 45 ಡಿಗ್ರಿಯಷ್ಟು ಬಾಗಿದ ಸ್ಥಿತಿಯಲ್ಲಿವೆ. ಅಂದರೆ ಇಲ್ಲಿ ಅವರು ಕಾಲುಗಳನ್ನು ಎಲ್ಲಿಯೂ ಬಾಗಿಸದೆ ದೇಹವನ್ನು ಕಬ್ಬಿಣದ ರಾಡ್​ನಂತೆ ನೇರವಾಗಿ 45 ಡಿಗ್ರಿಯಷ್ಟು ಬಾಗಿಸಿದ್ದಾರೆ. ಮಾನವನ ಶರೀರವನ್ನು ಈ ರೀತಿ ಬಾಗಿಸಲು ಸಾಧ್ಯವೆ? ಸಾಧ್ಯವಿಲ್ಲ ಎಂದಾದರೆ, ಮೈಕಲ್ ಜಾಕ್ಸನ್​ಗೆ ಇದು ಹೇಗೆ ಸಾಧ್ಯವಾಯಿತು? ಮ್ಯಾಜಿಕ್​ನಿಂದಲೇ ಇಲ್ಲವೆ ನೃತ್ಯಪ್ರತಿಭೆಯಿಂದಲೇ? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೂವರೂ ನರರೋಗ ತಜ್ಞರು ಅಧ್ಯಯನ ಪ್ರಾರಂಭಿಸಿದರು. ಈ ಪೈಕಿ ಡಾ. ಯಾಗ್ನಿಕ್ ಅವರು ಮೊಟ್ಟ ಮೊದಲನೆಯದಾಗಿ ಪಾದ ಎಷ್ಟು ಪ್ರಭಾವಶಾಲಿ ಎಂಬುದನ್ನು ಮನದಟ್ಟು ಮಾಡಲು ಬೆನ್ನುಹುರಿ ಕಾರ್ಯವಿಧಾನದ ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕಿದರು. ಅದರ ಪ್ರಕಾರ ಬಲಶಾಲಿಯಾದ ಒಬ್ಬ ಡಾನ್ಸರ್ ತನ್ನ ಪಾದವನ್ನು ನೆಲದ ಮೇಲೆ ಪೂರ್ಣ ಪ್ರಮಾಣದಲ್ಲಿ ಊರಿ, ದೇಹವನ್ನು ಹೆಚ್ಚೆಂದರೆ 25-30 ಡಿಗ್ರಿಯಷ್ಟು ಮುಂದಕ್ಕೆ ಬಾಗಿಸಲು ಸಾಧ್ಯ. ಆದರೆ, ಮೈಕಲ್ ಜಾಕ್ಸನ್ ಮಾತ್ರ ತನ್ನ ದೇಹವನ್ನು 45 ಡಿಗ್ರಿಯಷ್ಟು ಮುಂದಕ್ಕೆ ಬಾಗಿಸುತ್ತಿದ್ದರು. ಹೀಗಾಗಿ ಜಾಕ್ಸನ್ ಪ್ರತಿಭೆ, ಕೌಶಲ ಹಾಗೂ ಆತ ಬಳಸುತ್ತಿದ್ದ ಪೇಟೆಂಟ್ ಸಾಧನಗಳ ಮಾಹಿತಿ ಕಲೆ ಹಾಕಿ ವಿಶ್ಲೇಷಿಸಿದ ನರವಿಜ್ಞಾನಿಗಳಿಗೆ ಸತ್ಯದ ದರ್ಶನವಾಯಿತು. ಜಾಕ್ಸನ್​ನ ಅದ್ಭುತ ಸ್ಟೆಪ್​ಗಳ ಹಿಂದೆ ಶ್ರಮ, ಪ್ರತಿಭೆ ಹಾಗೂ ಕೌಶಲದ ಜತೆಗೆ, ಆತನ ವಿಶಿಷ್ಟ ಶೂಗಳು ಕೂಡ ಮಹತ್ವದ ಪಾತ್ರ ವಹಿಸಿದ್ದವು. ಈ ಶೂಗಳ ತಳಭಾಗದಲ್ಲಿ ಟಿ ಆಕಾರದಲ್ಲಿ ಹುಕ್ ಅಳವಡಿಸಲಾಗಿತ್ತು. ಇದರ ಸಹಾಯದಿಂದಲೇ ಜಾಕ್ಸನ್​ಗೆ ದೇಹವನ್ನು 45 ಡಿಗ್ರಿಯಷ್ಟು ಬಾಗಿಸಲು ಸಾಧ್ಯವಾಗಿದೆ ಎಂಬುದು ನರವಿಜ್ಞಾನಿಗಳ ವಾದ. ಹಾಗಂತ ಇವರು ಜಾಕ್ಸನ್ ಪ್ರತಿಭೆ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಆತ ಅತ್ಯುತ್ತಮ ಡಾನ್ಸರ್ ಎಂಬುದನ್ನು ಅವರು ಕೂಡ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಮೈಕಲ್ ಜಾಕ್ಸನ್ ಅತ್ಯದ್ಭುತ ಸ್ಟೆಪ್​ವೊಂದರ ರಹಸ್ಯವನ್ನು ಭಾರತೀಯ ವೈದ್ಯರು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ಬೆನ್ನು ಮುರಿದೀತು ಜೋಕೆ!

ಜಾಕ್ಸನ್ ಮಾಡಿದ ವಿಶಿಷ್ಟ ಸ್ಟೆಪ್ ಅನುಕರಿಸಲು ಹೋದ ಅನೇಕ ಡಾನ್ಸರ್​ಗಳು ಬೆನ್ನುಹುರಿಯ ತೊಂದರೆಗೆ ಒಳಗಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನರವಿಜ್ಞಾನಿಗಳು ಜಾಕ್ಸನ್​ನ ಈ ವಿಶೇಷ ಸ್ಟೆಪ್​ನ ಅಧ್ಯಯನ ಕೈಗೊಂಡಿದ್ದರು. ಜಾಕ್ಸನ್ ಬಳಸಿರುವ ವಿಶಿಷ್ಟ ಶೂ ಇಲ್ಲದೆ ಈ ಸ್ಟೆಪ್ಸ್ ಮಾಡಲು ಹೋದರೆ ಬೆನ್ನುಹುರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಡಾನ್ಸರ್​ಗಳಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ. ಇನ್ನು ಮುಂದೆ ಮೈಕಲ್ ಜಾಕ್ಸನ್ ಸ್ಟೆಪ್ಸ್ ಅನುಕರಿಸುವ ಮುನ್ನ ಸ್ವಲ್ಪ ಆಲೋಚಿಸಿ ಮುಂದುವರಿಯುವುದು ಒಳ್ಳೆಯದು.

Leave a Reply

Your email address will not be published. Required fields are marked *

Back To Top