ಸದಾ ಬೈಯುವ ಪಾಲಕರು!

| ಶಾಂತಾ ನಾಗರಾಜ್, ಆಪ್ತ ಸಲಹಾಗಾರ್ತಿ

ನಾನು 2ನೇ ಪಿಯುಸಿ ವಿದ್ಯಾರ್ಥಿನಿ. ಬಾಲ್ಯದಿಂದಲೂ ಹಾಸ್ಟೆಲ್​ನಲ್ಲಿ ಓದುತ್ತಿದ್ದವಳು, ಕಾಲೇಜಿಗೆ ಬಂದಮೇಲೆ ಅಪ್ಪ ಅಮ್ಮನ ಜತೆಗೆ ಇದ್ದೇನೆ. ನನಗೆ ಒಬ್ಬ ತಮ್ಮ ಮತ್ತು ಒಬ್ಬ ತಂಗಿ ಇದ್ದಾರೆ. ಯಾಕೋ ಗೊತ್ತಿಲ್ಲ ಮೇಡಂ, ನಮ್ಮ ಮನೆಯಲ್ಲಿ ನನ್ನ ಕಂಡರೆ ಯಾರಿಗೂ ಆಗುವುದಿಲ್ಲ. ತಾಯಿಯಂತೂ ತುಂಬ ಕೆಟ್ಟಮಾತುಗಳಿಂದ ಬೈಯುತ್ತಾಳೆ. ಆ ಮಾತುಗಳನ್ನು ಬರೆಯಲೂ ನನಗೆ ಹೇಸಿಗೆಯೆನಿಸುತ್ತದೆ. ತಂಗಿಯೂ ಹಾಗೇ ಆಡುತ್ತಾಳೆ. ನಮ್ಮ ಮನೆಯಲ್ಲಿ ಎಲ್ಲದಕ್ಕೂ ತುಂಬ ಕಟ್ಟುನಿಟ್ಟು. ಅವರು ಹೇಳಿದ ಬಟ್ಟೆಯನ್ನೇ ಹಾಕಿಕೊಳ್ಳಬೇಕು, ಕಾಲೇಜು ಮುಗಿಯುತ್ತಲೇ ಮನೆಗೆ ಬಂದುಬಿಡಬೇಕು, ಯಾವ ಫ್ರೆಂಡ್ ಮತ್ತು ಅಕ್ಕಪಕ್ಕದವರ ಜತೆಗೂ ಮಾತಾಡುವಂತಿಲ್ಲ. ಅನಗತ್ಯವಾಗಿ ಹೊರಗೆ ಹೋಗುವಂತಿಲ್ಲ, ಮನೆಯಲ್ಲಿ ಎಲ್ಲ ಕೆಲಸ ಮುಗಿಸಿ ಕಾಲೇಜಿಗೆ ಹೋಗಬೇಕು. ನನಗಂತೂ ತಲೆ ಚಿಟ್ಟುಹಿಡಿಯುವ ಹಾಗಾಗುತ್ತದೆ. ಸಾಯಬೇಕು ಎನಿಸುತ್ತದೆ. ಭಯವೂ ಆಗುತ್ತದೆ. ಇದನ್ನು ನಿವಾರಿಸಲು ನಾನು ಸದಾ ನನಗೆ ಇಷ್ಟವಾದವರೊಡನೆ ಮನಸ್ಸಿನಲ್ಲೇ ಮಾತಾಡುತ್ತಿರುವಂತೆ ಕಲ್ಪಿಸಿಕೊಳ್ಳುತ್ತೇನೆ. ನನ್ನಷ್ಟಕ್ಕೆ ನಾನೇ ಮಾತಾಡಿಕೊಳ್ಳುತ್ತೇನೆ. ಯಾರೋ ನನ್ನನ್ನು ಸಮಾಧಾನ ಮಾಡುತ್ತಿರುವಂತೆ ಅನ್ನಿಸುತ್ತದೆ. ರಸ್ತೆಯಲ್ಲಿ ಹೋಗುವಾಗಲೂ ಹೀಗೆಯೇ ನಗುತ್ತ ಮಾತಾಡುತ್ತ ಹೋಗುತ್ತೇನೆ. ಒಮ್ಮೊಮ್ಮೆ ಯಾರಾದರೂ ನನ್ನನ್ನು ಹುಚ್ಚಿ ಅಂದುಕೊಳ್ಳುತ್ತಾರೇನೋ ಅಂತ ಭಯವಾಗುತ್ತದೆ. ಆದರೆ ನನಗೇ ಗೊತ್ತಿಲ್ಲದಂತೆ ನನ್ನ ಕಲ್ಪನಾ ಲೋಕಕ್ಕೆ ಹೋಗಿಬಿಡುತ್ತೇನೆ. ಕಾಲೇಜಿನಲ್ಲಿ ಯಾರಾದರೂ ಹುಡುಗ ನನ್ನನ್ನು ಮಾತಾಡಿಸಿದರೆ, ರಾತ್ರಿ ನನ್ನ ಕನಸಿನಲ್ಲಿ ಅವನು ಬಂದುಬಿಟ್ಟಂತೆ, ನನಗೆ ಪ್ರೊಪೋಸ್ ಮಾಡಿದಂತೆ, ಬೇರೆ ಊರಿನಲ್ಲಿ ನಾವು ಸುತ್ತಾಡಿದಂತೆ, ಹೀಗೆಲ್ಲ ಕಾಣಿಸುತ್ತದೆ. ನನಗೆ ನಿಜ ಜೀವನದಲ್ಲಿ ಒಂದು ಆಸೆಯಿದೆ. ಅದೆಂದರೆ, ನಾನು ಪೈಲಟ್ ಆಗಬೇಕೆನ್ನುವುದು! ಆದರೆ ನಮ್ಮ ಮನೆಯಲ್ಲಿ ನನಗೆ ಸಿಗುತ್ತಿರುವ ಪ್ರೋತ್ಸಾಹ ನೋಡಿದರೆ ಅದು ಸಾಧ್ಯವೇ ಇಲ್ಲವೆನಿಸುತ್ತದೆ. ನನಗೆ ಯಾವಾಗಲೂ ಹೀಗೇ ಮೇಡಂ, ನಾನೇನು ಅಂದುಕೊಳ್ಳುತ್ತೀನೋ ಅದೊಂದೂ ಆಗುವುದೇ ಇಲ್ಲ. ನನಗೆ ಬೇಡದ್ದೇ ಆಗುತ್ತದೆ. ನಾನು ಅಂದುಕೊಳ್ಳುವುದೆಲ್ಲ ಆಗಬೇಕೆಂದರೆ ಏನು ಮಾಡಬೇಕು ತಿಳಿಸಿ.

ನಿಮ್ಮ ಮನೆಯವರ ಬಗ್ಗೆ ನೀನು ಬರೆದದ್ದು ಓದಿ ನಿಜಕ್ಕೂ ತುಂಬ ಬೇಸರವಾಯಿತು. ತಂದೆತಾಯಿಯಾದವರು ಹೀಗೆ ಇರುತ್ತಾರಾ ಎನಿಸಿತು. ಹೀಗೆ ಸದಾ ಕೆಟ್ಟಮಾತುಗಳಿಂದ ಮಕ್ಕಳನ್ನು ನಿಂದಿಸಿ ಅವರ ಮಾನಸಿಕ ನೆಮ್ಮದಿಯನ್ನು ಹಾಳುಮಾಡುವುದೂ ಒಂದು ಅಪರಾಧವೆಂದೇ ಸುಪ್ರೀಂಕೋರ್ಟು ಹೇಳಿದೆ. ನೀನು ಧೈರ್ಯ ಮಾಡಿ ಒಮ್ಮೆ ನೀನೇ ಬರೆದಿರುವಂತೆ 1098ಗೆ ಫೋನ್ ಮಾಡಿ ವಿಷಯ ತಿಳಿಸು. ಮನೆ ಮರ್ಯಾದೆ ಅಂತೆಲ್ಲ ಯೋಚಿಸ ಬೇಡ. ನಿಮ್ಮ ತಾಯಿಗೂ ಸಹ ಮಾನಸಿಕ ಅಸ್ವಸ್ಥತೆ ಇರುವ ಹಾಗೆ ಕಾಣುತ್ತದೆ. ಇಲ್ಲದಿದ್ದರೆ ತನ್ನದೇ ಮಗಳನ್ನು ಹೀಗೆಲ್ಲ ಕೆಟ್ಟ ಮಾತುಗಳಿಂದ ಬೈಯುವುದು ಮಾನಸಿಕವಾಗಿ ಆರೋಗ್ಯವಾಗಿರುವವರಿಗೆ ಸಾಧ್ಯವಿಲ್ಲ. ನೀನೀಗ ಮತ್ತೊಂದು ಕೆಲಸವನ್ನು ತುರ್ತಾಗಿ ಮಾಡಬೇಕಿದೆ. ನಿಮ್ಮ ಊರಿನಲ್ಲಿ ಒಳ್ಳೆಯ ಕೌನ್ಸೆಲಿಂಗ್ ಸೆಂಟರ್ ಇದೆ. ಯಾರನ್ನಾದರೂ ವಿಚಾರಿಸಿ ನೀನು ಒಮ್ಮೆ ಮನೋವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೋ. ಸದಾ ಹಗಲುಗನಸು ಕಾಣುವುದು, ರಸ್ತೆಯಲ್ಲೂ ನಿನ್ನಷ್ಟಕ್ಕೆ ನೀನೇ ಮಾತಾಡುತ್ತ ನಡೆಯುವುದು ಇವೆಲ್ಲ ಭ್ರಮಾಧೀನ ಮನಸ್ಸಿನ ಕುರುಹುಗಳು. ಇದು ಹೀಗೇ ಮುಂದುವರಿದರೆ ಮಾನಸಿಕ ಕಾಯಿಲೆಗೆ ತಿರುಗಿ ಮುಂದೆ ತುಂಬ ತೊಂದರೆಯಾಗಬಹುದು. ನಿನ್ನ ಪತ್ರ ಓದಿದ ಮೇಲೆ ನನಗನ್ನಿಸಿದ್ದು, ನೀನು ಜಾಣೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಚೆನ್ನಾಗಿ ಓದುತ್ತಿದ್ದೀಯೆ. ಅಲ್ಲದೆ, ಹಿಂಸೆಗೆ ಒಳಗಾದ ಮಕ್ಕಳನ್ನು ಕಾಪಾಡುವ ಕೇಂದ್ರದ ಫೋನ್ ನಂಬರ್ ಬೇರೆ ನಿನಗೆ ಗೊತ್ತಿದೆ! ಎಷ್ಟೋ ಜನ ದೊಡ್ಡವರಿಗೂ ತಿಳಿಯದಷ್ಟು ವಿಷಯ ನಿನಗೆ ತಿಳಿದಿದೆ ಎಂದರೆ ನೀನು ಅಸಾಧ್ಯವಾದ ಜಾಣೆಯೇ. ನೀನು ಅಂದುಕೊಂಡಿದ್ದೆಲ್ಲ ಆಗಬೇಕೆಂದರೆ ನಿನಗೆ ಯಾವುದು ಸಾಧ್ಯವೋ ಅದನ್ನೇ ಅಂದುಕೊಳ್ಳಬೇಕು! ಉದಾಹರಣೆಗೆ, ನಾನು ಇವತ್ತು ಈ ಪುಸ್ತಕವನ್ನು ಓದಿ ಮುಗಿಸುತ್ತೇನೆ ಅಂದುಕೋ. ಆಗ ನಿನ್ನ ಮನಸ್ಸನ್ನು ಬಗ್ಗಿಸಿ, ಹಠ ಹಿಡಿದು ಓದಿ ಮುಗಿಸುತ್ತೀಯೆ. ಇದನ್ನು ಸಕಾರಾತ್ಮಕ ಚಿಂತನೆ ಎನ್ನುತ್ತಾರೆ (ಪಾಸಿಟಿವ್ ಥಿಂಕಿಂಗ್) ಅದು ಬಿಟ್ಟು ನೀನು ‘ಯಾರೋ ಈ ದಿನ ಹಾಗೆ ಮಾಡಲಿ’ ಎಂದುಕೊಳ್ಳುತ್ತೀಯೆ. ನೀನು ಅಂದುಕೊಂಡಿದ್ದನ್ನು ಬೇರೆಯವರು ಯಾಕೆ ಮಾಡುತ್ತಾರೆ? ಇದನ್ನು ನೆಗೆಟಿವ್ ಥಿಂಕಿಂಗ್ ಎನ್ನುತ್ತಾರೆ. ನಿನ್ನ ಮನಸ್ಸು ಬಹಳಷ್ಟು ನೆಗೆಟಿವ್ ಕಡೆ ಹೋಗುತ್ತಿದೆ. ಅದನ್ನು ಸರಿಪಡಿಸಲು ನಿನಗೆ ಮನೋವೈದ್ಯರ ಸಹಾಯ ಅತ್ಯಗತ್ಯ. ಆದ್ದರಿಂದ ಆದಷ್ಟು ಬೇಗ ಡಾಕ್ಟರನ್ನು ನೋಡುವುದು ಒಳ್ಳೆಯದು.

ಶಾಂತಾ ನಾಗರಾಜ್ ಅವರನ್ನುಪ್ರತಿ ಸೋಮವಾರ ಸಂಜೆ 6 ಗಂಟೆಗೆ ಪ್ರಸನ್ನ ಆಪ್ತಸಲಹಾ ಕೇಂದ್ರ ಅರುಣಚೇತನದಲ್ಲಿ ಸಂಕರ್ಕಿಸಬಹುದು. ಸಲಹೆ ಉಚಿತ. ಸೋಮವಾರ ಮಧ್ಯಾಹ್ನ 11ರಿಂದ 1ರವರೆಗೆ ಕರೆ ಮಾಡಿ ಅಪಾಯಿಂಟ್​ವೆುಂಟ್ ಪಡೆದುಕೊಳ್ಳಬಹುದು. ಸಂಖ್ಯೆ: 9480999959. ಪತ್ರ ಬರೆಯುವವರು ವಿಜಯವಾಣಿ ಲಲಿತಾ ಪುರವಣಿಗೆ ಬರೆಯಬೇಕು.