ಶ್ರೀದೇವಿಗೆ ಲಕ್ಷ್ಮಣ ರೇಖೆ ಎಳೆದಿದ್ದ ಜಾನ್ವಿ!

ಭಾರತೀಯ ಚಿತ್ರರಂಗ ಕಂಡ ಸ್ಟಾರ್ ನಟಿ ಶ್ರೀದೇವಿ ಬಗ್ಗೆ ಜಾಸ್ತಿ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಅವರ್ಯಾರು, ಅವರ ಸಾಧನೆ ಏನು ಎಂಬುದು ಇಡೀ ದೇಶಕ್ಕೆ ಗೊತ್ತು. ಅಂತಹ ಮೇರು ಕಲಾವಿದೆಯ ಮಗಳು ಜಾನ್ವಿ ಕಪೂರ್ ಇದೀಗ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್​ಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಆ ಸಿನಿಮಾದ ಪ್ರಚಾರದಲ್ಲೂ ಬಿಜಿಯಾಗಿದ್ದಾರೆ. ಹೀಗೆ ಪ್ರಮೋಷನ್ ವೇಳೆಯೇ ತಾಯಿ ಶ್ರೀದೇವಿ ಬಗ್ಗೆ ಕೆಲವು ಅಚ್ಚರಿ ವಿಷಯಗಳನ್ನು ಹೇಳಿದ್ದಾರೆ.

‘ಧಡಕ್’ ಸಿನಿಮಾ ಶೂಟಿಂಗ್ ಸಮಯದಲ್ಲಿ ಸೆಟ್​ಗೆ ಬಾರದಂತೆ ಶ್ರೀದೇವಿಗೆ ಜಾನ್ವಿ ಕಪುರ್ ಕಟ್ಟಪ್ಪಣೆ ಮಾಡಿದ್ದರಂತೆ. ‘ನಾನು ನಟಿಸುತ್ತಿರುವ ಸಿನಿಮಾ ಸೆಟ್​ಗೆ ಯಾವುದೇ ಕಾರಣಕ್ಕೂ ಬರಬೇಡ ಎಂದು ಅಮ್ಮನಿಗೆ ಹೇಳಿದ್ದೆ. ನಾನೇನು ಮಾಡುತ್ತಿದ್ದೇನೆ ಎಂಬುದನ್ನು ನೋಡದೆ ಪೂರ್ತಿ ಸಿನಿಮಾ ಕೆಲಸ ಮುಗಿದ ಬಳಿಕ ಹೇಳು ಅಂದಿದ್ದೆ. ಅದರರ್ಥ, ಅಮ್ಮನಿಂದ ಹೇಳಿಸಿಕೊಂಡು ನಟಿಸುವುದು ನನಗಿಷ್ಟವಿರಲಿಲ್ಲ. ನನ್ನ ಪರಿಶ್ರಮದಿಂದಲೇ ಗುರುತಿಸಿಕೊಳ್ಳಬೇಕೆಂಬ ಬಯಕೆ ನನ್ನದಾಗಿತ್ತು’ ಎಂದಿದ್ದಾರೆ.

ಜಾನ್ವಿ ನಟಿಸಬೇಕಿರುವ ಸಿನಿಮಾ ಸ್ಕ್ರಿಪ್ಟ್ ವಿಚಾರದಲ್ಲೂ ಶ್ರೀದೇವಿಯ ಪಾತ್ರ ಕಡಿಮೆ. ಹಾಗಂತ ಮಗಳ ಮೇಲೆ ಯಾವುದೇ ಕೋಪ ಅವರಿಗಿರಲಿಲ್ಲ. ಬದಲಿಗೆ ಕಥೆ ಆಯ್ಕೆಯಲ್ಲಿ ಮಗಳೇ ಮುಂದಾಳತ್ವ ವಹಿಸಲಿ ಎಂಬುದಷ್ಟೇ ಶ್ರೀದೇವಿ ಆಶಯವಾಗಿತ್ತು. ‘ಸಿನಿಮಾ ವಿಚಾರವಾಗಿ ಅಮ್ಮನೇ ನನಗೆಲ್ಲ. ಚಿತ್ರದ ಸ್ಕ್ರಿಪ್ಟ್ ವಿಚಾರದಲ್ಲಿ ಅಮ್ಮ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದು ನಿನ್ನ ದಾರಿ. ನೀನೇ ನಿರ್ಧರಿಸು ಎಂದು ಹೇಳಿದ್ದರು. ಹಾಗೇ ಮಾಡು, ಹೀಗೆ ಮಾಡು ಅಂದವರಲ್ಲ. ಬಣ್ಣದ ಲೋಕದಲ್ಲಿ ನಿನ್ನತನವನ್ನು ನೀನೇ ಸೃಷ್ಟಿಸಿಕೊಳ್ಳಬೇಕು ಎಂದಿದ್ದರು. ಈಗಲೂ ಆ ಮಾತುಗಳೇ ನೆನಪಿನಲ್ಲಿವೆ’ ಎಂದು ಅಮ್ಮನೊಟ್ಟಿಗೆ ಮಾತನಾಡಿದ ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ ಜಾನ್ವಿ. ಅಷ್ಟೇ ಅಲ್ಲ, ಅಮ್ಮ ಗಳಿಸಿದ ಹೆಸರಿಗೆ ಎಲ್ಲಿಯೂ ದಕ್ಕೆ ತರದಂತೆ, ಅವರಷ್ಟೇ ಎತ್ತರಕ್ಕೆ ಬೆಳೆಯುವ ಬಗ್ಗೆಯೂ ಮಾತನಾಡಿರುವ ಅವರು, ‘ಈ ವಿಚಾರದಲ್ಲಿ ನನಗೆ ಸ್ವಲ್ಪ ಅಳುಕಿದೆ. ಆದರೂ ನಾನು ಹೆದರುವುದಿಲ್ಲ. ಯಾಕೆಂದರೆ, ಅಮ್ಮ ಈಗಾಗಲೇ ಎಲ್ಲರಿಂದಲೂ ಪ್ರೀತಿ, ವಾತ್ಸಲ್ಯ, ಅಭಿಮಾನವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಪ್ರೀತಿಯನ್ನು ನಾನು ಸಂಪಾದಿಸುತ್ತೇನೆ’ ಎಂದಿದ್ದಾರೆ.