Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಮಾಸ್ಟರ್ ಪೀಸ್ ನಾಗರಹಾವು

Friday, 13.07.2018, 3:02 AM       No Comments

1972ರಲ್ಲಿ ತೆರೆಕಂಡ ‘ನಾಗರಹಾವು’ ಚಿತ್ರದ ಮೂಲಕ ಹಲವು ದಾಖಲೆಗಳು ಕನ್ನಡ ಸಿನಿಮಾ ಇತಿಹಾಸದಲ್ಲಿ ಸೃಷ್ಟಿಯಾಗಿದ್ದವು. ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರಂತಹ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ದಕ್ಕಿದರು. ಇಂತಹ ಸಾರ್ವಕಾಲಿಕ ಹಿಟ್ ಚಿತ್ರವನ್ನು ಈಶ್ವರಿ ಸಂಸ್ಥೆನಿರ್ವಣ ಮಾಡಿತ್ತು. ಇದೀಗ ಆ ಸಿನಿಮಾಗೆ ಆಧುನಿಕ ತಂತ್ರಜ್ಞಾನಗಳ ಮೂಲಕ ಹೊಸ ಮೆರುಗು ನೀಡಿದ್ದಾರೆ ರವಿಚಂದ್ರನ್ ಸಹೋದರ ಬಾಲಾಜಿ. ಮುಂದಿನ ವಾರ (ಜು.20) ‘ನಾಗರಹಾವು’ ಮರುಬಿಡುಗಡೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಬರೀಷ್, ರವಿಚಂದ್ರನ್, ಹಿರಿಯ ನಟಿ ಜಯಂತಿ ಕೆಲವು ಆಸಕ್ತಿಕರ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

| ಅವಿನಾಶ್ ಜಿ. ರಾಮ್ ಬೆಂಗಳೂರು

‘ಆಗಿನ ತಂತ್ರಜ್ಞರಿಗೆ, ಕಲಾವಿದರಿಗೆ ಸಿನಿಮಾ ಮಾಡುವುದು ಕಷ್ಟ ಎನಿಸುತ್ತಿರಲಿಲ್ಲ. ತುಂಬ ಶ್ರದ್ಧೆಯಿಂದ, ಆಸೆಯಿಂದ, ಪ್ರಾಮಾಣಿಕತೆಯಿಂದ ಸಿನಿಮಾಗಳನ್ನು ಮಾಡುತ್ತಿದ್ದರು. ‘ನಾಗರಹಾವು’ ಇಂದಿಗೂ ಬೇಡಿಕೆ ಇಟ್ಟುಕೊಂಡಿರುವುದಕ್ಕೆ ಅದೇ ಕಾರಣ. ಇಂದಿನವರು ಎಲ್ಲದಕ್ಕೂ ಕಷ್ಟ ಕಷ್ಟ ಎನ್ನುತ್ತಾರೆ. ಆಗ ಈ ರೀತಿ ಇರುತ್ತಿರಲಿಲ್ಲ’ ಎಂಬುದು ರವಿಚಂದ್ರನ್ ಹೇಳಿಕೆ. ಈ ಸಿನಿಮಾದ ಪ್ರತಿ ಸೀನ್​ಗಳು ನೋಡುಗರ ಮನದಲ್ಲಿ ಅಚ್ಚೊತ್ತಿವೆ ಎನ್ನುವ ರವಿಚಂದ್ರನ್, ನಿರ್ದೇಶಕ ಪುಟ್ಟಣ್ಣ ಸೃಷ್ಟಿಸಿರುವ ಪಾತ್ರಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ‘ಸಿನಿಮಾದ ಒಂದು ಸಣ್ಣ ಪಾತ್ರವನ್ನೂ ಹೈಲೈಟ್ ಮಾಡುವ ಕಲೆ ಪುಟ್ಟಣ್ಣಗೆ ಇತ್ತು. ‘ನಾಗರಹಾವು’ ಚಿತ್ರದಲ್ಲಿ ಲೋಕನಾಥ್ ಪ್ರಿನ್ಸಿಪಾಲ್ ಆಗಿಯೇ ಕಾಣುತ್ತಾರೆ. ಅಶ್ವತ್ಥ್ ಅವರ ಬದಲು ಚಾಮಯ್ಯ ಮೇಷ್ಟ್ರು ಕಾಣಿಸುತ್ತಾರೆ, ಜಲೀಲ ಆಗಿ ಅಂಬರೀಶ್ ಮಿಂಚುತ್ತಾರೆ. ಚಿತ್ರದುರ್ಗದ ಕೋಟೆ, ಬೆಟ್ಟ ಒಂದು ಪಾತ್ರವಾಗಿ ಇಡೀ ಸಿನಿಮಾದಲ್ಲಿ ಕಾಣಿಸುತ್ತದೆ. ಇದೆಲ್ಲ ಪುಟ್ಟಣ್ಣ ಅವರಂತಹ ನಿರ್ದೇಶಕನಿಂದ ಮಾತ್ರ ಸಾಧ್ಯ. ‘ನಾಗರಹಾವು’ ಒಂದು ಮಾಸ್ಟರ್ ಪೀಸ್’ ಎನ್ನುತ್ತಾರೆ ರವಿಚಂದ್ರನ್. ರವಿಚಂದ್ರನ್​ಗೆ ಚಿಕ್ಕವಯಸ್ಸಿನಲ್ಲೇ ಸಿನಿಮಾ ಮಂದಿಯ ಒಡನಾಟ ಬೆಳೆಯಿತು. ಅದಕ್ಕೆ ಕಾರಣ, ತಂದೆ ವೀರಾಸ್ವಾಮಿ. ಶೂಟಿಂಗ್ ಸೆಟ್​ಗೆ ತಮ್ಮ ಜತೆ ಪುತ್ರನನ್ನು ಅವರು ಕರೆದುಕೊಂಡು ಹೋಗುತ್ತಿದ್ದರು. ‘ನನ್ನ ಅಪ್ಪ ಎಂದಿಗೂ ಸಿನಿಮಾ ಬಗ್ಗೆ ನನಗೆ ಪಾಠ ಮಾಡಲಿಲ್ಲ. ಇವತ್ತು ನಾನು ಏನಾದರೂ ಸಾಧಿಸಿದ್ದೇನೆ ಎಂದರೆ, ಕನ್ನಡ ಚಿತ್ರರಂಗವೇ ಕಾರಣ. ಅವರೆಲ್ಲರ ಮಧ್ಯೆಯೇ ನಾನು ಬೆಳೆದೆ, ಕಲಿತೆ’ ಎನ್ನುತ್ತಾರೆ ರವಿಚಂದ್ರನ್. ಸದ್ಯ ಈಶ್ವರಿ ಸಂಸ್ಥೆಗೆ 50 ವರ್ಷಗಳು ತುಂಬುತ್ತಿವೆ. ಈಗಾಗಲೇ ಈ ಸಂಸ್ಥೆಯಿಂದ 72 ಚಿತ್ರಗಳು ನಿರ್ವಣಗೊಂಡಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳು ನೀಡುವ ವಿಶ್ವಾಸ ರವಿಚಂದ್ರನ್ ಅವರದ್ದು.

ಪ್ರೇಮಾಚಾರಿಗೆ ಅಚ್ಚುಮೆಚ್ಚು ಈ ರಾಮಾಚಾರಿ

ನಟ, ನಿರ್ಮಾಪಕ, ನಿರ್ದೇಶಕ ವಿ. ರವಿಚಂದ್ರನ್ ಅವರ ‘ಈಶ್ವರಿ ಪ್ರೊಡಕ್ಷನ್ಸ್’ ಸಂಸ್ಥೆಯಡಿಯಲ್ಲಿ ‘ನಾಗರಹಾವು’ ಚಿತ್ರಕ್ಕೆ ಬಂಡವಾಳ ಹೂಡಿದ್ದು ಎನ್. ವೀರಾಸ್ವಾಮಿ. ಈಗ ಆ ಚಿತ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲು ರವಿಚಂದ್ರನ್ ಸಹೋದರ ವಿ. ಬಾಲಾಜಿ ಮುಂದಾದಾಗ ರವಿಚಂದ್ರನ್ ಹೇಳಿದ್ದು ಒಂದೇ ಮಾತು; ‘ಅದರ ಒಂದು ಫ್ರೇಮ್ ಕೂಡ ಆಚೀಚೆ ಆಗಬಾರದು. ಯಾಕೆಂದರೆ, ಜನಮಾನಸದಲ್ಲಿ ಆ ಸಿನಿಮಾ ಅಚ್ಚೊತ್ತಿದೆ’ ಎಂದಿದ್ದರಂತೆ. ಅಷ್ಟೇ ಅಲ್ಲ, ಚಿತ್ರದ ರಾಮಾಚಾರಿ ಪಾತ್ರದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ರವಿಚಂದ್ರನ್, ‘ಇವತ್ತಿಗೂ ಯಾವ ಹೀರೋಗೂ ಸಿಗದೆ ಇರುವಂತಹ ಪಾತ್ರ, ರಾಮಾಚಾರಿಯದ್ದು. ನಾನು ತುಂಬ ಸಿನಿಮಾ ಮಾಡಿದ್ದೇನೆ. ಇದುವರೆಗೂ ಅಂಥದ್ದೊಂದು ಪಾತ್ರ ನನಗೂ ಸಿಕ್ಕಿಲ್ಲ’ ಎನ್ನುವ ಮಾತುಗಳನ್ನಾಡಿದ್ದಾರಂತೆ.

ಇವತ್ತು ತಂತ್ರಜ್ಞಾನದ ಮೂಲಕ ‘ನಾಗರಹಾವು’ ಸಿನಿಮಾವನ್ನು ರಿ-ಕ್ರಿಯೇಟ್ ಮಾಡಲಾಗಿದೆ. ಅದೇ ಥರ ಆ ಸಿನಿಮಾ ಮಾಡಿದ ವೀರಾಸ್ವಾಮಿ, ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್​ರನ್ನು ರಿ-ಕ್ರಿಯೇಟ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ರವಿಚಂದ್ರನ್ ಅವರನ್ನು ಸದಾ ಕಾಡುತ್ತದೆಯಂತೆ.

ಕಲ್ಪನಾ ಮಾಡಬೇಕಿದ್ದ ಪಾತ್ರ ಜಯಂತಿಗೆ ಸಿಕ್ತು

‘ನಾಗರಹಾವು’ ಚಿತ್ರದಲ್ಲಿ ಒನಕೆ ಓಬವ್ವನ ಹಾಡು ಸಾರ್ವಕಾಲಿಕ ಸೂಪರ್ ಹಿಟ್. ‘ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರನಾರಿಯ..’ ಹಾಡಿನಲ್ಲಿ ಓಬವ್ವನ ಪಾತ್ರದಲ್ಲಿ ಜಯಂತಿ ಅದ್ಭುತವಾಗಿ ನಟಿಸಿದ್ದರು. ಕೆಲವೇ ನಿಮಿಷಗಳಷ್ಟು ಕಾಲ ಅವರು ಕಾಣಿಸಿಕೊಂಡರೂ, ಪ್ರಭಾವ ಆಗಾಧವಾಗಿದೆ. ಈಗಲೂ ಜಯಂತಿ ಎಂದಾಗ ಆ ಓಬವ್ವನ ಪಾತ್ರ ನೆನಪಿಗೆ ಬರುತ್ತದೆ. ಅಸಲಿಗೆ, ಈ ಪಾತ್ರವನ್ನು ಕಲ್ಪನಾ ಅವರಿಂದ ಮಾಡಿಸುವುದು ಚಿತ್ರತಂಡದ ಉದ್ದೇಶವಾಗಿತ್ತು! ಆದರೆ, ‘ಅಂತಹ ಸಣ್ಣ ಪುಟ್ಟ ಪಾತ್ರಗಳನ್ನು ನಾನು ಮಾಡುವುದಿಲ್ಲ. ಹೀರೋಯಿನ್ ಪಾತ್ರ ಕೊಡ್ತೀರಾ’ ಎಂದು ನೇರವಾಗಿಯೇ ಕೇಳಿದ್ದರಂತೆ ಕಲ್ಪನಾ. ಆನಂತರ ನಿರ್ವಪಕರು-ನಿರ್ದೇಶಕರು ಹೋಗಿದ್ದು ಜಯಂತಿ ಅವರ ಮನೆಗೆ. ‘ನಮ್ಮ ಮನೆಗೆ ಬಂದ ಪುಟ್ಟಣ್ಣ ಮತ್ತು ವೀರಾಸ್ವಾಮಿ ಅವರು ಮಾತುಕತೆಗೂ ಮುನ್ನವೇ ಕಲ್ಪನಾ ರಿಜೆಕ್ಟ್ ಮಾಡಿದ್ದ ಪಾತ್ರವಿದು ಎಂಬ ವಿಷಯವನ್ನು ನನಗೆ ತಿಳಿಸಿದರು. ಯಾರಾದ್ರೂ ಬೇಡ ಎಂದಾಗ ಮಾತ್ರ ನನ್ನ ಹತ್ತಿರ ಬರುತ್ತೀರಾ ಎಂದು ಅವರನ್ನು ಕಿಚಾಯಿಸಿದ್ದೆ. ಆದರೆ, ಸವಾಲು ತುಂಬಿರುವ ಪಾತ್ರಗಳೆಂದರೆ ನನಗಿಷ್ಟ. ಅದೇ ಕಾರಣಕ್ಕೆ ಇದನ್ನು ಒಪ್ಪಿಕೊಂಡೆ. ನಿರ್ದೇಶಕರು ನಿರೀಕ್ಷೆ ಮಾಡಿದ್ದಕ್ಕಿಂತ ಜಾಸ್ತಿ ನಾನು ಅಭಿನಯ ಮಾಡಿದ್ದೆ. ಪುಟ್ಟಣ್ಣ ಇದರಿಂದ ತುಂಬ ಖುಷಿಯಾಗಿದ್ದರು’ ಎಂದು ನೆನಪುಗಳನ್ನು ಮೆಲುಕು ಹಾಕುತ್ತಾರೆ ಜಯಂತಿ.

ಅಂಬಿ ಸ್ಮೃತಿಪಟಲದಲ್ಲಿ ಪುಟ್ಟಣ್ಣನ ಬಿಂಬ

‘ನಾಗರಹಾವು’ ಚಿತ್ರದಲ್ಲಿ ಜಲೀಲ ಎಂಬ ಸಣ್ಣ ಖಳ ಪಾತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟವರು ಅಂಬರೀಷ್. ಪಾತ್ರ ಚಿಕ್ಕದಾದರೂ, ಅದರ ಇಂಪ್ಯಾಕ್ಟ್ ಎಷ್ಟರಮಟ್ಟಿಗಿತ್ತು ಎಂದರೆ, ‘ನಾಗರಹಾವು’ ಹಿಂದಿಗೆ ‘ಜಹ್ರೀಲಾ ಇನ್ಸಾನ್’ ಹೆಸರಿನಲ್ಲಿ ರಿಮೇಕ್ ಆಗಿತ್ತು. ಮೂಲ ಚಿತ್ರ ನಿರ್ದೇಶಿಸಿದ್ದ ಪುಟ್ಟಣ್ಣ, ಅಲ್ಲಿಯೂ ಆಕ್ಷನ್-ಕಟ್ ಹೇಳಿದ್ದರು. ವಿಷ್ಣು ಪಾತ್ರವನ್ನು ರಿಷಿ ಕಪೂರ್ ಮಾಡಿದ್ದರು. ಜಲೀಲನ ಪಾತ್ರ ಮಾಡಿದ್ದು ಮತ್ತದೇ ಅಂಬರೀಷ್.

‘ನಾಗರಹಾವು’ ಚಿತ್ರದ ಮೇಲೆ ಅಂಬರೀಷ್ ಅವರಿಗೆ ವಿಶೇಷ ಪ್ರೀತಿ. ಪುಟ್ಟಣ್ಣ ಮೇಲೆ ಅಪಾರ ಗೌರವ. ‘ಅಪ್ಪ-ಅಮ್ಮ ನನ್ನನ್ನು ಈ ಸಮಾಜಕ್ಕೆ ನೀಡಿದರು. ನನ್ನ ಇತಿಹಾಸ ಬರೆದದ್ದು ‘ನಾಗರಹಾವು’ ಚಿತ್ರ. ಈ ಸಿನಿಮಾ ಬಂದಮೇಲೆಯೇ ಚಿತ್ರದುರ್ಗದ ಸೊಬಗೇನು ಎಂಬುದು ಜನರಿಗೆ ತಿಳಿದಿದ್ದು. ತಾಂತ್ರಿಕವಾಗಿ ಈ ಸಿನಿಮಾ ಶ್ರೀಮಂತವಾಗಿ ಮೂಡಿಬಂತು. ಕಲಾವಿದರು ಪಾತ್ರಗಳಿಗೆ ಜೀವ ತುಂಬಿರುವ ರೀತಿ ಅಮೋಘ. ಇಷ್ಟೆಲ್ಲ ಸಾಧ್ಯವಾಗಿದ್ದು ಪುಟ್ಟಣ್ಣ ಎಂಬ ಮಹಾನ್ ನಿರ್ದೇಶಕನಿಂದ. ಚಿತ್ರದ ಸಂಭಾಷಣೆ, ಹಾಡುಗಳು ಈಗಲೂ ಎಲ್ಲರ ಮನದಲ್ಲಿವೆ’ ಎನ್ನುತ್ತಾರೆ ಅಂಬರೀಷ್.

ಪುಟ್ಟಣ್ಣ ಬಾಲಿವುಡ್ ಸಿನಿಮಾ ನಿರ್ದೇಶನ ಮಾಡಿದ್ದನ್ನು ನೆನಪು ಮಾಡಿಕೊಳ್ಳುವ ಅಂಬರೀಷ್, ‘ರಾಜ್ ಕಪೂರ್ ಎಂಟರ್​ಟೇನರ್ ಆಫ್ ಇಂಡಿಯಾ. ಅವರ ಪುತ್ರ ರಿಷಿ ಕಪೂರ್ ಆಗ ‘ಬಾಬಿ’ ಸಿನಿಮಾದ ಮೂಲಕ ಹಿಟ್ ನೀಡಿದ್ದ ನಟ. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರೂ, ಅವೆಲ್ಲದಕ್ಕಿಂತ ಮೊದಲು ಜಹ್ರೀಲಾ ಇನ್ಸಾನ್ (ನಾಗರಹಾವು ರಿಮೇಕ್) ತೆರೆಕಾಣಬೇಕು ಎಂದು ಬೇರೆಲ್ಲ ಚಿತ್ರಗಳನ್ನು ನಿಲ್ಲಿಸಿದ್ದರು. ಬಾಲಿವುಡ್​ಗೆ ಪುಟ್ಟಣ್ಣ ಅವರನ್ನು ರೆಡ್​ಕಾರ್ಪೆಟ್ ಹಾಸಿ ಕರೆಸಿದ್ದರು’ ಎನ್ನುತ್ತಾರೆ. ಇನ್ನು, ನಿರ್ವಪಕ ವೀರಾಸ್ವಾಮಿ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸುವ ಅಂಬರೀಷ್, ‘ಅವರೊಬ್ಬ ಡೋಂಟ್ ಕೇರ್ ನಿರ್ವಪಕ. ಸೆಟ್​ಗೆ ಬರುತ್ತಿರಲಿಲ್ಲ. ಎಲ್ಲರ ಮೇಲೂ ಅವರಿಗೆ ಜಾಸ್ತಿ ನಂಬಿಕೆ. ‘ಕುಲ ಗೌರವ’ ನಂತರ ಎಲ್ಲ ಹೊಸ ಕಲಾವಿದರನ್ನು ಇಟ್ಟುಕೊಂಡು, ದೊಡ್ಡ ಬಜೆಟ್​ನಲ್ಲಿ ಕಲರ್ ಸ್ಕೋಪ್​ನಲ್ಲಿ ಮಾಡಿದ್ದರು’ ಎಂದು ಹೇಳುತ್ತಾರೆ.

ಈ ಚಿತ್ರದ ‘ಬಾರೇ ಬಾರೇ..’ ಹಾಡನ್ನು ಸ್ಲೋಮೋಷನ್​ನಲ್ಲಿ ಚಿತ್ರಿಸಲಾಗಿದೆ. ವಿಶೇಷವೆಂದರೆ, ಆ ಕಾಲಕ್ಕೆ ಇಡೀ ಭಾರತದಲ್ಲಿ ಇಂಥದ್ದೊಂದು ಪ್ರಯತ್ನ ಮೊದಲು ಆಗಿದ್ದೇ ಕನ್ನಡದಲ್ಲಿ! ಅದನ್ನು ನೆನೆಯುವ ಅಂಬರೀಷ್, ‘ಪುಟ್ಟಣ್ಣ ತಾಂತ್ರಿಕವಾಗಿ ತುಂಬ ಅಪ್​ಡೇಟ್ ಆಗಿದ್ದರು. ಆಗ ಎಲ್.ವಿ. ಪ್ರಸಾದ್ ಅವರದ್ದು ಸಿನಿಮಾ ನಿರ್ವಣದಲ್ಲಿ ಇಡೀ ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು. ಅವರು ಮೊದಲ ಬಾರಿಗೆ ಸ್ಟಡಿ ಕ್ಯಾಮರಾ ತರಿಸಿದ್ದರು. ಆ ಕಾಲಕ್ಕೆ ಅದು ತುಂಬ ಹೊಸ ಮಾದರಿಯ ಕ್ಯಾಮರಾ. ಆಗ ಪ್ರಸಾದ್ ಪುತ್ರ ರಮೇಶ್ ಪ್ರಸಾದ್, ‘ಇದರಲ್ಲಿ ಮೊದಲ ಶಾಟ್​ಅನ್ನು ಪುಟ್ಟಣ್ಣ ಅವರಿಂದಲೇ ತೆಗೆಸಬೇಕು’ ಎಂದಿದ್ದರು. ಅಂತೆಯೇ ಆ ಸಮಯಕ್ಕೆ ‘ಮಸಣದ ಹೂವು’ ಶೂಟಿಂಗ್ ನಡೆಯುತ್ತಿತ್ತು. ನನ್ನ ಮತ್ತು ಜಯಂತಿ ಅಭಿನಯದ ಒಂದು ಶಾಟ್​ಅನ್ನು ಆ ಕ್ಯಾಮರಾದಲ್ಲಿ ತೆಗೆಯಲಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಅಂಬರೀಷ್.

ಕೊನೆಯದಾಗಿ ಈ ಸಿನಿಮಾದ ಬಗ್ಗೆ ಹೇಳುವುದಿಷ್ಟು; ‘ಜಲೀಲನಾಗಿ, ಖಳನಾಯಕನಾಗಿ, ಪೋಷಕ ನಟನಾಗಿ, ನಾಯಕನಾಗಿ, ಜನನಾಯಕನಾಗಿ, ದೇಶದ ರಾಷ್ಟ್ರಪತಿಗಳ ಎದುರಲ್ಲಿ ಕೇಂದ್ರ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ರಾಜ್ಯ ಸಚಿವನಾಗಿ ಕೆಲಸ ಮಾಡಿದ್ದೇನೆ. ಇಷ್ಟೆಲ್ಲ ಮಾಡಿದ್ದರೂ, ಇದೆಲ್ಲದಕ್ಕೂ ಮೊದಲ ಇಟ್ಟಿಗೆ ಇಟ್ಟಿದ್ದು ‘ನಾಗರಹಾವು’ ಚಿತ್ರ. ಪುಟ್ಟಣ್ಣ ಮತ್ತು ವೀರಾಸ್ವಾಮಿ ಅವರ ಆಶೀರ್ವಾದ’…

Leave a Reply

Your email address will not be published. Required fields are marked *

Back To Top