Friday, 16th November 2018  

Vijayavani

Breaking News

ಖಳನಟನ ಪಾಲಿಗೆ ವಿಧಿಯೇ ವಿಲನ್!

Friday, 13.07.2018, 3:00 AM       No Comments

| ಗಣೇಶ್ ಕಾಸರಗೋಡು

ಯೋಗವೂ ಇತ್ತು, ಯೋಗ್ಯತೆಯೂ ಇತ್ತು. ಹೀಗಾಗಿಯೇ ಪ್ರತಿಷ್ಠಿತ ಬ್ಯಾಂಕ್​ವೊಂದರಲ್ಲಿ ಮ್ಯಾನೇಜರ್ ಆಗಿದ್ದರು. ಮುಂಬೈಯ ತುಳು ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದರು. ತುಳು ಚಿತ್ರರಂಗದ ‘ಸೂಪರ್ ಸ್ಟಾರ್’ ಆಗಿ ಮೆರೆದರು. ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಶೈಲಿಯ ಅಭಿನಯದ ಛಾಪು ಮೂಡಿಸಿದರು. ಅಜಾನುಬಾಹು ದೇಹ, ಕ್ರೂರ ಕಣ್ಣೋಟ, ಕಂಚಿನ ಕಂಠ. ಅವಕಾಶಗಳ ಮಹಾಪೂರ. ಸಮಯ ಹೊಂದಾಣಿಕೆ ಸಾಧ್ಯವಾಗದೆ ಬ್ಯಾಂಕ್​ನ ಗೌರವಾನ್ವಿತ ಹುದ್ದೆಗೆ ವಿದಾಯ ಹೇಳಿ ಫುಲ್ ಟೈಮ್ ನಟರಾದರು, ಬೇಡಿಕೆಯ ಬಹುರೂಪಿ ಖಳನಾಯಕರಾದರು. ಇಷ್ಟಾಗುವ ಹೊತ್ತಿಗೆ ಕ್ರೂರ ವಿಧಿ ಕೈ ಕೊಟ್ಟಿತು…

ಅವರ ಹೆಸರು ಸದಾಶಿವ ಸಾಲಿಯಾನ್. ಹುಟ್ಟಿದ್ದು, ಬೆಳೆದದ್ದೆಲ್ಲ ಮುಂಬೈನಲ್ಲೇ. ಬಿಎ ಪದವೀಧರ. ತಂದೆ ಪದ್ಮನಾಭ ಸಾಲಿಯಾನ್ ರಂಗ ಕಲಾವಿದ. 1979ರಲ್ಲಿ ತುಳು ಚಿತ್ರರಂಗದ ಪಿತಾಮಹ ಕೆ.ಎನ್. ಟೈಲರ್ ಅವರ ‘ಭಾಗ್ಯವಂತೆದಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ಮುಂದಿನ ದಿನಗಳಲ್ಲಿ ‘ದಾರೆದ ಸೀರೆ’, ‘ಬದ್ಕೆರೆ ಬುಡ್ಲೆ’, ‘ಪೆಟ್ಟಾಯಿ ಪುಲಿ’, ‘ಸತ್ಯ ಓಲುಂಡು’ ಮೊದಲಾದ ತುಳು ಚಿತ್ರಗಳಲ್ಲಿ ಅಭಿನಯ. ‘ಅಜ್ಞಾತವಾಸ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ. ಖಳನಾಯಕನಾಗಿ ಖ್ಯಾತಿಯ ಉತ್ತುಂಗ. ‘ಪುಗ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ’, ‘ಅನಾಥ ರಕ್ಷಕ’, ‘ಸಂಸಾರದ ಗುಟ್ಟು’, ‘ಭವ್ಯ ಭಾರತ’, ‘ಲಯನ್ ಜಗಪತಿರಾವ್’, ‘ಕಾದಂಬರಿ’ ಮುಂತಾದ ಚಿತ್ರಗಳಲ್ಲಿ ಅಭಿನಯ. ಬರೀ ನಟನೆಯಲ್ಲೇ ಹೆಸರು, ದುಡ್ಡು ಸಂಪಾದಿಸಿದ್ದ ಸದಾಶಿವ ‘ಸ್ಟಂಟ್ ಮಾಸ್ಟರ್’ ಚಿತ್ರವನ್ನು ನಿರ್ವಿುಸಿ ಹಳ್ಳಕ್ಕೆ ಬಿದ್ದರು!

ಇದೇ ಹೊತ್ತಿಗಾಗಿ ಹೊಂಚು ಹಾಕಿ ಕಾಯುತ್ತಿದ್ದ ವಿಧಿ ಕೈ ಕೊಟ್ಟಿತು. ಒಂದೇ ಒಂದು ಅಪಘಾತ ಈ ಕಲಾವಿದನನ್ನು ಹೈರಾಣು ಮಾಡಿತು. ಯಾವುದೋ ಕೆಲಸಕ್ಕಾಗಿ ಕಾರಿನಲ್ಲಿ ಸಾಲಿಯಾನ್ ಹೊರಟಿದ್ದರು. ಆಗ ಅವರಿದ್ದ ಕಾರು ಅಪಘಾತಕ್ಕೀಡಾಯಿತು. ಬಲಗಾಲು ಮುರಿದು ಹೋಯಿತು. ದುರಾದೃಷ್ಟ ಒಂದೇ ಅಪಘಾತದಲ್ಲಿ ಮುಗಿಯಲಿಲ್ಲ. ಮನೆಯ ಮೆಟ್ಟಲಿಳಿಯುವಾಗ ಜಾರಿ ಬಿದ್ದು ರಾಡ್ ಹಾಕಿದ್ದ ಕಾಲು ಮುರಿದು ಮೂರು ತುಂಡಾಯಿತು! ಸೂಕ್ತ ಚಿಕಿತ್ಸೆ ಕೊಡಿಸಿದರೂ ಕುಂಟುವುದು ನಿಲ್ಲಲಿಲ್ಲ. ಬದುಕು ಕುಂಟಲು ತೊಡಗಿದ್ದೇ ಅಲ್ಲಿಂದ… ಓಡಾಡಲು ಕಾರು, ಹಾರಾಡಲು ವಿಮಾನ, ವಾಸ್ತವ್ಯ ಹೂಡಲು ಪಂಚತಾರಾ ಹೋಟೆಲ್. ಆದರೆ, ಒಂದೇ ಒಂದು ಅಪಘಾತ ಈ ಎಲ್ಲವನ್ನೂ ನುಂಗಿ ನೀರು ಕುಡಿಸಿತು!

ಈ ನಡುವೆ ಬ್ಯಾಂಕ್​ಗೆ ಹಾಕಿದ ಅನಧಿಕೃತ ರಜಾಕ್ಕಾಗಿ ಮ್ಯಾನೇಜ್ಮೆಂಟ್ ಕಾರಣ ಕೇಳಿ ನೋಟಿಸ್ ನೀಡಿತು. ಉತ್ತರಿಸುವ ತಾಳ್ಮೆ ಇರಲಿಲ್ಲ. ಮೌನವಾಗಿದ್ದ ಸಾಲಿಯಾನ್​ಗೆ ಬ್ಯಾಂಕ್ ಆಡಳಿತ ಮಂಡಳಿ ಮತ್ತೆಮತ್ತೆ ಎಚ್ಚರಿಕೆಯ ನೋಟಿಸ್ ನೀಡಿತು. ಕೊನೆಗೆ ಅವರು ಕಡ್ಡಾಯ ಸ್ವಯಂ ನಿವೃತ್ತಿಗೆ ವಿನಂತಿಸಿಕೊಂಡರು. ಬ್ಯಾಂಕ್ ನಿರಾಕರಿಸಿತು. ಅನಿವಾರ್ಯವಾಗಿ ಬ್ಯಾಂಕ್ ನೌಕರಿಗೆ ಅವರು ವಿದಾಯ ಹೇಳಿದರು. ಆದರೆ ಅವರಿಗೆ ಸಿಗಬೇಕಿದ್ದ ಎಲ್ಲ ಸವಲತ್ತುಗಳನ್ನು ಬ್ಯಾಂಕ್ ಆಡಳಿತ ಮಂಡಳಿ ಕೊಡಲು ನಿರಾಕರಿಸಿತು, ಪಿಂಚಣಿಯನ್ನೂ ತಡೆಹಿಡಿಯಲಾಯಿತು. ಅದೇ ಹೊತ್ತಿಗೆ ಚಿತ್ರರಂಗವೂ ಕೈ ಕೊಟ್ಟಿತು. ಕಾಲು ಮುರಿದ ಕಾರಣಕ್ಕಾಗಿ ಓಡಾಡುವುದು ಕಷ್ಟವಾದಾಗ ಸಾಲಿಯಾನ್ ಅವರಿಗೆ ಮನೆಯೇ ಮಂತ್ರಾಲಯವಾಯಿತು! ಶಕ್ತಿ ಕಳೆದುಕೊಂಡ ಬಲಗಾಲು ತಕರಾರು ಮಾಡತೊಡಗಿತು. ನಡೆಯಲು ಕೋಲು ಆಧಾರವಾಯಿತು. ನಿಲ್ಲಲು ತ್ರಾಣವಿಲ್ಲದೆ ಹಾಸಿಗೆ ಪಾಲಾಗಬೇಕಾಯಿತು. ಇಂಥ ಸದಾಶಿವ ಸಾಲಿಯಾನ್ ಶಾಶ್ವತವಾಗಿ ಕಾಯಿಲೆಗೆ ದಾಸರಾದರು. ಜತೆಗೆ ಬಿ.ಪಿ., ಶುಗರ್ ಬೇರೆ. ಆರಡಿ ಎತ್ತರದ ದೇಹ ಕುಗ್ಗಿ ಬಡಕಲಾಯಿತು.

ಮುಂಬೈನಲ್ಲಿದ್ದರೂ ಹಿಂದಿ ಚಿತ್ರರಂಗದ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ಸುನಿಲ್ ಶೆಟ್ಟಿ ಆತ್ಮೀಯರಾಗಿದ್ದರೂ ಅವರ ಮುಂದೆ ಸಹಾಯಕ್ಕಾಗಿ ಕೈ ಚಾಚಲಿಲ್ಲ. ಕೊನೆಗೆ ಮಗಳ ಮನೆಯೇ ಅವರ ಆಶ್ರಯ ತಾಣವಾಯಿತು. ಊಟದ ಸಮಸ್ಯೆ ಮುಗಿದರೂ ಔಷಧದ ಖರ್ಚಿಗಾದರೂ ದುಡ್ಡು ಬೇಕಲ್ಲವೇ? ಆಗ ಸಾಲಿಯಾನ್ ಸಂರ್ಪಸಿದ್ದು ನನ್ನನ್ನು. ನಾನಾದರೂ ಏನು ಮಾಡಬಲ್ಲೆ? ಅಂದಿನಿಂದ ನಿರಂತರವಾಗಿ ಫೋನ್ ಮಾಡಲು ಶುರುವಿಟ್ಟುಕೊಂಡರು ಸಾಲಿಯಾನ್. ಕೊನೆಗೆ, ಆಗ ಕಂಠೀರವ ಸ್ಟುಡಿಯೋದ ಅಧ್ಯಕ್ಷರಾಗಿದ್ದ ಗಿರೀಶ್ ಮಟ್ಟಣ್ಣವರ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರೂಪಾಯಿಗಳ ಚೆಕ್ ಸಾಲಿಯಾನ್ ಅವರಿಗೆ ತಲುಪುವಂತೆ ನೋಡಿಕೊಂಡೆ. ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ! ಮತ್ತೆ ಮತ್ತೆ ಫೋನ್ ಮಾಡಿ ಆರ್ಥಿಕ ಸಹಾಯಕ್ಕಾಗಿ ಒತ್ತಾಯಿಸುತ್ತಲೇ ಇದ್ದರು. ಅವರಿವರ ಮೂಲಕ ಒಂದಷ್ಟು ಹಣವನ್ನು ಕಳಿಸಿಕೊಟ್ಟಿದ್ದು ನಿಜ.

ಒಂದು ಕಾಲದಲ್ಲಿ ಬೆಳ್ಳಿತೆರೆಯ ಮೇಲೆ ತಮ್ಮ ಕಂಚಿನ ಕಂಠದಿಂದ ಬೊಬ್ಬಿರಿಯುತ್ತಿದ್ದ ತುಳು ಚಿತ್ರರಂಗದ ಈ ಹುಲಿ, ‘ಪೆಟ್ಟಾಯಿ ಪಿಲಿ’ (ಪೆಟ್ಟುಬಿದ್ದ ಹುಲಿ) ಆಗಿ ಬಿಟ್ಟಿತು! ಕೊನೆಕೊನೆಗೆ ತಾವು ತೆಗೆದುಕೊಂಡ ನಿರ್ಧಾರಕ್ಕಾಗಿ ಪಶ್ಚಾತ್ತಾಪ ಪಟ್ಟುಕೊಂಡರೋ ಗೊತ್ತಿಲ್ಲ. ಚಿತ್ರರಂಗ ಅವರಿಗೆ ಎಲ್ಲವನ್ನೂ ಕೊಟ್ಟಿದೆ; ಹಣ, ಖ್ಯಾತಿ, ಶಾಂತಿ, ನೆಮ್ಮದಿ… ಆದರೆ ಅದನ್ನು ಅನುಭವಿಸುವ ಯೋಗವನ್ನು ಮಾತ್ರ ವಿಧಿ ಕಿತ್ತುಕೊಂಡಿತು. ಕೊನೆಯುಸಿರೆಳೆಯುವುದಕ್ಕೂ ಒಂದು ತಿಂಗಳ ಹಿಂದೆ ನಾನು ಅವರ ಜತೆ ಮಾತಾಡಿದ್ದೆ. ಕಂಚಿನ ಕಂಠ ಜೀರ್ಣವಾಗಿತ್ತು. ನಡುನಡುವೆ ಅಳು! ಕೊನೆಯ ಬಾರಿ ಸದಾಶಿವ ಸಾಲಿಯಾನ್ ಆಡಿದ ಮಾತು ನನ್ನ ಕಿವಿಯಲ್ಲಿ ಇನ್ನೂ ಗುಯಿಂಗುಡುತ್ತಿದೆ: ‘ಅಣ್ಣಾ, ಇನ್ನು ನಾನು ಹೆಚ್ಚು ದಿನ ಬದುಕುವುದಿಲ್ಲ. ಈ ನರಕದ ಜೀವನ ಸಾಕಾಗಿ ಬಿಟ್ಟಿದೆ. ನಾನು ಸುಸ್ತು ಹೊಡೆದಿದ್ದೇನೆ. ಕರ್ನಾಟಕದ ಜನತೆ ನಿಮ್ಮ ಮೂಲಕ ನನಗೆ ಮಾಡಿದ ಸಹಾಯವನ್ನು ನಾನು ಮರೆಯಲಾರೆ. ಅವರ ಋಣವನ್ನು ಈ ಜನ್ಮದಲ್ಲಿ ತೀರಿಸಲು ನನ್ನಿಂದ ಸಾಧ್ಯವಿಲ್ಲ. ಮುಂದಿನ ಜನ್ಮವೊಂದಿದ್ದರೆ ಖಂಡಿತ ಅವರ ಸಹಾಯದ ಋಣವನ್ನು ತೀರಿಸುತ್ತೇನೆ. ನನ್ನ ಬದುಕಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಇದೋ ನನ್ನ ಕೊನೆಯ ಪ್ರಣಾಮ. ಸಾಕು, ನನಗೆ ಹಣ ಬೇಡ, ಯಾರ ಸಹಾಯವೂ ಬೇಡ. ನನಗೆ ಸಾವು ಬೇಕು…ಅಷ್ಟೇ!!’ – ಸದಾಶಿವ ಸಾಲಿಯಾನ್ ಬೇಡಿಕೆ ಈಡೇರಿದೆ. ಕಳೆದ ವಾರ ಅವರು ಇಹಲೋಕಕ್ಕೆ ಗುಡ್​ಬೈ ಹೇಳಿದ್ದಾರೆ. ಬಣ್ಣ ಕಳಚಿಟ್ಟು ಬದುಕು ಮುಗಿಸಿದ್ದಾರೆ. ಇನ್ನು, ಮುಂದೆ ಅವರ ಫೋನ್ ಕಾಲ್ ನನಗೆ ಬರುವುದಿಲ್ಲ. ಆರ್ದ್ರ ಹೃದಯದ ಅಸಹಾಯಕ ಮೊರೆ ಕೇಳಿಸುವುದಿಲ್ಲ. ‘ಪೆಟ್ಟಾಯಿ ಪಿಲಿ’ ಈಸ್ ನೋ ಮೋರ್…

Leave a Reply

Your email address will not be published. Required fields are marked *

Back To Top