Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಸಂತ ತುಕಾರಾಮ ನಿಂತ ನೆಲಕ್ಕೆ ಬೆಂಕಿ ಬಿದ್ದಾಗ…

Friday, 17.08.2018, 3:00 AM       No Comments

| ಗಣೇಶ್ ಕಾಸರಗೋಡು

ಚಿತ್ರೀಕರಣ ಸಂದರ್ಭದಲ್ಲಿ ಅಚಾನಕವಾಗಿ ನಡೆಯುವ ಅಪಘಾತಗಳ ಬಗ್ಗೆ ವರ್ಣರಂಜಿತವಾಗಿ ವಿವರಿಸಿ ಪ್ರಚಾರ ಪಡೆಯುವ ನಾಯಕ ನಟರ ಹುನ್ನಾರವನ್ನು ನಾವು ನೀವು ಸಾಕಷ್ಟು ಕೇಳಿರುತ್ತೇವೆ, ನೋಡಿರುತ್ತೇವೆ. ಹೌದು, ಕೆಲವೊಂದು ಸಂದರ್ಭದಲ್ಲಿ ನಡೆಯುವ ಅನಾಹುತ ಗಳಿಂದಾಗಿ ಜೀವಕ್ಕೆ ಕುತ್ತು ಬರುವ ಸಂದರ್ಭಗಳೂ ಇವೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಮಾಧ್ಯಮದ ಮೂಲಕ ಪ್ರಚಾರ ಪಡೆಯುವ ತಂತ್ರ ಇತ್ತೀಚೆಗೆ ಅತಿಯಾಗುತ್ತಿದೆ. ಆದರೆ, ನಾನಿಲ್ಲಿ ಹೇಳ ಹೊರಟಿರುವುದು 55 ವರ್ಷಗಳ ಹಿಂದಿನ ಒಂದು ಮೈನವಿರೇಳಿಸುವ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಬೆಂಕಿ ಅವಘಡದ ಘಟನೆಯನ್ನು. ಚಿತ್ರದ ಹೆಸರು; ‘ಸಂತ ತುಕಾರಾಮ’. ನಾಯಕನ ಹೆಸರು; ಡಾ. ರಾಜ್​ಕುಮಾರ್. ಭಕ್ತಿ ಭಾವದ ಪಾತ್ರಗಳಲ್ಲಿ ರಾಜ್​ಕುಮಾರ್ ಹೇಗೆ ಪರಕಾಯ ಪ್ರವೇಶ ಮಾಡಿ ಮೈ ಮರೆತು ಬಿಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಭಕ್ತ ಕನಕದಾಸ, ಭಕ್ತ ಪ್ರಹ್ಲಾದ, ಭಕ್ತ ಕುಂಬಾರ, ಪುರಂದರದಾಸ, ಕವಿರತ್ನ ಕಾಳಿದಾಸ… ಮೊದಲಾದ ಪಾತ್ರಗಳು ನಮ್ಮ ಮುಂದಿವೆ. ಆದರೆ ‘ಸಂತ ತುಕಾರಾಮ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಈ ದುರ್ಘಟನೆಗೆ 55 ವರ್ಷಗಳ ಹಿಂದಿನ ಇತಿಹಾಸವಿದೆ! ನೆನಪಿಡಿ, ಅಂದು ಲೆಕ್ಕ ಹಾಕಿದರೆ 3-4 ಪತ್ರಿಕೆಗಳಷ್ಟೇ ಇದ್ದವು! ಪ್ರಚಾರದ ನೆಪ ಇಲ್ಲವೇ ಇಲ್ಲ.

‘ಸಂತ ತುಕಾರಾಮ’ ಚಿತ್ರ ತೆರೆ ಕಂಡದ್ದು 1963ರಲ್ಲಿ. ಆ ಕಾಲದಲ್ಲೇ ದೊಡ್ಡ ಯಶಸ್ಸು ಪಡೆದ ಭಕ್ತಿ ಪ್ರಧಾನ ಚಿತ್ರವಿದು. ನಿರ್ದೇಶಕರಿಗೂ, ನಟರಿಗೂ ದೊಡ್ಡ ಹೆಸರು ಬಂತು. ರಾಷ್ಟ್ರಮಟ್ಟದಲ್ಲಿ ಈ ಚಿತ್ರಕ್ಕೆ ರಜತ ಪದಕವೂ ಲಭ್ಯವಾಯಿತು. ಡಿ.ವಿ.ರಾಜಾರಾಂ ಎಂಬ ಹೆಸರಿನ ಖ್ಯಾತ ಛಾಯಾಗ್ರಾಹಕರ ಪ್ರವೇಶವಾದದ್ದು ಈ ಚಿತ್ರದ ಮೂಲಕವೇ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ‘ಸಾಹಿತ್ಯ ಬ್ರಹ್ಮ’ ಬಿರುದಾಂಕಿತ ಚಿ. ಉದಯಶಂಕರ್ ಸಂಭಾಷಣೆ ಬರೆದ ಮೊಟ್ಟ ಮೊದಲ ಚಿತ್ರವಿದು. ಇಷ್ಟೆಲ್ಲ ಹೆಗ್ಗಳಿಕೆಗಳ ನಡುವೆ ಬೆಚ್ಚಿ ಬೀಳಿಸುವ ಅವಘಡವೊಂದು ಚಿತ್ರೀಕರಣ ಹಂತದಲ್ಲಿ ನಡೆದು ಇಡೀ ಚಿತ್ರತಂಡವನ್ನೇ ಹಣ್ಣುಗಾಯಿ, ನೀರುಗಾಯಿ ಮಾಡಿದ ಪ್ರಸಂಗದ ವಿವರ ಇಲ್ಲಿದೆ;

ಇದು ನೀರು ಮತ್ತು ಬೆಂಕಿಯ ಜತೆ ಆಡಿದ ‘ಸರಸ ಸಲ್ಲಾಪ’ದ ಕಥೆ! ಮೊದಲು ನೀರಿನಲ್ಲಾದ ಅವಘಡದ ಬಗ್ಗೆ ಹೇಳಿಬಿಡುತ್ತೇನೆ. ರಾಜ್​ಕುಮಾರ್ ಅವರಂತೆಯೇ ಸನ್ನಿವೇಶವೊಂದರಲ್ಲಿ ತನ್ಮಯರಾಗಿಬಿಡುವ ಸ್ವಭಾವ ನಿರ್ದೇಶಕ ಸುಂದರರಾವ್ ನಾಡಕರ್ಣಿ ಅವರಿಗೂ ಇತ್ತು. ಈ ಇಬ್ಬರ ತನ್ಮಯತೆಯೇ ಒಬ್ಬರ ದೇಹ ಮರಗಟ್ಟಿಸುವ ದುಃಸ್ಥಿತಿಗೆ ತಂದು ನಿಲ್ಲಿಸಿದ ಈ ಘಟನೆ ನಡೆದದ್ದು ಹೀಗೆ:

ಅಭಂಗ್​ಗಳನ್ನು ರಚಿಸಿದ ಸಂತ ತುಕಾರಾಮನಿಗೆ ಪಂಚಾಯಿತಿ ಕಟ್ಟೆಯಲ್ಲಿ ದೋಷಿ ಎಂದು ತೀರ್ಪು ನೀಡಲಾಗುತ್ತದೆ. ಹಾಗಿದ್ದರೆ ಈ ತಪ್ಪಿಗೆ ಶಿಕ್ಷೆ ಏನು? ತಾನು ಬರೆದ ದೇವರನಾಮ ಸಂಕೀರ್ತನೆಯಾದ ಅಭಂಗ್​ಗಳನ್ನು ನದಿಯ ನೀರಿನಲ್ಲಿ ತೇಲಿ ಬಿಡಬೇಕು. ಸರಿ, ಈ ಭಾಗದ ಚಿತ್ರೀಕರಣ ನಡೆದದ್ದು ಕೊಲ್ಲಾಪುರದ ನದಿಯೊಂದರಲ್ಲಿ. ಅದು ಕೊರೆಯುವ ನೀರಿನ ನದಿ ಪಾತ್ರ. ಅಭಂಗ್​ಗಳನ್ನು ಕೈಲಿ ಹಿಡಿದ ಸಂತ ತುಕಾರಾಮ ಪಾತ್ರಧಾರಿ ರಾಜ್, ಆ ಐಸ್ ವಾಟರ್​ನಂಥ ನದಿ ನೀರಿಗಿಳಿದು ತನ್ಮಯರಾಗಿ ನಿಂತು ಬಿಟ್ಟರು! ಈ ಕಡೆ ನಿರ್ದೇಶಕ ಸುಂದರರಾವ್ ನದಿಯ ದಡದಲ್ಲಿ ನಿಂತು ಚಿತ್ರೀಕರಣ ನೋಡುತ್ತಿರಲಿಲ್ಲ, ಬದಲಿಗೆ ಅಲ್ಲಿ ಸೇರಿದ್ದ ಜನಸ್ತೋಮಕ್ಕೆ ತುಕಾರಾಮನ ಭಕ್ತಿಯ ಪರಾಕಾಷ್ಠೆ ಎಂಥದ್ದೆಂಬುದನ್ನು ವಿವರಿಸುವುದರಲ್ಲಿ ತನ್ಮಯರಾಗಿ ಬಿಟ್ಟರು! ಈ ಇಬ್ಬರ ತನ್ಮಯತೆಯನ್ನು ನೋಡುತ್ತ ಮೈಮರೆತವರೆಂದರೆ, ಛಾಯಾಗ್ರಾಹಕ ಡಿ.ವಿ.ರಾಜಾರಾಂ! ಪರಿಣಾಮ, ಕೊರೆಯುವ ನದಿ ನೀರಿನಲ್ಲಿ ಗಂಟೆಗಟ್ಟಲೆ ನಿಂತಿದ್ದರಿಂದಾಗಿ ರಾಜ್​ಕುಮಾರ್ ದೇಹ ಮರಗಟ್ಟಿದಂತಾಗಿತ್ತು! ತಕ್ಷಣವೇ ಎಚ್ಚೆತ್ತುಕೊಂಡ ಚಿತ್ರತಂಡ ಚಿತ್ರೀಕರಣ ನಿಲ್ಲಿಸಿ

ರಾಜ್​ಕುಮಾರ್ ಅವರಿಗೆ ಉಪಚಾರ ನೀಡುವುದರಲ್ಲಿ ಮಗ್ನವಾಯಿತು. ದೇಹ ಮರಗಟ್ಟುತ್ತಿದ್ದರೂ ತುಟಿ ಪಿಟಕ್ ಅನ್ನದೆ ನಿರ್ದೇಶಕರ ಆಣತಿಗಾಗಿ ಕಾಯುತ್ತಿದ್ದ ರಾಜ್ ಅಭಿನಯದ ತನ್ಮಯತೆಯನ್ನು ಕಂಡು ಚಿತ್ರತಂಡ ಹೊಗಳಿತು.

ಈಗ ಅದೇ ‘ಸಂತ ತುಕಾರಾಮ’ ಚಿತ್ರದ ಮತ್ತೊಂದು ಅವಘಡದ ಕಡೆ ಬರುತ್ತೇನೆ. ಮೊದಲಿನದ್ದು ನೀರಿನ ಅವಘಡವಾದರೆ, ಈಗಿನದ್ದು ಬೆಂಕಿಯ ಅವಘಡ! ಅದೊಂದು ಭಕ್ತಿಯ ಪರಾಕಾಷ್ಠೆಯ ಸನ್ನಿವೇಶದ ಚಿತ್ರೀಕರಣ. ರಾಜ್, ಜೋಳದ ಹೊಲದ ನಡುವೆ ನಿಂತು ‘ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ..’ ಎಂದು ಹಾಡುತ್ತ ಮೈಮರೆಯುತ್ತಾರೆ. ಆಗ ಇದೇ ಸಂದರ್ಭಕ್ಕಾಗಿಯೇ ಹೊಂಚು ಹಾಕಿ ಕಾಯುತ್ತಿದ್ದ ಕೆಲವು ಕುಯುಕ್ತಿಗಳು ಆ ಜೋಳದ ಹೊಲಕ್ಕೆ ಅಗ್ನಿ ಸ್ಪರ್ಶ ಮಾಡುತ್ತಾರೆ. ಒಣಗಿದ ಜೋಳದ ಎಲೆಗಳಿಗೆ ಬೆಂಕಿ ತಾಗಿ ಭೀಕರ ಜ್ವಾಲೆಯಾಗಿ ಸರ›ನೆ ಹರಡಿ ಬಿಡುತ್ತದೆ. ನಿಜವಾಗಿಯೂ ಪಾತ್ರ ಪ್ರವೇಶ ಮಾಡಿದ ರಾಜ್​ಕುಮಾರ್ ಏನಾಗುತ್ತಿದೆ ಎನ್ನುವುದನ್ನೂ ಗಮನಿಸದೇ ಭಕ್ತಿ ಪರವಶರಾಗಿ ನಟಿಸುತ್ತಿದ್ದಾರೆ. ಹರಡಿಕೊಂಡು ಬಂದ ಬೆಂಕಿಯ ಜ್ವಾಲೆ ರಾಜ್ ದೇಹವನ್ನು ರ್ಸ³ಸುತ್ತದೆ. ಅಷ್ಟೇ. ಗಾಬರಿಬಿದ್ದ ಚಿತ್ರತಂಡದ ಸದಸ್ಯರೆಲ್ಲ ಕೊಡಗಟ್ಟಲೆ ನೀರು ಸುರಿದು ಬೆಂಕಿಯನ್ನು ನಂದಿಸುತ್ತಾರೆ. ಇದ್ಯಾವುದರ ಪರಿವೆ ಇಲ್ಲದೆ ಪಾತ್ರದಲ್ಲಿ ತನ್ಮಯರಾಗಿ ನಟಿಸಿದ ರಾಜ್​ಕುಮಾರ್ ಕಣ್ಣು ಬಿಟ್ಟಾಗ ಅರ್ಧ ಹುಬ್ಬು ಬೆಂಕಿಗಾಹುತಿಯಾಗಿತ್ತು. ಜತೆಗೆ ದಪ್ಪ ಮೀಸೆಯ ಅರ್ಧ ಭಾಗ ಬೂದಿಯಾಗಿತ್ತು! ಈ ಬಗ್ಗೆ ನಂತರ ರಾಜ್​ಕುಮಾರ್ ಅವರಲ್ಲಿ ಕೇಳಿದಾಗ ಅವರು ಹೇಳಿದ್ದು; ‘ಆ ಪಾತ್ರವೇ ನನ್ನಲ್ಲಿ ಪರಕಾಯ ಪ್ರವೇಶ ಮಾಡಿತು. ನನ್ನನ್ನು ನಾನೇ ಮರೆತೆ. ಆ ಹೊತ್ತಿನಲ್ಲಿ ನಾನು ರಾಜ್​ಕುಮಾರ್ ಆಗಿರಲಿಲ್ಲ. ಸಾಕ್ಷಾತ್ ತುಕಾರಾಮನಾಗಿದ್ದೆ! ಎಲ್ಲ ಆ ಪಾಂಡುರಂಗನ ದಯೆ. ಪಾತ್ರಕ್ಕೆ ನ್ಯಾಯ ಸಲ್ಲಿಸಿದೆ ಮತ್ತು ಬದುಕಿ ಬಂದೆ…’ ಇನ್ನು, ಈ ಚಿತ್ರದ ನಿರ್ದೇಶಕ ಸುಂದರರಾವ್ ನಾಡಕರ್ಣಿ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಕೊಡುವುದಿದ್ದರೆ, ಅವರು ಹುಟ್ಟಿದ್ದು ಸಾಗರದಲ್ಲಿ. ಆದರೆ ವೃತ್ತಿ ಬದುಕಿಗಾಗಿ ಬಹಳ ವರ್ಷಗಳನ್ನು ಮದ್ರಾಸ್ ಮತ್ತು ಮಹಾರಾಷ್ಟ್ರಗಳಲ್ಲಿ ಕಳೆದದ್ದರಿಂದ ಅವರು ಕನ್ನಡಿಗರ ಪಾಲಿಗೆ ಹೊರಗಿನವರಾಗಿಯೇ ಉಳಿದು ಬಿಟ್ಟರು! ‘ಸಂತ ತುಕಾರಾಮ’ ಅವರು ನಿರ್ದೇಶಿಸಿದ ಮೊಟ್ಟ ಮೊದಲ ಕನ್ನಡ ಚಿತ್ರ. ವೃತ್ತಿ ಬದುಕಿನ ಆರಂಭದ ದಿನಗಳಲ್ಲೇ ದಾದಾ ಸಾಹೇಬ್ ಫಾಲ್ಕೆಯವರ ಸಂಪರ್ಕಕ್ಕೆ ಬಂದುದರಿಂದಾಗಿ ಉತ್ತಮ ತಂತ್ರಜ್ಞರಾಗಿ ಬೆಳೆದರು.

ಗಣೇಶ್ ಪ್ರಸಾದ್ ಮೂವೀಸ್ ಲಾಂಛನದಲ್ಲಿ ಬಿ. ರಾಧಾಕೃಷ್ಣ ನಿರ್ವಿುಸಿದ ‘ಸಂತ ತುಕಾರಾಮ’ ಚಿತ್ರದಲ್ಲಿ ರಾಜ್​ಕುಮಾರ್, ಉದಯಕುಮಾರ್, ಬಾಲಕೃಷ್ಣ, ವಾದಿರಾಜ, ಅಶ್ವತ್ಥ್, ಹನುಮಂತಾಚಾರ್, ಲೀಲಾವತಿ, ಪಂಡರೀಬಾಯಿ, ರಾಜಶ್ರೀ… ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಪ್ರಚಂಡ ಯಶಸ್ಸಿಗೆ ಚಿ. ಉದಯಶಂಕರ್ ಸಂಭಾಷಣೆ ಮತ್ತು ಅವರ ತಂದೆ ಚಿ. ಸದಾಶಿವಯ್ಯ ಅವರ ಗೀತೆಗಳು ಪ್ರಮುಖ ಕಾರಣಗಳು. ಒಟ್ಟು 18 ಹಾಡುಗಳಿದ್ದು, ಇವುಗಳನ್ನು ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಎಲ್.ಆರ್. ಈಶ್ವರಿ, ಪೀಠಾಪುರಂ ನಾಗೇಶ್ವರ ರಾವ್ ಹಾಡಿದ್ದಾರೆ. ಕನ್ನಡದ ಈ ಚಿತ್ರ ಮರಾಠಿಯಲ್ಲೂ ತಯಾರಾಯಿತು. ಇದರಲ್ಲಿ ತುಕಾರಾಮನ ಪಾತ್ರವನ್ನು ಮರಾಠಿಯ ಪ್ರಸಿದ್ಧ ರಂಗಭೂಮಿ ನಟ ವಿಷ್ಣುಪಂತ್ ಪಗನೀಸ್ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *

Back To Top