ಹೇಗಿದ್ದೀರಿ ಕಮಲಮ್ಮಾ?

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶದ ನಾನಾ ಕಡೆಯ ರೈತರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಕೃಷಿ ಮಹಿಳೆಯರಲ್ಲಿ ರಾಮನಗರದ ಕಮಲಮ್ಮ ಅವರೂ ಒಬ್ಬರು. ಹತ್ತೆಕರೆ ಜಮೀನಿನಲ್ಲಿ ಏನೆಲ್ಲ ಬೆಳೆದಿರುವ ಕಮಲಮ್ಮ ಕುಟುಂಬ, ಸಾವಯವ ಮಾದರಿಯಲ್ಲೇ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತ ಸಾಕಷ್ಟು ಆದಾಯ ಪಡೆಯುತ್ತಿದೆ. ಕೃಷಿ ಭೂಮಿಯನ್ನು ತಾತ್ಸಾರ ಮಾಡುವವರ ಕಣ್ತೆರೆಸುವಂತೆ ಬಾಳುತ್ತಿದೆ.

ಮೊದಲೆಲ್ಲ ಏನೂ ಗೊತ್ತಿರ್ಲಿಲ್ಲ ಮೇಡಮ್ಮೋರೆ. ಜಮೀನಿಗೆ ಯಥೇಚ್ಛವಾಗಿ ಯೂರಿಯಾ ಹಾಕ್ತಿದ್ದೆ. ಆಮೇಲೆ ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ಮಣ್ಣು ಪರೀಕ್ಷೆ ಮಾಡಿಸಿದೆ. ಸೂಕ್ಷ್ಮ ಸತ್ವಗಳಾದ ಬೋರಾನ್, ಜಿಪ್ಸಂ ಸೇರಿದಂತೆ ಮಣ್ಣಿಗೆ ಏನು ಬೇಕೋ ಅದನ್ನು ಮಾತ್ರ ನೀಡಬೇಕೆಂದು ಗೊತ್ತಾಯ್ತು. ಅದರಂತೆ ಈಗ ಎಲ್ಲ ಬೆಳೆಯಲ್ಲೂ ಯಶಸ್ವಿಯಾಗಿದ್ದೇವೆ…

ತಮ್ಮ ಸಾವಯವ ಸಾಧನೆಯ ಕುರಿತು ಹೀಗೆ ವಿವರಿಸುತ್ತ ಸಂತೃಪ್ತಿಯ ನಗೆ ಬೀರುತ್ತಾರೆ ರಾಮನಗರದ ಕಮಲಮ್ಮ.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ರೈತರೊಂದಿಗೆ ನಡೆಸಿದ ನೇರ ವಿಡಿಯೋ ಸಂಭಾಷಣೆಯಲ್ಲಿ ‘ಹೇಗಿದ್ದೀರಿ ಕಮಲಮ್ಮಾ?’ ಎಂದು ಪ್ರಶ್ನಿಸಿದ ಕ್ಷಣದಿಂದಲೇ ಈ ಮಹಿಳೆ ಇಡೀ ನಾಡಿನ ಗಮನ ಸೆಳೆಯತೊಡಗಿದರು. ಕೃಷಿ ಕ್ಷೇತ್ರದ ಸಮಸ್ಯೆಗಳು, ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಅರಿಯಲೆಂದೇ ಪ್ರಧಾನಿ ಈ ಮಾತುಕತೆ ನಡೆಸಿದ್ದರು. ರಾಮನಗರದ ಕಮಲಮ್ಮ ಕೂಡ ಇದರಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಕಾರ್ಯಕ್ರಮದ ಮೂಲಕ ಮಾತ್ರ ಅಲ್ಲ, ಜಿಲ್ಲೆಯಲ್ಲೇ ಮೊದಲ ಬಾರಿಗೆ ಕ್ಯಾಪ್ಸಿಕಂ ಬೆಳೆಯುವ ಧೈರ್ಯ ಮಾಡುವ ಮೂಲಕವೂ ಇವರು ಹಿಂದೆ ಗಮನ ಸೆಳೆದಿದ್ದರು. ಹತ್ತೆಕರೆ ಜಮೀನಿನಿಂದ ವಾರ್ಷಿಕ 18-20 ಲಕ್ಷ ರೂ. ಆದಾಯ ಗಳಿಸುತ್ತಿರುವ ಕಮಲಮ್ಮ, ಸರ್ಕಾರದ ಸಹಾಯಧನಗಳು, ಕೃಷಿ ಇಲಾಖೆಯ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಸಮಗ್ರ ಕೃಷಿ ನಡೆಸುತ್ತ ಮಾದರಿಯಾಗಿದ್ದಾರೆ.

ಸದ್ಯ, ಬೆಳೆಯನ್ನು ಬದಲಿಸಿದ್ದಾರೆ. ನಂತರ ಬೀನ್ಸ್ ಬೆಳೆದರು, ಬಳಿಕ ಟೊಮ್ಯಾಟೊ ಬೆಳೆದು ನಷ್ಟ ಅನುಭವಿಸಿದರು. ಈಗ ಹೂವಿನ ನರ್ಸರಿ ಮಾಡಿದ್ದಾರೆ, ಇನ್ನೂ ಗಿಡಗಳನ್ನು ನೆಟ್ಟಿಲ್ಲ. ಇವರು ಬೆಳೆಯುವ ಬಣ್ಣಬಣ್ಣದ ಕ್ಯಾಪ್ಸಿಕಂ ವಿದೇಶಗಳಿಗೆ ರಫ್ತಾಗುತ್ತಿತ್ತು. ಕ್ಯಾಪ್ಸಿಕಂ ಬೆಳೆಗೆ ಮಾರುಕಟ್ಟೆಯ ಸಮಸ್ಯೆ ಎದುರಾಗಿರಲಿಲ್ಲ. ಕೆಂಪು, ಹಸಿರು, ಹಳದಿ ಬಣ್ಣದ ಕ್ಯಾಪ್ಸಿಕಂ ಬೆಳೆದಿದ್ದ ಇವರಿಗೆ ಸ್ಥಳೀಯ ಮಾರುಕಟ್ಟೆಯ ಬಗ್ಗೆಯೂ ಸಾಕಷ್ಟು ಮಾಹಿತಿ ಇದೆ.ಕಮಲಮ್ಮ ತವರು ರಾಮನಗರ ಜಿಲ್ಲೆಯ ಜಾಲಮಂಗಲದ ಅಕ್ಕೂರು ಗ್ರಾಮ. ಮದುವೆಯಾಗಿ ಬಂದಿದ್ದು ಮಾಯಗಾನಹಳ್ಳಿಗೆ. ಪತಿ ಎಂ. ಕೆ. ನಾಗರಾಜಯ್ಯ. ಬೆಂಗಳೂರಿನ ಬಿಇಎಂಎಲ್​ನಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿದ್ದವರು. ಪಟ್ಟಣದ ಬದುಕಿಗೆ ಬೇಸತ್ತು ಊರಿಗೆ ಹೋಗಿ ಕೃಷಿ ಆರಂಭಿಸಿದವರು. ಆರಂಭದಲ್ಲಿ ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಿ, ಬಳಿಕ ಕೃಷಿ ಇಲಾಖೆಯವರ ಮಾರ್ಗದರ್ಶನದೊಂದಿಗೆ ಸಮಗ್ರ ಕೃಷಿ ಆರಂಭಿಸಿದವರು. ‘ಮೊದಲು ಶ್ರೀ ಪದ್ಧತಿ ಭತ್ತದ ಬೇಸಾಯದಿಂದ ಆರಂಭ ಮಾಡಿದ್ದು, ಈಗ ಹತ್ತು ಎಕರೆಯಲ್ಲಿ ವಿಭಿನ್ನ ಕೃಷಿ ಮಾಡುತ್ತಿದ್ದೇವೆ. ಕಳೆದ ವರ್ಷದಿಂದ ರೇಷ್ಮೆಯನ್ನೂ ಬೆಳೆಯುತ್ತಿದ್ದೇವೆ’ ಎನ್ನುತ್ತಾರೆ.

ಅನುಭವವೇ ಆಧಾರ

ಮದುವೆಯಾದಂದಿನಿಂದ ಇಂದಿನವರೆಗೂ ಕಮಲಮ್ಮ ಕೃಷಿಯಲ್ಲಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಸಾವಯವ ಕೃಷಿಯನ್ನು ನೆಚ್ಚಿಕೊಂಡರೆ ಆದಾಯ ಹೆಚ್ಚು ಎನ್ನುವುದನ್ನು ಅನುಭವದಿಂದಲೇ ಅರಿತಿದ್ದಾರೆ. ಯಾವುದೇ ರಾಸಾಯನಿಕ ಬಳಸದೆ ಮಾವು ಬೆಳೆಯುತ್ತಾರೆ. ಹೀಗಾಗಿಯೇ ಇವರ ತೋಟದ ಮಾವಿನ ಹಣ್ಣುಗಳಿಗೆ ಸಾಕಷ್ಟು ಬೇಡಿಕೆ ಇದೆ. ಇದಲ್ಲದೆ, ಸಪೋಟ, ಸೀತಾಫಲ, ಬಾಳೆ, ತೆಂಗು, ರೇಷ್ಮೆಯನ್ನೂ ಬೆಳೆಯುತ್ತ ಲಾಭವನ್ನೇ ಕಂಡಿದ್ದಾರೆ. ಪಾಲಿಹೌಸ್ ಅನ್ನು ವೈಜ್ಞಾನಿಕವಾಗಿ ನಡೆಸುತ್ತಿದ್ದಾರೆ. ಅಲ್ಲಿ ಬೆಳೆಯುವ ಗಿಡಗಳು ಸೂಕ್ಷ್ಮವಾಗಿರುತ್ತವೆ. ಸುರಕ್ಷತೆಗೆ ಏನು ಬೇಕೋ ಎಲ್ಲವನ್ನೂ ತುಂಬ ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ಪತ್ರಿಕೆಗಳಲ್ಲಿ ಬರುವ ಕೃಷಿ ಮಾಹಿತಿಗಳನ್ನು ಓದಿ ಹಾಗೂ ರೇಡಿಯೋ, ಟಿವಿಗಳಲ್ಲಿ ಬರುವ ಕೃಷಿ ಕಾರ್ಯಕ್ರಮಗಳನ್ನು ನೋಡಿನೋಡಿ ಕೃಷಿ ಯೋಜನೆಗಳ ಬಗ್ಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಜಮೀನಿನ ಇಷ್ಟೆಲ್ಲ ಕೆಲಸಗಳ ಮಧ್ಯವೂ ಆಗಾಗ ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆಗಳಿಗೆ ಹೋಗುತ್ತ ವಿವಿಧ ಯೋಜನೆಗಳ ಬಗ್ಗೆ ಅರಿತುಕೊಳ್ಳುತ್ತಾರೆ.

ಓದಿದ್ದು ಹತ್ತನೇ ತರಗತಿ ಎಲ್ಲರಿಗೆ ಮಾರ್ಗದರ್ಶಕಿ!

ಕಮಲಮ್ಮ ಓದಿದ್ದು ಎಸ್​ಎಸ್​ಎಲ್​ಸಿ. ಆದರೆ, ಇವರ ಕೃಷಿ ಜ್ಞಾನ ಎಲ್ಲರನ್ನೂ ಅಚ್ಚರಿಪಡಿಸಬಲ್ಲದು. ಸರ್ಕಾರ ರೂಪಿಸಿರುವ ವಿವಿಧ ಕಾರ್ಯಕ್ರಮಗಳು, ಯೋಜನೆಗಳ ಅಷ್ಟೂ ಪರಿಚಯ, ಅವುಗಳ ಲಾಭ-ನಷ್ಟಗಳ ಲೆಕ್ಕಾಚಾರ ಇವರಿಗೆ ತಿಳಿದಿದೆ. ಹೀಗಾಗಿಯೇ ಇವರಿಂದು ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದು, ರಾಜ್ಯಾದ್ಯಂತ ನಡೆಯುವ ಮಾಹಿತಿ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುತ್ತಾರೆ. ತರಬೇತಿ ನೀಡುತ್ತಾರೆ. ಸಮಗ್ರ ಕೃಷಿಯ ಮಹತ್ವದ ಬಗ್ಗೆ ಪ್ರಬುದ್ಧವಾಗಿ ಮಾತನಾಡುತ್ತಾರೆ. ‘ಸಮಗ್ರ ಕೃಷಿಯಿಂದ ರೈತರು ನಷ್ಟ ಅನುಭವಿಸೋ ಪ್ರಶ್ನೆಯೇ ಬರೋದಿಲ್ಲ. ಒಂದರಲ್ಲಿ ಕಡಿಮೆ ಆದರೆ, ಇನ್ನೊಂದರಲ್ಲಿ ಆದಾಯ ಬರುತ್ತೆ. ಎಲ್ಲ ರೈತರೂ ಸಮಗ್ರ ಕೃಷಿಯನ್ನೇ ಮಾಡಬೇಕು. ಒಂದೇ ಬೆಳೆ ಬೆಳೆಯುವ ಪದ್ಧತಿ ಕೈಬಿಡಬೇಕು’ ಎಂದು ಆಗ್ರಹಿಸುತ್ತಾರೆ.

ಜಿಲ್ಲೆಯಲ್ಲೇ ಮೊದಲಿಗರು

ದೊಡ್ಡ ಮೆಣಸಿನಕಾಯಿಯನ್ನು ರಾಮನಗರದ ಯಾವ ರೈತರೂ ಬೆಳೆಯದಿದ್ದ ಸಮಯದಲ್ಲಿ ಆ ಬೆಳೆ ಹಾಕಿದವರು ಕಮಲಮ್ಮ. ಅದರ ಹಿಂದಿರುವ ಘಟನೆಯನ್ನೂ ಸ್ವಾರಸ್ಯವಾಗಿ ವಿವರಿಸುತ್ತಾರೆ. ‘ಒಮ್ಮೆ ಸಾವಯವ ಕೃಷಿಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರಕ್ಕೆ ಹೋಗಿದ್ದೆ. ಪತ್ರಿಕೆಯಲ್ಲಿ ಆಗಾಗ ಈ ಕುರಿತಂತೆ ಲೇಖನಗಳು ಬರ್ತಾ ಇದ್ದಿದ್ರಿಂದ ಏನು ಅಂತ ತಿಳಿದುಕೊಳ್ಳುವ ಆಸಕ್ತಿ ಇತ್ತು. ಅಲ್ಲಿ ಸಾವಯವ ಕೃಷಿಯ ಮಹತ್ವ ಗೊತ್ತಾಯ್ತು. ಪಾಲಿಹೌಸ್ ಮಾಡಿ ಬೆಳೆದರೆ ಉತ್ತಮ ಲಾಭವಿದೆ, ಇದರಿಂದ ಒಳ್ಳೆಯ ಬೆಳೆ ಬರುತ್ತೆ ಎಂದು ತಿಳಿಯಿತು. ನೋಡಿಯೇ ಬಿಡೋಣ ಎಂದು ಸಣ್ಣ ಪ್ರಮಾಣದಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ, ಕ್ಯಾಪ್ಸಿಕಂ ಬೆಳೆದೆ’ ಎನ್ನುತ್ತಾರೆ. ಆ ಬಳಿಕ, ಕೃಷಿ ಭಾಗ್ಯ ಯೋಜನೆಯಲ್ಲಿ ಪಾಲಿಹೌಸ್, ಕೃಷಿ ಹೊಂಡ, ಎರೆಹುಳು ಘಟಕ ಸ್ಥಾಪನೆ, 4 ಎಕರೆಯಲ್ಲಿ ಬದು ನಿರ್ಮಾಣ ಇತ್ಯಾದಿ ಕಾರ್ಯಗಳಿಗೆ 12 ಲಕ್ಷ ರೂ. ಸಹಾಯಧನ ಪಡೆದರು. ಒಟ್ಟಾರೆ 25 ಲಕ್ಷ ರೂ.ವೆಚ್ಚದ ಈ ಯೋಜನೆಗಾಗಿ ಮಾಡಿದ ಸಾಲವನ್ನು ಮೊದಲ ಕ್ಯಾಪ್ಸಿಕಂ ಬೆಳೆಗೇ ತೀರಿಸಿದ್ದರು. ಮೊದಲ ಬಾರಿಯೇ 18-10 ಟನ್ ಬೆಳೆ ಕೈಗೆ ಬಂದಿತ್ತು.

ನಾವೇ ತಿರುಗಾಡಿ ಎಲ್ಲವನ್ನೂ ತಿಳ್ಕಬೇಕು, ಯಾರೂ ನಾವಿದ್ದಲ್ಲಿಗೇ ಬರಲ್ಲ. ಮನೆಯಲ್ಲೇ ಕೂತಿದ್ರೆ ಏನೂ ಗೊತ್ತಾಗಲ್ಲ.

| ಕಮಲಮ್ಮ ಸಾವಯವ ಕೃಷಿ ಮಹಿಳೆ