Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕಳ್ಳನ ಹಿಡಿದ್ರು… ಮಗನನ್ನೂ ಕೊಟ್ರು!

Sunday, 09.09.2018, 3:02 AM       No Comments

| ವಸುಂಧರಾ ಹೆಗಡೆ ಮೈಸೂರು

ಸಾಗರದಾಚೆಗಿನ ಸುಂದರ ಅಂಡಮಾನ್ ದ್ವೀಪ ನೋಡಬೇಕೆನ್ನುವ ಬಹುದಿನಗಳ ಕನಸು ನನಸಾಗಿತ್ತು. ಅಂಚೆ ಕಚೇರಿಯಲ್ಲಿಯೇ ನನ್ನ ಜೊತೆ ಕೆಲಸ ಮಾಡುತ್ತಿರುವ ಹತ್ತು ಜನ ಗೆಳತಿಯರ ಜೊತೆ ಚೆನ್ನೈನಿಂದ ಪೋರ್ಟ್​ಬ್ಲೇರ್ ತಲುಪಿ ನಂತರ ನಮ್ಮ ವೇಳಾಪಟ್ಟಿಯಂತೆ ಸಮುದ್ರಿಕಾ ಮ್ಯೂಸಿಯಂ, ಅಂಡಮಾನ್ ಸೆಲ್ಯುಲರ್ ಜೈಲ್, ರೋಸ್ ಐಲ್ಯಾಂಡ್, ಬಾರಾ ಟಾಂಗ್, ಹ್ಯಾವ್​ಲಾಕ್​ನ ರಾಧಾನಗರ ಬೀಚ್ ಮುಂತಾದ ಹಲವು ಮನಸೂರೆಗೊಳ್ಳುವ ಸ್ಥಳಗಳನ್ನು ನೋಡಿ ಹಿಂದಿರುಗಿ ಪೋರ್ಟ್ ಬ್ಲೇರ್​ನಿಂದ ಚೆನ್ನೈಗೆ ವಿಮಾನದಲ್ಲಿ ಬಂದಿಳಿದೆವು. ಅಂದು ರಾತ್ರಿ ಚೆನ್ನೈನಿಂದ ಮೈಸೂರಿಗೆ ಟ್ರೇನ್ ಇದ್ದಿದ್ದರಿಂದ ಚೆನ್ನೈನಲ್ಲಿಯೇ ಒಂದೆರಡು ಕಡೆ ಸುತ್ತಾಡಿ ರಾತ್ರಿ ಟ್ರೇನ್ ಹತ್ತಿದೆವು.

ನನ್ನ ಕಥೆ ಶುರುವಾಗಿದ್ದು ಈ ಟ್ರೇನ್​ನಲ್ಲಿ. ಬೆಳಗ್ಗೆ ಮೈಸೂರು ರೈಲ್ವೇ ನಿಲ್ದಾಣದಲ್ಲಿ ಇಳಿಯುವಾಗಲೇ ಗೊತ್ತಾಗಿದ್ದು ಯಾರೋ ನನ್ನ ಪುಟ್ಟ ಬ್ಯಾಗನ್ನು ಎಗರಿಸಿದ್ದರು. ಎಲ್ಲೀ ಅಂತ ಹುಡುಕುವುದು, ಅದರ ಆಸೆ ಬಿಟ್ಟೇ ಬಿಟ್ಟಿದ್ದೆ.

ಪ್ಲಾಟ್​ಫಾಮ್ರ್ ಮೇಲೆ ಇಳಿಯುತ್ತಿದ್ದಂತೆ ಯಾರೋ ಒಬ್ಬ ಅಂಕಲ್, 20ರ ಆಸುಪಾಸಿನ ಯುವಕನ ಹಿಂದೆ ಓಡುತ್ತಿದ್ದರು. ‘ಕಳ್ಳ , ಕಳ್ಳ ಹಿಡಿಯಿರಿ, ಹೆಲ್ಪ್…’ ಎಂದು ಕೂಗುತ್ತ ಅಟ್ಟಿಸಿಕೊಂಡು ಹೋಗುತ್ತಿದ್ದರು. ಆ ಕಳ್ಳನನ್ನು ನೋಡಿದರೆ ನನ್ನ ಪುಟ್ಟ ಬ್ಯಾಗು ಅವನ ಕೈಯಲ್ಲಿ! ಅಬ್ಬಾ… ಅಚ್ಚರಿಯಾಯಿತು.

ಕಣ್ಣಮುಂದೇ ಇರುವ ಬ್ಯಾಗನ್ನು ಪಡೆಯಲು ಪ್ರಯತ್ನ ಮಾಡದಿದ್ದರೆ ಹೇಗೆ? ನಾನೂ ಆ ಅಂಕಲ್ ಹಿಂದೆನೇ ಓಡಿದೆ. ಆ ಕಳ್ಳನೋ ರೇಸ್​ನಲ್ಲಿ ಓಡುವಂತೆ ಓಡುತ್ತಿದ್ದ. ನನ್ನ ಬ್ಯಾಗನ್ನು ನೋಡುತ್ತಿದ್ದಂತೆ ನನಗೆ ಅದೆಲ್ಲಿಂದ ಶಕ್ತಿ ಬಂತೋ ನಾ ಕಾಣೆ… ಇದ್ದೆಲ್ಲಾ ಶಕ್ತಿ ಕೂಡಿಹಾಕಿ ‘ಕಳ್ಳ , ಕಳ್ಳ’ ಎಂದು ಓಡಿದೆ. ನನ್ನ ಗೆಳತಿಯರೂ ನನ್ನ ಹಿಂದೆ ಓಡಿದರು.

ಅಂತೂ ಇಂತೂ ಆ ಅಂಕಲ್ ಕಳ್ಳನನ್ನು ಹಿಡಿದೇ ಬಿಟ್ಟರು. ಆತನನ್ನು ಚೆನ್ನಾಗಿ ಅವರು ಒದೆಯುತ್ತಿದ್ದಾಗ ನಾವು ಅಲ್ಲಿ ತಲುಪಿದೆವು.

ನನ್ನ ಬ್ಯಾಗ್ ನನ್ನ ಕೈಸೇರಿತು. ನನಗಾದ ಖುಷಿ ಅಷ್ಟಿಷ್ಟಲ್ಲ. ಆ ಬ್ಯಾಗ್ ಸಲುವಾಗಿ ಅಂಕಲ್ ಓಡಿದ್ದಿರಬಹುದೆಂದುಕೊಂಡು, ‘ತುಂಬಾ ಥ್ಯಾಂಕ್ಸ್ ಸರ್…’ ಎಂದೆ. ಅದಕ್ಕವರು ಪ್ರಶ್ನಾರ್ಥಕವಾಗಿ ನೋಡಿದಾಗ, ‘ನನ್ನ ಬ್ಯಾಗ್ ಕದ್ದ ಕಳ್ಳನನ್ನು ಹಿಡಿದು ನನಗೆ ಸಹಾಯ ಮಾಡಿದ್ದೀರಿ’ ಎಂದೆ. ಅದಕ್ಕವರು, ‘ನಿಮ್ಮ ಬ್ಯಾಗಾ?’ ಅಂದರು. ‘ಈ ಖದೀಮ ನನ್ನ ಬೆಲೆಬಾಳುವ ಕ್ಯಾಮರಾ ಕದ್ದು ಓಡುತ್ತಿದ್ದ. ಅದಕ್ಕಾಗಿ ನಾನು ಅವನನ್ನು ಅಟ್ಟಿಸಿಕೊಂಡು ಬಂದೆ’ ಎಂದರು!

ಅದನ್ನು ಕೇಳಿ ಒಂದು ಕ್ಷಣ ಗಲಿಬಿಲಿಯಾದರೂ ಮರುಕ್ಷಣ ಸಾವರಿಸಿಕೊಂಡು ಮತ್ತೊಮ್ಮೆ ‘ಧನ್ಯವಾದಗಳು ಸರ್’ ಎಂದು ನಡೆದ ವಿಷಯ ಹೇಳಿದೆ.

ಕೊನೆಗೆ ಎಲ್ಲರೂ ಸೇರಿ ಆ ಕಳ್ಳನನ್ನು ರೈಲ್ವೆ ಪೊಲೀಸರಿಗೆ ಹಿಡಿದುಕೊಟ್ಟಾಗ ದೊಡ್ಡ ಯುದ್ಧವನ್ನು ಜಯಿಸಿದಂತಾಗಿತ್ತು.

ಆ ಅಂಕಲ್ ನನ್ನನ್ನು ನಮ್ಮ ಮನೆಯವರೆಗೆ ತಲುಪಿಸಿ ಅಪ್ಪ-ಅಮ್ಮನಿಗೆ ಎಲ್ಲಾ ಕಥೆಯನ್ನು ಹೇಳಿದರು. ಮನೆಯವರಿಂದ ಮಂಗಳಾರತಿಯೂ ಆಯಿತು.

ಇಷ್ಟೇ ಅಲ್ಲ… ಕೊನೆಗೆ ಆ ಅಂಕಲ್ ಮಗನ ಜೊತೆ ನನ್ನ ಮದುವೆಯೂ ಆಯಿತು! ಬ್ಯಾಗು ಸಿಗುವಂತೆ ಮಾಡಿದ್ದ ಅಂಕಲ್ ಈಗ ನನ್ನ ಮಾವ.

Leave a Reply

Your email address will not be published. Required fields are marked *

Back To Top