Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸಾಲಿಗ್ರಾಮ ಮೇಳ ಸುವರ್ಣ ಹೆಜ್ಜೆ

Sunday, 09.09.2018, 3:03 AM       No Comments

ಯಕ್ಷಗಾನ ರಂಗಕ್ಕೆ ಅತ್ಯುತ್ತಮ ಕಲಾವಿದರನೇಕರನ್ನು ಕೊಟ್ಟ ಕೀರ್ತಿ ಸಾಲಿಗ್ರಾಮ ಯಕ್ಷಗಾನ ಮೇಳಕ್ಕಿದೆ. ಅನೇಕ ಪ್ರಸಿದ್ಧರು ಗೆಜ್ಜೆ ಕಟ್ಟಿದ್ದು, ಪ್ರಸಿದ್ಧಿಗೆ ಬಂದಿದ್ದು ಈ ಮೇಳದಿಂದಲೇ. ಅನೇಕ ಏಳು ಬೀಳುಗಳನ್ನು ಕಾಣುತ್ತ ಸಾಗಿಬಂದ ಈ ಮೇಳಕ್ಕೀಗ ಸುವರ್ಣ ಸಂಭ್ರಮ. ಯಕ್ಷಗಾನ ಮೇಳವೊಂದು ಅರ್ಧಶತಮಾನ ಪೂರೈಸಿತು ಎಂದರೆ ಅದು ಆ ಮೇಳದ ಸಾಧನೆ ಮಾತ್ರವಲ್ಲ, ಯಕ್ಷಗಾನಪ್ರಿಯರ, ಕಲಾವಿದರ, ಪ್ರೇಕ್ಷಕರ ಸಾಧನೆ ಕೂಡ. ಈ ಮೇಳ ಸಾಗಿ ಬಂದ ಕುತೂಹಲಕಾರಿ ಹಾದಿಯನ್ನೊಮ್ಮೆ ಸ್ಥೂಲವಾಗಿ ನೆನಪಿಸುವ ಪ್ರಯತ್ನವಿದು.

| ರಾಜಶೇಖರ ಜೋಗಿನ್ಮನೆ

ಯಕ್ಷಗಾನವೆಂದರೆ ಅನೇಕ ಕಲಾವಿದರು ನೆನಪಾಗುತ್ತಾರೆ. ನಾರಣಪ್ಪ ಉಪ್ಪೂರು, ಕಾಳಿಂಗ ನಾವಡ, ವೀರಭದ್ರ ನಾಯ್ಕ, ಐರೋಡಿ ಗೋವಿಂದಪ್ಪ, ಕುಮಟಾ ಗೋವಿಂದ ನಾಯ್ಕ, ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶರಾವ್… ಹೀಗೆ ಯಕ್ಷಲೋಕದ ಧ್ರುವತಾರೆಯರ ಪಟ್ಟಿಯೇ ಸಿಗುತ್ತದೆ. ಇವರೆಲ್ಲ ಬೇರೆ ಬೇರೆ ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಪಾತ್ರಧಾರಿಗಳಾಗಿ ಹೆಸರು ಮಾಡಿದವರಾದರೂ ಅವರೆಲ್ಲ ಒಂದೇ ಮೇಳದ ಕುಡಿಗಳು ಎಂಬುದು ಅಚ್ಚರಿಯ ಹಾಗೂ ಅಭಿಮಾನದ ಸಂಗತಿ.

ಹೌದು, ಅವರೆಲ್ಲ ಸಾಲಿಗ್ರಾಮದ ಗುರುಪ್ರಾಸಾದಿತ ಯಕ್ಷಗಾನ ಮಂಡಳಿಯ ರಂಗಸ್ಥಳದಲ್ಲಿ ಮಿಂಚು ಹರಿಸಿದವರು. ನಿರಂತರವಾಗಿ ಯಕ್ಷಗಾನ ಕ್ಷೇತ್ರಕ್ಕೆ ಕಲಾವಿದರನ್ನು ನೀಡುತ್ತಲೇ ಬಂದ ಆ ಮೇಳಕ್ಕೀಗ 50 ವರ್ಷ. ಯಕ್ಷಗಾನ ಕ್ಷೇತ್ರದಲ್ಲಿ ವೃತ್ತಿ ಮೇಳಗಳ ಹುಟ್ಟಿಗೆ ಬಹುಶಃ ಯಾವಾಗಲೂ ಕೊರತೆಯಾಗಲಿಲ್ಲ. ಮೇಳಗಳು ಹುಟ್ಟುವುದು, ಒಂದಷ್ಟು ವರ್ಷ ಪ್ರೇಕ್ಷಕರನ್ನು ರಂಜಿಸಿ ತೆರೆಯ ಮರೆಗೆ ಸರಿಯುವುದು, ಅಲ್ಲಿದ್ದ ಕಲಾವಿದರನ್ನು ಸಂಘಟಿಸಿ ಇನ್ನೊಬ್ಬ ಕಲಾಪ್ರಿಯರು ಹೊಸ ಮೇಳ ಕಟ್ಟುವುದು, ಅದೂ ಕೆಲಕಾಲದಲ್ಲೇ ಮುಚ್ಚಿಹೋಗುವುದೆಲ್ಲ ಅಲ್ಲಿ ಸಹಜ ಸಂಗತಿ. ಆದರೆ ಸುದೀರ್ಘ ಕಾಲ ನಿರಂತರವಾಗಿ ನಡೆದುಕೊಂಡ ಬಂದ ಯಕ್ಷಗಾನ ಮೇಳಗಳ ಸಂಖ್ಯೆ ಮಾತ್ರ ವಿರಳಾತಿ ವಿರಳ. ಅಂಥ ವಿರಳ ಮೇಳಗಳ ಸಾಲಲ್ಲಿ ನಿಲ್ಲುವುದು ಬಡಗುತಿಟ್ಟಿನ ಸುಪ್ರಸಿದ್ಧ ಸಾಲಿಗ್ರಾಮ ಮೇಳ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಲಿಗ್ರಾಮ ಒಂದು ಪುಣ್ಯಕ್ಷೇತ್ರ. ಈ ಕ್ಷೇತ್ರದ ಮಹಿಮೆಯೋ ಮೇಳದ ವ್ಯವಸ್ಥಾಪಕರ ತಾಳ್ಮೆ, ಜಾಣ್ಮೆಯೋ ಅಂತೂ ಸಾಲಿಗ್ರಾಮ ಮೇಳದ ಐವತ್ತನೇ ವರ್ಷದ ತಿರುಗಾಟ ಈಗ ನಡೆಯುತ್ತಿದೆ. ಯಕ್ಷಗಾನ ಇತಿಹಾಸದ ಪುಟಗಳಲ್ಲಿ ಒಂದು ಮುಖ್ಯ ದಾಖಲೆಯಾಗಿ ಸೇರುತ್ತಿದೆ.

ಆರಂಭ: ಈ ಮೇಳವನ್ನು ಆರಂಭಿಸಿದವರು ಕೋಟದ ಯಜಮಾನ ಶ್ರೀಧರ ಹಂದೆ ಅವರು. ಆರಂಭಗೊಂಡ ಮಾರನೇ ವರ್ಷವೇ ಪಳ್ಳಿ ಸೋಮನಾಥ ಹೆಗ್ಡೆಯವರ ಸುಪರ್ದಿಗೆ ಬಂದ ಈ ಮೇಳ ಖ್ಯಾತಿಯ ಮಟ್ಟವನ್ನು ಕಾಯ್ದುಕೊಂಡೇ ಇಷ್ಟೂ ವರ್ಷಗಳ ಕಾಲ ಸಾಗಿಬಂದಿದೆ. ಸಾಲಿಗ್ರಾಮ ಮೇಳ ಆರಂಭವಾದ ದಿನಗಳು ಯಕ್ಷಗಾನ ಕಲಾಸಕ್ತ ಹಿರಿಯರ ನೆನಪಲ್ಲಿ ಇಂದಿಗೂ ಹಸಿರಾಗಿದೆ. ಆಗ ನಡೆಯುತ್ತಿದ್ದ ‘ಸಮಗ್ರಭೀಷ್ಮ’ ಆಖ್ಯಾನ ತಿರುಗಾಟದುದ್ದಕ್ಕೂ ಪ್ರದರ್ಶಿತವಾಯಿತಂತೆ. ಅಲ್ಲಿದ್ದ ಪಾತ್ರಧಾರಿಗಳ ಯಾದಿಯಲ್ಲೊಮ್ಮೆ ಇಣುಕಿದರೆ ನಾವು ದಂಗಾಗುತ್ತೇವೆ. ಸಮಗ್ರ ಭೀಷ್ಮ ಆಖ್ಯಾನದಲ್ಲಿ ವೀರಭದ್ರ ನಾಯ್ಕರ ಶಂತನು, ಶಿರಿಯಾರ ಮಂಜು ನಾಯ್ಕರ ದೇವವ್ರತ, ಕುಂಜಾಲು ರಾಮಕೃಷ್ಣರ ಕಂದರ, ಕೆರೆಮನೆ ಮಹಾಬಲ ಹೆಗಡೆ ಭೀಷ್ಮ, ಶಂಭು ಹೆಗಡೆ ಸಾಲ್ವ, ಗಜಾನನ ಹೆಗಡೆಯವರ ಅದ್ವಿತೀಯ ಅಂಬೆ. ದೊಡ್ಡ ಸಾಮಗರ ಪರಶುರಾಮ, ವೀರಭದ್ರ ನಾಯ್ಕರ ಪರ್ವದ ಭೀಷ್ಮ, ಬೆಲ್ತೂರು ರಮೇಶರ ಕೃಷ್ಣ, ಹೆರಂಜಾಲು ವೆಂಕಟರಮಣರ ಯೋಜನಗಂದಿ, ಹಾರಾಡಿ ಮಹಾಬಲ ಗಾಣಿಗರ ಕಿರಾತನ ವೇಷ… ಇರುತ್ತಿತ್ತೆಂದರೆ ಆ ಪ್ರಸಂಗಕ್ಕೆ ದಿನವೂ ಪ್ರೇಕ್ಷಕರು ಮುಗಿಬೀಳುತಿದ್ದರು ಎಂಬ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣುವುದಿಲ್ಲ.

ಇನ್ನೊಂದು ವರ್ಷದ ತಿರುಗಾಟದಲ್ಲಿ ವೀರಭದ್ರ ನಾಯ್ಕರು ರಚಿಸಿದ ಬೇಡರ ಕಣ್ಣಪ್ಪ ಮನಸೂರೆಗೊಂಡಿತು. ಬಡಗಿನ ಕಲಾವಿದರಾದ ನಾಯ್ಕರು, ಅರಾಟೆ ಮಂಜುನಾಥ ಮತ್ತು ಸಾಮಗರ ಅಭಿನಯದಿಂದ ರಂಜಿಸಿದರೆ, ಅದರೊಂದಿಗೆ ಆಡುತಿದ್ದ ಚಂದ್ರಹಾಸ ಪ್ರಸಂಗ ಬಡಾಬಡಗಿನ ಕೆರೆಮನೆ ಕಲಾವಿದರ ಅಭಿನಯದಿಂದ ಪ್ರೇಕ್ಷಕರು ಹುಚ್ಚೆದ್ದು ಬರುವ ಹಾಗಾಯಿತು.

ನೋವು ನಲಿವುಗಳ ಮಿಶ್ರಣ

ಸಾಲಿಗ್ರಾಮ ಮೇಳ ಸಾಗಿಬಂದ ಹಾದಿಯೇನೂ ಸುಲಲಿತವಾಗಿರಲಿಲ್ಲ. ಒಮ್ಮೆ ಮೆರೆದರೆ ಇನ್ನೊಮ್ಮೆ ಮರುಗುವ ಕ್ಷಣಗಳು ಬಂದಿವೆ. ಆದರೆ ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿದ ಸಾಲಿಗ್ರಾಮ ಮೇಳಕ್ಕೆ ಯಶಸ್ಸಿನೊಂದಿಗೆ ಮಾನಸಿಕ ಸ್ಥೈರ್ಯ ಕುಂದಿಸುವ ಘಟನೆಗಳೂ ಆ ಕಾಲದಲ್ಲಿ ನಡೆದವು. ಶಿರಿಯಾರ ಮಂಜು ನಾಯ್ಕರು ರಂಗಸ್ಥಳದಲ್ಲೇ ಅಸ್ತಂಗತರಾದುದು, ಕಾಳಿಂಗ ನಾವಡರ ಅಕಾಲಿಕ ಮರಣ ಮತ್ತು ಮೇಳದ ಲಾರಿ ಅಪಘಾತಕ್ಕೀಡಾಗಿ ಪ್ರಾಣನಷ್ಟದೊಂದಿಗೆ ಆರ್ಥಿಕ ಸಂಕಷ್ಟ ಉಂಟಾಗಿದ್ದೆಲ್ಲ ಮೇಳದ ಕಹಿ ನೆನಪುಗಳು. ಆದರೆ ಸೋಮನಾಥ ಹೆಗ್ಡೆ ಹಾಗೂ ಕಿಶನ್ ಹೆಗ್ಡೆಯವರು ಈ ಘಟನೆಗಳ ಪರಿಣಾಮ ಮೇಳದ ಮೇಲೆ ಬೀಳದ ಹಾಗೆ ಚಾಕಚಕ್ಯತೆಯಿಂದ ನಿಭಾಯಿಸಿದರು. ಸೋಮನಾಥ ಹೆಗ್ಡೆಯವರು ಮಂದಾರ್ತಿ ಮೇಳವನ್ನೂ ಮುನ್ನಡೆಸಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ನಾರಾಯಣ ಶಬರಾಯ. ಹುಂಚದಕಟ್ಟೆ ಶ್ರೀನಿವಾಸ ಅಚಾರ್, ಕೆಮ್ಮಣ್ಣು ಆನಂದ ,ಮಂದಾರ್ತಿ ರಾಮಕೃಷ್ಣ ಮೊದಲಾದ ಅನೇಕರು, ಕೆರೆಮನೆಯ ಎಲ್ಲ ಕಲಾವಿದರು, ಚಿಟ್ಟಾಣಿ ಕಲಾವಿದರು, ಜಲವಳ್ಳಿ, ಗೋವಿಂದ ನಾಯ್್ಕ ಬಳ್ಕೂರು ಕೃಷ್ಣ ಯಾಜಿ, ಕೊಂಡದಕುಳಿ, ಭಾಸ್ಕರ ಜೋಶಿ, ವಿಷ್ಣು ಭಟ್, ವಿದ್ವಾನ್ ಗಣಪತಿಭಟ್, ಕೊಳಗಿ ಕೇಶವ ಹೆಗಡೆ, ತೆಂಕುಬಡಗಿನ ಸವ್ಯಸಾಚಿಗಳಾದ ಸಾಮಗ ಕುಟುಂಬದವರು, ಸಿದ್ದಕಟ್ಟೆದ್ವಯರು, ತೀರ್ಥಳ್ಳಿ ಗೋಪಾಲಾಚಾರ್, ಬೇಗಾರು ಪದ್ಮನಾಭ, ಕಣ್ಣೀಮನೆ ಗಣಪತಿ ಭಟ್ ಸೇರಿ ಇನ್ನೂ ಅನೇಕ ಪ್ರಸಿದ್ಧರು ಈ ಮೇಳದಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಾಲಿಗ್ರಾಮ ಮೇಳದ ಸಾಧನೆಯಲ್ಲಿ ಅದರ ಸಂಸ್ಥಾಪಕ ಯಜಮಾನ ಪಾರಂಪಳ್ಳಿ ಶ್ರೀಧರ ಹಂದೆ, ನಂತರ ಸುಮಾರು 16 ವರ್ಷ ಮೇಳವನ್ನು ಮುನ್ನಡೆಸಿದ ಪಳ್ಳಿ ಸೋಮನಾಥ ಹೆಗ್ಡೆ, ಆ ಬಳಿಕ ಸಾರಥ್ಯ ವಹಿಸಿಕೊಂಡಿರುವ ಸೋಮನಾಥ ಹೆಗ್ಡೆಯವರ ಪುತ್ರ ಪಿ. ಕಿಷನ್ ಹೆಗ್ಡೆಯವರ ಕೊಡುಗೆ ಉಲ್ಲೇಖಾರ್ಹ. ಸಾಲಿಗ್ರಾಮದ ಪ್ರಥಮ ದೇವರಸೇವೆಯ ಮರುದಿನ ಪ್ರಥಮ ಡೇರೆ ಮೇಳದ ಆಟ ಶಿರಿಯಾರದಲ್ಲಿ ನಡೆಯುತ್ತಿರುವುದು, ಯಕ್ಷಗಾನದ ಇತಿಹಾಸದಲ್ಲೇ ಪ್ರಥಮ ಎಂಬಂತೆ ಮೇಳದ ಯಜಮಾನರೊಬ್ಬರು ಮೇಳದ ಕಲಾವಿದನ ಸ್ಮರಣೆಗಾಗಿ ಪ್ರಶಸ್ತಿ ನೀಡುತ್ತಿರುವುದು ಸಹ ಸಾಲಿಗ್ರಾಮ ಮೇಳದ ಇನ್ನೊಂದು ವಿಶೇಷತೆ. ಮೇಳದ ಪ್ರಥಮ ಜಾತ್ರೆ ಆಟ ಕೋಟೇಶ್ವರ ಜಾತ್ರೆಯಲ್ಲೂ ಕೊನೆಯ ಜಾತ್ರೆ ಆಟ ಪಾದೆಮಠದಲ್ಲೂ ನಡೆಯುತ್ತಿರುವುದು ಲಾಗಾಯ್ತಿನಿಂದಲೂ ಬಂದ ಸಂಪ್ರದಾಯ.

ಇತಿಹಾಸ: ಸುಮಾರು ಅರವತ್ತರ ದಶಕದ ಕೊನೆಯ ಭಾಗದಲ್ಲಿ ಪಾರಂಪಳ್ಳಿಯ ಶ್ರೀಧರ ಹಂದೆಯವರು ಬಡಗುತಿಟ್ಟಿನ ಪ್ರಥಮ ಡೇರೆ ಮೇಳವಾಗಿ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಹೆಸರಿನಲ್ಲಿ ಹೊರಡಿಸಿದರು. ಮೇಳದಿಂದ ಕ್ಷೇತ್ರದ ಹೆಸರು ಪರವೂರ ಭಕ್ತರಿಗೂ ತಲುಪಿತು. ಹಂದೆಯವರು ಸ್ನೇಹಿತರಾದ ಪಳ್ಳಿ ಸೋಮನಾಥ ಹೆಗ್ಡೆಯವರಿಂದ ಸಾಗಾಟಕ್ಕಾಗಿ ಲಾರಿಯನ್ನು ಪಡೆದಿದ್ದರು. ಆದರೆ ಮುಂದಿನ ವರ್ಷದಲ್ಲಿ ಮೇಳ ಅನಿವಾರ್ಯವಾಗಿ ಹೆಗ್ಡೆಯವರ ಕೈಗೆ ಬಂತು.ಉತ್ತರ ಕನ್ನಡದ ಖ್ಯಾತನಾಮರನೇಕರನ್ನು ದಕ್ಷಿಣಕನ್ನಡಕ್ಕೆ ಪ್ರಥಮವಾಗಿ ಪರಿಚಯಿಸಿದ ಕೀರ್ತಿ ಸಾಲಿಗ್ರಾಮ ಮೇಳದ್ದು.

1978ರಲ್ಲಿ ಕಾಳಿಂಗ ನಾವಡರು ಸಾಲಿಗ್ರಾಮ ಮೇಳದ ಭಾಗವತರಾಗಿ ಸೇರ್ಪಡೆಗೊಂಡರು. ಅಲ್ಲಿಂದ ಹೋದಲ್ಲೆಲ್ಲ ಮೇಳ ಜಯಭೇರಿ ಬಾರಿಸಿತ್ತು. ಹಲವಾರು ಹೊಸ ಪ್ರತಿಭೆಗಳು ನಾವಡರ ಸಹಕಾರದಿಂದ ಬೆಳಕಿಗೆ ಬಂದವು. ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲದೆ ಶಿವಮೊಗ್ಗ, ಬೆಂಗಳೂರು, ದೆಹಲಿಯಲ್ಲಿಯೂ ಮೇಳ ಮನೆಮಾತಾಯಿತು. 1986ರಲ್ಲಿ ಹೆಗ್ಡೆಯವರು ವಿಧಿವಶರಾದರು. 1987ರನಂತರ ನಿರಂತರ ಸುಮಾರು 30 ವರ್ಷ ಮೇಳವನ್ನು ಕಳೆಗುಂದದ ಹಾಗೆ ಮುನ್ನಡೆಸಿದ ಕೀರ್ತಿ ಕಿಶನ್ ಹೆಗ್ಡೆಯವರಿಗೆ ಸಲ್ಲಬೇಕು. ತಂದೆ ಸಾಲಿಗ್ರಾಮ, ಮಂದಾರ್ತಿ ಎರಡೇ ಮೇಳ ನಡೆಸಿದರೆ ಮಗ ಅದರ ನಾಲ್ಕುಪಟ್ಟು ಅಂದರೆ ಸುಮಾರು ಎಂಟು ಮೇಳ ನಡೆಸಿದ್ದಾರೆ. ಸದ್ಯ ನಾಲ್ಕು ಮೇಳದ ಯಜಮಾನರು. ತಿಟ್ಟು, ಮಟ್ಟು, ಜಾತಿ, ಪಂಗಡ ಎಂಬ ಭೇದವಿಲ್ಲದೆ ಅನೇಕ ಯುವ ಪ್ರತಿಭಾವಂತ ಕಲಾವಿದರನ್ನು ಸೇರಿಸಿಕೊಂಡು ಮೇಳಕ್ಕೆ ಇನ್ನಷ್ಟು ಹೊಸ ಹೊಸ ಪ್ರೇಕ್ಷಕರು ಮತ್ತು ಅಭಿಮಾನಿಗಳನ್ನು ಹುಟ್ಟು ಹಾಕಿದ್ದಾರೆ.

ಖ್ಯಾತ ಪಾತ್ರಗಳ ಹೊಸಹುಟ್ಟು

ಕುಮಟಾ ಗೋವಿಂದ ನಾಯ್ಕರ ಶಕಾರ, ಆರಾಟೆಯವರ ವಸಂತಸೇನೆ, ಶಿರಿಯಾರ ಮಂಜುನಾಯ್ಕರ ಚಾರುದತ್ತ, ಮೂರೂರು ದೇವರು ಹೆಗಡೆಯವರ ಮೈತ್ರೇಯ ಪಾತ್ರದಿಂದ ಅತ್ಯುತ್ತಮ ಐತಿಹಾಸಿಕ ನಾಟಕ ‘ಮೃಚ್ಛ ಕಟಿಕ’ ಯಕ್ಷಗಾನದಲ್ಲಿ ಜಯಭೇರಿ ಬಾರಿಸಿದ್ದು ಅದೇ ಕಾಲದಲ್ಲಿ. ಸೀತಾನದಿ ಗಣಪಯ್ಯ ಶೆಟ್ಟಿಯವರ ವೀರ ವಜ್ರಾಂಗ ಅಂದಿನ ಇನ್ನೊಂದು ಯಶಸ್ವಿ ಪ್ರಸಂಗ. ಐರೋಡಿ ಗೋವಿಂದಪ್ಪನವರ ಕರ್ಣ ಮತ್ತು ಕುಮಟಾ ಗೋವಿಂದ ನಾಯ್ಕರ ಹನುಮಂತ ಡೇರೆಮೇಳದಲ್ಲಿ ವಿಜೃಂಭಿಸತೊಡಗಿದ್ದು ಕೂಡ ಆಗಲೇ. ಇದೇ ಸಮಯದಲ್ಲಿ ಡಾ. ವೈ ಚಂದ್ರಶೇಖರ ಶೆಟ್ಟರು ಪ್ರಸಂಗಕರ್ತರಾಗಿ ಮಹಾಸತಿ ಮಂಗಳಸಹಿತ ಅನೇಕ ಪ್ರಸಂಗಗಳನ್ನು ಮೇಳಕ್ಕೆ ನೀಡಿದರು.

ಕಾಳಿಂಗ ನಾವಡರೆಂಬ ಮಾಂತ್ರಿಕ

ಯಕ್ಷಗಾನ ಭಾಗವತಿಕೆಗೊಂದು ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಕಾಳಿಂಗ ನಾವಡರು ಸಾಲಿಗ್ರಾಮ ಮೇಳದಲ್ಲಿ್ಲುೕ ಖ್ಯಾತಿಯ ಉತ್ತುಂಗಕ್ಕೇರಿದರು. ಎಂಬತ್ತರ ದಶಕದಲ್ಲಿ ಕಾಳಿಂಗ ನಾವಡ ಮತ್ತು ಜಲವಳ್ಳಿ ವೆಂಕಟೇಶ ರಾಯರ ವಿಜೃಂಭಣೆಯ ಕಾಲ. ಮೂರು ವರ್ಷ ರಂಗದಲ್ಲಿ ಮೆರೆದ ಕಾಳಿಂಗ ನಾವಡರ ‘ನಾಗಶ್ರೀ’ ಕ್ರಾಂತಿಯನ್ನೇ ಮಾಡಿದ ಪ್ರಸಂಗ. ಇಂದಿಗೂ ಮಹಿಳೆಯರು, ಮಕ್ಕಳು, ಸುಶಿಕ್ಷಿತರು ಯಕ್ಷಗಾನ ನೋಡುವಂತಾಗಲು ಆಗಿನ ಸಾಲಿಗ್ರಾಮ ಮೇಳ ಮತ್ತು ಕಲಾವಿದರ ಕೊಡುಗೆ ಅಪಾರ. ಎರಡನೇ ತಲೆಮಾರಿನ ಕಲಾವಿದರ ಸೇರ್ಪಡೆಯೊಂದಿಗೆ 90ರ ದಶಕದ ನಂತರ ಮೇಳ ಅದ್ದೂರಿಯ ತಿರುಗಾಟ ನಡೆಸಿತು.

ಸಾಮಾಜಿಕ ಕ್ರಾಂತಿ

ಅಮೃತೇಶ್ವರಿ ನಂತರ ಇಡಗುಂಜಿ ಡೇರೆಮೇಳಗಳು ಆರಂಭಗೊಂಡಾಗ ಭಾಗವತ ನಾರ್ಣಪ್ಪ ಉಪ್ಪೂರ ಸಹಿತ ಅನೇಕ ಮೇರು ಕಲಾವಿದರು ಅನಿವಾರ್ಯವಾಗಿ ಮೇಳ ತೊರೆದರು. ವೀರಭದ್ರ ನಾಯ್ಕರು ಯಕ್ಷಗಾನ ಕೇಂದ್ರದ ಗುರುವಾಗಿ ಹೋದರು. ಮೇಳ ಸಂಕಷ್ಟಕ್ಕೆ ಸಿಲುಕಿದ ಸಂದರ್ಭ ಅದು. ಆಗ ಮೇಳದಲ್ಲಿ ಉಳಿದವರೆಂದರೆ ಶಿರಿಯಾರ ಮಂಜು ನಾಯ್್ಕ ಅರಾಟೆ ಮಂಜುನಾಥ, ಪುಂಡರಿಕಾಕ್ಷ ಉಪಾಧ್ಯಾಯ ಮೊದಲಾದವರು ಮಾತ್ರ. ಆ ಸಂದರ್ಭದಲ್ಲಿ ಮರವಂತೆ ನರಸಿಂಹ ದಾಸ ಮತ್ತು ನೆಲ್ಲೂರು ಮರಿಯಪ್ಪಾಚಾರ್ ಭಾಗವತರಾಗಿಯೂ ಹುಂಚದಕಟ್ಟೆ ಶ್ರೀನಿವಾಸ ಆಚಾರ್ ಮದ್ದಳೆ ಹಾಗೂ ಕೆಮ್ಮಣ್ಣು ಆನಂದ ಚಂಡೆ ವಾದಕರಾಗಿಯೂ ಮೇಳಕ್ಕೆ ದೊರಕಿದರು. ಈ ಸಂದರ್ಭದಲ್ಲಿ ಹಳ್ಳಾಡಿ ಮಂಜಯ್ಯ ಶೆಟ್ಟರೊಂದಿಗೆ, ಆಗಿನ ಸಾಮಾಜಿಕ ವ್ಯವಸ್ಥೆಗೆ ವಿರುದ್ದವಾಗಿ ಬಿಲ್ಲವ ಕಲಾವಿದರಾದ ಬಡಗಿನ ಐರೋಡಿ ಗೋವಿಂದಪ್ಪ ಮತ್ತು ಬಡಾಬಡಗಿನ ಕುಮಟಾ ಗೋವಿಂದ ನಾಯ್ಕರನ್ನು ಮೇಳಕ್ಕೆ ಸೇರಿಸಿಕೊಂಡು ಅಂದಿನ ಯಜಮಾನರಾದ ಪಳ್ಳಿ ಸೋಮನಾಥ ಹೆಗ್ಡೆಯವರು ಸಾಮಾಜಿಕ ಕ್ರಾಂತಿಯೊಂದಕ್ಕೆ ಮುನ್ನುಡಿ ಬರೆದರು. ಮುಂದೆ ಬಿಲ್ಲವ ಕಲಾವಿದರು ಇತರ ಮೇಳಗಳಿಗೆ ಸೇರುವುದಕ್ಕೂ ಇದು ಪ್ರೇರಣೆಯಾಯಿತು.

(ಕೃತಜ್ಞತೆ: ಪ್ರೊ. ಎಸ್.ವಿ. ಉದಯಕುಮಾರ ಶೆಟ್ಟಿ ಮಣಿಪಾಲ)

Leave a Reply

Your email address will not be published. Required fields are marked *

Back To Top