Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಬರೀ ರಾಜ ಅಲ್ಲ ಈ ರಾಜ!

Sunday, 09.09.2018, 3:03 AM       No Comments

ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರಿನ ಯದುವಂಶದ ಕೊನೆಯ ಮಹಾರಾಜರು. ಅವರ ಜನ್ಮಶತಾಬ್ದಿಯ ಆಚರಣೆ ಪ್ರಸಕ್ತ ವರ್ಷ ಜುಲೈ 18ರಂದೇ ಆರಂಭವಾಗಬೇಕಿತ್ತು. ರಾಜರ ಆಳ್ವಿಕೆಯೇ ಮುಗಿದುಹೋಗಿರುವಾಗ ಅವರ ಜನ್ಮಶತಾಬ್ದಿಯನ್ನೇನು ಆಚರಿಸುವುದು ಎಂಬ ಭಾವನೆ ಹಲವರಿಗೆ ಇರಬಹುದು. ಆದರೆ ಜಯಚಾಮರಾಜ ಒಡೆಯರ್ ಈ ನಾಡಿನ ಸಾಹಿತ್ಯ, ಸಂಸ್ಕೃತಿ, ಸಂಗೀತ, ಕಲೆಗೆ ಅಪಾರ ಕೊಡುಗೆ ನೀಡಿದವರು. ಆಶ್ರಿತ ಸಂಸ್ಥಾನಗಳಲ್ಲೇ ಪ್ರಜಾಪ್ರಭುತ್ವಕ್ಕೆ ಮೊಟ್ಟಮೊದಲು ಒಪ್ಪಿಗೆ ಕೊಟ್ಟವರು. ‘‘ನನ್ನ ರಾಜಪದವಿ ಹೋದರೂ ಚಿಂತೆಯಿಲ್ಲ ಕರ್ನಾಟಕದ ಏಕೀಕರಣವಾಗಲಿ’’ ಎಂದು ಘೊಷಿಸಿದವರು. ಅವರ ಸ್ಮರಣೆಗಾಗಿ ಈ ನುಡಿಚಿತ್ರ.

| ಮೈಸೂರು ಸುರೇಶ್

ವಿಶ್ವದೆಲ್ಲೆಡೆ ಆಗಷ್ಟೇ ಎರಡನೇ ಮಹಾಯುದ್ಧ ಆರಂಭವಾಗಿತ್ತು. (1939-1945) ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಉತ್ತುಂಗ ಸ್ಥಿತಿಯಲ್ಲಿತ್ತು. ಇಂತಹ ಸನ್ನಿವೇಶದಲ್ಲಿ ಮೈಸೂರು ಸಂಸ್ಥಾನದ 25ನೇ ಮಹಾರಾಜರಾಗಿ ಜಯಚಾಮರಾಜೇಂದ್ರ ಒಡೆಯರ್ 1940 ಸೆಪ್ಟೆಂಬರ್ 8ರಂದು ಪಟ್ಟಾಭಿಷೇಕಗೊಂಡರು. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅವರು ಮೊದಲು ಕೈಗೊಂಡ ಕಾರ್ಯವೇ ಪ್ರಜಾಪರಿಷತ್ತಿನ ರಚನೆ. ಆ ಮೂಲಕ ಜನರಿಂದಲೇ ಆಡಳಿತ ಆರಂಭಿಸಿದ ಮೊದಲ ರಾಜ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಜಯಚಾಮರಾಜೇಂದ್ರ ಒಡೆಯರ್.

ಅಷ್ಟೇ ಅಲ್ಲ, ಜನರಿಗೆ ಮತ್ತಷ್ಟು ಅಧಿಕಾರವನ್ನು ನೀಡಬೇಕೆಂಬ ಹಂಬಲದಿಂದ ರಾಜಕೀಯ ಸುಧಾರಣೆಗೂ ಮುಂದಾದರು. ವಿಧಾನ ಪರಿಷತ್ ಮತ್ತು ಪ್ರಜಾಪ್ರತಿನಿಧಿ ಸಭೆಗಳಿಗೆ ಜನರಿಂದಲೇ ಪ್ರತಿನಿಧಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ಕಾಯ್ದೆಯನ್ನು 1941ರಲ್ಲಿ ಜಾರಿಗೊಳಿಸಿದರು. ಮೈಸೂರು ನಗರದಲ್ಲಿ ಪುರಸಭೆಯನ್ನು ಸ್ಥಾಪಿಸಿ ಜನರಿಗಾಗಿ ಜನರೇ ಅಧಿಕಾರ ನಡೆಸಲು ಹಾದಿ ಮಾಡಿಕೊಟ್ಟರು. ಗ್ರಾಮಗಳ ಅಭಿವೃದ್ಧಿಗಾಗಿ 1942ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಪಂಚಾಯತ್​ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಪಂಚವಾರ್ಷಿಕ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಜಯಚಾಮರಾಜೇಂದ್ರ ಒಡೆಯರ್ ಅವರ ದೂರದೃಷ್ಟಿಗೆ ಕನ್ನಡಿ. ಇದನ್ನೇ ಮಾದರಿಯಾಗಿಸಿಕೊಂಡ ಭಾರತ ಸರ್ಕಾರ 1952ರಲ್ಲಿ ಮೊದಲ ಪಂಚವಾರ್ಷಿಕ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸಿತು.

ದೇಶದಲ್ಲಿಯೇ ಮೊದಲ ಆಕಾಶವಾಣಿ ಆರಂಭಗೊಂಡಿದ್ದು ಮೈಸೂರಿನಲ್ಲಿ ಎಂಬುದು ಹಲವರಿಗೆ ಗೊತ್ತಿಲ್ಲ. ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದ ಗೋಪಾಲಸ್ವಾಮಿಯವರು ತಮ್ಮ ಹವ್ಯಾಸದಿಂದ ರೇಡಿಯೋ ಕೇಂದ್ರವನ್ನು ಸ್ಥಾಪಿಸಿದ್ದರು. ಕೈಯಿಂದ ಹಣ ಹಾಕಿ ನಡೆಸುವುದು ಅವರಿಗೆ ಕಷ್ಟವಾದಾಗ 1942ರಲ್ಲಿ ಮಹಾರಾಜರು ಅದನ್ನು ಮೈಸೂರು ಸಂಸ್ಥಾನದ ತೆಕ್ಕೆಗೆ ತೆಗೆದುಕೊಂಡು ಯಶಸ್ವಿಯಾಗಿ ನಡೆಯಲು ವ್ಯವಸ್ಥೆ ಮಾಡಿದರು. ಮುಂದೆ ಅದು ನಾ. ಕಸ್ತೂರಿಯವರ ಮೇಲ್ವಿಚಾರಣೆಯಲ್ಲಿ ‘ಆಕಾಶವಾಣಿ’ ಎಂಬ ಹೆಸರು ಪಡೆಯಿತು. ಬಳಿಕ ರಾಷ್ಟ್ರಕ್ಕೆ ಸಮರ್ಪಣೆಯಾಯಿತು.

ತಾಂತ್ರಿಕ ಶಿಕ್ಷಣದ ಮಹತ್ವ ಅರಿತಿದ್ದ ಜಯಚಾಮರಾಜೇಂದ್ರ ಒಡೆಯರ್ ಬೆಂಗಳೂರು, ಮೈಸೂರು ನಗರಗಳಲ್ಲಿ ಡಿಪ್ಲೋಮಾ, ಎಂಜಿನಿಯರಿಂಗ್ ಶಿಕ್ಷಣ ಆರಂಭಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಫ್ರೆಂಚ್, ಜರ್ಮನ್ ಮೊದಲಾದ ವಿದೇಶಿ ಭಾಷಾ ವಿಭಾಗಗಳನ್ನು ಆರಂಭಿಸಿದರು. ಮೈಸೂರು ರಾಜ್ಯದಾದ್ಯಂತ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿ ಆಸ್ಪತ್ರೆಗಳನ್ನು ಆರಂಭಿಸಿ ಮಹಿಳಾ ಡಾಕ್ಟರ್​ಗಳ ನೇಮಕಕ್ಕೆ ಆದ್ಯತೆ ನೀಡಿದರು. ಕ್ಷಯರೋಗ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವನ್ನು ಆರಂಭಿಸಿದರು. ಆರ್ಯುವೇದ, ಯುನಾನಿ ಚಿಕಿತ್ಸಾಪದ್ಧತಿಗಳನ್ನು ಪೋಷಿಸಿದರು. ಜೈಲುಕೈದಿಗಳ ಪುನರ್​ವಸತಿಗಾಗಿ ಬಂಧಮುಕ್ತರ ಸೊಸೈಟಿ ರಚಿಸಿದರು.

ಸಮಾಜಮುಖಿ ಚಿಂತನೆಗಳಿಂದ ಸದಾ ತುಡಿಯುತ್ತಿದ್ದ ಜಯಚಾಮರಾಜೇಂದ್ರರು ಗೋಹತ್ಯೆ ನಿಷೇಧ, ಕೂಲಿಕಾರ್ವಿುಕರಿಗೆ ಅಪಘಾತ ಪರಿಹಾರ, ಮಹಿಳೆಯರಿಗೆ ಆಡಳಿತದಲ್ಲಿ ಆದ್ಯತೆ ಮೊದಲಾದ ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದರು.

ಅಸ್ಪೃಶ್ಯತೆ ನಿವಾರಣೆಗಾಗಿ ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ಮೇಲಾಗಿ ಅರ್ಥಿಕ ಅಭಿವೃದ್ಧಿಗೆ ಮುಂದಾಗಿ ನಿರ್ಗತಿಕರಿಗೆ ಭೂಮಿ ನೀಡಿದರು. ರೈತಪರ ಕಾಳಜಿ ಹೊಂದಿದ್ದು, ನುಸಿರೋಗ ಸಂಶೋಧನೆಗಾಗಿ ಮಂಡ್ಯದಲ್ಲಿ ಲ್ಯಾಬೋರೇಟರಿ ಸ್ಥಾಪಿಸಿದರು. ತನ್ನ ದೊಡ್ಡಪ್ಪನವರಂತೆಯೇ ನೀರಾವರಿ ಯೋಜನೆಗಳಿಗೆ ಆದ್ಯತೆ ಕಲ್ಪಿಸಿ ಭದ್ರಾ, ನುಗು, ಭೈರಮಂಗಲ, ಕಣ್ವ ಜಲಾಶಯ, ಹಿರೇಭಾಸ್ಕರ ಜಲಾಶಯಗಳ ನಿರ್ಮಾಣ ಮಾಡಿಸಿದರು. ಒಟ್ಟು 36 ಯೋಜನೆಗಳನ್ನು ಕೈಗೆತ್ತಿಕೊಂಡರು. ಇದರಿಂದ ಸುಮಾರು 52 ಸಾವಿರ ಎಕರೆ ಭೂಪ್ರದೇಶ ಕೃಷಿಯಿಂದ ನಳನಳಿಸುವಂತಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಆರಂಭಗೊಂಡ ಶರಾವತಿ ನದಿಯ ಜೋಗ ಜಲವಿದ್ಯುತ್ ಯೋಜನೆಯನ್ನು ಜಯಚಾಮರಾಜೇಂದ್ರ ಒಡೆಯರ್ ಪೂರ್ಣಗೊಳಿಸಿದರು.

ಏಳು ವರ್ಷಗಳ ತಮ್ಮ ಅರಸೊತ್ತಿಗೆಯಲ್ಲಿ ಮಹತ್ತರ ಸಾಧನೆ ಮಾಡಿದ ತೃಪ್ತಿಯೊಂದಿಗೇ ಭಾರತ ಸ್ವಾತಂತ್ರ್ಯ್ಕೆ ಮುನ್ನವೇ 1947ರ ಅಗಸ್ಟ್ 9ರಂದು ಮೈಸೂರು ರಾಜಸಂಸ್ಥಾನವನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲು ಮೊದಲಿಗೆ ಒಪ್ಪಿ ಅಂಕಿತ ಹಾಕಿದರು. ಅದು ಅವರಿಗಿದ್ದ ರಾಷ್ಟ್ರೀಯ ದೃಷ್ಟಿ ಮತ್ತು ರಾಷ್ಟ್ರಪ್ರೇಮಕ್ಕೆ ಸಾಕ್ಷಿಯಾಗಿತ್ತು. ತದನಂತರ ಸ್ವತಂತ್ರ ಭಾರತದಲ್ಲಿ ರಾಜಪ್ರಮುಖರಾಗಿ ಮುಂದುವರೆದ ಒಡೆಯರ್ ಮೈಸೂರು ರಾಜ್ಯದ ಮೊದಲ ರಾಜ್ಯಪಾಲರಾದರು (1956-1964). ಬಳಿಕ 1966ರವರೆಗೆ ಮದ್ರಾಸು ಪ್ರಾಂತ್ಯದ ರಾಜ್ಯಪಾಲರಾಗಿದ್ದರು. ಕರ್ನಾಟಕದ ಏಕೀಕರಣಕ್ಕಾಗಿ ಎಲ್ಲರೊಂದಿಗೆ ಶ್ರಮಿಸಿ ರತ್ನಸಿಂಹಾಸನದಿಂದ ನಿರ್ಗಮಿಸಿ ಕರುನಾಡ ಜನರ ಮನಮಂದಿರದಲ್ಲಿ ಮನೆಮಾಡಿದರು. ಇದನ್ನು ಕಂಡ ರಾಷ್ಟ್ರಕವಿ ಕುವೆಂಪು ಭಾವುಕರಾಗಿ ‘‘ಎಲ್ಲರೂ ಸಿಂಹಾಸನಾಧೀಶರಾಗಿ ಮಹಾರಾಜರಾದರೆ ಇವರು ಸಿಂಹಾಸನ ತ್ಯಜಿಸಿಯೇ ಮಹಾರಾಜರಾದರು’’ ಎಂದು ಉದ್ಗರಿಸಿದ್ದರು. ಜಯಚಾಮರಾಜೇಂದ್ರ ಒಡೆಯರ್ ಅವರು ಮಹಾರಾಜರಾಗಿ, ರಾಜ್ಯಪಾಲರಾಗಿದ್ದು ಮಾತ್ರವಲ್ಲದೆ ಭಾರತೀಯ ಸಾಂಸ್ಕೃತಿಕ ರಾಯಭಾರಿಯಾಗಿ ಭಾರತ ಸರ್ಕಾರದಿಂದ ನೇಮಕಗೊಂಡರು. ಭಾರತೀಯ ವನ್ಯಜೀವಿ ಮಂಡಲಿಯ ಮೊದಲ ಸ್ಥಾಪಿತ ಅಧ್ಯಕ್ಷರಾದರು.

ರಾಜತ್ವ ಅನುಭವಿಸಿ ಪ್ರಜಾಪ್ರಭುತ್ವಕ್ಕೆ ಅಧಿಕಾರ ಹಸ್ತಾಂತರಿಸಿ ರಾಜತ್ವ- ಪ್ರಜಾಪ್ರಭುತ್ವದ ಕೊಂಡಿಯಾಗಿ ಕಾಲಕಾಲಕ್ಕೆ ರಾಜಕೀಯ, ಆಡಳಿತದಲ್ಲಿ ಸುಧಾರಣೆ ತಂದು ಮಾದರಿ ಮೈಸೂರು ರಾಜ್ಯದಿಂದ ಆದರ್ಶ ಕರ್ನಾಟಕ ರಾಜ್ಯಕ್ಕೆ ಅಗ್ರಪಂಕ್ತಿ ಹಾಕಿಕೊಟ್ಟ ಜಯಚಾಮರಾಜೇಂದ್ರ ಒಡೆಯರ್ ತಮ್ಮ 55ನೇ ವಯಸ್ಸಿನಲ್ಲಿ ಬೆಂಗಳೂರು ಅರಮನೆಯಲ್ಲಿ ವಿಧಿವಶವಾದರು. ಅವರ ಜನ್ಮ ಶತಮಾನೋತ್ಸವದ ಹೊಸ್ತಿಲಿನಲ್ಲಿರುವ (2019) ಈ ಶುಭ ಸಂದರ್ಭದಲ್ಲಿ ವರ್ಷಪೂರ್ತಿ ಅವರ ವರ್ಧಂತಿ ನಡೆಯಲಿ; ಈ ರಾಜಯೋಗಿಯ ಆದರ್ಶ, ಗುಣ, ನಡತೆಗಳನ್ನು ಜನರು ಅರಿಯುವಂತಾಗಲಿ.

ಧರ್ಮ, ಕ್ರೀಡೆಗೂ ಆಶ್ರಯ

ಮೈಸೂರು ಅರಮನೆ ಕೋಟೆಯೊಳಗೆ ಕನ್ನಡ ಪ್ರೇಮದ ಪ್ರತೀಕವಾಗಿ ನಾಡದೇವತೆ ಭುವನೇಶ್ವರಿ ದೇವಿ ದೇವಾಲಯ, ಋಗ್ವೇದದಿಂದ ಪ್ರೇರಿತರಾಗಿ ಗಾಯಿತ್ರಿ ದೇವಸ್ಥಾನವನ್ನು ಜಯಚಾಮರಾಜರು ಕಟ್ಟಿಸಿದರು. ತಂತ್ರಶಾಸ್ತ್ರದಲ್ಲಿ ನಿಪುಣರಾಗಿದ್ದ ಅವರು ಅದರಿಂದ ಪ್ರಭಾವಿತರಾಗಿ ನೇಪಾಳದ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಾಲಯದ ತದ್ರೂಪವನ್ನು ಮೈಸೂರಿನ ರಾಮಾನುಜ ರಸ್ತೆಯಲ್ಲಿ ಕಾಮಕಾಮೇಶ್ವರಿ ದೇವಾಲಯದ ಹೆಸರಿನಲ್ಲಿ ನಿರ್ವಿುಸಿದರು. ಕ್ರೀಡೆ ಬಗ್ಗೆಯೂ ಆಸಕ್ತಿ ಹೊಂದಿದ್ದ ಮಹಾರಾಜರು ಉತ್ತಮ ಆಶ್ವರೋಹಿಗಳಾಗಿದ್ದರು. ಟೆನ್ನಿಸ್ ಆಟದಲ್ಲಿ ಒಲವಿತ್ತು ಅಂದಿನ ಖ್ಯಾತ ಟೆನ್ನಿಸ್ ಆಟಗಾರ ರಾಮನಾಥನ್ ಕೃಷ್ಣನ್ ವಿಂಬಲ್ಡನ್​ನಲ್ಲಿ ಭಾಗವಹಿಸಲು ಸಹಕರಿಸಿದ್ದರು. ಅಲ್ಲದೆ ಖ್ಯಾತ ಕ್ರಿಕೆಟ್ ಆಟಗಾರ, ಸ್ಪಿನ್ ಮಾಂತ್ರಿಕ ಇ.ಎ.ಎಸ್. ಪ್ರಸನ್ನ ವೆಸ್ಟ್ ಇಂಡೀಸ್​ನಲ್ಲಿ ಕ್ರಿಕೆಟ್ ಆಟವಾಡಲು ಪ್ರಾಯೋಜಕತ್ವ ನೀಡಿ ಅವರ ವೃತ್ತಿ ಜೀವನಕ್ಕೆ ನೆರವು ನೀಡಿದ್ದರು.

ಜಗನ್ಮೋಹನ ಅರಮನೆ ನವೀಕರಣ

ಒಡೆಯರ್ ಕುಟುಂಬ ಹಾಗೂ ಖಾಸಗಿ ಸಂಘಸಂಸ್ಥೆಗಳು ಸೇರಿ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಅವರ ನೆನಪಿಗಾಗಿ ಮೊದಲ ಹಂತದಲ್ಲಿ ಜಗನ್ಮೋಹನ ಅರಮನೆಯ ಆರ್ಟ್ ಗ್ಯಾಲರಿಯ ನವೀಕರಣ ಹಾಗೂ ಎರಡನೆಯ ಹಂತದಲ್ಲಿ ಈ ಅರಮನೆಯ ಸಂಪೂರ್ಣ ನವೀಕರಣ ನಡೆಯಲಿದೆ. ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಜಯಚಾಮರಾಜೇಂದ್ರ ಒಡೆಯರ್ ಅವರು ನೀಡಿರುವ ಕೊಡುಗೆ ಅಪಾರ. ಆಕಾಶವಾಣಿಯಲ್ಲಿ ಇವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಅಪಾರ ಯುವಕರಿಗೆ ಸ್ಪೂರ್ತಿ ನೀಡಿದೆ. ಅವರ ಅವಿಸ್ಮರಣೀಯ ಕೊಡುಗೆಗಳನ್ನು ಸ್ಮರಿಸಿ ವಿವಿಧ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿವೆ. ಆದರೆ ಇದುವರೆಗೆ ಮೈಸೂರು ವಿಶ್ವವಿದ್ಯಾಲಯ ಈ ಪದವಿ ನೀಡದೇ ಇರುವುದು ತುಂಬಾ ಬೇಸರದ ವಿಷಯವಾಗಿದೆ.

| ಪ್ರಮೋದಾ ದೇವಿ ಒಡೆಯರ್

ಮೈಸೂರು ರಾಜವಂಶಸ್ಥೆ 94 ಸಂಗೀತ ಕೃತಿಗಳ ರಚನೆ

ಪಾಶ್ಚಾತ್ಯ ಸಂಗೀತ ಕಲಿತು, ಅಳವಡಿಸಿಕೊಂಡ ಬಳಿಕ ಕರ್ನಾಟಕ ಸಂಗೀತವನ್ನು ಕಲಿಯಲು ಜಯಚಾಮರಾಜೇಂದ್ರ ಆರಂಭಿಸಿದರು. ಆಸ್ಥಾನದಲ್ಲಿ ಮೈಸೂರು ವಾಸುದೇವಾಚಾರ್ಯ, ವೀಣೆ ವೆಂಕಟಗಿರಿಯಪ್ಪ, ವಿ. ದೊರೆಸ್ವಾಮಿ ಅಯ್ಯಂಗಾರ್, ಬಿ. ದೇವೇಂದ್ರಪ್ಪ, ಪಿಟೀಲು ಚೌಡಯ್ಯ, ಟೈಗರ್ ವರದಾಚಾರ್, ಚೆನ್ನಕೇಶವಯ್ಯ, ತಿಟ್ಟೆ ಕೃಷ್ಣ ಅಯ್ಯಂಗಾರ್, ಚಿಂತಪಲ್ಲಿ ರಾಮಚಂದ್ರ ರಾವ್ ಮೊದಲಾದ ಸಂಗೀತ ರತ್ನಗಳಿದ್ದರು. ಮಹಾರಾಜರಿಗೆ ವಿದ್ವಾನ್ ವೆಂಕಟಗಿರಿಯಪ್ಪ ಅವರು ವೀಣೆ ಕಲಿಸಿದರು. ಸಂಗೀತದ ಶಿಕ್ಷಣವನ್ನು ಉಪಾಸನೆ ಮಾರ್ಗದಲ್ಲಿ ವಿದ್ವಾನ್ ವಾಸುದೇವ ಆಚಾರ್ಯರು ಬೋಧಿಸಿದರು. ಇದು ಅವರನ್ನು ಸಂಗೀತದ ಮೂಲಕ ದೈವತ್ವದ ಕಡೆಗೆ ಕರೆದುಕೊಂಡು ಹೋಯಿತು. ನಾಡದೇವಿ ಚಾಮುಂಡೇಶ್ವರಿ ಆರಾಧಕರಾಗಿದ್ದ ಮಹಾರಾಜರು ಶ್ರೀವಿದ್ಯಾ ನಾಮಾಂಕಿತದಲ್ಲಿ 94 ಸಂಗೀತ ಕೃತಿಗಳನ್ನು ರಚಿಸಿದರು. ಆ ಮೂಲಕ ವಾಗ್ಗೇಯಕಾರ ಬಿರುದಾಂಕಿತರಾದರು. ಪ್ರತಿಯೊಂದಕ್ಕೂ ಹೊಸ ರಾಗಗಳನ್ನು ಸಂಯೋಜಿಸಿ ಸ್ವರಸಾಧಕರಾದರು. ಇದರಲ್ಲಿ ‘ಜಯ ಸಂವರ್ಧಿನಿ’ ರಾಗವು ಸಂಗೀತಾಸಕ್ತರ ಕಿವಿಯಲ್ಲಿ ಈಗಲೂ ಅನುರಣಿಸುತ್ತದೆ ಎಂದರೆ ಅತಿಶಯೋಕ್ತಿ ಆಗಲಾರದು. ಈ ಅಮೂಲ್ಯ ಕೃತಿಗಳನ್ನು ರಾಜ ಮನೆತನದವರು ಇತ್ತೀಚೆಗೆ ಶ್ರೀವಿದ್ಯಾವಾರಿಧಿ ಹೆಸರಿನಲ್ಲಿ ಹೊರತಂದಿದ್ದಾರೆ. ಇವರ ರಾಗ – ಸ್ವರ ಕುರಿತು ಪ್ರೊ. ರಾಮರತ್ನಮ್ ಸಂಶೋಧನೆ ನಡೆಸಿ ಸಂಗೀತಕ್ಕೆ ಒಡೆಯರ್ ಕೊಡುಗೆ ಕುರಿತು ಪುಸ್ತಕ ಬರೆದಿದ್ದಾರೆ. ಜಯಚಾಮರಾಜೇಂದ್ರರಿಗಿದ್ದ ಸ್ವರ, ಸಂಗೀತದ ಆಳ ಅಪಾರವಾದುದು. ಸ್ವತಂತ್ರ ಭಾರತದಲ್ಲಿ ಸಂಗೀತ ನಾಟಕ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ 1966ರಲ್ಲಿ ಜಯಚಾಮರಾಜೇಂದ್ರರನ್ನು ಭಾರತ ಸರ್ಕಾರ ನೇಮಿಸಿತು.

ಪಾಶ್ಚಾತ್ಯ ಸಂಗೀತದ ಸೆಳೆತ

ಕರ್ನಾಟಕ, ಹಿಂದೂಸ್ತಾನಿ ಹಾಗೂ ಪಾಶ್ಚಾತ್ಯ ಸಂಗೀತ ಪ್ರಕಾರಗಳಲ್ಲಿ ಆಳವಾದ ಜ್ಞಾನವನ್ನು ಪಡೆದಿದ್ದ ಜಯಚಾಮರಾಜೇಂದ್ರ ಒಡೆಯರ್ ಪರಿಪೂರ್ಣ ಕಲಾ ಸಂಪನ್ನರು. ಯೌವನವಾಸ್ಥೆಯಲ್ಲಿ ಪಾಶ್ಚಾತ್ಯ ಸಂಗೀತವನ್ನು ಕಲಿತ ಅವರು ಲಂಡನ್​ನ ಪ್ರಸಿದ್ಧ ಗಿಲ್ಡ್ ಹಾಲ್ ಸ್ಕೂಲ್ ಆಫ್ ಮ್ಯೂಸಿಕ್ ಮತ್ತು ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್​ನ ಫೆಲೋ ಆಗಿದ್ದರು. ಪಿಯಾನೋ ವಾದನದಲ್ಲಿ ನಿಪುಣರಾಗಿದ್ದರು. ವಿಶ್ವ ಸಂಗೀತಕ್ಕೆ ತಮ್ಮದೇ ಕೊಡುಗೆ ನೀಡುವ ಉದ್ದೇಶದಿಂದ 1948ರಲ್ಲಿ ಪಿಲರ್ಮೋನಿಯಾ ಕನ್ಸರ್ಟ್ ಸೊಸೈಟಿಯನ್ನು ಲಂಡನ್​ನಲ್ಲಿ ಸ್ಥಾಪಿಸಿದರು. ರಷ್ಯಾದ ಖ್ಯಾತ ಸಂಗೀತಗಾರ ನಿಕಲೋರ್ ಮೆಡ್​ನರ್ ಸಂಗೀತ ಪ್ರಚಾರಪಡಿಸಲು ಮೆಡ್​ನರ್ ಸೊಸೈಟಿ ಸ್ಥಾಪಿಸಿದರು. ಇದಕ್ಕೆ ಪ್ರತಿಯಾಗಿ ಮೆಡ್​ನರ್ ತನ್ನ 3ನೇ ಪಿಯಾನೋ ಕನ್ಸರ್ಟ್​ನ್ನು ಅವರಿಗೆ ಸಮರ್ಪಿಸಿ ಸಂಗೀತ ರಚಿಸಿದರು. ಇದು ವಿಶ್ವವಿಖ್ಯಾತವಾಯಿತು. ಮತ್ತೊಬ್ಬ ಅಂತಾರಾಷ್ಟ್ರೀಯ ಸಂಗೀತಗಾರ ವಾಲ್ಟರ್ ಲಗ್ಗೆಯನ್ನು ಮೈಸೂರಿಗೆ ಕರೆಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹೀಗೆ 1950ರವರೆಗೆ ವಿದೇಶಿ ಸಂಗೀತಗಾರರನ್ನು ಪ್ರೋತ್ಸಾಹಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.

ಮೈಸೂರು ದಸರೆಗೆ ವೈಭವದ ಸಿಂಚನ

ಮೈಸೂರು ದಸರಾ, ಎಷ್ಟೊಂದು ಸುಂದರ ಎನ್ನುವ ಮಾತನ್ನು ಅಕ್ಷರಶಃ ವೈಭವಪೂರಿತವಾಗಿ ಮಾಡಿದವರು ಯದುವಂಶ ಕುಲತಿಲಕ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್. ಮೈಸೂರು ರಾಜಸಂಸ್ಥಾನ ಕಂಡ ಅರಸುಗಳಲ್ಲಿ ಅಗ್ರಗಣ್ಯರು ಅವರು. ರಾಜತ್ವದ ಸಂಕೇತವಾಗಿದ್ದ ಜಂಬೂಸವಾರಿ, ಟಾರ್ಚ್​ಲೈಟ್ ಪೆರೇಡ್, ಅಶ್ವ ಪಥಸಂಚನಲನ, ಕುಶಾಲ ತೋಪು ಗಾಡಿಗಳು, ಫಿರಂಗಿಗಾಡಿಗಳು, ಆನೆ ಗಾಡಿಗಳ ಪ್ರದರ್ಶನಕ್ಕೆ ಪ್ರಜಾತಂತ್ರದ ಮೆರುಗು ನೀಡಿದರು. ಆ ಮೂಲಕ ಜನಪದ, ಸಾಂಸ್ಕೃತಿಕ ತಂಡಗಳನ್ನು ಮೆರವಣಿಗೆಗೆ ಸೇರಿಸಿದರು. ಸರ್ಕಾರದ ಜನಪರ ಯೋಜನೆಗಳ ಟ್ಯಾಬ್ಲೋಗಳು ಭಾಗವಹಿಸುವಂತೆ ನೋಡಿಕೊಂಡರು. ಅಂದು ದೇಶ, ವಿದೇಶಗಳಿಂದ ಜನರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಪ್ರಚಾರಪಡಿಸಿದರು. ವಿಶ್ವದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ದಸರಾ ಮೆರವಣಿಗೆ ಕುರಿತು ಜಾಹೀರಾತು ಹಾಕಲಾಗುತ್ತಿತ್ತು. ಯುರೋಪ್ ಸೇರಿದಂತೆ ಬಹುತೇಕ ಖಂಡಗಳಲ್ಲಿ ದಸರಾ ಉತ್ಸವ ಕುರಿತು ಮಾಧ್ಯಮಗಳಲ್ಲಿ ಪ್ರಚಾರಪಡಿಸುವಂತೆ ನೋಡಿಕೊಂಡರು. ರಾಜ ಸಿಂಹಾಸನದಿಂದ ಇಳಿದರೂ ಸಹ ಅವರ ಬದುಕಿರುವವರೆಗೂ ಮುಖ್ಯಭಾಗವಾಗಿರುತ್ತಿದ್ದ ಜಂಬೂಸವಾರಿಯಲ್ಲಿ ಕುಳಿತು ಮೈಸೂರು ದಸರಾ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಆ ಮೂಲಕ ಅವರೇ ಮೈಸೂರಿನ ಜಂಬೂಸವಾರಿಯಲ್ಲಿ ಪಾಲ್ಗೊಂಡ ಕೊನೆಯ ರಾಜರಾಗಿ ಉಳಿದರು. ಜನಸಾಮಾನ್ಯರೊಂದಿಗೆ ಬೆರೆತು ಆಳರಸರ ಸಂತಾನವಾಗಿ ಬೆಳೆದ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಬಡವರು, ರೈತರ ಕಷ್ಟ ಕಾರ್ಪಣ್ಯಗಳ ಬಗ್ಗೆ ಅರಿವಿತ್ತು. ಅರಸರಿಗೆ ಇರಬೇಕಾದ ಅರಸತ್ವ, ಋಷಿಗಳಿಗೆ ಇರಬೇಕಾದ ಋಷಿತ್ವ, ಪ್ರಜೆಗಳಿಗೆ ಇರಬೇಕಾದ ಪ್ರಜತ್ವ ಮೇಲಾಗಿ ಪ್ರಜಾವತ್ಸಲ, ದಾರ್ಶನಿಕ, ಸಂಗೀತ ಮಾಂತ್ರಿಕ, ಕಲಾರಾಧಕ, ವಾಗ್ಗೇಯಕಾರ, ರಾಜಕೀಯ ಚಿಂತಕ, ಸಾಹಿತ್ಯಾಸಕ್ತ, ಸಹೃದಯ ಸಂಪನ್ನ ಇವೆಲ್ಲ ಗುಣಗಳು ಮೇಳೈಸಿದರೆ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರೂಪುಗೊಳ್ಳುತ್ತಾರೆ. ಯದುವಂಶದ 25ನೇ ರಾಜರಾಗಿ ಮೈಸೂರು ಸಂಸ್ಥಾನದ ಸಿಂಹಾಸನವನ್ನು ಏರಿದ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರದ್ದು ಪರಿಪೂರ್ಣ ವ್ಯಕ್ತಿತ್ವ.

ನಮ್ಮ ನಾಡಿಗೆ ಅಪಾರ ಕೊಡುಗೆ ನೀಡಿರುವ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಶತಮಾನೋತ್ಸವ ಸರ್ಕಾರಕ್ಕೆ ನೆನಪೇ ಇಲ್ಲದಿರುವುದು ತೀರಾ ದುರದೃಷ್ಟಕರ ಸಂಗತಿ. ಸಾಮಾನ್ಯ ರಾಜರ ಹೆಸರನ್ನು ದೊಡ್ಡ ಮಟ್ಟದವರೆಗೆ ಒಯ್ಯುವ ನಮ್ಮ ಸರ್ಕಾರಕ್ಕೆ, ಜಯಚಾಮರಾಜೇಂದ್ರ ಅವರಂಥ ವ್ಯಕ್ತಿ ಇದ್ದರು ಎನ್ನುವುದನ್ನು ನೆನಪಿಸಬೇಕಾಗಿ ಬಂದಿರುವುದೇ ದುರಂತ. ಜನ್ಮಶತಮಾನೋತ್ಸವದ ಶುಭ ಸಂದರ್ಭದಲ್ಲಿ ಜಯಚಾಮರಾಜೇಂದ್ರರ ಹೆಸರನ್ನು ಯಾವುದಾದರೂ ರೂಪದಲ್ಲಿ ಅಮರ ಮಾಡುವ ಬಗ್ಗೆ ಚಿಂತನೆ ನಡೆಯಬೇಕು.

| ಪಿ.ವಿ. ನಂಜರಾಜೇ ಅರಸ್ ಖ್ಯಾತ ಇತಿಹಾಸಜ್ಞರು

ಅನನ್ಯ ಸಾಹಿತ್ಯ ಸೇವೆ

ಸಂಸ್ಕೃತ, ಹಿಂದಿ ವಿಷಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಜಯಚಾಮರಾಜರು ಋಗ್ವೇದವನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಲು ಪ್ರೋತ್ಸಾಹಿಸಿದರು. ಇದರ ಫಲಿತಾಂಶವಾಗಿ ಜಯಚಾಮರಾಜ ಗ್ರಂಥ ರತ್ನ ಮಾಲಾ ಹೊರಬಂದಿತು. ಸಾಮಾನ್ಯ ಮನುಷ್ಯರಿಗೆ ವೇದ ಅರಿಯುವಂತೆ ಮಾಡುವುದೇ ಇದರ ಉದ್ದೇಶವಾಗಿತ್ತು. ವೇದ ವೇದಾಂತ, ತಂತ್ರ, ಮಂತ್ರ ಶಾಸ್ತ್ರಗಳನ್ನು ಸ್ವತಃ ಓದಿ ತಿಳಿದುಕೊಂಡಿದ್ದರು. ಭಗವದ್ಗೀತೆಯನ್ನು ವಿವಿಧ ಆಯಾಮಗಳಲ್ಲಿ ಓದಿ ಅರಿತು ಭಾರತೀಯ ಸಂಸ್ಕೃತಿಗೆ ಹೋಲಿಸಿ ಪುಸ್ತಕ ಬರೆದರು. ಪುರಾಣ, ಅದ್ವೈತ, ಕುಂಡಲಿನಿ ಯೋಗ, ಅವಧೂತ ಮೊದಲಾದ ಕೃತಿಗಳನ್ನು ಇಂಗ್ಲಿಷ್​ನಲ್ಲಿ ಬರೆದರು. ಹಿಂದೂ ಧರ್ಮದ ಬಗ್ಗೆ ಪಾಶ್ಚಾತ್ಯರು ತಿಳಿದುಕೊಳ್ಳಲು ಇದರಿಂದ ಅನುಕೂಲವಾಯಿತು. ತಮ್ಮ ಕೊನೆಯ ಉಸಿರು ಇರುವವರೆಗೂ ದೇಶ, ವಿದೇಶಗಳಿಗೆ ತೆರಳಿ ಭಾರತೀಯ ಸಂಸ್ಕೃತಿ, ಧರ್ಮ, ಅಧ್ಯಾತ್ಮದ ಬಗ್ಗೆ ಉಪನ್ಯಾಸಗಳನ್ನು ನೀಡಿದರು. ಕನ್ನಡ ಪ್ರೇಮಿಯಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದು ಆ ಮೂಲಕವೂ ಸಾಹಿತ್ಯ ಸೇವೆ ಮಾಡಿದರು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ವಿುಸಲು ಪ್ರಾಯೋಜಕತ್ವ ವಹಿಸಿದ್ದರು.

Leave a Reply

Your email address will not be published. Required fields are marked *

Back To Top