Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ತಿಂದದ್ದು ಹೊಟ್ಟೆಯಲ್ಲಿ ಅರಗುವುದಿಲ್ಲ ಮೂರ್ತಿ ಕೆರೆಯಲ್ಲಿ ಕರಗುವುದಿಲ್ಲ!

Sunday, 09.09.2018, 3:03 AM       No Comments

| ಎಚ್.ಡುಂಡಿರಾಜ್

ನಾನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾಗ ಗ್ರಾಹಕರು, ಮೇಲಧಿಕಾರಿಗಳು ನನ್ನ ಫೋನನ್ನು ಐದು ನಿಮಿಷವೂ ಮೌನವಾಗಿ ಇರಲು ಬಿಡುತ್ತಿರಲಿಲ್ಲ. ರಜಾದಿನಗಳಲ್ಲೂ ಕರೆಗಳ ಹಾವಳಿ ಸಾಕಷ್ಟು ಇರುತ್ತಿತ್ತು. ಆಗ ಕೆಲಸದ ಒತ್ತಡದಿಂದಾಗಿ ನನ್ನ ತಲೆ ಮತ್ತು ನಿರಂತರ ಕರೆಗಳಿಂದ ನನ್ನ ಫೋನು ಎರಡೂ ಬಿಸಿಯಾಗಿರುತ್ತಿದ್ದವು. ನಿವೃತ್ತಿಯ ನಂತರ ನನಗಷ್ಟೇ ಅಲ್ಲ ನನ್ನ ಮೊಬೈಲ್ ಫೋನಿಗೂ ವಿಶ್ರಾಂತಿ ಸಿಕ್ಕಿದೆ. ಬರುವುದೇ ಬೆರಳೆಣಿಕೆಯಷ್ಟು ಕರೆಗಳು. ಅವುಗಳೂ ಕೂಡಾ ನಾನು ಕರೆಯನ್ನು ಸ್ವೀಕರಿಸಲು ಆಗದಿರುವ ಸ್ಥಿತಿಯಲ್ಲಿರುವಾಗಲೇ ಬರುತ್ತವೆ! ಫೋನ್ ಮಾಡಿದವರಿಗೆ ‘ರಿಟೈರ್ ಆಗಿದಾನೆ. ಫೋನ್ ತಗಳ್ಳೋಕೆ ಇವನಿಗೇನು ಧಾಡಿ?’ ಅಂತ ಅನ್ನಿಸಬಹುದು. ನಿನ್ನೆ ನಾನು ಸ್ನಾನ ಮಾಡುತ್ತಿದ್ದಾಗ ಮೊಬೈಲ್ ಒಂದೇಸಮನೆ ಹೊಡೆದುಕೊಳ್ಳುವುದು ಕೇಳಿಸಿತು. ಗಡಿಬಿಡಿಯಲ್ಲಿ ಸ್ನಾನ ಮುಗಿಸಿ ಬಂದು ನೋಡಿದರೆ ಯಾವುದೋ ಅಪರಿಚಿತ ಸಂಖ್ಯೆಯಿಂದ ಐದು ಮಿಸ್ಡ್ ಕಾಲುಗಳು. ಕುತೂಹಲ ತಡೆಯಲಾಗದೆ ಆ ನಂಬರಿಗೆ ನಾನೇ ಕರೆ ಮಾಡಿದೆ. ಆ ಕಡೆಯಿಂದ ‘ಗಜಮುಖನೆ ಗಣಪತಿಯೆ ನಿನಗೆ ವಂದನೆ’ ಎಂಬ ಹಾಡಿನ ರಿಂಗ್ ಟೋನ್. ಯಾರೋ ದೈವಭಕ್ತರೇ ಇರಬೇಕು ಅಂದುಕೊಂಡೆ. ಕರೆ ಸ್ವೀಕರಿಸಿದವರು ‘ಹಲೋ ನಾನು ಗಣಪತಿ’ ಅಂದರು. ಯಾವ ಗಣಪತಿ ಎಂದು ಗೊತ್ತಾಗಲಿಲ್ಲ. ಒನ್ ಮಿನಿಟ್ ಎಂದು ಯೋಚಿಸತೊಡಗಿದೆ. ಈತ ಎರಡು ವರ್ಷಗಳ ಕೆಳಗೆ ನನ್ನ ಸಾವಿಗೆ ಇವರೇ ಕಾರಣ ಎಂದು ಸಚಿವರೊಬ್ಬರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪೋಲಿಸ್ ಅಧಿಕಾರಿ ಆಗಿರಬಹುದೆ ಎಂದು ಭಯವಾಯಿತು.

ಈಗ ವಾಟ್ಸಾಪ್ ಮೂಲಕ ಯಾವ ದೇಶದಿಂದ ಯಾವ ದೇಶಕ್ಕೆ ಬೇಕಾದರೂ ಕರೆ ಮಾಡಬಹುದು. ಇದರ ಮುಂದಿನ ಹಂತವಾಗಿ ಬೇರೆ ಲೋಕಗಳಿಂದಲೂ ಭೂಲೋಕಕ್ಕೆ ಲೋಕಲ್ ಕಾಲ್ ಮಾಡುವ ಸೌಲಭ್ಯ ಯಾಕೆ ಬಂದಿರಬಾರದು? ಗಾಬರಿಯಲ್ಲಿ ‘ನಿಮ್ಮ ಸಾವಿಗೂ ನನಗೂ ಸಂಬಂಧವೇ ಇಲ್ಲ’ ಅಂದುಬಿಟ್ಟೆ. ಕರೆ ಮಾಡಿದ ವ್ಯಕ್ತಿ ನಾಟಕೀಯವಾಗಿ ಗಹಗಹಿಸಿ ನಕ್ಕು ‘ಭಕ್ತಾ ಹೆದರಬೇಡ. ನಿನ್ನ ಆತಂಕ ನನಗೆ ತಿಳಿಯಿತು. ನಾನು ಆ ಡಿಎಸ್​ಪಿ ಗಣಪತಿಯಲ್ಲ. ನಿಜವಾದ ಗಣಪತಿ. ಸನ್ ಆಫ್ ಪಾರ್ವತಿ ಮತ್ತು ಪಶುಪತಿ’ ಎಂದರು. ಅವರು ಹೇಳಿದ್ದು ನಿಜವಿದ್ದರೂ ಇರಬಹುದು ಅನ್ನಿಸಿತು. ಏಕೆಂದರೆ ತಂತ್ರಜ್ಞಾನ ಅದೆಷ್ಟು ಮುಂದುವರಿದಿದೆ ಎಂದರೆ ಹಿಂದೆ ಅಸಾಧ್ಯ, ಸುಳ್ಳು ಅಂದುಕೊಂಡಿದ್ದ ಅನೇಕ ಸಂಗತಿಗಳು ಈಗ ನಿಜವಾಗಿವೆ. ಅನುಮಾನವನ್ನು ಬದಿಗೊತ್ತಿ ಮಾತು ಮುಂದುವರಿಸಿದೆ. ಗಣಪ ಮತ್ತು ಈ ಗಣಪ ಭಕ್ತನ ನಡುವೆ ನಡೆದ ಸಂಭಾಷಣೆ ಹೀಗಿತ್ತು:

ಭಕ್ತ: ಓಹೋ ಒರಿಜಿನಲ್ ಗಣೇಶ, ವಿನಾಯಕ, ವಿಘ್ನೕಶ. ನಿನ್ನ ಹಬ್ಬಕ್ಕೆ ಇನ್ನೂ ನಾಲ್ಕು ದಿನ ಇರುವಾಗಲೇ ಬಂದುಬಿಟ್ಟೆಯಾ? ತುಂಬಾ ಸಂತೋಷ. ನಿನ್ನ ಧ್ವನಿಯನ್ನು ಕೇಳಿ ನನಗೆ ಅದೆಷ್ಟು ಸಂತೋಷವಾಗುತ್ತಿದೆಯೆಂದರೆ ನಿನ್ನ ಮೇಲೆ ಒಂದು ಕಿರುಗವಿತೆ ರಚಿಸಿ ಅದನ್ನು ನಿನಗೆ ಅರ್ಪಿಸುತ್ತಿದ್ದೇನೆ. ಓ ಗಜವದನ, ಇಗೋ ಸ್ವೀಕರಿಸು ನನ್ನ ಹನಿಗವನ.

ಮಳೆ ಬರಲಿ, ನೆರೆಬರಲಿ

ತೋಟ, ಮನೆ ಕುಸಿದಿರಲಿ

ಗೊಣಗದೆ ಬರುತ್ತಾನೆ ಗಣನಾಯಕ

ಬರುತ್ತೇನೆಂದು ಹೇಳಿ

ಕೊನೆ ಗಳಿಗೆಯಲ್ಲಿ

ಕೈಕೊಡುತ್ತಾನೆ ಜನನಾಯಕ!

ಗಣಪ: ಅಯ್ಯಾ ಕವಿಮಹಾಶಯ. ಅವಸರ ಮಾಡಬೇಡ. ನಾನಿನ್ನೂ ಭೂಲೋಕಕ್ಕೆ ಬಂದಿಲ್ಲ. ಕೈ-ಲಾಸದಿಂದಲೆ ಕಾಲು ಮಾಡುತ್ತಿದ್ದೇನೆ. ಈ ಬಾರಿ ನಾನು ಹಬ್ಬಕ್ಕೆ ಬರಬೇಕೆ ಬೇಡವೆ ಅನ್ನುವುದನ್ನು ಇನ್ನೂ ನಿರ್ಧರಿಸಿಲ್ಲ.

ಭಕ್ತ: ಅಯ್ಯೋ ದೇವರೆ! ನೀನೇ ಬರದಿದ್ದರೆ ಹಬ್ಬ ಮಾಡುವುದು ಹೇಗೆ? ಗಣೇಶನೇ ಗಣೇಶೋತ್ಸವದ ಕೇಂದ್ರಬಿಂದು. ದಯಮಾಡಿ ಬಂದು ಚೆಂದಗಾಣಿಸು ಓ ದಯಾಸಿಂಧು. ಬರುವುದಕ್ಕೆ ಮೀನ ಮೇಷ ಎಣಿಸಬೇಡ. ಅದರ ಬದಲು ಚೈತ್ರ ವೈಶಾಖ ಎಣಿಸು. ಆಗ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿ ಬರುತ್ತದೆ. ಮೂಡು ಗಣಪತಿಯಾಗಿ ಎಲ್ಲಾ ಕಡೆಗಳಲ್ಲಿ ಮೂಡಿ ಬರುವುದಕ್ಕೆ ನಿನಗೂ ಮೂಡು ಬರುತ್ತದೆ. ಸಕಲ ಸಿದ್ಧತೆಗಳನ್ನು ಮಾಡಿಕೊಂಡು ನಿನ್ನ ಆಗಮನಕ್ಕಾಗಿ ಕಾಯುತ್ತಿರುವ ನನ್ನಂಥ ಅಸಂಖ್ಯಾತ ಭಕ್ತರನ್ನು ನಿರಾಸೆಗೊಳಿಸಬೇಡ.

ಗಣಪ: ಹೌದೆ? ಏನೆಲ್ಲಾ ಸಿದ್ಧತೆ ಮಾಡಿರುವೆ?

ಭಕ್ತ: ಇಗೋ ಇಲ್ಲಿದೆ ನೋಡು. ನಮ್ಮ ಬಡಾವಣೆಯ ನಿವಾಸಿಗಳ ಬೇಡಿಕೆಗಳ ಪಟ್ಟಿಯನ್ನು ಸುಂದರವಾಗಿ ಮುದ್ರಿಸಿ ಇಟ್ಟಿದ್ದೇವೆ. ಬೆಂಗಳೂರೆಂಬ ಮಹಾನಗರದಲ್ಲಿದ್ದರೂ ನಮಗೆ ಕುಡಿಯಲು ನೀರು, ಟಾರ್ ರಸ್ತೆ, ಬಸ್ಸು, ಅಂಚೆ ಮುಂತಾದ ಮೂಲಭೂತ ಸೌಕರ್ಯಗಳು ಇನ್ನೂ ಸಿಕ್ಕಿಲ್ಲ. ಪ್ರತಿ ವರ್ಷವೂ ಹೀಗೆ ನಮ್ಮ ಬೇಡಿಕೆಗಳನ್ನು ಪಟ್ಟಿಮಾಡಿ ಅದನ್ನು ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಸುಮುಖನ ಸಮ್ಮುಖದಲ್ಲಿ ಜನಪ್ರತಿನಿಧಿಗಳಿಗೆ ನೀಡುತ್ತೇವೆ. ಆದರೆ ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾಯಿತು ಅನ್ನುವಂತೆ ಬಿಡಿಎ ಕಾರ್ಪೆರೇಶನ್ ತಿಕ್ಕಾಟದಲ್ಲಿ ನಮ್ಮ ಬೇಡಿಕೆಗಳು ಈಡೇರುತ್ತಿಲ್ಲ. ಹಾರ ಹಾಕಿಸಿಕೊಳ್ಳುವವರು ಜನರ ಸಮಸ್ಯೆಗಳನ್ನು ಪರಿಹಾರ ಮಾಡುತ್ತಿಲ್ಲ!

ಗಣಪ: ಸಾಕು ನಿಲ್ಲಿಸು. ನಾನು ಕೇಳಿದ್ದು ನಾನು ಬಂದಾಗ ಸತ್ಕರಿಸಲು ಏನೆಲ್ಲಾ ಸಿದ್ಧತೆ ಮಾಡಿರುವೆ ಎಂದು.

ಭಕ್ತ : ಚಿಂತಿಸದಿರು ಏಕದಂತ. ಈ ವಾರದ ‘ಪಂಚ್ ಕಜ್ಜಾಯ’ ವಿಶೇಷವಾಗಿ ನಿನಗೆ ಅಂದರೆ ಸಿದ್ಧಿವಿನಾಯಕನಿಗೆಂದೇ ಸಿದ್ಧ ಪಡಿಸಿದ್ದು. ಇದರ ಜೊತೆಗೆ ನಿನಗೆ ಪ್ರಿಯವಾದ ಮೋದಕ, ಉಂಡೆ, ಚಕ್ಕುಲಿ, ಕಡಬು ಇತ್ಯಾದಿ ಇದ್ದೇ ಇರುತ್ತವೆ.

ಗಣಪ: ಆಹಾ ಚೆನ್ನಾಗಿದೆ! ಈ ಮನುಷ್ಯರು ಭಲೇ ಕಿಲಾಡಿಗಳು. ನೀವು ಪಿಜ್ಜಾ, ಬರ್ಗರ್, ಪಾಸ್ತಾ, ನೂಡಲ್ಸ್ ಅಂತ ಹೊಸ ಹೊಸ ತಿನಿಸುಗಳನ್ನು ಸೇವಿಸುತ್ತೀರಿ. ನನಗೆ ಮಾತ್ರ ಸಾವಿರಾರು ವರ್ಷಗಳಿಂದಲೂ ಅದೇ ಮೋದಕ, ಚಕ್ಕುಲಿ. ಪ್ರತಿ ವರ್ಷವೂ ಅವುಗಳನ್ನೆ ತಿಂದು ತಿಂದು ನನಗಷ್ಟೇ ಅಲ್ಲ, ನನ್ನ ವಾಹನವಾದ ಇಲಿಗೂ ನಾಲಿಗೆ ಜಡ್ಡುಗಟ್ಟಿ ಹೋಗಿದೆಯಂತೆೆ. ಬೆಂಗಳೂರಿನ ರಸ್ತೆಗಳೆಲ್ಲ ಹೊಂಡಗುಂಡಿಗಳಿಂದ ತುಂಬಿವೆ. ಟ್ರಾಫಿಕ್ ಜಾಮ್ ವಾಯುಮಾಲಿನ್ಯ ಮಿತಿಮೀರಿದೆ. ಆದುದರಿಂದ ಇಲಿರಾಯ ನಾನು ಬರಲಾರೆ ಅನ್ನುತ್ತಿದ್ದಾನೆ. ವಾಹನವಿಲ್ಲದಿದ್ದರೆ ನಾನು ಸಂಚರಿಸುವುದು ಹೇಗೆ?

ಭಕ್ತ: ನಿನ್ನ ಜೊತೆಗೆ ಇಲಿ ಬರದಿದ್ದರೂ ಪರವಾಗಿಲ್ಲ ಗಣಪ. ಇಲ್ಲಿ ಎಲ್ಲಾ ಸರಕಾರಿ ಕಚೇರಿಗಳಲ್ಲೂ ಬೇಕಾದಷ್ಟು ದೊಡ್ಡ ದೊಡ್ಡ ಇಲಿ ಹೆಗ್ಗಣಗಳಿವೆ! ಅದೂ ಅಲ್ಲದೆ ಈಗ ಮೊಬೈಲ್ ಇದ್ದರೆ ಸಾಕು ಓಲಾ, ಊಬರ್ ಮುಂತಾದವುಗಳ ಮೂಲಕ ಬೇಕಾದ ವಾಹನಗಳನ್ನು ತರಿಸಿಕೊಳ್ಳಬಹುದು. ಅದು ಬೇಡ ಅನ್ನಿಸಿದರೆ ಮೆಟ್ರೊ ಕೂಡಾ ಉಂಟು.

ಗಣಪ: ಸರಿ. ನನಗೆ ಬರಲು ಮನಸ್ಸಿದೆ. ಆದರೆ ನನ್ನ ತಾಯಿ ಗೌರಿ ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಅವಳಿಗೆ ನನ್ನ ಸುರಕ್ಷತೆಯ ಚಿಂತೆ. ಈ ಬಾರಿ ಗಣಪನ ಎತ್ತರ ಐದು ಅಡಿಗಿಂತ ಜಾಸ್ತಿ ಇರಕೂಡದು ಅಂತ ಹೊಸ ಕಾನೂನು ಮಾಡಿದ್ದಾರಂತಲ್ಲ? ಹಿಂದೆ ಈಶ್ವರ ನನ್ನ ರುಂಡ ಕತ್ತರಿಸಿದಾಗ ಸರಿಯಾದ ತಲೆ ಸಿಗದೆ ಕೊನೆಗೆ ನಾನು ಗಜಾನನ ಆಗಬೇಕಾಯಿತು. ಈಗ ಎತ್ತರ ಹೆಚ್ಚಾಯಿತೆಂದು ಪುನಃ ತಲೆ ಕತ್ತರಿಸಿದರೆ ಇನ್ನು ಯಾವ ಪ್ರಾಣಿಯ ರುಂಡ ಬರುತ್ತದೋ ಆ ಶಿವನೇ ಬಲ್ಲ.

ಭಕ್ತ: ಅಯ್ಯೋ ಶಾಂತಂ ಪಾಪಂ. ನಿನ್ನ ತಲೆ ಕತ್ತರಿಸುವ ಧೈರ್ಯ ಯಾರಿಗಿದೆ ದೇವಾ? ಆ ಕಾನೂನು ಮಾಡಿರುವ ಉದ್ದೇಶ ಹಬ್ಬ ಮುಗಿದ ನಂತರ…

ಗಣಪ: ಗೊತ್ತಾಯಿತು ಬಿಡು.

ಪೂಜೆ ಪುರಸ್ಕಾರ, ಷೋಡಶೋಪಚಾರ

ಒಂದೋ ಎರಡೋ ವಾರ

ಆಮೇಲೆ ವಿಸರ್ಜನೆ, ಕೆರೆಗೆ ಹಾರ!

ಭಕ್ತ: ಸರಿಯಾಗಿ ಹೇಳಿದೆ ದೇವಾ. ಹಬ್ಬ ಮುಗಿದ ಬಳಿಕ ಮಿತಿಮೀರಿ ತಿಂದ ಉಂಡೆ, ಚಕ್ಕುಲಿ ನಮ್ಮ ಹೊಟ್ಟೆಯಲ್ಲಿ ಅರಗುವುದಿಲ್ಲ. ಕೆರೆಯಲ್ಲಿ ಮುಳುಗಿಸಿದ ನಿನ್ನ ಪಿಓಪಿ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ. ದೊಡ್ಡ ಮೂರ್ತಿಗಳನ್ನು ವಿಸರ್ಜನೆ ಮಾಡುವುದು ಕಷ್ಟ. ನಿನ್ನ ವಿಗ್ರಹವನ್ನು ಮಾಡಲು ಪಿಓಪಿ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಕೆಲವು ನಿಯಮಗಳನ್ನು ವಿಧಿಸಿದ್ದಾರೆ. ದಯವಿಟ್ಟು ಹೊಟ್ಟೆಯಲ್ಲಿ ಹಾಕಿಕೊಳ್ಳಬೇಕು.

ಗಣಪ: ಬೇಡ ಬೇಡ. ಆ ರಾಸಾಯನಿಕವನ್ನು ಹೊಟ್ಟೆಯಲ್ಲಿ ಹಾಕಿಕೊಂಡರೆ ನನ್ನ ಆರೋಗ್ಯವೂ ಕೆಟ್ಟೀತು. ನಿಜ ಹೇಳಬೇಕೆಂದರೆ ನನಗೂ ಮಣ್ಣಿನ ಮೂರ್ತಿಯೇ ಇಷ್ಟ. ನಾನು ಜನ್ಮತಾಳಿದ್ದು ನನ್ನ ತಾಯಿಯ ಮಣ್ಣಿನ ಮಗನಾಗಿಯೇ ಅಲ್ಲವೆ?

ಭಕ್ತ: ಹೌದು ದೇವಾ ಹೌದು. ನಿನ್ನ ಹಾಸ್ಯ ಪ್ರಜ್ಞೆ, ಸರಳತೆ ಹಾಗೂ ಪರಿಸರ ಪ್ರೇಮವನ್ನು ಎಷ್ಟು ಹೊಗಳಿದರೂ ಸಾಲದು. ನಿನಗೆ ಅಧಿಕಾರಿಗಳಿಂದಾಗಲೀ, ಬುದ್ಧಿಜೀವಿಗಳಿಂದಾಗಲೀ ಏನೂ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ. ನಿನ್ನ ತಾಯಿಯನ್ನೂ ಕರೆದುಕೊಂಡು ಹಬ್ಬಕ್ಕೆ ತಪ್ಪದೇ ಬಾ.

ಗಣಪ: ನೋಡೋಣ. ಅಂದ ಹಾಗೆ ಒಂದು ಗುಟ್ಟಿನ ವಿಷಯ. ಯಾರಿಗೂ ಹೇಳಬೇಡ. ಕಳೆದ ಬಾರಿ ಕರ್ನಾಟಕಕ್ಕೆ ಬಂದಾಗ ನಿಮ್ಮ ಮುಖ್ಯಮಂತ್ರಿಗಳು ಶಾದಿಭಾಗ್ಯ ಕಾರ್ಯಕ್ರಮದ ಬಗ್ಗೆ ಭಾರೀ ಪ್ರಚಾರ ಮಾಡುತ್ತಿದ್ದರು. ನನಗೂ ಆ ಯೋಜನೆಯಲ್ಲಿ ಮದುವೆಯಾಗಬಹುದು ಎಂದು ಆಸೆ ಇಟ್ಟುಕೊಂಡಿದ್ದೇನೆ.

ಭಕ್ತ: ಕ್ಷಮಿಸು ಗಣಪಾ. ಈಗ ಆ ಸಿಎಂ ಹೋಗಿ ಹೊಸ ಸಿಎಂ ಬಂದಿದ್ದಾರೆ. ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳು ತುಂಬಾ ದೈವಭಕ್ತರು. ನಾನು ಮಣ್ಣಿನ ಮಗ ಅನ್ನುತ್ತಾರೆ. ಆದರೆ ಇವರಿಂದ ನಿನಗೆ ಪ್ರಯೋಜನ ಆಗಲಿಕ್ಕಿಲ್ಲ. ಏಕೆಂದರೆ ಇವರ ಮೊದಲ ಆದ್ಯತೆ ಶಾದಿಭಾಗ್ಯವಲ್ಲ ಸಾಲಮನ್ನಾ! ಅದನ್ನು ಮಾಡದಿದ್ದರೆ ಇವರ ಕುರ್ಚಿ ಉಳಿಯುವುದಿಲ್ಲ. ನೀನು ಎಲ್ಲಿಯಾದರೂ ಸಾಲ ಮಾಡಿದ್ದರೆ ತಿಳಿಸು. ಅವರು ಅದನ್ನು ಮನ್ನಾ ಮಾಡಿಸುತ್ತಾರೆ.

ಗಣಪ: ಬೇಡ ಬಿಡು. ನನಗೆ ಅದರ ಅಗತ್ಯವಿಲ್ಲ. ಅದಿರಲಿ, ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದರೂ ನನ್ನನ್ನು ಸ್ವಾಗತಿಸುವ ಕಟೌಟ್, ಫ್ಲೆಕ್ಸ್, ಬ್ಯಾನರ್​ಗಳು ಕಾಣುತ್ತಿಲ್ಲವಲ್ಲ?

ಭಕ್ತಿ: ಹೌದು ದೇವಾ. ನ್ಯಾಯಾಲಯದ ಸೂಚನೆಯಂತೆ ಅವುಗಳನ್ನು ನಿಷೇಧಿಸಲಾಗಿದೆ. ಆದರೆ ಆ ಕಾರಣಕ್ಕೆ ನೀನು ಬಾರದೇ ಇರಬೇಡ. ಎಂದಿನಂತೆ ಬಂದು ನಮ್ಮನ್ನು ಹರಸು. ನಮ್ಮ ಸಂಕಷ್ಟಗಳನ್ನು ಪರಿಹರಿಸು. ಹಲೋ, ಹಲೋ…

(ಕರೆ ತುಂಡಾಯಿತು. ಪುನಃ ಕರೆ ಮಾಡಿದರೆ ಸಂಪರ್ಕ ಸಿಗಲಿಲ್ಲ. ದೇವರಿಗೂ ನೆಟ್ ವರ್ಕ್ ಸಮಸ್ಯೆಯೆ? ನನಗೆ ಫೋನ್ ಮಾಡಿದ್ದು ನಿಜವಾಗಿಯೂ ಗಣಪತಿಯೆ? ಅಥವಾ ಇದು ನನ್ನ ಗೆಳೆಯರ ಕಿತಾಪತಿಯೆ? ಏನೇ ಆಗಿರಲಿ, ಈ ಹಾಸ್ಯಮಯ ಸಂಭಾಷಣೆಯನ್ನು ಓದಿ ಆನಂದಿಸುವ ಎಲ್ಲರಿಗೂ ಆ ಹಾಸ್ಯರಸದ ಅಧಿಪತಿಯು ಮಂಗಳವನ್ನು ಉಂಟುಮಾಡಲಿ ಎಂದು ಹಾರೈಸುವೆ.)

ಮುಗಿಸುವ ಮುನ್ನ:

ಗಣೇಶನ ಮೂರ್ತಿಯಲ್ಲಿ

ಒಟ್ಟಿಗಿವೆ ಹಾವು, ಇಲಿ

ವೈರಿಗಳ ನಡುವೆ ಸ್ನೇಹ,

ರಾಜಕೀಯದಲ್ಲೂ ಹೀಗೆ

ಶತ್ರುಗಳ ನಡುವೆ ಮೈತ್ರಿ

ಕಾರಣ ಅಧಿಕಾರ ದಾಹ!

(ಲೇಖಕರು ಕವಿ ಹಾಗೂ ನಾಟಕಕಾರರು)

ಪ್ರತಿಕ್ರಿಯಿಸಿ:: [email protected], [email protected]

Leave a Reply

Your email address will not be published. Required fields are marked *

Back To Top