Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ನವೋದಯ ಕವಿಗಳ ದರ್ಶನ

Sunday, 09.09.2018, 3:02 AM       No Comments

| ಸುಮನಾ

ನಮ್ಮ ನಾಡಿನ ಕವಿ ಪರಂಪರೆ ಉತ್ಕೃಷ್ಟವಾದದ್ದು. ಹಳೆಗನ್ನಡ, ನವ್ಯ, ನವೋದಯ, ಹೊಸಗನ್ನಡ ಇತ್ಯಾದಿ ಕಾವ್ಯ ಪರಂಪರೆ ಹಾಗೂ ಈ ಸಮಯದಲ್ಲಿ ಶ್ರೇಷ್ಠ ಕೃತಿಗಳನ್ನು ನಾಡಿಗೆ ಕೊಟ್ಟ ಕವಿಗಳ ಬಗ್ಗೆ ತಿಳಿದಷ್ಟೂ ಮುಗಿಯುವುದಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಪಾಠಗಳಲ್ಲಿ ಬಂದಿರುವ ಎಲ್ಲೋ ಒಬ್ಬಿಬ್ಬರ ಕವಿಗಳ ಬಗ್ಗೆ ಅಲ್ಪಸ್ವಲ್ಪ ತಿಳಿದಿರಬಹುದಾದರೂ ಹೆಚ್ಚಿನ ಮಾಹಿತಿ ಇರುವುದಿಲ್ಲ. ಕೊನೇ ಪಕ್ಷ ಕವಿಯ ಹೆಸರು, ಅವರ ಪ್ರಮುಖ ಕೃತಿ, ಅದರ ಪ್ರಾಮುಖ್ಯ, ಕವಿಯ ನಿಲುವು ಇಂಥವುಗಳನ್ನು ತಿಳಿದುಕೊಳ್ಳಲು ಸಾಕಷ್ಟು ಜನರಿಗೆ ಆಸಕ್ತಿಯೂ ಇಲ್ಲ ಎನ್ನಬಹುದು. ಆದರೆ, ಆಸಕ್ತಿ ಇರುವ ಕೆಲವರಿಗಾದರೂ ಅನೇಕ ಬಾರಿ ಮಾಹಿತಿಯ ಕೊರತೆಯಾಗುತ್ತದೆ. ಇದು ಅಂತರ್ಜಾಲದ ಯುಗವಾಗಿದ್ದರೂ ಕವಿಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುವುದು ಸುಲಭವಲ್ಲ. ಅಂತರ್ಜಾಲದಲ್ಲಿ ಲಭ್ಯವಾಗುವ ಮಾಹಿತಿ ತಪ್ಪಾಗಿದ್ದರೆ ನಾವೂ ಅದನ್ನೇ ಅನುಸರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ, ನಿಖರವಾದ ಮಾಹಿತಿಯ ಅಗತ್ಯ ಎಂದಿಗಿಂತ ಇಂದು ಹೆಚ್ಚಾಗಿದೆ. ಕವಿಗಳ ಕುರಿತಾದ ಅಂಥದ್ದೊಂದು ಗುಣಮಟ್ಟದ ಸಂಗ್ರಹ ಕೃತಿಯೊಂದು ಇತ್ತೀಚೆಗೆ ಪ್ರಕಟವಾಗಿದೆ. ಅದುವೇ ‘ರಜತ ಕವಿ ದರ್ಶನ’.

ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಜೆ. ಪಿ. ರಾಜಣ್ಣ ಅವರು ಈ ಕೃತಿಯ ಕರ್ತೃ. ಸಾಂಸ್ಕೃತಿಕ ವಲಯದಲ್ಲಿ ಮೂರು ದಶಕಗಳಿಗೂ ಮಿಗಿಲಾದ ಅನುಭವ ಹೊಂದಿರುವವರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಕರೂ ಹೌದು. ಮೂರು ಸಾವಿರಕ್ಕೂ ಅಧಿಕ ನಿರೂಪಣೆಗಳನ್ನು ಮಾಡಿದ್ದು, ಈ ಕ್ಷೇತ್ರದ ಸಮಗ್ರ ಪರಿಚಯ ಹೊಂದಿದ್ದಾರೆ. ಬೆಂಗಳೂರು ಆಕಾಶವಾಣಿಯ ಬಿ-ಹೈ ಶ್ರೇಣಿಯ ಕಲಾವಿದರಾಗಿರುವ ರಾಮಣ್ಣ ಅವರಿಗೆ ಇದು ಚೊಚ್ಚಲ ಕೃತಿ.

ಬೆಂಗಳೂರಿನ ಹನುಮಂತನಗರದ ಹೊಂಬಾಳೆ ಪ್ರತಿಭಾರಂಗ ಆಯೋಜಿಸಿದ್ದ ಕವಿದನಿ ಎನ್ನುವ ಕಾರ್ಯಕ್ರಮಮಾಲೆಗಾಗಿ ನಾಡಿನ ಹೆಮ್ಮೆಯ ಕವಿಗಳ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಪರಿಚಯಿಸುವ ಕೆಲಸ ನಿರ್ವಹಿಸಿದ್ದ ರಾಜಣ್ಣ, ಈ ಸಂಗ್ರಹವನ್ನೇ ಈಗ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ಕವಿದನಿ ಕಾರ್ಯಕ್ರಮ ಕನ್ನಡ ನವೋದಯ ಸಂದರ್ಭದ 25 ಕವಿಗಳನ್ನು ಪರಿಚಯಿಸುವ ಉದ್ದೇಶ ಹೊಂದಿತ್ತು. ಕವಿಪರಿಚಯ, ಕಾವ್ಯಸುಧಾರಸ, ಗಮಕಸವಿ, ಗಾಯನಗಳನ್ನು ಒಳಗೊಂಡಿದ್ದ ಕಾರ್ಯಕ್ರಮ ಕಾವ್ಯಾಸಕ್ತರನ್ನು, ಸ್ವರಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅಲ್ಲಿ ಸಂಗ್ರಹಿಸಿದ್ದ ಮಾಹಿತಿಗಳೇ ‘ರಜತ ಕವಿ ದರ್ಶನ’ದಲ್ಲಿ ಕವಿಗಳ ಪರಿಚಯಾತ್ಮಕ ಲೇಖನಗಳಾಗಿ ಮೂಡಿ ಬಂದಿವೆ.

2015ರ ನವೆಂಬರ್ ತಿಂಗಳಿನ ಮೊದಲ ಭಾನುವಾರ ಆರಂಭವಾದ ಕವಿದನಿ ಕಾರ್ಯಕ್ರಮ 2018ರ ಜನವರಿಯವರೆಗೂ ನಡೆದಿದ್ದುದು ವಿಶೇಷ. ಇದಕ್ಕಾಗಿ ಲೇಖಕ ರಾಮಣ್ಣ ಅವರು ಪ್ರತಿ ಕವಿಯನ್ನು ಚೆನ್ನಾಗಿ ಅಧ್ಯಯನ ಮಾಡಿದರು. ಹಿರಿಯ ವಿದ್ವಾಂಸ ಪ್ರೊ. ಜಿ. ಅಶ್ವತ್ಥನಾರಾಯಣ ಅವರು ನವೋದಯ ಕಾಲದ 25 ಕವಿಗಳನ್ನು ಆಯ್ಕೆ ಮಾಡಿದರು. ‘ಕಾರ್ಯಕ್ರಮದ ನಿರೂಪಣೆಗೆ ಅಗತ್ಯವಾದ ಕವಿಗಳ ವಿವರ ಕಲೆ ಹಾಕಿ, ಅವುಗಳಲ್ಲಿರುವ ಸರಿತಪ್ಪುಗಳ ಪುನರ್ ವಿಮರ್ಶೆ ಮಾಡಿಕೊಳ್ಳುತ್ತ ಸಾಗಿದೆ’ ಎಂದು ಹೇಳಿಕೊಂಡಿದ್ದಾರೆ ಕೃತಿಯ ಕರ್ತೃ ರಾಮಣ್ಣ. ಪ್ರತಿ ಕವಿಗಳ ಪರಿಚಯದಲ್ಲಿ ವಿವಿಧ ಹಿರಿಯ ಲೇಖಕರು ಹೇಳಿದ್ದ ಮಾತುಗಳನ್ನು ಉಲ್ಲೇಖಿಸಿರುವುದು ಉತ್ತಮ ಪ್ರಯತ್ನವಾಗಿದೆ. ಅಲ್ಲದೆ, ಕವಿಗಳು ಬರೆದ ಸಾಲುಗಳನ್ನು ಆಯಾ ಕವಿ ಪರಿಚಯ ಲೇಖನಗಳಲ್ಲಿ ಬಳಸಿಕೊಂಡಿರುವುದು ಒಟ್ಟಾರೆ ಪುಸ್ತಕದ ಮೌಲಿಕತೆಯನ್ನು ಹೆಚ್ಚು ಮಾಡಿದೆ.

‘ಕನ್ನಡ ಕಟ್ಟಾಳು ಮಂ. ಅ. ವೆಂಕಟೇಶ್ ಅವರಲ್ಲಿದ್ದ ಕವಿಗಳ ಕುರಿತಾದ ಪತ್ರಿಕಾಸಂಗ್ರಹ, ಹಿರಿಯ ವಿದ್ವಾಂಸ ಪ್ರೊ. ಜಿ. ಅಶ್ವತ್ಥನಾರಾಯಣ ಅವರು ಒದಗಿಸಿದ ಆಕರ ಗ್ರಂಥಗಳು ನನ್ನ ಮಾಹಿತಿ ಸಂಗ್ರಹಕ್ಕೆ ನೆರವಿಗೆ ಬಂದವು. ಹೊಂಬಾಳೆಯ ಎಚ್. ಫಲ್ಗುಣ ಅವರ ಪ್ರೋತ್ಸಾಹದಿಂದ ಅವೆಲ್ಲ ಕೃತಿ ರೂಪಕ್ಕೆ ಬಂದಿವೆ’ ಎಂದು ಕೃತಿಯ ಲೇಖಕ ರಾಮಣ್ಣ ಅವರು ಹೇಳಿಕೊಂಡಿರುವುದು ಗಮನಾರ್ಹ.

ಕನ್ನಡದ ಮೇರು ಕವಿಗಳಾದ ಪಂಜೆ ಮಂಗೇಶರಾವ್, ರಾಷ್ಟ್ರಕವಿ ಗೋವಿಂದ ಪೈ, ಬಿ. ಎಂ. ಶ್ರೀಕಂಠಯ್ಯ, ತೀ. ನಂ. ಶ್ರೀಕಂಠಯ್ಯ, ಡಿ. ವಿ. ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ. ರಾ. ಬೇಂದ್ರೆ, ವಿ. ಸೀತಾರಾಮಯ್ಯ, ಬೆಟಗೇರಿ ಕೃಷ್ಣಶರ್ಮ, ಕೆ. ವಿ. ಪುಟ್ಟಪ್ಪ, ಮಧುರಚೆನ್ನ, ಕಡೆಂಗೋಡ್ಲು ಶಂಕರಭಟ್ಟ, ಪು. ತಿ. ನರಸಿಂಹಾಚಾರ್, ಜೆ. ಪಿ. ರಾಜರತ್ನಂ, ಶಾಂತಕವಿ, ಎಂ. ವಿ. ಸೀತಾರಾಮಯ್ಯ, ವಿನಾಯಕ ಕೃಷ್ಣ ಗೋಕಾಕ್, ದಿನಕರ ದೇಸಾಯಿ, ಎಸ್. ವಿ. ಪರಮೇಶ್ವರ ಭಟ್ಟ, ಕೆ. ಎಸ್. ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗ ಎಂ., ಕಯ್ಯಾರ ಕಿಞ ್ಞ್ಣ ರೈ, ಡಾ. ಸಿದ್ಧಯ್ಯ ಪುರಾಣಿಕ, ಸುಬ್ಬಣ್ಣ ರಂಗನಾಥ ಎಕ್ಕುಂಡಿ, ಡಾ. ಜಿ. ಎಸ್. ಶಿವರುದ್ರಪ್ಪ ಅವರ ಬಗ್ಗೆ ಕೃತಿಯಲ್ಲಿ ತಿಳಿಸಲಾಗಿದೆ. ನವೋದಯ ಕಾಲದ ಬಹುತೇಕ ಎಲ್ಲ ಪ್ರಮುಖ ಕವಿಗಳನ್ನೂ ಒಳಗೊಂಡಿರುವ ಮಾಹಿತಿ ಕಣಜ ಇದು ಎನ್ನಬಹುದು. ಸತ್ಯಕ್ಕೆ ಅಪಚಾರವೆಸಗದ ವಸ್ತುನಿಷ್ಠವಾಗಿರುವ ಸಂಗ್ರಹಯೋಗ್ಯ ಕೃತಿ.

ಕೃತಿ: ರಜತ ಕವಿ ದರ್ಶನ, ಲೇಖಕರು: ಜೆ. ಪಿ. ರಾಜಣ್ಣ

ಪ್ರಕಾಶನ: ಹೊಂಬಾಳೆ ಪ್ರತಿಭಾರಂಗ

ಪುಟ: 168 ಬೆಲೆ: 150 ರೂ.

Leave a Reply

Your email address will not be published. Required fields are marked *

Back To Top