ಹನ್ನೆರಡು ಬೆರಳಿನ ಹುಡುಗಿ

| ಸುನೀಲ್ ಬಾರ್ಕರ್

ಕಳೆದ ವಾರವಂತೂ ಭಾರತದ ಎಲ್ಲ ಪತ್ರಿಕೆಗಳ ಕ್ರೀಡಾಪುಟಗಳು ತುಂಬಿ ತುಳುಕುತ್ತಿದ್ದವು. ಭಾರತದ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡಕ್ಕೆ ತಿರುಗೇಟು ನೀಡಿದ್ದು, ಕೆಪಿಎಲ್​ನಲ್ಲಿ ತಂಡಗಳ ಪರಾಕ್ರಮ, ಭಾರತ ಎ, ಬಿ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳ ಪಂದ್ಯಾವಳಿ ಹೆಚ್ಚಿನ ಸ್ಥಾನ ಆಕ್ರಮಿಸಿಕೊಂಡಿದ್ದರೆ ಉಳಿದ ಜಾಗದಲ್ಲಿ ಏಷ್ಯಾಡ್​ನಲ್ಲಿ ಭಾರತದ ಪದಕಗಳ ಫೆವರಿಟ್ ಎನಿಸಿದ ಬ್ಯಾಡ್ಮಿಂಟನ್, ಕಬಡ್ಡಿ, ಹಾಕಿಯಲ್ಲಿ ತಂಡಗಳ ಪ್ರದರ್ಶನ, ಸ್ವತಃ ಅಂತಾರಾಷ್ಟ್ರೀಯ ಕ್ರೀಡಾಪಟುವಾದ ರಾಜವರ್ಧನ್ ರಾಥೋಡ್ ಕ್ರೀಡಾಮಂತ್ರಿಯಾದ ನಂತರ ಭಾರತದ ಪ್ರದರ್ಶನದ ಕುರಿತಾದ ಪರವಿರೋಧ ವಿಮರ್ಶೆ, ಪದಕಗಳ ಬಲಾಬಲ ಎಲ್ಲಿ ನೋಡಿದರೂ ಇವೇ. ಈ ಎಲ್ಲ ಭರಾಟೆಗಳ ನಡುವೆ ಮೂಲೆಯಲ್ಲೆಲ್ಲೋ ಬಂಗಾಳ ಮೂಲದ ಸ್ವಪ್ನಾ ಬರ್ಮನ್ ಎಂಬ ಕ್ರೀಡಾಪಟುವೊಬ್ಬಳು ಹೆಪ್ಟಾಥ್ಲಾನ್​ನಲ್ಲಿ ಸ್ವರ್ಣ ಗೆದ್ದದ್ದು ಒಂದು ಪುಟ್ಟ ಕಾಲಂನಲ್ಲಿ ಪ್ರಕಟವಾಗಿದ್ದನ್ನು ಹಲವರು ಗಮನಿಸಲೇ ಇಲ್ಲ.

ಅಷ್ಟಕ್ಕೂ ಈ ಹೆಪ್ಟಾಥ್ಲಾನ್​ನಲ್ಲಿ ಪದಕವನ್ನು ಯಾರೂ ನಿರೀಕ್ಷಿಸಿರಲಿಲ್ಲ ಅನ್ನೋದು ಬೇರೆ ಮಾತು. ಏಕೆಂದರೆ, ಇಲ್ಲಿಯವರೆಗೂ ಭಾರತೀಯರ್ಯಾರೂ ಸ್ವರ್ಣಪದಕವನ್ನು ಮುಟ್ಟಿರದಿದ್ದುದು ಇದಕ್ಕೆ ಕಾರಣ ಇರಬಹುದು. ಈ ಹೆಪ್ಟಾಥ್ಲಾನ್ ಇದೆಯಲ್ಲ, ಸಾಮಾನ್ಯರ ಯೋಚನೆಗೂ ನಿಲುಕದಂತಹ ಕ್ರೀಡೆ.

ಅಥ್ಲೆಟಿಕ್ಸ್​ನ ವಿವಿಧ ಕ್ರೀಡೆಗಳನ್ನು ಒಳಗೊಂಡಿರುವ ಈ ಆಟದಲ್ಲಿ 800 ಮತ್ತು 200 ಮೀಟರ್ ಓಟ, 100 ಮೀಟರ್ ಹರ್ಡಲ್ಸ್, ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ ಮತ್ತು ಭರ್ಜಿ ಎಸೆತ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಪಡೆಯುವ ಒಟ್ಟೂ ಅಂಕಗಳನ್ನು ಸೇರಿಸಿ ವಿಜೇತರನ್ನು ಘೊಷಿಸಲಾಗುತ್ತದೆ. ಎಲ್ಲ ಸ್ಪರ್ಧೆಗಳಿಗಿಂತಲೂ ಹೆಚ್ಚಿನ ತಯಾರಿ, ತರಬೇತಿ, ಶ್ರಮ ಮತ್ತು ಸಮಯವನ್ನು ಈ ಕ್ರೀಡೆ ಬೇಡುವುದರಿಂದ ಈವರೆಗೆ ಕೆಲವೇ ಸ್ಪರ್ಧಿಗಳು ಯಶಸ್ಸು ಪಡೆದಿದ್ದಾರೆ. ಈ ಮೊದಲು, ಕನ್ನಡತಿಯರಾದ ಜೆ.ಜೆ ಶೋಭಾ, ಪ್ರಮೀಳಾ ಅಯ್ಯಪ್ಪರಿಬ್ಬರೂ ಕಂಚು ಮತ್ತು ಸೋಮಾ ಬಿಸ್ವಾಸ್ ಬೆಳ್ಳಿ ಗೆದ್ದಿದ್ದು ಈವರೆಗಿನ ಸಾಧನೆಯಾಗಿತ್ತು.

ಪರಿಶ್ರಮ ಬೇಡುವ ಹೆಪ್ಟಾಥ್ಲಾನ್: ಪಶ್ಚಿಮ ಬಂಗಾಳದ ಜಲ್ಪೈಗುರಿ ಎಂಬ ಪುಟ್ಟ ಊರಿನವಳು ಸ್ವಪ್ನಾ. ತಂದೆ ತಳ್ಳುಗಾಡಿ ಎಳೆಯುವ ಕೂಲಿ ಕಾರ್ವಿುಕರಾಗಿದ್ದರು. 2013ರಲ್ಲಿ ತಂದೆ ಪಾರ್ಶ್ವವಾಯುಗೆ ತುತ್ತಾದ ಕಾರಣ ಕುಟುಂಬದ ಭಾರವನ್ನೆಳೆಯಲು ತಾಯಿ ಟೀ ಎಸ್ಟೇಟ್​ನಲ್ಲಿ ದಿನಗೂಲಿಗೆ ದುಡಿಯಲು ಆರಂಭಿಸಿದರು. ಬಡತನವನ್ನೇ ಹಾಸಿ ಹೊದ್ದು ಮಲಗುವ ಈಕೆಯ ಕುಟುಂಬ ಈಗಲೂ ತಗಡಿನ ಷೆಡ್ ಒಂದರಲ್ಲಿ ಜೀವಿಸುತ್ತಿದೆ.

ಹುಟ್ಟಿನಿಂದಲೇ ಕೈಕಾಲಿಗೆ ಹನ್ನೆರಡು ಬೆರಳನ್ನು ಹೊಂದಿದ್ದ ಸ್ವಪ್ನಾ, ಶಾಲಾಮಟ್ಟದಲ್ಲಿ ಎತ್ತರ ಜಿಗಿತದಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದಳು. ಕಿತ್ತು ತಿನ್ನುವ ಬಡತನದಲ್ಲಿ ಬರಿಗಾಲಿನಲ್ಲೇ ಸ್ಪರ್ಧಿಸುತ್ತಿದ್ದ ಈಕೆಗೆ ನಂತರದಲ್ಲಿ ಬಹುಮಾನವಾಗಿ ದೊರೆತ ಸ್ಟ್ರೈಕ್ ಶೂಗಳಲ್ಲಿ ತನ್ನ ಹನ್ನೆರಡೂ ಬೆರಳುಗಳನ್ನು ತೂರಿಸಲಾಗದೆ ಪಟ್ಟಪಾಡು ಅಷ್ಟಿಷ್ಟಲ್ಲ. ಆದರೂ ಧೃತಿಗೆಡದ ಈಕೆ ಒಂದೊಂದೇ ಮೆಟ್ಟಿಲನ್ನೇರುತ್ತ ಎತ್ತರ ಜಿಗಿತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಗಮನ ಸೆಳೆದಳು. ನಂತರ, ಹೆಚ್ಚಿನ ಪರಿಶ್ರಮ ಬೇಡುವ ಹೆಪ್ಟಾಥ್ಲಾನ್ ಕ್ರೀಡೆಯತ್ತ ಗಮನ ಹರಿಸಿದಳು.

ಆದರೆ, ಈ ಕಠಿಣ ಕ್ರೀಡೆಯ ಪರಿಣಾಮ ಈಕೆಯ ದೇಹದ ಮೇಲೂ ಉಂಟಾಗಿತ್ತು. ಬೆನ್ನು, ಕೀಲುನೋವುಗಳು ಪದೇ ಪದೆ ಬಾಧಿಸಿ ಅನಾರೋಗ್ಯಕ್ಕೆ ತುತ್ತಾದರೂ ಅವುಗಳನ್ನು ಪಕ್ಕಕ್ಕಿಟ್ಟು ತನ್ನ ತರಬೇತಿಯನ್ನು ಮುಂದುವರಿಸಿದಳು. ದೇಹವೇನೋ ಸ್ವಪ್ನಾಳ ಮಾತು ಕೇಳಿದರೆ, ಹಣ? ಏಷ್ಯಾಡ್​ಗಾಗಿ ತಯಾರಿ ನಡೆಸುತ್ತಿದ್ದಾಗ ಹಣದ ಕೊರತೆ ತೀವ್ರವಾಗಿ ಬಾಧಿಸಿತ್ತು. ಆಗ ಕೆಲವರು ಸಹಾಯಹಸ್ತ ಚಾಚಿದ್ದುದನ್ನು ನೆನಪಿಸಿಕೊಳ್ಳುತ್ತಾರೆ ಸ್ವಪ್ನಾ. ಕಳೆದ ವರ್ಷ ವಿಪರೀತ ಬೆನ್ನು ನೋವಿನಿಂದ ಕ್ರೀಡಾ ಜೀವನವನ್ನೇ ಮೊಟಕುಗೊಳಿಸಬೇಕಾಗಿ ಬಂದಾಗ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಬೆನ್ನುನೋವಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದ ಜಾನ್ ಗ್ಲಾಸ್ಟರ್ ಈಕೆಗೆ ಉಚಿತವಾಗಿ ಚಿಕಿತ್ಸೆ ನೀಡಿ ಗುಣಪಡಿಸಿದರೆ, ತಯಾರಿಗೆ ಅಗತ್ಯದ ಹಣಸಹಾಯ ನೀಡಿದವರಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಪ್ರಮುಖರು.

ಸ್ವಪ್ನ ಸಾಕಾರ

ಕಾಲುಗಳಲ್ಲಿ ಹನ್ನೆರಡು ಬೆರಳುಗಳನ್ನು ಹೊಂದಿರುವವರಿಗೆ ಕ್ರೀಡೆಯಲ್ಲಿ ಆಸಕ್ತಿ ಇದ್ದರೂ ಸಾಧನೆ ಎನ್ನುವುದು ಬರಿಯ ಹಂಬಲವಾಗಬಹುದು. ಏಕೆಂದರೆ, ಅನೇಕ ಹಂತಗಳಲ್ಲಿ ಅವರು ಎಲ್ಲರಿಗಿಂತ ಹೆಚ್ಚು ಸವಾಲುಗಳನ್ನು ಎದುರಿಸುತ್ತಾರೆ. ಅಂಥವುಗಳನ್ನು ಎದುರಿಸಿಯೂ ಏಷ್ಯಾಡ್​ನಲ್ಲಿ ಸ್ವರ್ಣ ಪದಕ ಗಳಿಸಿದ ಯುವತಾರೆ ಸ್ವಪ್ನಾ ಬರ್ಮನ್.

ಸವಾಲುಗಳ ಸರಮಾಲೆ

ಏಷ್ಯಾಡ್ ಸ್ಪರ್ಧೆಯ ಮುಂಚಿನ ದಿನಗಳಲ್ಲಿ ಕಾಡಿದ ಬೆನ್ನು ನೋವು, ಕಾಲಿನ ಬೆರಳುಗಳನ್ನು ಪುಟ್ಟ ಶೂಗಳಲ್ಲಿ ತೂರಿಸಿದ ಪರಿಣಾಮವಾಗಿ ಉಂಟಾದ ಗಾಯ, ಇವೆಲ್ಲವಕ್ಕೂ ಕಳಶವಿಟ್ಟಂತೆ, ಈ ಚಾಕಲೇಟ್ ಪ್ರಿಯೆಗೆ ಇದೇ ಸಮಯಕ್ಕೆ ಕಾಡಿದ ಹಲ್ಲು ನೋವು… ಇವಕ್ಕೆ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿದಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ಭಯ. ಆದರೆ, ಇವುಗಳಿಗೆ ಕ್ಯಾರೆ ಎನ್ನದ ಈ ಸಾಹಸಿ ಹಲ್ಲು ನೋವಿರುವ ಜಾಗಕ್ಕೆ ನೋವು ನಿವಾರಕ ಟೇಪ್ ಸುತ್ತಿಕೊಂಡೇ ಓಡಿ, ಸ್ವರ್ಣವನ್ನು ಗೆದ್ದು ಈ ಸಾಧನೆ ಮಾಡಿದ ಪ್ರಥಮ ಭಾರತೀಯಳೆಂಬ ಖ್ಯಾತಿ ಪಡೆದಳು. ಕಾಲುಗಳಲ್ಲಿ ಹನ್ನೆರಡು ಬೆರಳುಗಳ ಸ್ವಪ್ನಾಳಿಗಿನ್ನೂ ಇಪ್ಪತ್ತೊಂದು ವರ್ಷ. ಆದರೆ, ಕಷ್ಟಗಳ ವಿರುದ್ಧ ಈಜಾಡಿ ಈಕೆ ಸಾಧಿಸಿದ್ದುದು ಇನ್ನಷ್ಟು ಯುವ ಕ್ರೀಡಾಪಟುಗಳಿಗೆ ನಿಸ್ಸಂದೇಹವಾಗಿಯೂ ಸ್ಪೂರ್ತಿ.