ಆಫೀಸ್ ಮತ್ತು ಅವಳು!

ಉದ್ಯೋಗಸ್ಥ ಮಹಿಳೆಯರು ದಿನದ ಅಮೂಲ್ಯ ಸಮಯವನ್ನು ಕಚೇರಿಯಲ್ಲೇ ಹೆಚ್ಚು ಕಳೆಯುವುದು ನಿಜ. ಹೀಗಿರುವಾಗ, ಅಲ್ಲಿ ಒಂದಿಷ್ಟು ಸ್ನೇಹ-ಸಲುಗೆಯ ಸಂಬಂಧಗಳು ಬೆಳೆದುಬಿಡುವುದೂ ಸಹಜ. ಆದರೆ, ಅದು ಎಷ್ಟೆಂದರೂ ಕಚೇರಿ. ಅಲ್ಲಿ ಖಾಸಗಿ ಭಾವನೆಗಳಿಗೆ ಹೆಚ್ಚು ಅವಕಾಶ ನೀಡುವುದು ಸರಿಯಲ್ಲ. ಪ್ರಾಕ್ಟಿಕಲ್ ಆಗಿದ್ದಷ್ಟು ಕೆಲಸಕ್ಕೆ ‘ಗುಣಮಟ್ಟದ ಸಮಯ’ ನೀಡಲು ಸಾಧ್ಯವಾಗುತ್ತದೆ. ಅಲ್ಲದೆ, ಯಾರೊಪ್ಪಲಿ, ಬಿಡಲಿ. ಹೆಣ್ಣುಮಕ್ಕಳ ಬಗೆಗೆ ಕಚೇರಿಗಳಲ್ಲಿ ಹೆಚ್ಚಿನ ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ, ಮಹಿಳೆಯರು ಸಾಧ್ಯವಾದಷ್ಟೂ ಭಾವನೆಗಳಿಗೆ ಜೋತು ಬೀಳದೆ ಇರುವುದು ಉತ್ತಮ.

| ಪ್ರೀತು ಗಣೇಶ್ ಕಾಲೂರು

‘ಅವಳದು ಏನು ವಯ್ಯಾರ, ಏನ್ ಅಹಂ ಅಂತೀಯ..! ನಾವೆಲ್ಲ ಜತೆಗೆ ಕೆಲಸಕ್ಕೆ ಸೇರಿದವರು ಅಂತಾನೆ ಮರೆತು ಬಿಟ್ಟಿದ್ದಾಳೆ. ಏನೋ ಲಕ್​ನಿಂದ ಆಫೀಸರ್ ಆಗಿದ್ದಾಳೆ ಅಂತ ಆ ಪಾಟಿ ಆಡೋದಾ? ಅವಳು ಹೇಳಿದ್ದೇ ಆಗ್ಬೇಕು. ಎಷ್ಟೂಂತ ಸಹಿಸೋದು? ನನಗೂ ನೋಡಿ ನೋಡಿ ಸಾಕಾಗಿದೆ’. ಅಷ್ಟರಲ್ಲಿ ಮತ್ತೊಬ್ಬಾಕೆ ‘ಏನೇ ಆಗ್ಲಿ ಇದ್ದ ಸಾಲ ತೀರಿಸಿಕೊಂಡ್ಲು, ಸಿಕ್ಕಾಪಟ್ಟೆ ದುಡ್ಡು ಮಾಡ್ಕೊಂಡ್ಲು, ಇನ್ನೇನು ಬೇಕು ಹೇಳು? ಹ್ಂ. ಹೋಗ್ಲಿ ಬಿಡು, ನಮಗೇಕೆ ಅವಳ ವಿಷಯ? ಎಲ್ಲರಿಗೂ ಒಂದೊಂದು ಟೈಂ’ ಎಂದಾಗ ಎಲ್ಲರೂ ಮೌನ. ಅಷ್ಟರಲ್ಲಿ ಮತ್ತೊಂದೆಡೆಯಿಂದ ಗಂಡಸು ಧ್ವನಿ, ‘ಅಯ್ಯೋ. ಆಫೀಸು ಕತೆ ಏನೂಂತ ಹೇಳಲಪ್ಪ. ಬರೇ ಹೆಂಗಸರದ್ದೇ ಆಟ. ಒಬ್ಬರ ಜತೆ ಮಾತಾಡಿದ್ರೆ ಮತ್ತೊಬ್ಬರಿಗೆ ಆಗಲ್ಲ. ಮೊನ್ನೆ ಹಬ್ಬ ಆಯ್ತಲ್ಲ, ಆಗ ನಮ್ ಬಾಸ್ ಸ್ವೀಟ್ ತಂದಿದ್ರು, ಒಬ್ಬಾಕಿನ ಕರೆದು ಬಾಕ್ಸ್ ಕೊಟ್ಟು ಎಲ್ರೂ ಹಂಚ್ಕೊಳಿ ಅಂದ್ರು. ಎಲ್ರೂ ಹಂಚ್ಕೊಂಡು ತಿಂದ್ವಿ. ಅರ್ಧ ತಾಸು ಆಗಿತ್ತೇನೋ, ಮತ್ತೊಬ್ಬಾಕೆ ಬಾಸ್ ಚೇಂಬರಿಗೆ ಹೋದವಳು ನಾವೆಲ್ಲ ನೋಡ್ತಾ ಇದ್ದಂತೆ ಗೊಳೋ ಅಂತ ಅತ್ತು ಬಿಡೋದಾ? ‘ನನಗೆ ಕೊಟ್ಟಿದ್ರೆ ನಾನೇ ಹಂಚುತ್ತಿದ್ದೆ, ನೀವು ಯಾಕೆ ಅವಳಿಗೆ ಕೊಡಬೇಕಿತ್ತು’ ಅಂತ. ಇದೇನು ಕಚೇರಿನಾ ಕಾಲೇಜು ಕ್ಯಾಂಪಸ್ಸಾ ಅನಿಸಿತ್ತು ಕಣೋ. ಏನು ಹೆಂಗ್ಸರಪ್ಪಾ, ಸ್ವಲ್ಪ ಆದ್ರೂ ಸಂಸ್ಕಾರ ಬೇಡ್ವಾ?’ ಎಂದು ಇತರರು ಕೇಳಿಸಿಕೊಳ್ಳುತ್ತಾರೆ ಎಂಬ ಪರಿವೆಯೇ ಇಲ್ಲದೆ ಫೋನಿನಲ್ಲಿ ಮಾತಾಡ್ತಿದ್ರು….ಇವೆಲ್ಲ ಇತ್ತೀಚೆಗೆ ಬೆಂಗಳೂರಿನ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ ಕಾಲಿಡಲು ಕಷ್ಟವೆನಿಸುವಷ್ಟು ನೂಕುನುಗ್ಗಲು ಇದ್ದರೂ ಮಧ್ಯದಲ್ಲಿ ಎಲ್ಲಿಂದಲೋ ಕಿವಿಗಪ್ಪಳಿಸಿದ ಮಾತುಗಳು!!

ಇಂದಿನ ದಿನಗಳಲ್ಲಿ ಸ್ತ್ರೀಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಸ್ಥಾನವಿದೆ. ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆಯಿರುವುದಿಲ್ಲ. ನಗರದ ಹೆಚ್ಚಿನ ಸಂಖ್ಯೆಯ ಮಹಿಳೆಯರೆಲ್ಲ ದುಡಿಯುವವರೇ. ಮನೆಯಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಮುಂಜಾನೆ ಮನೆ ಬಿಟ್ಟರೆ ರಾತ್ರಿಯೇ ಮನೆ ಸೇರಿಕೊಳ್ಳುವುದು. ದಿನದ ಹೆಚ್ಚಿನ ಸಮಯವನ್ನು ಕಚೇರಿಯಲ್ಲಿಯೇ ಕಳೆಯುತ್ತಾರೆ. ಸಹಜವಾಗಿ, ಕಚೇರಿಯಲ್ಲಿಯೇ ಅವರವರ ಮನಸ್ಥಿತಿಗೆ ತಕ್ಕಂತೆ ಸ್ನೇಹಿತರೂ ಆಗುತ್ತಾರೆ, ಅಷ್ಟಕ್ಕಷ್ಟೆ ಎನ್ನುವವರೂ ಸಿಗುತ್ತಾರೆ. ಅಲ್ಲಿ ಕೆಲವೊಮ್ಮೆ ಅತ್ಯಂತ ಸಹಜವಾಗಿ ಪರಸ್ಪರ ಕಿತ್ತಾಟವೂ ಜರುಗಿಹೋಗುತ್ತವೆ. ಈ ಕಚೇರಿ ಕಿತ್ತಾಟವೇನೂ ಕಡಿಮೆಯಿರುವುದಿಲ್ಲ. ಒಬ್ಬರ ಏಳಿಗೆಯನ್ನು ಮತ್ತೊಬ್ಬರು ಸಹಿಸುವುದಿಲ್ಲ. ಯಾರಾದರೂ ಒಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರೆ ಸಾಕು, ಅವರ ಮೇಲೆ ಇಲ್ಲದ ಕಥೆ ಸೃಷ್ಟಿಸಿ ಒಳ್ಳೆಯತನಕ್ಕೆ ಕಪ್ಪು ಮಸಿ ಬಳಿಯುವುದನ್ನೇ ಖಯಾಲಿ ಮಾಡಿಕೊಂಡವರ ಸಂಖ್ಯೆಯೂ ಕಡಿಮೆಯಿಲ್ಲ. ಒಂದು ಕಚೇರಿಯ ಮುಖ್ಯಸ್ಥೆ ಮಹಿಳೆಯಾಗಿದ್ದು, ಇನ್ನೊಬ್ಬ ಮಹಿಳೆಯ ಮೇಲೆ ಯಾವುದೋ ಹಳೆಯ ವೈಷಮ್ಯ ಇಟ್ಟುಕೊಂಡು ಅಥವಾ ಇನ್ಯಾವುದೋ ನೆಪವನ್ನಿಟ್ಟುಕೊಂಡು ದಿನಂಪ್ರತಿ ಟೀಕಿಸುತ್ತ ನಿಂದಿಸುತ್ತ ಇದ್ದರೆ, ಆ ಮಹಿಳೆ ಮಾಡುವುದಾದರೂ ಏನು? ಕೆಲಸದ ಜಂಜಾಟವೇ ಬೇಡ ಎನ್ನಲು ಆಕೆ ಸ್ಥಿತಿವಂತಳಾಗಿರುವುದಿಲ್ಲ. ಕೆಲವೊಮ್ಮೆ ಇಡೀ ಕುಟುಂಬ ಅವಳನ್ನೇ ಅವಲಂಬಿಸಿರುತ್ತದೆ.

ಅತ್ತ ಮನೆಯಲ್ಲಿಯೂ ಆರ್ಥಿಕವಾಗಿ ನೆಮ್ಮದಿಯಿಲ್ಲ, ಇತ್ತ ಕಚೇರಿಯಲ್ಲೂ ನೆಮ್ಮದಿಯಿಲ್ಲ ಎನ್ನುವ ಸ್ಥಿತಿ ನಿರ್ವಣವಾಗುತ್ತದೆ. ಇಂತಹ ಸಮಯದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಖಿನ್ನತೆಗೆ ಒಳಗಾಗುವ ನಿದರ್ಶನಗಳಿಗೂ ಕಡಿಮೆಯಿಲ್ಲ. ಮನೆಯಲ್ಲಿ ಬೇಕಾದರೆ ಕಿರುಚಾಡಿ ತಮ್ಮಿಷ್ಟದಂತೆ ವರ್ತಿಸ ಬಹುದು, ಆದರೆ ಕಚೇರಿಯಲ್ಲಿ ಹಾಗಿರಲು ಸಾಧ್ಯವೇ? ತಾನು ಮೇಲು, ಅಧಿಕಾರವಿದೆ, ಏನು ಬೇಕಾದರೂ ಮಾಡಬಹುದು ಎಂಬ ಅಹಂ ಸಲ್ಲ.

ಕಚೇರಿಯಲ್ಲಿ ಹೀಗಿದ್ದರೆ ಚೆನ್ನ

# ನಿಮ್ಮನ್ನು ನೀವು ಸದಾ ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳಿ. ಬಿಡುವಿದೆ ಎಂದು ಸುಖಾಸುಮ್ಮನೆ ಹರಟದಿರಿ.

# ಸಂವಹನದಲ್ಲಿ ಗಮನವಿರಲಿ. ಈಗಿನ ಕಾಲದಲ್ಲಿ ಫೇಸ್​ಬುಕ್, ವಾಟ್ಸ್ ಆಪ್ ಸಂದೇಶಗಳು ಫ್ಯಾಷನ್ ಆಗಿವೆ. ಸಹೋದ್ಯೋಗಿಗಳೊಂದಿಗೆ ಎಷ್ಟೇ ಅನ್ಯೋನ್ಯವಾಗಿದ್ದರೂ ಕೆಲಸಕ್ಕೆ ಬಾರದ ಸಂದೇಶಗಳನ್ನು ಕಳುಹಿಸದಿರಿ. ಅದು ಯಾವಾಗ ಯಾರಿಗೆ ಬೇಕಾದರೂ ರವಾನೆಯಾಗಬಹುದು.

# ನಿಮ್ಮ ಮಾತು ಹಾಗೂ ನಡತೆ ಬೇರೆಯವರು ನಂಬುವಂತಿರಲಿ. ಅಂದರೆ, ಪ್ರಾಮಾಣಿಕವಾಗಿ ಕಚೇರಿಯ ಕೆಲಸದಲ್ಲಿ ತೊಡಗಿಸಿಕೊಳ್ಳಿ.

# ನಿರ್ದಿಷ್ಟ ಕೆಲಸದ ಬಗ್ಗೆ ಅರಿವಿಲ್ಲ ಎಂದರೆ ಮತ್ತೊಬ್ಬರಿಂದ ಕೇಳಿ ತಿಳಿದುಕೊಳ್ಳಿ.

# ಸಾಧ್ಯವಾದಷ್ಟು ದೂರುಗಳನ್ನು ನಿರ್ಲಕ್ಷಿಸಿ. ಕಣ್ಣು ಕಿವಿಗಳನ್ನು ತೆರೆದಿಡಿ, ನಿಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಕೂಲಂಕಷವಾಗಿ ಅವಲೋಕಿಸಿ. ಹಾಗೆಂದು ಬರೀ ಅದೇ ಕಾಯಕವಾಗದಿರಲಿ.

# ಕಚೇರಿಗೆ ಬರುವಾಗ ಶಿಸ್ತಿನ ಉಡುಪು ಧರಿಸಿ. ನಾವು ಧರಿಸುವ ಉಡುಪು ನಮ್ಮ ಬಗ್ಗೆ ಖಚಿತವಾದ ಅಭಿಪ್ರಾಯ ಮೂಡಿಸುತ್ತವೆ.

# ಧೈರ್ಯದಿಂದ ಮಾತನಾಡುವುದನ್ನು ರೂಢಿಸಿಕೊಳ್ಳಿ, ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾವುದೇ ತಪ್ಪಾದಾಗ ಮುಖ್ಯಸ್ಥರೊಂದಿಗೆ ಮುಕ್ತವಾಗಿ ಹೇಳಿಕೊಳ್ಳಿ, ಒಮ್ಮೆ ರೇಗಾಡಿದರೂ ಮತ್ತೊಮ್ಮೆ ಕೂಲ್ ಆಗುತ್ತಾರೆ.

# ಕೆಲಸದ ಬಗ್ಗೆ ಹೆಚ್ಚು ಗಮನವಹಿಸಿ, ಬೇರೆಯವರಿಗಿಂತ ಪರಿಣತರಾಗಿ ಎಲ್ಲರೂ ಇಷ್ಟಪಡುವಂತೆ ಇರಿ.

# ಕೆಲಸದ ಸ್ಥಳದಲ್ಲಿ ನಿಮ್ಮ ಮೇಲೆ ಕೆಂಗಣ್ಣಿದ್ದರೆ, ಇತರ ಸಹೋದ್ಯೋಗಿಗಳು ಸಹ ನಿಮ್ಮೊಡನೆ ಅನ್ಯೋನ್ಯವಾಗಿರಲು ಭಯಪಡುತ್ತಾರೆ. ದೂರವಿರಲು ಬಯಸಬಹುದು. ಹಾಗಾಗಿ ಕೆಲವೊಮ್ಮೆ ಆತ್ಮೀಯರೆನಿಸಿಕೊಂಡವರನ್ನೂ ಕಳೆದುಕೊಳ್ಳಬೇಕಾಗಬಹುದು. ಇಂತಹ ಸನ್ನಿವೇಶಗಳಲ್ಲಿ ಚಿಂತೆ ಬಿಟ್ಟು ಬಿಡಿ. ತೋರಿಕೆಯ ಸ್ನೇಹಿತರಿಗಿಂತ ನಿಜವಾದ ಗೆಳೆಯರಷ್ಟೇ ಜತೆಗಿದ್ದರೆ ಸಾಕು.

ಹೀಗೆ ಮಾಡದಿರಿ

# ಕೆಲಸದ ಬಗ್ಗೆ ಆಧಾರವಿಲ್ಲದೆ ದೂರು ಹೇಳಬೇಡಿ.

# ಯಾವುದೇ ಸಮಯದಲ್ಲಿ ನಿಮ್ಮನ್ನು ನೀವು ನಿಂದಿಸಿಕೊಳ್ಳಬೇಡಿ, ಹೊಗಳಿಕೊಳ್ಳಲೂಬೇಡಿ.

# ನಿಮ್ಮಿಂದ ನಡೆದಿಲ್ಲದ ಯಾವುದೇ ತಪ್ಪನ್ನು ತಲೆಯ ಮೇಲೆ ಹಾಕಿಕೊಳ್ಳದಿರಿ.

# ಕಚೇರಿ ಸಮಯ ಮುಗಿದ ಮೇಲೆ ನಡೆದಿದ್ದನ್ನು ಯೋಚಿಸಿ ಕೊರಗಬೇಡಿ. ಬೇರೆ ವಿಷಯದ ಕಡೆ ಗಮನವಹಿಸಿ. ಏಕೆಂದರೆ ಕೆಲವೊಂದು ವಿಷಯಗಳ ಬಗ್ಗೆ ಹಗಲು ರಾತ್ರಿ ಎನ್ನದೆ ಯೋಚನೆ ಮಾಡಿದರೂ ಪರಿಹಾರ ದೊರಕುವುದಿಲ್ಲ.

# ನಡೆದ ಘಟನೆಯನ್ನು ಹಾಗೇ ಸುಮ್ಮನೆ ದಾಖಲಿಸಿಡಿ. ಮುಂದೊಂದು ದಿನ ಸಮಸ್ಯೆ ಎದುರಾದಾಗ ಸಂಬಂಧಿಸಿದವರ ಬಳಿ ನ್ಯಾಯ ಕೇಳಲು ದಾಖಲೆಯ ಅವಶ್ಯಕತೆಯಿರುತ್ತದೆ.

# ಯಾರೊಂದಿಗಾದರೂ ಸಹಾಯ ಯಾಚಿಸುತ್ತ ತುಂಬ ಹೊತ್ತು ಕಾಯಬೇಡಿ. ಅವರು ಉದ್ದೇಶಪೂರ್ವಕವಾಗಿ ಸತಾಯಿಸುತ್ತಿದ್ದರೆ, ಸಮಸ್ಯೆ ಆಲಿಸಲು ತಯಾರಿಲ್ಲ ಎಂದಾದರೆ ಮತ್ತೊಬ್ಬರೊಡನೆ ಮಾತನಾಡಿ.

# ನಿಮ್ಮ ಬಗ್ಗೆ ನೀವು ಎಚ್ಚರ ವಹಿಸಲು ಮರೆಯಬೇಡಿ. ಕಚೇರಿಯಲ್ಲಿ ತೊಂದರೆಯಾದರೆ ಆಪ್ತರೊಂದಿಗೆ, ಮನೆಯವರೊಂದಿಗೆ ರ್ಚಚಿಸಿ. ಮನದಲ್ಲೇ ಇಟ್ಟುಕೊಂಡರೆ ಗೊಂದಲ ಹೆಚ್ಚಾಗುತ್ತದೆ.

# ಮುಖ್ಯಸ್ಥರನ್ನು ಆಕರ್ಷಿಸಲು, ಅವರಿಂದ ಮೆಚ್ಚುಗೆ ಪಡೆಯಲು ದೀರ್ಘಕಾಲ ಕಚೇರಿಯಲ್ಲಿರುವ ಅಭ್ಯಾಸ ಮಾಡಿಕೊಳ್ಳಬೇಡಿ.

ಮಹಿಳೆಯರ ಬಗ್ಗೆ ಕುತೂಹಲ ಹೆಚ್ಚು

ಕಚೇರಿ ಎಂದರೆ ಎಲ್ಲ ರೀತಿಯ ಜನರೂ ಇರುವಂಥ ಸ್ಥಳ. ಮೇಲಿನ ಹಂತದ ಅಧಿಕಾರಿಗಳಿಂದ ಕೆಳವರ್ಗದವರೆಗೆ ಎಲ್ಲರೂ ಇರುತ್ತಾರೆ. ಅಧಿಕಾರ, ಅಂತಸ್ತು ಎಂಬುದು ಯಾರಿಗೂ ಶಾಶ್ವತವಲ್ಲ. ಇದು ಕಾರ್ಯ ಜೀವನದ ಒಂದು ಭಾಗವಷ್ಟೆ, ಆದರೆ ಇದೇ ಜೀವನವಲ್ಲ. ಕಚೇರಿಯಲ್ಲಿರುವಷ್ಟೂ ಸಮಯ ಒಬ್ಬರಿಗೊಬ್ಬರು ಅನ್ಯೋನ್ಯವಾಗಿ ತಮ್ಮ ವ್ಯಾಪ್ತಿಗೆ ಬರುವ ಕೆಲಸವನ್ನು ಖುಷಿಖುಷಿಯಿಂದ ಮಾಡುತ್ತ ಸಾಗಿದರೆ ಎಲ್ಲವೂ ಸಲೀಸಾಗುವುದರಲ್ಲಿ ಸಂದೇಹವಿಲ್ಲ. ಆದರೂ, ಕೆಲವೊಮ್ಮೆ ವ್ಯತಿರಿಕ್ತ ಮನಸ್ಥಿತಿಯ ಸಹೋದ್ಯೋಗಿಗಳು, ಮೇಲಧಿಕಾರಿಗಳು ಸಿಗಬಹುದು. ಆಗ ಧೈರ್ಯಗೆಡದೆ ಪರಿಸ್ಥಿತಿ ನಿಭಾಯಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಲೈಂಗಿಕ ದೌರ್ಜನ್ಯ, ಲಿಂಗ ತಾರತಮ್ಯ ನಡೆದಾಗ ಸುಮ್ಮನಿರದೆ ಮೇಲಧಿಕಾರಿಗಳ ಗಮನಕ್ಕೆ ತರುವುದು ಉತ್ತಮ. ಕಚೇರಿಗಳಲ್ಲಿ ಪುರುಷರಿಗಿಂತ ಮಹಿಳೆಯರ ನಡೆನುಡಿ, ವರ್ತನೆ, ಖಾಸಗಿ ಬದುಕಿನ ಮೇಲೆ ಗಮನವಿಡುವುದು ಹೆಚ್ಚು. ಹೀಗಾಗಿ ಖಾಸಗಿ ಬದುಕಿನ ಬಗ್ಗೆ ತೀರ ಮುಕ್ತತೆಯೂ ಬೇಡ, ಅತಿಯಾದ ಗೌಪ್ಯವೂ ಬೇಡ. ಎರಡೂ ಅಪಾಯಕಾರಿ, ನಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಲು ಅವಕಾಶ ಮಾಡಿಕೊಡುತ್ತವೆ.

ಉದ್ಯೋಗಸ್ಥ ಮಹಿಳೆಯರಲ್ಲಿ ಖಿನ್ನತೆ

ಮಹಿಳೆಯರು ಬಹುಬೇಗ ಇತರರೊಂದಿಗೆ ಬೆರೆಯುವ, ಅವರನ್ನು ಭಾವನಾತ್ಮಕವಾಗಿ ಸಂಬಂಧಗಳ ವ್ಯಾಪ್ತಿಗೆ ತರುವ ಸ್ವಭಾವದವರಾಗಿರುವುದರಿಂದ ಕಚೇರಿಯಲ್ಲಿ ಹೆಚ್ಚು ಪ್ರಾಕ್ಟಿಕಲ್ ಆಗಿರುವುದು ಬಹುಮುಖ್ಯ. ಇಲ್ಲಿ ಎಲ್ಲ ಸಂಬಂಧಗಳೂ ಸಹೋದ್ಯೋಗಿ, ಹೆಚ್ಚೆಂದರೆ ಹಿತೈಷಿಗಳ ವ್ಯಾಪ್ತಿಯಲ್ಲೇ ಇರಬೇಕಾದುದು ಅಗತ್ಯ. ಯಾರೊಂದಿಗಾದರೂ ಸ್ವಲ್ಪ ಹೆಚ್ಚು ಬೆರೆತು, ಒಡನಾಡಲು ಆರಂಭಿಸಿದರೆ ಎಲ್ಲರ ಕಣ್ಣು ನಿಮ್ಮ ಮೇಲೆ ಬಿದ್ದು, ಗಾಸಿಪ್​ಗೆ ಆಹಾರವಾಗುತ್ತೀರಿ. ದಿನಬೆಳಗಾದರೆ ಕಚೇರಿಗೆ ಬಂದು, ದಿನದ ಅಮೂಲ್ಯ ಸಮಯವನ್ನು ಕಚೇರಿಯಲ್ಲಿಯೇ ಕಳೆಯುವುದರಿಂದ ಇಲ್ಲಿನ ವಾತಾವರಣ ಚೆನ್ನಾಗಿಟ್ಟುಕೊಳ್ಳಬೇಕಾಗಿರುವುದು ಸತ್ಯವಾದರೂ, ಅದರಲ್ಲೂ ನಿಯಂತ್ರಣ ಇರಲೇಬೇಕು. ಇಲ್ಲವಾದರೆ, ಅನಗತ್ಯ ಸವಾರಿ ಆರಂಭವಾಗುತ್ತದೆ. ಸ್ನೇಹದ ಹೆಸರಿನಲ್ಲಿ ಅತಿಸಲುಗೆಯಿಂದ ವರ್ತಿಸುವುದು, ಮನೆಗೆ ಬರುವುದು, ಡ್ರಾಪ್ ಕೊಡುವುದು ಇವೆಲ್ಲ ಆರಂಭವಾದರೆ ನಿಮ್ಮ ಹೆಸರಿಗೆ ಕಳಂಕ ಗ್ಯಾರಂಟಿ. ಅಂತಿಮವಾಗಿ, ಇವೆಲ್ಲ ಒತ್ತಡ ನಿಮ್ಮ ಮೇಲೆಯೇ ಬೀಳುತ್ತದೆ. ಕಚೇರಿ ಕೆಲಸದ ಜತೆಗೆ ಇಂಥ ಅನಗತ್ಯ ವಿಚಾರಗಳೂ ಮನದಲ್ಲಿ ತುಂಬಿ ಮನೆಗೆ ಹೋದರೂ ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ. ಕಚೇರಿಯ ಒತ್ತಡದಿಂದಲೇ ಮನೆಯ ವಾತಾವರಣವನ್ನೂ ಹಾಳು ಮಾಡಿಕೊಳ್ಳುವ ಮಹಿಳೆಯರು ಸಾಕಷ್ಟಿದ್ದಾರೆ. ಇವೆಲ್ಲದರಿಂದ ನಿಧಾನವಾಗಿ ಕೆಲಸದಲ್ಲಿ ಕ್ಷಮತೆ ಕಡಿಮೆಯಾಗುತ್ತದೆ. ಆಂಧ್ರ ಮೆಡಿಕಲ್ ಕಾಲೇಜಿನ ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ನಗರ ಪ್ರದೇಶದ ಉದ್ಯೋಗಿ ಮಹಿಳೆಯರಲ್ಲಿ ಶೇ.38ರಷ್ಟು ಮಂದಿ ಖಿನ್ನತೆಗೆ ತುತ್ತಾಗಿದ್ದಾರೆ. ಆ ಸ್ಥಿತಿಯಲ್ಲಿ ಎಲ್ಲವನ್ನೂ ನಿಭಾಯಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಕಚೇರಿ, ವಾಸ್ತವ, ಮನೆ, ಖಾಸಗಿ ಬದುಕು, ಕೆಲಸ, ನೈಪುಣ್ಯ ಹೆಚ್ಚಳ ಇವುಗಳ ಬಗ್ಗೆ ಅತ್ಯಂತ ವೈಜ್ಞಾನಿಕವಾಗಿ ಚಿಂತನೆ ಮಾಡುವುದು ಎಲ್ಲರಿಗೂ ಅಗತ್ಯ. ಹೆಣ್ಣುಮಕ್ಕಳಿಗಂತೂ ಇನ್ನೂ ಅಗತ್ಯವೆಂದೇ ಹೇಳಬೇಕಾಗುತ್ತದೆ. ‘ನಮಗೆ ಬೇಕಾದ ಸ್ವಾತಂತ್ರ್ಯದೆ, ಹೇಗೆ ಬೇಕಿದ್ದರೂ ಇರುತ್ತೇವೆ, ಪ್ರಶ್ನಿಸಲು ನೀವ್ಯಾರು?’ ಎನ್ನುವ ಮೊಂಡುವಾದ ಇಲ್ಲಿ ಸಲ್ಲುವುದಿಲ್ಲ. ಏಕೆಂದರೆ, ಸಮಾಜ ಹೆಣ್ಣಿನ ಬಗ್ಗೆ ಏನು ಬೇಕಿದ್ದರೂ ಮಾತನಾಡಿ ಅದರ ಪಾಡಿಗದು ಇದ್ದು ಬಿಡುತ್ತದೆ. ಅನುಭವಿಸುವವರು ಹೆಣ್ಣುಮಕ್ಕಳು ಮಾತ್ರ. ಅಲ್ಲೇನಾದರೂ ನಮ್ಮದೂ ತಪ್ಪಿದ್ದರೆ ಬದುಕನ್ನು ಮತ್ತೆ ಹಳಿಗೆ ತಂದುಕೊಳ್ಳಲು ಅಪಾರ ಸಮಯ ಬೇಕಾಗಬಹುದು ಅಥವಾ ಸಾಧ್ಯವಾಗದೆ ಇರಲೂಬಹುದು.