ಮೈಮೇಲಿನ ರೋಮಕ್ಕೆ ಶಾಶ್ವತ ಪರಿಹಾರ?

| ಡಾ. ವಸುಂಧರಾ ಭೂಪತಿ

# ನಾನು 25 ವರ್ಷದ ಹುಡುಗಿ ಮೈಮೇಲೆ ತುಂಬ ಕೂದಲುಗಳಿವೆ. ಮುಖ, ಕೈಕಾಲುಗಳ ಮೇಲೆ ಕೂದಲು ಬೆಳೆಯುತ್ತದೆ. ಇದರಿಂದ ಮಾನಸಿಕ ಹಿಂಸೆಯಾಗುತ್ತಿದೆ. ಶಾಶ್ವತ ಪರಿಹಾರ ತಿಳಿಸಿ.

-ಹರ್ಷಲ್ ಚೌಗಲೆ, ಬೆಳಗಾವಿ

ನಿಮಗೆ ರಸದೂತಗಳ ಸ್ರವಿಸುವಿಕೆಯಲ್ಲಿನ ವ್ಯತ್ಯಾಸ, ಪಿಸಿಒಡಿ ಸಮಸ್ಯೆ ಅಥವಾ ಆನುವಂಶೀಯವಾಗಿ ರೋಮಗಳ ಬೆಳವಣಿಗೆಯಾಗಿರಬಹುದು. ಇದಕ್ಕೆ ಶಾಶ್ವತ ಪರಿಹಾರ ಇಲ್ಲ. ಒಮ್ಮೆ ನಿರ್ನಾಳ ಗ್ರಂಥಿ ತಜ್ಞ (ಎಂಡೋಕ್ರೖೆನಾಲಜಿಸ್ಟ್)ರನ್ನು ಭೇಟಿಯಾಗಿ, ಟೆಸ್ಟೊಸ್ಟಿರಾನ್ ಹಾಮೋನ್ ಮಟ್ಟ ಅರಿತು ಅವರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಿರಿ. ಆಗಾಗ ವ್ಯಾಕ್ಸಿಂಗ್ ಮಾಡಿಸಿಕೊಳ್ಳಬಹುದು, ಆದರೆ, ಇದು ತಾತ್ಕಾಲಿಕ ಪರಿಹಾರ ಅಷ್ಟೆ.

# ನಾನು 62 ವರ್ಷದ ಗೃಹಿಣಿ. ನನಗೆ 7-8 ವರ್ಷದಿಂದ ಸೊಂಟನೋವು ಇದೆ. ಆಗ ಡಾಕ್ಟರ್ ತಿಂಗಳಿಗೊಮ್ಮೆ ವೆಬೆಲೋನ್ 150 ಮಾತ್ರೆಯನ್ನು ತೆಗೆದುಕೊಳ್ಳಲು ಹೇಳಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಮಾತ್ರೆಯನ್ನೂ ಕೊಟ್ಟಿದ್ದರು. ಎಕ್ಸ್​ರೇ ತೆಗೆಸಿದಾಗ ಬೆನ್ನು ಮೂಳೆಯ ಕೆಳಭಾಗದಲ್ಲಿ ಸೊಂಟದ ಹತ್ತಿರ ಮೂಳೆಯು ಒಂದರ ಮೇಲೆ ಒಂದರಂತೆ ಕುಳಿತಿದೆ ಎಂದು ಹೇಳಿದ್ದಾರೆ. ಇದಕ್ಕೆ ಬೊನ್ವಿಸ್ ಫೊರ್ಟೆ, ಮೀಲಾ-ಪಿ, ಪೇನ್ಕಿಲ್ಲರ್ ಮಾತ್ರೆಗಳನ್ನು ಕೊಟ್ಟಿದ್ದಾರೆ. ಒಮ್ಮೆ ನೋವು ಕಡಿಮೆಯಾದರೂ ಯಾವಾಗಲೂ ಇದ್ದೇ ಇರುತ್ತದೆ. ಸೊಂಟದಿಂದ ಎರಡೂ ಕಡೆ ಚಿಪ್ಪಿನ ತನಕ ನೋವು ಇದೆ. ಪಂಚಕರ್ಮ ಚಿಕಿತ್ಸೆ ಮಾಡಿಸಿಕೊಳ್ಳಲು ದೇಹದಲ್ಲಿ ಶಕ್ತಿ ಇಲ್ಲ. ಸೊಂಟದ ನೋವು ಕಡಿಮೆಯಾಗಿ, ಮೂಳೆಗಳು ಮತ್ತು ನರಗಳಿಗೆ ಶಕ್ತಿ ಬರಲು ಏನು ಮಾಡಲಿ? ಔಷಧ ತಿಳಿಸಿ. ನನಗೆ ಬಿಪಿ, ಡಯಾಬಿಟೀಸ್ ಇದ್ದು, ಅದು ಕಂಟ್ರೋಲ್​ನಲ್ಲಿದೆ.

| ಹೆಸರು ಬೇಡ, ಹಿರೆಕೆರೂರ

ನೀವು ಹತ್ತಿರದ ಆಯುರ್ವೆದ ಆಸ್ಪತ್ರೆಗೆ ಭೇಟಿ ಕೊಟ್ಟಲ್ಲಿ ನಿಮ್ಮ ದೇಹದ ಬಲ, ಪ್ರಕೃತಿ ಪರೀಕ್ಷಿಸಿ, ವೈದ್ಯಕೀಯ ವರದಿಗಳನ್ನು ಗಮನಿಸಿ ಚಿಕಿತ್ಸೆ ನೀಡುತ್ತಾರೆ. ಪಂಚಕರ್ಮದಲ್ಲಿ ನಿಮಗೆ ಹೊಂದುವಂಥ, ಹೆಚ್ಚು ಶ್ರಮವಾಗದ ಕಟಿಬಸ್ತಿ ಚಿಕಿತ್ಸೆ ಪಡೆಯಬಹುದು. ಇದರಿಂದ ನೋವು ತಗ್ಗುವುದಲ್ಲದೆ ದೇಹದ ನಿಃಶಕ್ತಿಯೂ ಕಡಿಮೆಯಾಗುತ್ತದೆ. ಸದ್ಯ, ಬಲಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚದಷ್ಟು ನೀರು ಬೆರೆಸಿ ಊಟದ ನಂತರ ಸೇವಿಸಿ. ಪ್ರತಿದಿನ ರಾತ್ರಿ 7-8 ಬಾದಾಮಿಯನ್ನು ನೆನೆಸಿಟ್ಟು ಬೆಳಗ್ಗೆ ತಿನ್ನಿ.

# ನನ್ನ ವಯಸ್ಸು 75. ಕೆಲ ಸಮಯದ ಹಿಂದೆ ಬಿದ್ದು ಸೊಂಟದ ಎಲುಬು ಪೆಟ್ಟಾಗಿದೆ. ಬಲಗಡೆ ತೊಡೆಯ ಹಿಂಭಾಗ ಆಪರೇಷನ್ ಮಾಡಿ 4 ಸ್ಟೀಲ್ ರಾಡ್ ಹಾಕಿದ್ದರು. ವರ್ಷದ ನಂತರ 3 ರಾಡ್​ಗಳನ್ನು ತೆಗೆದು ಒಂದನ್ನು ಒಳಗೆ ಬಿಟ್ಟಿದ್ದಾರೆ. ಹೀಗಾಗಿ, ನನಗೆ ನೆಲದ ಮೇಲೆ ಕೂರಲು ಆಗುತ್ತಿಲ್ಲ. ಸರಿಯಾಗಿ ಅಡ್ಡಾಡಲಿಕ್ಕೆ ಆಗುವುದಿಲ್ಲ. ಪತಂಜಲಿ, ಧನ್ವಂತರಿ ಎಲ್ಲ ರೀತಿಯ ಔಷಧಗಳನ್ನು ತೆಗೆದುಕೊಂಡಿದ್ದೇನೆ. ಈಗ ಶಕ್ತಿ ಬರುವ ಸಲುವಾಗಿ ಅಮೃತರತ್ನ ಎನ್ನುವ ಪೌಡರ್ ಅನ್ನು ಹಾಲಲ್ಲಿ ಹಾಕಿ ಒಂದು ಚಮಚ ಸೇವಿಸುತ್ತೇನೆ. ಹೆಚ್ಚು ಶಕ್ತಿ ಬರುವಂತಾಗಲು ಈಗ ಏನು ಮಾಡಬಹುದು?

| ಬಸವರಾಜ ಮ. ಕಾದ್ರೊಳ್ಳಿ, ಬಾಗಲಕೋಟ

ನೀವು ಸುಣ್ಣಾಂಶ ಮತ್ತು ರಂಜಕದ ಅಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸಿ. ಎಲ್ಲ ಬಗೆಯ ಸೊಪ್ಪುಗಳು, ಹಣ್ಣುಗಳು, ಹಾಲು, ಮೊಸರು ಸೇವಿಸಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ 1 ಚಮಚ ಬೆಳ್ಳುಳ್ಳಿ ರಸ ಮತ್ತು ತುಪ್ಪ ಸೇವಿಸಿ. ಅಶ್ವಗಂಧಾಬಲ ತೈಲವನ್ನು ನೋವಿರುವ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ, ಶಾಖ ತೆಗೆದುಕೊಳ್ಳಿ. ಬಾದಾಮಿ ರಸಾಯನವನ್ನು ದಿನಕ್ಕೆರಡು ಬಾರಿ ಒಂದು ಚಮಚ ಸೇವಿಸಿ ಹಾಲು ಕುಡಿಯಿರಿ. ರಾಗಿ ಮತ್ತು ಹುರುಳಿಯಿಂದ ತಯಾರಿಸಿದ ಆಹಾರ ಪದಾರ್ಥವನ್ನು ಹೆಚ್ಚು ತಿನ್ನಿ.