Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಹುಚ್ಚು ಖೋಡಿ ಮನಸು

Wednesday, 14.03.2018, 3:04 AM       No Comments

| ಶಾಂತಾ ನಾಗರಾಜ್

‘ಹದಿಹರೆಯದ ವಯಸು ಹುಚ್ಚು ಖೋಡಿ ಮನಸು’ ಎನ್ನುವುದೊಂದು ಕವಿವಾಣಿ. ಇಲ್ಲಿ ಖೋಡಿ ಎಂದರೆ ಅರಿವಿಲ್ಲದ ಮರುಳುತನ ಎಂದು ಮಾತ್ರ ಗ್ರಹಿಸೋಣ. ಇಂದಿನ ಯುವ ಪೀಳಿಗೆಯವರು ಹೆಚ್ಚಿನಂಶ ಇಂಥ ಮರುಳುತನದಲ್ಲಿಯೇ ಗೊಂದಲಗೊಳ್ಳುತ್ತಿದ್ದಾರೆ. ‘ಹದಿನೆಂಟು’ಎನ್ನುವುದಂತೂ ಇನ್ನೇನು ಸಿಡಿಯಲಿರುವ ಕುಕ್ಕರ್ ಪಾತ್ರೆಯಲ್ಲಿನ ‘ಪ್ರೆಷರ್’ ಥರದ ಒತ್ತಡವನ್ನು ಅನುಭವಿಸುತ್ತಿರುವಂಥ ವಯಸ್ಸು.

ಸಾಮಾನ್ಯವಾಗಿ ಹದಿನಾರರಿಂದಲೇ ಒತ್ತಡ ಪ್ರಾರಂಭವಾಗಿರುತ್ತದೆ. ಒಂದು ಕಡೆ ತಮ್ಮದೇ ದೇಹದ ಅರಳುವಿಕೆ. ಮತ್ತೊಂದು ಕಡೆ ವಯೋಸಹಜತೆಗೆ ತಕ್ಕಂತೆ ಹೆಣ್ಣುಗಂಡುಗಳಿಗೆ ಪರಸ್ಪರರಲ್ಲಿ ಆಕರ್ಷಣೆ, ಜತೆಯಲ್ಲಿ ತಲೆಯ ಮೇಲೆ ಮಣಭಾರದ ವಿದ್ಯೆ ಎನ್ನುವ ಪೆಡಂಭೂತ, ‘ಮೊದಲೇ ಕೊಳೆ, ಅದರ ಮೇಲಿಷ್ಟು ಮಳೆ’ಎಂಬಂತೆ ಹೆತ್ತವರ ನಿರೀಕ್ಷೆಗಳು!

ಈ ಎಲ್ಲದರ ತಿರುಗಣಿಯಲ್ಲಿ ಸುತ್ತುವ ಈ ಅಪಕ್ವ ಹೃದಯಗಳು ‘ಮರುಳುತನಕ್ಕೆ’ ಜಾರಿದರೆ ಆಶ್ಚರ್ಯವೇನು ಅಲ್ಲವೇ?

ಈ ವಯಸ್ಸಿನ ಸಹಜ ನಡವಳಿಕೆಗಳಲ್ಲಿ ‘ಕೋಪ’ ಮುಖ್ಯ ಪಾತ್ರ ವಹಿಸುತ್ತದೆ. ಕೌನ್ಸೆಲರ್​ಗಳ ಬಳಿಗೆ ಬರುವ ಅನೇಕ ತಾಯಂದಿರ ಅಳಲು ಇದೇ ಆಗಿದೆ. ‘ಮೊನ್ನೆಮೊನ್ನೆಯವರೆಗೆ ಹೇಳಿದ ಮಾತು ಕೇಳುತ್ತಿದ್ದಳು ಮೇಡಂ, ಪಿಯುಸಿಗೆ ಬಂದಾಗಿನಿಂದ ವಿಚಿತ್ರ ಆಗಿದ್ದಾಳೆ. ಏನು ಹೇಳಿದರೂ ಕೇಳುವುದೇ ಇಲ್ಲ. ನಾವು ಮಾತಾಡುವ ಮೊದಲೇ ಮುಖ ಊದಿಸಿಕೊಂಡು ಅಳುತ್ತ ಊಟವನ್ನೂ ಮಾಡದೇ ಮಲಗಿಬಿಡುತ್ತಾಳೆ’. ಇದು ಹುಡುಗಿಯರ ಅಮ್ಮಂದಿರ ಗೊಣಗುವಿಕೆ. ‘ಕಳೆದ ವರ್ಷದವರೆಗೂ ಚೆನ್ನಾಗಿಯೇ ಇದ್ದ ಮೇಡಂ. ಈಗ ಒಂಥರ ಆಗಿದ್ದಾನೆ. ಮಾತೇ ಆಡುವುದಿಲ್ಲ. ನಾವೇನಾದರೂ ಕೇಳಿದರೆ ಸಿಡುಕುತ್ತ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾನೆ. ಸದಾ ಕಂಪ್ಯೂಟರ್ ಮುಂದೆ ಕೂತಿರುತ್ತಾನೆ. ಇಲ್ಲದಿದ್ದರೆ ಫ್ರೆಂಡ್ಸ್ ಮನೆಗೆ ಹೋಗಿ ಬಿಡುತ್ತಾನೆ. ಎಷ್ಟು ಹೊತ್ತಾದರೂ ಬರುವುದೇ ಇಲ್ಲ’. ಹುಡುಗರ ಅಮ್ಮಂದಿರ ಗೋಳಿದು. ಈ ಮಾತುಗಳನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ಈ ಎರಡೂ ಮನೆಗಳಲ್ಲಿ ಮಕ್ಕಳಿಗೆ ಮಾತಾಡಲು ಮನಸ್ಸಿಲ್ಲ ಅಥವಾ ತಾವು ಮಾತಾಡಿದರೆ ಅದಕ್ಕೆ ಬೆಲೆ ಸಿಗುತ್ತದೆ ಎನ್ನುವ ಖಾತ್ರಿಯಿಲ್ಲ! ನಿಧಾನವಾಗಿ ಈ ಅಮ್ಮಂದಿರನ್ನು ‘ನಿಮ್ಮ ಯಾವ ಮಾತನ್ನು ನಿಮ್ಮ ಮಗು ಕೇಳುವುದಿಲ್ಲ’ ಎಂದು ಪ್ರಶ್ನಿಸಿದರೆ,

‘ತನ್ನ ಕ್ಲಾಸ್​ವೆುೕಟ್ಸ್ ಹುಡುಗರು, ಹುಡುಗಿಯರು ಒಟ್ಟಿಗೆ ಸಿನಿಮಾ, ಮಾಲ್ ಅಂತ ಸುತ್ತುತ್ತಾರೆ, ನಾನೂ ಹೋಗ್ತೀನಿ ಅಂತಾಳೆ, ನಾನು ಬಿಲ್​ಕುಲ್ ಬೇಡ ಅಂತೀನಿ. ಈಗ ಕಾಲ ಚೆನ್ನಾಗಿಲ್ಲ ಅಲ್ವಾ? ಸುಮ್ನೆ ಏನಾದ್ರೂ ಮಾಡ್ಕೊಂಡ್ರೆ ಅಂತ ಭಯ ನಂಗೆ! ಬೇಡ ಅಂತೀನಲ್ಲ, ಅದಕ್ಕೇ ಅವಳಿಗೆ ಕೋಪ’ ಎನ್ನುತ್ತಾರೆ!

ಹುಡುಗನ ತಾಯಿಯ ಭಯ ಮತ್ತೊಂದು ರೀತಿಯದು! ‘ನಮ್ಮನೇಲಿ ನಾನೂ ನನ್ನ ಮಗ ಇಬ್ರೇ ಇರೋದು. ನನ್ನ ಗಂಡ ಮನೆಗೆ ಬರೋದೇ ರಾತ್ರಿ ತಡವಾಗಿ. ಇವನ್ಯಾಕೆ ರೂಂ ಬಾಗಿಲು ಹಾಕ್ಕೋಬೇಕು? ಅದನ್ನ ಕೇಳಿದರೆ ಕೋಪ! ನನಗೆ ಭಯ, ಇವನು ಕಂಪ್ಯೂಟರ್​ನಲ್ಲಿ ಏನು ಹಾಳುಮೂಳು ನೋಡ್ತಾನೋ ಅಂತ! ಇನ್ನು ಫ್ರೆಂಡ್ಸ್ ಮನೆಗೆ ಹೋದರೂ ಅಷ್ಟೆ, ಬೇಗ ಮನೆಗೆ ಬರಲ್ಲ, ಅಲ್ಲಿ ಏನೇನು ದುರಭ್ಯಾಸ ಕಲೀತಾನೋ ಅಂತ ಭಯ! ಇವೆಲ್ಲ ಯಾಕೆ ಅಂತೀನಲ್ಲ ಅದಕ್ಕೇ ಕೋಪ’.

ಈ ವಯಸ್ಸಿನ ಕೆಲವು ಮಕ್ಕಳು ತಮ್ಮ ತಾಯಂದಿರ ಬಗ್ಗೆ ಹೇಳುವುದು ಕೇಳಿದಾಗ ‘ಹೀಗೂ ಉಂಟೆ’ ಎನಿಸಿಬಿಡುತ್ತದೆ! ಹುಡುಗ ಹೇಳುತ್ತಾನೆ, ‘ನಾನು ಹೊರಗಡೆ ಹೋಗಿ ಬಂದಾಗ ನಮ್ಮಮ್ಮ ಏನೋ ಆಲಂಗಿಸುವವರಂತೆ ನಟಿಸುತ್ತ ನನ್ನ ಷರಟನ್ನು ಮೂಸಿ ನೋಡುತ್ತಾರೆ. ನಾನು ಸಿಗರೇಟು ಸೇದಿದ್ದೀನಿ, ಹೆಂಡ ಕುಡಿದ್ದಿದ್ದೀನಿ ಅಂತ ಅನುಮಾನ ಅವರಿಗೆ’.

ಹುಡುಗಿ ಹೇಳುತ್ತಾಳೆ, ‘ನಾನು ಬಾತ್​ರೂಮಿಗೆ ಹೋದಾಗ ನಮ್ಮಮ್ಮ ನನ್ನ ವ್ಯಾನಿಟಿ ಬ್ಯಾಗ್ ತೆಗೆದು ಅಲ್ಲಿ ಸಿನಿಮಾ ಟಿಕೆಟ್ ಇದೆಯಾ? ಅಥವಾ ಯಾರದಾದರೂ ಪ್ರೇಮಪತ್ರವಿದೆಯಾ? ಅಂತ ಚೆಕ್ ಮಾಡ್ತಾರೆ. ನನ್ನ ಫೋನ್ ತೆಗೆದು ಅದರಲ್ಲಿರುವ ಕಾಲ್ಸ್ ಚೆಕ್ ಮಾಡ್ತಾರೆ. ಅವರಿಗೆ ಯಾವಾಗಲೂ ನನ್ನ ಬಗ್ಗೆ ಅನುಮಾನ’!

ಈ ತಾಯಂದಿರ ಭಯದ ಮೂಲವೇ ತಮ್ಮ ಮಕ್ಕಳನ್ನು ನಂಬದಿರುವುದು ಮತ್ತು ಈ ಅಪನಂಬಿಕೆಯನ್ನು ಹಲವಾರು ಸಲ ತಮ್ಮ ಮಕ್ಕಳಿಗೆ ತಿಳಿಸಿರುವುದು! ಹೆತ್ತ ತಾಯಿಯೇ ತನ್ನನ್ನು ನಂಬುತ್ತಿಲ್ಲ ಎನ್ನುವ ವಿಷಯವೇ ಆ ಅಪಕ್ವ ಮನಸ್ಸಿಗೆ ಎಷ್ಟು ಘಾಸಿಯನ್ನು ತರಬಹುದು! ಒಮ್ಮೆ ಅವರ ಜಾಗದಲ್ಲಿ ನಿಂತು, ಅವರ ವಯಸ್ಸಿನ ತಲ್ಲಣಗಳನ್ನು ಅನುಭವಿಸುತ್ತ ಊಹಿಸಿಕೊಳ್ಳಿ. ನಿಜಕ್ಕೂ ಈ ಮಕ್ಕಳ ಬಗ್ಗೆ ಕರುಣೆ ಹುಟ್ಟುತ್ತದೆಯಲ್ಲವೇ?

ಒಂದು ಕಡೆ ದೃಶ್ಯಮಾಧ್ಯಮಗಳಲ್ಲಿ ಹೆಣ್ಣುಗಂಡು ಮುಕ್ತವಾಗಿ ಸ್ವಾತಂತ್ರ್ಯ ಅನುಭವಿಸುತ್ತ ಸುತ್ತಾಡುವುದನ್ನು ತೋರಿಸುತ್ತಾರೆ. ಮದ್ಯ, ಸಿಗರೇಟು ಸೇವನೆ ಇವು ಯಾವ ಎಗ್ಗಿಲ್ಲದೆ ನಾಯಕ ನಟನ ನಿತ್ಯಕರ್ಮದಂತೆ ತೆರೆಯ ಮೇಲೆ ತೋರಿಸಲಾಗುತ್ತದೆ.

ವಯಸ್ಸಿಗೆ ಸಹಜವಾಗಿ ಬದುಕಿನ ಎಲ್ಲ ರಂಗಗಳಲ್ಲೂ ಕುತೂಹಲ ಹುಟ್ಟುವ ಕಾಲಮಾನದಲ್ಲಿ ಮನರಂಜನೆಯ ಹೆಸರಿನಲ್ಲಿ ಇಂಥವೆಲ್ಲ ಹದಿಹರೆಯದ ಮಕ್ಕಳ ಭಾವಕೋಶದ ಮೇಲೆ ಲಗ್ಗೆ ಇಡುತ್ತಿದ್ದಾಗ, ತಾಯಂದಿರು ‘ಹಿಮಾಲಯದಲ್ಲಿ ತಪಸ್ಸಿಗೆ ಕುಳಿತ ಸಂತ’ನಂತೆ ಮಕ್ಕಳು ಇರಲಿ ಎಂದು ಆಶಿಸಿದರೆ ಎಂಥ ಕ್ಲೀಷೆಯಲ್ಲವೇ? ಎಲ್ಲ ಪಾಲಕರಿಗೂ, ಅವರು ಯಾವ ವರ್ಗದವರೇ ಆಗಿರಲಿ, ತಮ್ಮ ಮಕ್ಕಳು ದುರಭ್ಯಾಸದಿಂದ ದೂರವಿರಲಿ, ಹಸನಾದ ಬದುಕನ್ನು ಕಟ್ಟಿಕೊಳ್ಳಲಿ ಎಂಬ ಆಸೆ ಇರುವುದು ಸಹಜವೇ. ಅದನ್ನು ಮಕ್ಕಳು ಪಾಲಿಸಬೇಕಾದರೆ ಬಾಲ್ಯದಿಂದಲೇ ಅವರಿಗೆ ಸರಿಯಾದ ಅರಿವು ಮೂಡಿಸುವುದು ಅಗತ್ಯ. ಅದು ಬಿಟ್ಟು ಅವರು ಹದಿವಯಸ್ಸಿಗೆ ಕಾಲಿಡುತ್ತಲೇ ಅವರನ್ನು ಅಪರಾಧಿಗಳಂತೆ ಅನುಮಾನಿಸುತ್ತ ಪತ್ತೇದಾರಿ ಕೆಲಸ ಮಾಡುವುದು ಎಷ್ಟು ಸರಿ? ಪಾಲಕರು, ಮಕ್ಕಳು ಹದಿವಯಸ್ಸಿಗೆ ಬಂದಾಗ ಹತ್ತಿರ ಕೂರಿಸಿಕೊಂಡು ಸ್ನೇಹಿತರಂತೆ ಎಲ್ಲ ವಿಷಯಗಳನ್ನೂ ಕುರಿತು ಮಾತಾಡಬೇಕು. ತಾಯಿ ಮಗಳ ಹತ್ತಿರ, ತಂದೆ ಮಗನ ಹತ್ತಿರ ಲೈಂಗಿಕ ವಿಷಯವನ್ನೂ ಸೂಕ್ಷ್ಮವಾಗಿ ತಿಳಿಸಬೇಕು. ಈಗಿನ ಕಾಲದಲ್ಲಿ ಹುಡುಗಿಯರನ್ನು ಎಲ್ಲಿ, ಹೇಗೆ ಮೋಸಗೊಳಿಸಲಾಗುತ್ತದೆ ಎನ್ನುವುದನ್ನೂ, ಹುಡುಗರು ಸಿಗರೇಟು, ಮದ್ಯಸೇವನೆಗೆ ತೊಡಗಿದರೆ ಮುಂದೇನಾಗಬಹುದು ಎನ್ನುವುದನ್ನೂ ತಮ್ಮ ಪರಿಚಿತರದೇ ಉದಾಹರಣೆಗಳನ್ನು ಕೊಡುತ್ತ ಕಥೆ ಹೇಳಿದ ಹಾಗೆ ಹೇಳಿ ಮನನ ಮಾಡಿಸಬೇಕು.

ತಪ್ಪದೇ ‘ನೀವು ನಮ್ಮ ಮಕ್ಕಳು, ನೀವು ಎಂದಿಗೂ ತಪ್ಪುದಾರಿ ಹಿಡಿಯುವುದಿಲ್ಲ ಎನ್ನುವ ನಂಬಿಕೆ ನಮಗಿದೆ’ ಎಂದು ಪದೇಪದೆ ಹೇಳುತ್ತಿರಬೇಕು. ತಮ್ಮ ಮಗಳ ಗೆಳೆಯ ಗೆಳತಿಯರನ್ನು ಮನೆಗೇ ಆಹ್ವಾನಿಸಿ ಒಂದು ಮುಕ್ತವಾದ ಶುದ್ಧ ಸ್ನೇಹದ ವಾತಾವರಣ ಕಲ್ಪಿಸಬೇಕು. ಮಗನ ಗೆಳೆಯರನ್ನೂ ಮನೆಗೆ ಆಹ್ವಾನಿಸಿ, ಅವರು ಯಾವ ಕುಟುಂಬಗಳಿಂದ ಬಂದಿದ್ದಾರೆ ಎನ್ನುವುದನ್ನೂ ವಿಚಾರಿಸಿ, ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯ ಕೊಡಲೇಬೇಕು. ಹೆತ್ತವರು ಎಷ್ಟೆಷ್ಟು ತಮ್ಮ ಮಕ್ಕಳನ್ನು ಬಿಗಿಯ ಬಂಧನದಲ್ಲಿ ಇರಿಸಲು ಪ್ರಯತ್ನಿಸುತ್ತಾರೋ ಅಷ್ಟಷ್ಟೂ ಅವರು ಅದರಿಂದ ಕಳಚಿಕೊಳ್ಳಲು ನೋಡುವುದು ತುಂಬ ಸಹಜ!

ಮಕ್ಕಳಿಗೆ ಪಾಲಕರೇ ಮಾದರಿ

ನೀವೇ ಯೋಚಿಸಿ, ಉಸಿರುಕಟ್ಟುವ ಸ್ಥಳದಲ್ಲಿ ಎಷ್ಟು ಹೊತ್ತು ಇರಲು ಸಾಧ್ಯ? ಮಾನಸಿಕ ಬಂಧನ ಕೂಡ ಇಂಥ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸುತ್ತದೆ. ಜಾಣ ಪಾಲಕರು ತಮ್ಮ ಮಕ್ಕಳು ಹೇಗೆ ನಡೆದುಕೊಳ್ಳಬೇಕೆಂದು ಬಯಸುತ್ತಾರೋ ಹಾಗೆ ಮೊದಲು ತಾವೇ ನಡೆದುಕೊಂಡು ಅವರಿಗೆ ಮಾದರಿಯಾಗುತ್ತಾರೆ!

Leave a Reply

Your email address will not be published. Required fields are marked *

Back To Top