ಕಾಲು ಸೆಳೆತ ನಿಯಂತ್ರಣಕ್ಕೆ ಯೋಗ

ಒಂದು ವರ್ಷದಿಂದ ಕಾಲು ಸೆಳೆತ, ಜೋಮು ಹಿಡಿಯುವಿಕೆ ಮತ್ತು ನೋವಿನಿಂದ ಬಳಲುತ್ತಿದ್ದೇನೆ. ಎಡಭುಜ ಸೆಳೆತ, ತುಂಬಾ ಹೊತ್ತು ನಿಲ್ಲಲು ಕಷ್ಟವಾಗುತ್ತಿದೆ. ಪರಿಹಾರ ತಿಳಿಸಿ.

| ಶಿವಶಂಕರ್ ಸೊರಬ

ಕಾಲುನೋವಿಗೆ ಯೋಗವು ದೀರ್ಘಕಾಲದ ಪರಿಹಾರ ನೀಡುತ್ತದೆ. ಕಾಲಿನ ನರಗಳ ಸಮಸ್ಯೆ, ಕಾಲಿನ ಸ್ನಾಯು ಸೆಳೆತ ಯೋಗದ ಮೂಲಕ ಪರಿಹರಿಸಿಕೊಳ್ಳಬಹುದು. ದೇಹಕ್ಕೆ ನೀರಿನ ಅಂಶ ಕಡಿಮೆಯಾದರೂ ಕಾಲಿನ ಸೆಳೆತ ಬರುತ್ತದೆ. ಯಾವುದೇ ರೀತಿ ಚಲನೆ ಇಲ್ಲದೆ ಇದ್ದಾಗ ಕಾಲು ಸೆಳೆತ ಕಂಡು ಬರುತ್ತದೆ. ಯೋಗದಿಂದ ಉತ್ತಮವಾಗಿ ದೇಹದ ಒಳಗಿನ ಅಂಗಕ್ಕೆ ವ್ಯಾಯಾಮ, ಕಾಲಿಗೆ ಸಂಬಂಧಪಟ್ಟ ಯೋಗ ಗಳನ್ನು ಅಭ್ಯಾಸ ಮಾಡಿದಾಗ ಕಾಲಿನಲ್ಲಿ ರಕ್ತ ಪರಿಚಲನೆ ಚಲನೆ ಚೆನ್ನಾಗಿ ಜರುಗುತ್ತದೆ. ಕಾಲಿನ ನರಗಳು ಬಲಯುತವಾಗುತ್ತದೆ. ಮಲಗಿಕೊಂಡು ಆರಂಭದಲ್ಲಿ ಒಂದೊಂದು ಕಾಲಿನಲ್ಲಿ ಸೊನ್ನೆ ಬರೆಯುವ ವ್ಯಾಯಾಮ ಅಭ್ಯಾಸ ಮಾಡಬೇಕು. ಇದರಿಂದ ಸ್ನಾಯುಗಳು ಬಲಗೊಳ್ಳುತ್ತದೆ.

ಕಾಲು ಸೆಳೆತ ನಿಯಂತ್ರಣಕ್ಕೆ ಆಸನ, ಮುದ್ರೆಗಳು:

ತ್ರಿಕೋನಾಸನ, ಉತ್ಥಿತ ಏಕಪಾದಾಸನ, ಊರ್ಧ್ವಪ್ರಸಾರಿತ ಪಾದಾಸನ, ಹಲಾಸನ, ಏಕಪಾದ ಶಲಭಾಸನ, ಬದ್ಧಕೋನಾಸನ, ಗೋಮುಖಾಸನ, ವಜ್ರಾಸನ, ಸುಪ್ತ ವೀರಾಸನ, ಅನಂತಾಸನ, ಶವಾಸನ ಹಾಗೂ ಹತ್ತು ನಿಮಿಷ ಪ್ರಾಣಾಯಾಮ, ಧ್ಯಾನ ಮಾಡಿ. ನಿತ್ಯ ಯೋಗ ಮಾಡಿದಾಗ ನೋವು ಶಮನ ಸಾಧ್ಯ. ಪ್ರಾಣಮುದ್ರೆ, ವಾಯುಮುದ್ರೆ ಹಾಗೂ ವಾಯುಶೂನ್ಯ ಮುದ್ರೆ ವರುಣಮುದ್ರೆ ಮಾಡಿ. ಭುಜದ ಸುತ್ತಲಿನ ಸ್ನಾಯುಗಳು ಅತಿಯಾದ ಎಳೆತಕ್ಕೆ ಒಳಗಾದಾಗ ಸಾಮಾನ್ಯವಾಗಿ ನೋವು ಕಾಣಿಸುತ್ತದೆ. ಹಾಗು ಭುಜಕ್ಕೆ ಅನಗತ್ಯ ಒತ್ತಡವಾದಾಗಲೂ ಆಗುತ್ತದೆ. ಕೆಲವೊಮ್ಮೆ ಒಂದು ಭುಜದ ನೋವು ಕಾಣಿಸಿಕೊಳ್ಳುತ್ತದೆ. ಭುಜಗಳ ನೋವು ನಿಯಂತ್ರಣಕ್ಕೆ ಭುಜಗಳನ್ನು ತಿರುಗಿಸುವ ವ್ಯಾಯಾಮ ಮತ್ತು ತಾಡಾಸನ, ವೃಕ್ಷಾಸನ, ವೀರಭದ್ರಾಸನ, ಪರ್ವತಾಸನ, ಅಭ್ಯಾಸ ನಡೆಸಿ. ಯೋಗಮುದ್ರೆಗಳನ್ನು ಗುರುಮುಖೇನ ಕಲಿತು ಅಭ್ಯಾಸ ಮಾಡಿ.

# ಸೊಂಟದ ಕೆಳಭಾಗ ಹಾಗೂ ಎರಡು ಕಾಲುಗಳಲ್ಲಿ ನೋವು ಇದೆ. ಜಾಸ್ತಿ ಓಡಾಡಲು ಆಗುವುದಿಲ್ಲ. ಹಲವು ಚಿಕಿತ್ಸೆ ನಡೆಸಿದ್ದೇನೆ. ಯೋಗ, ಮುದ್ರೆಗಳ ಮೂಲಕ ಪರಿಹಾರ ತಿಳಿಸಿ.

| ಕಲಾವತಿ ರಾಯಚೂರು

ನೀವು ತೀರಾ ಸರಳ ಯೋಗಗಳನ್ನು ನಡೆಸಿದರೆ ಸೂಕ್ತ. ಮಲಗಿ ಮಾಡುವ ಉತ್ಥಿತ ಏಕಪಾದಾಸನವನ್ನು ಉಸಿರಿನ ಗತಿಯೊಂದಿಗೆ ನಿಧಾನವಾಗಿ 6ರಿಂದ 9 ಬಾರಿ ಅಭ್ಯಾಸ ಮಾಡಿ. ಮಕರಾಸನ, ಏಕಪಾದ ಶಲಭಾಸನ ಎರಡು ಬಾರಿ ಅಭ್ಯಾಸ ನಡೆಸಿ. ವಿಶ್ರಾಂತಿದಾಯಕ ಶವಾಸನ ಹತ್ತು ನಿಮಿಷ ಅಭ್ಯಾಸ ಮಾಡಿ. ಮುದ್ರೆಗಳಲ್ಲಿ ವಾಯುಶೂನ್ಯ ಇಪ್ಪತ್ತು ನಿಮಿಷ ಹಾಗೂ ಪ್ರಾಣಮುದ್ರೆ ಹತ್ತು ನಿಮಿಷ ಅಭ್ಯಾಸ ಮಾಡಬೇಕು. ಆರಂಭದಲ್ಲಿ ಕುರ್ಚಿಯಲ್ಲಿ ಕುಳಿತು ಹತ್ತು ನಿಮಿಷ ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಿ. ಸರಳ ಯೋಗದ ಮೂಲಕ ಕಾಲಿಗೆ ರಕ್ತಸಂಚಾರವಾದಾಗ ನೋವು ನಿಯಂತ್ರಣವಾಗುತ್ತದೆ.

ನೀವೂ ಪ್ರಶ್ನೆ ಕೇಳಿ

ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ.

ವಿಳಾಸ: ಸಂಪಾದಕರು, ಯೋಗಕ್ಷೇಮ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18.

ಇಮೇಲ್: [email protected]

Leave a Reply

Your email address will not be published. Required fields are marked *