More

    ಪ್ರಾಚೀನ ಜ್ಞಾನ: ಪ್ರಕೃತಿ, ಸಂಸ್ಕಾರ ಮತ್ತು ಸಂಸ್ಕೃತಿ

    ಅಣುವಿನಲ್ಲಿ ಬ್ರಹ್ಮಾಂಡವನ್ನೂ, ಬ್ರಹ್ಮಾಂಡದಲ್ಲಿ ಅಣುವನ್ನೂ ಕಂಡವರು ಹಿಂದುಗಳು. ಅವರು ಪ್ರತಿಯೊಂದನ್ನೂ ತೂಗಿ ಅಳೆದು ಅನುಭಾವದಿಂದ ತತ್ತ್ವ-ಶಾಸ್ತ್ರ-ವೇದ-ಬ್ರಹ್ಮವನ್ನು ಮುಂದಿಟ್ಟರು.

    ಪ್ರಾಚೀನ ಜ್ಞಾನ: ಪ್ರಕೃತಿ, ಸಂಸ್ಕಾರ ಮತ್ತು ಸಂಸ್ಕೃತಿಸಂಸ್ಕಾರವನ್ನು ಹೊಂದಿದವರು ಸಂಸ್ಕೃತಿಯನ್ನು ಸ್ಥಾಪಿಸುವರು. ಪ್ರಕೃತಿ ಎಂಬುದು ಸಹಜ ಗುಣ. ಸೀನು ಬರುವುದು ಪ್ರಕೃತಿ. ಅದನ್ನು ಜನರ ಎದುರಿಗೆ ಸೀನದೆ ಕೈ ಅಡ್ಡಗಟ್ಟಿಯೋ, ವಸ್ತ್ರವನ್ನು ಮೂಗಿಗೆ ಹಿಡಿದುಕೊಂಡೋ ಸೀನುವುದು ಸಂಸ್ಕಾರ. ಸಂಸ್ಕಾರಗಳು ಜನಮಾನ್ಯತೆಯನ್ನು ಗಳಿಸುವ ಮೂಲಮಂತ್ರ. ಸಾರ್ವಜನಿಕವಾಗಿ ಗೌರವವನ್ನು ಹೊಂದಬೇಕೆಂದರೆ ಸಂಸ್ಕೃತಿ ಬೇಕು.

    ‘ತಂದೆಯ ಆತ್ಮವೇ ಮಗುವಾಗಿ ಜನಿಸುವುದು’

    (ಆತ್ಮಾ ವೈ ಪುತ್ರ ನಾಮಾಸಿ) ಎನ್ನುವುದು ಶಾಸ್ತ್ರ. ತಂದೆಯ ಎರಡನೆಯ ಜನ್ಮವೇ ಮಗು. ತಂದೆ ಬದುಕಿರುವಾಗಲೇ ಮಗುವಾಗಿ ಜನಿಸುವುದು ಹೇಗೆ? ಪುನರ್ಜನ್ಮವೇ? ಇದು ಅಸಾಧ್ಯ ಎಂದು ಕೆಲವರು ವಾದಿಸುವರು. ಶಾಸ್ತ್ರವನ್ನು ಅಭ್ಯಾಸ ಮಾಡದೆ ಹೇಳುವ ಈ ವಾದವು ಶಾಸ್ತ್ರವನ್ನರಿತವರಿಗೆ ‘ವಿತಂಡ’ ಎನಿಸುವುದು. ಬೀಜ ಮೊದಲೋ ವೃಕ್ಷ ಮೊದಲೋ ಎನ್ನುವುದು ಒಂದು ಜಿಜ್ಞಾಸೆ. ಇದನ್ನು ‘ಬೀಜವೃಕ್ಷನ್ಯಾಯ’ವೆಂದು ಕರೆಯುವರು. ಆದರೆ ಬೀಜದಿಂದ ವೃಕ್ಷ ಬೆಳೆಯುವುದು ಸತ್ಯ. ವೃಕ್ಷದಿಂದ ಬೀಜ ಬೆಳೆಯುವುದೂ ಅಷ್ಟೇ ಸತ್ಯ. ಯಾವುದು ಮೊದಲು ಎನ್ನುವುದನ್ನು ನಿರ್ಣಯಿಸುವುದು ಕಷ್ಟ.

    ಸೂರ್ಯಪುತ್ರನಾದ ವೈವಸ್ವತಮನುವು ವಿಷ್ಣುವನ್ನು ಕುರಿತು ತಪಸ್ಸು ಮಾಡಿದನು. ಪ್ರಳಯಕಾಲದಲ್ಲಿ ಚರಾಚರ ರೂಪವಾದ ಜಗತ್ತನ್ನು ಒಬ್ಬನೇ ಸ್ವತಂತ್ರವಾಗಿ, ಅನಾಯಾಸದಿಂದ ಕಾಪಾಡುವ ಸಾಮರ್ಥ್ಯವನ್ನು ಅನುಗ್ರಹಿಸುವಂತೆ ವರವನ್ನು ಪಡೆದ. ಒಮ್ಮೆ ತರ್ಪಣ ಮಾಡುತ್ತಿದ್ದಾಗ ಈತನ ಬೊಗಸೆಯಲ್ಲಿ ಒಂದು ಮೀನು ಬಿತ್ತು. ಅದನ್ನು ಸಾಕಲು ತನ್ನ ಪಾತ್ರೆಯೊಳಗೆ ಹಾಕಿದ. ಅದು ಬೆಳೆಯುತ್ತಿತ್ತು. ಹದಿನಾರು ಅಂಗುಲ ಬೆಳೆದಾಗ ‘ಕಾಪಾಡು, ಕಾಪಾಡು’ ಎಂದು ಮೊರೆಯಿಟ್ಟಿತು. ಕ್ರಮವಾಗಿ ಮಡು, ನದಿ, ಸಮುದ್ರವನ್ನು ಸೇರಿತು. ಅಷ್ಟು ಬೃಹತ್ತಾಗಿ ಬೆಳೆಯಿತು.

    ಕೆಲವು ಕಾಲದಲ್ಲಿಯೇ ಪ್ರಳಯವು ಸಮೀಪಿಸಿತು. ಆಗ ಬೃಹದಾಕಾರವಾಗಿ ಬೆಳೆದ ಮತ್ಸ ್ಯೂಪದ ಮಹಾವಿಷ್ಣುವು ಮನುವಿಗೆ ಹೀಗೆ ಹೇಳುವನು, ‘ಕೆಲಕಾಲದಲ್ಲಿ ಭೂಮಿಯು ಮುಳುಗಿಹೋಗುವುದು. ಈ ಹಡಗು ದೇವನಿರ್ವಿುತವಾದುದು. ಇದರಲ್ಲಿ ಸಕಲ ವಿಧವಾದ ಸ್ವೇದಜ, ಅಂಡಜ, ಉದ್ಭಿಜ, ಜರಾಯುಜ ಬೀಜಗಳನ್ನಿಟ್ಟು ಕಾಪಾಡು. ಪ್ರಳಯಮಾರುತದಿಂದ ಈ ಹಡಗು ತಲೆಕೆಳಗಾಗುವ ಸಂದರ್ಭದಲ್ಲಿ ನೀನು ಈ ಹಡಗನ್ನು ನನ್ನ ಕೊಂಬಿನ ಜೊತೆ ಇಟ್ಟು ಜೋಪಾನ ಮಾಡು. ಪ್ರಳಯ ಮುಗಿದ ಬಳಿಕ ಕೃತಯುಗ ಪ್ರಾರಂಭವಾದಾಗ ಇವುಗಳನ್ನು ಪುನಃ ಭೂಮಿಯಲ್ಲಿರಿಸಿ ಪೋಷಿಸು. ಆಗ ನೀನೇ ಜಗತ್ತಿನ ಒಡೆಯ. ಸರ್ವಜ್ಞತ್ವವೂ ಲೋಕೋತ್ತರ ಧೈರ್ಯ, ಪರಾಕ್ರಮಗಳೂ ನಿನಗೆ ಲಭಿಸುವುವು. ಮನ್ವಂತರಾಧಿಪತ್ಯವನ್ನು ಪಡೆದು ದೇವತೆಗಳಿಗೂ ಪೂಜನಿಯನಾಗುವೆ.’ ಮತ್ಸ್ಯಾವತಾರದ ದೋಣಿಯಲ್ಲಿ ಎಲ್ಲವೂ ಬೀಜರೂಪದಲ್ಲೇ ಇತ್ತು ಎನ್ನುವುದು ಎಲ್ಲರಿಗೂ ಗೊತ್ತು.

    ***

    ಏಳೇಳು ಜನ್ಮದ ಅನುಬಂಧ ನಮ್ಮದು. ತಂದೆ, ಅಜ್ಜ, ಮುತ್ತಜ್ಜ, ಮುತ್ತಜ್ಜನ ತಂದೆ, ಅವರ ಅಜ್ಜ, ಮುತ್ತಜ್ಜ, ಮುತ್ತಜ್ಜನ ತಂದೆ – ಹೀಗೆ ಏಳು ತಲೆಮಾರು ಸಪಿಂಡಕರು. ಇದು ತಾಯಿಯ ಕಡೆಯಿಂದಲೂ ಇದೆ. ತಾಯಿ, ಅಜ್ಜಿ, ಮುತ್ತಜ್ಜಿ, ಅವರ ತಾಯಿ, ಅಜ್ಜಿ, ಮುತ್ತಜ್ಜಿ, ಅವರ ತಾಯಿ. ಸಾವಿನ ಕ್ರಿಯಾಕರ್ಮದಲ್ಲಿ ಈ ಏಳು ತಲೆಮಾರುಗಳಿಗೆ ತಿಲತರ್ಪಣವನ್ನು ಬಿಡುತ್ತೇವೆ. ಆದರೆ ಶ್ರಾದ್ಧದಲ್ಲಿ ಮೂರೇ

    ತಲೆಮಾರಿಗೆ ಪಿಂಡಪ್ರಧಾನವನ್ನು ಮಾಡುತ್ತೇವೆ. ತಂದೆ, ಅಜ್ಜ,

    ಮುತ್ತಜ್ಜ – ಈ ಮೂರು ತಲೆಮಾರಿನವರು ನಮಗೆ ಹತ್ತಿರದವರು. ಅದಕ್ಕಿಂತ ಏಳು ತಲೆಮಾರಿನವರು, ಎಂಟರಿಂದ ಹದಿನಾಲ್ಕು ತಲೆಮಾರಿನವರೆಗೂ ಸೋದಕರು. ಹದಿನೈದರಿಂದ

    ಇಪ್ಪತ್ತೊಂದು ತಲೆಮಾರಿನವರು ಸಗೋತ್ರರು.

    ಪಂಚಭೂತ ಸಂಯೋಗದಿಂದ ದೇಹದ ನಿರ್ವಣ. ಶುಕ್ಲ-ಶೋಣಿತಗಳಿಂದ ಜೀವಾಣು ನಿರ್ವಣ, ಗರ್ಭ, ಪ್ರಸವ, ಸಂತಾನ. ಜೀವದಿಂದ ಜೀವ ಹುಟ್ಟಿದ ಮಾತ್ರಕ್ಕೆ ಜೀವಚೈತನ್ಯ ಖಾಲಿಯಾಗುವುದಿಲ್ಲ. ಚೈತನ್ಯವು ಅನ್ನ-ಆಹಾರಗಳಿಂದ ತುಂಬಿಕೊಳ್ಳುತ್ತದೆ. ಪುನಃ ಸೃಷ್ಟಿಗೆ ಸಿದ್ಧವಾಗುತ್ತದೆ. ಋಷಿಗಳು, ಗೃಹಸ್ಥರು ಇದಕ್ಕೆ ಸಾಕ್ಷಿ. ಶಾಸ್ತ್ರದ ಪ್ರಕಾರ ರಸ, ರಕ್ತ, ಮಾಂಸ, ಮೇಧಸ್ಸು, ಅಸ್ಥಿ, ಮಜ್ಜೆ, ಶುಕ್ರ – ಈ ಏಳು ಧಾತುಗಳು. ಏಳು ಧಾತುಗಳ ಏಳರ ಒಂದು ಅಂಶದಿಂದ ಜೀವ ಜನ್ಮತಾಳುತ್ತದೆ. ಪ್ರತಿಯೊಂದು ತಲೆಮಾರಿಗೂ ಏಳರ ಒಂದು ಭಾಗದಂತೆ ಲೆಕ್ಕ ಮಾಡಿದಾಗ, ಒಂದು ಹೊಸದಾದ ಲೆಕ್ಕ ಸಿಗುವುದು! ಮೂಲ ಪುರುಷ ನೂರು ಪೂರ್ಣ ಆತ್ಮ. ಅದನ್ನು ಏಳರಿಂದ ಭಾಗಿಸುತ್ತ ಹೋಗಬೇಕು. ಒಂದನೆ ತಲೆಮಾರಿಗೆ 14.2875, ಏಳನೆ ತಲೆಮಾರಿಗೆ 0.0008 ಬರುವುದು. ಹೀಗೆ ಆತ್ಮನ ಮೂಲ ಅಂಶ ಕಡಿಮೆಯಾಗುತ್ತ ಹೋಗುವುದು. ಇದನ್ನೇ ಡಿ.ಎನ್.ಎ.ಗೆ ಹೋಲಿಸುವರು. ಎಂಟನೇ ತಲೆಮಾರಿಗೆ 0.0001 ಅಂಶ ಉಳಿಯುವುದು. ಎಂಟನೇ ತಲೆಮಾರಿಗೆ ಇಲ್ಲ ಎನ್ನುವಷ್ಟು ಕಡಿಮೆ ಆಗುವುದು. ಪ್ರತಿ ತಲೆಮಾರಿನಲ್ಲಿ ಆನುವಂಶಿಕತೆ, ಸಂಸ್ಕಾರ, ಅನ್ನಾಹಾರ, ಆರ್ಜಿತ ಪುಣ್ಯವಿಶೇಷಗಳು ಸೇರಿ ಪರಿಪೂರ್ಣವಾಗುವುದು. ಏಳು ವರ್ಷಕ್ಕೊಮ್ಮೆ ರಕ್ತವು ಬದಲಾವಣೆ ಹೊಂದುವುದು ಎನ್ನುವುದು ವಿಜ್ಞಾನ. ಈ ಏಳು ತಲೆಮಾರುಗಳು ಏಳೇಳು ಜನ್ಮಗಳ ಪ್ರತಿನಿಧಿಗಳು. ಪ್ರತಿ ತಲೆಮಾರುಗಳಲ್ಲಿಯೂ ಸೂಕ್ಷ್ಮ ಬದಲಾವಣೆಗಳಾಗುತ್ತ ಎಂಟನೆಯ ತಲೆಮಾರಿನಲ್ಲಿ ಭಿನ್ನವಾದ ಹೊಸ ಜೀವ ಅವತರಿಸುತ್ತದೆ. ವಿಜ್ಞಾನ ಹಾಗೂ ಶಾಸ್ತ್ರಗಳ ಪ್ರಕಾರವೂ ಏಳು ತಲೆಮಾರಿನ ಬಾಂಧವ್ಯ ಅವಿನಾಭಾವವಾಗಿದೆ. ನಂಬಿಕೆಯಿಂದ, ಅನುಭಾವದಿಂದ ರಚಿಸಲ್ಪಟ್ಟ ಶಾಸ್ತ್ರದ ವಿವೇಚನೆ ಇಲ್ಲಿ ಅಗತ್ಯ.

    (ಲೇಖಕರು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)

    (ಪ್ರತಿಕ್ರಿಯಿಸಿ: [email protected])

    (ನಾಳೆ, ಮಹಾಭಾರತವನ್ನು ಕುರಿತ ಪರಿಚಯಾತ್ಮಕ ಅಂಕಣ ‘ಪರಂಪರೆ’)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts