ಕೇವಲ ಒಣಪಾಂಡಿತ್ಯ ಅಪ್ರಯೋಜಕ

ವೇದವೇದಾಂತಗಳ ವಿಚಾರಗಳು, ಉಪನಿಷತ್, ಗೀತೆ, ಬ್ರಹ್ಮಸೂತ್ರ ಇತ್ಯಾದಿಗಳನ್ನು ಅಧ್ಯಯನ ಮಾಡಿದಲ್ಲಿ ಮಾತ್ರ ಅಧ್ಯಾತ್ಮಜೀವನದಲ್ಲಿ ಪ್ರಗತಿ ಕಂಡಂತೆ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಜೀವನಪರ್ಯಂತ ಕೇವಲ ಅಧ್ಯಯನ ಮತ್ತು ಪಾಂಡಿತ್ಯದ ಅನುಭವವನ್ನು ಪಡೆದು ನಾನಾ ಬಿರುದುಗಳನ್ನು ಪಡೆದು ತಾನೇ ಪಂಡಿತೋತ್ತಮ, ಅಧ್ಯಾತ್ಮದಲ್ಲಿ ಮುಂದುವರೆದಿದ್ದೇನೆ ಎಂಬ ಅಹಂಭಾವದಿಂದ ವರ್ತಿಸುವವರನ್ನು ಭಗವಾನ್ ಶ್ರೀರಾಮಕೃಷ್ಣರು ಯಾವಾಗಲೂ ದೂರವಿಡುತ್ತಿದ್ದರು.

ಶ್ರೀರಾಮಕೃಷ್ಣ ಪರಮಹಂಸರು ಅಂದಿನ ಕಾಲದ ಮಹಾಪಂಡಿತ, ಹಾಗೂ ಅನೇಕ ವಿದ್ಯಾಕೇಂದ್ರಗಳ ಸಂಸ್ಥಾಪಕ ಎನಿಸಿದ್ದ ಶ್ರೀ ಈಶ್ವರಚಂದ್ರ ವಿದ್ಯಾಸಾಗರರ ಬಳಿ ನಡೆಸಿದ ಸಂವಾದದಲ್ಲಿಯೂ ಈ ಒಣಪಾಂಡಿತ್ಯದ ಬಗ್ಗೆ ಚರ್ಚೆ ನಡೆಸಿ ನಿಜವಾದ ಅರ್ಥದಲ್ಲಿ ಪಾಂಡಿತ್ಯವೆಂದರೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ಈ ಮಹಾನ್ ವ್ಯಕ್ತಿಗಳ ಭೇಟಿ 1882ರ ಆಗಸ್ಟ್ 5ರಂದು ನಡೆದಿತ್ತು. ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಭಕ್ತರೊಡನೆ ಈಶ್ವರಚಂದ್ರ ವಿದ್ಯಾಸಾಗರನ ನಿವಾಸಕ್ಕೆ ಭೇಟಿ ನೀಡುತ್ತಾರೆ. ಆ ಸಂದರ್ಭದಲ್ಲಿ ಪರಮಹಂಸರು ಅನೇಕ ಮಹತ್ತರ ವಿಚಾರಗಳನ್ನು ವಿದ್ಯಾಸಾಗರರ ಜೊತೆ ಹಂಚಿಕೊಳ್ಳುತ್ತಾರೆ. ಆಗ ನಡೆದ ಒಂದು ಸಂವಾದ ಹೀಗಿದೆ; ‘ಜ್ಞಾನವೂ ಭಗವಂತನ ಸಾಕ್ಷಾತ್ಕಾರಕ್ಕೆ ಮಾರ್ಗ. ಹಾಗೆಯೇ ಭಕ್ತಿ ಕೂಡ. ಜ್ಞಾನಮಾರ್ಗ ಸರಿಯಾದದ್ದೇ, ಭಕ್ತಿಮಾರ್ಗವೂ ಸರಿಯಾದದ್ದೇ. ಎಲ್ಲಾ ಮಾರ್ಗಗಳಿಂದಲೂ ಭಗವಂತನನ್ನು ಮುಟ್ಟಬಹುದು. ಆದರೆ ಅಹಂ ಎಂಬುದು ಅತಿ ಸುಲಭವಾಗಿ ಹೋಗುವಂಥದ್ದಲ್ಲ. ಆ ಕಾರಣದಿಂದ ಈ ಕಲಿಯುಗಕ್ಕೆ ಭಕ್ತಿಮಾರ್ಗವೇ ಸರಾಗವಾದದ್ದು.’ ಯಾರು ತಾನು ಎಲ್ಲವನ್ನೂ ತಿಳಿದುಕೊಂಡಿದ್ದಾಗ್ಯೂ ತನಗೇನೂ ತಿಳಿಯದು ಎಂಬ ಶರಣಾಗತಿ ಭಾವನೆಯಲ್ಲಿ ಜೀವಿಸಲು ಪ್ರಯತ್ನಿಸುತ್ತಾನೋ ಅಂತಹವನಿಗೆ ಭಗವತ್ಪ್ರೇಮ ಅತಿ ಸುಲಭವಾಗಿ ದೊರೆಯುತ್ತದೆ. ಈಶ್ವರಚಂದ್ರ ವಿದ್ಯಾಸಾಗರರು ಶ್ರೀರಾಮಕೃಷ್ಣರ ಈ ನುಡಿಗಳನ್ನು ಕೇಳಿ ಅತ್ಯಂತ ಪ್ರಭಾವಿತರಾದರು.

‘ಕೇವಲ ಪಾಂಡಿತ್ಯ ಯಾವುದಕ್ಕೂ ಬಾರದು, ಭಗವಂತನ ಸಾಕ್ಷಾತ್ಕಾರ ಪಡೆಯುವುದಕ್ಕಾಗಿಯೇ, ಅರಿಯುವುದಕ್ಕಾಗಿಯೇ ಗ್ರಂಥಗಳ ವ್ಯಾಸಂಗ’ ಎಂಬುದನ್ನು ಶ್ರೀ ರಾಮಕೃಷ್ಣರು ಇಲ್ಲಿ ಸ್ಪಷ್ಟಪಡಿಸುತ್ತಾರೆ. ಕೇವಲ ಪಾಂಡಿತ್ಯದಿಂದ ಭಗವತ್ ಸಾಕ್ಷಾತ್ಕಾರವಾಗುವುದಿಲ್ಲ, ಬದಲಾಗಿ ಭಗವಂತನನ್ನು ಅರಿಯಲು ಮಾರ್ಗವಷ್ಟೇ ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ. ಪಾಂಡಿತ್ಯ, ವಿಚಾರ ತಿಳಿದಾಕ್ಷಣ, ಅವನು ಅಹಂಭಾವನೆಯಿಂದ ವರ್ತಿಸುತ್ತಾನೆ. ಈ ಅಂಶವನ್ನು ನೆರೆದ ಭಕ್ತರಿಗೆ ಮತ್ತೂ ಸ್ಪಷ್ಟಪಡಿಸಲು ಈ ಸುಂದರ ಉದಾಹರಣೆ ನೀಡುತ್ತಾರೆ:

ಒಂದು ಸಲ ಕೆಲವರು ದೋಣಿಯಲ್ಲಿ ಗಂಗಾನದಿಯನ್ನು ದಾಟುತ್ತಿದ್ದರು. ಎಲ್ಲರೂ ಸಾಮಾನ್ಯರೇ. ಹೇಗೋ ತಮ್ಮ ಜೀವನವನ್ನು ಸಾಗಿಸುತ್ತಿದ್ದ ಮುಗ್ಧರು. ಈ ಗುಂಪಿನಲ್ಲಿ ಒಬ್ಬ ಪಂಡಿತನೂ ಇದ್ದನು. ಈ ಮುಗ್ಧರನ್ನು ಕಂಡು ಅವನು ತನ್ನ ಪಾಂಡಿತ್ಯದ ಬಗ್ಗೆ ಕೊಚ್ಚಿಕೊಳ್ಳಲು ಆರಂಭಿಸಿದನು. ಪಾಪ! ಮುಗ್ಧ ಜನರು, ಈ ಮಹಾಮಹೋಪಾಧ್ಯಾಯನ ಮಾತುಗಳನ್ನು ಕೇಳುತ್ತಾ ಭಯವಿಹ್ವಲರಾದರು. ಪಂಡಿತನೋ ತಾನು ವೇದ ವೇದಾಂತದ ವಿಚಾರವನ್ನೆಲ್ಲಾ ಅಧ್ಯಯನ ಮಾಡಿದ್ದಾಗ್ಯೂ ಷಡ್ದರ್ಶನಗಳೆಲ್ಲವನ್ನೂ ಆಮೂಲಾಗ್ರವಾಗಿ ಓದಿರುವುದಾಗಿ ಹೇಳುತ್ತಾ ಹೋದನು. ಮಧ್ಯೆ ಮಧ್ಯೆ ಸಹ ಪ್ರಯಾಣಿಕರನ್ನು ಮಾತನಾಡಿಸುತ್ತಾ, ದರ್ಪದಿಂದ ಪ್ರಶ್ನೆ ಹಾಕುತ್ತಿದ್ದಾಗ ಬಡಪಾಯಿಗಳು ‘ಇಲ್ಲ ಮಹಾಶಯರೇ! ನಮಗೇನೂ ಗೊತ್ತಿಲ್ಲ’ ಎಂದಾಗ, ‘ನೀವೆಲ್ಲರೂ ನಿಮ್ಮ ಜೀವನವನ್ನೇ ಹಾಳುಮಾಡಿಕೊಂಡಿರಲ್ಲ. ಅಯ್ಯೋ ಪಾಪ!’ ಎಂದು ಉದ್ಗರಿಸುತ್ತಿದ್ದನಂತೆ. ಈ ಪಂಡಿತ ಅಲ್ಲಿಯ ಎಲ್ಲರಿಗೂ ಒಂದು ಭಾಷಣ ಬಿಗಿದು ಎಲ್ಲರೂ ತಮ್ಮ ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಂಡಿರಿ, ಛೇ ಎಂದು ಎಲ್ಲರನ್ನೂ ಛೇಡಿಸಿದ. ಏತನ್ಮಧ್ಯೆ ದೋಣಿಯು ನದಿಯ ಮಧ್ಯಭಾಗಕ್ಕೆ ಬಂದಿತ್ತು. ಅದೇ ಸಮಯದಲ್ಲಿ ಬಿರುಗಾಳಿಯು ಬೀಸತೊಡಗಿತು. ದೋಣಿಯು ಮುಳುಗುವ ಸ್ಥಿತಿಗೆ ಬಂದಿತ್ತು. ಆಗ ಪ್ರಯಾಣಿಕರು ಅಹಂಕಾರದಿಂದ ಬೀಗುತ್ತಿದ್ದ ಪಂಡಿತನನ್ನು ಕೇಳಿದರು, ‘ಮಹಾಶಯರೇ! ನಿಮಗೆ ಈಜು ಬರುವುದೋ?’ ಅಷ್ಟೊತ್ತಿಗಾಗಲೇ ಪಂಡಿತರ ದರ್ಪವೆಲ್ಲಾ ಇಳಿದಿತ್ತು. ಇಲ್ಲ ನನಗೆ ಈಜು ಬರುವುದಿಲ್ಲ’ ಎಂದರು. ಮುಗ್ಧ ಪ್ರಯಾಣಿಕನೊಬ್ಬ, ‘ಸ್ವಾಮಿ, ನಮಗೆ ವೇದ ವೇದಾಂತ ಇತ್ಯಾದಿಗಳು ಬರುವುದಿಲ್ಲವಾದರೂ ಈಜು ಬರುತ್ತದೆ’ ಎಂದು ಮುಳುಗುತ್ತಿದ್ದ ದೋಣಿಯಿಂದ ಜಿಗಿದ! ಈ ಪಂಡಿತನ ಅವಸ್ಥೆ ವರ್ಣಿಸಲಸಾಧ್ಯ!

ಶ್ರೀರಾಮಕೃಷ್ಣ ಪರಮಹಂಸರು ಈ ಉದಾಹರಣೆಯ ಮೂಲಕ ಸ್ಪಷ್ಟವಾಗಿ ತಿಳಿಸುತ್ತಾರೆ. ‘ಭವಸಾಗರವನ್ನು ದಾಟಲು ಕೇವಲ ಭಗವನ್ನಾಮ ಸಾಕು. ಅತ್ಯಂತ ಶ್ರದ್ಧಾ, ಭಕ್ತಿ, ನಿಷ್ಠೆಯಿಂದ ಕೇವಲ ಭಗವನ್ನಾಮ ಜಪವೇ ಸಾಕು. ಈ ಭವಸಾಗರವನ್ನು ದಾಟಲು, ವೃಥಾ ವಿಚಾರಗಳ ಸಂಗ್ರಹ ಅಹಂಕಾರವನ್ನು ಹೆಚ್ಚಿಸುತ್ತದೆಯೇ ವಿನಾ ಶರಣಾಗತಿಯ ಮನೋಭಾವನೆಯಲ್ಲ! ಯಾರು ಭಗವಂತನಲ್ಲಿ ಸಂಪೂರ್ಣ ಶರಣಾಗತಿ ಹೊಂದುತ್ತಾರೆಯೋ ಅವರೇ ಜೀವನ್ಮುಕ್ತರಾಗಲು ಸಾಧ್ಯ! ಖಂಡಿತ ಒಣ ಪಾಂಡಿತ್ಯವಲ್ಲ’ ಎಂದು ನೆರೆದ ಭಕ್ತರಿಗೆ ತಿಳಿಸುತ್ತಿದ್ದರು. ಈ ತೆರನಾದ ಸರಳ ಉದಾಹರಣೆಗಳ ಮೂಲಕ ಅರ್ನ್ಯಘವಾದ ವಿಚಾರಗಳನ್ನು ಸಾಮಾನ್ಯ ಮನುಷ್ಯನಿಗೂ ತಿಳಿಯುವಂತೆ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಅಮೃತವಾಣಿಯಿಂದ ಎಲ್ಲರಿಗೂ ಸಾಧನಾಮಾರ್ಗ ತೋರುತ್ತಿದ್ದರು.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

(ಪ್ರತಿಕ್ರಿಯಿಸಿ: [email protected])

ನಾಳೆ ವೇದಕಾಲೀನ ಜ್ಞಾನ ಕುರಿತ ಅಂಕಣ ‘ಪ್ರಾಚೀನ ಜ್ಞಾನ’