ಹಿಂಗದೆ ನೀ ಭಜಿಸೋ ಶ್ರೀಉಪೇಂದ್ರರ…

ಪೂರ್ಣಪ್ರಜ್ಞಾಚಾರ್ಯರ ಮತಾಂಬುಧಿಯಲ್ಲಿ ಜನಿಸಿದ ಅಕಳಂಕೀ ಚಂದ್ರ ಶ್ರೀ ಸುಮತೀಂದ್ರತೀರ್ಥರಾದರೆ ಅವರಂತೆಯೇ ಶ್ರೀ ಗುರುರಾಯರ ಬಳಿಯಲ್ಲಿಯೇ ಶಾಸ್ತ್ರಾಧ್ಯಯನವನ್ನು ಕೈಗೊಂಡ ಶ್ರೀ ಸುಮತೀಂದ್ರತೀರ್ಥರ ಪೂರ್ವಾಶ್ರಮ ಅನುಜನೇ ಶ್ರೀ ವಿಜಯೀಂದ್ರಾಚಾರ್ಯ. ಇವರು ಮುದ್ದುವೇಂಕಟಕೃಷ್ಣಾಚಾರ್ಯರಿಗೆ ಖಾಸಾ ತಮ್ಮನೋ ಅಥವಾ ದಾಯಾದಿಯೋ ಎಂಬ ವಿಷಯದಲ್ಲಿ ಸ್ಪಷ್ಟತೆ ಇಲ್ಲವಾದರೂ ಇವರಿಗೆ ಗರುಡವಾಹನ ಲಕ್ಷಿ್ಮೕನಾರಾಯಣಾಚಾರ್ಯ ಎಂಬ ತಮ್ಮನಿದ್ದುದ್ದಾಗಿ ಪ್ರತೀತಿಯಿದೆ. ಆ ಗರುಡವಾಹನಾಚಾರ್ಯರು ಶ್ರೀ ವಿಬುಧೇಂದ್ರವಿಜಯ ಎಂಬ ಮಹಾಕಾವ್ಯವನ್ನೂ ರಚಿಸಿದ್ದರೆಂಬುದಾಗಿಯೂ ತಿಳಿದುಬಂದಿದೆ.

ದೇವಲೋಕಾಧಿಪತಿಯಾದ ಇಂದ್ರನಿಗೆ ತಮ್ಮನಾಗಿ ವಾಮನನು, ಅಂದರೆ ಉಪೇಂದ್ರನು ಭುವಿಯಲ್ಲಿ ಅವತರಿಸಿ ಬಲಿಯನ್ನು ಉದ್ಧರಿಸಿದಂತೆ ಸುಮತಿಗಳ ಇಂದ್ರರಾಗಿದ್ದ ಶ್ರೀ ಸುಮತೀಂದ್ರರಿಂದ ತುರ್ಯಾಶ್ರಮವನ್ನು ಸ್ವೀಕರಿಸಿ ಗುರುರಾಯರ ಪೀಠದಲ್ಲಿ ‘ಉಪೇಂದ್ರತೀರ್ಥ’ ಎಂಬ ನಾಮದಿಂದ ವಿರಾಜಿಸಿ ಸಜ್ಜನರನ್ನು ಅನುಗ್ರಹಿಸಲೆಂದು ಬಂದವರೇ ಶ್ರೀ ವಿಜಯೀಂದ್ರಾಚಾರ್ಯರು. ಇವರು ಕ್ರಿ.ಶ. 1725ರಿಂದ ಕ್ರಿ.ಶ. 1728ರ ವರೆಗಷ್ಟೇ ನಾಲ್ಕು ವರ್ಷಗಳ ಕಾಲ ವೇದಾಂತಸಾಮ್ರಾಜ್ಯವನ್ನಾಳಿ ತಮ್ಮ ಯತ್ಯಾಶ್ರಮಗುರುಗಳಾದ ಶ್ರೀಸುಮತೀಂದ್ರರ ಬಳಿಯಲ್ಲೇ ಶ್ರೀರಂಗಂನಲ್ಲಿ ವೃಂದಾವನವನ್ನು ಪ್ರವೇಶಿಸಿದರು. ಇವರ ಚರಮಶ್ಲೋಕವನ್ನು ಗಮನಿಸಿದಾಗ ‘ಇವರು ಎಲ್ಲರ ತಪ್ಪುಗಳನ್ನೂ ಮನ್ನಿಸುವ ಕೃಪಾಸಾಗರರಾಗಿದ್ದರು, ರಾಯರ ವರಪ್ರಸಾದದಿಂದ ಅಪಾರ ಮಹಿಮೆಗಳನ್ನು ತೋರಿದ್ದರು ಹಾಗೂ ಬಹಳಷ್ಟು ಕಾಲ ತಪಸ್ಸಿನಲ್ಲೇ ಕಳೆದು ವಿರಕ್ತಶಿಖಾಮಣಿಗಳಾಗಿ ವಿರಾಜಿಸಿದ್ದರು’ ಎಂದು ತಿಳಿದುಬರುತ್ತದೆ. ತಮ್ಮ ತರುವಾಯ ಗುರುರಾಯರ ಪೂರ್ವಾಶ್ರಮ ಪುತ್ರರಾಗಿದ್ದ ಶ್ರೀ ಲಕ್ಷಿ್ಮೕನಾರಾಯಣಾಚಾರ್ಯರ ಮೊಮ್ಮಗನಿಗೆ ಆಶ್ರಮವನ್ನಿತ್ತು ವೇದಾಂತಸಾಮ್ರಾಜ್ಯಕ್ಕೇ ಬಹು ದೊಡ್ಡ ಕೊಡುಗೆಯನ್ನಿತ್ತಿದ್ದಾರೆ.

ಶ್ರೀ ವಾದೀಂದ್ರತೀರ್ಥರು ಭಕ್ತಿಪುರಸ್ಸರವಾಗಿ ತಮ್ಮ ಆಶ್ರಮಗುರುಗಳಾದ ಉಪೇಂದ್ರತೀರ್ಥರನ್ನು ಗುರುಗುಣಸ್ತವನವೆಂಬ ಸ್ವಕೃತಿಯಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ‘ಇವರು ಸದಾ ಮೂಲರಾಮಚಂದ್ರದೇವರ, ಶ್ರೀ ವೇದವ್ಯಾಸರ ಪಾದಪದ್ಮಗಳ ಆರಾಧನೆಯಲ್ಲೇ ಹೆಚ್ಚು ಕಾಲವನ್ನು ಕಳೆಯುತ್ತಿದ್ದರು. ಅಂದರೆ, ದಿವ್ಯಪ್ರತಿಮೆಗಳಲ್ಲಿ ಶ್ರೀರಾಮನನ್ನು ಆರಾಧಿಸುವುದಲ್ಲದೆ ವೇದವ್ಯಾಸಸಾಹಿತ್ಯವನ್ನು ಸದಾ ಅಧ್ಯಯನ ಮಾಡುತ್ತಾ, ಅವುಗಳ ಮರ್ಮವನ್ನು ತಮ್ಮ ಶಿಷ್ಯಸಮೂಹಕ್ಕೆ ತಿಳಿಹೇಳುತ್ತಿದ್ದರು.’ ವಾದೀಂದ್ರರು ತಮ್ಮ ಗುರುಗಳನ್ನು ಬಹು ದೊಡ್ಡ ವಿಶೇಷಣದಿಂದ ಬಣ್ಣಿಸಿದ್ದಾರೆ – ‘ಮಧ್ವತಂತ್ರಪ್ರತಿಷ್ಠಾ ಧುರ್ಯಾಮರ್ಯಾದ ಸಂವಿತ್ಸುಮಹಿತ ಸುಮತೀಂದ್ರಾರ್ಯ ಶಿಷ್ಯಾಗ್ರಗಣ್ಯಾಃ’ ಎಂಬುದಾಗಿ. ಅಂದರೆ ‘ಉಪೇಂದ್ರತೀರ್ಥರು ಮಧ್ವಸಿದ್ಧಾಂತದ ಪ್ರತಿಷ್ಠಾಪನೆಗೆ ಆವಶ್ಯಕವಾದ ಅಪಾರ ಜ್ಞಾನಸಂಪತ್ತನ್ನು ಹೊಂದಿದ್ದ ಶ್ರೀಮತ್ಸುಮತೀಂದ್ರತೀರ್ಥ ಶ್ರೀಪಾದರ ಶಿಷ್ಯರಲ್ಲೇ ಅಗ್ರಗಣ್ಯರಾಗಿದ್ದರು’ ಎಂದು. ಇದರಿಂದ ಗುರುಗಳ ವೈಭವವು, ಶಿಷ್ಯರ ಮಹತ್ವವೂ ಸ್ಪಷ್ಟವಾಗಿ ತಿಳಿದುಬರುತ್ತದೆ. ಗುರುಶುಶ್ರೂಷೆಯಿಂದಲಷ್ಟೇ ಸರಿಯಾದ ವಿದ್ಯೆ ಹಾಗೂ ಅಪಾರವಾದ ವೈದಗ್ಧ್ಯು ಬರಲು ಸಾಧ್ಯ ಈ ನಿಟ್ಟಿನಲ್ಲಿ ಸುಮತೀಂದ್ರರಂತಹ ಗುರುವರ್ಯರ ಅಗ್ರಗಣ್ಯಶಿಷ್ಯತ್ತ್ವವನ್ನು ಪಡೆದಿರುವ ಶ್ರೀಮದುಪೇಂದ್ರತೀರ್ಥರು ಇನ್ನೆಷ್ಟು ಗುರುಶುಶ್ರೂಷೆ ಮಾಡಿರಬಹುದೆಂದು ಜಿಜ್ಞಾಸುಗಳೇ ಊಹಿಸಬೇಕಾದುದು. ಅಷ್ಟೇ ಅಲ್ಲದೆ ‘ಉಪೇಂದ್ರತೀರ್ಥರು ಸರ್ವದಾ ಉಪನಿಷತ್ತುಗಳು ಅರ್ಥಚಿಂತನೆಯಲ್ಲೇ ತೊಡಗಿ ಅವುಗಳ ಸಾರವನ್ನು ಜನಸಾಮಾನ್ಯರಿಗೆ ಪ್ರವಚನಾದಿಗಳ ಮೂಲಕ ತಿಳಿಸಿಕೊಡುತ್ತಿದ್ದರು’ ಎನ್ನುವರು ಶ್ರೀ ವಾದೀಂದ್ರತೀರ್ಥರು.

ಶಬ್ದರತ್ನಾವಳಿ ತಿಳಿಸುವಂತೆ ‘ವ್ರತ’ ಎಂದರೆ ನಿಯಮ ಹಾಗೂ ಸಂಯಮ. ವಾದೀಂದ್ರರು ಶ್ರೀ ಉಪೇಂದ್ರತೀರ್ಥರನ್ನು ‘ವ್ರತಿವಿಬುಧಮಣಿ’ ಎಂಬುದಾಗಿ ಸಂಬೋಧಿಸುತ್ತಾರೆ. ಅಂದರೆ ಉಪೇಂದ್ರತೀರ್ಥರು ಪತಿನಿತ್ಯವೂ ಒಬ್ಬರಿಂದಲೇ ‘ಅನ್ನವನ್ನು’ ಸ್ವೀಕರಿಸದೆ ಉತ್ತಮ ಪರಿವ್ರಾಜಕರಂತೆ ಊರೂರು ಸುತ್ತುತ್ತಾ ಭಿಕ್ಷೆಯಿಂದ ಲಭಿಸಿದ ಆಹಾರವನ್ನು ಭಗವಂತನಿಗೆ ನಿವೇದಿಸಿ ತದನಂತರ ತಾವು ಸ್ವೀಕರಿಸುವುದರೊಂದಿಗೆ ನಿಯಮಪರಿಪಾಲಕರೂ, ಮಹಾಸಂಯಮಿಗಳೂ ಆಗಿ ‘ಶ್ರೇಷ್ಠವ್ರತೀ’ ಎಂದೆನಿಸಿದ್ದರು. ಇದನ್ನೇ ಮನುಸ್ಮೃಯು ‘ಭಿಕ್ಷೇಣ ವರ್ತಯೇನ್ನಿತ್ಯಂ ನೈಕಾನ್ನಾದೀ

ಭವೇದ್ ವ್ರತೀ’ ಎಂದುಸುರಿದೆ.

ವಾದೀಂದ್ರರು ಮಾಡುವ ಈ ಉಪೇಂದ್ರತೀರ್ಥರ ಗುರುಸ್ತುತಿಗೆ ಪಾಠಾಂತರವೂ ಇದ್ದು ಶ್ರೀವಸುಧೇಂದ್ರತೀರ್ಥರ ಪಾಠದಂತೆ, ‘ಉಪೇಂದ್ರತೀರ್ಥರು ಶೇಷಾಂಶರಾಗಿದ್ದ ಪತಂಜಲಿಮಹರ್ಷಿಗಳು ಬರೆದಿದ್ದ ವ್ಯಾಕರಣಮಹಾಭಾಷ್ಯದಲ್ಲಿ ಪರಿಣತರೂ, ಮೀಮಾಂಸಾ-ತರ್ಕಶಾಸ್ತ್ರಗಳ ತವರುಮನೆಯೂ, ಕಾವ್ಯರಚನಾಚತುರರೂ ಆಗಿದ್ದವರು’ ಎಂದು ತಿಳಿದುಬರುತ್ತದೆ.

ಈ ಮಹನೀಯರನ್ನು ಕುರಿತು ಕುರ್ಡಿ ರಾಘವೇಂದ್ರಾಚಾರ್ಯರೆಂಬ ಹರಿದಾಸರು ಸುಂದರವಾದ ಕೃತಿಯೊಂದನ್ನು ರಚಿಸಿ ಹಾಡಿದ್ದಾರೆ – ‘ಹಿಂಗದೆ ನೀ ಭಜಿಸೋ ಈ ಮೌನಿ ಪದಗಳ’ ಎಂದು ಆರಂಭವಾಗುವ ಈ ಕೃತಿಯಲ್ಲಿ ಒಟ್ಟು ಮೂರು ನುಡಿಗಳಿವೆ. ‘ಇಂದಿಗೂ ಶ್ರೀರಂಗಕ್ಷೇತ್ರದ ಮಂಗಳ ಬೃಂದಾವನದೊಳು ನೆಲೆಸಿ ಭಕುತರ ಅಭಿಲಾಷೆಗಳನ್ನು ಈಡೇರಿಸುತ್ತಿರುವ ಇವರು ದ್ವೆ ೖತ ಸಿದ್ಧಾಂತದ ಪತಾಕೆಯನ್ನು ದಿಗಂತಗಳಲ್ಲಿ ಪಸರಿಸಿದ ಹೆಗ್ಗಳಿಕೆಗೆ ಪಾತ್ರರಾದವರು. ರಾಯರ ಪ್ರಪೌತ್ರರಾಗಿದ್ದ ಶ್ರೀ ಶ್ರೀನಿವಾಸಾಚಾರ್ಯರಿಗೆ ತಮ್ಮ ವೇದಾಂತಸಾಮ್ರಾಜ್ಯವನ್ನೊಪ್ಪಿಸಿ ಮಾರ್ಗಶೀರ್ಷಮಾಸದ ಅಷ್ಟಮಿಯಂದು ಶ್ರೀರಂಗದಲ್ಲಿ ವೃಂದಾವನವನ್ನು ಪ್ರವೇಶಿಸಿದರು’ ಎಂಬುದಾಗಿ ದಾಸರು ಮನೋಜ್ಞವಾಗಿ ಸ್ತುತಿಸಿದ್ದಾರೆ. ಇವರೂ ಶ್ರೀಮೂಲರಾಮನನ್ನು ಆರಾಧಿಸಲಿ ಎಂಬುದು ಗುರುರಾಯರ ಹೆಬ್ಬಯಕೆಯಾಗಿತ್ತಂತೆ.

(ಲೇಖಕರು ವಿದ್ವಾಂಸರು, ಸಂಸ್ಕೃತ ಪ್ರಾಧ್ಯಾಪಕರು)

(ಪ್ರತಿಕ್ರಿಯಿಸಿ: [email protected])

ನಾಳೆ ವಚನವೇದ ಕುರಿತ ಅಂಕಣ ‘ಪರಮಹಂಸ ನುಡಿದೀಪ’