ಲೋಕದ ತಳಮಳ

ಹಳೆಯ ಭಕ್ತಿ ಶ್ರದ್ಧೆಯಳಿಸಿ ಹೋಗಿದೆ ಮಾಸಿ |

ಸುಳಿದಿಲ್ಲವಾವ ಹೊಸದರ್ಶನದ ಹೊಳಪುಂ ||

ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ |

ತಳಮಳಿಸುತಿದೆ ಲೋಕ – ಮಂಕುತಿಮ್ಮ ||

ಪರಂಪರೆಯನ್ನು ಅವಲೋಕಿಸಿದರೆ ಅದೆಷ್ಟೋ ನಂಬಿಕೆ-ನಡವಳಿಕೆಗಳು, ಪೂಜೆ-ಪುನಸ್ಕಾರಗಳು, ಆಚರಣೆಗಳು ಬದುಕಿನ ಭಾಗವೇ ಆಗಿದ್ದವು. ಪ್ರಕೃತಿಯಲ್ಲಿರುವ ಪ್ರತಿ ಜೀವದಲ್ಲೂ, ಗಿಡಮರಗಳಲ್ಲೂ, ಜಡವಸ್ತುಗಳಲ್ಲೂ ದೇವರನ್ನು ಕಾಣುವ ಶ್ರದ್ಧೆ ಹಿರಿಯರಲ್ಲಿತ್ತು. ಪಾಪ-ಪುಣ್ಯಗಳ ಭೀತಿ ಇತ್ತು. ಧರ್ಮಮಾರ್ಗದಲ್ಲಿ ನಡೆಯುವುದೇ ಬದುಕಾಗಿತ್ತು. ಲೋಕಕಲ್ಯಾಣಾರ್ಥವಾಗಿ ಬಾಳುವ, ದೇವರನ್ನು ಬೇಡುವ ವಿಶಾಲ ಮನಸ್ಸುಗಳಿದ್ದವು. ಆದರೆ ಈಗ ಅಂಥ ಯಾವ ನಂಬಿಕೆಯೂ ಇಲ್ಲ. ವಿಶಾಲ ಚಿಂತನೆಯ ಸಹೃದಯತೆಯೂ ವಿರಳವಾಗಿದೆ.

ದೇವರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡ, ಭಕ್ತಿಯನ್ನು ಸಂಪಾದನೆಯ, ಆದಾಯದ ಮೂಲವಾಗಿಸಿಕೊಂಡ ಜನರೇ ಎಲ್ಲೆಡೆ ತುಂಬಿದ್ದಾರೆ. ಅಧ್ಯಾತ್ಮ ಎನ್ನುವುದು ಅರ್ಥ ಕಳೆದುಕೊಂಡಂತಿದೆ. ಹಳೆಯದೆಲ್ಲ ಮೂಢಾಚರಣೆಯೆಂದು ತಿರಸ್ಕರಿಸುವವರನ್ನೇ ಎಲ್ಲೆಡೆ ಕಾಣುತ್ತಿದ್ದೇವೆ. ರೂಢಿಗತವಾಗಿ ಬಂದ ಸಂಪ್ರದಾಯಗಳನ್ನು, ಸಂಸ್ಕೃತಿಯ ಪ್ರತೀಕಗಳನ್ನೂ ಅನಾಗರಿಕತೆ ಎಂದು ಮೂಗುಮುರಿಯುವ ಅದೆಷ್ಟೋ ಸ್ವಘೊಷಿತ ಪ್ರಜ್ಞಾವಂತರು ನಮ್ಮ ನಡುವೆ ಇದ್ದಾರೆ. ತಮ್ಮ ಅಭಿಪ್ರಾಯಗಳನ್ನು ಸಾರ್ವತ್ರಿಕಗೊಳಿಸಿ ಸಮಾಜಸುಧಾರಣೆಯ ಹೆಸರಿನಲ್ಲಿ ಹೆಸರು ಮಾಡುತ್ತಿದ್ದಾರೆ. ಈ ಹುಡುಕಾಟದಲ್ಲಿ ಹೊಸ ನಂಬಿಕೆ, ಜೀವನದರ್ಶನವೇನೂ ಹುಟ್ಟಿಕೊಳ್ಳುತ್ತಿಲ್ಲ. ಅದು ಸರಿ ಇಲ್ಲ ಎಂದವರು ಯಾಕೆ ಸರಿ ಇಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುವುದಿಲ್ಲ. ಅಷ್ಟೇ ಅಲ್ಲ, ಹೇಗಿರಬೇಕು ಎನ್ನುವ ಪ್ರಶ್ನೆಗೂ ಉತ್ತರಿಸದೆ ಜಾರಿಕೊಳ್ಳುತ್ತಾರೆ.

ಇದು ಕುಂಟ ಮತ್ತು ಕುರುಡರ ಕಥೆಯಂತಿದೆ. ಕುಂಟ ಮತ್ತು ಕುರುಡರಿಬ್ಬರು ಬಹುಕಾಲದಿಂದ ಒಂದು ಮನೆಯಲ್ಲಿ ವಾಸಿಸುತ್ತಿದ್ದರು. ಆ ಮನೆ ಅವರಿಗೆ ಪರಿಚಿತವಾಗಿತ್ತು. ಬೀಳುವ ಭಯವಿಲ್ಲದೆ ಸುಲಭವಾಗಿ ಓಡಾಡುತ್ತಿದ್ದರು. ಅಭ್ಯಾಸವಾಗಿದ್ದುದರಿಂದ ಯಾರ ಸಹಾಯವೂ ಇಲ್ಲದೆ ಸ್ವತಂತ್ರರಾಗಿ ನೆಮ್ಮದಿಯಿಂದ ಬಾಳುತ್ತಿದ್ದರು. ಹೀಗಿರುವಾಗ ಒಂದು ದಿನ, ಎಲ್ಲಿಂದಲೋ ಬೀಸಿದ ಬಿರುಗಾಳಿಗೆ ಆ ಮನೆಯು ಬಿದ್ದುಹೋಯಿತು. ಅವರಿಬ್ಬರೂ ಪರದಾಡುವಂತಾಯಿತು. ದಿಕ್ಕೆಟ್ಟ ಸ್ಥಿತಿಯಿಂದ ಅಸಹಾಯಕರಾದರು. ನಮ್ಮ ಸ್ಥಿತಿಯೂ ಇವರಂತಾಗಿದೆ. ಹಳೆಯದನ್ನು ಅನುಸರಿಸಲಾರೆವು, ಹೊಸದನ್ನು ರೂಪಿಸಲಾರೆವು. ಹಳೆಯದನ್ನು ನಿರ್ಲಕ್ಷಿಸಿದ್ದರಿಂದ ಅದು ಬಲಹೀನವಾಗಿದೆ. ಯಾವ ಹೊಸ ದರ್ಶನ, ದೃಷ್ಟಿಕೋನಗಳೂ ಇಲ್ಲ. ಇನ್ನೊಂದು ಆಸರೆಯಿಲ್ಲದೆ, ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳಲಾರದೆ ಮನಸ್ಸು ವಿಷಮಸ್ಥಿತಿಯಲ್ಲಿದೆ. ಹೀಗಾಗಿ ಜಗತ್ತೇ ಅಪನಂಬಿಕೆ, ಚಿಂತೆಗಳಿಂದ ಬದುಕುತ್ತಿದೆ.

ಈಗ ಎಚ್ಚೆತ್ತುಕೊಳ್ಳಬೇಕಾದ ಸಂದರ್ಭದಲ್ಲಿದ್ದೇವೆ. ಅದೆಷ್ಟೋ ವರ್ಷಗಳಿಂದ ಹಿರಿಯರು ಒಪ್ಪಿ, ಅನುಸರಿಸಿಕೊಂಡು ಬಂದ ಶ್ರದ್ಧೆ, ಸಂಪ್ರದಾಯಗಳ ತಿರಸ್ಕಾರ ಸರಿಯಲ್ಲ. ಲೋಕಹಿತವಲ್ಲದ ಯಾವ ವಿಚಾರವಾದರೂ ಸ್ಥಿರವಾಗಿರಲು ಸಾಧ್ಯವಿಲ್ಲ. ನಮ್ಮ ಅನುಭವಕ್ಕೆ ನಿಲುಕುವ ಪ್ರತಿಯೊಂದರಲ್ಲೂ ಇರುವ ಒಳಿತನ್ನು ಕಾಣಬೇಕು. ಹಳೆಬೇರು-ಹೊಸಚಿಗುರು ಸೇರಿದಾಗಲೇ ಮರದ ಸೊಗಸಾದ ಬೆಳವಣಿಗೆ ಸಾಧ್ಯ. ಹಳೆಯದರಲ್ಲಿರುವ ಸತ್ತ್ವವನ್ನು ಅರ್ಥಮಾಡಿಕೊಂಡು, ಹಿರಿಯರ ಅನುಭವದ ಬೆಳಕಿನಲ್ಲಿ ಹೊಸ ದಾರಿ ನಿರ್ವಿುಸುವತ್ತ ಮುಖಮಾಡಬೇಕಿದೆ. ಭದ್ರ ಬುನಾದಿ ಇಲ್ಲವಾದರೆ ಕಟ್ಟಡ ದೀರ್ಘಕಾಲ ಉಳಿಯಲಾರದು.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *