ಬಾಳಿನ ಸಾರ್ಥಕತೆ ಹೇಗೆ?

ಇರುವನ್ನಮೀ ಬಾಳು ದಿಟವದರವಿವರಣೆಯು |

ಹೊರೆ ನಮ್ಮ ಮೇಲಿಲ್ಲ ನಾವದರ ಸಿರಿಯ ||

ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುದೆ |

ಪುರುಷಾರ್ಥ ಸಾಧನೆಯೊ – ಮಂಕುತಿಮ್ಮ ||

ಅಸಂಖ್ಯಾತ ಸಾಧನೆ, ಆವಿಷ್ಕಾರ, ಕಾಣ್ಕೆಗಳ ಮೂಲಕ ನವನಾಗರಿಕತೆಯ ಮೆಟ್ಟಿಲೇರಿರುವ ಮನುಷ್ಯನಿಗೆ ಜನನ-ಮರಣಗಳ ಪ್ರಶ್ನೆಗೆ ಉತ್ತರವನ್ನು ಹುಡುಕಲು ಸಾಧ್ಯವಾಗಿಲ್ಲ. ಇವುಗಳ ನಡುವಿನ ಜೀವನವೂ ಅಸ್ಪಷ್ಟವಾಗಿಯೇ ಉಳಿಯುತ್ತದೆ. ಉಸಿರಿರುವವರೆಗೆ ಬಾಳಪಥದಲ್ಲಿ ಪಡೆವ ಅನುಭವಗಳ ಮೂಲಕ ವ್ಯಕ್ತಿಯು ಬೆಳೆಯುತ್ತಾನೆ. ಆಸೆ, ಕನಸು, ನಿರೀಕ್ಷೆ, ಧ್ಯೇಯಗಳನ್ನು ಕೈವಶ ಮಾಡಿಕೊಳ್ಳಬೇಕೆಂದು ಹೋರಾಡುತ್ತಾನೆ. ಇದರಿಂದಾಗಿ ಬದುಕು ಏಕತಾನತೆಯನ್ನು ಕಳೆದುಕೊಂಡು ಸ್ವಾರಸ್ಯಪೂರ್ಣವಾಗುತ್ತದೆ. ಬದುಕಿನ ಏರಿಳಿತಗಳಿಗೆ ಪೂರಕವಾಗಿ ಅನುಭವಜನ್ಯವಾಗುವ ಲೋಕವಷ್ಟೇ ನಮ್ಮರಿವಿಗೆ ನಿಲುಕುತ್ತದೆ. ಅದಷ್ಟೇ ನಮ್ಮ ಪಾಲಿನ ಸತ್ಯ. ತಿಳಿವಿಗೆ ಹೊಳೆಯದೆ ಉಳಿದ ಹಲವು ಸತ್ಯಗಳು ನಮ್ಮ ಮಧ್ಯೆ ಇದ್ದೇ ಇವೆ. ಇವುಗಳಿಂದಲೇ ಬದುಕಿನ ಗತಿ ನಿರ್ಧರಿಸಲ್ಪಡುತ್ತದೆ. ಆದ್ದರಿಂದಲೇ ಬದುಕಿನ ಆಗುಹೋಗುಗಳ ಹೊರೆ ನಮ್ಮ ಮೇಲಿಲ್ಲ.

ಹಲವು ಆಸೆ, ಕನಸುಗಳನ್ನು ಹೊತ್ತು ಸ್ವಪ್ರಯತ್ನದಿಂದ ಈಡೇರಿಸಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿರುತ್ತೇವೆ. ಆದರೆ ಸರ್ವಸಿದ್ಧತೆ, ಪ್ರಯತ್ನಗಳಿದ್ದರೂ ನಿರೀಕ್ಷಿತ ಫಲ ಪ್ರಾಪ್ತಿಯಾಗದೆ ಹೋಗುವುದು, ಆಕಸ್ಮಿಕ ತಿರುವುಗಳು ಎದುರಾಗುವುದು, ಊಹಿಸದ ರೀತಿಯಲ್ಲಿ ಒಳಿತು ಅಥವಾ ಕೆಡುಕುಗಳು ಕಾಣಿಸಿಕೊಳ್ಳುವುದು ನಮ್ಮೆಲ್ಲರ ಬದುಕಿನ ಅನುಭವವೂ ಹೌದಲ್ಲ. ಹಾಗಾಗಿಯೇ ನಮ್ಮ ಬಾಳಿನ ನಿರ್ವತೃಗಳು ನಾವಲ್ಲ. ನಮ್ಮ ಯೋಚನೆಗಳಂತೆಯೇ ಜೀವನವು ರೂಪುಗೊಳ್ಳುವುದಿಲ್ಲ. ಜಗದ ಜೀವರುಗಳನ್ನೆಲ್ಲ ಮುನ್ನಡೆಸುವ ಹೊಣೆ ಹೊತ್ತ ನಿಯಾಮಕ ಶಕ್ತಿಯೊಂದಿದೆ. ನಮಗೆ ಲಭ್ಯವಾದ ಅವಕಾಶಗಳನ್ನು ಬಳಸಿಕೊಂಡು, ಜೀವಿತವನ್ನು ಸಮೃದ್ಧಗೊಳಿಸುವುದಷ್ಟೇ ನಾವು ಮಾಡಬೇಕಾದ ಕೆಲಸ.

ಸೃಷ್ಟಿಯಲ್ಲಿ ವಿಶೇಷತೆಯನ್ನು ಪಡೆದು ಹುಟ್ಟಿರುವ ಮನುಷ್ಯನು ಲೌಕಿಕ ಬದುಕಿನ ಕ್ಷಣಿಕ ಸುಖಗಳನ್ನು ಅರಸುತ್ತಾ ಜನ್ಮವನ್ನು ವ್ಯರ್ಥಗೊಳಿಸಬಾರದು. ಇದರಿಂದಾಗಿ ಮನಸ್ಸು ಕ್ಷೋಭೆಗೊಳ್ಳುತ್ತದೆಯೇ ಹೊರತು ಶಾಂತಿ ಲಭಿಸದು. ಕಾಲ ಮತ್ತು ಆಕಾಶದ ವಿಸ್ತಾರದಲ್ಲಿ ನಾವು ಏನೂ ಅಲ್ಲ ಎನ್ನುವುದು ಅರ್ಥವಾದಾಗ ಆತ್ಮೋದ್ಧಾರಕ್ಕಾಗಿ ಸತ್ಕರ್ಮಗಳನ್ನು ಮಾಡಲು ಆಶಿಸುತ್ತೇವೆ. ಇದರಿಂದಲೇ ಬಾಳಿನ ಸಿರಿಯು ಹಿರಿದಾಗುತ್ತದೆ.

ನಿಸರ್ಗದಿಂದ ಪ್ರಚೋದಿತವಾಗುವ, ಇಂದ್ರಿಯಸ್ಪಂದನವನ್ನು ಹೊಂದಿರುವ ಮನಸ್ಸು ಹಲವು ಅಭಿಲಾಷೆಗಳನ್ನು ಮತ್ತಮತ್ತೆ ಪ್ರಕಟಿಸುತ್ತಿರುತ್ತದೆ. ಅವುಗಳನ್ನು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂದು ವಿಭಾಗಿಸಲಾಗಿದೆ. ಸಾಮಾನ್ಯವಾಗಿ ಮನುಷ್ಯರು ಪ್ರಕೃತಿಪ್ರೇರಿತವಾದ ಅರ್ಥ ಮತ್ತು ಕಾಮವನ್ನು ಬಯಸುತ್ತಾರೆ. ವಿವೇಚನೆಯಿಂದಷ್ಟೇ ಅನುಸರಿಸಲ್ಪಡುವ ಧರ್ಮ ಮತ್ತು ಮೋಕ್ಷವನ್ನು ಕಡೆಗಣಿಸುತ್ತಾರೆ. ಧರ್ಮವನ್ನು ಧಿಕ್ಕರಿಸದ ಕಾಮಿತಗಳನ್ನು ತಮ್ಮದಾಗಿಸಿ ಕೊಳ್ಳುತ್ತಾ, ಪಡೆದ ಅರ್ಥವನ್ನು ಲೋಕಹಿತಕ್ಕಾಗಿ ಧರ್ಮಮಾರ್ಗದಲ್ಲಿ ಸದ್ವಿನಿಯೋಗಿಸಿಕೊಳ್ಳುತ್ತಾ ಬಾಳಬೇಕು. ಹೀಗೆ ಧರ್ಮವನ್ನು ಅನುಸರಿಸುತ್ತಿದ್ದರೆ ಮೋಹಪಾಶಗಳಿಂದ, ಇಹದ ಜಂಜಾಟದಿಂದ ಮುಕ್ತರಾಗಲು ಸಾಧ್ಯ.

ಲೌಕಿಕ ಬದುಕಿನ ಸಿರಿ-ಸಂಪತ್ತುಗಳನ್ನಷ್ಟೇ ಬಯಸದೆ ಆತ್ಮೋನ್ನತಿಗೆ ಕಾರಣವಾಗುವ ರೀತಿಯಲ್ಲಿ ಸ್ವಧರ್ಮವನ್ನು ಅನುಸರಿಸುತ್ತಾ ಬಾಳುವುದೇ ಮನುಷ್ಯನ ಗುರಿಯಾಗಬೇಕು. ಪುರುಷಾರ್ಥಗಳನ್ನು ಮನನ ಮಾಡಿಕೊಂಡು ಜಗದ ಕಲ್ಯಾಣದಲ್ಲಿ ತನ್ನ ಆತ್ಮೋನ್ನತಿ ಇದೆ ಎನ್ನುವುದನ್ನು ಅರಿತರಷ್ಟೇ ಧನ್ಯ ಜೀವಿತವನ್ನು ಸಾಧಿಸಿಬಹುದು.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: [email protected])