ಹಗೆತನ ಬಿಡು ಮನುಜ…

ಜಗದ ಸೊಗದರಸಿಕೆಯ ಫಲ, ನೋಡು, ಬರಿ ಕಲಹ |

ಮೃಗಗಳಾವೇಶಗೊಳಲಪ್ಪುದಿನ್ನೇನು? ||

ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು |

ಹಗೆತನವುಮಂತು ಬಿಡು – ಮಂಕುತಿಮ್ಮ ||

ವ್ಯಕ್ತಿಯು ಸುಖವೆಂಬ ಬಣ್ಣದ ಚಿಟ್ಟೆಯನ್ನರಸುತ್ತ, ಹಿಡಿಯಲೆತ್ನಿಸುತ್ತ ಹೋಗುತ್ತಾನೆ. ಆ ಚಿಟ್ಟೆ ಸಿಕ್ಕಿಯೂ ಸಿಕ್ಕದಂತೆ ಮಾಯವಾಗುತ್ತಿರುತ್ತದೆ. ಈ ಅಲೆದಾಟದೊಳಗೆ ವ್ಯಕ್ತಿಯು ತನ್ನ ಜೀವನವನ್ನೇ ಕಡೆಗಣಿಸುತ್ತಾನೆ. ವಿಲಾಸಿಜೀವನಕ್ಕೆ ಮಾರುಹೋದ ವ್ಯಕ್ತಿಯು ಆ ಭ್ರಮೆಯಿಂದ ಮುಕ್ತನಾಗುವುದು ಸುಲಭವಲ್ಲ. ಸುಖಾನ್ವೇಷಣೆಯು ತೀವ್ರಗೊಂಡಂತೆ ಮಾನವೀಯತೆಯೇ ಮರೆಯಾಗುತ್ತದೆ. ತನಗಷ್ಟೇ ಸಿಗಬೇಕು ಎಂಬ ಸ್ವಾರ್ಥ ಇಣುಕುತ್ತದೆ. ಇತರರ ಬದುಕಿನ ಸುಖ-ಸೌಲಭ್ಯಗಳಿಗೆ ತನ್ನದನ್ನು ಹೋಲಿಸುತ್ತ ನಿರಾಶಾವಾದಿಗಳಾಗುವುದು, ಅಸೂಯೆಯಿಂದ ನಾಶಕ್ಕೆ ಹೊರಡುವುದು, ತನಗೆ ಸಿಗದ ಭಾಗ್ಯವು ಉಳಿದವರಿಗೂ ಸಿಗದಂತೆ ಮಾಡುವುದು – ಹೀಗೆ ಹತ್ತುಹಲವು ವಿಕೃತಿಗಳನ್ನೆಸಗುತ್ತಾನೆ.

ಪ್ರಾಣಿಪ್ರಪಂಚದಲ್ಲಿ ಹಸಿವು ಮೂಲವಾಗಿ ಆಸೆ ಹುಟ್ಟುವುದು, ಕದನವೇರ್ಪಡುವುದು ಸಾಮಾನ್ಯ. ಮನುಷ್ಯರೂ ಈ ಸ್ವಭಾವಕ್ಕೆ ಹೊರತಾದವರಲ್ಲ. ಒಂದೇ ತಾಯಿಯ ಮಕ್ಕಳಲ್ಲಿ ಬಲಾನ್ವಿತರು ಬಾಚಿಕೊಳ್ಳುವುದು, ಒಡಹುಟ್ಟನ್ನೂ ವಂಚಿಸುವುದು ಸಾಮಾನ್ಯ ನೋಟ. ಆದರೆ ಅವು ಬಯಸಿದ್ದು ಸಿಕ್ಕಮೇಲೆ ಹಗೆ ಸಾಧಿಸಲಾರವು. ಆದರೆ ಮನುಷ್ಯನ ಸ್ವಭಾವದಲ್ಲಿ ಪ್ರಾಣಿಸಹಜ ಭಾವಗಳ ಜೊತೆಗೆ ಆಸುರೀಪ್ರವೃತ್ತಿಯೂ ಇದೆ. ಹಾಗಾಗಿ ಮತ್ಸರಿಸುತ್ತಾನೆ, ವೈರವನ್ನು ಸಾಧಿಸುತ್ತಾನೆ. ಸರ್ವನಾಶಕ್ಕೂ ಪ್ರಯತ್ನಿಸುತ್ತಾನೆ.

ಈ ದ್ವೇಷದ ದಳ್ಳುರಿಯು ಪ್ರತಿರೋಧಿಯನ್ನು ನಿಗ್ರಹಿಸದಿದ್ದರೂ, ದ್ವೇಷ, ಮತ್ಸರ ತುಂಬಿರುವ ವ್ಯಕ್ತಿಯ ಭವಿಷ್ಯವನ್ನು ಹಾಳುಮಾಡುವುದು ನಿಶ್ಚಿತ. ಹೇಗೆ ಕಾಡ್ಗಿಚ್ಚು ಪೂರ್ತಿ ವನವನ್ನು ಸುಟ್ಟಮೇಲೆ ತಣ್ಣಗಾಗುತ್ತದೆಯೋ ಹಾಗೆಯೇ ಮನುಷ್ಯನ ಹಗೆತನವೂ ಸರ್ವನಾಶವನ್ನು ಮಾಡಿಯೇ ಸುಮ್ಮನುಳಿಯುತ್ತದೆ. ಈರ್ವರ ನಡುವೆ ಬಲಿತ ಹಗೆತನಕ್ಕೆ ಕಾರಣ ಹುಡುಕುತ್ತಾ ಹೋದರೆ ಅಲ್ಲಿ ತೀರ ಕ್ಷುಲ್ಲಕ ವಿಚಾರವಿರುತ್ತದೆ.

ಸುಖವನ್ನು ಹುಡುಕುತ್ತಾ ಅದು ಸಿಗದೆ ಹೋದಾಗ ಅಥವಾ ಇನ್ನೊಬ್ಬರಲ್ಲಿದೆ ಎಂದಾದಾಗ ವೈರಭಾವವು ಬೆಳೆಯುತ್ತದೆ. ತಮ್ಮನ್ನು ತಾವು ದ್ವೇಷಿಸುವ ಮಾನಸಿಕ ವೈಪರೀತ್ಯವೂ ಕಂಡುಬರುವುದಿದೆ. ಸುಖವೆನ್ನುವುದು ಹೊರಪ್ರಪಂಚದಿಂದ ಸಿಗುವುದಲ್ಲ, ಅದು ವ್ಯಕ್ತಿಯ ಆಂತರ್ಯದಲ್ಲೇ ಇದೆ. ಅದನ್ನು ಗುರುತಿಸದೆ ಹೊರಜಗತ್ತಿನಲ್ಲೇ ಅದನ್ನು ಕಾಣಲೆಳೆಸುವುದು ಎಲ್ಲ ಕ್ಲೇಶಗಳಿಗೂ ಮೂಲ ಕಾರಣ. ಯಾವಾಗ ವ್ಯಕ್ತಿ ಬಯಸಿದ್ದಕ್ಕೆ ವಿರುದ್ಧವಾಗಿ ನಡೆಯುತ್ತದೆಯೋ ಆಗ ದುಃಖವುಂಟಾಗುತ್ತದೆ.

ಸುಖದ ಭ್ರಮೆಯನ್ನುಂಟುಮಾಡುವ ಥಳುಕಿನ ಭ್ರಾಮಕ ಜಗತ್ತಿನಲ್ಲಿ ಕಳೆದುಹೋಗುತ್ತಿರುವ ಸಮಾಜವು ನೈಜ ಸೌಖ್ಯವೆಲ್ಲಿದೆ ಎನ್ನುವುದನ್ನೇ ಅರಿಯದೆ ಉಳಿದಿದ್ದಾರೆ. ಸ್ನೇಹ-ಸಂಬಂಧ ಮತ್ತು ಸಾಮಾಜಿಕ ಅನುಬಂಧಗಳಲ್ಲಿ ಸಹಜವಾಗಿ ಸ್ಪಂದಿಸುವುದರಿಂದ ಸಿಗುವ ಸಂತೃಪ್ತಭಾವವನ್ನು ತಿಳಿದಿರುವವರು ವಿರಳ. ಇಂಥ ಮಾನವೀಯ ಸಂಬಂಧಗಳನ್ನು ಉಳಿಸಿಕೊಂಡು, ಸ್ಪಂದಿಸುವುದರಿಂದ ದುಃಖ ಹಗುರವಾಗುತ್ತದೆ.

ಇವೆಲ್ಲದಕ್ಕಿಂತ ಮುಖ್ಯವಾದದ್ದು ಆಂತರಂಗಿಕ ಸುಖವನ್ನು ಹೊಂದುವುದು. ವ್ಯಕ್ತಿಯು ತನ್ನ ಸಾಮರ್ಥ್ಯವನ್ನು, ಬೌದ್ಧಿಕ ಶಕ್ತಿಯನ್ನು ಲೋಕಹಿತಕ್ಕಾಗಿ ವಿನಿಯೋಗಿಸುತ್ತ ಹೋದಂತೆ ಸಾರ್ಥಕ ಕ್ಷಣಗಳು ಅವನದ್ದಾಗುತ್ತವೆ. ಈ ಸಫಲ ಜೀವಿತವು ಆಂತರಂಗಿಕವಾಗಿ ಸುಖದ ಅನುಭೂತಿಯನ್ನು ಕರುಣಿಸುತ್ತದೆ. ಎಲ್ಲರನ್ನೂ ಪ್ರೀತಿಸುವ, ಎಲ್ಲರ ಒಳಿತಿಗಾಗಿ ಶ್ರಮಿಸುವ ಜೀವಗಳ ಬಳಿಗೆ ಸುಖವು ತಾನಾಗಿಯೇ ಬರುತ್ತದೆ. ಇಂಥ ಮನಸ್ಸುಗಳು ಸಮಾಜದಲ್ಲಿರುವ ದ್ವೇಷ-ಅಸೂಯೆಗಳನ್ನು ಅಳಿಸಿ, ಪ್ರೀತಿಯ ನಂದನವನವನ್ನು ಬೆಳೆಯುತ್ತವೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *