ಸಣ್ಣತನ ಸವೆಸುವ ವಿಶಾಲ ಚಿಂತನೆ

ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ |

ನಿನ್ನನಳಿಸುವ ನಗಿಸುವೆಲ್ಲ ನಿನ್ನಂಶ ||

ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ |

ಸಣ್ಣತನ ಸವೆಯುವುದು – ಮಂಕುತಿಮ್ಮ ||

ಮನೆಯ ಬಾಗಿಲು ಮುಚ್ಚಿ, ಪುಟ್ಟ ಕಿಟಿಕಿಯಿಂದ ಹೊರಗಿಣುಕಿ ನೋಡುವಾತನಿಗೆ ಕಾಣುವ ಜಗತ್ತು, ಕಿಟಿಕಿಯ ಪರಿಧಿಯಲ್ಲಿ ಕಾಣುವಷ್ಟು ಮಾತ್ರ. ಮುಚ್ಚಿದ ಬಾಗಿಲು ತೆರೆದು ಬಯಲಿಗೆ ಬಂದರೆ ಕಾಣುವ ಜಗತ್ತಿನ ವ್ಯಾಪ್ತಿ ಹೆಚ್ಚುತ್ತದೆ. ಆದರೂ ಕಾಣುವ ಕಂಗಳ ಶಕ್ತಿಯನ್ನು ಅವಲಂಬಿಸಿಯಷ್ಟೇ ದೃಶ್ಯಗಳು ಗೋಚರಿಸುತ್ತವೆ.

ವ್ಯಕ್ತಿಯು ಪಂಚೇಂದ್ರಿಯಗಳ ಮೂಲಕ ಹೊರಪ್ರಪಂಚದ ಅನುಭವ ಪಡೆಯುತ್ತಾನೆ. ಒಂದು ಸನ್ನಿವೇಶ ವ್ಯಕ್ತಿಯ ಅರಿವಿಗೆ ನಿಲುಕಲು ಆತನ ಮನಃಸ್ಥಿತಿ, ಬೌದ್ಧಿಕತೆಯೂ ಮುಖ್ಯವಾಗುತ್ತದೆ.

ಪ್ರಾಕೃತಿಕ ವಿಕೋಪಗಳ ಬಗ್ಗೆಯೋ, ಚುನಾವಣೆ-ಪಕ್ಷಗಳ ಬಗ್ಗೆಯೋ ತೊದಲ್ನುಡಿವ ಮಗುವಿನ ಬಳಿ ಮಾತನಾಡಿದರೆ ಏನು ಅರ್ಥವಾದೀತು? ಹಿರಿಯರು ಆಡುವ ವಿಚಾರಗಳನ್ನು, ದೃಶ್ಯಗಳನ್ನು ತನ್ನ ಮತಿಯ ಮಿತಿಗೆ ಸಾಧ್ಯವಾಗುವಷ್ಟು ಅರ್ಥಮಾಡಿಕೊಳ್ಳುತ್ತದೆ. ತನ್ನದೇ ಬಾಲಭಾಷೆಯಲ್ಲಿ ಅಭಿಪ್ರಾಯಗಳನ್ನು ಹೇಳುತ್ತದೆ. ಮನುಷ್ಯನ ನಡೆಯೂ ಇದಕ್ಕೆ ಹೊರತಲ್ಲ. ಒಂದು ಪುಸ್ತಕದ ಕಥೆಯು ಸಂಪೂರ್ಣವಾಗಿ ಮನನವಾಗಬೇಕಿದ್ದರೆ ಅದರಲ್ಲಿ ವರ್ಣಿಸಿರುವುದೆಲ್ಲ ಮನಃಪಟಲದಲ್ಲಿ ಚಿತ್ರಿತವಾಗಬೇಕು. ವ್ಯಕ್ತಿಯ ದೇಶ-ಭಾಷೆ, ಜೀವನಶೈಲಿಗೆ ಹೊಂದಿಕೆಯಾಗದ ವಿಚಾರವೊಂದನ್ನು ಮನಸ್ಸು ಸ್ಪಷ್ಟವಾಗಿ ಚಿತ್ರಿಸಿಕೊಳ್ಳದು. ವ್ಯಕ್ತಿಯ ಅನುಭವವಲಯಕ್ಕೆ ಸೇರಿದ್ದರಷ್ಟೆ ಅದು ಹೃದ್ಯವಾದೀತು.

ಜೀವನದಲ್ಲಿ ಬಂದುಹೋಗುವ ನೋವು, ನಲಿವುಗಳೂ ವ್ಯಕ್ತಿಯ ಭಾವಕೋಶದೊಳಗಿನಿಂದಲೇ ಮೂಡುತ್ತವೆ. ಒಂದು ಸನ್ನಿವೇಶಕ್ಕೆ ವ್ಯಕ್ತಿಯು ಹೇಗೆ ಪ್ರತಿಸ್ಪಂದಿಸುತ್ತಾನೆ ಎನ್ನುವ ಆಧಾರದಲ್ಲೇ ಅಳು-ನಗು ಮೂಡುತ್ತವೆ. ಪರಿಚಿತರೊಬ್ಬರು ಸಾವಿಗೀಡಾದರೆ ದುಃಖದ ತೀವ್ರತೆಯು ಎಲ್ಲರಿಗೂ ಸಮಾನವಾದುದಲ್ಲ. ಸಾವಿಗೀಡಾದ ವ್ಯಕ್ತಿಯನ್ನು ಭಾವನಾತ್ಮಕವಾಗಿ ಅವಲಂಬಿಸಿರುವವರು ಕಂಗೆಡುತ್ತಾರೆ. ಹಾಗೆಂದು ಇತರರಿಗೆ ಶೋಕವಿಲ್ಲ ಎಂದಲ್ಲ. ಸ್ಪಂದನದಲ್ಲಿ ವ್ಯತ್ಯಾಸವಿರುತ್ತದೆ. ಸಂಭ್ರಮವೂ ಹೀಗೆಯೇ. ಆಂತರ್ಯದ ಸಾಹಚರ್ಯವಿದ್ದಾಗಲಷ್ಟೇ ಅನುಭವವೇದ್ಯವಾದೀತು. ಹಾಗಾಗಿಯೇ ಪ್ರತಿಯೊಬ್ಬ ವ್ಯಕ್ತಿಯ ಅನುಭವವೂ ವಿಭಿನ್ನ.

ಈ ರೀತಿಯಲ್ಲಿ ಪಂಚೇಂದ್ರಿಯಗಳ ಸಹಯೋಗದಲ್ಲಿ ಮನಸ್ಸು ಮನನಮಾಡಿಕೊಂಡದ್ದೂ ಪರಿಪೂರ್ಣವಲ್ಲ. ವ್ಯಕ್ತಿಯ ಪಾತ್ರತ್ವಕ್ಕೆ ಅನುಸಾರವಾಗಿ, ಧಾರಣಾಶಕ್ತಿಗೆ ಹೊಂದಿಕೊಂಡು ವಸ್ತುಸ್ಥಿತಿಯು ಮನವರಿಕೆಯಾಗುತ್ತದೆ. ಅದಷ್ಟೇ ಸತ್ಯವೆಂದು ಭಾವಿಸಲ್ಪಡುತ್ತದೆ. ಆದರೆ ಸತ್ಯವು ಬೇರೆಯೇ ಇರುತ್ತದೆ. ತನ್ನ ಇತಿಮಿತಿಯ ಅರಿವುಳ್ಳ ವ್ಯಕ್ತಿಯು ವಿಸ್ತಾರವಾಗಿ ಯೋಚಿಸುತ್ತಾನೆ. ಸಂಪೂರ್ಣವಾಗಿ ಸತ್ಯದರ್ಶನವಾಗದೆ ಇದ್ದರೂ ತನಗೆ ಗೋಚರಿಸುತ್ತಿರುವುದು ಒಂದು ಪಾರ್ಶ್ವದ ಬೆಳಕು ಮಾತ್ರ ಎಂಬುದನ್ನು ತಿಳಿದಿರುತ್ತಾನೆ. ತನ್ನೊಳಗಿನ ಆತ್ಮಜ್ಞಾನದ ಬೆಳಕಿನಲ್ಲಿ ಇಂದ್ರಿಯಾನುಭವಕ್ಕೆ ದೊರೆತ ವಸ್ತುಗಳನ್ನು ದರ್ಶಿಸುತ್ತಾ ಹೋಗುತ್ತಾನೆ. ಇದರಿಂದಾಗಿ ವಿಸ್ಮಯದಿಂದ ಕೂಡಿದ ವಿಶಾಲ ಸೃಷ್ಟಿಯ ಪುಟ್ಟ ಕಣ ತಾನು ಎಂಬ ಸತ್ಯವು ಮನವರಿಕೆಯಾಗುತ್ತದೆ. ಅಹಂಕಾರ ಅಳಿಯುತ್ತದೆ. ಜಗದ ಜನರ ನೋವು ತನ್ನ ನೋವು ಎಂದು ಸಹಾನುಭೂತಿಯಿಂದ ಸಹಾಯ ಮಾಡುವ ಔದಾರ್ಯ ಮೂಡುತ್ತದೆ.ಇತರರ ಹರ್ಷಗಳ ಕಂಡು ಆನಂದಿಸುವ ಸಹೃದಯತೆಯೂ ಇರುತ್ತದೆ.

ಎಲ್ಲರನ್ನೂ ತನ್ನವರೆಂದು ಭಾವಿಸುತ್ತ, ಎಲ್ಲರೊಳಗೊಂದಾಗಿ ಸಂತಸವನ್ನು ಹಂಚುತ್ತಾ ಬಾಳುತ್ತಾನೆ. ತನ್ನ ಅರಿವಿನ ಜಗತ್ತನ್ನು ವಿಸ್ತರಿಸುತ್ತ ಆತ್ಮಾನಂದದ ಅನುಭೂತಿಯನ್ನು ಪಡೆಯುತ್ತಾನೆ. ವಿಶಾಲ ಪ್ರಪಂಚದಲ್ಲಿ ಮಿಳಿತನಾಗಿ ಸಂತೃಪ್ತಿಯಿಂದ ಬಾಳುತ್ತಾನೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *