ಜೀವನವೆಂಬ ಅಶ್ವತ್ಥವೃಕ್ಷ…

ಪರಮಪದದಲಿ ನೋಡು: ಬೇರುಗಳ್ ವ್ಯೋಮದಲಿ|

ಧರೆಗಿಳಿದ ಕೊಂಬೆರೆಂಬೆಗಳು, ಬಿಳಲುಗಳು ||

ಚಿರಜೀವಿ ವೃಕ್ಷವಿದು ವಿಶ್ವಜೀವಾಶ್ವತ್ಥ |

ಪರಿಕಿಸಿದರರ್ಥವನು – ಮಂಕುತಿಮ್ಮ ||

ಶ್ರೀಮದ್ಭಗವದ್ಗೀತೆಯಲ್ಲಿ ದೇವ, ಜೀವ, ಜಗತ್ತುಗಳ ನಡುವಿನ ಸಂಬಂಧವನ್ನು ವಿವರಿಸುವ ಅಶ್ವತ್ಥಮರದ ರೂಪಕವನ್ನು ಈ ಕಗ್ಗವು ನೆನಪಿಸುತ್ತದೆ. ಸಾಮಾನ್ಯವಾಗಿ ಮರವೊಂದರ ಬೇರುಗಳು ನೆಲದಾಳದಲ್ಲಿ ಹರಡಿರುತ್ತವೆ. ಕಾಂಡ, ಕೊಂಬೆ, ರೆಂಬೆ, ಬಿಳಲು, ಚಿಗುರುಗಳು ಬಾನಗಲ ಹರಡಿರುತ್ತವೆ. ಆದರೆ ‘ವಿಶ್ವಾಶ್ವತ್ಥ’ ಎನ್ನುವುದು ವ್ಯತಿರಿಕ್ತವಾಗಿದೆ. ವ್ಯೋಮಾಕಾಶದಲ್ಲಿ ಅದರ ಬೇರುಗಳು ಹರಡಿವೆ. ರೆಂಬೆ, ಕೊಂಬೆ, ಚಿಗುರು, ಬಿಳಲುಗಳು ವಿಶ್ವದಗಲ ಹರಡಿವೆ. ಮರವು ಚಿರಂಜೀವಿಯಾಗಿಯಾಗಿ ಚಿರನೂತನವಾಗಿ ಕಂಗೊಳಿಸುತ್ತದೆ. ಪರಮಪದದಲ್ಲಿರುವ ಬೇರುಗಳನ್ನು ಕಾಣಲು, ಮುಟ್ಟಲು ಸಾಮಾನ್ಯ ಜೀವರುಗಳಿಗೆ ಸಾಧ್ಯವಿಲ್ಲ. ಆದರೆ ಕೆಳಗೆ ಹಬ್ಬಿರುವ ಕೊಂಬೆರೆಂಬೆಗಳು ಕೈಗೆಟಕುವಂತಿವೆ. ಈ ವೃಕ್ಷವು ಎಂದಿಗೂ ವಿನಾಶಕ್ಕೆ ಒಳಗಾಗದು.

ಪರಿಸರದಲ್ಲಿರುವ ಉಳಿದ ಮರಗಳಿಗೆ ಹೋಲಿಸಿದರೆ ಅಶ್ವತ್ಥಮರಕ್ಕೆ ವಿಶೇಷ ಗುಣಗಳಿವೆ. ಒಂದೆಡೆ ಬಾಡಿದರೂ ಇನ್ನೊಂದೆಡೆ ಚಿಗುರಿಕೊಳ್ಳುವುದರಿಂದ ದೀರ್ಘಕಾಲ ಬಾಳುತ್ತದೆ. ಬೇರು, ಕೊಂಬೆಗಳು ವಿಸ್ತಾರವಾಗಿ ಹರಡಿರುತ್ತವೆ. ಬಿಳಲುಗಳು ಸಿಕ್ಕುಸಿಕ್ಕಾಗಿ, ಗಂಟುಗಂಟಾಗಿ ಒಂದರೊಳಗೊಂದು ಸೇರಿರುತ್ತವೆ. ಅಶ್ವತ್ಥದ ಈ ಎಲ್ಲ ಗುಣಗಳು ಮನುಷ್ಯ ಬದುಕಿಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ಹಾಗಾಗಿ ಈ ರೂಪಕವನ್ನು ಬಳಸಲಾಗಿದೆ.

ಊರ್ಧ್ವಮುಖವಾಗಿ ಬೇರುಗಳನ್ನು ಹಬ್ಬಿಸಿರುವ ಈ ವಿಶ್ವಾಶ್ವತ್ಥದ ಕೊಂಬೆ, ರೆಂಬೆ, ಚಿಗುರು, ಎಲೆಗಳೋಪಾದಿಯಲ್ಲಿ ಜೀವಾತ್ಮಗಳಿವೆ. ಕರ್ಮಶೇಷ, ಋಣದ ಎಳೆಗಳು ಸೊಟ್ಟುಸೊಟ್ಟಾದ ಬಿಳಲುಗಳಂತಿವೆ. ಜೀವರುಗಳಲ್ಲಿರುವ ಸಾತ್ತಿ್ವಕ, ರಾಜಸ, ತಾಮಸಗುಣಗಳನ್ನು ಬಳಸಿಕೊಂಡು ಪ್ರಕೃತಿಯು ಈ ವೃಕ್ಷವನ್ನು ಬೆಳೆಸುತ್ತಿದ್ದಾಳೆ. ವಿಶ್ವಾಶ್ವತ್ಥದ ಬೇರುಗಳೇ ಪರಬ್ರಹ್ಮಸ್ವರೂಪವಾದ್ದರಿಂದ ಅದಕ್ಕೆ ನಾಶವಿಲ್ಲ. ಅದರ ಎಲೆ, ಬಿಳಲು, ಕೊಂಬೆ-ರೆಂಬೆಗಳಂತಿರುವ ಜಗದ ಜೀವಜಾಲವು ಅಳಿಯುತ್ತದೆ, ಮತ್ತೆ ಹುಟ್ಟುತ್ತದೆ. ಯಾವುದು ಬದಲಾದರೂ, ನಾಶವಾದರೂ ಮೂಲಸತ್ತ್ವ ಆತ್ಮಚೈತನ್ಯವು ಬದಲಾಗದು. ಈ ವಿಶ್ವಾಶ್ವತ್ಥದ ಪುಟ್ಟ ಎಲೆಯಾಗಿಯೋ, ರೆಂಬೆಯಾಗಿಯೋ ಜನಿಸುವ ಮನುಷ್ಯನು ತನಗೆ ಆಧಾರವಾದ ಮೂಲಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಜೀವನದ ಕ್ಷಣಿಕತೆ ಮತ್ತು ತಾನು ಯಾವುದರಿಂದ ರಕ್ಷಿಸಲ್ಪಡುತ್ತಿದ್ದೇನೆ ಎಂಬ ಅರಿವು ಆತನ ದೃಷ್ಟಿಕೋನವನ್ನು ಉದಾತ್ತಗೊಳಿಸುತ್ತದೆ.

ಜನನ, ಜೀವನ, ಮರಣಗಳೆಂಬ ಆವರ್ತನದ ಸಂಸಾರದಲ್ಲಿ ತನಗೊಪ್ಪಿತವಾದ ಕೆಲಸ ಮಾಡುವುದಷ್ಟೆ ವ್ಯಕ್ತಿಗಿರುವ ಆಯ್ಕೆ. ಬಲಿತ ಎಲೆಯು ಕಳಚುವಂತೆ ಜೀವವು ಸಂಸಾರಚಕ್ರದಿಂದ ಮುಕ್ತವಾಗಿ ಮತ್ತೆ ಮೂಲವನ್ನು ಸೇರುತ್ತದೆ. ಲೋಕಸಂಪರ್ಕದಲ್ಲೇ ಕ್ಷಣಿಕ ಸಂತಸಗಳನ್ನು ಅರಸುತ್ತ, ಅದರಲ್ಲೇ ತನ್ಮಯರಾಗಲು ಬಯಸುವ ಜೀವರುಗಳು ಮತ್ತೆಮತ್ತೆ ಹುಟ್ಟಿ ಬರುತ್ತಾರೆ. ದೈವಾಂಶದಿಂದಲೂ, ಆಸುರೀಪ್ರವೃತ್ತಿಯಿಂದಲೂ ಕೂಡಿರುವ ಮನುಷ್ಯನನ್ನು ಆಯಾಯ ನೆಲೆಯಲ್ಲೇ ನಿಸರ್ಗವು ಸಂಸ್ಕರಿಸುತ್ತದೆ.

ವಿವೇಕವು ಜಾಗೃತವಾಗಿದ್ದರೆ ವ್ಯಕ್ತಿಯು ತನ್ನ ನೆಲೆ-ಬೆಲೆಯನ್ನರಿಯಬಲ್ಲ. ಊರ್ಧ್ವಭಾಗದಲ್ಲಿರುವ ಜಗತ್ತಿನ ಮೂಲವನ್ನು ಮರಳಿ ಸೇರಲು ಯತ್ನಿಸಬಲ್ಲ. ಆತನ ಈ ಯತ್ನಕ್ಕೆ ಅನೇಕ ಅಡೆತಡೆಗಳು ಎದುರಾಗುತ್ತವೆ. ವ್ಯಕ್ತಿಯು ಮೋಹಪಾಶಗಳಿಂದ ಬಿಡಿಸಿಕೊಂಡು ನಿರ್ಮಮ ಭಾವದಿಂದ ಇದ್ದರೆ ಎಲ್ಲ ದುರಿತಗಳನ್ನು ದಾಟಿ ಮೇಲೇರಬಲ್ಲ. ತನ್ನದಲ್ಲದ ಈ ಜಗತ್ತಿನಲ್ಲಿ ಅದನ್ನು ರಕ್ಷಿಸುತ್ತಿರುವ ದೈವೀಶಕ್ತಿಯ ಅಧೀನದಲ್ಲಿರುವ ಜ್ಞಾನವು ಜೀವನನ್ನು ಪರಮಪದಕ್ಕೆ ಸೇರಿಸುತ್ತದೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: [email protected])