ಸಪ್ತಭೂಮಿಕೆಗಳ ಅಭ್ಯಾಸ

ಮಹಲಿಂಗರಂಗನು ಈ ಅಧ್ಯಾಯಕ್ಕೆ ಸಪ್ತಭೂಮಿಕೆಗಳ ಅಭ್ಯಾಸ ಎಂದು ಕರೆದಿದ್ದಾನಷ್ಟೆ. ‘ಸಪ್ತಭೂಮಿಕೆ’ಗಳ ವಿವರಣೆ ಬಂದಿದೆ. ‘ಅಭ್ಯಾಸ’ ಎಂಬ ಮಾತನ್ನು ಕುರಿತು ಈಗ ತುಸು ಚಿಂತಿಸುವುದು ಅವಶ್ಯ. ಗೀತೆಯಲ್ಲಿ ‘ಅಭ್ಯಾಸೇನ ತು ಕೌಂತೇಯ’ ಎಂಬ ಮಾತು ಬಂದಿದೆ. ‘ಅಭ್ಯಾಸ’ ಎಂಬುದು ಸಾಧಕರಿಗೆ ಅತಿ ಅವಶ್ಯವಾದುದು. ಮನಸ್ಸನ್ನು ನಿಗ್ರಹಿಸಲು ಸತತವಾದ ಅಭ್ಯಾಸ ಬೇಕಾಗುತ್ತದೆ. ಆಸೆ-ಅಪೇಕ್ಷೆಗಳನ್ನು ದೂರೀಕರಿಸಲು ಸಾಧ್ಯವಾಗುವುದು ‘ಅಭ್ಯಾಸ’ದಿಂದ ಮಾತ್ರ ಸಾಧ್ಯ! ಶ್ರೀಮದ್ಭಗವದ್ಗೀತೆಯಲ್ಲಿ ಬರುವ ಈ ಶ್ಲೋಕವನ್ನು ಗಮನಿಸುವುದು ಅವಶ್ಯ!

ಅಭ್ಯಾಸಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ |

ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್ || 8.8 ||

‘‘ಸತತವಾಗಿ ನನ್ನನ್ನೇ ಧ್ಯಾನಿಸುವ ಅಭ್ಯಾಸವೆಂಬ ಯೋಗದಿಂದ ಕೂಡಿದವನು ಬೇರೆ ಕಡೆ ಹರಿಯದ ಮನಸ್ಸಿನಿಂದ, ಪಾರ್ಥ, ಪರಮಪುರುಷನನ್ನು ಧ್ಯಾನಿಸುತ್ತಿದ್ದರೆ ಆ ದಿವ್ಯ ಪುರುಷನನ್ನು ಸೇರಿಕೊಳ್ಳುತ್ತಾನೆ’’ ಎಂದಿದೆ. ‘ವಿವೇಕಚೂಡಾಮಣಿ’ಯಲ್ಲಿ ‘ಆತ್ಮಾಭ್ಯಾಸ’ ಎಂಬ ಮಾತು ಬಂದಿದೆ! ಗುರುವು ತೋರಿಸಿದ ದಾರಿಯಲ್ಲಿ ಸಾಧಕನು ‘ಅಭ್ಯಾಸ’ದಲ್ಲಿ ತಲ್ಲೀನನಾಗಬೇಕು! ‘ಅಭ್ಯಾಸ’ ಎಂಬ ಮಾತು ಲೌಕಿಕ ಮತ್ತು ಆಗಮಿಕ ಎರಡೂ ಸಂಪ್ರದಾಯಗಳಿಗೂ ಅನ್ವಯಿಸುತ್ತದೆ. ಯಾವುದೇ ವಿದ್ಯೆಯನ್ನು ಕರಗತಮಾಡಿಕೊಳ್ಳಲು ಸತತವಾದ ಅಭ್ಯಾಸ ಬೇಕಾಗುತ್ತದೆ. ನಮ್ಮ ಎಲ್ಲಾ ಚಿಂತನೆಗಳು ಸಮಗ್ರೀಕರಣಗೊಳ್ಳಬೇಕಾದರೆ ‘ಅಭ್ಯಾಸ’ವೊಂದೇ ದಾರಿ. ‘‘ಅನ್ಯಥಾ ಶರಣಂ ನಾಸ್ತಿ’’ ಎನ್ನದೆ ವಿಧಿಯಿಲ್ಲ!

ಮಹಲಿಂಗರಂಗನು ‘ಸಪ್ತಭೂಮಿಕೆಗಳ ಅಭ್ಯಾಸ’ ಅಗತ್ಯವಾಗಿ ಬೇಕೆಂದು ಪ್ರಸ್ತಾವಿಸುತ್ತಿದ್ದಾನೆ. ಇದು ಸಾಧಕರಿಗೆ ಬೇಕಾದುದು! ಸಪ್ತಭೂಮಿಕೆಗಳು ಎಂದಾಗ ನಿರ್ಗಣ ಅಷ್ಟಾಂಗವನ್ನು ಕುರಿತು ಹೇಳುತ್ತಿದ್ದಾನೆಂಬುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಆದರೆ ‘ಪಾತಂಜಲ ಯೋಗಶಾಸ್ತ್ರ’ದಲ್ಲಿ ಹೇಳಿರುವ ಯಮ-ನಿಯಮಾದಿಗಳನ್ನು ಸ್ಥೂಲವೆಂದು ಕವಿ ಮಹಲಿಂಗರಂಗ ಭಾವಿಸಿದ್ದಾನೆ. ಇಲ್ಲಿ ಬಂದಿರುವ ವಿವರಣೆಗಳು ಪಾತಂಜಲಯೋಗಶಾಸ್ತ್ರಕ್ಕಿಂತ ಭಿನ್ನವಾದುದೇ ಸರಿ! ಇದು ಆಧ್ಯಾತ್ಮಿಕ ಹಾದಿಯಲ್ಲಿ ಸಾಧಕನು ಅನುಸರಿಸಬೇಕೆಂಬ ಇರಾದೆ ಇರುವಂತಿದೆ. ರ್‘ನಿಗುಣಾಷ್ಟಾಂಗ’ ಅಲ್ಲದೆ ಸಾಧಕರು ಹಲವಾರು ತೆರನಾದ ಅಭ್ಯಾಸಗಳ ಬಗೆಯನ್ನು ತಿಳಿಯುವುದು ಅವಶ್ಯ.

ಹಲವು ತೆರದಭ್ಯಾಸವುಂಟೈ

ತಿಳಿಯಲೀ ಆತ್ಮಾಪರೋಕ್ಷವ

ಕೆಲವು ಸಾಂಖ್ಯವು, ಯೋಗಗಳು, ಕೆಲಕೆಲವು ವೇದಾಂತ |

ಕೆಲವು ಸಿದ್ಧಾಂತಗಳು, ಕೆಲವಲೆ

ಬಲುಮೆಯಹ ಶಾಸ್ತ್ರಪ್ರಮೇಯವು

ಸುಲಭವಲ್ಲವು ಸಾಧಿಸುವೊಡೀ ಭೂಮಿಕೆಗಳಿರವ || 8.4 ||

ಈ ಪದ್ಯದ ಸ್ಥೂಲವಾದ ಅರ್ಥ ಹೀಗಿದೆ: ‘‘ಸಾಧಕರು ಹಲವು ತೆರೆದ ಅಭ್ಯಾಸಗಳನ್ನು ಮಾಡಬಹುದು. ಸರಿಯಾಗಿ ತಿಳಿದು ಹೇಳಬೇಕಾದರೆ, ಆತ್ಮಸಾಕ್ಷಾತ್ಕಾರವನ್ನು , ಸಾಂಖ್ಯಶಾಸ್ತ್ರ ಸಂಬಂಧವಾದವುಗಳನ್ನು, ಕೆಲವು ಸಿದ್ಧಾಂತಗಳನ್ನು, ಕೆಲವು ಶಾಸ್ತ್ರಪ್ರಮಾಣಗಳನ್ನು ಸಾಧಿಸುವುದು ಸುಲಭದ ಮಾತಲ್ಲ!’’ ಇದಿಷ್ಟು ಈ ಪದ್ಯದ ಸರಳ ವಿವರಣೆ.

ಈ ಪದ್ಯದಲ್ಲಿ ಕೆಲವು ವಿಚಾರಗಳು ಬಂದಿವೆ. ಅವುಗಳನ್ನು ಮೊದಲು ಸಂಕ್ಷಿಪ್ತವಾಗಿ ತಿಳಿಯೋಣ. ಆತ್ಮಾಪರೋಕ್ಷ ಎಂಬ ಮಾತಿದೆಯಷ್ಟೆ. ಈ ಮಾತಿಗೆ ಆತ್ಮಸಾಕ್ಷಾತ್ಕಾರ ಎಂದು ಅರ್ಥ ಮಾಡಿಕೊಳ್ಳಬೇಕು. ಸಾಂಖ್ಯ ಎಂಬುದು ಆರುದರ್ಶನಗಳಲ್ಲಿ ಒಂದು. ಈ ದರ್ಶನವು ಆತ್ಮ-ಅನಾತ್ಮವಿವೇಕ ಮೊದಲಾದ ವಿಚಾರಗಳನ್ನು ತಿಳಿಸುತ್ತದೆ. ಯೋಗಗಳು ಎಂಬ ಮಾತಿಗೆ ‘ಮನೋನಿಗ್ರಹ’ವನ್ನು ಹೇಳುವ ಯೋಗಶಾಸ್ತ್ರಕ್ಕೆ ಸಂಬಂಧವಾದವುಗಳನ್ನು ನಿರ್ದೇಶಿಸುತ್ತದೆ. ವೇದಾಂತ ಎಂಬುದಕ್ಕೆ ಪ್ರಧಾನವಾಗಿ ವೇದದ ಕೊನೆಯ ಭಾಗವೆಂದೂ ಉಪನಿಷತ್ತೆಂದೂ ಅರ್ಥ. ಇಲ್ಲಿ ಸರ್ವಾತ್ಮಭಾವವೆಂದು ಸಾಧಕರು ಗ್ರಹಿಸಬೇಕು. ಸರ್ವತ್ರ ಆತ್ಮಭಾವದಲ್ಲಿಯೇ ಸಾಧಕರು ಇರುವುದು ಅವಶ್ಯ! ಕೆಲವು ಸಿದ್ಧಾಂತಗಳು ಎಂದಿರುವುದು ಸರಿಯಷ್ಟೆ. ಇದು ನಾದೋತ್ಪತ್ತಿ ಮೊದಲಾದ ಶೈವ ಸಂಪ್ರದಾಯಕ್ಕೆ ಸೇರಿದ ನಿಶ್ಚಿತಾರ್ಥಗಳು! ಶಾಸ್ತ್ರಪ್ರಮೇಯ ಎಂಬುದು ಶಾಸ್ತ್ರಗಳಲ್ಲಿ ಹೇಳಿರುವ ಪ್ರಮಾಣಗಳನ್ನು ಹಿಡಿದು ನಡೆಸುವ ವಿಚಾರಗಳು! ಪ್ರತಿಯೊಂದು ಶಾಸ್ತ್ರಕ್ಕೂ ಪ್ರಮಾಣ ಬೇಕು. ಕೆಲವು ಶಾಸ್ತ್ರಗಳಿಗೆ ಶಬ್ದಪ್ರಮಾಣವಾದರೆ; ಇನ್ನು ಕೆಲವು ಶಾಸ್ತ್ರಗಳಿಗೆ ಅನುಮಾನ ಪ್ರಮಾಣ ಆಗಬಹುದು! ಈ ಸಂಗತಿಯನ್ನು ಮನಗಂಡೇ ಅವನು ‘‘ಕೆಲವು + ಎಲೆ ಬಲುಮೆಯಹ ಶಾಸ್ತ್ರಪ್ರಮೇಯವು’’ ಎಂಬ ಮಾತನ್ನು ಮಾರ್ವಿುಕವಾಗಿ ನುಡಿದಿದ್ದಾನೆ!

ಸಾಧಕನು ಕಷ್ಟದ ದಾರಿಯನ್ನು ಹಿಡಿದು ಅರ್ಧದಾರಿಯ ಸಂತ ಆಗಿಬಿಡಬಹುದು. ಅವನು ಪೂರ್ಣಕಾಮನಾಗಿಯೇ ಮುಂದುವರಿಯಬೇಕು. ಆಚಾರ್ಯ ಶಂಕರರು ‘ಶಾಸ್ತ್ರಜಾಲಂ ಮಹಾರಣ್ಯಂ’ ಎಂಬ ಮಾತನ್ನು ಒಂದೆಡೆ ಆಡಿದ್ದಾರೆ. ಇದು ಕಡುಕಷ್ಟದ ಹಾದಿ. ಅಭ್ಯಾಸಕ್ಕೆ ತೊಡಗುವವರು ಸರಳತೆಯ ಮಾರ್ಗದಿಂದ ಗಹನತೆಯ ಮಾರ್ಗವಾಗಿ ಹೋಗುವುದು ಉಚಿತ! ನಿಜವಾದ ಗುರು ತನ್ಮಯೀಭವನದ ಕ್ರಿಯೆಯಲ್ಲಿ ಶಿಷ್ಯನನ್ನು ನಿಯೋಜಿಸುತ್ತಾನೆ. ಇದು ಅಂತಿಮವಾಗಿ ಆತ್ಮಸಾಕ್ಷಾತ್ಕಾರಕ್ಕೆ ದಾರಿಯಾಗುತ್ತದೆ. ಮಹಲಿಂಗರಂಗನಲ್ಲದೆ, ನಿಜಗುಣ ಶಿವಯೋಗಿಗಳೂ, ‘ಜ್ಞಾನಸಿಂಧು’ ಬರೆದ ಚಿದಾನಂದಾವಧೂತರೂ – ಈ ಈ ತತ್ತ್ವದ ದಾರಿಯನ್ನು ಹಿಡಿದು ಹೇಳಿದ್ದಾರೆ. ಮಹಲಿಂಗರಂಗನೂ ಅನುಭಾವೀ ಮಾರ್ಗವಿದರ ದಾರಿಯನ್ನು ಹಿಡಿದಿದ್ದಾನೆ. ಇದು ಸುಲಭಸಾಧ್ಯವಲ್ಲ ಎಂಬುದು ಗೊತ್ತು! ಆದರೆ, ಕಡುಕಷ್ಟದ ಹಾದಿಯನ್ನು ಸಾಧಕನು ಕ್ರಮಿಸುವುದು ಅನಿವಾರ್ಯ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

(ಪ್ರತಿಕ್ರಿಯಿಸಿ: [email protected])

(ನಾಳೆ, ಶ್ರೀ ಗುರು ರಾಘವೇಂದ್ರಸ್ವಾಮಿಗಳ ಬಗೆಗಿನ ಅಂಕಣ ‘ಕಲ್ಪತರು’)