ಸುಖೇಚ್ಛೆ, ಆತ್ಮವಿಚಾರ

ಸುಖೇಚ್ಛೆಯ ರಹಸ್ಯವನ್ನು ಸಾಧಕನು ತಿಳಿಯಬೇಕಷ್ಟೆ. ಕತ್ತಲನ್ನು ಬೆಳಕಾಗಿಸಿಕೊಳ್ಳಬೇಕಾದರೆ ದೀಪ ಬೇಕು. ಆಗ ಸಾಧಕನು ವಿಚಾರದ ದೀಪವನ್ನು ಹಿಡಿದುಕೊಳ್ಳಬೇಕಾಗುತ್ತದೆ! ‘ಸುಖೇಚ್ಛೆ’ಯು ಸಾಧಕನನ್ನು ಯಾವ ಕಡೆಗಾದರೂ ಕರೆದೊಯ್ಯಬಹುದು. ಮಹಲಿಂಗರಂಗನ ಈ ಮಾತನ್ನು ಕೇಳಿ:

ಯೋಗಸಿದ್ಧಿಯ ಬಯಸ; ದಿವಿಜರ

ಭೋಗವನು ತಾನೊಲ್ಲ; ಸಕಲವ

ದಾಗಿ ಕೆಡುವುದಿದೆಂದು ನಿಸ್ಪ್ರಹನಾಗಿ ನಿಮಿಷದಲಿ |

ಮೇಗೆ ತನಗಿನ್ನಾವುದೋ ಗತಿ!

ಶ್ರೀಗುರುವಿನುಪದೇಶ ತನಗದು

ಹೇಗಹುದೊ ಎಂಬನು ಸುಖೇಚ್ಛೆಯ ಯೋಗಿಯೆನಿಸುವನು || (6.9)

ಈ ಪದ್ಯದ ಸರಳಾರ್ಥವನ್ನು ಮೊದಲಿಗೆ ತಿಳಿಯೋಣ: ‘‘ಸಾಧಕನು ಮೋಕ್ಷಪಡೆಯಬೇಕೆಂಬ ಇಚ್ಛೆಯನ್ನು ಹೊಂದಿದ್ದಾನೆ. ಹೀಗೆ ನಡೆದವನು ಯೋಗಸಿದ್ಧಿಯನ್ನು ಎಂದಿಗೂ ಬಯಸುವುದಿಲ್ಲ. ಅವನಿಗೆ ದಿವಿಜರ ಸಂಪತ್ತು ಬೇಡ. ಇದೆಲ್ಲವೂ ನಶ್ವರ ಎಂದು ತಿಳಿದು ನಿಮಿಷದಲ್ಲಿಯೇ ಸ್ವಾರ್ಥತೆಯಿಂದ ಅವನು ಮುಕ್ತನಾಗುತ್ತಾನೆ. ಲೋಕೇಚ್ಛೆಗೆ ಒಳಗಾದರೆ ಮುಂದೆ ತನಗೆ ಯಾವ ಗತಿ ಒದಗಿಬರುವುದೊ? ಎಂಬ ಕಳವಳ ಉಂಟಾಗುತ್ತದೆ. ತನಗೆ ಗುರುವಿನ ಉಪದೇಶ ಹೇಗೆ ಬರುವುದೊ? ಎಂದು ಚಿಂತಿಸತೊಡಗುತ್ತಾನೆ. ಅಂಥವನೇ ನಿಜವಾದ ಸುಖೇಚ್ಛೆಯ ಯೋಗಿ ಎಂದು ಕರೆಸಿಕೊಳ್ಳುತ್ತಾನೆ’’! ಸಾಧಕಪೂರ್ವಜೀವನ ಒಂದು ಬಗೆ; ಸಾಧಕ ಜೀವನ ಇನ್ನೊಂದು ಬಗೆ; ಸಾಧಕೋತ್ತರ ಜೀವನ ಮತ್ತೊಂದು ಬಗೆ. ಲೋಕಸುಖಗಳ ಬೆನ್ನುಹತ್ತಿದ ಸಾಧಕನು ಕಾಲಕ್ರಮೇಣ ಅದನ್ನು ತಿಳಿಯುತ್ತ ತಿಳಿಯಾಗುತ್ತಾನೆ. ಲೋಕ ಮೋಹದಿಂದ ಹಿಂದಿರುಗುತ್ತಾನೆ. ಆಗ ಸಾಧಕನ ಮನೋಭೂಮಿಕೆಯ ಅಂತರಂಗವು ತುಸುತುಸುವೆ ಗೋಚರಿಸುತ್ತದೆ! ಅದು ಮುಂದೆ ಮೋಕ್ಷದ ಹಾದಿಗೆ ಕಾರಣವಾಗುತ್ತದೆ.

ಮಹಲಿಂಗರಂಗನು ಶ್ರೀಗುರುವಿನ ಉಪದೇಶ ದೊರಕಿದಾಗ ಆಗುವ ಅನುಭವಗಳನ್ನು ಸಲ್ಲಕ್ಷಣವಾಗಿ ನಮ್ಮ ಮುಂದಿಡುತ್ತಿದ್ದಾನೆ. ಆಗ ಸಾಧಕನು ಪಾಪಕಾರ್ಯಗಳಿಂದ ಮುಕ್ತನಾಗುತ್ತಾನೆ. ಅವನ ಮನಸ್ಸು ಪ್ರಾಂಜಲಸ್ವಭಾವದಿಂದ ದೇದೀಪ್ಯಮಾನವಾಗುತ್ತದೆ.

ಆ ಬಗೆಯ ಚಿತ್ರಣ ಇಲ್ಲುಂಟು:

ಪುಣ್ಯವನು ಮಾಡುವನು; ಪಾಪವ

ಮುನ್ನಲೇ ವರ್ಜಿಸುವ; ದುಃಖವ

ನನ್ಯರಿಂಗಾಚರಿಸ; ತನ್ನಂತೆಲ್ಲರನು ಬಗೆವ; |

ಉನ್ನತಾಶೆಯ ಬಿಡುವ; ದೇಹವ

ಮನ್ನಿಸನು ಮಿಗೆ; ಸತ್ಯಪ್ರಿಯ ಸಂ

ಪನ್ನ ವಚನವ ನುಡಿವ ಪ್ರಥಮ ಭೂಮಿಕೆಯನೈದಿ || (1.10)

ಈ ಪದ್ಯದ ತಿರುಳನ್ನು ಮೊದಲು ತಿಳಿಯೋಣ: ‘‘ಸುಖೇಚ್ಛೆಯುಳ್ಳ ಯೋಗಿಯು ಸದಾ ಪುಣ್ಯಕಾರ್ಯವನ್ನೇ ಮಾಡುತ್ತಾನೆ. ಅವನು ಪಾಪಕಾರ್ಯಗಳನ್ನು ತಕ್ಷಣವೇ ಬಿಟ್ಟುಬಿಡುತ್ತಾನೆ. ಅವನು ಇತರರಿಗೆ ದುಃಖವನ್ನು ಕೊಡುವುದಿಲ್ಲ. ಇಂಥವನು ತನ್ನಂತೆಯೇ ಎಲ್ಲರನ್ನು ತಿಳಿಯುತ್ತಾನೆ. ಅವನು ಎಲ್ಲ ಬಗೆಯ ಬೇಡಿಕೆಗಳನ್ನು ದೂರ ಇಡುತ್ತಾನೆ. ಆತ ಎಂದಿಗೂ ದೇಹಪೋಷಣೆಗೆ ಮನ್ನಣೆಯನ್ನೊ ಆದ್ಯತೆಯನ್ನೋ ಕೊಡುವುದಿಲ್ಲ. ಅಂಥವನು ಸದಾ ಸತ್ಯ ಮತ್ತು ಪ್ರಿಯವಾದ ಮಾತುಗಳನ್ನೇ ಆಡುತ್ತಾನೆ. ಇದು ಸಾಧಕನ ಮೊದಲ ಭೂಮಿಕೆ.’’ ಈ ಪದ್ಯದಲ್ಲಿ ಕೆಲವು ಪದಗಳನ್ನು ಮೊದಲು ಪರಿಚಯ ಮಾಡಿಕೊಳ್ಳೋಣ. ‘‘ಮುನ್ನಲೇ’’ ಎಂಬ ಪದವಿದೆಯಲ್ಲಾ ಇದಕ್ಕೆ ‘‘ಪುಣ್ಯಕರ್ಮದ ಕಡೆಗೆ ಮನಸ್ಸನ್ನು ಹಾಕುವ ಮೊದಲೇ’’ ಎಂದು ನಾವು ಅರ್ಥ ಮಾಡಿಕೊಳ್ಳಬೇಕು! ‘ಸತ್ಯಪ್ರಿಯ ಸಂಪನ್ನ ವಚನ’ ಎಂಬ ನುಡಿಗಟ್ಟೊಂದು ಬಂದಿದೆಯಷ್ಟೆ. ಸತ್ಯ ಮತ್ತು ಪ್ರಿಯ ಎಂಬ ಸಂಪತ್ತಿನಿಂದ ಕೂಡಿರುವಂಥ -ಎಂಬುದು ಈ ಮಾತಿಗೆ ಅರ್ಥ.

ಸಾಧಕನು ಮೊದಲ ಭೂಮಿಕೆಯನ್ನು ಏರಿದಾಗ ಅವನಲ್ಲಿ ಆಗುವ ಬದಲಾವಣೆಗಳನ್ನು ಇಲ್ಲಿ ಮಹಲಿಂಗರಂಗ ನಮ್ಮ ಗಮನಕ್ಕೆ ತಂದುಕೊಡುತ್ತಿದ್ದಾನೆ. ಸಾಧಕನು ತನ್ನ ಪೂರ್ವಾವಸ್ಥೆಗಳನ್ನು ಬಿಟ್ಟಮೇಲೆ, ಲೋಕದ ಯಾವ ಆಮಿಷಗಳಿಗೂ ಅವನು ಬಲಿಯಾಗಕೂಡದು! ಒಂದು ಪಕ್ಷ ಅವನು ಅಪೇಕ್ಷೆಗಳಿಗೆ ಬಲಿಯಾದರೆ-ಅದರಿಂದ ಅವನು ಮುಂದುವರಿಯಲಾರ! ಇದು ಅಂತರಂಗಕ್ಕೆ ಸಂಬಂಧಿಸಿದ್ದು. ಸಾಧಕನು ಸತ್ಯ ಮತ್ತು ಪ್ರಿಯದ ಹಾದಿಯನ್ನು ಹಿಡಿಯಬೇಕು! ಮನುಸ್ಮತಿಯೂ ಇದನ್ನೇ ಹೇಳುತ್ತದೆ! ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ | ಪ್ರಿಯಂ ಚ ನಾನೃತಂ ಬ್ರೂಯಾತ್, ಏಷ ಧರ್ಮಃ ಸನಾತನಃ || ಈ ಮಾತು ಮನನಯೋಗ್ಯವಾದುದು. ಸಾಧಕನು ಇದನ್ನು ಚೆನ್ನಾಗಿ ತಿಳಿಯಬೇಕು. ಅವನು ಸದಾ ಸತ್ಯವನ್ನೇ ಹೇಳುತ್ತಿರಬೇಕು. ಹಾಗೆ ಹೇಳುವುದರಲ್ಲಿಯೇ ಅವನು ಆನಂದವನ್ನು ಅನುಭವಿಸಬೇಕು. ಸತ್ಯವು ಸಾಧಕನಿಗೆ ಸತ್ತ್ವವನ್ನು ತಂದುಕೊಡುತ್ತದೆ. ಅವನು ಪ್ರಿಯವಾಗಿ ಹೇಳಬೇಕು. ಸಾಧಕನ ಬಳಿ ಎಂಥೆಂಥವರೊ ಬರುವುದುಂಟಷ್ಟೆ. ಅವರವರ ಮನೋಭೂಮಿಕೆಯನ್ನು ತಿಳಿದು ಅವನು ಮಾತನಾಡಬೇಕು! ಆದರೆ, ಸತ್ಯ ಅಪ್ರಿಯವಾದರೂ ಅದನ್ನು ಹೇಳಕೂಡದು! ಇದು ಮನಸ್ಸಿಗೆ ಘಾತವನ್ನು ಉಂಟು ಮಾಡುತ್ತದೆ! ಅದು ಪ್ರಿಯವೆನಿಸಿದರೂ ಅಸತ್ಯವನ್ನು ಮಾತ್ರ ಎಂದಿಗೂ ಹೇಳಕೂಡದು! ಇದೇ ಧರ್ಮ; ಇದುವೇ ಶಾಶ್ವತ.

ಸಾಧಕನು ನಡೆವ ಹಾದಿ ಮತ್ತು ನುಡಿವ ಹಾದಿ ಸಾಮಾನ್ಯವಾದುದಲ್ಲ. ಆದರೆ, ಅವನು ನಡೆಯುವ ಮತ್ತು ನುಡಿಯುವ ಹಾದಿಯನ್ನು ಸ್ವಚ್ಛಗೊಳಿಸಿಕೊಳ್ಳುತ್ತ ಪುನರ್ವಿಮರ್ಶೆಗೆ ಒಳಗಾಗುತ್ತಲೇ ಹೋಗಬೇಕು! ಅದು ಆದಾಗ ಸತ್ಯದರ್ಶನಕ್ಕೆ ಮನಸ್ಸು ಹದಗೊಳ್ಳುತ್ತದೆ! ಇದು ಸಾಧಕನಿಗೆ ಮೊದಲ ಭೂಮಿಕೆಯಲ್ಲಿ ಆಗುವ ಅನುಭವ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

(ಪ್ರತಿಕ್ರಿಯಿಸಿ: [email protected])

(ನಾಳೆ, ಶ್ರೀ ಗುರು ರಾಘವೇಂದ್ರಸ್ವಾಮಿಗಳ ಬಗೆಗಿನ ಅಂಕಣ ‘ಕಲ್ಪತರು’)

Leave a Reply

Your email address will not be published. Required fields are marked *