ಸತ್ಸಂಗದ ಫಲಗಳು

ಮನುಷ್ಯಜನ್ಮ ಸಿಗುವುದು ದುರ್ಲಭ. ಸಿಕ್ಕ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಮನುಷ್ಯನು ಮುಖ್ಯವಾಗಿ ಸತ್ಸಂಗ ಮಾಡಬೇಕು. ಈ ಸತ್ಸಂಗದಿಂದ ಜನ್ಮ ಸಾರ್ಥಕ ಹೇಗೆ ಆಗುವುದೆಂದು ಭರ್ತೃಹರಿ ಹೀಗೆ ಹೇಳುತ್ತಾನೆ:

ಗಂಗಾ ಪಾಪಂ ಶಶೀ ತಾಪಂ ದೈನ್ಯಂ ಕಲ್ಪತರುಸ್ತಥಾ |

ಪಾಪಂ ತಾಪಂ ಚ ದೈನ್ಯಂ ಘ್ನಂತಿ ಸಜ್ಜನ ಸಂಗತಿಃ ||

‘ಗಂಗೆಯು ಪಾಪವನ್ನು ನಾಶಮಾಡುತ್ತಾಳೆ. ಚಂದ್ರನು ತಾಪವನ್ನು ಪರಿಹರಿಸುವನು. ಕಲ್ಪವೃಕ್ಷವು ದುಃಖವನ್ನು ದೂರ ಮಾಡುವುದು. ಪಾಪ, ತಾಪ, ದುಃಖ – ಇವು ಮೂರನ್ನೂ ಸಜ್ಜನರ ಸಂಗ ದೂರಮಾಡುವುದು.’

ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಪಾಪ ನಾಶವಾಗುವುದು. ಚಂದ್ರನು ಜಗತ್ತಿಗೆ ಬೆಳಕನ್ನು, ಮನಸ್ಸಿಗೆ ಆಹ್ಲಾದಕರ ಬೆಳದಿಂಗಳಿನಿಂದ ಶಾಂತಿಯನ್ನು ಕೊಟ್ಟು ತಾಪವನ್ನು ಕಳೆಯುತ್ತಾನೆ. ಕಲ್ಪತರುವಿನಲ್ಲಿ ಒಂದು ಶಕ್ತಿ ಇದೆ. ಅದರ ಕೆಳಗೆ ಕೂತು ಏನನ್ನು ಕಲ್ಪಿಸಿಕೊಳ್ಳುತ್ತೇವೆಯೋ ಅದನ್ನು ಕೊಡುತ್ತದೆ. ಇವೆಲ್ಲವೂ ಒಂದೊಂದನ್ನು ನೀಡಿದರೆ ಸಜ್ಜನರು, ಶರಣರು, ಮಹಾತ್ಮರು ತಮ್ಮ ಸಂಗದಲ್ಲಿದ್ದವರಿಗೆ ಮನಸ್ಸಿಗೆ ಶಾಂತಿಯನ್ನು ನೀಡಿ, ಇಷ್ಟಾರ್ಥವನ್ನು ಪೂರೈಸಿ, ಪಾಪವನ್ನು ಮಾಡದೆ ಇರುವಂತಹ ಮನಸ್ಸನ್ನು ಕೊಡುತ್ತಾರೆ. ಇವೆಲ್ಲ ಸಜ್ಜನರಲ್ಲಿ ಸಿಗುತ್ತವೆ.

ಒಮ್ಮೆ ಒಂದು ಸಮಾರಂಭಕ್ಕೆ ಬರಲು ವಿಜ್ಞಾನಿ ನ್ಯೂಟನ್​ಗೆ ಆಮಂತ್ರಣ ಕೊಟ್ಟರು. ಅಲ್ಲಿಗೆ ದೊಡ್ಡ ದೊಡ್ಡ ವಿಜ್ಞಾನಿಗಳು ಬಂದಿದ್ದರು. ಅವರು ಗಾಡಿಯಲ್ಲಿ ಹೋಗುವಾಗ ಡ್ರೖೆವರ್ ಕೇಳುತ್ತಾನೆ, ‘ನೀವು ಎಲ್ಲಿ ಹೋದರೂ, ಯಾವ ಸಮಾರಂಭಕ್ಕೆ ಹೋದರೂ ಅದೇ ವಿಚಾರ, ಅದೇ ಭಾಷಣ ಮಾಡುವಿರಲ್ಲ? ಇದನ್ನು ನಾನೂ ಮಾಡಬಹುದು’ ಎಂದ. ಆಗ ‘ಆಗಲಿ’ ಎಂದ ಅವರು ಡ್ರೖೆವರ್​ಗೆ ತಮ್ಮ ಡ್ರೆಸ್ ಹಾಕಿಸಿ ಸಭೆಗೆ ಕಳಿಸಿದರು. ಅವನು ಚೆನ್ನಾಗಿ ಭಾಷಣ ಮಾಡಿದ. ಅದು ಮುಗಿದ ನಂತರ ಅಲ್ಲಿಗೆ ಬಂದ ವಿಜ್ಞಾನಿಗಳು ಆತನಿಗೆ ಪ್ರಶ್ನೆ ಮಾಡತೊಡಗಿದರು. ಆತನಿಗೆ ಉತ್ತರಿಸಲು ಆಗಲಿಲ್ಲ. ಇಂತಹ ಸಣ್ಣ ಪ್ರಶ್ನೆಗೆ ನಮ್ಮ ಡ್ರೖೆವರ್ ಉತ್ತರಿಸುತ್ತಾನೆ ಎಂದ. ಡ್ರೖೆವರ್ ಇಷ್ಟೆಲ್ಲ ಮಾತನಾಡಿದ್ದು ನ್ಯೂಟನ್ ಅವರ ಸತ್ಸಂಗದಲ್ಲಿ ಇದ್ದುದರ ಫಲ. ಅದಕ್ಕಾಗಿಯೇ ಜೀವನದಲ್ಲಿ ಸತ್ಸಂಗವನ್ನು ಮಾಡಿ ಒಳ್ಳೆಯ ಬಾಳನ್ನು ಬಾಳಬೇಕು.

Leave a Reply

Your email address will not be published. Required fields are marked *