ನಗುವು ಸಹಜದ ಧರ್ಮ

ವರಕವಿ ದ.ರಾ. ಬೇಂದ್ರೆಯವರು ‘ಹಾಸ್ಯಕಿರಣ ತದನುಸರಣ, ತದಿತರ ಪಥ ಕಾಣೆನಾ’ ಎಂದಿದ್ದಾರೆ. ಹಾಸ್ಯ ನಮ್ಮ ಬದುಕಿನ ಭಾಗವಾಗಿರಬೇಕು. ಆ ಮಾರ್ಗದಲ್ಲಿ ನಡೆಯುವುದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ. ನಮ್ಮ ತೋರಿಕೆಯ ನಗು ನಿಜವಲ್ಲ. ಅಂತರಂಗದಲ್ಲಿ ನಾವು ಆನಂದವಾಗಿದ್ದೇವೆಯೇ ಎಂಬುದು ಮುಖ್ಯ. ತೋರಿಕೆಯ ನಗುವಿನ ಹಿಂದೆ ಏನಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ನಮ್ಮ ಮನಸ್ಸು ಆನಂದವಾಗಿದ್ದಾಗ ಅದು ಕಣ್ಣಿನ ಮುಖಾಂತರ ಅಭಿವ್ಯಕ್ತವಾಗುತ್ತದೆ. ಮಗು ಮಾತಾಡದು, ಆದರೆ ಅದರ ಕಣ್ಣು ಆನಂದವನ್ನು ತೋರಿಸುತ್ತದೆ.

ಕನ್ನಡ ಹಾಸ್ಯಸಾಹಿತಿಗಳಾದ ಬೀಚಿಯವರು ಮಂಕುತಿಮ್ಮನ ಕಗ್ಗದಿಂದ ಪ್ರೇರಿತರಾಗಿ ‘ಅಂದನಾ ತಿಮ್ಮ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಅಲ್ಲಿ ನಗುವಿನ ಬಗ್ಗೆ ಹೀಗೆಂದಿದ್ದಾರೆ:

ನಗಿಸುವನು ತಿಂಮಪ್ಪ ನಗುವವನು ನಮ್ಮಪ್ಪ

ನಗುನಗುತ ನಗಿಸುವನು ಎಲ್ಲರಪ್ಪ |

ನಗೆಲಾರದವನ ಕತ್ತೆ ಎಂದಂದೊಡೆ

ಅಗಸನಾ ಕತ್ತೆ ಅತ್ತಿತ್ತೋ ತಿಂಮ || 30 ||

ಬಾಳಿನಲ್ಲಿ ನಗುವಿಲ್ಲದಿದ್ದರೆ ಆತ ಸತ್ತಂತೆ. ಬದುಕಿದ್ದೂ ನಗದವನದು ಸತ್ತ ಬಾಳು. ನಮ್ಮ ಬಾಳಿನಲ್ಲಿ ಮಧುರಕ್ಷಣಗಳು ಬಾರದಿದ್ದರೂ, ಇನ್ನೊಬ್ಬರ ಬದುಕಿನಲ್ಲಿ ಬಂದ ಕ್ಷಣಗಳನ್ನು ಕಂಡು ನಗುವುದು ಉತ್ತಮ. ಇನ್ನೊಬ್ಬರ ನಗುವನ್ನು ಕಂಡು ನಮ್ಮ ಎದೆ ವಿಕಸನವಾಗಬೇಕು.

ಒಂದು ನಗು ವೈರವನ್ನು ಸ್ನೇಹವನ್ನಾಗಿಸುತ್ತದೆ, ಹೊಸ ಸಂಬಂಧ ಸೃಷ್ಟಿಸುತ್ತದೆ. ಪೂಜ್ಯ ಡಿ.ವಿ.ಜಿ. ಮಂಕುತಿಮ್ಮನ ಕಗ್ಗದಲ್ಲಿ ಹೀಗೆಂದಿದ್ದಾರೆ:

ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ |

ನಗುವ ಕೇಳುತ ನಗುವುದತಿಶಯದ ಧರ್ಮ ||

ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |

ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ || 915 ||

ನಮ್ಮ ಬಾಳಿನ ಪುಟಗಳನ್ನು ನಾವೇ ನೋಡಿ ನಗಬೇಕು. ಎಲ್ಲಿಯವರೆಗೆ ನಮ್ಮ ಬದುಕು ನಮಗೆ ಪಾಠವನ್ನು ಕಲಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಉದ್ಧಾರವು ಪ್ರಾರಂಭವಾಗುವುದಿಲ್ಲ. ಇತರರನ್ನು ಕಂಡು ನಗುವುದಕ್ಕಿಂತ ನಮ್ಮ ತಪ್ಪು, ಮೂರ್ಖತನ ನಮಗೆ ನಗುವನ್ನು ತರಿಸಬೇಕು. ಆಗ ನಮ್ಮ ಉದ್ಧಾರ. ಇತರರ ಆನಂದದೊಡನೆ ನಾವು ಸೇರಿಕೊಳ್ಳೋಣ. ಇತರರ ನಗುವನ್ನು ಕಂಡು ಅಸೂಯೆಪಡದಿರೋಣ.

ನಾಳಿನ ಅಂತರಂಗದಲ್ಲಿ: ಪ್ರೊ. ಜಿ. ಅಬ್ದುಲ್ ಬಷೀರ್, ಬೆಂಗಳೂರು