ಕಾರ್ಪಲ್ ಟನಲ್ ಸಿಂಡ್ರೋಮ್ ಶಮನ ಸಾಧ್ಯವೆ?

| ಡಾ. ವೆಂಕಟ್ರಮಣ ಹೆಗಡೆ 

ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರ್ಪಲ್ ಟನಲ್ ಸಿಂಡ್ರೋಮ್ ಎಂಬುದು ನರದ ಮೇಲಿನ ಒತ್ತಡದಿಂದ ಉಂಟಾಗುವಂಥದ್ದು. ಮಣಿಕಟ್ಟಿನಲ್ಲಿರುವ ಕಾರ್ಪಲ್ ಎಂಬ ಎಲುಬುಗಳ ನಡುವೆ ಇರುವ ದಾರಿಯಲ್ಲಿ ಮೀಡಿಯನ್ ನರ ಚಲಿಸುತ್ತದೆ. ಈ ಭಾಗದಲ್ಲಿ ವಿವಿಧ ಕಾರಣಗಳಿಂದ ಒತ್ತಡ ಉಂಟಾದಾಗ ಕೈಯಲ್ಲಿ, ಬೆರಳುಗಳಲ್ಲಿ ಜುಂ ಜುಂ ಎನ್ನಿಸುವುದು, ಹರಿದಂತಾಗುವುದು, ಉರಿಯಾಗುವುದು, ಜೋಮು ಉಂಟಾಗುವುದು ಇತ್ಯಾದಿ ಲಕ್ಷಣಗಳು ಕಂಡುಬರಬಹುದು. ಮುಖ್ಯವಾಗಿ ಈ ಚಿಹ್ನೆಗಳು ಹೆಬ್ಬೆರಳು, ತೋರುಬೆರಳು, ಮಧ್ಯ ಬೆರಳು ಹಾಗೂ ಉಂಗುರಬೆರಳುಗಳಲ್ಲಿ ಕಾಣಿಸಿಕೊಳುತ್ತವೆ. ಕೆಲವೊಂದು ಬಾರಿ ಮೊಣಕೈವರೆಗೂ ಈ ರೀತಿಯ ತೊಂದರೆ ಕಾಣಿಸಿಕೊಳ್ಳಬಹುದು.

ಅನೇಕ ಬಾರಿ ವಿವಿಧ ವಾತಗಳ ಸಂದರ್ಭದಲ್ಲಿ, ಕೆಲವು ಕೆಲಸಗಳಲ್ಲಿ ಕೈ ನಿರಂತರವಾಗಿ ವೈಬ್ರೇಟ್ ಆಗುವುದರಿಂದ, ವಿಶ್ರಾಂತಿರಹಿತವಾಗಿ ಕೈಗೆ, ಬೆರಳುಗಳಿಗೆ, ಅತಿಯಾದ ಶ್ರಮ ನೀಡುವುದರಿಂದ, ಅತಿ ತೂಕದಿಂದ, ವಿಟಮಿನ್-ಬಿ6 ಕೊರತೆಯಿಂದ – ಹೀಗೆ ಈ ತೊಂದರೆಗೆ ಹಲವಾರು ಕಾರಣಗಳು ಇರಬಹುದು. ಬಟ್ಟೆಯ ಗುಂಡಿ ಹಾಕಲು ಕಷ್ಟವೆನಿಸುವುದು, ಅರಿವಿಲ್ಲದೆ ಕೈಯಿಂದ ಸಾಮಾನುಗಳು ಬಿದ್ದು ಹೋಗುವುದು ಮುಂತಾದ ಚಿಹ್ನೆಗಳು ಈ ತೊಂದರೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ವಿವಿಧ ಚಿಹ್ನೆಗಳಿಂದ, ದೈಹಿಕ ಪರೀಕ್ಷೆಗಳಿಂದ, ಮಾಂಸಖಂಡಗಳ ಶಕ್ತಿ ಪರಿಶೀಲನೆಯಿಂದ, ನರಗಳ ಪರೀಕ್ಷೆಯಿಂದ, ಎಂಆರ್​ಐನಂತಹ ಪರೀಕ್ಷೆಗಳ ಸಹಾಯ ಪಡೆದು ತಜ್ಞವೈದ್ಯರು ಈ ತೊಂದರೆಯನ್ನು ಕಂಡುಹಿಡಿಯುತ್ತಾರೆ.

ಈ ಕಾರ್ಪಲ್ ಟನೆಲ್ ಸಿಂಡ್ರೋಮ್ ಸರಳ ಪರಿಹಾರಗಳ ಕುರಿತಾಗಿ ತಿಳಿಯೋಣ. ಮೊದಲನೆಯದಾಗಿ ಸರಿಯಾದ ವಿಶ್ರಾಂತಿ. ಈ ಸಮಸ್ಯೆಯು ಸಹಜವಾಗಿ ಪರಿಹಾರವಾಗಲು ಕ್ರಮಬದ್ಧವಾದ ವಿಶ್ರಾಂತಿಯು ಅನುವು ಮಾಡಿಕೊಡುತ್ತದೆ. ಈ ಸಮಸ್ಯೆಯ ನಿರ್ವಹಣೆಗಾಗಿಯೇ ಫಿಸಿಯೋಥೆರಪಿ ಹಾಗೂ ಇತರ ತಜ್ಞರು ಸೇರಿ ಸಿದ್ಧಪಡಿಸಿರುವ ವಿಶೇಷ ವ್ಯಾಯಾಮ ಕಲಿತು ಪ್ರತಿದಿನ ಮಾಡುವುದು ಬಹುಮುಖ್ಯ. ಆಂಟಿ ಇನ್​ಫ್ಲಮೇಟರಿ ಆಹಾರಪದಾರ್ಥಗಳು ಖಂಡಿತವಾಗಿ ಈ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಕರಿಸುತ್ತವೆ. ಹಣ್ಣುಗಳು, ತರಕಾರಿಗಳು, ನಟ್ಸ್, ಮೊಳಕೆಕಾಳುಗಳು, ಸೊಪ್ಪುಗಳು, ಬೀಜಗಳು, ಒಮೆಗಾ-3, ವಿಟಮಿನ್​ಗಳು ಹೆಚ್ಚಿರುವ ಆಹಾರ, ಮಿನರಲ್​ಗಳನ್ನು ಹೊಂದಿರುವ ಆಹಾರಪದಾರ್ಥಗಳು ತೊಂದರೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ವಿಟಮಿನ್ ಬಿ-6 ಸಪ್ಲಿಮೆಂಟ್ ರೂಪದಲ್ಲಿ ತೆಗೆದುಕೊಂಡಾಗ ಅನೇಕರಿಗೆ ಉತ್ತಮ ಫಲಿತಾಂಶ ಬಂದಿರುವುದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ. ಪೈನಾಪಲ್​ನಲ್ಲಿರುವ ಬ್ರೋಮೈಲಿನ್ ಎಂಬ ಸಂಯುಕ್ತ ಉಪಯುಕ್ತ. ಶಲ್ಲಕಿ, ಅರಿಶಿಣ, ಶುಂಠಿ ಮುಂತಾದವುಗಳ ಎಕ್ಸಟ್ರಾಕ್ಟ್​ಗಳು ನೈಸರ್ಗಿಕ ನೋವು ನಿವಾರಕಗಳಾಗಿ ಕೆಲಸ ಮಾಡುತ್ತವೆ. ಕ್ಯಾಲ್ಸಿಯಂ ಹಾಗೂ ಮೆಗ್ನಿಶಿಯಂಯುಕ್ತ ಆಹಾರಸೇವನೆ ಉತ್ತಮ ಪರಿಣಾಮವನ್ನು ನೀಡುತ್ತದೆ. ಸೂಜಿ ಚಿಕಿತ್ಸೆ, ಪ್ರಕೃತಿ ಚಿಕಿತ್ಸೆಗಳು, ಫಿಸಿಯೋಥೆರಪಿ ಮುಂತಾದ ಚಿಕಿತ್ಸೆಗಳ ಸಮ್ಮಿಲನವು ಬಹುಬೇಗನೆ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಅನುವು ಮಾಡಿ ಕೊಡುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದಾದರೂ ಒಂದು ರೀತಿಯ ಹಸಿಸೊಪ್ಪು ಮುಷ್ಟಿ, ಒಂದು ಚಮಚ ಕಪ್ಪು ಎಳ್ಳು, ಒಂದು ಚಮಚ ಅಗಸೆ ಬೀಜ, ಎರಡು ಚಮಚ ಜೋನಿಬೆಲ್ಲ, ನೀರು ಸೇರಿಸಿ ತಾಜಾ ಜ್ಯೂಸ್ ಮಾಡಿ ಸೇವಿಸಿದಾಗ ಉತ್ತಮ ಫಲಿತಾಂಶ ಲಭ್ಯ.