ಹಬ್ಬುತ್ತಲೇ ಇದೆ ಮೀಸಲಾತಿ ಪ್ರವರ

| ಕೆ. ರಾಘವ ಶರ್ಮ

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸನಿಹದಲ್ಲಿರು ವಂತೆಯೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠಾ ಸಮುದಾಯದವರಿಗೆ ಮೀಸಲಾತಿ ನೀಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸುಗಳನ್ನು ಆಧರಿಸಿ ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂಬುದು ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರದ ಚಿಂತನೆ. ಉತ್ತರ ಭಾರತದಲ್ಲಿ ರಜಪೂತರು ಹೇಗೆ ಪ್ರಭಾವಿಗಳಾಗಿದ್ದಾರೋ ಹಾಗೆ ಮಹಾರಾಷ್ಟ್ರದಲ್ಲಿ ಮರಾಠರ ಪ್ರಭಾವಳಿ ಹೆಚ್ಚು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮರಾಠರು ಸದೃಢರು ಎಂಬ ಸಾಮಾನ್ಯ ಅಭಿಪ್ರಾಯ ಇತ್ತಾದರೂ, ಹಿಂದುಳಿದ ವರ್ಗಗಳ ಆಯೋಗದ ವರದಿ ಅದನ್ನು ಅಲ್ಲಗಳೆದಿದೆ.

ಮಹಾರಾಷ್ಟ್ರ ಈವರೆಗೆ ಕಂಡ 18 ಸಿಎಂಗಳಲ್ಲಿ 12 ಮಂದಿ ಮರಾಠಾ ಸಮುದಾಯದವರು. ವಿಧಾನಸಭೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮರಾಠರೇ ಇದ್ದಾರೆ. ಶಿಕ್ಷಣ, ವಾಣಿಜ್ಯ ಸೇರಿ ವಿವಿಧ ಕ್ಷೇತ್ರಗಳಲ್ಲೂ ಮರಾಠಿಗರು ಗಮನ ಸೆಳೆದಿದ್ದಾರೆ. ಆದರೆ, ಶೇಕಡ 31 ಜನಸಂಖ್ಯೆ ಹೊಂದಿರುವ ಈ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಳೆದ ಎರಡು ವರ್ಷದಿಂದ ಮೀಸಲಾತಿಗಾಗಿ ಆಗ್ರಹಿಸಿ ಭಾರಿ ಹೋರಾಟ ನಡೆಸಿದ್ದಾರೆ. ಮೌನ ಪ್ರತಿಭಟನೆಯಿಂದ ಆರಂಭ ವಾಗಿದ್ದ ಹೋರಾಟ ಕ್ರಮೇಣ ಹಿಂಸಾತ್ಮಕ ರೂಪ ವನ್ನೂ ಪಡೆದಿತ್ತು. ಆದರೆ, ಪ್ರಭಾವಿ ಸಮುದಾಯ ಗಳಿಗೆ ಮೀಸಲಾತಿ ನೀಡಬಾರದು ಎಂದು ವಿವಿಧ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿ ರುವ ಉದಾಹರಣೆಗಳಿರುವುದರಿಂದ ಮಹಾರಾಷ್ಟ್ರ ಸರ್ಕಾರದ ತೀರ್ವನಕ್ಕೆ ಸುಪ್ರೀಂ ಕೋರ್ಟ್ ಮಾನ್ಯತೆ ಸಿಗುವುದೇ ಎಂಬುದು ಮುಖ್ಯ ಪ್ರಶ್ನೆ.

ಕೇಂದ್ರದ ನಿಲುವು ಏನು?

ಗುಜರಾತ್ ಚುನಾವಣೆ ವೇಳೆ ಪಟೇಲರ ಮೀಸಲಾತಿ ಆಗ್ರಹ ತಾರಕಕ್ಕೇರಿ, ಪಟೇಲರು ತಿರುಗಿ ಬೀಳುವ ಆತಂಕವಿದ್ದರೂ, ಕೇಂದ್ರ- ರಾಜ್ಯ ಬಿಜೆಪಿ ಮೀಸಲಾತಿಗೆ ಒಪ್ಪಿರಲಿಲ್ಲ. ರಾಜಸ್ಥಾನದಲ್ಲೂ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಲು ಬಿಜೆಪಿಗೆ ಮನಸ್ಸಿರಲಿಲ್ಲ. ಕೊನೆಗೆ, ಸಿಎಂ ವಸುಂಧರಾ ರಾಜೆ 2017ರಲ್ಲಿ ಒಬಿಸಿ ತಿದ್ದುಪಡಿ ಮಸೂದೆ ಮೂಲಕ ಜಾಟರಿಗೆ ಮೀಸಲಾತಿ ನೀತಿ ಅನುಷ್ಠಾನಕ್ಕೆ ತಂದರು. ‘ತ.ನಾಡು ಮಾದರಿಯಲ್ಲಿ ಮೀಸಲು ನೀಡುತ್ತೇವೆ’ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದ್ದು ಈ ಬಗ್ಗೆ ಕೇಂದ್ರದ ಸಮ್ಮತಿ ಕೇಳು ತ್ತದೆಯೇ? ಇಲ್ಲವೇ? ಎಂಬ ಬಗ್ಗೆ ಸ್ಪಷ್ಟತೆಯಿಲ್ಲ.

ಮೈತ್ರಿ ಸರ್ಕಾರದ ಸುಗ್ರೀವಾಜ್ಞೆ

ಮೂರು ಅವಧಿಗಳ ಅಧಿಕಾರದ ಬಳಿಕ ಆಡಳಿತ ವಿರೋಧಿ ಅಲೆ ಎದುರಿಸಿದ್ದ ಕಾಂಗ್ರೆಸ್-ಎನ್​ಸಿಪಿ ಮೈತ್ರಿ ಸರ್ಕಾರ, ಮರಾಠಾ ಸಮುದಾಯದ ಮತಗಳನ್ನು ಆಕರ್ಷಿಸಲೆಂದೇ 2014ರಲ್ಲಿ ಮರಾಠರಿಗೆ ಶೇ.16 ಮೀಸಲಾತಿ ನೀಡುವ ಕುರಿತು ಸುಗ್ರೀವಾಜ್ಞೆ ಹೊರಡಿಸಿತ್ತು. ಹಾಗಿದ್ದರೂ, ಎನ್​ಸಿಪಿ-ಕಾಂಗ್ರೆಸ್ ಮೈತ್ರಿ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮೀಸಲಾತಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು ಮತ್ತು 2014ರ ನವೆಂಬರ್ ತಿಂಗಳಲ್ಲಿ ಮರಾಠರಿಗೆ ಮೀಸಲಾತಿ ನೀಡುವ ಪ್ರಸ್ತಾವಕ್ಕೆ ಹೈಕೋರ್ಟ್ ತಡೆ ನೀಡಿತು. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದರೂ ಹೈಕೋರ್ಟ್ ತೀರ್ವನಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಒಪ್ಪಲಿಲ್ಲ. ಹಾಗಿದ್ದರೂ, ಮರಾಠರನ್ನು ಸಮಾಧಾನಪಡಿಸುವ ಸಲುವಾಗಿ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಭರವಸೆ ನೀಡುತ್ತಲೇ ಬಂದ ಫಡ್ನವಿಸ್ ಸರ್ಕಾರ, ಕೊನೆಗೂ ಮೀಸಲಾತಿ ಕಲ್ಪಿಸಲು ಮುಂದಾಗಿದೆ.

ಏನಿದು ತ.ನಾಡು ಮಾದರಿ?

ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗ ಸೇರಿ ಶೇ.50, ಎಸ್ಸಿಗೆ ಶೇ.18, ಎಸ್ಟಿಗೆ ಶೇ.1 ಮೀಸಲು ನೀಡಿರುವ ತಮಿಳುನಾಡಿನಲ್ಲಿ 1980 ರಿಂದಲೇ ಶೇ.69 ಮೀಸಲಾತಿಯಿದೆ. ಕೆನೆಪದರ ತತ್ತ್ವ ಹಿಂತೆಗೆದು ಕೊಂಡಿದ್ದರಿಂದ ಶೇ.69 ಮೀಸಲಾತಿ ಜಾರಿಗೊಳಿಸಲು ತೀರ್ವನಿಸಿದ್ದ ಅಂದಿನ ಸರ್ಕಾರದ ನಿರ್ಧಾರ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ. ಹಾಗಿದ್ದರೂ ತ.ನಾಡಿನ ಮೀಸಲಾತಿ ಕ್ರಮವನ್ನು ಸಂವಿಧಾನದ 9ನೇ ಶೆಡ್ಯೂಲ್​ನಲ್ಲಿ ಸೇರಿಸಲು ಕೇಂದ್ರ ಸರ್ಕಾರ ಸಮ್ಮತಿಸಿತು. ಹೀಗಾಗಿ, ಸದ್ಯ ಯಾವ ರಾಜ್ಯದಲ್ಲೂ ಇರದ ಮೀಸಲು ಕಾನೂನು ಈ ರಾಜ್ಯದಲ್ಲಿದೆ. ‘ಇದೇ ಮಾದರಿಯಲ್ಲಿ ಮಹಾರಾಷ್ಟ್ರ ಮೀಸಲು ಕಲ್ಪಿಸಿದರೆ ಶೇ.50ರ ಬದಲು ಶೇ.68 ಜಾರಿಗೆ ಬರಲಿದೆ. ಮರಾಠಾ ಸಮುದಾಯವನ್ನು ಪ್ರತ್ಯೇಕ ಪ್ರವರ್ಗವಾಗಿ ಪರಿಗಣಿಸಲಿದ್ದೇವೆ. ಇದರಿಂದ ಒಬಿಸಿಗಳ ಮೀಸಲಾತಿಗೆ ಅಡಚಣೆಯಾಗದು’ ಎಂದು ಸಿಎಂ ಫಡ್ನವಿಸ್ ಭರವಸೆ ನೀಡಿದ್ದಾರೆ. ಆದರೆ ತ.ನಾಡು ಪ್ರಕರಣ ಇನ್ನೂ ಸುಪ್ರೀಂಕೋರ್ಟ್​ನಲ್ಲಿರುವುದು ಗಮನಾರ್ಹ. ಸದ್ಯ ಮಹಾರಾಷ್ಟ್ರದಲ್ಲಿ ಶೇ.52 ಮೀಸಲಾತಿ ಇದ್ದು, ಶೇ.13 ಎಸ್ಸಿ, ಶೇ.7 ಎಸ್ಟಿ, ಶೇ.19 ಒಬಿಸಿ, ಶೇ.3 ವಿಮುಖ ಜಾತಿ, ಶೇ.2.5 ಅಲೆಮಾರಿ ಜನಾಂಗ-ಸಿ (ಧಂಗಾರ್) ಹಾಗೂ ಶೇ.2 ಅಲೆಮಾರಿ ಜನಾಂಗ-ಡಿ (ವಂಜಾರಿ) ಇದರ ವ್ಯಾಪ್ತಿಗೊಳಪಟ್ಟಿದ್ದಾರೆ.