ಕೂಡಿ ಬಾಳುವ ಕಲೆ: ಇದು ವಿಶ್ವ ಕುಟುಂಬ ದಿನದ ವಿಶೇಷ ಲೇಖನ

ಕುಟುಂಬವೆಂದರೆ ಗಂಡ- ಹೆಂಡತಿ, ಮಕ್ಕಳು, ಹತ್ತಿರದ ಬಂಧುಗಳನ್ನು ಒಳಗೊಂಡ, ಭಿನ್ನ ಭಿನ್ನ ವಯಸ್ಸಿನ ಭಿನ್ನ ಭಿನ್ನ ಆಸಕ್ತಿ, ಅಭಿರುಚಿ, ಆಸೆ- ಆಕಾಂಕ್ಷೆಗಳುಳ್ಳ, ಆದರೆ ಒಂದೇ ಸೂರಿನಡಿ ವಾಸವಾಗಿರುವ ಜನರ ಒಂದು ಪುಟ್ಟ ಗುಂಪು. ಇವರ ನಡುವೆ ಭಿನ್ನಾಭಿಪ್ರಾಯ, ಮತಭೇದ ಸಾಮಾನ್ಯ. ‘ಮನೆಗಳ ಕಟ್ಟಲು ಇಡಬೇಕು ಇಟ್ಟಿಗೆಗಳ ಒಟ್ಟಿಗೆ. ಆದರೆ ಮನೆಗಳ ನಡೆಸಲು ಇರಬೇಕು ಮನಗಳು ಒಟ್ಟಿಗೆ’ ಎಂಬ ನುಡಿಯಂತೆ ಕುಟುಂಬದಲ್ಲಿ ಸಾಮರಸ್ಯ ಮೂಡಿಸುವುದೂ ಒಂದು ಕಲೆಯೇ.

| ಡಾ. ಕೆ.ಪಿ. ಪುತ್ತೂರಾಯ

ನಾವೆಲ್ಲರೂ ಈ ಜಗತ್ತಿಗೆ ಬರುವಾಗ ಒಬ್ಬೊಬ್ಬರಾಗಿಯೇ ಬರುತ್ತೇವೆ. ಬಿಟ್ಟು ಹೋಗುವಾಗಲೂ ಒಬ್ಬೊಬ್ಬರಾಗಿಯೇ ಹೋಗುತ್ತೇವೆ. ಆದರೆ ಈ ಬಂದು ಹೋಗುವ ನಡುವೆ, ಒಬ್ಬೊಬ್ಬರಾಗಿ ಉಳಿಯುವುದಿಲ್ಲ. ಪ್ರಾಯಕ್ಕೆ ಬಂದಂತೆ ಮದುವೆ ಮಾಡಿಕೊಳ್ಳುತ್ತೇವೆ. ಮಕ್ಕಳನ್ನು ಪಡೆದು ಸಂಸಾರಿಗಳಾಗುತ್ತೇವೆ. ನಮ್ಮದು ಸುಖ ಸಂಸಾರವಾಗಬೇಕೆಂದು ಬಯಸುತ್ತೇವೆ.

ಆದರೆ ಎಷ್ಟೋ ಸಲ ಬಯಕೆಗಳೇ ಬೇರೆ, ಆಗುವುದೇ ಬೇರೆ. ಎಲ್ಲರದ್ದೂ ಸುಖ ಸಂಸಾರ ಆಗುವುದಿಲ್ಲ. ಒಂದೊಂದು ಮನೆಯದೂ ಒಂದೊಂದು ಕಥೆ, ಒಂದೊಂದು ಮನದಲ್ಲೂ ಒಂದೊಂದು ವ್ಯಥೆ. ಕುಟುಂಬದ ಜನರ ನಡುವೆ ನಾನಾ ಕಾರಣಗಳಿಂದ ವಾದ-ಪ್ರತಿವಾದಗಳು ಏರ್ಪಡುತ್ತಿರುತ್ತವೆ. ಪರಿಣಾಮವಾಗಿ ಕುಟುಂಬ ಸದಸ್ಯರ ನಡುವೆ ವ್ಯಾಜ್ಯಗಳು ನಡೆಯುತ್ತವೆ. ಮಕ್ಕಳು ಹೆತ್ತವರಿಂದ ದೂರವಾಗುತ್ತಾರೆ. ಜತೆಗಿದ್ದರೂ ಪರಸ್ಪರ ಅರ್ಥ ಮಾಡಿಕೊಳ್ಳದೆ ಅನಿವಾರ್ಯವಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾ ದಾಂಪತ್ಯಕ್ಕೆ ಅಂಟಿಕೊಂಡು ದಿನದೂಡುತ್ತಿರುವ ದಂಪತಿಯೆಷ್ಟಿಲ್ಲ? ಹೆತ್ತವರ ಮತ್ತು ಮಕ್ಕಳ ಸಂಬಂಧ ಎಷ್ಟು ಮನೆಗಳಲ್ಲಿ ಹಳಸಿ ಹೋಗಿಲ್ಲ? ಅಣ್ಣ ತಮ್ಮಂದಿರು ದೂರವಾಗಿಲ್ಲ? ಎಷ್ಟು ಜನರ ಬದುಕಿನಲ್ಲಿ ಡೇಟಿಂಗ್, ಲಿವಿಂಗ್ ಟುಗೆದರ್ ಪದ್ಧತಿಗಳು ಪ್ರಾರಂಭವಾಗಿಲ್ಲ?

ಸಮರಸವೇ ಜೀವನ

ಸಮಸ್ಯೆಗಳಿಲ್ಲದ ಸಂಸಾರಗಳಿಲ್ಲ, ವಿರಸಗಳೇ ಇಲ್ಲದ ದಾಂಪತ್ಯವೂ ಇಲ್ಲ. ಸಣ್ಣಪುಟ್ಟ ಚರ್ಚೆಗಳಿರಲಿ, ಊಟದಲ್ಲಿನ ಉಪ್ಪಿನಕಾಯಿಯ ಥರ. ಆದರೆ ಬರೇ ಉಪ್ಪಿನಕಾಯಿಯೇ ಊಟದ ವಸ್ತು ಆಗಬಾರದಲ್ಲ. ‘ಸರಸ ಜನನ, ವಿರಸ ಮರಣ, ಸಮರಸವೇ ಜೀವನ’ ಎಂಬ ಬೇಂದ್ರೆಯವರ ಮಾತಿನಂತೆ, ಸರಸದಿಂದ ಆರಂಭಗೊಳ್ಳುವ ಸಂಸಾರದಲ್ಲಿ ಆಗಾಗ ವಿರಸ ಇಣುಕಿದರೂ ದಾಂಪತ್ಯವನ್ನು ಸಮರಸದಲ್ಲಿ ಅಂತ್ಯವಾಗಲು ಬಿಡಬೇಕು. ಸಂಸಾರದಲ್ಲಿ ಪ್ರೀತಿ ಗೌರವಗಳನ್ನು ಆದೇಶಿಸಬಾರದು, ಗಳಿಸಿಕೊಳ್ಳಬೇಕು. ಈ ಪರಸ್ಪರ ಪ್ರೀತಿ ಪ್ರಶ್ನಾತೀತವಾಗಿರಲಿ.

ಈ ನಿಟ್ಟಿನಲ್ಲಿ ಸಂಸಾರ ಸುಖವಾಗಿರಲು ಎಲ್ಲರೂ ಅನುಸರಿಸಬೇಕಾದ ಸಾರ್ವಕಾಲಿಕ ಮೌಲ್ಯಗಳು ಹೀಗಿವೆ:-

 • ಇಂದು ನಾನಾ ಕಾರಣಗಳಿಂದ ವಿಭಕ್ತ ಕುಟುಂಬ ಪದ್ಧತಿ ಸಾಮಾನ್ಯವಾಗಿಬಿಟ್ಟಿದೆ. ಅವಿಭಕ್ತ ಕುಟುಂಬದಿಂದ ಸಿಗುತ್ತಿದ್ದ ಜೀವನ್ಮುಖಿ ಶಿಕ್ಷಣ, ರಕ್ಷಣೆ, ಕೂಡಿ ಬಾಳುವ ಕಲೆ, ತ್ಯಾಗ, ಸಹನೆ, ಸಹಕಾರ, ಇಂದಿನ ಮಕ್ಕಳಿಗೆ ಇಲ್ಲವಾಗಿದೆ. ಇವರಿಗೆ ಸಂಬಂಧಗಳ ಅರಿವಿಲ್ಲ, ಸಂಬಂಧಿಕರ ನಂಟಿಲ್ಲ. ಮನೆಯ ಡ್ರೖೆವರೇ ಅಂಕಲ್, ಕೆಲಸದಾಕೆಯೇ ಆಂಟಿ. ಈ ಕೊರತೆಯನ್ನು ನಿವಾರಿಸಲು ಬಂಧುಗಳೆಲ್ಲಾ ಆಗಾಗ ಸೇರುವ ಪರಿಪಾಠವಿರಲಿ.
 • ಈಗಿನ ಕಾಲದಲ್ಲಿ ಮನೆಗೆ ಒಂದೋ ಎರಡೋ ಮಕ್ಕಳು ಅಷ್ಟೇ. ಇದು ಮನೆಮನೆಗಳಲ್ಲಿ ‘ಸಿಂಗಲ್ ಚೈಲ್ಡ್ ಸಿಂಡ್ರೋಮ್ ಎಂಬ ಹೊಸ ಸಮಸ್ಯೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಯುವ ಪೋಷಕರು ಗಮನ ಹರಿಸಬೇಕಿದೆ.
 • ಹಿಂದೆ ಮದುವೆ ಎಂದರೆ ಒಂದು ಋಣಾನುಬಂಧ, ಬದ್ಧತೆ ಎಂಬ ಕಲ್ಪನೆ ಇತ್ತು. ಆದ್ದರಿಂದ ಹಿಡಿದ ಕೈ ಬಿಡದೇ, ಕೈ ಕೊಡದೇ ಜೀವನ ನಡೆಸುತ್ತಿದ್ದರು. ಈ ನಡುವೆ ಗಂಡ- ಹೆಂಡತಿ ಜತೆಗಿದ್ದರೆ ಅದುವೇ ಒಂದು ಜಾಯಿಂಟ್ ಫ್ಯಾಮಿಲಿ ಎನ್ನುವಂತಾಗಿದೆ. ಹೀಗಾಗಲು ಅವರ ಆರ್ಥಿಕ, ಅಭಿವ್ಯಕ್ತಿ, ವ್ಯಕ್ತಿ ಸ್ವಾತಂತ್ರ್ಯಗಳು ಒಂದು ಕಾರಣವಾದರೆ, ಪೈಪೋಟಿ, ಪ್ರತಿಷ್ಠೆ, ಹೊಂದಾಣಿಕೆಯ ಕೊರತೆ ಇನ್ನಿತರ ಕಾರಣಗಳು. ಮದುವೆ ಅದ್ದೂರಿಯಾದರೆ ಸಾಲದು, ದಾಂಪತ್ಯ ಜೀವನವೂ ಅದ್ದೂರಿಯಾಗಿರಬೇಕಲ್ಲ? ದಂಪತಿ ಒಮ್ಮತವಿರುವ ವಿಷಯಗಳನ್ನಲ್ಲ, ಒಮ್ಮತವಿಲ್ಲದ ವಿಷಯಗಳನ್ನೂ ಹೇಗೆ ನಿಭಾಯಿಸುತ್ತಾರೆ ಅನ್ನುವುದೇ ಮುಖ್ಯ.
 • ಮನೆ ನಿಶ್ಶಬ್ದವಾಗಿದೆ ಎಂದರೆ ಮನೆ ತುಂಬಾ ಶಾಂತಿ ಇದೆ ಎಂದರ್ಥವಲ್ಲ. ಗಂಡ ಹೆಂಡತಿ ಮಾತು ಬಿಟ್ಟಿರುವ ಸಂದರ್ಭವೂ ಇರಬಹುದಲ್ಲ. ಈ ಹಿನ್ನೆಲೆಯಲ್ಲಿ ನಮ್ಮಿಂದ ತಪು್ಪಗಳಾಗಿದ್ದಲ್ಲಿ ನಮ್ಮ ಅಹಂ ಆಚೆಗಿಟ್ಟು ಒಪ್ಪಿಕೊಳ್ಳೋಣ, ಮಾಡಿದ ತಪ್ಪಿನಿಂದ ಪಾಠ ಕಲಿಯೋಣ. ಮಾಡಿದ ತಪ್ಪನ್ನೇ ಮತ್ತೆ ಮಾಡದಿರೋಣ.
 • ಮಕ್ಕಳೇ ಮೊದಲಾಗಿ ಎಲ್ಲರನ್ನೂ ಕೇಳಿಸಿಕೊಳ್ಳುವ ವ್ಯವಧಾನವಿರಲಿ. ಹೊಗಳಲೇಬೇಕಾದಲ್ಲಿ ಹೊಗಳುವ ಹಿರಿತನವಿರಲಿ. ಎಲ್ಲರ ಮೇಲೂ ನಂಬಿಕೆ ಇರಲಿ. ಯಾವುದೇ ರೀತಿಯ ಸಂಶಯ ಪ್ರವೃತ್ತಿ, ಗೂಢಚಾರಿಕೆ ಇಲ್ಲದಿರಲಿ.
 • ಮನೆಯೊಳಗೆ ಮಾತು ನಯವಾಗಿರಲಿ, ದನಿ ಏರದಿರಲಿ ಹಾಗೂ ಚುಚ್ಚಿ ನೋಯಿಸದಂತಿರಲಿ. ಮಾತಿಗೆ ಮಾತು ಬೆಳೆಸಿದಂತೆ ಎಲ್ಲವೂ ಕಷ್ಟ ನಷ್ಟ. ಮಾತಿಗೆ ಮಾತು ಇಳಿಸಿದರೆ ಎಲ್ಲವೂ ಸರಳ, ಸುಲಭ.
 • ಕಳೆದು ಹೋದ ಕಹಿ ಘಟನೆಗಳನ್ನು ಮತ್ತೆ ಮತ್ತೆ ರ್ಚಚಿಸಬಾರದು. ರಾಗಿ ಮುದ್ದೆಯಂತೆ ನುಂಗಿ ಬಿಡಬೇಕು, ಜಗಿಯಬಾರದು. ಹಾಗೆ ಮಾಡಿದರೆ ಮೈಮೇಲಾದ ಗಾಯವನ್ನು ಒಣಗಲು ಬಿಡದೆ ಕೆರೆದು ಹುಣ್ಣಾಗಿಸಿದಂತೆ ಆದೀತು.
 • ನೆಂಟರಿಷ್ಟರ ಮತ್ತು ಅತಿಥಿ ಸತ್ಕಾರದ ವಿಚಾರದಲ್ಲಿ ದಂಪತಿ ಸಮಾನ ಮನಸ್ಕರಾಗಿರಬೇಕು. ಆಡಂಬರ, ಅನುಕರಣ, ತುಲನೆ, ಕೊಳ್ಳುಬಾಕತನ, ಒಣಪ್ರತಿಷ್ಠೆಗಳಿಂದ ದೂರವಿರಬೇಕು.
 • ಮಕ್ಕಳು ಒಳಗಾಗುವ ತಾರುಣ್ಯದ ತಲ್ಲಣಗಳ ಬಗ್ಗೆ ಗಮನವಿರಲಿ. ತಲೆಮಾರು ಅಂತರಗಳ ಬಗ್ಗೆ ಗೊತ್ತಿರಲಿ, ಒಬ್ಬರಿನ್ನೊಬ್ಬರ ಕೆಮಿಸ್ಟ್ರಿಯನ್ನು ಅರ್ಥ ಮಾಡಿಕೊಂಡರೆ, ಈ ಅಂತರವನ್ನು ಕಡಿಮೆಗೊಳಿಸಬಹುದು. ಯಾವ ಮನೆಯಲ್ಲಿ ಹೆತ್ತವರು ಮತ್ತು ಮಕ್ಕಳು ಸ್ನೇಹಿತರಂತೆ ಇರುತ್ತಾರೆಯೋ ಅಲ್ಲಿ ಅಪಸ್ವರಗಳು ಬರುವುದಿಲ್ಲ.
 • ಅತ್ತೆಯಾದವಳು ಸೊಸೆಯನ್ನು ತನ್ನ ಮಗಳಂತೆ ಹಾಗೂ ಸೊಸೆಯಾದವಳು ಅತ್ತೆಯನ್ನು ತಾಯಿಯಂತೆ ಪ್ರೀತಿಸಿದರೆ ಆ ಮನೆಯಲ್ಲಿ ಅತ್ತೆ – ಸೊಸೆ ಜಗಳವಿರುವುದಿಲ್ಲ.
 • ಗಂಡನ ಹಿಂದೆ ಹೆಂಡತಿ ಇಲ್ಲವೇ ಹೆಂಡತಿಯ ಹಿಂದೆ ಗಂಡ ನಡೆಯಬೇಕಾಗಿಲ್ಲ. ಜತೆಜತೆಯಾಗಿ ನಡೆದರೆ ಸಾಕು. ಹೆಂಗಸರಿಗೆ ಹಠ, ಗಂಡಸರಿಗೆ ಚಟ ಇರಬಾರದು.

ಒಟ್ಟಿನಲ್ಲಿ, ಒಬ್ಬರನ್ನೊಬ್ಬರು ಅರಿತು, ಸಲಹಿಕೊಂಡು, ಸಹಿಸಿಕೊಂಡು ಸಂಭಾಳಿಸಿಕೊಂಡು ಮುಂದಕ್ಕೆ ಸಾಗುವುದೇ ಸುಖ ಸಂಸಾರದ ಗುಟ್ಟು. ಊಟದಲ್ಲಿ ಉಪ್ಪಿನ ಬೆಲೆ ಗೊತ್ತಾಗುವುದು ಅದು ಇಲ್ಲದಾಗ ಮಾತ್ರ, ಅಂತೆಯೇ, ಕುಟುಂಬದಲ್ಲಿ ಪ್ರೀತಿಯ ಬೆಲೆ ಗೊತ್ತಾಗುವುದು ನಾವು ಅದರಿಂದ ವಂಚಿತರಾದಾಗ ಮಾತ್ರ.ಕುಟುಂಬಗಳು ಚೆನ್ನಾಗಿದ್ದರೆ ಸಮಾಜ, ದೇಶ ಎಲ್ಲವೂ ಚೆನ್ನಾಗಿರುತ್ತದೆ. ಜಗತ್ತೇ ಒಂದು ಸ್ವರ್ಗವಾಗಿಬಿಡುತ್ತದೆ. ಎಷ್ಟಾದರೂ ವಸುಧೈವ ಕುಟುಂಬಕಂ. ಅರ್ಥಾತ್ ಇಡೀ ವಿಶ್ವವೇ ಒಂದು ಕುಟುಂಬವಿದ್ದಂತೆ ಅಲ್ಲವೇ?

ಹೆತ್ತವರ ಒಪ್ಪಿಗೆಯ ವಿವಾಹ

ಹಿಂದಿನ ಕಾಲದಲ್ಲಿ ಹೆತ್ತವರ, ಹಿರಿಯರ ಅನುಮತಿ ಮತ್ತು ಅನುಮೋದನೆಯಂತೆ ವಿವಾಹಗಳು ನಡೆಯುತ್ತಿದ್ದವು. ಈ ನಡುವೆ ಹುಡುಗ ಹುಡುಗಿಯರು ತಮ್ಮ ಬಾಳ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಎರಡೂ ಥರದ ವ್ಯವಸ್ಥೆಯಲ್ಲಿ ಸಾಧಕ ಬಾಧಕಗಳಿದ್ದರೂ ಹೆತ್ತವರ ಒಪ್ಪಿಗೆಯನ್ನೂ ಪಡೆದು ಮಾಡಿಕೊಳ್ಳುವ ಪ್ರೇಮ ವಿವಾಹಗಳೇ ಕ್ಷೇಮ. ಕಾರಣ, ವಿವಾಹವೆಂದರೆ ಬರೀ ಗಂಡು-ಹೆಣ್ಣಿನ ಅನುಬಂಧವಲ್ಲ. ಎರಡೂ ಕುಟುಂಬಗಳ ನಡುವೆ ಏರ್ಪಡುವ ಸಂಬಂಧ. ಇಲ್ಲವಾದರೆ ಞಚ್ಟ್ಟಚಜಛಿ ಜಿಠ ಜ್ಠrಜಿಛಿಛ್ಝಢ ಛಟ್ಞಛಿ ಚ್ಚಠಿ ಡಿಜಜ್ಚಿಜ ಜಿಠ ಠ್ಝಟಡ್ಝಿಢ ್ಟಟಛ್ಞಿಠಿಛಿಛ ಎಂಬಂತಾಗಬಹುದು.

ಕುಟುಂಬ ಚೆನ್ನಾಗಿರಲು ಇವೆಲ್ಲಾ ಬೇಕು

 • ಕುಟುಂಬದಲ್ಲಿ ಎಲ್ಲವೂ ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ನಡೆಯುವುದಿಲ್ಲ. ಸಂಸಾರದಲ್ಲಿ ಗೆದ್ದವ ಸೋತ, ಸೋತವ ಗೆದ್ದ. ಆದರಿಂದ ಗೆದ್ದು ಸೋಲಬಾರದು. ಇತರರನ್ನು ಬದಲಿಸಲು ಸಾಧ್ಯವಾಗದಿದ್ದರೆ ನಾವೇ ಕೊಂಚ ಬದಲಾಗಿಬಿಡಬೇಕು. ಇದನ್ನು ನೀವು ಕಾಂಪ್ರಮೈಸ್ ಎನ್ನಿ ಇಲ್ಲವೇ ಸ್ಯಾಕ್ರಿಫೈಸ್ ಎನ್ನಿ.
 • ಸಂಸಾರದ ಸುಖ ಹಾಳು ಮಾಡಲು ಯಾರೂ ಕಾರಣರಾಗಬಾರದು. ‘ಬಾಡಿ ಹೋದರೆ ಮನೆಯ ತೋರಣ, ಅದಕ್ಕೆ ನಾನು ಮಾತ್ರವಲ್ಲ, ನೀನೂ ಕಾರಣ’ವೆಂಬ ಕವಿಯ ವೇದನೆಯಲ್ಲಿ ಸತ್ಯವಿದೆ.
 • ಕುಟುಂಬದಲ್ಲಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ ಜತೆ, ಇತರರನ್ನು ಅರ್ಥೈಸಿಕೊಳ್ಳುವ ವಿವೇಚನೆ ಇರಲಿ. ನಾವು ಇತರರನ್ನು ಅವರ ಟಟಜ್ಞಿಠಿ ಟ್ಛ ಡಜಿಛಿಡಿ ಹಾಗೂ ಅವರು ನಮ್ಮನ್ನು ನಮ್ಮ ಟಟಜ್ಞಿಠಿ ಟ್ಛ ಡಜಿಛಿಡಿ ನಿಂದ ತಿಳಿದುಕೊಳ್ಳಲು ಯತ್ನಿಸಿದಾಗ ಸಮಸ್ಯೆಗಳಿಗೆ ಪರಿಹಾರ ಶೀಘ್ರ.
 • ನಾನು, ನನ್ನದು, ನನ್ನಿಂದಲೇ, ನನಗಾಗಿಯೇ ಎನ್ನುವ ಕಡೆ ನಾವು, ನಮ್ಮದು, ನಮ್ಮಿಂದಲೇ, ನಮಗಾಗಿ ಎಂಬ ಪದ ಪ್ರಯೋಗ ಕುಟುಂಬದಲ್ಲಿ ಒಳ್ಳೆಯ ಪರಿಣಾಮ, ಫಲಿತಾಂಶವನ್ನು ನೀಡುತ್ತದೆ. ಅಂತೆಯೇ ತಾಳ್ಮೆ ಇರಲಿ, ಸಹಕಾರವಿರಲಿ.
 • ಸಾಗರ ದಾಟಲು ತೆಪ್ಪ ಬೇಕು. ಸಂಸಾರವೆಂಬ ಸಾಗರ ದಾಟಲು ಒಬ್ಬರು ತೆಪ್ಪಗಿರಬೇಕು ಎಂಬುದು ತಿಳಿದಿರಲಿ.

(ಪ್ರತಿಕ್ರಿಯಿಸಿ: [email protected])