ಬಾರ್ ಲೈಸೆನ್ಸ್ ಲಂಚಾವತಾರ

| ಬೇಲೂರು ಹರೀಶ

ಬೆಂಗಳೂರು: ವಿಧಾನಸೌಧದೊಳಗೆ ನಡೆಯುವ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳೇ ಅತ್ತ ಅಸಹಾಯಕತೆ ವ್ಯಕ್ತಪಡಿಸಿದರೆ, ಇತ್ತ ಬಾರ್ ಲೈಸೆನ್ಸ್ ನವೀಕರಣದ ಹೆಸರಿನಲ್ಲಿ ಬರುವ ಜುಲೈ ತಿಂಗಳೊಂದರಲ್ಲೇ ಬರೋಬ್ಬರಿ 100 ಕೋಟಿ ರೂ. ಲಂಚ ಕೈ ಬದಲಾಗಲಿದೆ. ಅಚ್ಚರಿಯಾದರೂ ಇದು ಸತ್ಯ.

ಹೌದು, ಮದ್ಯದ ಸಹವಾಸ ಅದೆಷ್ಟೋ ಕುಟುಂಬಗಳನ್ನು ಬೀದಿಪಾಲು ಮಾಡಿದರೆ, ಹಲವಾರು ಅಧಿಕಾರಿಗಳನ್ನು ಕೋಟಿಪತಿಗಳನ್ನಾಗಿಸುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳೇ ಈ ಲೈಸೆನ್ಸ್ ನವೀಕರಣದ ಲಂಚಾವತಾರವನ್ನು ದೃಢಪಡಿಸಿದ್ದಾರೆ.

ಲಂಚವಿಲ್ಲದೆ ಲೈಸೆನ್ಸ್ ಸಿಗಲ್ಲ: ರಾಜ್ಯಾದ್ಯಂತ 10,297 ಮದ್ಯದಂಗಡಿಗಳಿದ್ದು, ಪ್ರತಿ ವರ್ಷ ಜುಲೈನಲ್ಲಿ ಬಾರ್​ಗಳ ನವೀಕರಣ ಮಾಡಿಸುವುದು ಕಡ್ಡಾಯ. ಹೀಗಾಗಿ ಮುಂದಿನ ತಿಂಗಳು ನವೀಕರಣ ಪ್ರಕ್ರಿಯೆ ಶುರುವಾಗಲಿದೆ. ಆದರೆ, ಪರವಾನಗಿ ನವೀಕರಣ ಅಷ್ಟು ಸುಲಭವಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಬಾರ್ ಮಾಲೀಕರು ಹೇಳುವ ಪ್ರಕಾರ ಒಂದು ಲೈಸೆನ್ಸ್ ನವೀಕರಣಕ್ಕೆ ಕನಿಷ್ಠ 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಲಂಚ ಕೊಡಲೇಬೇಕು. ನಕಾರಾತ್ಮಕ ವಿಷಯಗಳು ಸಿಕ್ಕರೆ ಇನ್ನಷ್ಟು ಲಂಚಕ್ಕೆ ಅಧಿಕಾರಿಗಳು ಪೀಡಿಸುತ್ತಾರೆ.

ನವೀಕರಣ ಹೇಗೆ?: ಬಾರ್ ನವೀಕರಣಕ್ಕಾಗಿ ಮಾಲೀಕರು ಆಯಾ ವ್ಯಾಪ್ತಿಯ ಅಬಕಾರಿ ನಿರೀಕ್ಷಕರ ಕಚೇರಿಗೆ ಅರ್ಜಿ ಸಲ್ಲಿಸುತ್ತಾರೆ. ಅಬಕಾರಿ ನಿರೀಕ್ಷಕರು ಪರಿಶೀಲನೆ ಬಳಿಕ ಜಿಲ್ಲಾ ಉಪ ಆಯುಕ್ತರಿಗೆ ಕಳುಹಿಸುತ್ತಾರೆ. ಅಲ್ಲಿಂದ ಅರ್ಜಿ ಜಿಲ್ಲಾಧಿಕಾರಿ ಕಚೇರಿ ತಲುಪುತ್ತದೆ. ಅಂತಿಮವಾಗಿ ಡಿಸಿ ಅಂತಿಮ ಮುದ್ರೆ ಹಾಕಿ ನವೀಕರಣ ಮಾಡುತ್ತಾರೆ. ಈ ಪ್ರಕ್ರಿಯೆ ನಡೆಯಲು ಕನಿಷ್ಠ 1 ತಿಂಗಳು ಬೇಕು.

ಆದರೆ, ಮೊದಲ ಹಂತದಲ್ಲಿ ಅಬಕಾರಿ ನಿರೀಕ್ಷಕರಿಂದ ಅರ್ಜಿ ಮುಂದೆ ಸಾಗಬೇಕಾದರೆ ಲಂಚ ಕೊಡಲೇಬೇಕು ಎಂಬುದು ಮಾಲೀಕರ ಆರೋಪ.

ನಿಯಮ ಹೇಳುವುದೇನು?: ನವೀಕರಣ ವೇಳೆ ಅಧಿಕಾರಿಗಳು ಚೆಕ್​ಲೀಸ್ಟ್ ಮಾಡಿಕೊಂಡು ಅಬಕಾರಿ ಇಲಾಖೆಯ ರೂಲ್-5 ಪ್ರಕಾರ ಆಕ್ಷೇಪಣಾ ಸ್ಥಳಗಳಲ್ಲಿರುವ ಮದ್ಯದಂಗಡಿಗಳ ನವೀಕರಣ ರದ್ದುಗೊಳಿಸಬೇಕು. ದೇವಸ್ಥಾನ, ಶಾಲಾ-ಕಾಲೇಜುಗಳು, ವಸತಿ ಪ್ರದೇಶ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ವಾಸ ಮಾಡುವ ಪ್ರದೇಶದಿಂದ 100 ಮೀಟರ್​ನೊಳಗೆೆ ಇರುವ ಮದ್ಯದಂಗಡಿಗಳ ಲೈಸನ್ಸ್ ನವೀಕರಣಕ್ಕೆ ಅವಕಾಶ ಇರುವುದಿಲ್ಲ. ಆದರೆ, ಅಧಿಕಾರಿಗಳು ಬಾರ್ ಮಾಲೀಕರಿಂದ ಲಂಚ ತೆಗೆದುಕೊಂಡು ನಿಯಮಗಳನ್ನು ಉಲ್ಲಂಘಿಸಿ ತಪು್ಪ ಮಾಹಿತಿ ನಮೂದಿಸಿರುತ್ತಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಸ್ಥಳಾಂತರಕ್ಕೆ 15 ಲಕ್ಷ

ಇನ್ನು ಮದ್ಯದಂಗಡಿಗಳ ಸ್ಥಳಾಂತರಕ್ಕೆ 15 ಲಕ್ಷ ರೂ. ಲಂಚ ಕೊಡಬೇಕು. ಲಂಚ ಕೊಡದಿದ್ದರೆ ಎಲ್ಲ ಸರಿಯಾಗಿದ್ದರೂ ಅನುಮತಿ ಕೊಡುವುದಿಲ್ಲ. ಆದರೆ, ದುಪ್ಪಟ್ಟು ಲಂಚ ನೀಡುವವರಿಗೆ ದೇವಸ್ಥಾನ, ಶಾಲಾ-ಕಾಲೇಜು, ವಸತಿ ಪ್ರದೇಶಕ್ಕೆ ಬಾರ್ ಸ್ಥಳಾಂತರಿಸಲೂ ಅನುಮತಿ ಕೊಡುತ್ತಾರೆ.

ಹಲವು ವರ್ಷಗಳಿಂದ ಒಂದೇ ಕಡೆ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿರುವ 527 ಅಬಕಾರಿ ನಿರೀಕ್ಷಕರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಒಂದೇ ಸ್ಥಳದಲ್ಲೇ ಸುಮಾರು 5ರಿಂದ 10 ವರ್ಷಗಳ ಕಾಲ ಬೀಡು ಬಿಟ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇಲಾಖೆಯಲ್ಲಿ ಪಾರದರ್ಶಕತೆ ತರಲು ಇಂಥ ಅಧಿಕಾರಿಗಳ ವರ್ಗಾವಣೆ ಅನಿವಾರ್ಯ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮದ್ಯ ಮಾರಾಟ ಕೇಂದ್ರಗಳು

ಬೆಂಗಳೂರು-3189, ಬೆಂಗಳೂರು ಗ್ರಾಮಾಂತರ-176, ಚಿಕ್ಕಬಳ್ಳಾಪುರ-166, ಕೋಲಾರ-228, ರಾಮನಗರ-179, ತುಮಕೂರು-341, ಬಾಗಲಕೋಟೆ-253, ಬೆಳಗಾವಿ-619, ವಿಜಯಪುರ- 195, ಧಾರವಾಡ-263, ಹಾವೇರಿ-154, ಬೀದರ್-145, ಕಲಬುರಗಿ-238, ರಾಯಚೂರು- 209, ಯಾದಗಿರಿ-92, ಬಳ್ಳಾರಿ-267, ಚಿತ್ರದುರ್ಗ-222, ದಾವಣಗೆರೆ-279, ಗದಗ-134, ಕೊಪ್ಪಳ-140, ದಕ್ಷಿಣ ಕನ್ನಡ-469, ಕೊಡಗು-218, ಶಿವಮೊಗ್ಗ-236, ಉಡುಪಿ-380, ಉತ್ತರ ಕನ್ನಡ-156, ಚಾಮರಾಜನಗರ-119, ಚಿಕ್ಕಮಗಳೂರು-197, ಹಾಸನ-298, ಮಂಡ್ಯ-239, ಮೈಸೂರು-496, ಒಟ್ಟು-10,297

Leave a Reply

Your email address will not be published. Required fields are marked *