Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ರಷ್ಯಾ ರಣರಂಗ

Wednesday, 13.06.2018, 3:05 AM       No Comments


ಗೋ…ಲ್! ಫುಟ್​ಬಾಲ್ ವಿಶ್ವಕಪ್ ಫೀವರ್

‘ಈ ಭೂಮಿಯ ಮೇಲೆ ಜನರನ್ನು ಒಗ್ಗೂಡಿಸುವ ಏಕೈಕ ಶಕ್ತಿ ಏನಾದರೂ ಇದ್ದರೆ ಅದು ಫುಟ್​ಬಾಲ್ ಮಾತ್ರ’ ವರ್ಣಭೇದದ ವಿರುದ್ಧ ಹೋರಾಡಿದ ನಾಯಕ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ 2010ರ ಫುಟ್​ಬಾಲ್ ವಿಶ್ವಕಪ್​ಗೂ ಮುನ್ನ ಹೇಳಿದ ಮಾತಿದು. ವಿಶ್ವದ 211 ದೇಶಗಳ ಪೈಕಿ 32 ದೇಶಗಳು ಮಾತ್ರವೇ ಅರ್ಹತೆ ಪಡೆಯುವ ಫಿಫಾ ವಿಶ್ವಕಪ್ ಫುಟ್​ಬಾಲ್ ಮತ್ತೊಮ್ಮೆ ಜನರನ್ನು ಒಗ್ಗೂಡಿಸಲು ಸಿದ್ಧವಾಗಿದೆ. ವಿಶ್ವದ ಅತಿದೊಡ್ಡ ದೇಶ, ಶ್ರೀಮಂತ ಯುರೋಪ್ ರಾಷ್ಟ್ರಗಳ ಜೀವನಾಡಿ ರಾಷ್ಟ್ರವಾಗಿರುವ ರಷ್ಯಾದಲ್ಲಿ 21ನೇ ಆವೃತ್ತಿಯ ಫುಟ್​ಬಾಲ್ ವಿಶ್ವಕಪ್ ಟೂರ್ನಿ ನಾಳೆ (ಜೂನ್ 14) ಆರಂಭವಾಗಲಿದೆ. ಒಂದು ತಿಂಗಳು ನಡೆಯುವ ಫುಟ್​ಬಾಲ್ ಉತ್ಸವ ಜುಲೈ 15ರಂದು ಮುಕ್ತಾಯ ಕಾಣುವ ಹೊತ್ತಿಗಾಗಲೇ ಹಲವು ಹೊಸ ದಾಖಲೆಗಳನ್ನು ನಿರ್ವಿುಸಲಿದೆ ಎನ್ನುವ ಸೂಚನೆಯಂತೂ ಸಿಕ್ಕಿದೆ.

1991ರಲ್ಲಿ ಸೋವಿಯತ್ ಯೂನಿಯನ್ 15 ರಾಷ್ಟ್ರಗಳಾಗಿ ಛಿದ್ರವಾಗಿ ರಷ್ಯಾ ಎನ್ನುವ ಹೆಸರು ಪಡೆದುಕೊಂಡ ಬಳಿಕ, ದೇಶ ಸಾಗಿದ ಹಾದಿ ಅನನ್ಯವಾದದ್ದು. 1958ರಲ್ಲಿ ಯುಎಸ್​ಎಸ್​ಆರ್ ಎನ್ನುವ ಹೆಸರಲ್ಲಿ ಮೊಟ್ಟಮೊದಲ ಬಾರಿಗೆ ಫಿಫಾ ವಿಶ್ವಕಪ್ ಆಡಿದ್ದ ತಂಡ 1991ರ ಬಳಿಕ ರಷ್ಯಾ ಎನ್ನುವ ಹೆಸರಿನಲ್ಲಿ ಆಡುತ್ತಿದೆ. ಯುಎಸ್​ಎಸ್​ಆರ್ ಛಿದ್ರವಾದ ಬಳಿಕ ರಷ್ಯಾ ಪಾಲಿಗೆ ಇದ್ದ ದೊಡ್ಡ ಸಮಸ್ಯೆ ಎಂದರೆ, ಕುಸಿದುಹೋದ ಕ್ರೀಡಾ ಸಂಸ್ಕೃತಿಯನ್ನು ಮೇಲೆತ್ತಿ ನಿಲ್ಲಿಸುವುದಾಗಿತ್ತು. ರಷ್ಯಾದಲ್ಲಿ ಇಂದು ಫುಟ್​ಬಾಲ್ ನಂ.1 ಕ್ರೀಡೆ. ಐಸ್ ಹಾಕಿ ಕ್ರೀಡೆಯನ್ನು ಹಿಂದೆ ತಳ್ಳಿ ಈ ಪಟ್ಟವೇರಿದೆ. ವಿಶ್ವಕಪ್ ಆತಿಥ್ಯ ಅದರ ಫುಟ್​ಬಾಲ್ ಪ್ರೇಮವನ್ನು ಮತ್ತಷ್ಟು ಹೆಚ್ಚಿಸಲಿದೆ.

ವಿಶ್ವದ ಸೂಪರ್ ಪವರ್ ಎನಿಸಿದ್ದರೂ ಫುಟ್​ಬಾಲ್ ವಿಶ್ವಕಪ್​ನಲ್ಲಿ ರಷ್ಯಾ ಇಂದಿಗೂ ಸಿಹಿ ಕಂಡಿಲ್ಲ. 1966ರಲ್ಲಿ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ 4ನೇ ಸ್ಥಾನ ಪಡೆದಿದ್ದೇ ಈವರೆಗಿನ ಶ್ರೇಷ್ಠ ಸಾಧನೆ. ವಿಶ್ವದ ಬಲಿಷ್ಠ ಆರ್ಥಿಕತೆ, ಅಗಾಧ ಸಂಪನ್ಮೂಲಗಳಿದ್ದರೂ, ರಷ್ಯಾ ವಿಶ್ವಕಪ್ ಆಯೋಜನೆಯ ಮನಸ್ಸು ಮಾಡಿದ್ದೇ 2010ರಲ್ಲಿ. ಪೋರ್ಚುಗಲ್-ಸ್ಪೇನ್, ಬೆಲ್ಜಿಯಂ-ನೆದರ್ಲೆಂಡ್ಸ್ ದೇಶಗಳ ಜಂಟಿ ಆತಿಥ್ಯದ ಬಿಡ್​ಗಳನ್ನು ಸೋಲಿಸಿ ಫಿಫಾ ವಿಶ್ವಕಪ್ ಆತಿಥ್ಯ ಪಡೆದುಕೊಂಡಿತ್ತು. ದೇಶದ 13 ನಗರಗಳ 16 ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನು ಆಯೋಜಿಸುವ ಯೋಜನೆ ಹಾಕಿಕೊಂಡಿದ್ದ ರಷ್ಯಾ, ಈಗ 11 ನಗರಗಳ 12 ಸ್ಟೇಡಿಯಂಗಳಲ್ಲಿ ಪಂದ್ಯಗಳಿಗೆ ಆತಿಥ್ಯ ವಹಿಸಿಕೊಳ್ಳಲಿದೆ. 3 ಸ್ಟೇಡಿಯಂಗಳು ಮರುನಿರ್ವಣವಾಗಿದ್ದರೆ, 9 ಸ್ಟೇಡಿಯಂಗಳನ್ನು ಹೊಸದಾಗಿ ಕಟ್ಟಲಾಗಿದೆ. ಇಷ್ಟೆಲ್ಲ ಇದ್ದರೂ, ರಷ್ಯಾ ಫುಟ್​ಬಾಲ್ ಟೀಮ್ ಅಲ್ಲಿನ ಜನರ ನಂಬಿಕೆ ಉಳಿಸಿಕೊಂಡಿಲ್ಲ.

73,170 ಕೋಟಿ ರೂ. ಖರ್ಚು

ಫಿಫಾ ವಿಶ್ವಕಪ್ ಆಯೋಜನೆಗೆ ರಷ್ಯಾ ಖರ್ಚು ಮಾಡಿದ ಹಣ 678 ಬಿಲಿಯನ್ ರುಬೆಲ್ಸ್. ಅಂದರೆ 73,170 ಕೋಟಿ ರೂಪಾಯಿ. ಕಳೆದ ಅಕ್ಟೋಬರ್​ನ ಬಜೆಟ್​ನಲ್ಲಿ 34.5 ಬಿಲಿಯನ್ ರುಬೆಲ್ಸ್ (3904 ಕೋಟಿ ರೂ.)ಏರಿಕೆ ಮಾಡಿತ್ತು. ಒಟ್ಟಾರೆ ಟೂರ್ನಿಗೆ ಮಾಡಬೇಕಿದ್ದ ವೆಚ್ಚಕ್ಕಿಂತ 5.4% ಹಣ ಹೆಚ್ಚಳವಾಗಿದೆ ಎಂದು ರಷ್ಯಾ ತಿಳಿಸಿದೆ. ಈ ಮೊದಲು 643.5 ಬಿಲಿಯನ್ ರುಬೆಲ್ ವೆಚ್ಚವನ್ನು (69, 455 ಕೋಟಿ ರೂ.) ಮಾಡುವುದಾಗಿ ತಿಳಿಸಿತ್ತು. ಈ ಮೊತ್ತದಲ್ಲಿ 42, 094 ಕೋಟಿ ರೂ. ಮೊತ್ತವನ್ನು ರಷ್ಯಾ ಸರ್ಕಾರ ನೀಡಿದ್ದರೆ, 9, 909 ಕೋಟಿ ರೂ. ಮೊತ್ತವನ್ನು ಅಲ್ಲಿನ ಸ್ಥಳೀಯ ಸರ್ಕಾರಗಳು ಭರಿಸಿವೆ. ಉಳಿದ ಹಣವನ್ನು ಅಲ್ಲಿನ ಕಂಪನಿಗಳು ಹಾಗೂ ಪ್ರಾಯೋಜಕರಿಂದ ಪಡೆಯಲಾಗಿದೆ. ರಷ್ಯಾ ವಿಶ್ವಕಪ್​ಗೆ ಮೀಸಲಿಟ್ಟಿದ್ದ ಬಜೆಟ್​ನಲ್ಲಿ ಒಟ್ಟು ಮೂರು ಬಾರಿ ಹೆಚ್ಚಳ ಮಾಡಿದೆ.

ವಿಶ್ವ ಫುಟ್​ಬಾಲ್​ನಲ್ಲಿ ಇಂಗ್ಲೆಂಡ್ ತಂಡದ 2ನೇ ಅವತರಣಿಕೆ. ಪ್ರತಿಭಾವಂತ ಆಟಗಾರರು, ಸಂಪನ್ಮೂಲಗಳು, ತಳಮಟ್ಟದ ಕ್ರೀಡಾ ಅಭಿವೃದ್ಧಿ ಎಲ್ಲವೂ ಇದ್ದರೂ, ದೊಡ್ಡ ಟೂರ್ನಿಗಳಲ್ಲಿ ತಂಡದ ವೈಫಲ್ಯ ಮುಂದುವರಿದಿದೆ.

ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ, ವಿಶ್ವಕಪ್​ನ ಎಎಫ್​ಸಿ ಹಂತದ ಅರ್ಹತಾ ಟೂರ್ನಿಯ 2ನೇ ಸುತ್ತಿನಲ್ಲಿಯೇ ಭಾರತ ಹೊರಬಿದ್ದಿತ್ತು. ಮೊದಲ ಸುತ್ತಿನ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆದ್ದಿದ್ದ ಭಾರತ, 2ನೇ ಸುತ್ತಿನಲ್ಲಿ ಆಡಿದ 8 ಪಂದ್ಯಗಳ ಪೈಕಿ 1ರಲ್ಲಿ ಮಾತ್ರವೇ ಗೆಲುವು ಕಂಡಿತ್ತು. 7 ಪಂದ್ಯಗಳಲ್ಲಿ ದಯನೀಯ ಸೋಲು ಕಂಡು 5 ತಂಡಗಳ ಗುಂಪಿನಲ್ಲಿ ಕೊನೇ ಸ್ಥಾನ ಪಡೆದಿತ್ತು. ಅದರಲ್ಲೂ ಗುವಾಮ್ಂಥ ಪುಟ್ಟ ದೇಶದ ವಿರುದ್ಧ ಭಾರತ ಹೀನಾಯ ಸೋಲು ಎದುರಿಸಿತ್ತು. 2015ರ ಮಾರ್ಚ್​ನಿಂದ ಆರಂಭವಾದ ವಿಶ್ವಕಪ್ ಅರ್ಹತಾ ಟೂರ್ನಿ ಎರಡೂವರೆ ವರ್ಷಗಳ ಕಾಲ ನಡೆದು ಈಗ ವಿಶ್ವಕಪ್ ಫೈನಲ್ಸ್ ಹಂತಕ್ಕೆ ಬಂದು ನಿಂತಿದೆ. ಭಾರತದ ಫುಟ್​ಬಾಲ್ ಅಭಿಮಾನವನ್ನು ಕಡೆಗಣಿಸುವಂತಿಲ್ಲ. ಸ್ವತಃ ಫಿಫಾ ಹೇಳಿರುವ ಪ್ರಕಾರ, ರಷ್ಯಾದಲ್ಲಿ ನಡೆಯಲಿರುವ ಪಂದ್ಯಗಳಿಗೆ ಈಗಾಗಲೇ ಭಾರತದ ಅಭಿಮಾನಿಗಳು 18 ಸಾವಿರ ಟಿಕೆಟ್ ಖರೀದಿಸಿದ್ದಾರೆ. ಟಿಕೆಟ್ ಖರೀದಿಯಲ್ಲಿ ಭಾರತ ವಿಶ್ವದ ಅಗ್ರ 20 ರಾಷ್ಟ್ರಗಳ ಪಟ್ಟಿಯಲ್ಲಿದೆ ಎಂದು ತಿಳಿಸಿದೆ.

ರಷ್ಯಾದಲ್ಲಿ ಕಾಲ್ಚೆಂಡು ಸಮರ ಕಿಕ್​ಆಫ್ ಆಗುವ ಹಂತದಲ್ಲಿ ಚಾಂಪಿಯನ್ ಯಾರಾಗಲಿದ್ದಾರೆ ಎನ್ನುವ ಚರ್ಚೆ ಸಹಜ. ಚಾಂಪಿಯನ್ ಪಟ್ಟಕ್ಕೆ ಹಲವು ತಂಡಗಳ ಪೈಪೋಟಿ ಇದೆ. ಹಾಲಿ ಚಾಂಪಿಯನ್ ಜರ್ಮನಿ, ಲಿಯೋನೆಲ್ ಮೆಸ್ಸಿ ಸ್ಪೂರ್ತಿಯ ಅರ್ಜೆಂಟೀನಾ, ಫುಟ್​ಬಾಲ್​ನಲ್ಲಿ ಎಂದೆಂದಿಗೂ ಪ್ರತಿಭಾವಂತರಾಗಿರುವ ಬ್ರೆಜಿಲ್, ಸ್ಪೇನ್ ಹಾಗೂ ಫ್ರಾನ್ಸ್ ತಂಡಗಳ ಮೇಲೆ ನಿರೀಕ್ಷೆ ಇಡಬಹುದು. ಈ ತಂಡಗಳ ಹೊರತಾಗಿ ಬೆಲ್ಜಿಯಂ ಮೇಲೆ ಭಾರಿ ನಿರೀಕ್ಷೆ ಗರಿಗೆದರಿದೆ. ಅದಕ್ಕೆ ಕಾರಣ ಅಂತಾರಾಷ್ಟ್ರೀಯ ಕಣದಲ್ಲಿ ಬೆಲ್ಜಿಯಂ ಇತ್ತೀಚಿನ ವರ್ಷಗಳಲ್ಲಿ ತೋರಿರುವ ನಿರ್ವಹಣೆ. ಇವರೊಂದಿಗೆ ಪುಟ್ಟ ದೇಶ ಐಸ್ಲೆಂಡ್, ಪನಾಮಾ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದರೆ, ಈಜಿಪ್ಟ್ 28 ವರ್ಷಗಳ ಬಳಿಕ ಟೂರ್ನಿ ಆಡುತ್ತಿದೆ.

ಫಿಫಾ ವಿಶ್ವಕಪ್​ಗೆ ದಿಕ್ಸೂಚಿ ಎನ್ನಲಾಗುವ ಕಳೆದ ವರ್ಷದ ಕಾನ್ಪೆಡರೇಷನ್ ಕಪ್ ಟೂರ್ನಿಯಲ್ಲಿ ಜರ್ಮನಿ ತಂಡ ಯುವ ಆಟಗಾರರನ್ನು ಕಟ್ಟಿಕೊಂಡು ಚಾಂಪಿಯನ್ ಆಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಚಿಲಿ, ನೆದರ್ಲೆಂಡ್, ಇಟಲಿಯಂಥ ಬಲಾಢ್ಯ ತಂಡಗಳು ಈ ಬಾರಿಯ ವಿಶ್ವಕಪ್​ನಲ್ಲಿಲ್ಲ. ಯುರೋ ಕಪ್ ಚಾಂಪಿಯನ್ ಪೋರ್ಚುಗಲ್​ನ ಇಡೀ ನಿರೀಕ್ಷೆ ರೊನಾಲ್ಡೊ ಆಟವನ್ನು ಅವಲಂಬಿಸಿದೆ. ಸದ್ಯ

ಫುಟ್​ಬಾಲ್​ನ ಧ್ರುವತಾರೆಗಳಾದ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಶ್ಚಿಯಾನೊ ರೊನಾಲ್ಡೊ ಪಾಲಿನ ಬಹುತೇಕ ಕೊನೆಯ ವಿಶ್ವಕಪ್ ಇದು. ಯಾವ ದೇಶ ಚಾಂಪಿಯನ್ ಆಗುತ್ತದೆ ಎನ್ನುವುದನ್ನು ತಿಳಿಯಲು ಜುಲೈ 15ರವರೆಗೆ ಕಾಯುವುದು ಅನಿವಾರ್ಯ.

ವಿಶ್ವದ ಬೃಹತ್ ದೇಶ ರಷ್ಯಾ

ವಿಶ್ವದ ಅತಿದೊಡ್ಡ ರಾಷ್ಟ್ರ ರಷ್ಯಾ. 17098.242 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು, ಯುರೋಪ್​ನ ಪೂರ್ವ ಭಾಗದಲ್ಲಿದೆ. ದೇಶದ ಉತ್ತರದಿಂದ ದಕ್ಷಿಣದವರೆಗೆ 4000 ಕಿಲೋಮೀಟರ್ ದೂರವಿದ್ದರೆ, ಪೂರ್ವದಿಂದ ಪಶ್ಚಿಮದವರೆಗೆ 10 ಸಾವಿರ ಕಿಲೋ ಮೀಟರ್ ಉದ್ದವಿದೆ. ಸುಮಾರು 16 ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ.

ಇತಿಹಾಸ: ಫುಟ್​ಬಾಲ್ ರಷ್ಯಾದ ಜನಪ್ರಿಯ ಕ್ರೀಡೆ. ಒಂದು ಕಾಲದಲ್ಲಿ ಫುಟ್​ಬಾಲ್​ನಷ್ಟೇ ಹಾಕಿ ಕೂಡ ಇಲ್ಲಿ ಪ್ರಸಿದ್ಧಿಯಾಗಿತ್ತು. 1990ರಿಂದೀಚೆಗೆ ರಷ್ಯಾದಲ್ಲಿ ಫುಟ್​ಬಾಲ್ ಸಾಕಷ್ಟು ಹೆಸರು ಮಾಡಿತು. ಸೋವಿಯತ್ ಒಕ್ಕೂಟದಿಂದ ಬೇರ್ಪಟ್ಟ ಬಳಿಕ ರಷ್ಯಾ ತಂಡ 1992 ಆಗಸ್ಟ್ 16 ರಂದು ಮೆಕ್ಸಿಕೊ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿತು. ಸೋವಿಯತ್ ಯೂನಿಯನ್​ನ ಕೆಲ ಆಟಗಾರರು ಕೂಡ ಈ ಪಂದ್ಯದಲ್ಲಿ ಆಡಿದ್ದು ವಿಶೇಷ. ಬಳಿಕ 1994ರಲ್ಲಿ ಅಮೆರಿಕದಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಸ್ವತಂತ್ರವಾಗಿ ಪಾಲ್ಗೊಂಡಿತ್ತು.

ಐಸ್ಲೆಂಡ್ ಅತಿ ಸಣ್ಣ ದೇಶ

ಕೇವಲ 3,30,000 ಜನಸಂಖ್ಯೆ ಹೊಂದಿರುವ ಐಸ್ಲೆಂಡ್ ಫಿಫಾ ವಿಶ್ವಕಪ್ ಫೈನಲ್ಸ್ ಆಡಿದ ಅತಿ ಸಣ್ಣ ದೇಶ ಎನಿಸಲಿದೆ. 209 ದಶಲಕ್ಷ ಜನಸಂಖ್ಯೆ ಹೊಂದಿರುವ ಬ್ರೆಜಿಲ್ ವಿಶ್ವಕಪ್ ಆಡುತ್ತಿರುವ

ಅತಿದೊಡ್ಡ ದೇಶವೆನಿಸಲಿದೆ. ಇದು ಐಸ್ಲೆಂಡ್​ಗಿಂತ 627 ಪಟ್ಟು ಅಧಿಕವೆನಿಸಿದೆ. ಬ್ರೆಜಿಲ್ ಎಲ್ಲ 21 ಫಿಫಾ ವಿಶ್ವಕಪ್ ಫೈನಲ್ಸ್​ಗಳಲ್ಲೂ ಆಡಿದ ಏಕೈಕ ತಂಡವೆನಿಸಲಿದೆ.

90 ವರ್ಷದ ಹಿಂದೆ ಕಂಡ ಕನಸು

1928ರ ಮೇ 28ರಂದು ನಡೆದ ಫಿಫಾ ಕಾಂಗ್ರೆಸ್, ವಿಶ್ವವನ್ನೇ ಬೆಸೆಯುವ ವಿಶ್ವಕಪ್ ಟೂರ್ನಿಯನ್ನು ಆರಂಭಿಸುವ ನಿರ್ಧಾರ ಮಾಡಿತ್ತು. 90 ವರ್ಷದ ಹಿಂದೆ ಫಿಫಾ ಅಧಿಕಾರಿಗಳು ಕಂಡ ಕನಸು ಇಂದು ಫುಟ್​ಬಾಲ್ ಸಂಸ್ಥೆಗೆ ಕೋಟಿ-ಕೋಟಿ ಆದಾಯವನ್ನು ದಯಪಾಲಿಸಿದೆ. ಫಿಫಾ ಆರಂಭವಾದ 24 ವರ್ಷಗಳ ಬಳಿಕ ಮೊಟ್ಟಮೊದಲ ವಿಶ್ವಕಪ್ 1930ರಲ್ಲಿ ನಡೆದಿತ್ತು. ಅಲ್ಲಿಯವರೆಗೂ ಒಲಿಂಪಿಕ್ಸ್​ನಲ್ಲಿ ಆಡುವ ಫುಟ್​ಬಾಲ್ ಟೂರ್ನಿಯನ್ನೇ ಪರಮೋಚ್ಚ ಟೂರ್ನಿ ಎಂದು ಪರಿಗಣಿಸಲಾಗಿತ್ತು. ಆದರೆ, ಮೂರು ಒಲಿಂಪಿಕ್ಸ್ ಬಳಿಕ ಫಿಫಾ ತನ್ನದೇ ಆದ ಸ್ವಂತ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಬೇಕು ಎನ್ನುವ ಯೋಚನೆ ಮಾಡಿತ್ತು. ಅಂದು ಫಿಫಾದ ಅಧ್ಯಕ್ಷರಾಗಿದ್ದ ಜೂಲ್ಸ್ ರಿಮಿಟ್ ಹಾಗೂ ಅವರ ಆಪ್ತ ಸಹಾಯಕ ಹೆನ್ರಿ ಡೆಲೌನಿ ವಿಶ್ವಕಪ್ ಟೂರ್ನಿ ಆರಂಭಿಸಿದ ಸಾಧಕರು. ಆ ಕಾರಣಕ್ಕಾಗಿಯೇ ಫಿಫಾ ವಿಶ್ವಕಪ್​ಗೆ ಜೂಲ್ಸ್ ರಿಮಿಟ್ ಎಂದು ಹೆಸರಿಡಲಾಗಿದ್ದರೆ, ಯುರೋ ಕಪ್​ಗೆ ಡೆಲೌನೆ ಕಪ್ ಎಂದು ಹೇಳಲಾಗುತ್ತದೆ.

ಜರ್ಮನಿ ಬುಕ್ಕಿಗಳ ಫೇವರಿಟ್

ಜರ್ಮನಿ ತಂಡ ಬುಕ್ಕಿಗಳ ಫೇವರಿಟ್ ಎನಿಸಿದೆ. ಜರ್ಮನಿ ಪರ 9/2ರ ಅನುಪಾತದಲ್ಲಿ ಬಾಜಿ ನಡೆಯುತ್ತಿದೆ. ಬ್ರೆಜಿಲ್ (5/1), ಫ್ರಾನ್ಸ್ (11/2), ಸ್ಪೇನ್ (7/1) ಮತ್ತು ಅರ್ಜೆಂಟೀನಾ (8/1) ಇತರ ಫೇವರಿಟ್ ತಂಡಗಳಾಗಿವೆ.

ಆತಿಥೇಯರಿಗೆ ಶೇ. 30 ಪ್ರಶಸ್ತಿ!

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಶೇ. 30ರಷ್ಟು ಬಾರಿ ಆತಿಥೇಯ ತಂಡವೇ ಚಾಂಪಿಯನ್ ಆಗಿದೆ. ಆದರೆ ರಷ್ಯಾ ಇದುವರೆಗೆ ವಿಶ್ವಕಪ್​ನಲ್ಲಿ ಗ್ರೂಪ್ ಹಂತದಿಂದ ಮೇಲೇರಿದ ದೃಷ್ಟಾಂತವಿಲ್ಲ. ಸೋವಿಯತ್ ಒಕ್ಕೂಟದ ಒಡಕಿನ ನಂತರ ಈ ಹಿಂದೆ 3 ಬಾರಿ (1994, 2002, 2014) ರಷ್ಯಾ ವಿಶ್ವಕಪ್ ಆಡಿತ್ತು.

 

 

Leave a Reply

Your email address will not be published. Required fields are marked *

Back To Top