ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಕೇಸ್

ಬೆಂಗಳೂರು: ಪರಿಸರ ಹಾಗೂ ಜೀವಸಂಕುಲಕ್ಕೆ ಮಾರಕವಾಗಿರುವ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಲಿದೆ.

ರಾಜ್ಯದ ಆರೋಗ್ಯ ಕೇಂದ್ರಗಳು ಪ್ರತಿನಿತ್ಯ 66,468 ಕೆಜಿ ವಿಷತ್ಯಾಜ್ಯ ಉತ್ಪಾದಿಸುವ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವ ಬಗ್ಗೆ ಮಂಗಳವಾರ ವಿಜಯವಾಣಿ ಮುಖಪುಟದಲ್ಲಿ ‘ಆಸ್ಪತ್ರೆ ಗಳಿಗೇ ಅನಾರೋಗ್ಯ!’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಶೇ.100 ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ) ಸದಸ್ಯ ಕಾರ್ಯದರ್ಶಿ ಮನೋಜ್​ಕುಮಾರ್ ಭರವಸೆ ನೀಡಿದ್ದಾರೆ.

ಆಸ್ಪತ್ರೆಗಳು, ಆರೋಗ್ಯ ಕೇಂದ್ರ, ವೈದ್ಯಕೀಯ ಕಾಲೇಜು ಹಾಗೂ ಲ್ಯಾಬ್​ಗಳು ಬೇಡವಾದ ರೋಗಿಗಳ ಚರ್ಮ, ರಕ್ತ, ವಿವಿಧ ಅಂಗಾಂಗ, ಸಿರಿಂಜ್, ಔಷಧದ ಬಾಟಲ್, ವಿವಿಧ ರಾಸಾಯನಿಕ, ಹರಿತವಾದ ವಸ್ತುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ, ಜಿಲ್ಲೆಗಳಲ್ಲಿರುವ ಸಂಸ್ಕರಣ ಘಟಕಕ್ಕೆ ನೀಡಬೇಕಾಗುತ್ತದೆ. 2016ರ ಜೈವಿಕ-ವೈದ್ಯಕೀಯ ತ್ಯಾಜ್ಯ ನಿರ್ವಹಣೆ ನಿಯಮದ ಪ್ರಕಾರ 2017ರಲ್ಲಿ 1,416 ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ಇದೀಗ ಇನ್ನೊಮ್ಮೆ ಪರಿಶೀಲಿಸಲಾಗುವುದು. ಇಷ್ಟಾಗಿಯೂ ಎಚ್ಚೆತ್ತುಕೊಳ್ಳದಿದ್ದರೆ ಕ್ರಿಮಿನಲ್ ಕೇಸ್ ಹಾಕಲಾಗುವುದು. ಅಷ್ಟೇ ಅಲ್ಲ, ಇನ್ನು ಮುಂದೆ ನಿಯಮಗಳನ್ನು ಉಲ್ಲಂಘಿಸಿದ ಆಸ್ಪತ್ರೆಗಳ ಪರವಾನಗಿ ರದ್ದು ಮಾಡಲಾಗುವುದು ಎಂದು ಮನೋಜ್​ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ಅಧಿಕಾರಿಗಳ ಜತೆ ಸಭೆ

ವೈದ್ಯಕೀಯ ತಾಜ್ಯ ವಿಚಾರವಾಗಿ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿ ಮಾಡಬೇಕಾಗಿದೆ. ಇಲ್ಲವಾದಲ್ಲಿ ಆಸ್ಪತ್ರೆಗಳು ಬೇಜವಾಬ್ದಾರಿ ಮುಂದುವರಿಸುವ ಸಾಧ್ಯತೆಯಿದೆ. ಹೀಗಾಗಿ ಜನವರಿ ಮೊದಲ ವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್​ಕುಮಾರ್ ಪಾಂಡೆ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಲು ತೀರ್ವನಿಸಿದ್ದೇವೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೇರಿ ವಿವಿಧ ಆರೋಗ್ಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಆಮಂತ್ರಿಸಲಾಗುತ್ತದೆ. ವೈದ್ಯಕೀಯ ತ್ಯಾಜ್ಯ ಸಮರ್ಪಕ ಸಂಸ್ಕರಣೆ ವಿಚಾರವಾಗಿ ಸಭೆಯಲ್ಲಿ ರ್ಚಚಿಸಿ, ಶೇ.100 ತ್ಯಾಜ್ಯ ವೈಜ್ಞಾನಿಕ ಸಂಸ್ಕರಣೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಅಲ್ಲದೆ, ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಮನೋಜ್​ಕುಮಾರ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 30 ಜೈವಿಕ-ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಗಳಿವೆ. ಆಸ್ಪತ್ರೆ, ಆರೋಗ್ಯ ಕೇಂದ್ರ, ವೈದ್ಯಕೀಯ ಕಾಲೇಜು, ಲ್ಯಾಬ್​ಗಳ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿರುವುದರಿಂದ ವೈದ್ಯಕೀಯ ತ್ಯಾಜ್ಯ ಸಹಜವಾಗಿಯೇ ಹೆಚ್ಚಳವಾಗಿದೆ. ಉತ್ಪತ್ತಿಯಾಗುತ್ತಿರುವ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಘಟಕಗಳು ಹೊಂದಿವೆ.

| ಮನೋಜ್ ಕುಮಾರ್ ಕೆಎಸ್​ಪಿಸಿಬಿ ಸದಸ್ಯ ಕಾರ್ಯದರ್ಶಿ