ಆಸ್ಪತ್ರೆಗಳಿಗೇ ಅನಾರೋಗ್ಯ!

| ವರುಣ ಹೆಗಡೆ ಬೆಂಗಳೂರು

ಜೀವ ಹಿಂಡುವ ರೋಗ, ಸಂಕಟದ ಬಾಧೆ ಹೊತ್ತು ಬರುವವರ ನೋವು ತಣಿಸಬೇಕಾದ ರಾಜ್ಯದ ಆರೋಗ್ಯ ಕೇಂದ್ರಗಳೇ ತ್ಯಾಜ್ಯ ತಾಣಗಳಾಗಿ ಮಾರ್ಪಟ್ಟು, ಹೊಸ ಹೊಸ ರೋಗ ಉತ್ಪತ್ಪಿ ಮಾಡುವ ಮೂಲಕ ಫ್ಯಾಕ್ಟರಿಗಳಂತಾಗಿರುವ ಕಳವಳಕಾರಿ ಸಂಗತಿ ಬಯಲಾಗಿದೆ.

ರಾಜ್ಯಾದ್ಯಂತ ಪ್ರತಿನಿತ್ಯ 29874 ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಸಂಸ್ಥೆ, ಆರೋಗ್ಯ ಕೇಂದ್ರ , ಲ್ಯಾಬ್​ಗಳಿಂದ 66468 ಕೆ.ಜಿ. ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಈ ಪೈಕಿ ರಾಜ್ಯದ ಬಹುತೇಕ ಆರೋಗ್ಯ ಕೇಂದ್ರಗಳು ಈ ತ್ಯಾಜ್ಯವನ್ನು ವೈಜ್ಞಾನಿಕ ಸಂಸ್ಕರಣೆಗೂ ಒಳಪಡಿಸದೆ ಸಾರ್ವಜನಿಕ ಸ್ಥಳಗಳಲ್ಲಿಯೇ ಎಸೆಯುವ ಮೂಲಕ ವಿಷ ಉತ್ಪಾದಿಸುತ್ತಿವೆ. ಬೇಡವಾದ ರಕ್ತ, ಚರ್ಮ, ಔಷಧದ ಬಾಟಲಿ, ಸೂಜಿ ಸೇರಿ ವಿವಿಧ ವೈದ್ಯಕೀಯ ತಾಜ್ಯವನ್ನು ವೈಜ್ಞಾನಿಕ ಸಂಸ್ಕರಣೆಗೆ ನೀಡುವ ಬದಲು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ವಿವಿಧ ಕಾಯಿಲೆಗಳು ಜೀವ ಪಡೆಯುತ್ತಿವೆ.

ಘಟಕವಿದ್ದರೂ ಪ್ರಯೋಜವಿಲ್ಲ: ವೈದ್ಯಕೀಯ ತ್ಯಾಜ್ಯಗಳ ಸಂಸ್ಕರಣೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಡಿ (ಕೆಎಸ್​ಪಿಸಿಬಿ) ತಲಾ ಒಂದು ಪ್ರತ್ಯೇಕ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಆರೋಗ್ಯ ಕೇಂದ್ರಗಳು ವೈದ್ಯಕೀಯ ತ್ಯಾಜ್ಯವನ್ನು ಅಂಥಹ ಘಟಕಗಳಿಗೆ ಹಸ್ತಾಂತರಿಸಲು ನಿರಾಸಕ್ತಿ ತೋರುತ್ತಿರುವುದು ಬೆಳ ಕಿಗೆ ಬಂದಿದೆ.

ನೋಟಿಸ್​ಗೂ ಬೆಲೆ ಇಲ್ಲ: ಪರಿಸರಕ್ಕೆ ಹಾನಿಕಾರವಾದ ಮೆಡಿ ವೇಸ್ಟ್ ಉತ್ಪಾದನೆ ವಿಚಾರವಾಗಿ ಕೆಎಸ್​ಪಿಸಿಬಿ ನೋಟಿಸ್ ಜಾರಿ ಮಾಡಿದರೂ ಆರೋಗ್ಯ ಕೇಂದ್ರಗಳು ಎಚ್ಚೆತ್ತುಕೊಳ್ಳುತ್ತಿಲ್ಲ. 2016ರಲ್ಲಿ ರಾಜ್ಯದಲ್ಲಿನ 26724 ಪ್ರಾಥಮಿಕ ಆರೋಗ್ಯ ಕೇಂದ್ರ, ವಿವಿಧ ಆಸ್ಪತ್ರೆ, ವೈದ್ಯಕೀಯ ಲ್ಯಾಬ್​ಗಳಿಂದ ಪ್ರತಿನಿತ್ಯ 51560 ಕೆ.ಜಿ. ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗಿದೆ. ಈ ಪ್ರಮಾಣ 2017ರಲ್ಲಿ 66468 ಕೆ.ಜಿ.ಗೆ ಏರಿಕೆಯಾಗಿದೆ. ಇದರಲ್ಲಿ ಪ್ರತಿನಿತ್ಯ 50ಕ್ಕಿಂತ ಕಡಿಮೆ ಬೆಡ್ ಹೊಂದಿರುವ 6328 ಆಸ್ಪತ್ರೆಗಳಿಂದ 16157ಕೆ.ಜಿ., 17483 ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಇತರ ಕಲಿಕಾ ಕೇಂದ್ರಗಳಿಂದ 15483 ಕೆ.ಜಿ., 50 ರಿಂದ 200 ಬೆಡ್ ಸಾಮರ್ಥ್ಯದ 376ಆಸ್ಪತ್ರೆಗಳಿಂದ 12133ಕೆ.ಜಿ., 30 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ ನಗರ ಪ್ರದೇಶದ 32 ಆಸ್ಪತ್ರೆಗಳಿಂದ 11055ಕೆ.ಜಿ., 30 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯಿರುವ ನಗರ ಪ್ರದೇಶದ 5608 ಆಸ್ಪತ್ರೆಗಳಿಂದ 5712ಕೆ.ಜಿ ಹಾಗೂ 200ರಿಂದ 500ಬೆಡ್ ಸಾಮರ್ಥ್ಯದ 47 ಆಸ್ಪತ್ರೆಗಳಿಂದ 5928 ಕೆ.ಜಿ. ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿದೆ.

ಸಾವಿರಕ್ಕೂ ಅಧಿಕ ನೋಟಿಸ್

ಕೆಎಸ್​ಪಿಸಿಬಿ 2016ರಲ್ಲಿ 1416 ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ನೋಟಿಸ್ ನೀಡಿತ್ತು. 2017ರಲ್ಲಿ ಈ ಸಂಖ್ಯೆ ಹೆಚ್ಚಳವಾಗಿದ್ದು, 1925 ಕೇಂದ್ರಗಳು ನೋಟಿಸ್ ಪಡೆದಿವೆ. ಇದರಲ್ಲಿ 1208 ವೈದ್ಯಕೀಯ ಕಾಲೇಜು ಹಾಗೂ ಇತರ ಶಿಕ್ಷಣ ಕೇಂದ್ರಗಳಾಗಿವೆ. ಅದೇ ರೀತಿ, 50 ಹಾಸಿಗೆಗಿಂತ ಕಡಿಮೆ ಸಾಮರ್ಥ್ಯದ 486 ಆಸ್ಪತ್ರೆ, 30 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರ ಪ್ರದೇಶದಲ್ಲಿನ 175 ಆಸ್ಪತ್ರೆ, 50 ರಿಂದ 200 ಹಾಸಿಗೆಯ 46 ಆಸ್ಪತ್ರೆ, 200 ರಿಂದ 500 ಬೆಡ್ ಸಾಮರ್ಥ್ಯದ 7 ಆಸ್ಪತ್ರೆ ಹಾಗೂ 500 ಬೆಡ್ ಸಾಮರ್ಥ್ಯದ 3 ಆಸ್ಪತ್ರೆ ನಿಯಮ ಉಲ್ಲಂಘಿಸಿವೆ.

ನಾಲ್ಕು ಮಾದರಿ ತ್ಯಾಜ್ಯ

# ಹಳದಿಪಟ್ಟಿ -ದೇಹದ ಭಾಗ, ರಕ್ತ, ಚಿಕಿತ್ಸೆಗೆ ಬಳಸಿದ ಬಟ್ಟೆ, ಲ್ಯಾಬ್ ತ್ಯಾಜ್ಯ.

# ಕೆಂಪುಪಟ್ಟಿ- ಬಾಟಲಿ, ಸೂಜಿ, ಮೂತ್ರದ ಚೀಲ, ಕತ್ತರಿ, ಲಸಿಕೆ

# ಬಿಳಿ ಪಟ್ಟಿ- ಬ್ಲೇಡ್ ಸೇರಿ ತೀಕ್ಷ್ಣವಾದ ವಸ್ತುಗಳು

# ನೀಲಿ ಪಟ್ಟಿ- ಗಾಜು, ಅವಧಿ ಮೀರಿದ ಔಷಧಗಳು

ಏನಿದು ವೈದ್ಯಕೀಯ ತ್ಯಾಜ್ಯ?

ಆಸ್ಪತ್ರೆ, ವೈದ್ಯಕೀಯ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಲ್ಯಾಬ್​ಗಳಲ್ಲಿ ರೋಗಿಗಳಿಗೆ ಪರೀಕ್ಷೆ ಹಾಗೂ ಚಿಕಿತ್ಸೆ, ವೈದ್ಯಕೀಯ ಸಂಶೋಧನೆ ವೇಳೆ ಉತ್ಪಾದನೆಯಾಗುವ ತ್ಯಾಜ್ಯಗಳೇ ವೈದ್ಯಕೀಯ ತ್ಯಾಜ್ಯ. ಇವುಗಳು ಭೂಮಿ ಸೇರಿದಲ್ಲಿ ಜೀವಿ, ಸಸ್ಯಗಳ ಪಾಲಿಗೆ ವಿಷವಾಗಲಿದೆ.

ಪ್ರಾಣಿಗಳ ಜೀವಕ್ಕೂ ಕುತ್ತು

ಏಡ್ಸ್, ಕ್ಯಾನ್ಸರ್ ಸೇರಿ ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಯ ಚರ್ಮ, ರಕ್ತ ಹಾಗೂ ವಿವಿಧ ಬೇಡವಾದ ಅಂಗಾಂಗವನ್ನು ಬೆಕ್ಕು, ನಾಯಿ, ಹಸು ಸೇರಿ ವಿವಿಧ ಪ್ರಾಣಿಗಳು ಸೇವಿಸಿ ಅಸ್ವಸ್ಥಗೊಳ್ಳುತ್ತಿವೆ. ಅಷ್ಟೇ ಅಲ್ಲ, ಇವುಗಳ ಮೂಲಕವೇ ಹೊಸ ರೋಗಗಳು ಮಾನವನಿಗೂ ಹರಡುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.

ವೈದ್ಯಕೀಯ ತ್ಯಾಜ್ಯ ಜೀವಸಂಕುಲ, ಪರಿಸರಕ್ಕೆ ಅಪಾಯಕಾರಿ. ಕಾಲರಾ, ಸೇರಿ ಹಲವು ಕಾಯಿಲೆಗೆ ಆಮಂತ್ರಣ ನೀಡಲಿದೆ. ಹೀಗಾಗಿ ವೈಜ್ಞಾನಿಕವಾಗಿ ವಿಂಗಡಣೆ ಮಾಡಿ, ಸಂಸ್ಕರಣಾ ಘಟಕಕ್ಕೆ ಹಸ್ತಾಂತರಿಸುವುದು ಅಗತ್ಯ.

| ಡಾ.ಕೆ.ಟಿ. ರಮೇಶ್ ಪ್ಲಾಸ್ಟಿಕ್ ಸರ್ಜನ್ ವಿಕ್ಟೋರಿಯಾ ಆಸ್ಪತ್ರೆ

ಪರಿಣಾಮ ಏನು?

# ನಾಶವಾಗಬೇಕಿದ್ದ ಹಾನಿಕಾರಕ ತ್ಯಾಜ್ಯ ಭೂಮಿ ಸೇರಿ ಪರಿಸರ ಮಲಿನ

# ಅವಧಿ ಮೀರಿದ/ಹೆಚ್ಚುವರಿ ಔಷಧಗಳಿಂದ ವಿಷಕಾರಿ ಅಂಶ ಉತ್ಪತ್ತಿ.

# ಮಾರಣಾಂತಿಕ ಜ್ವರ ಸೇರಿ ವಿವಿಧ ಸಾಂಕ್ರಾಮಿಕ ರೋಗಗಳಿಗೆ ರಹದಾರಿ

# ನೀರಿನ ಹರಿವು ಮತ್ತು ಮೂಲಕ್ಕೂ ತ್ಯಾಜ್ಯಗಳು ಸೇರುವ ಅಪಾಯವಿದೆ.

ಚಿಕ್ಕೋಡಿಗೆ ಅಗ್ರಸ್ಥಾನ

ಕೇಂದ್ರ ಸರ್ಕಾರ ರೂಪಿಸಿರುವ ‘ಜೈವಿಕ-ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮ 2016’ರ ಉಲ್ಲಂಘನೆ ಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಆಸ್ಪತ್ರೆಗಳು ಅಗ್ರ ಸ್ಥಾನ ಪಡೆದಿವೆ. ತಾಲೂಕಿನ 25 ಆಸ್ಪತ್ರೆಗಳು ನಿಯಮ ಉಲ್ಲಂಘಿಸಿದ ಕಾರಣ ಕೆಎಸ್​ಪಿಸಿಬಿ ಯಿಂದ ಈ ವರ್ಷ ನೋಟಿಸ್ ಪಡೆದಿವೆ. ದಾವಣಗೆರೆ, ಬಾಗಲಕೋಟೆಯಲ್ಲಿಯೂ ಅಧಿಕ ಆಸ್ಪತ್ರೆಗಳು ನಿಯಮ ಉಲ್ಲಂಘಿಸುತ್ತಿರುವುದು ಬೆಳಕಿಗೆ ಬಂದಿದೆ.

ಓಡಾಡುವಾಗ ಎಚ್ಚರ

#  ಎಲ್ಲೆಂದರಲ್ಲಿ ಎಸೆದಿರುವ ವೈದ್ಯಕೀಯ ತ್ಯಾಜ್ಯ ಕಾಲಿಗೆ ಚುಚ್ಚಿ ಜೀವಕ್ಕೆ ಕುತ್ತು ಸಾಧ್ಯತೆ.

#  ಎಚ್​ಐವಿ ಪೀಡಿತರಿಗೆ ಬಳಸಿದ ಸೂಜಿ ತಗುಲಿದರೆ ಎಚ್​ಐವಿ ಸೋಂಕು ತಗಲುತ್ತದೆ

#  ರೋಗಿಗಳಿಗೆ ಬಳಸಿದ ತ್ಯಾಜ್ಯ ಗಾಯವಾದ ಭಾಗಕ್ಕೆ ತಗುಲಿದರೆ ರೋಗಾಣು ಸೇರುತ್ತೆ.

#  ಮಕ್ಕಳು ಆಟಿಕೆ ರೂಪದಲ್ಲಿ ಅದನ್ನು ಬಳಸುವ ಮೂಲಕ ಅಪಾಯ ತಂದೊಡ್ಡಬಹುದು.