ಹೃದಯವಂತ ಪ್ರವಾದಿ ಮುಹಮ್ಮದ್ ಪೈಗಂಬರ್

| ಸಲೀಮ್ ಬೋಳಂಗಡಿ

ಪ್ರವಾದಿ ಮುಹಮ್ಮದ್ ಪೈಗಂಬರರು ಮೆಕ್ಕಾದಲ್ಲಿ ಹುಟ್ಟಿದ ಸಂದರ್ಭದಲ್ಲಿ, ಅಲ್ಲಿ ಅನಾಗರಿಕತೆ ವ್ಯಾಪಿಸಿತ್ತು. ಜೂಜು, ಅನಾಚಾರ, ಅಕ್ರಮ ತಾಂಡವವಾಡುತ್ತಿದ್ದವು. ಕರಿಯ ಗುಲಾಮರನ್ನು ಕೀಳಾಗಿ ಕಾಣುವುದರ ಜತೆಗೆ ಹಿಂಸೆಗೂ ಗುರಿಪಡಿಸಲಾಗುತ್ತಿತ್ತು. ಒಟ್ಟಾರೆ ಹೇಳುವುದಾದರೆ ಮಾನವೀಯತೆಗೇ ಅಲ್ಲಿ ಸಂಚಕಾರ ಒದಗಿತ್ತು. ಇಂಥ ಕಾಲಘಟ್ಟದಲ್ಲಿ ಜನಿಸಿದ ಪ್ರವಾದಿ ಮುಹಮ್ಮದರು, ತಮ್ಮ ಪ್ರಾಮಾಣಿಕ ವರ್ತನೆಯಿಂದ ಜನಮನ ಗೆದ್ದು, ‘ಅಮೀನ್’ (ಪ್ರಾಮಾಣಿಕ), ‘ಸಾದಿಕ್’ (ಸತ್ಯಸಂಧ) ಎಂಬ ಬಿರುದುಗಳನ್ನು ಪಡೆದರು.

ಸಮಾಜದಲ್ಲಿನ ಕೇಡುಗಳನ್ನು ಕಂಡು ಮನನೊಂದು ಅದರಿಂದ ಮುಕ್ತಿಪಡೆಯಲು ಏಕಾಂತ ಬಯಸಿ, ಸಮೀಪದ ‘ಹಿರಾ’ ಎಂಬ ಗುಹೆಯಲ್ಲಿ ನೆಲೆಗೊಂಡರು. ಒಮ್ಮೆ ಅವರ ಸಮ್ಮುಖ ಪ್ರಕಟಗೊಂಡ ‘ಜಿಬ್ರಿಲ್’ ಎಂಬ ದೇವದೂತರ ಮುಖಾಂತರ ಮುಹಮ್ಮದರಿಗೆ ‘ಪ್ರವಾದಿತ್ವ’ ಲಭಿಸಿತು, ದೇವನ ವತಿಯಿಂದ ದೇವವಾಣಿ ಸ್ಪುರಿಸಲು ಪ್ರಾರಂಭವಾಯಿತು. ಪವಿತ್ರ ‘ಕುರ್​ಆನ್’ ಅವತೀರ್ಣಗೊಂಡಿದ್ದು ಹೀಗೆ. ಆಗ ಪ್ರವಾದಿ ಮುಹಮ್ಮದರಿಗೆ 40ರ ಹರೆಯ.

ದೇವವಾಣಿಯ ಸಂದೇಶವನ್ನು ಮುಹಮ್ಮದರು ಜೀವನದಲ್ಲಿ ಅಳವಡಿಸಿಕೊಂಡಿದ್ದರ ಜತೆಗೆ, ಇತರರಿಗೂ ಪಸರಿಸಲು ಆರಂಭಿಸಿದರು. ಏಕದೇವಾರಾಧನೆಯೇ ಅವರ ಸಂದೇಶದ ಹುರುಳಾಗಿತ್ತು. ಹೆಣ್ಣುಮಕ್ಕಳು ಹುಟ್ಟಿದರೆ ಅವಮಾನವೆಂದು ಬಗೆದು ಜೀವಂತ ಹೂಳುತ್ತಿದ್ದ ಸಮಾಜದಲ್ಲಿ, ಹೆಣ್ಣನ್ನು ‘ಸಮೃದ್ಧಿ’ ಎಂದೂ, ಹೆಣ್ಣುಮಕ್ಕಳಿಗೆ ವಿದ್ಯೆ-ಬುದ್ಧಿ ನೀಡಿ ಸಾಕಿ-ಸಲಹಿದವರು ‘ಸ್ವರ್ಗಕ್ಕೆ ಅರ್ಹರು’ ಎಂದೂ ಮುಹಮ್ಮದರು ಸಾರಿದರು. ‘ಮಾನವರೆಲ್ಲರೂ ಸಮಾನರು, ಏಕದೇವನ ಸೃಷ್ಟಿಗಳು; ಹೀಗಾಗಿ ಬಡವ-ಬಲ್ಲಿದ, ಗುಲಾಮ-ಒಡೆಯ, ಕರಿಯ-ಬಿಳಿಯ ಎಂಬ ಭೇದಭಾವ ಸಲ್ಲದು’ ಎಂದು ಅವರು ಒತ್ತಿಹೇಳಿದ್ದು ಅಲ್ಲಿನ ಬಂಡವಾಳಶಾಹಿ ಅರಬರನ್ನು ಕೆರಳಿಸಿತು. ಇದು ತಮ್ಮ ಅಸ್ತಿತ್ವಕ್ಕೆ ಮಾರಕ ಎಂದೇ ಭಾವಿಸಿದ ಅವರು ಮುಹಮ್ಮದರ ವಿರುದ್ಧ ನಾನಾಬಗೆಯಲ್ಲಿ ಸಮರ ಸಾರಿದರು, ಪ್ರವಾದಿವರ್ಯರ ಸದ್ದಡಗಿಸಲು ಶಕ್ತಿಮೀರಿ ಯತ್ನಿಸಿದರು. ಆದರೆ ತಮ್ಮ ವಿರೋಧ ತೀವ್ರಗೊಂಡಂತೆ ಮುಹಮ್ಮದರ ಅನುಯಾಯಿಗಳ ಸಂಖ್ಯೆಯೂ ದಿನೇದಿನೆ ಹೆಚ್ಚುತ್ತಿದ್ದುದನ್ನು ಕಂಡು ಅರಬರು ಕಂಗೆಟ್ಟರು. ತಮ್ಮೆದುರು ತಲೆಬಗ್ಗಿಸಿ, ಮುದುಡಿ ನಿಂತಿದ್ದವರನ್ನು ಮುಹಮ್ಮದರು ಗುಲಾಮಗಿರಿಯ ಸಂಕೋಲೆಯಿಂದ ಕಳಚಿದ್ದು ಕಂಡು ರೊಚ್ಚಿಗೆದ್ದ ಆ ಕುರೈಶಿ ಸಮೂಹವು ಮುಹಮ್ಮದರನ್ನು ಮುಗಿಸಲು ನಾನಾ ಷಡ್ಯಂತ್ರಗಳನ್ನು ನಡೆಸಿ ವಿಫಲವಾಯಿತು; ಕೊಲ್ಲಲು ಬಂದವರೇ ಪ್ರವಾದಿಗಳ ಕಟ್ಟಾ ಅನುಯಾಯಿಗಳಾದರು. ಮುಹಮ್ಮದರನ್ನು ಕೊಂದೇ ತೀರುವೆನೆಂದು ಖಡ್ಗವನ್ನೆತ್ತಿ ಅಬ್ಬರಿಸುತ್ತ ಸಾಗಿದ ಉಮರ್​ರು, ಅವರ ಸಂದೇಶಕ್ಕೆ ಮಾರುಹೋಗಿ ಅವರ ಅತೀವ ಆಪ್ತರಾದದ್ದು ಇದಕ್ಕೊಂದು ಸಾಕ್ಷಿ. ಬಳಿಕ ಅವರು ಇಸ್ಲಾಮೀ ಇತಿಹಾಸದಲ್ಲಿ ಮಾದರಿ ಮತ್ತು ಯೋಗ್ಯ ಆಡಳಿತ ನಡೆಸಿದ ಖಲೀಫರಾಗಿ ದಾಖಲಾದರು.

ಪ್ರವಾದಿ ಮುಹಮ್ಮದರ ಇಂಥ ನಡೆಗಳು ಅರಬ್ ಜಗತ್ತಿನಲ್ಲಿ ಸಂಚಲನೆ ಮೂಡಿಸಿದವೆನ್ನಬೇಕು. ಸೌಹಾರ್ದ, ಭ್ರಾತೃತ್ವದ ಸಂಕೇತವೇ ಆಗಿದ್ದ ಅವರು, ಕೇವಲ 23 ವರ್ಷಗಳ ಅವಧಿಯಲ್ಲಿ ಅರಬ್ ಸಾಮ್ರಾಜ್ಯದಲ್ಲಿ ಮಹತ್ತರ ಬದಲಾವಣೆಯನ್ನೇ ತಂದರು. ‘ತೂಕ ಮತ್ತು ಅಳತೆಯಲ್ಲಿ ನ್ಯಾಯಪಾಲಿಸಿರಿ, ವ್ಯಾಪಾರದಲ್ಲಿ ಜನರನ್ನು ವಂಚಿಸಬೇಡಿ; ಒಂದೊಮ್ಮೆ ವಂಚಿಸಿದಲ್ಲಿ, ನಾಳೆ ಪರಲೋಕದಲ್ಲಿ ದೇವನು ನಿಮ್ಮನ್ನು ವಿಚಾರಣೆಗೆ ಒಳಪಡಿಸುವನು. ಕಾರ್ವಿುಕರಿಗೆ ದಕ್ಕಬೇಕಾದ ವೇತನ/ಪ್ರತಿಫಲವನ್ನು ಅವರ ಬೆವರು ಆರುವುದಕ್ಕೆ ಮುಂಚೆಯೇ ನೀಡಿಬಿಡಿ’ ಎಂದೆಲ್ಲ ಮಾರ್ಗದರ್ಶನ ನೀಡುವ ಮೂಲಕ ಗ್ರಾಹಕರ ಮತ್ತು ಕಾರ್ವಿುಕರ ಹಕ್ಕುಗಳ ಪ್ರತಿಪಾದಕರಾಗಿಯೂ ಹೊಮ್ಮಿದರು.

ವಿರೋಧಿಗಳೆನಿಸಿಕೊಂಡವರ ಮನಃಪರಿವರ್ತನೆ ಮಾಡುವಲ್ಲಿ ಮುಹಮ್ಮದರು ಅನುಸರಿಸುತ್ತಿದ್ದ ಹಾದಿ ವಿಶಿಷ್ಟವಾಗಿತ್ತು- ಅವರು ದಾರಿಯಲ್ಲಿ ನಡೆದುಕೊಂಡು ಬರುವಾಗ ಒಂದು ಕಡೆ ಕಲ್ಲುಮುಳ್ಳುಗಳನ್ನು ಹಾಕುವುದು ಸಾಮಾನ್ಯವಾಗಿತ್ತು, ಅದನ್ನು ಮಾಡುತ್ತಿದ್ದುದು ಓರ್ವ ಹುಡುಗಿ! ಒಂದು ದಿನ ಹಾದಿಯಲ್ಲಿ ಹೀಗೆ ಮುಳ್ಳುಗಳು ಕಾಣದೆ ವಿಚಾರಿಸಲಾಗಿ, ಆಕೆ ಅಸ್ವಸ್ಥಳಾಗಿ ಮಲಗಿರುವ ವಿಷಯ ತಿಳಿಯಿತು. ಕೂಡಲೇ ಆಕೆಯ ಮನೆಗೆ ತೆರಳಿದ ಪ್ರವಾದಿ, ಬಾಲಕಿಯ ಆರೋಗ್ಯ ಬೇಗ ಸುಧಾರಿಸಲಿ ಎಂದು ಪ್ರಾರ್ಥಿಸಿದರು. ಮುಹಮ್ಮದರ ಈ ವರ್ತನೆಯಿಂದ ಪ್ರಭಾವಿತಳಾದ ಆ ಬಾಲಕಿ, ಅವರ ಅನುಯಾಯಿಯಾಗಿ ಮಾರ್ಪಟ್ಟಳು.

ಒಮ್ಮೆ ಮುಹಮ್ಮದರಿಗೆ ಹಣದ ಅಗತ್ಯ ಎದುರಾದಾಗ, ತಮ್ಮ ಯುದ್ಧಕವಚವನ್ನು ಯಹೂದಿಯ ಬಳಿ ಅಡವಿಟ್ಟು ಹಣ ಪಡೆದಿದ್ದರು. ಆ ಸಮಯದಲ್ಲಿ ಧನಿಕ ಮುಸ್ಲಿಮರು ಇದ್ದರೂ ಯಹೂದಿಗಳೆಡೆಗೆ ಸೌಹಾರ್ದಭಾವ ಹೊಮ್ಮಿಸಿ ಸಂಬಂಧವನ್ನು ಸದೃಢಗೊಳಿಸುವುದು ಈ ನಡೆಯ ಹಿಂದಿನ ಆಶಯವಾಗಿತ್ತು.

ಸಮಾಜಸೇವೆಯ ವಿಷಯದಲ್ಲೂ ಮುಹಮ್ಮದರದ್ದು ಅನುಪಮ ಕೊಡುಗೆಯೇ. ಒಮ್ಮೆ ವೃದ್ಧೆಯೊಬ್ಬಳು ಮೂಟೆ ಹೊರಲು ಇನ್ನಿಲ್ಲದಂತೆ ಹೆಣಗುತ್ತಿದ್ದಾಗ ನೆರವಾದ ಮುಹಮ್ಮದರು ಅದನ್ನು ಹೊತ್ತು ಆಕೆಯ ಮನೆವರೆಗೂ ತಲುಪಿಸಿದರು. ಮಾರ್ಗಮಧ್ಯದಲ್ಲಿ ಆಕೆ, ‘ನೋಡಪ್ಪಾ, ಇಲ್ಲಿ ಮುಹಮ್ಮದ್ ಎಂಬೋರ್ವನಿದ್ದಾನೆ, ಆತ ನಮ್ಮ ದೇವರನ್ನು ಟೀಕಿಸುತ್ತಾನಂತೆ. ನೀನು ಆತನ ಜಾಲಕ್ಕೆ ಬೀಳಬೇಡ’ ಎಂದಾಗ ಪ್ರವಾದಿ ನಗುತ್ತ ‘ನಾನೇ ಆ ವ್ಯಕ್ತಿ’ ಎಂದಾಗ ಅಚ್ಚರಿಗೊಂಡ ವೃದ್ಧೆ ಪ್ರವಾದಿಯ ಅನುಯಾಯಿಯಾದಳು.

ಹೀಗೆ, ತಮ್ಮ ವಿರುದ್ಧ ಸಮರ ಸಾರಿದ, ಕೀಟಲೆ-ಕಿರುಕುಳ ನೀಡಿದ ಮಂದಿಗೆ ಮುಹಮ್ಮದರು ಕ್ಷಮಾದಾನ ನೀಡಿದ ಉದಾಹರಣೆಗಳು ಸಾಕಷ್ಟಿವೆ. ತಾಯಿಫ್​ನಲ್ಲಿ ಪುಂಡು-ಪೋಕರಿ ಮಕ್ಕಳು ಅವರ ಮೇಲೆ ಕಲ್ಲೆಸೆದು ರಕ್ತಸಿಕ್ತಗೊಳಿಸಿದಾಗ, ತೀವ್ರವಾಗಿ ಘಾಸಿಗೊಂಡ ಮುಹಮ್ಮದರು ಆಶ್ರಯಕ್ಕೆಂದು ಮರದ ನೆರಳಿಗೆ ತೆರಳಿದರು. ಆಗ ದೇವದೂತರು ಪ್ರತ್ಯಕ್ಷರಾಗಿ ಆ ಪುಂಡರನ್ನು ಶಿಕ್ಷಿಸಲು ಮುಂದಾದಾಗ ಅವರನ್ನು ತಡೆದ ಮುಹಮ್ಮದರು ಶಾಪಕ್ಕೆ ಬದಲಾಗಿ ತಾಯಿಫ್ ಜನಾಂಗದ ಪರವಾಗಿ ಪ್ರಾರ್ಥಿಸಿ ಹೃದಯವಂತಿಕೆ ಮೆರೆದರು. ಯುದ್ಧಭೂಮಿಯಲ್ಲೂ ಕರುಣಾಳುವಾಗಿದ್ದ ಮಹಾನ್ ಚೇತನ ಅವರು. ಒಮ್ಮೆ ಯುದ್ಧವೊಂದರಲ್ಲಿ ಶತ್ರುಸೇನೆಯ ಮಕ್ಕಳೂ ಹತರಾದಾಗ, ಅವರ ಕಳೇಬರದ ಬಳಿ ಮುಹಮ್ಮದರು ರೋದಿಸುತ್ತಿದ್ದುದು ಕಂಡ ಸಂಗಡಿಗರು, ‘ಅವರು ಶತ್ರುಸೇನೆಯವರಲ್ಲವೇ? ದುಃಖವೇಕೆ?’ ಎಂದು ಪ್ರಶ್ನಿಸಿದಾಗ, ‘ಅವರೂ ಅಲ್ಲಾಹುವಿನ ಸೃಷ್ಟಿಗಳೇ. ಆ ಮಕ್ಕಳು ಏನು ತಪು್ಪ ಮಾಡಿದ್ದಾರೆ? ಎಂದು ಹೇಳಿ, ‘ಯುದ್ಧಭೂಮಿಯಲ್ಲಿ ಶತ್ರುಗಳ ಮಕ್ಕಳು-ಮಹಿಳೆಯರನ್ನು ಕೊಲ್ಲದಿರಿ’ ಎಂದು ತಮ್ಮವರಿಗೆ ತಾಕೀತುಮಾಡಿದರು. ಅಲ್ಲದೆ, ತಮ್ಮ ಪ್ರೀತಿಯ ಚಿಕ್ಕಪ್ಪರನ್ನು ವಧಿಸಿ ಅವರ ಕರುಳನ್ನು ಜಗಿದ ಓರ್ವ ಮಹಿಳೆಯನ್ನೂ ಕ್ಷಮಿಸಿದ ಮುಹಮ್ಮದರು, ಮಕ್ಕಾ ವಿಜಯದ ಸಂದರ್ಭದಲ್ಲಿ ತಮ್ಮೆದುರು ದೈನ್ಯವಾಗಿ ನಿಂತಿದ್ದ, ಕಳವಳಗೊಂಡಿದ್ದ ಸೆರೆಯಾಳುಗಳನ್ನು ಕ್ಷಮಿಸಲೂ ಹಿಂಜರಿಯಲಿಲ್ಲ. ಅವರು ಮಾಡಿದ್ದ ದ್ರೋಹ, ಹಿಂಸೆ ಎಲ್ಲವನ್ನೂ ಮರೆತು ಕ್ಷಮಾದಾನ ನೀಡಿ ಸ್ವತಂತ್ರಗೊಳಿಸಿದರು.

ಅಂಧಕಾರದಲ್ಲೇ ದಿನದೂಡುತ್ತಿದ್ದ ಸಮಾಜದಲ್ಲಿ ಪ್ರವಾದಿ ಮುಹಮ್ಮದರು ಬೆಳಕು ತುಂಬಿದರು. ಕುಟುಂಬ ವ್ಯವಹಾರ, ದಾಂಪತ್ಯ ಜೀವನ ಹೇಗಿರಬೇಕು, ಮಾತಾಪಿತರು-ಮಕ್ಕಳು- ನೆರೆಹೊರೆಯವರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಸಿದರು. ವ್ಯಾಪಾರ ರಂಗದಲ್ಲೂ ಮಾದರಿಯಾಗಿದ್ದರು. ಆದ್ದರಿಂದ ಅವರ ಸಂದೇಶಗಳು ಎಲ್ಲ ಕಾಲಕ್ಕೂ, ಎಲ್ಲ ಪ್ರದೇಶಗಳಿಗೂ ಅನುಸರಣೆಗೆ ಯೋಗ್ಯವಾಗಿವೆ. ಆದ್ದರಿಂದಲೇ ಮುಸ್ಲಿಮರು ಅವರನ್ನು ಅತ್ಯಂತ ಗೌರವಾದರಗಳಿಂದ ಸ್ಮರಿಸುತ್ತಾರೆ. ಅವರ ಹೆಸರು ಹೇಳಿದರೆ ‘ಸ್ವಸ್ತಿವಚನ’ ಹೇಳುತ್ತಾರೆ.

ತಮ್ಮ ಜನ್ಮದಿನವನ್ನು ಆಚರಿಸಿರಿ ಎಂದು ಪ್ರವಾದಿ ಮುಹಮ್ಮದರು ಎಂದೂ ಹೇಳಿಲ್ಲ, ಅದನ್ನು ಅವರು ಬಯಸಿಯೂ ಇರಲಿಲ್ಲ. ಆಡಂಬರ-ದುಂದುವೆಚ್ಚಗಳ ವಿರೋಧಿಯಾಗಿದ್ದ ಅವರ ಉದಾತ್ತ ಗುಣಗಳ ಅನುಸರಣೆಯಾಗಬೇಕಿದೆ; ಅವರ ಶ್ರೇಷ್ಠತೆಯನ್ನು ಸಮಾಜಕ್ಕೆ ಪರಿಚಯಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯ ಪ್ರಯತ್ನಿಸಬೇಕು.

(ಲೇಖಕರು ಹವ್ಯಾಸಿ ಬರಹಗಾರರು)