ಸಂತಸ ಪಡೆಯುವ ಮಾರ್ಗ ಯಾವುದು?

| ಶಾಂತಾ ನಾಗರಾಜ್

# ನಾನು 48ರ ಮಹಿಳೆ. ಶಿಕ್ಷಕಿಯಾಗಿದ್ದೇನೆ. ಮದುವೆಯಾದ ಒಂದೇ ವರ್ಷಕ್ಕೇ ಗಂಡ ತೀರಿಹೋದರು. ಒಂದು ಗಂಡು ಮಗುವಿತ್ತು. ಮಗನನ್ನು ತಾಯಿಯಾಗಿ, ತಂದೆಯಾಗಿ ಬೆಳೆಸಿದೆ. ಈಗ ಮಗ ಉದ್ಯೋಗಸ್ಥನಾಗಿ, ಹೆಂಡತಿ ಮತ್ತು ಮಗುವಿನೊಂದಿಗೆ ಸುಖವಾಗಿದ್ದಾನೆ. ನಾನು ಶ್ರದ್ಧೆಯಿಂದ ನನ್ನ ಕರ್ತವ್ಯ ಮಾಡುತ್ತೇನೆ. ಆದರೆ, ಮನೆಗೆ ಬಂದೊಡನೆಯೇ ಒಂಟಿತನ ಕಾಡುತ್ತದೆ. ನನ್ನ ಸುಖ, ದುಃಖ, ನೋವು ನಲಿವು ಇವುಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲವೆನಿಸುತ್ತದೆ. ನನ್ನ ಸಹೋದ್ಯೋಗಿಗಳೆಲ್ಲರೂ ತುಂಬ ಒಳ್ಳೆಯವರು. ‘ನಾವಿದ್ದೇವೆ ನಿನ್ನ ಜತೆಗೆ’ ಎನ್ನುತ್ತಾರೆ. ಆದರೆ ಅವರ ಮನೆಗಳಿಗೆ ಪದೇ ಪದೆ ಹೋಗುವುದೂ ಸರಿಯಲ್ಲ. ಅವರಿಗೆ ಅವರದ್ದೇ ಆದ ಸಂಸಾರವಿದೆ. ಗಂಡ-ಮಕ್ಕಳಿದ್ದಾರೆ. ಅವರ ಜಗತ್ತೇ ಬೇರೆ. ನಾನಲ್ಲಿ ಹೋದರೆ ಪರಕೀಯಳಾಗುತ್ತೇನೆ. ಆದ್ದರಿಂದ ನಾನು ಇಂಥ ಪ್ರಯತ್ನಗಳನ್ನು ಮಾಡುವುದಿಲ್ಲ. ನನಗೀಗ ಬರುತ್ತಿರುವ ಭಾವನೆಗಳೆಂದರೆ ‘ನಾನು ಎಷ್ಟು ದುಡಿದರೂ ವೇಸ್ಟ್, ನಾನು ಯಾರಿಗೋಸ್ಕರ ದುಡಿಯಬೇಕು? ಯಾರಿಗೋಸ್ಕರ ಬದುಕಬೇಕು?’ ಎಂದು. ನನಗೆ ಜೀವನದಲ್ಲಿ ಸುಖ ಸಂತೋಷಗಳೇ ಇಲ್ಲ. ನನ್ನ ಹಾಗೆ ಗಂಡ ಇಲ್ಲದವರು, ಹೆಂಡತಿ ಇಲ್ಲದವರು, ಮಧ್ಯವಯಸ್ಸಿನವರು, ಇತ್ತ ಮರುಮದುವೆಯಾಗುವುದಕ್ಕೂ ಆಗದೆ, ಅತ್ತ ಏಕಾಂಗಿಯಾಗಿ ಬದುಕಲೂ ಆಗದೆ ಇರುವವರು ಬಹಳ ಜನರಿರಬಹುದು. ಇಂಥವರಿಗೆ ಸಂತೋಷ ಸಿಗುವ ಮಾರ್ಗವೇನಾದರೂ ಇದ್ದರೆ ದಯವಿಟ್ಟು ಹೇಳಿ.

ನಿಮ್ಮ ಪತ್ರದ ಕೊನೆಯ ಪ್ಯಾರಾ ನನಗೆ ತುಂಬ ಇಷ್ಟವಾಯಿತು. ಇಲ್ಲಿ ಸ್ಥಳದ ಆಭಾವ ಇರುವುದರಿಂದ ಅಷ್ಟನ್ನೂ ಬರೆಯಲಾಗಿಲ್ಲ. ನೀವು ನಿಮ್ಮೊಬ್ಬರಿಗೆ ಸಂತೋಷದ ದಾರಿ ಅರಸದೇ ‘ನನ್ನಂತೆ ಏಕಾಂಗಿಯಾಗಿರುವ ಎಲ್ಲರಿಗೂ ಸಂತೋಷದ ದಾರಿ ತೋರಿಸಿ’ ಎಂದು ಕೇಳಿರುವುದು, ನಿಮ್ಮ ಹೃದಯ ಅದೆಷ್ಟು ದಯಾಪರ ಎನ್ನುವುದನ್ನು ತೋರಿಸುತ್ತದೆ. ನಾವೀಗ 40 ವರ್ಷದ ಹಿಂದಿನ ಜೀವನದ ಬಗ್ಗೆ ಯೋಚಿಸೋಣ. ಆಗ ಪ್ರತಿ ಮನೆಯಲ್ಲೂ ಗಂಡ ಹೆಂಡತಿಯ ಜತೆ ನಾಲ್ಕಾರು ಮಕ್ಕಳು ಇರುತ್ತಿದ್ದವು. ಗಂಡನಿಗೆ ಕೇವಲ ದುಡಿದು ಎಲ್ಲರ ಹೊಟ್ಟೆ ತುಂಬಿಸುವ ಕಾಯಕವೇ ಕೈತುಂಬ ಇರುತ್ತಿತ್ತು. ಹೆಂಡತಿಗೆ ಅಡುಗೆಮನೆಯೇ ಸರ್ವಸ್ವವಾಗಿ ಹಗಲೂ ರಾತ್ರಿ ಮನೆಯವರ ಊಟ ಉಪಚಾರಗಳಲ್ಲೇ ಕಾಲ ಕಳೆದುಹೋಗುತ್ತಿತ್ತು. ಈ ಏಕತಾನತೆಯನ್ನು ಮುರಿಯಲು ಆಗಾಗ್ಗೆ ಹಬ್ಬ, ಹುಣ್ಣಿಮೆ, ಊರದೇವರ ಜಾತ್ರೆ, ಮದುವೆ ಮುಂತಾದ ಸಮಾರಂಭಗಳು, ನೆಂಟರ ಆಗಮನ ಇತ್ಯಾದಿ ಇದ್ದವು. ಆಗಲೂ ಮನೆಯ ಯಜಮಾನನಿಗೆ ಹೆಚ್ಚು ಗಳಿಸುವ ಜವಾಬ್ದಾರಿಯೂ, ಗೃಹಿಣಿಗೆ ಹೆಚ್ಚು ಅಡುಗೆ ತಿಂಡಿಗಳ ಜವಾಬ್ದಾರಿಯೂ ಹೆಗಲೇರುತ್ತಿತ್ತು. ಅದನ್ನವರು ಸಂತೋಷದಿಂದಲೇ ನಿರ್ವಹಿಸುತ್ತಿದ್ದರು. ಸ್ವಂತಕ್ಕೆ ಸರಳ ಬದುಕನ್ನು ಆರಿಸಿಕೊಳ್ಳುತ್ತಿದ್ದರು. ಬೇರೆಯವರಿಗಾಗಿಯೇ ದುಡಿದು ಬದುಕುತ್ತಿದ್ದರು. ಈಗ ಏನಾಗಿದೆ? ಸ್ವಲ್ಪ ಚಿಂತಿಸಿ. ನಾವು ಕೇವಲ ನಮಗಾಗಿಯೇ ಬದುಕುತ್ತಿದ್ದೇವೆ. ಮಕ್ಕಳ ಸಂಖ್ಯೆ ಒಂದು ಎರಡಕ್ಕೆ ಇಳಿದಿದೆ. ಹಕ್ಕಿಗಳು ರೆಕ್ಕೆಪುಕ್ಕ ಬೆಳೆದ ಮೇಲೆ ಗೂಡುಬಿಟ್ಟು ಹಾರಿಹೋಗುವ ಹಾಗೆ ಮಕ್ಕಳು ಮನೆಯಿಂದ ದೂರಾಗುತ್ತಿದ್ದಾರೆ. ಖಾಲಿ ಗೂಡಿನಲ್ಲಿ ಗಂಡ ಅಥವಾ ಹೆಂಡತಿ ಒಂಟಿಯಾಗಿ ಬದುಕುತ್ತಿದ್ದಾರೆ. ಇದನ್ನು ನಿವಾರಿಸಲು ನಮ್ಮ ಚಿಂತನಶೈಲಿಯನ್ನು ಬದಲಿಸಿಕೊಳ್ಳಬೇಕು. ನಮ್ಮ ದೃಷ್ಟಿಕೋನಗಳನ್ನು ಬದಲಿಸಿಕೊಳ್ಳಬೇಕು. ಮೊದಲು ಸರಳ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ಈ ಬದುಕಿಗೆ ಸಾಕಾಗಿ ನಮ್ಮ ಹತ್ತಿರ ಇನ್ನೂ ಹಣ ಉಳಿದರೆ ಅದನ್ನು ಅರ್ಹರಿಗೆ, ಅಗತ್ಯವಿರುವವರಿಗೆ ಕೊಡುವ ಉದಾರತೆಯನ್ನು ಬೆಳೆಸಿಕೊಳ್ಳಬೇಕು. ಹಣವಿಲ್ಲವೇ? ಪರವಾಗಿಲ್ಲ, ನಮ್ಮ ಹತ್ತಿರ ವಿದ್ಯೆಯಿದೆಯಲ್ಲ? ಬೇಕಾದಷ್ಟು ಸಮಯವಿದೆಯಲ್ಲ? ಅದನ್ನೂ ಬೇರೆಯವರಿಗಾಗಿ ವ್ಯಯಿಸಬಹುದಲ್ಲವೇ? ಉದಾಹರಣೆಗೆ, ನೀವೀಗ ಶಿಕ್ಷಕಿ, ನಿಮ್ಮ ಶಾಲೆಯಲ್ಲಿ ದೂರದ ಊರಿನಿಂದ ಶಾಲೆಗೆ ಬರುವ ಬಡ ಹೆಣ್ಣುಮಕ್ಕಳಿರಬಹುದಲ್ಲವೇ? ಅಂಥಾ ಒಂದೆರಡು ಮಕ್ಕಳಿಗೆ ನಿಮ್ಮ ಮನೆಯಲ್ಲಿ ಆಶ್ರಯಕೊಡಬಹುದಲ್ಲ? ನೀವು ಮಾಡುವ ಸರಳ ಊಟವನ್ನು ಅವರಿಗೂ ಮೂರು ಹೊತ್ತು ಕೊಡುವಷ್ಟು ಸೌಲಭ್ಯವನ್ನು ಭಗವಂತ ನಿಮಗೆ ಕೊಟ್ಟಿದ್ದಾನೆ ಅಲ್ಲವೇ? ‘ನಾನು ಯಾರಿಗಾಗಿ ದುಡಿಯಬೇಕು?’ ಎನ್ನುವ ನಿಮ್ಮ ಪ್ರಶ್ನೆಗೆ ಇಂಥದ್ದೊಂದು ಉತ್ತರ ಕಂಡುಕೊಳ್ಳಬಹುದಲ್ಲವೇ? ಒಂದೆರಡು ಹೆಣ್ಣುಮಕ್ಕಳ ಬದುಕನ್ನು ಹಸನಗೊಳಿಸಲು ನಾನು ದುಡಿಯುತ್ತಿದ್ದೇನೆ ಎನ್ನುವ ಭಾವ ಮನಸ್ಸಿಗೆ ಮುದಕೊಡುವುದಿಲ್ಲವೇ? ಇದು ಹಣದ ಬಾಬತ್ತಾಯಿತು. ನಿಮ್ಮ ಶಾಲೆಯಲ್ಲಿ ಅಷ್ಟೇನೂ ಜಾಣರಲ್ಲದ ಮಕ್ಕಳು ಇರಬಹುದು. ಅಂಥ ನಾಲ್ಕಾರು ಮಕ್ಕಳನ್ನು, ಶಾಲೆಯ ಸಮಯದ ನಂತರ ನಿಮ್ಮ ಮನೆಗೆ ಕರೆಸಿ ಅವರಿಗೆ ಪಾಠವನ್ನು ಉಚಿತವಾಗಿ ಹೇಳಬಹುದಲ್ಲವೇ? ಇದರಿಂದ ನಿಮ್ಮ ಸಮಯ ಮತ್ತು ವಿದ್ಯೆಯ ಸದುಪಯೋಗ ಆಗಬಹುದಲ್ಲವೇ? ನಾನು ಇವರಿಗೆಲ್ಲ ಬದುಕುತ್ತಿದ್ದೇನೆ ಎನ್ನುವ ತೃಪ್ತಿಯೇ ಎಷ್ಟೊಂದು ಸುಂದರವಲ್ಲವೇ? ಇಂಥ ನೂರೆಂಟು ಮಾರ್ಗಗಳು ನಿಮ್ಮ ಸುತ್ತಲೂ ಹಾಸಿಹೊದ್ದು ಬಿದ್ದಿವೆ. ಉದಾರಹೃದಯಿಗಳಿಗಾಗಿ ಕಾಯುತ್ತಲೂ ಇವೆ. ‘ನನ್ನ ಗಂಡನೇ ನನಗೆ ಸಂಗಾತಿಯಾಗಿ ಸಂತೋಷವನ್ನು ಕೊಡಬೇಕು, ಮಗ, ಮೊಮ್ಮಕ್ಕಳು ಸಂತೋಷ ಕೊಡಬೇಕು’ ಎಂದೆಲ್ಲ ಭಾವಿಸುವುದು ಒಂದು ರೀತಿ. ಆದರೆ ಸಂತೋಷ ಕೊಡಲು ನಮ್ಮ ಮಕ್ಕಳೇ ಆಗಬೇಕಿಲ್ಲ. ಯಾರಿಗೆ ನೀವು ಪ್ರೀತಿಯನ್ನು ಹಂಚುತ್ತೀರೋ ಅವರು ಅದರ ಎರಡರಷ್ಟು ಪ್ರೀತಿಯನ್ನು ನಿಮಗೆ ವಾಪಸ್ ಕೊಡುತ್ತಾರೆ. ಇಲ್ಲಿ ಒಂದು ಜಾಗ್ರತೆ ವಹಿಸಬೇಕು. ಈ ಕೆಲಸಗಳನ್ನೆಲ್ಲ ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳದೆ ಮಾಡಬೇಕು. ‘ಇವನಿಗೆ ನಾನು ಉಚಿತವಾಗಿ ಪಾಠ ಹೇಳಿದ್ದೇನೆ, ಇವೆನು ಕೆಲಸ ಸಿಕ್ಕಮೇಲೆ ನನಗೆ ಸೀರೆ ತಂದುಕೊಡಲಿ, ಇವಳನ್ನು ನನ್ನ ಮನೆಯಲ್ಲಿಟ್ಟು ಸಾಕಿದ್ದೇನೆ, ನಾಳೆ ಇವಳೂರಿನಲ್ಲಿ ನನಗೆ ಸನ್ಮಾನ ಮಾಡಲಿ’ ಹೀಗೆಲ್ಲ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಶುದ್ಧ ಮೂರ್ಖತನ. ನಾವೀಗ ಏನು ಮಾಡುತ್ತಿದ್ದೇವೋ ಅದು ಭಗವಂತನ ಪ್ರೀತಿಗಾಗಿ ಎಂದೇ ಭಾವಿಸಿ ಕೆಲಸ ಮಾಡಿದರೆ ಸಂತೋಷ ತಾನಾಗಿಯೇ ನಮ್ಮದಾಗುತ್ತದೆ.