More

    ಆಶಾ ಪಾರೆಖ್​ ಎಂಬ ಅಚ್ಚಳಿಯದ ನಕ್ಷತ್ರ

    ಆಶಾ ಪಾರೆಖ್​ 1959ರಿಂದ 1973ರವರೆಗೆ 14 ವರ್ಷ ಕಾಲ ಅಕ್ಷರಶಃ ಬಾಲಿವುಡ್​ ಆಳಿದರು. ರಾಜೇಶ್​ ಖನ್ನಾ, ವಿನೋದ್​ ಖನ್ನಾ, ಶತ್ರ್ನು ಸಿನ್ಹಾ, ಅಮಿತಾಬ್​ ಬಚ್ಚನ್​ರಂಥವರು ಬಾಲಿವುಡ್​ನಲ್ಲಿ ಸೂಪರ್​ಸ್ಟಾರ್​ಗಳಾಗುವ ಮುನ್ನವೇ ಆಶಾ ಪಾರೆಖ್​ ಹೀರೋಗಳಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುತ್ತಿದ್ದರು.

    ಇವಳು ಸ್ಟಾರ್​ ಮೆಟೀರಿಯಲ್​ ಅಲ್ಲ.
    ಇನ್ನೂ ಹದಿನಾರು ವರ್ಷದ ಹುಡುಗಿ. ಚಂದನದ ಗೊಂಬೆಯಂಥ ಅಪರೂಪದ ಸುಂದರಿ. ಆದರೆ, ಹೀರೋಯಿನ್​ ಮಾಡುತ್ತೇನೆ ಬಾ ಎಂದು ಕರೆದಿದ್ದ ಆ ನಿರ್ದೇಶಕ ಮೂರು ದಿನ ಬಳಿಕ ನೀನು ಹೀರೋಯಿನ್​ ಮೆಟೀರಿಯಲ್​ ಅಲ್ಲ ಎಂದು ತಿರಸ್ಕರಿಸಿಬಿಟ್ಟಿದ್ದರು. ವೃತ್ತೀಜಿವನದ ಮೊದಲ ಹೆಜ್ಜೆಯಲ್ಲೆ ಎಂಥ ಅವಮಾನ? ಕಾಲಕೆಳಗಿನ ನೆಲ ಕುಸಿಯುವ ಅನುಭವ..

    ಆಶಾ ಪಾರೆಖ್​ ಎಂಬ ಅಚ್ಚಳಿಯದ ನಕ್ಷತ್ರಇದು ನಡೆದಿದ್ದು 1959ರಲ್ಲಿ. “ಗೂಂಜ್​ ಉಟಿ ಶಹನಾಯಿ’ ಎಂಬ ಚಿತ್ರದಲ್ಲಿ. ರಾಜೇಂದ್ರ ಕುಮಾರ್​ ಎದುರು ಆ ಹುಡುಗಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ನಿರ್ದೇಶಕ ವಿಜಯ್​ ಭಟ್​ ಏಕಾಏಕಿ ತಿರಸ್ಕರಿಸಿಬಿಟ್ಟಿದ್ದರು. ಆ ಹುಡುಗಿಯ ಹೆಸರು ಆಶಾ ಪಾರೆಖ್​.

    ಆದರೆ, ಅವಕಾಶದ ಒಂದು ಬಾಗಿಲು ಮುಚ್ಚಿದರೆ, ನೂರು ಬಾಗಿಲು ತೆರೆಯುತ್ತವೆ. ಆಶಾ ವಿಷಯದಲ್ಲೂ ಹಾಗೇ ಆಯಿತು. ಕೆಲವೇ ದಿನಗಳಲ್ಲಿ ಮತ್ತೋರ್ವ ಪ್ರಸಿದ್ಧ ನಿರ್ಮಾಪಕ&ನಿರ್ದೇಶಕ ನಾಸಿರ್​ ಹುಸೇನ್​ ಅವರಿಂದ ಕರೆ ಬಂದಿತ್ತು. ಪ್ರಸಿದ್ಧ ನಟ ಶಮ್ಮಿ ಕಪೂರ್​ ಎದುರು “ದಿಲ್​ ದೇಕೆ ದೇಖೋ’ ಚಿತ್ರದಲ್ಲಿ ನಾಯಕಿಯಾಗಿ ಅವಕಾಶ ದೊರೆತಿತ್ತು. ಚಿತ್ರ ಸೂಪರ್​ಹಿಟ್​ ಆಗಿತ್ತು. ಆಶಾಗೆ ಮೊದಲ ಚಿತ್ರದಲ್ಲೆ ತಾರಾಪಟ್ಟ ಒಲಿದಿತ್ತು.
    ಆಶಾ ಪಾರೆಖ್​ ಬಾಲಿವುಡ್​ನ “ಹಿಟ್​ ಗರ್ಲ್​’ ಎಂದೇ ಪ್ರಸಿದ್ಧರಾದವರು. 1959ರಿಂದ 1973ರವರೆಗೆ 14 ವರ್ಷ ಕಾಲ ಆಕೆ ಅಕ್ಷರಶಃ ಬಾಲಿವುಡ್​ ಆಳಿದರು ಎಂದರೆ ತಪ್ಪಾಗಲಾರದು. ರಾಜೇಶ್​ ಖನ್ನಾ, ವಿನೋದ್​ ಖನ್ನಾ, ಶತ್ರ್ನು ಸಿನ್ಹಾ, ಅಮಿತಾಬ್​ ಬಚ್ಚನ್​ರಂಥವರು ಬಾಲಿವುಡ್​ನಲ್ಲಿ ಸೂಪರ್​ಸ್ಟಾರ್​ಗಳಾಗುವ ಮುನ್ನವೇ ಆಶಾ ಪಾರೆಖ್​ ಹೀರೋಗಳಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುತ್ತಿದ್ದರು. ಆಶಾ ಜತೆ ಮೊದಲ ಬಾರಿ ನಟಿಸುವಾಗ ರಾಜೇಶ್​ ಖನ್ನಾ, ಶತ್ರ್ನು ಸಿನ್ಹಾ, ಜಿತೇಂದ್ರ ಮೊದಲಾದವರು ಉದ್ಯಮದಲ್ಲಿ ಅನಾಮಿಕರಾಗಿದ್ದರು. ಆಶಾ ಜತೆ ಅಮಿತಾಬ್​ ಬಚ್ಚನ್​ ಚಿತ್ರವೊಂದರಲ್ಲಿ ನಟಿಸಬೇಕಿತ್ತಾದರೂ, ಆಕೆ ಹೊಸಬರ ಜತೆ ನಟಿಸಲು ನಿರಾಕರಿಸಿದ್ದಾರೆ ಎಂಬ ನಿರ್ಮಾಪಕರೊಬ್ಬರ ಎಡವಟ್ಟು ಹೇಳಿಕೆಯಿಂದ ಆ ಚಿತ್ರ ನಿಂತುಹೋಗಿತ್ತು. ಆಶಾ ತಮ್ಮ ಚಿತ್ರಕ್ಕೆ ಇಂಥವರೇ ನಾಯಕರಾಗಲಿ ಎಂದು ನಿರ್ದೇಶಕರಿಗೆ ಶಿಫಾರಸು ಮಾಡಿ ಜೈಸಿಕೊಳ್ಳುತ್ತಿದ್ದರು. ಯೋಗಾಯೋಗವೆಂದರೆ, ಆಶಾ ನಾಯಕಿಯಾಗಿ ನಟಿಸಿದ ಚಿತ್ರಗಳಲ್ಲಿ ವಿಫಲವಾಗಿದ್ದು ಕಡಿಮೆ. ಹಿಟ್​ ಚಿತ್ರಗಳೇ ಜಾಸ್ತಿ. 1960 ಮತ್ತು 70ರ ದಶಕಗಳಲ್ಲಿ ಅತೀ ಹೆಚ್ಚು ಹಿಟ್​ ಚಿತ್ರಗಳನ್ನು ಕೊಟ್ಟ ನಟಿ ಆಕೆ. ಹಾಗಾಗಿ, ಆ ಕಾಲದ ಪ್ರಮುಖ ನಿರ್ಮಾಪಕರು, ನಿರ್ದೇಶಕರು ಆಶಾ ಕಾಲ್​ಶೀಟ್​ಗೆ ಕಾದಿರುತ್ತಿದ್ದರು. ಆಶಾ ಆತ್ಮಕತೆಯ ಶೀರ್ಷಿಕೆ ಕೂಡ “ಹಿಟ್​ ಗರ್ಲ್​’.

    ತಕ್ಕಮಟ್ಟಿಗೆ ಅನುಕೂಲಸ್ಥರಾಗಿದ್ದ ಗುಜರಾತಿ ಕುಟುಂಬದಲ್ಲಿ ಆಶಾ ಜನಿಸಿದರು. ತಂದೆ ಬಚ್ಚುಬಾಯ್​ ಪಾರೆಖ್​. ಅಮ್ಮ ಸುಧಾ (ಸಲ್ಮಾ) ಮೂಲತ@ ಮುಸ್ಲಿಂ. ಚಿಕ್ಕವಯಸ್ಸಿನಲ್ಲೆ ಶಾಸ್ತ್ರೀಯ ನೃತ್ಯ ಕಲಿತಿದ್ದ 9 ವರ್ಷದ ಆಶಾ ನೃತ್ಯ ನೋಡಿ ಮೆಚ್ಚಿದ ಖ್ಯಾತ ನಿರ್ದೇಶಕ ಬಿಮಲ್​ ರಾಯ್​ ಬಾಲನಟಿಯಾಗಿ ತಮ್ಮ ಚಿತ್ರದಲ್ಲಿ ಅವಕಾಶ ನೀಡಿದರು. ಶಮ್ಮಿ ಕಪೂರ್​ ಆಶಾರ ನೆಚ್ಚಿನ ನಟರಾಗಿದ್ದರು. ಅವರು ಒಟ್ಟಿಗೆ 4 ಚಿತ್ರಗಳಲ್ಲಿ ನಟಿಸಿದ್ದರು. “ದಿಲ್​ ದೇಕೆ ದೇಖೋ’ ಚಿತ್ರದಲ್ಲಿ ವಹೀದಾ ರೆಹಮಾನ್​ ನಾಯಕಿಯಾಗಲಿ ಎಂದು ಶಮ್ಮಿ ಕಪೂರ್​ ಬಯಸಿದ್ದರು. ಆದರೆ, ನಿರ್ದೇಶಕರ ಒತ್ತಡಕ್ಕೆ ಮಣಿದು ಆಶಾರನ್ನು ಭೇಟಿ ಮಾಡಲು ಒಪ್ಪಿದ್ದರು. ಮೊದಲ ಭೇಟಿಯ ಸಂದರ್ಭದಲ್ಲಿ 16 ವರ್ಷದ ಆಶಾ ಹೆರಾಲ್ಡ್​ ರಾಬಿನ್ಸ್​ರ “ದಿ ಕಾರ್ಪೆಟ್​ ಬ್ಯಾಗರ್ಸ್​’ ಕಾದಂಬರಿ ಓದುತ್ತಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಕಾದಂಬರಿ ಓದುತ್ತಿದ್ದೀಯಾ ಎಂದು ಶಮ್ಮಿ ತಮಾಷೆಗೆ ಕೇಳಿದರು. ಪ್ರತಿಯಾಗಿ ಆಶಾ ಹೌದಾ ಚಾಚಾ (ಅಂಕಲ್​) ಎಂದು ಪ್ರಶ್ನಿಸಿದ್ದರು. ಇಬ್ಬರ ನಡುವೆ ಮೊದಲ ಭೇಟಿಯಲ್ಲೆ ಸ್ನೇಹ ಚಿಗುರೊಡೆದಿತ್ತು. ಶಮ್ಮಿ ಕೊನೆಯ ಉಸಿರಿರುವವರೆಗೂ ಆಶಾ ಆಪ್ತ ವಲಯದಲ್ಲಿದ್ದರು.

    ಜೀವನದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಬದುಕಿನ ಗತಿಯನ್ನೇ ಬದಲಾಯಿಸಿಬಿಡುತ್ತವೆ. ಆಶಾ ಜೀವನದಲ್ಲೂ ಹಾಗೆಯೇ ಆಯಿತು. 1970ರ ದಶಕದಲ್ಲಿ ವೃತ್ತೀಜಿವನದ ಉತ್ತುಂಗದಲ್ಲಿದ್ದಾಗಲೇ ಆಶಾ ವಿದೇಶಗಳಲ್ಲಿ ಡ್ಯಾನ್ಸ್​ ಟೂರ್​ ಮಾಡುವ ಸಲುವಾಗಿ ಹಲವು ಪ್ರಮುಖ ಚಿತ್ರಗಳನ್ನು ಒಪ್ಪಿಕೊಳ್ಳಲಿಲ್ಲ. 1973ರಲ್ಲಿ ಆಶಾ ಭಾರತಕ್ಕೆ ಮರಳುವ ಹೊತ್ತಿಗೆ ಬಾಲಿವುಡ್​ ಬದಲಾಗಿತ್ತು. ಅವರು ತಿರಸ್ಕರಿಸಿದ್ದ ಹಲವು ಚಿತ್ರಗಳು ಸೂಪರ್​ ಹಿಟ್​ ಆಗಿದ್ದವು. ಆ ಚಿತ್ರಗಳಲ್ಲಿ ಅವಕಾಶ ಪಡೆದಿದ್ದ ಹೇಮಾ ಮಾಲಿನಿ, ಜೀನತ್​ ಅಮಾನ್​ ಮೊದಲಾದವರು ತಾರಾಪಟ್ಟಕ್ಕೇರಿದ್ದರು. ಕಾಲ ಮಿಂಚಿಹೋಗಿತ್ತು. ಆಶಾ ವಯಸ್ಸು ಕೂಡ 35 ಮೀರಿತ್ತು. ಅಕ್ಕ&ಅಮ್ಮನ ಪಾತ್ರಗಳಿಗೆ ಅವರು ಒಗ್ಗಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಚಿತ್ರಗಳ ವಿತರಣೆ ವ್ಯವಹಾರದಲ್ಲಿ ತೊಡಗಿಸಿಕೊಂಡರು. 1990ರ ದಶಕದಲ್ಲಿ ಟಿವಿ ಧಾರಾವಾಹಿಗಳ ನಿರ್ದೇಶಕಿಯಾಗಿ ಯಶಸ್ಸು ಕಂಡುಕೊಂಡರು. 1998ರಿಂದ 2001ರ ಅವಧಿಯಲ್ಲಿ ಕೇಂದ್ರ ಸೆನ್ಸಾರ್​ ಬೋರ್ಡ್​ ಅಧ್ಯಕ್ಷ ಹುದ್ದೆಗೇರಿದ ಮೊದಲ ಮಹಿಳೆ ಎನಿಸಿದರು.

    ದಿಗ್ಗಜ ರಾಜ್​ ಕಪೂರ್​ ಜತೆ ನಟಿಸುವುದು ಆಶಾ ಜೀವನದ ದೊಡ್ಡ ಕನಸಾಗಿತ್ತು. ಅವರಿಬ್ಬರೂ ಒಟ್ಟಿಗೆ 1982ರಲ್ಲಿ “ಚೋರ್​ ಮಂಡಳಿ’ ಎಂಬ ಚಿತ್ರದಲ್ಲಿ ನಟಿಸಿದರೂ, ಅದು ಬಿಡುಗಡೆ ಆಗಲಿಲ್ಲ. ಲವ್​ ಇನ್​ ಟೋಕಿಯೊ (1966), ತೀಸ್ರಿ ಮಂಜಿಲ್​ (1966), “ದೋ ಬದನ್​’ (1966), “ಚಿರಾಗ್​’ (1969), “ಕಟಿ ಪತಂಗ್​’ (1970), “ಪಗ್ಲಾ ಕಹಿ ಕಾ’ (1970), ಕಾರಾವಾನ್​ (1971), “ಮೈ ತುಳಸಿ ಮೇರೆ ಆಂಗನ್​ ಕಿ’ (1978) ಆಶಾ ವೃತ್ತೀಜಿವನದ ಮೇರು ಚಿತ್ರಗಳು. ಪ್ರಮೋದ್​ ಚಕ್ರವರ್ತಿ, ವಿಜಯ್​ ಆನಂದ್​, ರಾಜ್​ ಖೋಸ್ಲಾ. ರುನಾಥ್​ ಜಲಾನಿ, ಮೊಹನ್​ ಸೆಹಗಲ್​, ಶಕ್ತಿ ಸಾಮಂತ, ಜೆಪಿ ದತ್ತಾರಂಥ ಸುಪ್ರಸಿದ್ಧ ದಿಗ್ದರ್ಶಕರ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು. ಆಶಾ ಸೌಂದರ್ಯ, ಅಭಿನಯಕ್ಕೆ ಮಾರು ಹೋಗಿದ್ದ ಸತ್ಯಜಿತ್​ ರೇ ಕೂಡ ಚಿತ್ರವೊಂದರ ಆರ್​ ನೀಡಿದ್ದರಾದರೂ, ಹಲವು ಚಿತ್ರ ಕೈಯಲ್ಲಿದ್ದ ಕಾರಣ ಅವರು ಒಪ್ಪಿಕೊಳ್ಳುವುದು ಸಾಧ್ಯವಾಗಿರಲಿಲ್ಲ.

    ಆಶಾ ನಟಿಯಾಗಿ ಎಷ್ಟೇ ಎತ್ತರಕ್ಕೇರಿದರೂ, ಸಾಂಸಾರಿಕ ಜೀವನ ಅವರ ಹಣೆಯಲ್ಲಿ ಬರೆದಿರಲಿಲ್ಲ. ಅಪ್ರತಿಮ ಸುಂದರಿ ಆಶಾ ಒಪ್ಪಿದ್ದರೆ ವರಗಳಿಗೆ ಕೊರತೆಯೇ? ಆದರೆ, ಅದೇನೋ, ಅವರ ಜೀವನ ಒಂಟಿಪಯಣವೇ ಆಗಿಹೋಯಿತು. ನಟ ಧಮೇರ್ಂದ್ರ&ಆಶಾ ಐದು ಸೂಪರ್​ಹಿಟ್​ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಏನೋ ಇದೆ ಎಂಬ ಗುಸುಗುಸು ಇತ್ತಾದರೂ, “ಅಂಥದ್ದೇನಿಲ್ಲ. ನಮ್ಮ ಸ್ನೇಹಕ್ಕೊಂದು ಗೆರೆ ಎಳೆದಿದ್ದೇನೆ. ಅದರಾಚೆಗೆ ದಾಟುವುದಿಲ್ಲ’ ಎಂದು ಆಶಾ ಹೇಳಿಕೆ ನೀಡಿದ್ದರು. ಆಶಾ ವೃತ್ತೀಜಿವನದಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ ನಿರ್ದೇಶಕ ನಾಸಿರ್​ ಹುಸೇನ್​. “ದಿಲ್​ ದೇಕೆ ದೇಖೋ’, “ಜಬ್​ ಪ್ಯಾರ್​ ಕಿಸೀಸೆ ಹೋತಾ ಹೈ’ (1961), “ಫಿರ್​ ವೊಹಿ ದಿಲ್​ ಲಾಯಾ ಹೂ’ (1963), “ತೀಸ್ರಿ ಮಂಜಿಲ್​’ (1966), “ಬಹಾರೋಂಕೆ ಸಪ್ನೆ’ (1967), “ಪ್ಯಾರ್​ ಕೆ ಮೌಸಮ್​’ (1969), “ಕಾರವಾನ್​’ (1971) ಹೀಗೆ ನಾಸಿರ್​ ನಿರ್ದೇಶನದ ಏಳು ಹಿಟ್​ ಚಿತ್ರಗಳಿಗೆ ಆಶಾ ನಾಯಕಿಯಾಗಿದ್ದರು. ಇಬ್ಬರೂ ಅತ್ಯಂತ ಆಪ್ತರಾಗಿದ್ದರು. ಆದರೆ, ಅವರ ಅನುಬಂಧದಲ್ಲೂ ವಿವಾಹ ಬರೆದಿರಲಿಲ್ಲ. ನಾಸಿರ್​ಗೆ ಅದಾಗಲೇ ಮದುವೆಯಾಗಿತ್ತು. ಅವರ ಸಂಸಾರ ಮುರಿಯುವುದು ಆಶಾಗೆ ಇಷ್ಟವಿರಲಿಲ್ಲ. ಇನ್ನು “ನಾಸಿರ್​ಗೆ ಹತ್ತಿರದವರು’ ಎಂಬ ಕಾರಣಕ್ಕೆ ಆ ಕಾಲದ ಹೆಚ್ಚಿನ ನಟರು ಆಶಾ ಮೇಲೆ ಆಸೆ ಇದ್ದರೂ ದೂರವೇ ಉಳಿದರು ಎಂಬ ಮಾತಿದೆ.

    1970ರ ದಶಕದಲ್ಲಿ ಅಮೆರಿಕದಲ್ಲಿದ್ದ ಭಾರತೀಯ ಪೊಫೆಸರ್​ ಒಬ್ಬರ ಜತೆ ಆಶಾ ವಿವಾಹ ನಿಶ್ಚಯವಾಗಿತ್ತು. ಇನ್ನೇನು ಮದುವೆ ನಡೆದೇಹೋಯಿತು ಎಂಬ ಹಂತದಲ್ಲಿ ಮುರಿದುಬಿತ್ತು. ಅಮೆರಿಕಕ್ಕೆ ತೆರಳಿದ್ದ ಆಶಾ ರಾತ್ರಿ 2 ಗಂಟೆ ಸುಮಾರಿಗೆ ಕೆಫೆಯಲ್ಲಿ ಕುಳಿತಿದ್ದಾಗ ಆ ಪೊಫೆಸರ್​ ಮಹಾಶಯ ಅಮಲಿನಲ್ಲಿ ಮಾತನಾಡುವಾಗ “ನನಗೂ ಅಮೆರಿಕನ್​ ಗರ್ಲ್​ ಫ್ರೆಂಡ್​ ಇದ್ದಾಳೆ. ನಮ್ಮಿಬ್ಬರ ನಡುವೆ ನೀನು ಅಡ್ಡಬಂದೆ’ ಎಂದುಬಿಟ್ಟಿದ್ದ. ಅಲ್ಲಿಗೆ ಆಶಾ ಭ್ರಮನಿರಸನಗೊಂಡು ಮಾರನೇ ದಿನವೇ ಭಾರತಕ್ಕೆ ಮರಳಿದ್ದರು. ಒಟ್ಟಿನಲ್ಲಿ “ಕಟಿ ಪತಂಗ್​’ ನಾಯಕಿಯ ಜೀವನ ಒಂಟಿ ಪಯಣವಾಯಿತು. ಆ ಕಾಲದಲ್ಲಿ ಸಹನಟರಾಗಿದ್ದ ರಾಜೇಶ್​ ಖನ್ನಾ, ವಿನೋದ್​ ಖನ್ನಾ ಮೊದಲಾದವರು ತಡರಾತ್ರಿ ಮೋಜುಮಸ್ತಿ ಮಾಡುತ್ತಾರೆ ಎಂದು ಅವರ ಗರ್ಲ್​ಫ್ರೆಂಡ್​ಗಳು ಶೂಟಿಂಗ್​ ಸೆಟ್​ನಲ್ಲಿ ಗಲಾಟೆ ಮಾಡುತ್ತಿದ್ದರಂತೆ. ಇದನ್ನೆಲ್ಲ ನೋಡಿದ್ದ ಆಶಾ ಮದುವೆ, ಗಂಡಸರು ಎಲ್ಲದರ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದರು ಎಂಬುದು ಅಂಬೋಣ. ಒಟ್ಟಿನಲ್ಲಿ ಋಣಾನುಬಂಧವೆನ್ನುವುದು ಇರಲಿಲ್ಲ ಅಷ್ಟೇ.

    ಅವಿವಾಹಿತೆ ಆಶಾ ಒಂಟಿತನದ ಬೇಸರ ಕಳೆಯಲು ತಮ್ಮದೇ ಆಪ್ತಬಳಗ ಸೃಷ್ಟಿಸಿಕೊಂಡಿದ್ದರು. ಅವರ ಸಮಕಾಲೀನ ನಟಿಯರಾದ ಸಾಧನಾ ಶಿವದಾಸಾನಿ, ನಂದಾ ಕರ್ನಾಟಕಿ, ವಹೀದಾ ರೆಹಮಾನ್​, ಹೆಲನ್​ ಮತ್ತು ನಿರ್ದೇಶಕ ಸುಲ್ತಾನ್​ ಅಹ್ಮದ್​ ಪತ್ನಿ ಶಮ್ಮಿ ಆ ಬಳಗದ ಸದಸ್ಯರು. 2013ರಲ್ಲಿ ಆಶಾ, ಹೆಲನ್​ ಮತ್ತು ವಹೀದಾ ಒಟ್ಟಿಗೆ ಅಂಡಮಾನ್​ ಟೂರ್​ ಹೋಗಿದ್ದರು. ದಿಲೀಪ್​ ಕುಮಾರ್​ ಎಂದರೆ ಆಶಾಗೆ ಪಂಚಪ್ರಾಣ. ಆದರೆ, ಅವರಿಬ್ಬರೂ ಒಟ್ಟಿಗೆ ನಟಿಸಲಿಲ್ಲ. 1985ರ “ಜರ್ಬದಸ್ತ್​’ ಚಿತ್ರದಲ್ಲಿ ಅವರು ಜತೆಯಾಗಬೇಕಿತ್ತಾದರೂ ಅದು ಸಾಧ್ಯವಾಗಲಿಲ್ಲ. ರಾಜೇಶ್​ ಖನ್ನಾ & ಆಶಾ ಪಾರೆಖ್​ ಅತ್ಯಂತ ಜನಪ್ರಿಯ ಜೋಡಿ ಎನಿಸಿತ್ತು. ಆದರೆ, ವ್ಯಕ್ತಿಗತವಾಗಿ ಅವರ ನಡುವೆ ಅಂಥ ಒಡನಾಟವೇನಿರಲಿಲ್ಲ. ಶತ್ರ್ನು ಸಿನ್ಹಾ, ಮನೋಜ್​ಕುಮಾರ್​ ಮೊದಲಾದ ನಟರೊಡನೆ ಆಶಾ ಕೆಲವು ಕಾಲ ಮುನಿಸಿಕೊಂಡಿದ್ದರೂ, ಮುಂದೆ ಒಳ್ಳೆಯ ಸ್ನೇಹಿತರೆನಿಸಿದರು.

    ಆಶಾ ಪಾರೆಖ್​ ಎಂದೊಡನೆ ನೆನಪಿಗೆ ಬರುವುದು ಅವರ ಮೇಲೆ ಚಿತ್ರೀಕರಿಸಿರುವ ಅಮರಗೀತೆಗಳು ಕೂಡ. “ಯೆ ಶಾಮ್​ ಮಸ್ತಾನಿ’ (ಕಟಿ ಪತಂಗ್​), “ಓ ಹಸೀನಾ ಝುಲ್ಫೋವಾಲಿ ಜಾನೆ ಜಹಾ’ (ತೀಸ್ರಿ ಮಂಜಿಲ್​), “ಅಚ್ಚಾ ತೊ ಹಮ್​ ಚಲ್ತೇ ಹೆ’ (ಆನ್​ ಮಿಲೊ ಸಜನಾ), “ಓ ಮೇರಾ ಸೋನಾ’ (ತೀಸ್ರಿ ಮಂಜಿಲ್​) ಹೀಗೆ ಒಂದೇ ಎರಡೇ. ನೂರಾರು ಲೋಕಪ್ರಿಯ ಹಾಡುಗಳು.
    ಒಟ್ಟಿನಲ್ಲಿ ಬಾಲಿವುಡ್​ನ ತಾರಾಕಾಶದಲ್ಲಿ ತಮ್ಮ ಪ್ರತ್ಯೇಕ ಮಂಡಲ ಸ್ಥಾಪಿಸಿಕೊಂಡಿರುವ ಆಶಾ ಪಾರೆಖ್​ ಅವರಿಗೆ ಅರ್ಹವಾಗಿಯೇ ಮೊನ್ನೆ ಪ್ರತಿಷ್ಠಿತ ದಾದಾ ಸಾಹೇಬ್​ ಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. ಭಾನುವಾರ (ಅ.2) ಅವರ 80ನೇ ಜನ್ಮದಿನ. ಖುಷಿಪಡುವುದಕ್ಕೆ ಇನ್ನೇನು ಬೇಕು? ಆಶಾ ಎಂಬ ಅಭಿನೇತ್ರಿಯ ಅಭಿನಯ ಚಿರಸ್ಮರಣೀಯವಾದರೆ, ನಟಿ, ನಿರ್ದೇಶಕಿ, ನಿರ್ಮಾಪಕಿ, ವಿತರಕಿ, ಸಮಾಜಸೇವಕಿಯಾಗಿ ವಿವಿಧ ರೀತಿಯಲ್ಲಿ ಅವರು ಸಲ್ಲಿಸಿದ, ಸಲ್ಲಿಸುತ್ತಿರುವ ಸೇವೆ ಅನುಕರಣೀಯ.

    ಅಂದಹಾಗೆ, ಆಶಾ ಪಾರೆಖ್​ ಕನ್ನಡದಲ್ಲೂ ಕುಮಾರ್​ ಬಂಗಾರಪ್ಪ ಅಭಿನಯದ “ಶರವೇಗದ ಸರದಾರ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವಿಶೇಷವೆಂದರೆ, ಈ ಚಿತ್ರಕ್ಕೆ ಅವರೇ ಸ್ವತ@ ಕನ್ನಡದಲ್ಲಿ ಡಬ್​ ಮಾಡಿದ್ದರು.
    ಅಭಿನಂದನೆಗಳು ಆಶಾಜಿ.

    (ಲೇಖಕರು “ವಿಜಯವಾಣಿ’ ಡೆಪ್ಯೂಟಿ ಎಡಿಟರ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts