ಪ್ರಿಯೆ ಚಾರುಶೀಲೆ… ಜಯದೇವ ಕವಿಯ ಜಗನ್ನಾಥ ಲೀಲೆ!

ಆದಿ ಶಂಕರಾಚಾರ್ಯರ ಭಜಗೋವಿಂದಂ ಮತ್ತು ಜಯದೇವ ಕವಿಯ ಗೀತಗೋವಿಂದಂ ಭಗವದ್ಭಕ್ತಿಯ ಕಡೆಗೆ ಜನಮಾನಸವನ್ನು ಸೆಳೆಯುವ ಕಾಲಾತೀತ ಅನನ್ಯ ಕೃತಿರತ್ನಗಳು. ಭಜಗೋವಿಂದಂ ವೈರಾಗ್ಯ ಮಾರ್ಗದಲ್ಲಿ ಭಕ್ತಿಯನ್ನು ಬೋಧಿಸಿದರೆ, ಗೀತಗೋವಿಂದಂ ಶೃಂಗಾರಭಕ್ತಿಯ ಮೂಲಕ ದೈವಾನುಗ್ರಹದ ದಾರಿ ತೋರಿಸುತ್ತದೆ. 12ನೇ ಶತಮಾನದ ಮೇರುಕವಿ ಜಯದೇವನ ಗೀತಗೋವಿಂದ ಭಕ್ತಿವೈರಾಗ್ಯ ಶೃಂಗಾರದ ವಿಲಾಸಗಳನ್ನು ಏಕೀಭವಿಸಿ ರಚಿತಗೊಂಡ ಅನುಪಮ ಕಾವ್ಯ. ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಎಂಬ ನಾಲ್ಕು ವಿಧದ ಅಭಿನಯಗಳಿಗೆ ಹೇಳಿಮಾಡಿಸಿದ ಈ ಕಾವ್ಯ ದೇಶದ ಪ್ರಾರಂಭಿಕ ಸಂಗೀತರೂಪಕವೂ ಹೌದು. ಪುರಿಯ ಜಗನ್ನಾಥ ದೇವರು ರಾಧಾ ಹಾಗೂ ಮಾಧವನ ಐಕ್ಯರೂಪ ಎಂದು ಹಾಡಿಹೊಗಳಿದ ಮೊದಲ ಕವಿ ಜಯದೇವ. ಆ ಕಾವ್ಯವೇ ಗೀತಗೋವಿಂದ. ಸದ್ಯ ಜಗತ್ಪ್ರಸಿದ್ಧ ಜಗನ್ನಾಥ ರಥೋತ್ಸವ ನಡೆಯುತ್ತಿರುವ ಪುರಿ ಧಾಮದಲ್ಲಿ ಜಯದೇವನ ಅಷ್ಟಪದಿಗಳ- ಗೀತಗೋವಿಂದದ ಸೊಬಗು ಮಾರ್ದನಿಸುತ್ತಿದೆ. ಯುಗದ ಕವಿಯ ಕುರಿತ ನೂರಾರು ಪವಾಡಗಳ ಪೈಕಿ ಕೆಲವು ಕಥೆಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.

**

ಭಕ್ತಕವಿ ಜಯದೇವನ ಭಕ್ತಿ ಹಾಗೂ ಗಾಯನವನ್ನು ಮೆಚ್ಚಿಕೊಂಡ ರಾಜನೊಬ್ಬ ಬೇಡವೆಂದರೂ ಕೇಳದೆ ಹೊರಲಾರದಷ್ಟು ಸಂಪತ್ತು, ಸ್ವರ್ಣ, ವಜ್ರ, ವೈಢೂರ್ಯದ ಹೊರೆ ಹೊರಿಸಿ ಕಳಿಸಿದ. ‘ದೇವರನ್ನು ನಂಬಿದವ ನಾನು. ನನಗೇಕಿಷ್ಟು ಸಂಪತ್ತು’ ಎಂದು ನಿರಾಕರಿಸಿದರೂ ರಾಜ ಕೇಳಲಿಲ್ಲ. ಮಣಬಾರದ ಹೊರೆಹೊತ್ತು ಏದುಸಿರುಬಿಡುತ್ತ ಹೊರಟ ಜಯದೇವ ಕಾಡಿನ ಹಾದಿಯಲ್ಲಿ ಅರ್ಧ ಕ್ರಮಿಸುವ ಹೊತ್ತಿಗೆ ದರೋಡೆಕೋರರ ತಂಡ ಎದುರಾಯಿತು. ಮಾರಕಾಸ್ತ್ರ ಹಿಡಿದು ಸುತ್ತುವರಿದ ದುಷ್ಟರನ್ನು ಕಂಡು ಜಯದೇವ ಯೋಚಿಸಿದ. ಇವರಂತೂ ಧನಪಿಶಾಚಿಗಳು. ಹಣಕ್ಕಾಗಿ ಕೊಲೆ ಮಾಡುವುದಕ್ಕೂ ಸೈ. ಹಣವನ್ನು ಇವರು ಒಯ್ದರೆ ಒಯ್ಯಲಿ, ಪ್ರಾಣವುಳಿದರೆ ಸಾಕೆಂದು ಯೋಚಿಸಿದ. ‘ನನಗೋ ವಯಸ್ಸಾಗಿದೆ. ಈ ಭಾರ ಹೊರುವುದು ಸಾಧ್ಯವಾಗುತ್ತಿಲ್ಲ. ಸಹಾಯ ಮಾಡಿ’ ಎಂದು ಹೊರೆಯನ್ನು ದರೋಡೆಕೋರರಿಗೊಪ್ಪಿಸಿದ. ಕಳ್ಳರಿಗೂ ಆಶ್ಚರ್ಯ. ಭಲೇ ಘಾಟಿ ಈ ಮುದುಕ. ತನ್ನ ಭಾರವನ್ನು ನಮ್ಮ ಮೇಲೆ ಹೊರಿಸಿದ್ದಾನೆ. ಊರು ತಲುಪಿದ ಮೇಲೆ ನಮ್ಮನ್ನು ರಾಜನಿಗೆ ಹಿಡಿದುಕೊಟ್ಟರೆ ಕೆಲಸ ಕೆಡುತ್ತದೆ ಎಂದು ಯೋಚಿಸಿದ ಅವರು ಜಯದೇವನ ಕೈಕಾಲು ಕತ್ತರಿಸಿ ಪಾಳು ಬಾವಿಗೆ ಎಸೆದು ಸಂಪತ್ತಿನೊಂದಿಗೆ ಪರಾರಿಯಾದರು.

ಇತ್ತ ನೀರಿಲ್ಲದ ಬಾವಿಗೆ ಬಿದ್ದಿದ್ದ ಜಯದೇವ, ‘ಹಣ, ಸಂಪತ್ತೆನ್ನುವುದು ನಮ್ಮ ಹಾದಿ ತಪ್ಪಿಸುವ ವಿಷ. ನಾನು ಆಸೆ ಪಡದಿದ್ದರೂ, ರಾಜನ ಒತ್ತಾಯಕ್ಕೆ ಕಟ್ಟುಬಿದ್ದು ಹಣದ ಗಂಟು ತಂದಿದ್ದರಿಂದಲೇ ಇಂಥ ದುಸ್ಥಿತಿ ಒದಗಿದೆ. ದೈವೇಚ್ಛೆಯಂತೆ ಶಿಕ್ಷೆ ಅನುಭವಿಸಿದರಾಯಿತು’ ಎಂದು ಜಗನ್ನಾಥ ದೇವರ ಭಕ್ತಿಗಾಯನದಲ್ಲಿ ಮೈಮರೆತ. ಆ ದಿನ ಬೇಟೆಗಾಗಿ ಕಾಡಿಗೆ ಬಂದಿದ್ದ ರಾಜನಿಗೆ ಜಯದೇವನ ಹಾಡು ಕೇಳಿಸಿ, ಕವಿಯನ್ನು ರಕ್ಷಿಸಿ ಅರಮನೆಗೆ ಕರೆದೊಯ್ದ. ಕೆಲವು ಕಾಲಾನಂತರ ಜಾತ್ರೆಯೊಂದರ ಸಂದರ್ಭದಲ್ಲಿ ಅದೇ ದರೋಡೆಕೋರರು ಸಾಧುಗಳ ವೇಷದಲ್ಲಿ ಅರಮನೆಗೆ ಬಂದರು. ರಾಜನ ಆಸ್ಥಾನದಲ್ಲಿ ಹೆಳವ ಜಯದೇವನನ್ನು ಕಂಡು ಅವರಿಗೆ ಆಶ್ಚರ್ಯ ಹಾಗೂ ಹೆದರಿಕೆ ಹುಟ್ಟಿತು. ಆದರೆ, ಜಯದೇವ ಸಂತೋಷದಿಂದ ಅವರನ್ನು ಸ್ವಾಗತಿಸಿದ. ಅವರನ್ನು ಯಥೇಚ್ಛವಾಗಿ ಸತ್ಕರಿಸುವಂತೆ ರಾಜನಿಗೆ ಮನವಿ ಮಾಡಿದ. ಅದರಂತೆ ನಡೆದುಕೊಂಡ ರಾಜ, ಅಪಾರ ಹಣ, ಒಡವೆ ಕೊಟ್ಟು ಸನ್ಮಾನಿಸಿ ರಾಜ್ಯದ ಅಧಿಕಾರಿಗಳ ಬೆಂಗಾವಲಿನಲ್ಲಿ ಅವರನ್ನು ಕಳುಹಿಸಿಕೊಟ್ಟ. ಜಯದೇವನ ಔದಾರ್ಯದ ಬಗ್ಗೆ ಅಧಿಕಾರಿಗಳಿಗೂ ಕುತೂಹಲವಿತ್ತು. ‘ಯಾವತ್ತೂ, ಯಾವುದಕ್ಕೂ ಆಸೆ ಪಡೆದ ಜಯದೇವ ನಿಮ್ಮ ವಿಷಯದಲ್ಲಿ ಇಷ್ಟೊಂದು ಅಕ್ಕರೆ ತೋರಿದ್ದೇಕೆ’ ಎಂದು ಕೇಳಿದಾಗ ದರೋಡೆಕೋರರು ಮತ್ತೊಂದು ಕಥೆ ಕಟ್ಟಿದರು. ಹಿಂದೆ ಬೇರೊಂದು ರಾಜ್ಯದಲ್ಲಿ ನಾವು ಸೈನ್ಯಾಧಿಕಾರಿಗಳಾಗಿದ್ದಾಗ ಜಯದೇವ ದೊಡ್ಡ ಅಪರಾಧ ಮಾಡಿ ಸಿಕ್ಕಿಬಿದ್ದಿದ್ದ. ರಾಜ ಆತನ ಶಿರಚ್ಛೇದಕ್ಕೆ ಆಜ್ಞೆ ಮಾಡಿದ್ದ. ಆದರೆ, ನಾವು ಆತನ ಪ್ರಾಣ ಉಳಿಸಿದ್ದೆವು ಎಂದು ಸುಳ್ಳು ಹೇಳುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಸಿಡಿಲು ಬಡಿದು ಆ ದರೋಡೆಕೋರರು ಸಾವನ್ನಪ್ಪಿದರು. ಇದನ್ನು ತಿಳಿದ ಜಯದೇವ, ‘ಛೇ, ಅವರು ಸಾಯಬಾರದಿತ್ತು’ ಎಂದು ಗೋಳಾಡಿದ. ಏನಾಶ್ಚರ್ಯ! ಮರುಕ್ಷಣದಲ್ಲೇ ಜಯದೇವನಿಗೆ ಕೈಕಾಲುಗಳು ಮರಳಿ ಬಂದಿದ್ದವು.

***

ಭಕ್ತ ಕವಿ ಜಯದೇವ ಗೀತಗೋವಿಂದ ಹಾಡುಗಬ್ಬ ರಚನೆಯಲ್ಲಿ ಮೈಮರೆತಿದ್ದ ಕಾಲಘಟ್ಟ ಅದು. ರಾಧಾ ಮಾಧವರ ಪ್ರಣಯೋನ್ಮಾದದ ಸೊಗಸನ್ನು ಬಣ್ಣಿಸುವ ಸಂದರ್ಭದಲ್ಲಿ ‘ಸ್ಮರಗರಲಖಂಡನಂ ಮಮ ಶಿರಸಿ ಮಂಡನಂ/ ದೇಹಿ ಪದಪಲ್ಲವಮುದಾರಂ’ ಎಂದು ಬರೆದ ಕವಿಗೆ ಇದ್ದಕ್ಕಿದ್ದಂತೆ ಕೃಷ್ಣದೇವರ ಶಿರದ ಮೇಲೆ ರಾಧೆಯ ಪಾದ ಇರಿಸುವಂತೆ ಅರ್ಥ ಬರುವ ಸಾಲು ಬರೆದು ದೇವರಿಗೆ ಅಪಚಾರ ಎಸಗಿದೆ ಎಂಬ ಪಾಪಪ್ರಜ್ಞೆ ಕಾಡತೊಡಗಿತು. ಹಾಗಾಗಿ ಬರೆದ ಸಾಲನ್ನು ಅರ್ಧಕ್ಕೆ ಅಳಿಸಿ ಗಂಗಾನದಿಗೆ ಸ್ನಾನಕ್ಕೆ ತೆರಳಿದ. ಮನೆಯಿಂದ ಹೊರಟ ಒಂದೆರಡು ಗಳಿಗೆಯಲ್ಲೇ ತಿರುಗಿಬಂದ ಜಯದೇವ, ‘ಎಲ್ಲಿ ನನ್ನ ಲೇಖನ ಸಾಮಗ್ರಿ ಕೊಡು, ಕವಿತೆ ಪೂರ್ಣಗೊಳಿಸುತ್ತೇನೆ. ಹೊಳೆದ ಸಾಲು ಬರೆದುಕೊಳ್ಳದಿದ್ದರೆ ಮತ್ತೆ ಮರೆತೇಹೋದೀತು’ ಎಂದಾಗ ಪದ್ಮಾವತಿ ಓಲೆಗರಿ, ಲೇಖನಿ ತಂದು ಅನುವುಮಾಡಿಕೊಟ್ಟಳು. ಅರ್ಧ ಬರೆದಿದ್ದ ‘ಸ್ಮರಗರಲಖಂಡನಂ ಮಮ ಶಿರಸಿ ಮಂಡನಂ… ಸಾಲಿನ ಮುಂದೆ ದೇಹಿ ಪದಪಲ್ಲವಮುದಾರಂ/ ಜ್ವಲತಿ ಮಯೊ ದಾರುಣೋ ಮದನಕದನಾರುಣೋ/ ಹರತು ತದುಪಾಹಿತವಿಕಾರಂ’ (ಹೇ ರಾಧೆ, ನಿನ್ನ ಪಾದವನ್ನು ನನ್ನ ಶಿರದ ಮೇಲಿರಿಸಿ ನನ್ನನ್ನು ಸಂತೋಷಪಡಿಸು. ನಾನಾದರೋ ನಿನ್ನ ಬಗೆಗಿನ ಕಾಮನೆಯಿಂದ ಜ್ವಲಿಸುತ್ತಿರುವೆ. ನಿನ್ನ ಪ್ರೇಮದಲ್ಲಿ ಸಂಪೂರ್ಣ ವಿವಶನಾಗಿರುವೆ) ಎಂದು ಪೂರ್ಣಗೊಳಿಸಿದ ಜಯದೇವ, ಮನೆಯಲ್ಲೇ ಸ್ನಾನ, ಪೂಜೆ, ಭೋಜನ ಮುಗಿಸಿ ವಿಶ್ರಾಂತಿಗೂ ತೆರಳಿದ್ದಾಯಿತು.

ಇನ್ನೇನು ಪತಿಯ ಊಟವಾಯಿತಲ್ಲ ಎಂದು ಪದ್ಮಾವತಿ ತನ್ನ ಊಟಕ್ಕೆ ಸಿದ್ಧಪಡಿಸಿಕೊಂಡು ತುತ್ತು ಬಾಯಿಗಿಡಬೇಕೆನ್ನುವಷ್ಟರಲ್ಲಿ ಎದುರಿಗೆ ಯಾರೋ ನಿಂತಂತೆ. ತಲೆ ಎತ್ತಿನೋಡಿದರೆ ಅರೆ, ಪತಿ ಜಯದೇವ. ಅದೇ ತಾನೆ ಗಂಗಾಸ್ನಾನ ಮಾಡಿ ಬಂದಂತೆ ಮೈಯಲ್ಲಿ ನೀರು ಜಿನುಗುತ್ತಿದೆ. ‘ಇದೇನಿದು ನಿನ್ನ ಅವತಾರ? ನನ್ನ ಸ್ನಾನ ಮುಗಿಯುವುದರೊಳಗೆ ನಿನ್ನ ಊಟವೇ ಆರಂಭವಾಗಿದೆ. ನನ್ನನ್ನು ಬಿಟ್ಟು ಊಟ ಮಾಡುವ ಅಭ್ಯಾಸ ಎಂದಿನಿಂದ’ ಎಂದು ಜಯದೇವ ಕೇಳುವಾಗ ಪದ್ಮಾವತಿಗೆ ಆಶ್ಚರ್ಯ. ‘ಇದೆಂಥ ಮಾತು ಹೇಳುತ್ತೀರಿ. ಸ್ನಾನಕ್ಕೆಂದು ಹೊರಟ ಅರೆಗಳಿಗೆಯಲ್ಲಿ ನೀವೇ ಮರಳಿಬಂದು ಕವಿತೆ ಪೂರ್ಣಗೊಳಿಸಿ, ಸ್ನಾನ, ಊಟ ಮುಗಿಸಿ ವಿಶ್ರಾಂತಿಗೆ ತೆರಳಿದವರು ಮತ್ತೆ ಈ ಅವತಾರದಲ್ಲಿ ಬಂದಿದ್ದೀರಲ್ಲ’ ಎಂದು ಪದ್ಮಾವತಿ ಪ್ರಶ್ನಿಸುತ್ತಿದ್ದರೆ, ಜಯದೇವನಿಗೆ ಬೇರೆಯೇ ಏನೋ ಹೊಳೆದಿತ್ತು. ಕೂಡಲೇ ಕೋಣೆಗೆ ಓಡಿ ನೋಡಿದರೆ, ಅಲ್ಲಿ ಯಾರೂ ಇಲ್ಲ. ಓಲೆಗರಿ ಪರಿಶೀಲಿಸಿದರೆ, ಕವಿತೆ ಅದ್ಭುತವಾಗಿ ಪೂರ್ಣಗೊಂಡಿದೆ. ‘ನಾನು ಅಪಚಾರ ಎಂದು ಹಿಂಜರಿದ ಸಾಲನ್ನು ಸ್ವಯಂ ಜಗನ್ನಾಥನೇ ನನ್ನ ರೂಪದಲ್ಲಿ ಬಂದು ಪೂರ್ಣಗೊಳಿಸಿದನೇ’ ಎಂಬ ವಿಶ್ವಾಸ ಮನದಟ್ಟಾಗುವ ಹೊತ್ತಿಗೆ ಜಯದೇವನ ಕಣ್ಣಲ್ಲಿ ನೀರು ತುಂಬಿತ್ತು. ‘ಪರಮಾತ್ಮನನ್ನು ಪ್ರತ್ಯಕ್ಷ ಕಂಡು, ಉಪಚರಿಸಿದ ನನ್ನ ಹೆಂಡತಿಯೇ ಧನ್ಯೆ, ನನಗಂಥ ಭಾಗ್ಯವಿಲ್ಲದೇ ಹೋಯಿತಲ್ಲ’ ಎಂದು ಜಯದೇವ ಶೋಕಿಸಿದ.

**

ದೇವಶರ್ಮ ಎಂಬ ಬ್ರಾಹ್ಮಣನಿಗೆ ಮಕ್ಕಳಿರಲಿಲ್ಲ. ‘ನನಗೊಂದು ಸಂತಾನ ಕರುಣಿಸಿದರೆ, ನಿನ್ನ ಸೇವೆಗೆ ಸಮರ್ಪಿಸುತ್ತೇನೆ’ ಎಂದು ಆತ ಜಗನ್ನಾಥದೇವರಿಗೆ ಹರಕೆ ಹೊತ್ತುಕೊಂಡಿದ್ದ. ಆನಂತರ ಜನಿಸಿದವಳು ಮಗಳು ಪದ್ಮಾವತಿ. ಹದಿನೈದು ಸಮೀಪಿಸುತ್ತಿದ್ದ ಮಗಳನ್ನು ಜಗನ್ನಾಥ ದೇವರ ಸೇವೆಗೆ ಒಪ್ಪಿಸಲು ಸಿದ್ಧತೆ ನಡೆಸಿರುವಾಗಲೇ ಅದೊಂದು ರಾತ್ರಿ ದೇವಶರ್ಮನಿಗೆ ಕನಸಿನಲ್ಲಿ ಮಗಳನ್ನು ತನ್ನ ಪ್ರಿಯಭಕ್ತನಾದ ಜಯದೇವನಿಗೆ ವಿವಾಹ ಮಾಡಿಕೊಡುವಂತೆ ಜಗನ್ನಾಥದೇವರ ಪ್ರೇರಣೆಯಾಗಿತ್ತು. ಅದರಂತೆ ದೇವಶರ್ಮ ಮಗಳೊಂದಿಗೆ ಜಯದೇವನ ಮನೆಯಂಗಳಕ್ಕೆ ಬಂದು ವಿವಾಹವಾಗುವಂತೆ ಕೋರಿದ. ಆದರೆ, ವಿರಾಗಿಯಾದ ತನಗೇಕೆ ಮದುವೆ ಎಂದು ಜಯದೇವ ನಿರಾಕರಿಸಿದ. ‘ದೇವರ ಅಪ್ಪಣೆಯಂತೆ ನಡೆದುಕೊಂಡಿದ್ದೇನೆ. ನನ್ನ ಮಗಳ ಭಾರ ನಿನ್ನದು’ ಎಂದು ದೇವಶರ್ಮ ಮಗಳನ್ನು ಬಿಟ್ಟು ಹೊರಟೇಬಿಟ್ಟ. ‘ದೈವೇಚ್ಛೆ ಹೀಗೆಯೇ ಇದ್ದರೆ, ಆಗಿದ್ದಾಗಲಿ’ ಎಂದು ಜಯದೇವ ಪದ್ಮಾವತಿಯನ್ನು ವರಿಸಿದ. ಅವರಿಬ್ಬರೂ ತದೇಕಚಿತ್ತದಿಂದ ಜಗನ್ನಾಥದೇವರನ್ನು ಆರಾಧಿಸಿ ಸಾರ್ಥಕ ಬದುಕು ನಡೆಸಿದರು.

**

ಜಯದೇವ ಲಕ್ಷ್ಮಣಸೇನ ರಾಜನ ಆಸ್ಥಾನದಲ್ಲಿದ್ದ ಸಂದರ್ಭದಲ್ಲಿ ಪದ್ಮಾವತಿಗೂ, ರಾಣಿಗೂ ಸಖ್ಯ ಬೆಳೆದಿತ್ತು. ಅದೊಂದು ದಿನ ಸಹಗಮನ ಪದ್ಧತಿಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ‘ನಿಜವಾದ ಸತಿ ಗಂಡನ ಸಾವಿನ ಸುದ್ದಿ ಕಿವಿಗೆ ಬಿದ್ಧ ಕ್ಷಣದಲ್ಲೇ ಜೀವ ಕಳೆದುಕೊಳ್ಳುತ್ತಾಳೆ. ಅಗ್ನಿಪ್ರವೇಶದವರೆಗೂ ಕಾಯುವುದಿಲ್ಲ’ ಎಂದು ಪದ್ಮಾವತಿ ವಾದಿಸುತ್ತಿದ್ದಳು. ರಾಣಿಗೆ ಈ ವಿಚಾರದಲ್ಲಿ ಪದ್ಮಾವತಿಯನ್ನೇ ಪರೀಕ್ಷಿಸಬೇಕೆಂಬ ಬಯಕೆ ಹುಟ್ಟಿತು. ಮಾರನೇ ದಿನ ರಾಜನೊಂದಿಗೆ ಬೇಟೆಗೆ ತೆರಳಿದ್ದ ಜಯದೇವ ಕ್ರೂರ ಪ್ರಾಣಿಗಳಿಗೆ ಬಲಿಯಾದ ಎಂದು ರಾಣಿ ಸುಳ್ಳುಸುದ್ದಿ ಹೇಳುತ್ತಿದ್ದಂತೆಯೇ ಆಘಾತದಿಂದ ಪ್ರಜ್ಞಾಶೂನ್ಯಳಾದ ಪದ್ಮಾವತಿ ನಿಂತನೆಲದಲ್ಲೇ ಜೀವಬಿಟ್ಟಳು. ಇದೆಂಥ ಪ್ರಮಾದವಾಯಿತು ಎಂದು ರಾಣಿ ಶೋಕಿಸಿದಳು. ರಾಜನೂ ತನ್ನ ರಾಣಿಯಿಂದ ಹೀಗಾಯಿತಲ್ಲ ಎಂದು ವ್ಯಥೆ ಪಟ್ಟುಕೊಂಡ. ಆದರೆ, ಜಯದೇವ, ‘ಪ್ರಿಯೇ ಚಾರುಶೀಲೆ ಮುಂಚ ಮಯಿ ಮಾನಮನಿದಾನಂ/ ಸಪದಿ ಮದನಾನಲೋ ದಹತಿ ಮಮ ಮಾನಸಂ/ ದೇಹಿ ಸುಖಕಮಲಮಧುಪಾನಂ/’ (ಪ್ರಿಯಳೇ, ಸುಚರಿತಳೇ, ಈ ಮುನಿಸನ್ನು ದೂರವಿರಿಸು. ನಿನ್ನ ಮೋಹದ ಬೆಂಕಿ ನನ್ನ ಹೃದಯವನ್ನು ದಹಿಸುತ್ತಿದೆ. ನಿನ್ನ ಕಮಲದಂತಹ ಮುಖದ ಮಧುಪಾನವನ್ನು ಕರುಣಿಸು) ಎಂದು ರಾಧೆಯ ಮುನಿಸನ್ನು ಕೃಷ್ಣ ಉನ್ಮಾದದ ಮಾತುಗಳಿಂದ ತಣಿಸುವ ಕವಿತೆಯನ್ನು ಭಾವಪರವಶನಾಗಿ ಹಾಡುತ್ತಿದ್ದಂತೆಯೇ ಪದ್ಮಾವತಿ ಮರಳಿ ಜೀವತಳೆದಿದ್ದಳು.

**

ಜಯದೇವನ ಗೀತಗೋವಿಂದ ಜಗದ್ವಿಖ್ಯಾತವಾಗಿತ್ತು. ಪುರಿಯ ಪರಿಸರದಲ್ಲಂತೂ ಪ್ರತಿಯೊಬ್ಬರೂ ಗೀತಗೋವಿಂದ ಹಾಡಿ ನರ್ತಿಸುತ್ತಿದ್ದರು. ಇದರಿಂದ ರಾಜನಿಗೆ ಅಸೂಯೆ ಮೂಡಿತ್ತು. ಸ್ವತಃ ಕವಿಯಾಗಿದ್ದ ಆತ ಗೀತಗೋವಿಂದ ಶೈಲಿಯಲ್ಲೇ ತಾನೂ ಕವಿತೆಯೊಂದನ್ನು ಬರೆದು ಜಗನ್ನಾಥ ದೇವರ ಸನ್ನಿಧಾನದಲ್ಲಿ ಎಲ್ಲರೂ ಅದನ್ನೇ ಹಾಡಬೇಕೆಂದು ಆದೇಶಿಸಿದ. ಆದರೆ, ಜಯದೇವ ಮಾತ್ರ ಇದನ್ನು ಹಾಡುತ್ತಿರಲಿಲ್ಲ. ಕೊನೆಗೆ ಗೀತಗೋವಿಂದ ಮತ್ತು ತನ್ನ ಕವಿತೆಯಲ್ಲಿ ಯಾವುದು ಶ್ರೇಷ್ಠ ಎಂದು ಜಗನ್ನಾಥದೇವರೇ ನಿರ್ಧರಿಸಲಿ ಎಂದು ರಾಜ ಯೋಚಿಸಿದ. ಇಬ್ಬರೂ ಬರೆದ ಕವಿತೆಯ ಓಲೆಗರಿಯನ್ನು ದೇವರ ಗರ್ಭಗುಡಿಯಲ್ಲಿಟ್ಟು ಬಾಗಿಲು ಮುಚ್ಚಲಾಯಿತು. ಕೆಲ ಸಮಯದ ನಂತರ ಬಾಗಿಲು ತೆರೆದಾಗ ಗೀತಗೋವಿಂದವೇ ಮೇಲ್ಭಾಗದಲ್ಲಿತ್ತು. ದೇವರಿಗೂ ಜಯದೇವನ ಕವಿತೆಯೇ ಪ್ರಿಯವಾಗಿತ್ತು.

**

ತ್ವಮಸಿ ಮಮ ಜೀವನಂ ತ್ವಮಸಿ ಮಮ ಭೂಷಣಂ/ ತ್ವಮಸಿ ಮಮ ಭವಜಲಧಿರತ್ನಂ/ ಭವತು ಭವತೀಹ ಮಯಿ ಸತತಮನುರೋಧಿನೀ/ ತತ್ರ ಮಮ ಹೃದಯಮತಿಯತ್ನಂ

‘ನೀನೇ ನನ್ನ ಬದುಕು, ನನ್ನ ಆಭರಣ, ನನ್ನ ಬದುಕೆಂಬ ಭವಸಾಗರದಲ್ಲಿ ಶೋಭಿಸುವ ಅರ್ನ್ಯಘ ರತ್ನ. ನೀನು ದಯಮಾಡಿ ಸದಾಕಾಲ ನನ್ನ ಹೃದಯದಲ್ಲಿ ನೆಲೆಸುವಂತೆ ಮಾಡುವುದಕ್ಕೇ ನನ್ನ ಸರ್ವಪ್ರಯತ್ನ’. ಗೀತಗೋವಿಂದ ಹಾಡುಗಬ್ಬ ಕಳೆದ 800 ವರ್ಷಗಳಲ್ಲಿ ಜಗತ್ತಿನ ಮೂಲೆಮೂಲೆಯ ಭಾಷೆಗಳಿಗೆ ಅನುವಾದಗೊಂಡು ಕೋಟ್ಯಂತರ ಜನರನ್ನು ಪರವಶಗೊಳಿಸಿದೆ. ಗೀತಗೋವಿಂದ ಮನಕಾನಂದ, ಮಹದಾನಂದ ಎನ್ನುವುದು ಎಲ್ಲ ಕಾಲಕ್ಕೂ ಸತ್ಯ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *