ತಪ್ಪು ಮಾಡುವ, ಪ್ರಚೋದಿಸುವ ಮನಸ್ಸುಗಳಿಗೆ ಶಿಕ್ಷೆಯಾಗಲಿ

ಗುರು ಶಿಷ್ಯರು ಒಟ್ಟಿಗೆ ಎಲ್ಲಿಗೋ ಹೋಗುತ್ತಿದ್ದರು. ದೂರದ ಪ್ರಯಾಣ.. ನಡೆದು ನಡೆದು ಇಬ್ಬರಿಗೂ ಆಯಾಸವಾಗಿತ್ತು. ಅಷ್ಟರಲ್ಲಿ ನದಿಯೊಂದು ಎದುರಾಯಿತು. ನೀರು ಎದೆಮಟ್ಟದಲ್ಲಿ ಹರಿಯುತ್ತಿದ್ದ ನದಿ ದಾಟಲು ಗುರುಶಿಷ್ಯರಿಬ್ಬರೂ ಸಿದ್ಧರಾದರು. ಅಷ್ಟರಲ್ಲಿ, ‘ಮಹನೀಯರೇ, ನಿಲ್ಲಿ’ ಎಂದು ಯಾರೋ ಕರೆದಂತಾಯಿತು. ತಿರುಗಿನೋಡಿದಾಗ ಸುಂದರ ತರುಣಿಯೊಬ್ಬಳು ಸಹಾಯ ಯಾಚಿಸಿ ನಿಂತಿದ್ದಾಳೆ. ‘ಬಹಳ ಹೊತ್ತಿನಿಂದ ಇಲ್ಲೇ ನಿಂತಿದ್ದೇನೆ. ನದಿಯ ಆಚೆ ದಂಡೆಗೆ ತಲುಪಬೇಕಿದೆ. ದೋಣಿ ಇಲ್ಲ, ನನ್ನ ಜೊತೆ ಸಹಾಯಕ್ಕೂ ಯಾರೂ ಇಲ್ಲ. ನೀವು ಯೋಗ್ಯರಂತೆ, ಸಾಧಕರಂತೆ ತೋರುತ್ತಿದ್ದೀರಿ. ಸಹಾಯ ಮಾಡಿ’ ಎಂದು ಮೊರೆ ಇಟ್ಟಳು. ಯಾವ ರೀತಿ ಸಹಾಯ ಮಾಡುವುದೆಂದು ಗುರು ಯೋಚಿಸುತ್ತಿರುವಾಗಲೇ, ದೈಹಿಕವಾಗಿ ಕಟ್ಟುಮಸ್ತಾಗಿದ್ದ ಶಿಷ್ಯ ಹೆಚ್ಚೇನೂ ಯೋಚಿಸದೆ, ಆ ಸುಂದರಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ನದಿ ದಾಟಿ, ಇನ್ನೊಂದು ದಂಡೆಯ ಮೇಲೆ ಇಳಿಸಿ ತನ್ನ ಹಾದಿಯಲ್ಲಿ ಮುಂದೆ ಸಾಗಿದ. ಇತ್ತ ಗುರುವಿನ ತಲೆಯಲ್ಲಿ ನೂರಿಪ್ಪತ್ತು ಯೋಚನೆಗಳು. ಎಲಾ ಶಿಷ್ಯ, ಅವಳೇನೋ ಸಹಾಯ ಕೇಳಿದ್ದು ನಿಜ. ಹಾಗೆಂದು ಅವಳು ಕೇಳುತ್ತಿದ್ದಂತೆ ಇವನು ಹೆಗಲ ಮೇಲೆ ಹೊತ್ತೇ ಬಿಟ್ಟನಲ್ಲ. ಯಾರ ಮನೆಯ ಹೆಣ್ಣುಮಗಳೋ ಏನೋ. ಇವನು ನನ್ನ ಶಿಷ್ಯನಾಗಿದ್ದು ಕೊಂಡು ಒಬ್ಬ ಹೆಣ್ಣುಮಗಳನ್ನು ಹೊರಬಹುದೇ? ನಾನು ಈತನಿಗೆ ಸನ್ಯಾಸ ದೀಕ್ಷೆ ಕೊಟ್ಟಿದ್ದೇನೆ. ಸರ್ವಸಂಗ ಪರಿತ್ಯಾಗಿಗಳೆಂದರೆ ಎಲ್ಲರನ್ನೂ, ಎಲ್ಲವನ್ನೂ ತ್ಯಜಿಸಿದವರು. ಹೀಗಿರುವಾಗ ಈತ ಸನ್ಯಾಸಧರ್ಮ ಮರೆತು ಹೆಂಗಸನ್ನು ಹೊತ್ತಿದ್ದು ತಪ್ಪಲ್ಲವೇ? ಇದನ್ನು ಶಾಸ್ತ್ರಗಳು, ನಮ್ಮ ಸಂಪ್ರದಾಯ ಒಪ್ಪೀತೇ? ನಮ್ಮ ಅನುಯಾಯಿಗಳಿಗೆ ಈ ವಿಚಾರ ತಿಳಿದರೆ ಏನು ಹೇಳಿಯಾರು? ಶಿಷ್ಯನಿಗೆ ಇದನ್ನೇ ಕಲಿಸಿದ್ದೇ ತಾವು ಎಂದು ಕೇಳಿದರೆ ನಾನೇನು ಉತ್ತರಿಸಲಿ? ಈತ ಏಕಾಏಕಿ ಆಕೆಯನ್ನು ಎತ್ತಿಕೊಳ್ಳುವ ಮೊದಲು ನನ್ನನ್ನೊಂದು ಮಾತು ಕೇಳಬೇಕಿತ್ತು… ಹೀಗೆ ಓತಪೋ›ತವಾಗಿ ಸಾಗಿತ್ತು ಗುರುವಿನ ವಿಚಾರ ಲಹರಿ. ಕೊನೆಗೂ ಕೆಲ ಹೊತ್ತಾದ ಮೇಲೆ ಶಿಷ್ಯನನ್ನು ನಿಲ್ಲಿಸಿ ಗುರು ಕೇಳಿಯೇಬಿಟ್ಟರು. ‘ಅಲ್ಲಯ್ಯ, ನೀನೀಗ ಸನ್ಯಾಸಿ, ನನ್ನಂತೆ ಸರ್ವಸಂಗ ಪರಿತ್ಯಾಗಿ. ಹೆಂಗಸರನ್ನು ರ್ಸ³ಸುವುದೂ ತಪ್ಪು. ಹಾಗಿರುವಾಗ ನೀನು ಆಕೆಯನ್ನು ಹೊತ್ತುಕೊಂಡಿದ್ದು ಮಹಾಪಾಪವಲ್ಲವೇ? ಹೀಗೇಕೆ ಮಾಡಿಬಿಟ್ಟೆ..’

ಶಿಷ್ಯ ಹೇಳಿದ.. ‘ಅರೆ, ಇದೇನಿದು ಗುರುಗಳೇ.. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಆಪದ್ಧರ್ಮ ಎಂದು ನೀವೇ ಕಲಿಸಿದ್ದೀರಿ. ನಾನು ಆಕೆಯನ್ನು ಹೊತ್ತಿದ್ದು ನಿಜ. ಆದರೆ, ಹೊಳೆ ದಂಡೆಯ ಮೇಲೆಯೇ ಇಳಿಸಿಬಂದೆ. ಆದರೆ, ನೀವಿನ್ನೂ ಆಕೆಯನ್ನು ತಲೆಯ ಮೇಲೆ ಹೊತ್ತುಕೊಂಡಿದ್ದೀರಲ್ಲ…’

ಅನೇಕ ಬಾರಿ ಹೀಗಾಗುತ್ತದೆ. ಉದ್ದೇಶಪೂರ್ವಕವೋ, ಆಕಸ್ಮಿಕವೋ ನಡೆಯಬಾರದ ಘಟನೆಯೊಂದು ನಡೆದುಹೋಗುತ್ತದೆ. ತಪ್ಪುಗಳು ನಡೆದಾಗ ಕಟುವಾಗಿ ಖಂಡಿಸುವುದು, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದು, ಮತ್ತೊಮ್ಮೆ ಅಂತಹ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವುದು ಉಚಿತವೇ. ಆದರೆ, ಇಂಥ ತಪ್ಪು ಘಟನೆಗಳನ್ನು ತಂತಮ್ಮ ಸ್ವಾರ್ಥಚಿಂತನೆಗೆ ಬಳಸಿಕೊಳ್ಳುವುದು, ದ್ವೇಷ ಬಿತ್ತುವುದು, ಅತಿರೇಕವಾಗಿ ಲಂಬಿಸುವುದು ಸರಿಯಾದ ಕ್ರಮವೂ ಅಲ್ಲ. ಎಲ್ಲದಕ್ಕೂ ಒಂದು ಲಕ್ಷ್ಮಣರೇಖೆ ಎನ್ನುವುದು ಇರಲೇಬೇಕು.

ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗುವುದು ದೇಶದ ಕೋಟಿ ಕೋಟಿ ಮಕ್ಕಳ ಕನಸು. ಆದರೆ, ಪಂದ್ಯವೊಂದರಲ್ಲಿ ಹನ್ನೊಂದು ಆಟಗಾರರಷ್ಟೇ ಆಡಲು ಸಾಧ್ಯ. ಒಂದು ಸರಣಿ ಅಥವಾ ಪ್ರವಾಸಕ್ಕೆ ಮೀಸಲು ಆಟಗಾರರೂ ಸೇರಿ ಗರಿಷ್ಠ ಹದಿನೈದು ಆಟಗಾರರು ಮಾತ್ರ ತಂಡಕ್ಕೆ ಆಯ್ಕೆಯಾಗುತ್ತಾರೆ. ಅಂದರೆ, ದೇಶದ ನೂರಮೂವತ್ತು ಕೋಟಿ ಜನರನ್ನು ಭಾರತ ತಂಡದ ಈ ಹದಿನೈದು ಜನ ಪ್ರತಿನಿಧಿಸುತ್ತಿರುತ್ತಾರೆ. ಗಲ್ಲಿ ಕ್ರಿಕೆಟ್​ನಿಂದ ಅಂತಾರಾಷ್ಟ್ರೀಯ ಪಂದ್ಯಗಳವರೆಗೆ ವಿವಿಧ ಹಂತ, ಲೀಗ್, ಟೂರ್ನಿ, ಶ್ರೇಣಿಗಳಲ್ಲಿ ಕ್ರಿಕೆಟ್ ಆಡುವ ಲಕ್ಷಾಂತರ, ಕೋಟ್ಯಂತರ ಕ್ರಿಕೆಟ್ ಆಟಗಾರರ ಪೈಕಿ ಭಾರತವನ್ನು ಪ್ರತಿನಿಧಿಸುವ ಈ ಹದಿನೈದು ಮಂದಿ ದಿ ಬೆಸ್ಟ್ ಆಗಿರಲೇ ಬೇಕು. ಒಬ್ಬ ಹಾರ್ದಿಕ್ ಪಾಂಡ್ಯನ ಆಟ ಅವನಂತೆಯೇ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ನಲ್ಲಿ ಚುರುಕಾಗಿರುವ ನೂರಾರು ಯುವ ಕನಸುಗಾರರಿಗೆ ಪ್ರೇರಣೆಯಾಗಿರುತ್ತದೆ. ಒಂದು ಭರ್ಜರಿ ಶತಕ ಬಾರಿಸಿದಾಗ ಕೆ.ಎಲ್. ರಾಹುಲ್ ಮತ್ತೊಬ್ಬ ದ್ರಾವಿಡ್ ಎಂದು ಹೊಗಳುವ ಜನ, ಸೂಕ್ಷ್ಮದರ್ಶಕದಷ್ಟು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಹೀಗಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟಿಗನೆಂಬ ಹಿರಿಮೆಯನ್ನು ಹಿಂಬಾಲಿಸಿ ಬರುವ ಹಣ, ಪ್ರಖ್ಯಾತಿ, ಅಭಿಮಾನದ ಹುಚ್ಚುಹೊಳೆಯಲ್ಲಿ ಮೈಮರೆತರೆ ಜಾರಿ ಬೀಳುವುದು ಖಂಡಿತ.

ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಟೆಸ್ಟ್ ತಂಡದ ಐತಿಹಾಸಿಕ ಸಾಧನೆಯನ್ನು ನಾವು ಸುದೀರ್ಘ ಕಾಲ ಸಂಭ್ರಮಿಸಬೇಕಿತ್ತು. ಅಷ್ಟೊಂದು ಸಿಹಿ ಸಾಧನೆ ಅದಾಗಿತ್ತು. ಆಸೀಸ್ ನೆಲದ ಆ ಗೆಲುವು ದೀರ್ಘ ಕಾಲ ನಮ್ಮ ತಂಡಗಳಿಗೆ, ಕ್ರಿಕೆಟ್ ಪರಂಪರೆಗೆ ಪ್ರೇರಣೆ ಆಗಬೇಕಿತ್ತು. ಆದರೆ, ಅಷ್ಟೊಂದು ದೊಡ್ಡ ಗೆಲುವಿನ ಪ್ರಭಾವಳಿ ಅನಗತ್ಯ ವಿವಾದದ ಸುಂಟರಗಾಳಿಗೆ ಸಿಲುಕಿ ಧೂಳುಹಿಡಿಯುವಂತಾಗಿದೆ. ಚೇತೇಶ್ವರ ಪೂಜಾರ ಅದ್ಭುತ ಬ್ಯಾಟಿಂಗ್ ಗುಣಗಾನ ನಡೆಯಬೇಕಿದ್ದ, ಪೂಜಾರ ಮಾದರಿ ಕಂಪ್ಲೀಟ್ ಬ್ಯಾಟ್ಸ್​ಮನ್​ಗಳ ಪೀಳಿಗೆ ಬೆಳೆಸಲು ಕಾರ್ಯೋನ್ಮುಖವಾಗಿದ್ದ ಸಂದರ್ಭದಲ್ಲಿ ಕೆಟ್ಟ ಘಟನೆಯೊಂದರ ವಿಷ ಎಲ್ಲರ ಬಾಯಿ ಕಹಿಯಾಗಿಸಿದೆ.

ಕರಣ್ ಜೋಹರ್ ಎಂಬ ಬಾಲಿವುಡ್ ನಿರ್ದೇಶಕನ ಟಿವಿ ಷೋದಲ್ಲಿ ಪಾಂಡ್ಯ ಮತ್ತು ರಾಹುಲ್ ಭಾಗವಹಿಸುವ ಮೂಲಕ ದೊಡ್ಡ ತಪ್ಪು ಮಾಡಿದರು. ಅಲ್ಲಿ ಆಡಬಾರದ ಮಾತುಗಳನ್ನು ಆಡುವ ಮೂಲಕ ಇನ್ನೂ ದೊಡ್ಡ ಪಾಪಕೂಪದಲ್ಲಿ ಬಿದ್ದರು. ಮೊದಲನೆಯದಾಗಿ ಕಾಫಿ ವಿತ್ ಕರಣ್ ಎಂಬ ಟಾಕ್ ಷೋ ಕುಟುಂಬದೊಂದಿಗೆ ಕುಳಿತು ನೋಡುವ ಕಾರ್ಯಕ್ರಮವೇ ಅಲ್ಲ. ಹಾಸ್ಯದ ಹೆಸರಲ್ಲಿ, ಅಪಹಾಸ್ಯ, ಅಶ್ಲೀಲ, ವಿಕೃತ ವಿಚಾರಗಳು ವಿಜೃಂಭಿಸುವ ಕಾರ್ಯಕ್ರಮ ಅದು. ಆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹೋಗುವವರು ಗೌರವ ಹೆಚ್ಚಿಸಿಕೊಂಡೇನೂ ಹಿಂಬರುವುದಿಲ್ಲ. ಬದಲಿಗೆ ತಮ್ಮ ಬದುಕಿನ ಅನೇಕ ನಿಗೂಢ ವಿಚಾರಗಳನ್ನು ಬಟಾಬಯಲಾಗಿಸಿಕೊಂಡು, ಯಾವುದೋ ಬ್ರಹ್ಮರಹಸ್ಯ ಬಯಲುಮಾಡಿದೆ ಎಂಬ ವಿಲಕ್ಷಣ ನಗೆಯೊಂದಿಗೆ ಸಮಾಧಾನ ಪಟ್ಟುಕೊಳ್ಳುವವರೇ ಹೆಚ್ಚು. ದಿಟ್ಟ, ನೇರ ಫಟಾಫಟ್ ಮಾತುಕತೆಯ ನೆಪದಲ್ಲಿ ಅನೈತಿಕ ಸಂಬಂಧಗಳು, ಮಂಚದಮನೆಯ ರಹಸ್ಯಗಳನ್ನು ವೈಭವೀಕರಿಸುವ ಈ ಕಾರ್ಯಕ್ರಮ ಸಹೃದಯ ವೀಕ್ಷಕರಿಗೆ ಇರಿಸುಮುರಿಸು ತರುವಂಥದ್ದೇ. ಇಂಥ ಕಾರ್ಯಕ್ರಮದಲ್ಲಿ ಕ್ರಿಕೆಟ್ ಆಡಿಕೊಂಡಿರಬೇಕಾದ ಪಾಂಡ್ಯ, ರಾಹುಲ್ ಭಾಗವಹಿಸಿದ್ದೇಕೆ ಎನ್ನುವುದು ಮೊದಲ ಪ್ರಶ್ನೆ. ಇವರು ಭಾಗವಹಿಸುವುದಕ್ಕೆ ಅನುಮತಿ ಕೊಟ್ಟವರು ಯಾರು ಎನ್ನುವುದು ಇನ್ನೊಂದು ಪ್ರಶ್ನೆ. ಸಾಮಾನ್ಯವಾಗಿ ಭಾರತ ತಂಡದ ಗುತ್ತಿಗೆ ಹೊಂದಿರುವ ಹಾಗೂ ತಂಡಕ್ಕೆ ಆಯ್ಕೆಯಾಗುವ ಆಟಗಾರರಿಗೆ ಬಿಸಿಸಿಐ ಹಾಗೂ ಟೀಮ್ ಮ್ಯಾನೇಜ್​ವೆುಂಟ್ ಅನುಮತಿ ಇಲ್ಲದೆ ಯಾವುದೇ ಮೂರನೇ ವ್ಯಕ್ತಿಯೊಂದಿಗೆ ಮಾತನಾಡುವ ಅವಕಾಶವೂ ಇರುವುದಿಲ್ಲ. ಮಾಧ್ಯಮಗಳಿಗೆ ಇಂಟರ್​ವ್ಯೂ ಇರಲಿ, ಸಣ್ಣ ಹೇಳಿಕೆಗಳನ್ನೂ ನೀಡುವಂತಿಲ್ಲ. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೂ ಪೂರ್ವಾನುಮತಿ ಪಡೆದುಕೊಳ್ಳಬೇಕು. ಹೀಗಿರುವಾಗ ಪಾಂಡ್ಯ, ರಾಹುಲ್ ಇಬ್ಬರೂ ಒಟ್ಟಿಗೆ ಕರಣ್ ಜೋಹರ್​ರ ಕುಪ್ರಸಿದ್ಧ ಟಾಕ್​ಷೋನಲ್ಲಿ ಪಾಲ್ಗೊಳ್ಳುವುದಕ್ಕೆ ಅನುಮತಿ ನೀಡಿದ್ದ ಮಹಾಶಯರೂ ಆಗಿರುವ ತಪ್ಪಿನಲ್ಲಿ ಪಾಲುದಾರರು. ಪಾಂಡ್ಯ ಮತ್ತು ರಾಹುಲ್ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು. ಕ್ರಿಕೆಟ್​ನಿಂದ ಅವರು ಸಂಪಾದಿಸಿದ್ದ ಎಲ್ಲ ಘನತೆ, ಗೌರವಗಳು ಅರ್ಧ ಗಂಟೆ ಅವಧಿಯಲ್ಲಿ ಮಣ್ಣುಪಾಲಾದವು. ಇವರಿಬ್ಬರ ಮನೋಸ್ಥಿತಿ, ಜೀವನಶೈಲಿ, ಹೆಣ್ಣುಮಕ್ಕಳ ವಿಚಾರದಲ್ಲಿ ತಲೆಯಲ್ಲಿ ತುಂಬಿಕೊಂಡ ವಿಕೃತಿ ಎಲ್ಲವೂ ಬಟಾಬಯಲಾಯಿತು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಸದ್ಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಇವರಿಬ್ಬರು ಅಮಾನತುಗೊಂಡಿರುವುದು ಸರಿಯಾದ ನಿರ್ಧಾರವೇ… ಆದರೆ…

ಪಾಂಡ್ಯ ಆ ದಿನ ಹೆಣ್ಣುಮಕ್ಕಳ ವಿಚಾರದಲ್ಲಿ ತನ್ನ ಕೊಳಕು ಅಭಿಪ್ರಾಯಗಳನ್ನು ಹೇಳುವ ಸಂದರ್ಭದಲ್ಲಿ ಇದೆಲ್ಲ ತಪ್ಪು ಎಂದು ತಿಳಿಯದೇ ಇರುವಷ್ಟು ಮುಗ್ಧರೇನಲ್ಲ. ಆದರೆ, ಕರಣ್ ಜೋಹರ್ ಎಂಬ ಸೆಲೆಬ್ರಿಟಿ ಎದುರಿಗಿರುವಾಗ ತನ್ನದೇ ಲಂಪಟತನವನ್ನು ಹಾಸ್ಯದ ರೀತಿಯಲ್ಲಿ ವೈಭವೀಕರಿಸಲು ಹೋಗಿ ಜಗತ್ತಿನ ಎದುರು ತಲೆತಗ್ಗಿಸುವಂತಾಯಿತು. ಕರಣ್ ಜೋಹರ್ ಟಿಆರ್​ಪಿ ಸಲುವಾಗಿ ಪಾಂಡ್ಯ ಬಾಯಲ್ಲಿ ಸಲ್ಲದ ಮಾತುಗಳನ್ನು ಹೇಳಿಸಿದರು. ಇಬ್ಬರು ಯುವ ಆಟಗಾರರ ಭವಿಷ್ಯದ ದೃಷ್ಟಿಯಿಂದ ಕರಣ್ ಮನಸ್ಸು ಮಾಡಿದ್ದರೆ, ಆ ಪ್ರಸಂಗವನ್ನು ತಪ್ಪಿಸಬಹುದಿತ್ತು. ಅಂಥ ಮಾತುಗಳಿಗೆ ಖಂಡಿಸಿದ್ದರೆ, ಅಥವಾ ಅವಕಾಶವನ್ನೇ ಕೊಡದಿದ್ದರೆ, ಅವರು ದೊಡ್ಡವರಾಗುತ್ತಿದ್ದರು.

ಈ ವಿಚಾರವನ್ನು ನಿರ್ವಹಿಸುವ ವಿಚಾರದಲ್ಲಿ ಭಾರತೀಯ ಕ್ರಿಕೆಟ್ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡಿರುವ ಬಿಸಿಸಿಐ ವಿಚಿತ್ರವಾಗಿ ವರ್ತಿಸುತ್ತಿದೆ. ವಿಶ್ವಕಪ್ ಹತ್ತಿರದಲ್ಲಿರುವಾಗ ಈ ಪ್ರಕರಣಕ್ಕೊಂದು ಸೂಕ್ತ ಮುಕ್ತಾಯ ಹೇಳಿ ಮಂಡಳಿ ದಿಟ್ಟತನ ಮೆರೆಯಬೇಕಿತ್ತು. ಆದರೆ, ಮಂಡಳಿಯ ಕೆಲವರು ಆಟಗಾರರ ವೃತ್ತಿಜೀವನವನ್ನೇ ಮೊಟಕುಗೊಳಿಸಲು ಆತುರ ಪಡುತ್ತಿರುವುದು ಮಾತ್ರ ಸರಿಯಾದ ಕ್ರಮವಲ್ಲ. ಹಾಗೆ ನೋಡಿದರೆ, ಕ್ರಿಕೆಟಿಗರು ತಪ್ಪು ಮಾಡಿ ತಲೆತಗ್ಗಿಸುತ್ತಿರುವುದು ಇದೇ ಮೊದಲೇನೂ ಅಲ್ಲ. ತಂಡದ ಕೋಚ್-ಮ್ಯಾನೇಜರ್​ಗಳೇ ವಿದೇಶಿ ಪ್ರವಾಸದಲ್ಲಿ ಅನ್ಯಸ್ತ್ರೀಯರೊಂದಿಗೆ ಪಾರ್ಟಿ ಮಾಡಿದ ನಿದರ್ಶನಗಳಿವೆ. ಆಟಗಾರರು ಟೂರ್ನಿಗಳ ನಡುವೆ ತಡರಾತ್ರಿ ಪಾರ್ಟಿಗಳಲ್ಲಿ ಕುಡಿದು ರಾದ್ಧಾಂತ ಮಾಡಿದ, ಹೋಟೆಲ್ ಕೊಠಡಿಗಳಿಗೆ ಹುಡುಗಿಯರನ್ನು ಕರೆಸಿಕೊಂಡ ಪ್ರಕರಣಗಳಿವೆ. ಕ್ರಿಕೆಟ್ ಆಟಗಾರರ ಲಂಪಟತನದ ಬಗ್ಗೆ ಅನೇಕ ದಂತಕಥೆಗಳೇ ಇವೆ. ಐಪಿಎಲ್​ನ ತಡರಾತ್ರಿ ಪಾರ್ಟಿಗಳಲ್ಲಿ ಏನೇನು ನಡೆಯುತ್ತವೆ ಎಂದು ಕಣ್ಣಾರೆ ಕಂಡೂ, ಈ ಪ್ರಕರಣದಲ್ಲೂ ತಪ್ಪು ಮಾಡಿದ ಇಬ್ಬರು ಆಟಗಾರರನ್ನು ಬಲಿಪಡೆಯುವ ಬದಲು, ಇಂಥ ತಪ್ಪಿಗೆ ಕಾರಣವಾದ, ಪ್ರೇರಣೆಯಾದ, ಮೂಕಸಾಕ್ಷಿಯಾದ ವಾತಾವರಣವನ್ನು ಸರಿಪಡಿಸುವ, ಶಿಸ್ತು, ಸಂಸ್ಕೃತಿ ತರುವ ಅವಶ್ಯಕತೆ ಇದೆ. ಕ್ರಿಕೆಟಿಗರಿಗೆ ಕ್ರಿಕೆಟ್ ತರಬೇತಿಯ ಜೊತೆಗೆ ಸಭ್ಯ, ಸುಸಂಸ್ಕೃತ ನಡವಳಿಕೆಯನ್ನು ರೂಢಿಸುವ ತರಬೇತಿಯ ಅವಶ್ಯಕತೆಯೂ ಇದೆ.

ಬಿಸಿಸಿಐ ಎಚ್ಚೆತ್ತುಕೊಳ್ಳಲು ಇದು ಸಕಾಲ…

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)