More

    ಸವ್ಯಸಾಚಿ ಅಂಕಣ; ವಿಜಯಾನಂದ ಚಿತ್ರವನ್ನು ಯಾಕೆ ನೋಡಲೇಬೇಕೆಂದರೆ…

    ‘ನಾವಿಲ್ಲಿ ಗೆಲ್ಲುವುದಕ್ಕೆ ಬಂದಿದ್ದೇವೆ.. ಪಿಕ್​ನಿಕ್ ಸಲುವಾಗಿ ಅಲ್ಲ..’ 1983ರ ಕ್ರಿಕೆಟ್ ವಿಶ್ವಕಪ್ ಆರಂಭಕ್ಕೆ ಮುನ್ನ ಇಂಗ್ಲೆಂಡ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಕಪಿಲ್ ದೇವ್ ಹೇಳಿದ ಮಾತಿದು.

    ಆ ಕಾಲಘಟ್ಟದಲ್ಲಿ ವೆಸ್ಟ್ ಇಂಡೀಸ್ ಎರಡು ಬಾರಿಯ ವಿಶ್ವ ಚಾಂಪಿಯನ್ ಆಗಿ ಮೆರೆಯುತ್ತಿತ್ತು. ಆಸ್ಟ್ರೇಲಿಯಾ ಸಾಂಪ್ರದಾಯಿಕವಾಗಿ ಬಲಾಢ್ಯವೆನಿಸಿತ್ತು. ಇಂಗ್ಲೆಂಡ್ ತಾನೇ ಕ್ರಿಕೆಟ್ ಜನಕ ಎಂಬ ಹಮ್ಮಿನಿಂದ ಬೀಗುತ್ತಿತ್ತು. ಭಾರತೀಯ ಕ್ರಿಕೆಟ್ ಇನ್ನೂ ಶೈಶವಾವಸ್ಥೆಯಿಂದ ಹೊರಬರಲಾಗದೆ ತೆವಳುತ್ತಿತ್ತು. ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವುದೇ ದೊಡ್ಡ ಸಾಧನೆ ಎಂದು ತೃಪ್ತಿಪಟ್ಟುಕೊಳ್ಳುತ್ತಿದ್ದ ಕಾಲ ಅದು. ವಿಶ್ವಕಪ್​ನಲ್ಲೂ ಅಷ್ಟೇ. ಪಾಲ್ಗೊಂಡು ಒಂದೋ, ಎರಡೋ ಪಂದ್ಯ ಗೆದ್ದರೆ ಮಹತ್ಸಾಧನೆ ಎಂಬ ಭಾವನೆ ಕ್ರಿಕೆಟ್​ನ ಆಡಳಿತಗಾರರಲ್ಲೂ, ಅಭಿಮಾನಿಗಳಲ್ಲೂ ಬೇರೂರಿತ್ತು. ಭಾರತ ತಂಡದ ಕೆಲವು ಹಿರಿಯ ಆಟಗಾರರು ಟೂರ್ನಿ ಎಷ್ಟು ಬೇಗ ಮುಗಿದರೆ, ಅಷ್ಟು ಬೇಗ ಲಂಡನ್​ನಿಂದ ಅಮೆರಿಕಕ್ಕೆ ಪ್ರವಾಸ ತೆರಳಲು ಟಿಕೆಟ್ ಬುಕ್ ಮಾಡಿಸಿಕೊಂಡಿದ್ದರು. ಆದರೆ, ಒಬ್ಬ ಕಪಿಲ್ ದೇವ್ ಮಾತ್ರ ‘ನಾವಿಲ್ಲಿ ಮನರಂಜನೆಗಾಗಿ ಬಂದಿಲ್ಲ; ಟ್ರೋಫಿ ಗೆಲ್ಲಲು ಬಂದಿದ್ದೇವೆ’ ಎಂಬ ಆತ್ಮವಿಶ್ವಾಸ ಪ್ರದರ್ಶಿಸುತ್ತಿದ್ದರು. ಇವನಿಗೆಲ್ಲೋ ತಲೆ ಕೆಟ್ಟಿದೆ ಎಂದು ಜತೆಗಾರರಿಗೆ ಆ ಸಂದರ್ಭದಲ್ಲಿ ಅನಿಸಿದರೂ, ಕಪಿಲ್​ರ ವಿಶ್ವಾಸ ಸುಳ್ಳಾಗಲಿಲ್ಲ. ಭಾರತ ತಂಡ ವಿಂಡೀಸ್ ದೈತ್ಯರಿಗೆ ಮಣ್ಣುಮುಕ್ಕಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತ್ತು. ಭಾರತದ ಸಾಮರ್ಥ್ಯಕ್ಕಿಂತ ನಾಯಕ ಕಪಿಲ್ ದೇವ್​ರ ಆತ್ಮವಿಶ್ವಾಸ ಚೊಚ್ಚಲ ವಿಶ್ವಕಪ್ ಗೆಲುವಿಗೆ ಕಾರಣವಾಗಿತ್ತು…

    ಕೇವಲ ಕಪಿಲ್ ದೇವ್ ಒಬ್ಬರೇ ಅಲ್ಲ, ಜಗತ್ತಿನ ಯಾವುದೇ ಮಹಾಮಹಾ ಸಾಧಕರ ಜೀವನವನ್ನು ಅವಲೋಕಿಸಿದರೂ ನಮಗೆ ಇಂತಹ ‘ಆತ್ಮವಿಶ್ವಾಸ’ದ ಕಥೆಗಳು ಕಾಣಸಿಗುತ್ತವೆ. ಧೈರ್ಯವೇ ಇವರ ಬಂಡವಾಳ. ಹೋರಾಟವೇ ಇವರ ಶಕ್ತಿ. ಆತ್ಮವಿಶ್ವಾಸವೇ ಇವರನ್ನು ದಡ ಮುಟ್ಟಿಸುವ ಗುರು. ಯಾರೂ ಸಾಗದ ಹಾದಿಯಲ್ಲಿ ಇವರು ಸಾಗುತ್ತಿರುತ್ತಾರೆ. ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಈಜುತ್ತಾರೆ. ಸಾಮಾನ್ಯ ವ್ಯಕ್ತಿಗಳು ಯೋಚಿಸಲೇ ಸಾಧ್ಯವಾಗದ ಸಂಗತಿಗಳನ್ನು ಇವರು ಊರಿಗೆ ಮುಂಚೆ ಯೋಚಿಸಿರುತ್ತಾರೆ. ಯಾವುದೇ ಅಡೆತಡೆ ಬಂದರೂ ಎದೆಗುಂದದೆ ಮುನ್ನುಗ್ಗುತ್ತಾರೆ. ಎಂಥದ್ದೇ ಕಷ್ಟ ಎದುರಾದರೂ ಹೋರಾಡುತ್ತಾರೆ. ಸವಾಲುಗಳಿಗೆ ಎದೆಗೊಡುತ್ತಾರೆ. ಛಲ ಬಿಡದ ತ್ರಿವಿಕ್ರಮನಂತೆ ತಾವು ಅಂದುಕೊಂಡಿದ್ದನ್ನು ಸಾಧಿಸಲು ಶ್ರಮ ಪಡುತ್ತಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚುವ, ವರ್ತಮಾನದ ಜಂಜಡಗಳನ್ನು ನಿಭಾಯಿಸಿದರೆ ಸಾಕು, ನಾಳೆಯದು ನಾಳೆ ನೋಡಿಕೊಂಡರಾಯಿತು ಎಂಬ ನಿರಾಶಾಜೀವಿಗಳ ನಡುವೆ ಇವರು ಆಲೋಚನೆಯಲ್ಲಿ ಹತ್ತಿಪ್ಪತ್ತು ವರ್ಷ ಮುಂದಿರುತ್ತಾರೆ. ಯಾವುದೇ ಕ್ಷೇತ್ರವಿರಲಿ; ಕಾಲಘಟ್ಟದ ಮನೋವ್ಯಾಪಾರವನ್ನು ಮೀರಿ ದೂರದರ್ಶಿತ್ವದಿಂದ ಗುರಿ ಸಾಧನೆಗೆ ಶ್ರಮಿಸುವ ಇಂಥವರೇ ತಮ್ಮ ಬದುಕಿನಲ್ಲಿ, ಸಮಾಜದಲ್ಲಿ ಗೆದ್ದು ಸಾಧಕರೆನಿಸಿಕೊಳ್ಳುತ್ತಾರೆ.

    ಸಮಾಜಕ್ಕೆ ಯಾವಾಗಲೂ ಪ್ರೇರಣೆಗಳು ಬೇಕು. ಕ್ರಿಕೆಟ್ ಆಡುವ ಮಕ್ಕಳಿಗೆ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಉತ್ತುಂಗ ಯಶಸ್ಸು ಪ್ರೇರಣೆಯಾಗಿರುತ್ತದೆ. ಅದೇ ರೀತಿ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಉದ್ಯಮ ಹೀಗೆ ಯಾವುದೇ ಕ್ಷೇತ್ರಗಳನ್ನು ಗಮನಿಸಿದರೂ, ಆಯಾ ಕ್ಷೇತ್ರದಲ್ಲಿ ಶೂನ್ಯ ಹಿನ್ನೆಲೆಯಿಂದ ಮೇಲೆಬಂದು ಮುಗಿಲೆತ್ತರದ ಸಾಧನೆ ಮಾಡಿದ ಮಹಾನುಭಾವರ ಜೀವನಯಾನ ಸಾಮಾನ್ಯರಿಗೆ ಪ್ರೇರಣಾದಾಯಕವಾಗಿರುತ್ತವೆ. ಎಲ್ಲರೂ ಸಾಗುವ ಕಾಲುಹಾದಿಯಲ್ಲಿ ಸಾಗದೇ ಸಾಧಕರು ತಮ್ಮದೇ ದಾರಿ ಸೃಷ್ಟಿಸಿಕೊಳ್ಳುತ್ತಾರೆ. ಅವರ ನಂತರದ ಪೀಳಿಗೆಯವರು ಇಂಥ ದಂತಕಥೆಗಳು ಸಾಗಿದ ಹಾದಿಯ ಹೆಜ್ಜೆಗುರುತು ಅನುಸರಿಸಿ ಬಾಳಿನ ಗುರಿ ಕಂಡುಕೊಳ್ಳಲು ಯತ್ನಿಸುತ್ತಾರೆ. ಒಬ್ಬ ಸಾಧಕನ ಬದುಕು ಸಾವಿರಾರು ಜನರಿಗೆ ಬೆಳಕಿನ ಹಾದಿ ತೋರಿಸುವ ದೀವಟಿಗೆ ಆಗುವುದಾದರೆ ಅದನ್ನು ಮೀರಿದ ಸಾರ್ಥಕತೆ ಬೇರೇನಿದೆ?

    ಜನ- ಸಮಾಜದ ಮನೋಸ್ಥಿತಿ ಕೆಲವೊಮ್ಮೆ ವಿಚಿತ್ರವಾಗಿರುತ್ತದೆ. ತಮ್ಮ ಕೈಗೆಟುಕದ, ತಮ್ಮಿಂದ ಯಾವತ್ತೂ ಸಾಧ್ಯವಾಗದ ಸಾಧನೆಯ ಕುರಿತು ’ಅದೇನು ಮಹಾ’ ಎಂದು ತಿರಸ್ಕರಿಸುವ ಉಪೇಕ್ಷೆ ಅದು. ಆದರೆ, ಇಂಥ ಉಪೇಕ್ಷೆ ಅಜ್ಞಾನದಿಂದ ಬಂದಿರುತ್ತದೆ. ಯಾವುದೇ ವಿಚಾರದ ಬಗ್ಗೆ ತಾವು ಅಧ್ಯಯನ ಮಾಡಿ, ಗುಣ-ಅವಗುಣಗಳನ್ನು ತಿಳಿದುಕೊಂಡು ತಮ್ಮದೊಂದು ನಿರ್ದಿಷ್ಟ ಅಭಿಪ್ರಾಯ ರೂಪಿಸಿಕೊಳ್ಳುವ ವ್ಯವಧಾನ ಜನರಿಗೆ ಕಡಿಮೆ. ಯಾರೋ ಹೇಳಿದ್ದನ್ನು ಅರೆಬರೆ ಕೇಳಿಕೊಂಡು, ಖುದ್ದಾಗಿ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡದೆ ಅದು ಸರಿಯಿಲ್ಲ, ಇವರು ಸರಿಯಿಲ್ಲ ಎಂದು ವಿತಂಡವಾಗಿ ವರ್ತಿಸುವುದು ಕೆಲವರ ರೀತಿ. ಆದರೆ, ಇಂಥ ತಪು್ಪ ಗ್ರಹಿಕೆಗಳನ್ನು ದೂರ ಮಾಡಿ ಯಾವುದು ಸರಿ, ಯಾವುದು ತಪು್ಪ, ಯಾವುದು ಸಮರ್ಪಕ ಮಾಹಿತಿ, ಯಾವ ಸಾಧನೆಯ ಹಿಂದೆ ಯಾವ ಕಥೆ ಇದೆ? ಯಾವ ಸಾಧಕನ ಬದುಕಿನಲ್ಲಿ ಎಷ್ಟು ಶ್ರಮವಿದೆ ಎಂಬುದನ್ನು ಎರಡು- ಎರಡೂವರೆ ಗಂಟೆಗಳ ಅವಧಿಯಲ್ಲಿ ದೃಶ್ಯರೂಪಕದ ಮೂಲಕ ಜನಮನಕ್ಕೆ ಸಮರ್ಥವಾಗಿ ತಲುಪಿಸುವ ಶಕ್ತಿ ಇರುವುದು ಬಯೋಪಿಕ್​ಗಳಿಗೆ. ಭಾರತೀಯ ಚಿತ್ರರಂಗದಲ್ಲಿ ಸದ್ಯ ಆ ಭಾಷೆ ಈ ಭಾಷೆ ಎಂಬ ಭೇದವಿಲ್ಲದೆ ಮಹಾಮಹಾ ಸಾಧಕರ ಜೀವನದ ಯಶೋಗಾಥೆಗಳು ಚಲನಚಿತ್ರಗಳಾಗುತ್ತಿವೆ. ಇಂಥ ಬಯೋಪಿಕ್ ಚಿತ್ರಗಳು ಯಶಸ್ವಿಯೂ ಆಗುತ್ತಿವೆ. ಜೀವನದಲ್ಲಿ ನೊಂದವರು, ಬೆಂದವರು, ಸೋತು ಸುಣ್ಣಾದವರಿಗೆ ಸೋಲೆನ್ನುವುದು ಕೊನೆಯಲ್ಲ; ಗೆಲುವಿನ ಹಾದಿಯ ಮೆಟ್ಟಿಲು ಎಂಬ ಸ್ಪೂರ್ತಿ ತುಂಬುತ್ತಿವೆ. ಸಮಾಜದಲ್ಲಿ ಹೊಸ ಆಶಾವಾದದ ತಂಗಾಳಿ ಬೀಸಲು ಕಾರಣವಾಗಿವೆ.

    ಕೆಲವು ವರ್ಷ ಹಿಂದೆ ಮೀರ್​ರಂಜನ್ ನೇಗಿ ಎಂಬ ಹಾಕಿ ದಂತಕಥೆಯ ಬದುಕು ಆಧರಿಸಿದ ಚಕ್ ದೇ ಇಂಡಿಯಾ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಅದಾದ ಬಳಿಕ ಭಾರತೀಯ ಭಾಷೆಗಳಲ್ಲಿ ಬಯೋಪಿಕ್​ಗಳ ಟ್ರೆಂಡ್ ಚಾಲ್ತಿ ಪಡೆದುಕೊಂಡಿತು. ಅದರಲ್ಲೂ ಮಿಲ್ಕಾ ಸಿಂಗ್ ಜೀವನ ಆಧರಿಸಿದ ಭಾಗ್ ಮಿಲ್ಕಾ ಭಾಗ್, ಪಾನ್ ಸಿಂಗ್ ತೋಮರ್, ಎಂಎಸ್ ಧೋನಿ ಮೊದಲಾದ ಚಿತ್ರಗಳ ಯಶಸ್ಸು ಇಂಥ ಇನ್ನಷ್ಟು ಚಿತ್ರಗಳ ನಿರ್ವಣಕ್ಕೆ ಕಾರಣವಾದವು. ಚಲನಚಿತ್ರಗಳೆಂದರೆ ಕಟ್ಟುಕಥೆಗಳ ವೈಭವೀಕರಣ, ಅವಾಸ್ತವಿಕ, ಅತಿರೇಕದ ಕಲ್ಪನೆಗಳ ಗ್ರಾಫಿಕ್ ಮಾಯಾಜಾಲ ಎಂಬ ಭಾವನೆ ಬದಿಗೆ ಸರಿಸಿ, ನಮ್ಮನಡುವಿನ ಪ್ರವರ್ತಕರ ಯಶೋಗಾಥೆಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವ ಹೊಸ ಟ್ರೆಂಡ್ ಅನ್ನು ಜನರೂ ಸ್ವಾಗತಿಸಿದರು.

    ಕ್ಯಾಪ್ಟನ್ ಗೋಪಿನಾಥ್​ರ ಜೀವನ ಆಧರಿಸಿದ ಚಿತ್ರ ‘ಸೂರರೈಪೊಟ್ರು’, ನಂಬಿ ನಾರಾಯಣನ್ ಅವರ ಬದುಕಿನ ಹೋರಾಟ ಆಧರಿಸಿದ ‘ರಾಕೆಟ್ರಿ’, ಮಂಗಳಯಾನ ಕುರಿತ ‘ಮಿಷನ್ ಮಂಗಲ್’ ಮೊದಲಾದ ಚಿತ್ರಗಳು ಚಿತ್ರಮಾಧ್ಯಮದ ಹೊಸ ಸಾಧ್ಯತೆಯನ್ನು ಅನ್ವೇಷಿಸಿದವು. ಇದೀಗ ಕನ್ನಡದಲ್ಲೂ ಇಂಥ ಅದ್ಭುತ ಪ್ರಯತ್ನವೊಂದಾಗಿದ್ದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್​ವುನ್, ಯಶಸ್ವಿ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಜೀವನ-ಸಾಧನೆ ಆಧರಿಸಿದ ‘ವಿಜಯಾನಂದ’ ಚಿತ್ರ ಶುಕ್ರವಾರವೇ ವಿಶ್ವದಾದ್ಯಂತ ತೆರೆಕಾಣುತ್ತಿದೆ.

    ಜಾಗತೀಕರಣ, ತಂತ್ರಜ್ಞಾನದ ನಾಗಾಲೋಟ, ಔದ್ಯೋಗಿಕ ಕ್ರಾಂತಿಯಿಂದ ಅಭಿವೃದ್ಧಿ ಕಡೆಗೆ ತೆರೆದುಕೊಳ್ಳುತ್ತಿರುವ ಭಾರತದಂಥ ದೇಶದಲ್ಲಿ ಈಗಿನ ನವಪೀಳಿಗೆ ಬಿಟ್ಟರೆ ಮೂವತ್ತು ನಲವತ್ತು ವರ್ಷ ಕೆಳಗೆ ಜನಿಸಿದ ಬಹುತೇಕರು ಚಪ್ಪಲಿ, ಪ್ಯಾಂಟು ಕಾಣದೆ, ವಿದ್ಯುತ್, ಮೊಬೈಲ್, ಟಿವಿಗಳ ಪರಿಚಯವಿಲ್ಲದೆ ಬಾಲ್ಯಾವಸ್ಥೆಯನ್ನು ಕಳೆದುಬಂದವರೇ. ಆದರೆ, ಚಿಮಣಿ, ಮೊಂಬತ್ತಿ ಬೆಳಕಿನಲ್ಲಿ, ಬೀದಿದೀಪಗಳಡಿಯಲ್ಲಿ ಓದಿದವರೆಲ್ಲರೂ ವಿಶ್ವೇಶ್ವರಯ್ಯ ಆಗುವುದಿಲ್ಲ. ಬಡತನ, ಅಸಮಾನತೆ ನಡುವೆ ದಿಟ್ಟ ಹೋರಾಟ ನಡೆಸಿ, ಅಪ್ಪ ನೆಟ್ಟ ಆಲದ ಮರಕ್ಕೆ ಜೋತುಬೀಳದೆ, ತಮ್ಮದೇ ಮಹತ್ವಾಕಾಂಕ್ಷೆ , ಕನಸು ಕಂಡು ಅದನ್ನು ನನಸು ಮಾಡಿಕೊಳ್ಳುವ ವಿರಳಾತಿವಿರಳರೆನಿಸುವ ಡಾ. ವಿಜಯ ಸಂಕೇಶ್ವರ ಅವರಂಥ ಸಾಧಕರು ಲಕ್ಷಕ್ಕೊಬ್ಬರು; ಕೋಟಿಗೊಬ್ಬರು. ಸಾಧಾರಣ, ಅವಿಭಕ್ತ ಕುಟುಂಬದ ಹಿನ್ನೆಲೆಯ ಕನಸುಗಾರನೊಬ್ಬ ಸಾಲ ಮಾಡಿ, ಸವಾಲುಗಳಿಗೆ ಹೆದರದೇ ಒಂದು ಲಾರಿಯಿಂದ ಆರಂಭಿಸಿ ಏಷ್ಯಾ ಖಂಡದಲ್ಲೇ ಅತ್ಯಂತ ಬೃಹತ್ ಲಾಜಿಸ್ಟಿಕ್ಸ್ ಕಂಪೆನಿ ಕಟ್ಟಿಬೆಳೆಸಿದ, ದೇಶದ ಅತ್ಯಂತ ದೊಡ್ಡ ಹಾಗೂ ವಿಶ್ವಾಸಾರ್ಹ ಟ್ರಾವೆಲ್ಸ್ ಸಂಸ್ಥೆ, ಕನ್ನಡದ ನಂ.1 ಮಾಧ್ಯಮ ಸಂಸ್ಥೆ, ಜನಪ್ರಿಯ ಸುದ್ದಿವಾಹಿನಿ ಹೀಗೆ ಹತ್ತುಹಲವು ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಸಹಸ್ರಾರು ಕುಟುಂಬಗಳಿಗೆ ಅನ್ನ-ಜೀವನೋಪಾಯ ಕಲ್ಪಿಸಿದ ಯಶೋಗಾಥೆ ಎಲ್ಲರಿಗೂ ಪ್ರೇರಣಾದಾಯಕವೆನಿಸುತ್ತದೆ. ಡಾ. ವಿಜಯ ಸಂಕೇಶ್ವರ ಅವರು ಜೀವನ-ಹೋರಾಟದ ಅತ್ಯಂತ ಸೂಕ್ಷ್ಮ- ಸಂಕೀರ್ಣ ಸವಾಲುಗಳನ್ನು ಯಾವ ರೀತಿ ಎದುರಿಸಿ ಯಶಸ್ವಿಯಾದರು ಎಂಬ ಸಾಹಸಗಾಥೆಯೇ ಅತ್ಯಂತ ರೋಚಕ. ಇದನ್ನು ‘ವಿಜಯಾನಂದ’ ಚಿತ್ರ ರೂಪದಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ನಿರ್ವಿುಸಿರುವ, ರಿಷಿಕಾ ಶರ್ಮ ನಿರ್ದೇಶಿಸಿರುವ ಈ ಚಿತ್ರದಲ್ಲಿ ದಿಗ್ಗಜ ಕಲಾವಿದರಾದ ಅನಂತನಾಗ್, ರವಿಚಂದ್ರನ್, ವಿನಯಾ ಪ್ರಸಾದ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಡಾ. ವಿಜಯ ಸಂಕೇಶ್ವರ ಅವರ ಪಾತ್ರವನ್ನು ಯುವ ನಟ ನಿಹಾಲ್ ಮತ್ತು ಡಾ. ಆನಂದ ಸಂಕೇಶ್ವರ ಪಾತ್ರವನ್ನು ಭರತ್ ಬೋಪಣ್ಣ ನಿರ್ವಹಿಸಿದ್ದಾರೆ.

    ಡಾ. ವಿಜಯ ಸಂಕೇಶ್ವರ ಅವರ ಜೀವನ ಪಯಣವೆಂದರೆ, ಶಿಸ್ತು, ಸಮಯಪ್ರಜ್ಞೆ, ದೂರದೃಷ್ಟಿ, ಪ್ರಾಮಾಣಿಕತೆ, ಧೈರ್ಯ, ಸಾಹಸ, ಅಚಲ ಹೋರಾಟ, ಗುರಿಯಿಂದ ಲವಲೇಶವೂ ವಿಚಲಿತವಾಗದ ದೃಢಚಿತ್ತ, ಇಟ್ಟ ಹೆಜ್ಜೆ ಹಿಂದಿಡಲಾರೆ ಎಂಬ ಸಂಕಲ್ಪಶಕ್ತಿ, ಯಾವುದೇ ಹೊಸ ಕೆಲಸ ಆರಂಭಿಸುವಾಗ ಯಶಸ್ಸು- ವೈಫಲ್ಯ ಎರಡೂ ದಿಕ್ಕಿನಿಂದ ಆಲೋಚಿಸಿ ಯಾವ ರೀತಿಯ ಅಡೆತಡೆಗಳನ್ನು ಯಾವರೀತಿ ಎದುರಿಸಬೇಕೆಂಬ ತಂತ್ರಗಾರಿಕೆ, ಸಾಧನೆಯಲ್ಲಿ ಎಷ್ಟೇ ಎತ್ತರಕ್ಕೇರಿದ ಬಳಿಕವೂ ತನ್ನ ಮೂಲವನ್ನು, ನೆಲದ ಬೇರನ್ನು ಮರೆಯದ ವಿನಯಶೀಲತೆ, ಎಲ್ಲರೊಂದಿಗೆ ಬೆರೆಯುವ ಸರಳವಂತಿಕೆ, ಪರಂಪರೆ, ಸಂಸ್ಕೃತಿ, ಸಮಾಜವನ್ನು ಗೌರವಿಸುವ ಅನುಕರಣೀಯ ಹೃದಯವಂತಿಕೆ. ಅವರನ್ನು ಹತ್ತಿರದಿಂದ ಬಲ್ಲವರು, ಜೀವನ ಪಯಣಕ್ಕೆ ಸಾಕ್ಷಿಯಾದವರು, ದೂರದಿಂದ ಅವರ ಯಶಸ್ಸಿನ ಹಾದಿಯನ್ನು ಗಮನಿಸಿದವರು, ಅವರಿಂದ ಪ್ರೇರಣೆ ಪಡೆದವರು, ಪತ್ರಿಕೆಗಳಲ್ಲಿ, ಟಿವಿ ಸಂದರ್ಶನಗಳಲ್ಲಿ, ವಿವಿಧೆಡೆ ಡಾ. ಸಂಕೇಶ್ವರರ ಬಗ್ಗೆ ಕೇಳಿ ತಿಳಿದವರು, ಅಷ್ಟೇ ಏಕೆ ಜೀವನದಲ್ಲಿ ಏನಾದರೂ ಸಾಧಿಸಬೇಕು; ಆದರೆ, ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ಜವಾಬ್ದಾರಿಗಳು, ತರಹೇವಾರಿ ಒತ್ತಡಗಳ ನಡುವೆ ವ್ಯಕ್ತಿಗತ ಮಹತ್ವಾಕಾಂಕ್ಷೆಗಳತ್ತ ಓಡುವುದು ಹೇಗೆ ಎಂಬ ಗೊಂದಲದಲ್ಲಿರುವವರಿಗೆ ‘ವಿಜಯಾನಂದ’ ಚಿತ್ರ ದಾರಿದೀಪವಾಗಬಲ್ಲುದು. ಹಾಗಿದ್ದರೆ ತಡವೇಕೆ? ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ‘ವಿಜಯಾನಂದ’ ಚಿತ್ರವನ್ನು ಇಂದೇ ನೋಡುತ್ತೀರಲ್ಲವೇ?

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts