ಸಾಕ್ಷಾತ್ಕಾರದಿಂದ ವಾಸನಾಕ್ಷಯ, ಭಗವಂತನ ಕೃಪೆ ಅಕ್ಷಯ

| ಸ್ವಾಮಿ ಹರ್ಷಾನಂದಜೀ, ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು

ಸತತ ಸಾಧನೆಯ ಸಾಕ್ಷಾತ್ಕಾರದಿಂದ ಮಾತ್ರ ವಾಸನಾಕ್ಷಯವಾಗಿ ಭಗವಂತನ ಕೃಪೆಯು ಅಕ್ಷಯವಾಗುವುದು. ಪ್ರಾರಬ್ಧಕರ್ಮದ ದೇಹವಿರುವ ಸ್ಥಿತಪ್ರಜ್ಞ ಇತರರಂತೇ ಇಂದ್ರಿಯಗಳ ಆಕರ್ಷಣೆಗೆ (ವಿಷಯವಸ್ತುಗಳು) ಬಂದಾಗಲೂ ಕೂಡ ಸ್ಥಿತಪ್ರಜ್ಞ ಅವಸ್ಥೆಯಿಂದ ಕೆಳಗಿಳಿಯಬಾರದು. ಇದಕ್ಕಾಗಿ ಪರಮಾತ್ಮ ಆಮೆಯ ಉದಾಹರಣೆ ಕೊಟ್ಟಿರುವನು. ಆಮೆಯ ಗಟ್ಟಿಯಾದ ಚಿಪ್ಪು ಎಂದರೆ ಆತ್ಮವಸ್ತು. ಅದರೊಳಗೆ ಅಂಗಾಂಗಗಳು ಎಂದರೆ ಮನಸ್ಸು, ಪಂಚ ಜ್ಞಾನೇಂದ್ರಿಯಗಳನ್ನು ಸೇರಿಸುವುದು ಅರ್ಥಾತ್ ಒಂದಾಗಿಸುವುದು ಎಂದು. ಮುಂದಿನ ಶ್ಲೋಕದಲ್ಲಿ ಇದೇ ಭಾವನೆಗಳನ್ನು ಮತ್ತೊಂದು ದೃಷ್ಟಿಕೋನದಲ್ಲಿ ಪರಮಾತ್ಮ ವಿವರಿಸುವನು. (ವಿಷಯಾ ವಿನಿವರ್ತಂತೇ… ಭ.ಗಿ.: 2.59) ನಿರಾಹಾರನಾದ ದೇಹಿಯನ್ನು (ಮನುಷ್ಯನನ್ನು) ತೊರೆದು ಇಂದ್ರಿಯ ವಿಷಯಗಳು ಹಿಂತಿರುಗುತ್ತವೆ. ಆದರೆ ತೃಷ್ಣೆಯು ಬಿಟ್ಟಿರುವುದಿಲ್ಲ. ಪರಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಂಡಮೇಲೆ ಇವನ ತೃಷ್ಣೆಯು ಹಿಂತಿರುಗುವುದು. ಇಂದ್ರಿಯಗಳಿಂದ ವಿಷಯ ಗ್ರಹಿಸದ ಕಠೋರ ತಪಸ್ವಿಯು ವಿಷಯಗಳಿಂದ ಬಿಡುಗಡೆಯಾದರೂ ಅವನ ವಿಷಯತೃಷ್ಣೆಯು ಉಳಿಯಬಹುದು. ಪರಬ್ರಹ್ಮ ಪ್ರಾಪ್ತವಾದ ಮೇಲೆ ಈ ತೃಷ್ಣೆಯು ನಿರ್ಬೀಜವಾಗಿ ನಾಶವಾಗುವುದು. ಸಾಮಾನ್ಯ ಸಾಧಕ (ಜೀವಾತ್ಮ) ಉಪವಾಸವಿದ್ದಾಗ ಹೊರಗಿನ ಆಹಾರಾದಿ ವಿಷಯವಸ್ತುಗಳು ಇವನನ್ನು ತೊರೆಯುವವು ಅಥವಾ ಇವನೇ ತೊರೆಯುವನು. ಆದರೆ ಆಹಾರಾದಿ ವಸ್ತುಗಳ ರುಚಿ, ಇಚ್ಛೆಗಳು (ಸಂಸ್ಕಾರ) ಮನಸ್ಸಿನಲ್ಲಿ ಉಳಿದಿರುತ್ತವೆ. ಸಾಧನೆಯಿಂದ ಆತ್ಮಜ್ಞಾನ ಪಡೆದು ಭಗವಂತನ ಸಾಕ್ಷಾತ್ಕಾರವಾದಾಗ ಮನಸ್ಸಿನಲ್ಲಿದ್ದ ಆಸೆಗಳು ನಿಮೂಲವಾಗುತ್ತವೆ. ನಾನು ಮತ್ತು ವಸ್ತು ಬೇರೆ, ಆ ವಸ್ತು ಪಡೆದಾಗ ಆನಂದ ದೊರೆಯುವುದೆಂಬ ಭಾವನೆಯಿಂದ ವಸ್ತುವಿನ ಮೇಲೆ ಆಸೆ ಬರಬಹುದು. ಹೀಗಾಗಿ ಅದನ್ನು ಬಯಸಿ ದೊರೆತಾಗ ಅನುಭವಿಸಿ ಆನಂದವಾಗುವುದು. ದೊರೆಯದಿದ್ದಾಗ ಅದರ ಆಸೆ ಉಳಿದಿರುವುದು. ಪರಮಾತ್ಮನ ಸಾಕ್ಷಾತ್ಕಾರವಾದಾಗ ಎಲ್ಲೆಲ್ಲಿಯೂ ಸಾಕ್ಷಾತ್ ಬ್ರಹ್ಮವಸ್ತುವೇ, ಪರಮಾತ್ಮನೇ ಕಾಣಿಸುವುದರಿಂದ ತನಗಿಂತ ಬೇರೆ ವಸ್ತುವಿದ್ದು ಅದನ್ನು ಬಯಸುವ ಪರಿಸ್ಥಿತಿಯೇ ಬರದು.

ವಿಶೇಷ ಸಂದರ್ಭಗಳಲ್ಲಿ ಹಬ್ಬ, ವ್ರತ, ಉತ್ಸವಗಳನ್ನು ಆಚರಿಸುವಾಗ ಪ್ರತಿಯೊಂದರಲ್ಲಿಯೂ ಒಂದಲ್ಲ ಒಂದು ರೀತಿಯ ಪೂರ್ಣ ಅಥವಾ ಆಂಶಿಕ, ಕೈಲಾದಷ್ಟು ಆಹಾರ ಸ್ವೀಕರಿಸದೆ ಉಪವಾಸವಿರುವುದು. ಪಂಚ ಜ್ಞಾನೇಂದ್ರಿಯಗಳು ಕೆಲಸ ಮಾಡಲು ಆಹಾರದಿಂದ ಶಕ್ತಿ ಬರುವುದು. ಇಂದ್ರಿಯಗಳನ್ನು ನಿಗ್ರಹಿಸಲು ಮನಸ್ಸು ಇಂದ್ರಿಯಗಳಿಗಿಂತ ಬಲವಾಗಿರಬೇಕು. ಉಪವಾಸದ ಮೂಲಕ ಪಂಚೇಂದ್ರಿಯಗಳ ಶಕ್ತಿ ಕುಗ್ಗಿಸಿದಾಗ, ಅವನ್ನು ಮನಸ್ಸಿನಿಂದ ನಿಗ್ರಹಿಸಲು ಸಾಧ್ಯ. ಇದೇ ಉಪವಾಸಗಳ ಮೂಲ ಉದ್ದೇಶ. ಇಂದ್ರಿಯಗಳನ್ನು ನಿಗ್ರಹಿಸಿದಾಗ ಅವು ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಮಾಡವು. ಹೀಗೇ ಗಲಾಟೆಯಿಲ್ಲದ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಲು ಸಾಧ್ಯ. ಸ್ವೀಕರಿಸುವ ಆಹಾರ ಶುದ್ಧವಾಗಿರಬೇಕೆಂಬ ವಿವರಣೆ ಛಾಂದೋಗ್ಯೋಪನಿಷತ್ತಿನಲ್ಲಿ ಬರುವುದು. ಸ್ವಾಮಿ ವಿವೇಕಾನಂದರು ಆಹಾರ ಶುದ್ಧತೆಯ ಬಗ್ಗೆ ತಿಳಿಸಿದ್ದಾರೆ. ಮೊದಲಿಗೆ ಆಹಾರದ ಜಾತಿದೋಷ ಎಂದರೆ ಆಹಾರವಸ್ತುವಿನ ವರ್ಗ (ಕುಲ), ಉದಾಹರಣೆಗೆ ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ ಇತ್ಯಾದಿ ತಾಮಸಿಕ, ರಾಜಸಿಕ ಆಹಾರಗಳು. ಎರಡನೆಯದು ನಿಮಿತ್ತದೋಷ. ಎಂದರೆ ಆಹಾರದಲ್ಲಿ ಹೊರಗಿನ ಪದಾರ್ಥ ಸೇರಿರುವುದು. ಉದಾಹರಣೆಗೆ ಕಸ, ಕಡ್ಡಿ, ಕೂದಲು ಬಿದ್ದಿರುವುದು. ಇಂತಹ ಆಹಾರ ರ್ವ್ಯಜ. ಮೂರನೆಯದು ಆಶ್ರಯದೋಷ. ಎಂದರೆ ಆಹಾರ ಸಿದ್ಧಮಾಡಿ ಬಡಿಸುವವರ ನಡತೆ. ಸ್ಪರ್ಶ ಮಾಡಿದವರ ಪಾಪ-ಪುಣ್ಯಗಳ ಸ್ವಲ್ಪ ಭಾಗ ಆಹಾರದಲ್ಲಿ ಸೇರುವುದು. ಇದು ಆಹಾರ ಸ್ವೀಕರಿಸುವವರ ಮೇಲೂ ಸ್ವಲ್ಪ ಪ್ರಭಾವ ಬೀರುವುದು. 1942ರ ‘ಬ್ರಿಟಿಷರೇ ಬಿಟ್ಟು ತೊಲಗಿ’ ಸ್ವಾತಂತ್ರ್ಯ ಆಂದೋಲನದಲ್ಲಿ ಅನೇಕ ದೇಶಭಕ್ತರು ಪುಣೆಯ ಯರವಾಡ ಜೈಲಿನಲ್ಲಿದ್ದರು. ಅವರಲ್ಲಿ ಸಚ್ಚಾರಿತ್ರ್ಯ ದೇಶಭಕ್ತರೊಬ್ಬರು ಊಟ ಮಾಡಿ ಮಲಗಿದ್ದರು. ಇದ್ದಕ್ಕಿದ್ದಂತೆ ಅವರ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಬಂದವು. ಕತ್ತಿ ಹಿಡಿದು ಯಾರನ್ನಾದರೂ ಕೊಲ್ಲಬೇಕೆಂದೆನಿಸಿತು. ಸ್ವಲ್ಪ ವಿಚಾರಣೆ ನಡೆಸಲಾಯಿತು. ನಿತ್ಯ ಅಡುಗೆ ಮಾಡುವವನು ಅಂದು ಬಂದಿರಲಿಲ್ಲ. ಬದಲಿಗೆ ಕೊಲೆಯ ಅಪರಾಧಿಯಾಗಿದ್ದು, ಅಡುಗೆ ಬಲ್ಲವನಾದ ಖೈದಿಯಿಂದ ಅಡುಗೆ ಮಾಡಿಸಿದ್ದರು. ಪಾಪಿ ಮಾಡಿದ ಅಡುಗೆಯ ಪ್ರಭಾವ ಸಾತ್ವಿಕರ ಮೇಲಾಗಿತ್ತು. ಇದು ನಡೆದಿರುವ ಸತ್ಯ ಘಟನೆ. ಇಂದಿಗೂ ನಿಷ್ಠಾವಂತ ಸಾತ್ವಿಕರು ತಾವೇ ಸಿದ್ಧಪಡಿಸಿ, ಪರಮಾತ್ಮನಿಗೆ ನಿವೇದಿಸಿ ಆಹಾರ ಸ್ವೀಕರಿಸುವರು. ಶುದ್ಧ ಆಹಾರಸೇವನೆಯಿಂದ ಮನಸ್ಸೂ ಶುದ್ಧವಾಗುವುದು. ಇದರಿಂದ ಜ್ಞಾಪಕಶಕ್ತಿ ಹೆಚ್ಚುವುದು. ಶಾಸ್ತ್ರಗಳು, ಋಷಿಮುನಿಗಳು, ಗುರುಹಿರಿಯರಿಂದ ಕೇಳುವ ಉಪದೇಶಗಳು ಮತ್ತು ಸ್ವಾಧ್ಯಾಯ ಮಾಡುವ ವಿಚಾರಗಳು ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲುವವು. ಅಂತಿಮವಾಗಿ ಮನಸ್ಸು ಶುದ್ಧವಾಗುವುದರಿಂದ ಉತ್ತಮ ವಿಚಾರಗಳು ಬಂದು ನಮ್ಮನ್ನು ಪ್ರೇರೇಪಿಸಿ, ಸಾಧನೆಯಲ್ಲಿ ತೊಡಗಿಸಿ ಸಂಸಾರಬಂಧನ ಕಳಚುವುದು. ಶ್ರೀರಾಮಾನುಜರು ಶರೀರ ಪೋಷಣೆಯ ಆಹಾರ ಶುದ್ಧವಾಗಿರಬೇಕೆನ್ನುವರು. ಇದಕ್ಕಿಂತ ಮಿಗಿಲಾಗಿ ಶಂಕರಾಚಾರ್ಯರು ಪಂಚೇಂದ್ರಿಯಗಳ ಮೂಲಕ ಸ್ವೀಕರಿಸುವುದೆಲ್ಲವೂ ಆಹಾರವೆನ್ನುವರು. ಪಂಚೇಂದ್ರಿಯಗಳಿಂದ ಗ್ರಹಿಸುವ ಅನುಭವಗಳು ಶುದ್ಧವಾಗಿದ್ದಲ್ಲಿ ಮನಸ್ಸು ಶುದ್ಧವಾಗುವುದು. ಕೆಟ್ಟದಾಗಿದ್ದಲ್ಲಿ ಮನಸ್ಸೂ ಕೆಡುವುದು. ಸಾಮಾನ್ಯ ಆಹಾರ ಸಾತ್ವಿಕವಾಗಿ ಶುದ್ಧವಾಗಿರಬೇಕು. ಪಂಚೇಂದ್ರಿಯಗಳ ಮೂಲಕ ವಿಷಯಗಳನ್ನು ಎಚ್ಚರಿಕೆಯಿಂದ ಸ್ವೀಕರಿಸಬೇಕು.

ಸಾಧಕನು ಪಂಚೇಂದ್ರಿಯಗಳಿಂದ ಸ್ವೀಕರಿಸುವ ಆಕರ್ಷಕ ವಿಷಯವಸ್ತುಗಳೆಂಬ ಆಹಾರವನ್ನು ನಿಷೇಧಿಸಿದ್ದಾನೆ. ಆಗ ವಿಷಯವಸ್ತುಗಳು ತಮ್ಮ ರಸ ರುಚಿಗಳನ್ನು ಅವನಲ್ಲಿ ಬಿಟ್ಟು ಹಿಂತಿರುಗುವುವು. ಆದರೆ ಕಳ್ಳಸ್ವಭಾವದ ಮನಸ್ಸು ಸುಲಭವಾಗಿ ವಶವಾಗದು. ನಾವು ತಿರಸ್ಕರಿಸಿರುವ ವಿಷಯವಸ್ತುಗಳ ‘ರಸ’ ಎಂದರೆ ರುಚಿ, ಆಸೆ ಮನಸ್ಸಿನಲ್ಲಿರುವುದು. ಅನೇಕ ವರ್ಷಗಳಿಂದ ನಾವು ಅನುಭವಿಸಿರುವುದು ಮನಸ್ಸಿನಲ್ಲಿ ಮುದ್ರೆ ಒತ್ತಿ ಸಂಸ್ಕಾರವಾಗಿರುವುದು. ಈ ಸಂಸ್ಕಾರ ಎಂದಾದರೂ ಮನಸ್ಸನ್ನು ಎಳೆದು ಬೀಳಿಸುವುದು. ತೊರೆದಿದ್ದ ವಸ್ತುವನ್ನು ನೋಡಿದಾಗ ಅನೇಕ ಬಾರಿ ಮತ್ತೆ ಅನುಭವಿಸುತ್ತೇವೆ. ಉದಾಹರಣೆಗೆ ಸಿಹಿತಿನಿಸುಗಳನ್ನು ಬಿಟ್ಟಿದ್ದರೂ ಕಂಡಾಗ, ಕೊಟ್ಟಾಗ ಸ್ವಲ್ಪ ತಿನ್ನುತ್ತೇವೆ. ನಾವು ಪರಮಾತ್ಮನನ್ನು ಕಂಡು ಅನುಭವಿಸಿದಾಗ ಈ ರಸ, ರುಚಿಗಳೆಂಬ ಹಳೆಯ ಸಂಸ್ಕಾರ ತಾನಾಗಿ ನಾಶವಾಗುತ್ತವೆ. ಇದು ಸಾಧ್ಯವಾಗುವುದು ಸಾಕ್ಷಾತ್ಕಾರದಿಂದ ಮಾತ್ರ. ಭಗವನ್ನಾಮ ಸಂಕೀರ್ತನೆ, ನಾಮಜಪ, ಧ್ಯಾನ ಇತ್ಯಾದಿಗಳ ಮೂಲಕ ಮನಸ್ಸು ಈ ಹಂತ ತಲುಪಬೇಕು. ಕಾಲಕ್ರಮೇಣ ಸಾಧನೆಯ ಬಲ, ಗುರುಕೃಪೆ ಹಾಗೂ ಪರಮಾತ್ಮನ ಅನುಗ್ರಹಗಳಿಂದ ಸಾಕ್ಷಾತ್ಕಾರವಾಗುವುದು. ಇದರಿಂದ ಎಲ್ಲ ವಸ್ತು-ವಿಷಯಗಳ ಆಸೆ ಬಿಡುವುದು. ಕಾರಣವೇನೆಂದರೆ ಸಾಕ್ಷಾತ್ಕಾರ ಅವಸ್ಥೆಯಲ್ಲಿ ನಾವು ಹಾಗೂ ವಿಷಯವಸ್ತುಗಳು ಬೇರೆ ಬೇರೆ ಎಂಬ ಭಾವನೆಯೇ ಇರದಿದ್ದಾಗ ಅದನ್ನು ಪಡೆಯುವ ಪ್ರಮೇಯವೇ ಇರದು. ಆ ಸ್ಥಿತಿಯಲ್ಲಿ ಎಲ್ಲೆಡೆ ಒಂದೇ ಆತ್ಮವಸ್ತುವಿನ, ಭಗವಂತನ ದರ್ಶನವಾಗುವುದು. ಹೀಗಿದ್ದಾಗ ಬೈಯ್ಯುವ, ಪ್ರೀತಿಸುವ, ಪಡೆಯುವ, ಆಸೆಪಡುವ ಸಂದರ್ಭವೇ ಇರದು. ಎಲ್ಲವೂ ಒಂದೇ ಆಗಿರುವವು. ಈ ಅನುಭವದ ಸ್ಥಿತಿಯಲ್ಲಿರುವಾಗ ವಿಷಯವಸ್ತುಗಳು ನಮ್ಮನ್ನು ಎಳೆಯಲಾರವು.

(ಸಂಗ್ರಹ: ಸುರೇಶ್​ಕುಮಾರ್)